ದುಡ್ಡು-ಉಳಿತಾಯ-ಗಳಿಕೆ: 4ನೇ ಕಂತು

– ನಿತಿನ್ ಗೌಡ.

ಕಂತು-1, ಕಂತು-2, ಕಂತು-3

 

ಹಿಂದಿನ ಬರಹದಂತೆ ಈ ಬರಹದಲ್ಲಿ ನಗದು/ಹಣಕಾಸು ಸಂಬಂದಿತ ಹೂಡಿಕೆ/ಉಳಿತಾಯ ಬಗೆಗಿನ ಇನ್ನಶ್ಟು ಆಯ್ಕೆಗಳನ್ನು ನೋಡೋಣ.

ಮುಂಬೊತ್ತಿನ ನಿದಿ (Provident Fund)

ಒಂದು ವೇಳೆ ನೀವು ಯಾವುದಾದರೂ ಕಾಸಗಿ ಕಂಪನಿಯಲ್ಲೋ, ಸರಕಾರಿ ಕೆಲಸದಲ್ಲೋ ಕೆಲಸ ಮಾಡುತಿದ್ದಲ್ಲಿ; ನಿಮ್ಮ ಸಂಬಳದಲ್ಲಿ ಬವಿಶ್ಯ ನಿದಿ/ಮುಂಬೊತ್ತಿನ ನಿದಿ(PF) ಎಂಬ ಕಡಿತವನ್ನು ಕಂಡಿರಬಹುದು. ಇದೊಂದು ಬವಿಶ್ಯ/ಮುಂಬೊತ್ತಿನ ನಿದಿಯಾಗಿದ್ದು, ಹೆಚ್ಚಿನ ಕಾಲದ ಉಳಿತಾಯ ಹೂಡಿಕೆಯಾಗಿದೆ. ನಿವ್ರುತ್ತಿಯಾದ ಸಮಯದಲ್ಲಿ ಜನರಿಗೆ ಈ ಹಣ ಆಸರೆಯಾಗುತ್ತದೆ. ಇದರಲ್ಲಿ ಹಲವು ಬಗೆಗಳಿವೆ. ಜನರು ಸ್ವಂತ ಕೆಲಸ ಹೊಂದಿದ್ದಾರೋ, ಕಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವರೋ, ಇಲ್ಲವೇ ಸರಕಾರಿ ಕೆಲಸದಲ್ಲಿ ಇದ್ದಾರೋ ಎನ್ನುವುದರ ಮೇಲೆ ಬೇರೆ ಬೇರೆ ಬಗೆಯ ಮುಂಬೊತ್ತಿನ ನಿದಿಗಳನ್ನು ಕಾಣಬಹುದು. ಸಾಮಾನ್ಯ ಜನರು ಕೂಡ ಮುಂಬೊತ್ತಿನ ನಿದಿಯನ್ನು ಹೊಂದಬಹುದು.

  •  ಕಾನೂನು/ಶಾಸನ ಬದ್ದ ಮುಂಬೊತ್ತಿನ ನಿದಿ (Statutory provident fund -SPF)

ಇದನ್ನು ಸಾಮಾನ್ಯ ಮುಂಬೊತ್ತಿನ ನಿದಿ(General PF Fund- GPF) ಎಂದು ಕೂಡಾ ಕರೆಯಲಾಗುತ್ತದೆ. ಸರಕಾರಿ ಮತ್ತು ಸರಕಾರಿ ಸಂಸ್ತೆಯ ಅಡಿಯಲ್ಲಿ ಬರುವ ಕೆಲಸಗಾರರು ಈ ಬಗೆಯ ನಿದಿಯನ್ನು ಹೊಂದಿರುತ್ತಾರೆ. ಇದರಡಿ ಬರುವ ಕೆಲಸಗಾರರ ಹೂಡಿಕೆಗೆ, ಸರಕಾರ ಬಡ್ಡಿ ನಿಗದಿ ಪಡಿಸುತ್ತದೆ. ಸಾಮಾನ್ಯವಾಗಿ ಇದೊಂದು 7% ಅಂದಾಜಿನಶ್ಟು ಇರುತ್ತದೆ ಮತ್ತು ಇದರ ದರ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ.

  • ಗುರುತಿಸಲ್ಪಟ್ಟ ಮುಂಬೊತ್ತಿನ ನಿದಿ (Recognized Provident Fund)

ಯಾವುದಾದರೂ ಕಾಸಗಿ ಕಂಪನಿಯು ಇಪ್ಪತ್ತಕ್ಕೂ ಹೆಚ್ಚಿನ ಕೆಲಸಗಾರರನ್ನು ಹೊಂದಿದ್ದಲ್ಲಿ, ಅಂತಹ ಕಂಪನಿಯ ಕೆಲಸಗಾರರು ಈ ನಿದಿಯನ್ನು ಕಡ್ಡಾಯವಾಗಿ ಹೊಂದಿರುತ್ತಾರೆ. ಕಂಪನಿ ಇಲ್ಲವೇ ಅದರ ಇರುವಿಕೆಯ ಸಂಸ್ತೆಗಳು, ತಮ್ಮದೇ ಆದ ಒಂದು ಮುಂಬೊತ್ತಿನ ನಂಬಿಕಸ್ತ ಏರ‍್ಪಾಡನ್ನು ( PF Trust)  ಹೊಂದಬಹುದು. ಇಲ್ಲವೇ ಈಗಾಗಲೇ ಇರುವ ಸರಕಾರಿ ಒಪ್ಪಿತ ಯೋಜನೆಯಡಿ( Government approved scheme ) , ಈ ಏರ‍್ಪಾಡನ್ನು ಹೊಂದಬಹುದು. ಇದಕ್ಕೆ ಆದಾಯ ತೆರಿಗೆ ಕಮಿಶನರ‍್ (Commissioner of Income Tax -CIT) ಅವರಿಂದ ಒಪ್ಪಿಗೆ ಬೇಕಾಗುತ್ತದೆ. ಕಾಸಗಿ ಕಂಪನಿಯಲ್ಲಿ ಕಡಿತವಾಗುವ, ಕೆಲಸಗಾರರ ಮುಂಬೊತ್ತಿನ ನಿದಿ ( EPF ) ಇದೇ  ಬಗೆಯಡಿ ಬರುತ್ತದೆ.

ಕೆಲಸಗಾರರ ಮುಂಬೊತ್ತಿನ ನಿದಿ ಮತ್ತು ಕೆಲಸಗಾರರ ನಿವ್ರುತ್ತಿ ಯೋಜನೆ (Employee Provident Fund(EPF) and Employee Pension scheme- EPS)

ಈ ಮೇಲೆ ತಿಳಿಸಿದಂತೆ, ಯಾವುದಾದರೂ ಕಾಸಗಿ ಕಂಪನಿಯು ಇಪ್ಪತ್ತಕ್ಕೂ ಹೆಚ್ಚಿನ ಕೆಲಸಗಾರರನ್ನು ಹೊಂದಿದ್ದಲ್ಲಿ, ಅಂತಹ ಕಂಪನಿಯ ಕೆಲಸಗಾರರು ಈ ನಿದಿಯನ್ನು ಕಡ್ಡಾಯವಾಗಿ ಹೊಂದಿರುತ್ತಾರೆ. 15,000 ವರೆಗಿನ ಸಂಬಳ ಪಡೆಯುವ ಜನರು, ಕಡ್ಡಾಯವಾಗಿ ಈ ಪಿಂಚಣಿ( EPS) ಯನ್ನು ಹೊಂದಿರುತ್ತಾರೆ. ಇಲ್ಲಿ ಕೆಲಸ ನೀಡುವ ಕಂಪನಿಯು ಮತ್ತು ಕೆಲಸಗಾರರು ತಲಾ ತಮ್ಮ ಮೂಲ ಸಂಬಳದ(Basic Salary) ಮತ್ತು ತುಟ್ಟಿ ಬತ್ಯೆಯ(DA) ಸೇರಿ ಅದರ 12% ರಶ್ಟು ಹಣವನ್ನು ಈ ಮುಂಬೊತ್ತಿನ ನಿದಿಗೆ ನೀಡಬೇಕಾಗುತ್ತದೆ. ಕಂಪನಿಯು ನೀಡುವ 12% ರಲ್ಲಿ; 8.33%
ಪಿಂಚಣಿಗೆ(EPS) ಮತ್ತು ಉಳಿದ 3.67% (EPF) ಮುಂಬೊತ್ತಿನ ನಿದಿಗೆ ಸೇರುತ್ತದೆ.
ಈಗ ಒಂದು ಎತ್ತುಗೆ ಮೂಲಕ ನೋಡೋಣ;

ಮೂಲ ಸಂಬಳ( Basic Salary) – 15,000

ಅ) ಮೂಲ ಸಂಬಳದ 12% (ಕೆಲಸಗಾರನ ಕೊಡುಗೆ Employees contribution) – 15,000 ದ 12% -> 1,800 ರೂ

ಆ) ಕೆಲಸ ನೀಡುವವರ ಕೊಡುಗೆ; 8.33% (Employers EPS contribution )- 15,000 ದ 8.33% -> 1,250 ರೂ

ಇ) ಮೂಲ ಸಂಬಳದ 3.67% ( Employers EPF contribution )- 15,000 ದ 3.67% -> 550 ರೂ

ಒಟ್ಟೂ ಮುಂಬೊತ್ತಿನ ಟೇವಣಿ ( Total EPF)= (ಅ) + (ಇ) = 1,800 ರೂ + 1,250 ರೂ = 3050 ರೂ
ಒಟ್ಟೂ ಪಿಂಚಣಿ (Total EPS) = (ಆ) = 1,250 ರೂ

ಇಲ್ಲಿ ಇನ್ನೊಂದು ಗಮನಿಸುವ ಅಂಶವೆಂದರೆ; ಪಿಂಚಣಿಗೆ ಹೆಚ್ಚೆಂದರೆ 1,250ರೂ ಮಾತ್ರ ಸೇರಿಸಬಹುದು.ಈಗ ವ್ಯಕ್ತಿಯ ಸಂಬಳ 15000ಕ್ಕೂ ಮೇಲ್ಪಟ್ಟಿದ್ದರೆ; ಎತ್ತುಗೆಗೆ 20,000 ರೂ ಇದ್ದಲ್ಲಿ; ಆತನ ಪಿಂಚಣಿ (20,000 ದ 8.33%) 1666 ರೂ ಬರುತ್ತದೆ. ಆದರೆ ಪಿಂಚಣಿಗೆ ಮಿತಿಯಿರುವುದರಿಂದ; ಈ ಹೆಚ್ಚೂವರಿ ದುಡ್ಡು( 1,666 – 1,250= 416 ರೂ ) ; ವ್ಯಕ್ತಿಯ ಮುಂಬೊತ್ತಿನ ನಿದಿಗೆ ಸೇರುತ್ತದೆ. ಇಂತಹದೇ ಇನ್ನೂ ಕೆಲವು ಮಾಹಿತಿಯನ್ನು ಈ ಕೆಳಗಿನ ತಿಟ್ಟದಲ್ಲಿ ಕಾಣಿರಿ;

  • ಗುರುತಿಸಲ್ಪಡದ ಮುಂಬೊತ್ತಿನ ನಿದಿ (Unrecognized Provident Fund)

ಒಂದು ವೇಳೆ ಈ ಮೇಲೆ ತಿಳಿಸಿದ ಏರ‍್ಪಾಡಿನಲ್ಲಿ, ಆದಾಯ ತೆರಿಗೆ ಕಮಿಶನರ‍್ (Commissioner of Income Tax -CIT) ಅವರಿಂದ ಒಪ್ಪಿಗೆ ದೊರೆಯದಿದ್ದಲ್ಲಿ ಅದು ಗುರುತಿಸಲ್ಪಡದ ಮುಂಬೊತ್ತಿನ ನಿದಿಯಡಿ ಬರುತ್ತದೆ.

ಸಾರ‍್ವಜನಿಕ ಮುಂಬೊತ್ತಿನ ನಿದಿ (Public Provident Fund)

ಇದು ಸಾಮಾನ್ಯ ಮಂದಿಗಾಗಿ ಇರುವ ಮುಂಬೊತ್ತಿನ ನಿದಿಯಾಗಿದೆ. ಇದರಲ್ಲಿ ಯಾರು ಬೇಕಾದರೂ ಸಹ ಹೂಡಿಕೆ ಮಾಡಬಹುದು. ಇದು 15ವರುಶ ಅವದಿ ಹೊಂದಿರುತ್ತದೆ. ‌ವರುಶಕ್ಕೆ ಕಡಿಮೆಯೆಂದರೂ 500ರೂ ಆದರೂ ಕಟ್ಟಿ, ಕಾತೆ‌ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು.ಹೆಚ್ಚೆಂದರೆ ವರುಶಕ್ಕೆ 1,50,000 ಲಕ್ಶ ಕಟ್ಟಬಹುದು. ಇದರ ಬಡ್ಡಿದರ ಸಾಮಾನ್ಯವಾಗಿ 7-8% ನಡುವೆ ಬದಲಾಗುತ್ತಿರುತ್ತದೆ. ಇದರಲ್ಲಿ ಹೂಡಿಕೆ ಮಾಡಿದ ಹಣವನ್ನು ಆದಾಯ ತೆರಿಗೆ ವಿನಾಯಿತಿಯಾಗಿ ತೋರಿಸಬಹುದು. 80C ಸೆಕ್ಶನ್ ಅಡಿ, ಹೆಚ್ಚೆಂದರೆ 1,50,000 ದ ವರೆಗೆ, ಉಳಿತಾಯವನ್ನು ತೋರಿಸಬಹುದು. ಹಾಗೆ ತೋರಿಸಿದಲ್ಲಿ ವರುಶದ ಒಟ್ಟು ಗಳಿಕೆಯಲ್ಲಿ ಆ 1,50,000 ರೂ ತೆರಿಗೆಗೆ ಒಳಪಡುವುದಿಲ್ಲ.

ಅಂಚೆ ಇಲಾಕೆಯ ಯೋಜನೆಗಳು

ಅಂಚೆ ಇಲಾಕೆಯು ಹತ್ತಾರು ವರುಶದಿಂದ ಹಲವಾರು ಜನೋಪಯೋಗಿ ಯೋಜನೆಗಳನ್ನು‌ ನೀಡುತ್ತಾ ಬಂದಿದೆ. ಅಂಚೆ ಕಚೇರಿ ಹಣಮನೆ, ರಾಶ್ಟ್ರೀಯ ಪಿಂಚಣಿ ಏರ‌್ಪಾಡು(NPS scheme), ಉಳಿತಾಯ‌ ಯೋಜನೆ, ಸ್ತಿರ ಟೇವಣಿ, ಮರುಕಟ್ಟುವ ಟೇವಣಿ, ಅಂಚೆ ಪಿಪಿಎಪ್ ಏರ‌್ಪಾಡು ಇತ್ಯಾದಿ. ಮುಂಬೊತ್ತಿನ ನಿದಿಯಲ್ಲಿ ಹೂಡಿಕೆ ಮಾಡಿದ ಹಣವನ್ನು ಆದಾಯ ತೆರಿಗೆ ವಿನಾಯಿತಿಯಾಗಿ ತೋರಿಸಬಹುದು. 80C ಸೆಕ್ಶನ್ ಅಡಿ, ಹೆಚ್ಚೆಂದರೆ 1,50,000 ದ ವರೆಗೆ, ಉಳಿತಾಯವನ್ನು ತೋರಿಸಬಹುದು. ಹಾಗೆ ತೋರಿಸಿದಲ್ಲಿ ಆ 1,50,000 ಲಕ್ಶ ತೆರಿಗೆಗೆ ಒಳಪಡುವುದಿಲ್ಲ.

ಮುಂದಿನ ಬರಹದಲ್ಲಿ ಇನ್ನುಳಿದ ಆಯ್ಕೆಗಳ ಬಗೆಗೆ ನೋಡೋಣ.

ಸೂಚನೆ( Disclaimer)
ಈ ಬರಹವು ಯಾವುದೇ ಹೂಡಿಕೆ,ಗಳಿಕೆ, ಹಣಕಾಸು, ಆಸ್ತಿಪಾಸ್ತಿ ಗೆ ಸಂಬಂದ ಪಟ್ಟಂತೆ ನೀಡಲಾಗುವ ಸಲಹೆಯಲ್ಲ. ಇದು ಕೇವಲ ಕಲಿಕೆ(Educational) ಬರಹವಾಗಿದೆ. ಓದುಗರು ತಾವು ಯಾವುದೇ ಆಯ್ಕೆ ಮಾಡುವ ಮುನ್ನ, ಮಾರುಕಟ್ಟೆ ನಿಯಮ, ಸರಕಾರದ ಕಟ್ಟಳೆ ಮತ್ತು ಇತರ ಸಂಸ್ತೆಗಳ ಕಟ್ಟಳೆಗಳನ್ನು ಅರಿತು ಮುನ್ನಡೆಯಬೇಕು ಮತ್ತು ತಮ್ಮ ನಿರ‍್ದಾರಕ್ಕೆ ತಾವೇ ಜವಾಬ್ದಾರರಾಗಿರುತ್ತಾರೆ.

( ಚಿತ್ರ ಸೆಲೆ: pixabay.com )

ಕಂತು-1, ಕಂತು-2, ಕಂತು-3

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: