ವಿಶ್ವ ಪರಿಸರ ದಿನಾಚರಣೆ: ಪರಿಸರ ನಾಶದತ್ತ ಒಂದು ಮೇಲ್ನೋಟ

– ಮಹೇಶ ಸಿ. ಸಿ.

ಈಗಿನ ಕಾಲಗಟ್ಟಕ್ಕೆ ಅನಿವಾರ‍್ಯವಾಗಿ ಬೇಕಾಗಿರುವುದು ಪರಿಸರ ಸಂರಕ್ಶಣೆ. ಅಲ್ಲದೆ ಜಾಗತಿಕ ತಾಪಮಾನ, ಸಮುದ್ರ ಮಾಲಿನ್ಯ, ವನ್ಯಜೀವಿ ಸಂರಕ್ಶಣೆ, ಜೊತೆಗೆ ಜನಸಂಕ್ಯಾ ಸ್ಪೋಟ ಇವೆಲ್ಲವನ್ನೂ ಮನಗಂಡು ವಿಶ್ವಸಂಸ್ತೆಯು 1973 ರಲ್ಲಿ ಮೊದಲ ಬಾರಿಗೆ ವಿಶ್ವ ಪರಿಸರ ದಿನಾಚರಣೆ ಯನ್ನು ಆಚರಿಸಲು ಪ್ರಾರಂಬಿಸಿತು. ಅಂದಿನಿಂದ ಇಂದಿನವರೆಗೆ ಪ್ರತಿ ವರ‍್ಶ ಸರಿ ಸುಮಾರು 143 ದೇಶಗಳು ಜೂನ್ 5 ರಂದು ಪ್ರತಿ ವರುಶ ಪರಿಸರ ದಿನಾಚರಣೆಯನ್ನು ಆಚರಿಸುತ್ತಾ ಬಂದಿವೆ.

ಮಾನವ ಪ್ರಕ್ರುತಿಗೆ ನೀಡುತ್ತಿರುವ ಕೊಡುಗೆಯಾದರೂ ಏನು?

ಓದುಗರೇ ಒಂದನ್ನು ನಾವು ನೆನಪಿಡಬೇಕು “ನಮಗೆ ಪರಿಸರದ ಅವಶ್ಯಕತೆ ಇದೆಯೇ ಹೊರತು ಪರಿಸರಕ್ಕೆ ನಮ್ಮ ಅವಶ್ಯಕತೆ ಇಲ್ಲ“. ನಾವು ಇರುವ, ನಾವು ಜೀವಿಸಲು ಸಕಲ ಅನುಕೂಲ ಹೊಂದಿರುವ ನಮ್ಮ ಪರಿಸರವನ್ನು ಕಾಪಾಡುವುದು ಹಾಗೂ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಮಾನವನ ಕರ‍್ತವ್ಯ. ತನ್ನ ಅನುಕೂಲಕ್ಕೋಸ್ಕರ ಪರಿಸರಕ್ಕೆ ಕೊಡಲಿ ಪೆಟ್ಟು ಕೊಡುತ್ತಿರುವ ಮಾನವ ಪ್ರಕ್ರುತಿಯ ವಿನಾಶಕ್ಕೆ ಕಾರಣಕರ‍್ತನಾಗಿದ್ದಾನೆ. ಬೂಮಿಯ ಒಡಲನ್ನು ಸೀಳಿ ಆತ ಕ್ರೌರ‍್ಯ ಮೆರೆಯುತ್ತಿದ್ದಾನೆ. ಮರಗಳನ್ನು ಕಡಿಯುವ ಮೂಲಕ ಅರಣ್ಯ ನಾಶ ಮಾಡುತ್ತಿದ್ದಾನೆ. ಆ ಮೂಲಕ ವನ್ಯಜೀವಿಗಳ ಮೂಲ ಸ್ತಳವನ್ನು ದ್ವಂಸ ಮಾಡಿ ವನ್ಯ ಜೀವಿಗಳ ನಾಶಕ್ಕೆ ಕಾರಣವಾಗುತ್ತಿದ್ದಾನೆ. ಆದರೆ ಮಾನವ ಪ್ರಕ್ರುತಿಗೆ ನೀಡುತ್ತಿರುವ ಕೊಡುಗೆಯಾದರೂ ಏನು..? ಶೂನ್ಯ ಮಾತ್ರ!

ಇದು ಮುಂಬರುವ ಇನ್ನಶ್ಟು ಬಯಾನಕ ದಿನಗಳ ಮುನ್ಸೂಚನೆಯೇ?

ನಾವು-ನೀವು ಸಾಮಾನ್ಯವಾಗಿ ನೋಡುವ ದ್ರುಶ್ಯ ಅಂದರೆ ಬೇಸಿಗೆಯಲ್ಲಿ ಬಿಸಿಲಿನ ಜಳ ಹೆಚ್ಚಾಗಿರುವುದರಿಂದ ನೆರಳನ್ನು ಹುಡುಕುತ್ತೇವೆ, ಅಲ್ಲದೆ ನಮ್ಮ ವಾಹನಗಳನ್ನು ನಿಲ್ಲಿಸಲೂ ಸಹ ನೆರಳಿನ ಆಶ್ರಯವನ್ನು ಹುಡುಕುವ ನಾವು. ಎಂದಾದರೂ ಮಾನವನ ಅಸ್ತಿತ್ವವಾದ ಗಿಡ ಮರಗಳನ್ನು ಬೆಳೆಸಲು ಹಾಗೂ ಪರಿಸರ ಸಂರಕ್ಶಿಸಲು ಯೋಚನೆ ಮಾಡಿದ್ದೇವೆಯೇ? ಹಿಂದೆ ಹಳ್ಳಿಗಳಲ್ಲಿ ಬೆಳಗ್ಗೆ ಇಂದ ಸಂಜೆಯವರೆಗೂ ತಮ್ಮ ತಮ್ಮ ಕೆಲಸ ಕಾರ‍್ಯಗಳನ್ನು ಮುಗಿಸಿದ ನಂತರ ಅನೇಕರು ಊರಿನ ಕಟ್ಟೆಯ (ಚಾವಡಿ) ಕಡೆ ಮುಕ ಮಾಡಿ ಬರುತ್ತಿದ್ದರು. ಅದಕ್ಕೆ ಕಾರಣ ಅಲ್ಲಿರುವ ಬ್ರುಹದಾಕಾರದ ಮರ. ಅಲ್ಲಿ ಸಿಗುವ ನೈಸರ‍್ಗಿಕ ಶುದ್ದವಾದ ಆಮ್ಲಜನಕ ಹಾಗೂ ವಾತಾವರಣ, ಮನುಶ್ಯನ ಆರೋಗ್ಯದ ದ್ರುಶ್ಟಿಯಿಂದ ಉತ್ತಮವಾಗಿತ್ತು.

ಇಂದು ನಾವು ಓಡುತ್ತಿರುವ ಈ ಆದುನಿಕ ಪ್ರಪಂಚದಲ್ಲಿ ಅವೆಲ್ಲವನ್ನೂ ಗಾಳಿಗೆ ತೂರಿ ನಮ್ಮ ಸ್ವಾರ‍್ತಕ್ಕೆ ಪರಿಸರದ ನಾಶ ಮಾಡುತ್ತಿದ್ದೇವೆ. ಇದರಿಂದಾಗಿ ವಾಯುವನ್ನು ಕಲುಶಿತಗೊಳಿಸಿ ನಾವೇ ಈಗ ಶುದ್ದ ಆಮ್ಲಜನಕವನ್ನು ದುಡ್ಡು ಕೊಟ್ಟು ಕರೀದಿಸುತ್ತಿದ್ದೇವೆ. ಇದು ನಮ್ಮ ಇಂದಿನ ದುಸ್ತಿತಿಯಾದರೆ, ಮುಂದಿನ ದಿನಗಳು ಇದಕ್ಕಿಂತ ಬಯಾನಕವಾಗಿ ಇರುವ ಸೂಚನೆ ಅಂತೂ ಸಿಕ್ಕಾಗಿದೆ ಅಲ್ಲವೇ..?

ಪರಿಸರಕ್ಕೆ ಮಾರಕ ಪ್ಲಾಸ್ಟಿಕ್

ಇನ್ನು ಮನುಶ್ಯ ತನ್ನ ಅನುಕೂಲಕ್ಕೆ ಬೇಕಾದ ಹಾಗೆ ಬೂಮಿಯ ಒಡಲನ್ನು ಚಿದ್ರ ಮಾಡುತ್ತಿರುವುದು ಕೂಡ ಜಾಗತಿಕ ತಾಪಮಾನದ ಏರಿಕೆಗೆ ಮೂಲ ಕಾರಣ. ನಾವು ಅತಿಯಾಗಿ ಬಳಸುತ್ತಿರುವ ಪ್ಲಾಸ್ಟಿಕ್ ಕೂಡ ಬೂ ಮಾಲಿನ್ಯಕ್ಕೆ ಒಂದು ಕಾರಣ. ಅಂದಾಜು ಪ್ರತೀ ವರ‍್ಶ 400ಮಿಲಿಯನ್ ಟನ್ ನಶ್ಟು ಪ್ಲಾಸ್ಟಿಕ್ ಅನ್ನು ನಾವು ಬಳಸುತ್ತಿದ್ದೇವೆ. ಕಣ್ಣ ಮುಂದೆಯೇ ಇರುವ ಈ ವಿಶಕಾರಕ ವಸ್ತುವು ನಮಗೆ ಅನಿವಾರ‍್ಯವಾಗಿಬಿಟ್ಟಿದೆ. ಅಶ್ಟರ ಮಟ್ಟಿಗೆ ನಾವು ಅದರ ಬಳಕೆಗೆ ಮಾರುಹೋಗಿದ್ದೆವೆ. ಪ್ಲಾಸ್ಟಿಕ್ ಪರಿಸರದ ಜೊತೆ ಹೊಂದಾಣಿಕೆ ಆಗದ ಒಂದು ವಸ್ತು. ಅದು ಬೂಮಿಯ ಒಡಲನ್ನು ಸೇರಿ ಪಲವತ್ತತೆಯನ್ನು ಕಸಿದುಕೊಳ್ಳುತ್ತಿದೆ. ಮಣ್ಣಿನ ಜೊತೆ ವಿಲೀನವಾಗದ ಈ ಪ್ಲಾಸ್ಟಿಕ್ ಮಹಾಮಾರಿ ಕೊಳೆಯದೆ ಹಾಗೆ ಇದ್ದು ಬಿಡುತ್ತದೆ. ಇದರಿಂದ ಬೂಮಿಯ ಒಡಲು ಕಲುಶಿತಗೊಳ್ಳುತ್ತಿದೆ. ಮತ್ತು ಅನೇಕ ಕಾಯಿಲೆಗಳನ್ನು ನಮಗೆ ನಾವು ತಂದುಕೊಳ್ಳುತ್ತಿದ್ದೇವೆ. ಮಿತ್ರರೇ, ಮೈಕ್ರೋಪ್ಲಾಸ್ಟಿಕ್ ನಿಂದ ನಮಗೆ ಅನೇಕ ಕಾಯಿಲೆಗಳು ಬರುತ್ತವೆ, ಅದರಲ್ಲಿ ಮಾರಣಾಂತಿಕ ಕ್ಯಾನ್ಸರ್ ಕೂಡ ಒಂದು. ಹಾಗಾಗಿ ಎಶ್ಟು ಸಾದ್ಯವೋ ಅಶ್ಟು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸೋಣ. ಅಲ್ಲದೇ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಮಾತ್ರ ಉಪಯೋಗಿಸಿ ಪರಿಸರ ಮಾಲಿನ್ಯ ತಡೆಯಲು ಎಶ್ಟು ಸಾದ್ಯವೋ ಅಶ್ಟು ಶ್ರಮಿಸೋಣ.

ಅನೇಕ ಕಾರಣಗಳಿಂದ ನಾವು ಪರಿಸರ ವಿನಾಶ ಮಾಡುತ್ತಿದ್ದೇವೆ. ಅದರಲ್ಲಿ ವಾಯು ಮಾಲಿನ್ಯವು ಇನ್ನೊಂದು. ನಾವು ಉಪಯೋಗಿಸುವ ವಾಹನಗಳಿಂದ, ಗ್ರುಹಬಳಕೆ ಸಾದನಗಳಿಂದ ಹಾಗೂ ಕಾರ‍್ಕಾನೆಗಳಿಂದ ಹೊರಸೂಸುವ ವಿಶಾನಿಲ ಬಹುಮುಕ್ಯ ಕಾರಣ. ವಾತಾವರಣದ ಶುದ್ದ ಗಾಳಿಗೆ ನಮಗೆ ತಿಳಿದೆ ಈ ರೀತಿಯ ವಿಶಪ್ರಾಶಾನ ಮಾಡುತ್ತಿದ್ದೇವೆ. ಆ ಮೂಲಕ ನಮಗೆ ನಾವೇ ವಿನಾಶದ ಅಂಚಿಗೆ ನಮ್ಮ ಪರಿಸರವನ್ನು ಕೊಂಡೊಯ್ಯುತ್ತಿದ್ದೇವೆ.

ಏಳಿಗೆಯ ಹೆಸರಿನಲ್ಲಿ ನದಿ, ಕಾಲುವೆ ಹಾಗೂ ಸಾಗರಗಳಿಗೆ ನಾವು ತ್ಯಾಜ್ಯವನ್ನು ಹಾಕುವುದರ ಮೂಲಕ ಜಲಮಾಲಿನ್ಯಕ್ಕೆ ಕಾರಣವಾಗುತ್ತಿದ್ದೇವೆ. ಅಲ್ಲದೇ ಕಾರ‍್ಕಾನೆಯ ಕೆಟ್ಟ ವಿಶಕಾರಕ ದ್ರವಗಳನ್ನು ನೀರಿನಲ್ಲಿ ಸೇರಿಸುತ್ತಿದ್ದೇವೆ, ಅತಿಯಾಗಿ ಪ್ಲಾಸ್ಟಿಕ್ ತ್ಯಾಜ್ಯವು ನೀರಿನಲ್ಲಿ ಸೇರುತ್ತಿದೆ. ಇದಲ್ಲದೆ ಕೊಳವೆ ಬಾವಿಗಳನ್ನು ಅತಿಯಾಗಿ ಉಪಯೋಗಿಸುವ ನಾವು ಬೂಮಿಯ ಅಂತರ‍್ಜಲವನ್ನು ಬರಿದು ಮಾಡುತ್ತಿದ್ದೇವೆ. ಇಂತಹ ಅನೇಕ ಕಾರಣಗಳಿಂದ ನಮ್ಮ ಜಲಮೂಲ ಕೂಡ ವಿಶಕಾರಿ ಆಗುತ್ತಿದೆ.

ಪರಿಸರ ಸಂರಕ್ಶಣೆ ಮಾಡುವುದಾದರೂ ಹೇಗೆ?

ಪರಿಸಕ್ಕೆ ನಾವು ಮಾಡುತ್ತಿರುವ ಹಲವು ಬಗೆಯ ಮಾಲಿನ್ಯ ಮತ್ತು ಕೆಡುಕುಗಳನ್ನು ತಡೆಗಟ್ಟಲು ಏನು ಮಾಡಬೇಕು ಎಂದರೆ, ಮೊದಲಿಗೆ ನಮಗೆ ಪರಿಸರ ಸಂರಕ್ಶಣೆಯ ಕುರಿತು ಜ್ನಾನ ಪಡೆಯಬೇಕು. ಮರಗಳನ್ನು ಬೇಕಾಬಿಟ್ಟಿ ಕಡಿಯುವುದನ್ನು ನಿಲ್ಲಿಸಬೇಕು, ಜಲಮಾಲಿನ್ಯ ಮಾಡದಂತೆ ತಡೆಯಬೇಕು, ವಾಯುವಿಗೆ ವಿಶಾನಿಲ ಸೇರದಂತೆ ಎಚ್ಚರ ವಹಿಸಬೇಕು. ನಮ್ಮ ಸುತ್ತ-ಮುತ್ತ ಗಿಡಮರಗಳನ್ನು ಬೆಳೆಸಬೇಕು. ಈ ಕುರಿತು ಬಾಲ್ಯದಲ್ಲೇ ಮಕ್ಕಳಿಗೆ ಶಿಕ್ಶಣ ನೀಡಬೇಕು. ಪರಿಸರದ ಕುರಿತು ಜಾಗ್ರುತಿ ಮೂಡಿಸಬೇಕು.

ನಾವು ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರುತರಾದ ತುಳಸಿ ಗೌಡ, ಸುಂದರ್ ಲಾಲ್ ಬಹುಗುಣ, ಸಾಲುಮರದ ತಿಮ್ಮಕ್ಕ, ಹಾಗೂ ಜಾದವ್ ಪಯೆಂಗ್ ಎಂಬ ಸ್ಪೂರ‍್ತಿಯ ಕಿಡಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪರಿಸರದ ಬಗ್ಗೆ ಕಾಳಜಿ ವಹಿಸಬೇಕಿದೆ. ಅಂತಹ ಮಹನೀಯರಿಂದ ಕಲಿಯುವುದು ಬಹಳಶ್ಟಿದೆ. ದಯಮಾಡಿ ನಿಮ್ಮ ಸುತ್ತಮುತ್ತಲ ವಾತಾವರಣವನ್ನು ಹಚ್ಚಹಸುರಿನ ತಾಣವನ್ನಾಗಿಸಲು ಇಂತಹ ಮಹನೀಯರ ಪ್ರೇರಣೆ ಪಡೆಯಬೇಕು. ಸಮಾಜಕ್ಕೆ ಪರಿಸರದ ಕುರಿತು ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕು. ಆ ಮೂಲಕ ನಮ್ಮ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸಬೇಕಿದೆ.

(ಚಿತ್ರ ಸೆಲೆ: timeanddate.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *