ರವೀಂದ್ರನಾತ ಟ್ಯಾಗೋರರ ಕವನಗಳ ಓದು – 6 ನೆಯ ಕಂತು

– ಸಿ.ಪಿ.ನಾಗರಾಜ.

ಖಗ ವಿಲಾಪ

ಸ್ವಚ್ಛಂದದಿಂದ ಹಾರುವ ಕಾನನದ ಪಕ್ಷಿ
ಒಂದು ದಿನ ಹಾರಿ ನಗರದ ಕಡೆಗೆ ಬಂತು
ಅಲ್ಲಿ ವಿಧಿವಶದಿಂದ ಪಂಜರದ ಪಕ್ಷಿಯನು
ಕಂಡು ಬಳಿಸಾರಿ ಕುಶಲವನು ಕೇಳಿತ್ತು

“ಎನ್ನೊಲವೆ ನಾವಿಂದು ಜೊತೆಯಾಗಿ ಹಾರುತ್ತ
ಕಾನನದ ಮನೆ ಸೇರಿ ಬಾಳೋಣ” ಎನಲು
ಪಂಜರದ ಪಕ್ಷಿ ಪಿಸುಮಾತಿನಿಂ ಹೇಳಿತ್ತು
“ಒಳಗೆ ಬಾ ಬಲು ಹಿತವು ಪಂಜರದ ಬಾಳು”

“ರೆಕ್ಕೆ ಬಿಚ್ಚಲು ಎಲ್ಲಿ ಸ್ಥಳವಿಹುದು ಪಂಜರದಿ?”
ಎಂದು ಕಾಡಿನ ಹಕ್ಕಿ ಕನಿಕರವ ತೋರೆ
“ಕುಳಿತುಕೊಳ್ಳಲು ಸ್ಥಳವ ನಾ ಕಾಣೆ ಆಗಸದಿ
ಅದಕೆ ಪಂಜರದಿಂದ ಹೊರಗೆ ಬರಲಾರೆ”

ಪಂಜರದ ಪಕ್ಷಿಗಿಹ ಆತಂಕವನು ಕಂಡು
ಸ್ವಾತಂತ್ರ್ಯಪ್ರಿಯ ಪಕ್ಷಿ ದುಃಖಗೊಂಡಿತ್ತು
“ಎನ್ನೊಲವೆ ವನದ ಸೌಂದರ್ಯವನು ಬಣ್ಣಿಸುವ
ಹಾಡುಗಳ ಹಾಡುವೆಯ?” ಎಂದು ಕೇಳಿತ್ತು

“ಕಾನನದ ಹಾಡುಗಳ ನಾನು ಮರೆತಿಹೆ ನೋಡು
ಕುಳಿತಿಕೋ ನನ್ನ ಬಳಿ ಈ ಪಂಜರದಲಿ
ಮಾನವರ ಮಾತನ್ನು ಹೇಳಿ ಕೊಡುವೆನು ನಾನು
ಪಂಡಿತರ ಜ್ಞಾನವನು ನಿನಗೆ ಕಲಿಸುವೆನು”

ಪಂಜರದ ಪಕ್ಷಿ ಹೇಳಿದ ಮಾತು ಕೇಳುತ್ತ
ಕಾನನದ ಪಕ್ಷಿ ಭಯದಿಂದ ಕಂಪಿಸಿತು
“ಹೇಳಿಕೊಟ್ಟರೆ ಕಲಿಯಲಾರೆ ನೀ ಹಾಡುಗಳ
ಹೊಮ್ಮಬೇಕೆದೆಯಲ್ಲಿ” ಎಂದು ಹೇಳಿತ್ತು

ಮಧುರ ಮಿಲನದ ಬಯಕೆಯಿಂದ ಈ ಪಕ್ಷಿಗಳ
ಒಲವಿನಾಸೆಯು ಬೆಳೆದು ತೀವ್ರಗೊಂಡಿತ್ತು
ಎಂದಿಗೂ ಹಾರಲಾರವು ಬಾನಿನಲಿ ಜೊತೆಗೆ
ಈ ಜೋಡಿ ವಿಧಿಯಾಟದಲ್ಲಿ ಸಿಲುಕಿತ್ತು

ಪಂಜರದ ಕಂಬಿಗಳ ಎಡೆಯಿಂದ ನೋಡುತ
ಪಕ್ಷಿಗಳು ಮೂಕವಾಗಿಯೆ ರೋದಿಸಿದವು
ಅನ್ಯೋನ್ಯವಾಗಿ ಅರಿಯಲು ತುಂಬ ಯತ್ನಿಸುತ
ತೊಳಲಾಡಿದರೂ ಮೂಡಲಿಲ್ಲ ಸಹಮತವು

ರೆಕ್ಕೆಗಳ ಬಡಿಯುತ್ತ ಹಕ್ಕಿಗಳು ಹಾಡಿದವು
ಎನ್ನೊಲವೆ ಸನಿಹ ಬಾ ಸನಿಹ ಬಾರೆಂದು
ಇದ ಕಂಡು ಕನಿಕರದಿ ಕವಿಯು ಉದ್ಗರಿಸಿದನು
“ಇದಕೆನ್ನುವರು ಜನರು ವಿಧಿಯಾಟ” ವೆಂದು

“ಪಂಜರದ ಮುಚ್ಚಿರುವ ಬಾಗಿಲಿಗೆ ಹೆದರುವೆನು
ನಾನು ಬರಲೊಲ್ಲೆ” ಎಂದಿತು ಕಾಡಹಕ್ಕಿ
“ಬಲಹೀನ ರೆಕ್ಕೆಯಿಂ ಹಾರಲಾರೆನು ನಾನು”
ಮೆಲುದನಿಯಲುಸುರಿತ್ತು ಪಂಜರದ ಪಕ್ಷಿ.

ಕಾಡಿನ ಹಕ್ಕಿ ಮತ್ತು ಪಂಜರದ ಹಕ್ಕಿಯ ಮಾತುಕತೆಯ ರೂಪಕದ ಮೂಲಕ ಸ್ವಾತಂತ್ರ್ಯ ಮತ್ತು ದಾಸ್ಯದ ಬದುಕಿನ ಸ್ವರೂಪವನ್ನು ಈ ಕವನದಲ್ಲಿ ಚಿತ್ರಿಸಲಾಗಿದೆ.

‘ರೂಪಕ’ ಎಂದರೆ ಕವಿಯು ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಲೆಂದು ಓದುಗರ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಪ್ರಸಂಗವೊಂದನ್ನು ನುಡಿಗಳ ಮೂಲಕ ಚಿತ್ರಿಸಿರುವುದು.

ಖಗ=ಹಕ್ಕಿ; ವಿಲಾಪ=ಅಳುವಿಕೆ/ರೋದನ/ಪ್ರಲಾಪ/ಮಾತನಾಡುವಿಕೆ;  ಸ್ವಚ್ಛಂದ+ಇಂದ; ಸ್ವಚ್ಛಂದ=ಯಾವುದೇ ಕಟ್ಟುಪಾಡುಗಳಿಗೆ ಒಳಪಡದ ನಡೆನುಡಿ/ಯಾವುದಕ್ಕೂ ಇಲ್ಲವೇ ಯಾರಿಗೂ ಅಡಿಯಾಳಾಗದಿರುವುದು; ಕಾನನ=ಕಾಡು/ಅರಣ್ಯ; ಪಕ್ಷಿ=ಹಕ್ಕಿ; ಕಾನನದ ಪಕ್ಷಿ=ದೊಡ್ಡದಾಗಿ ಹಬ್ಬಿರುವ ಕಾಡಿನಲ್ಲಿ ಎಲ್ಲೆಂದರಲ್ಲಿ ಯಾವುದೇ ಅಡೆತಡೆಯಿಲ್ಲದೆ ಹಾರಾಡುತ್ತ, ಸ್ವತಂತ್ರವಾಗಿ ಬದುಕುತ್ತಿರುವ ಹಕ್ಕಿ;

ನಗರ=ಜನವಸತಿಯಿಂದ ಕೂಡಿರುವ ಪಟ್ಟಣ; ವಿಧಿವಶ+ಇಂದ; ವಿಧಿವಶದಿಂದ=ಆಕಸ್ಮಿಕವಾಗಿ; ಪಂಜರ=ಹಕ್ಕಿ ಇಲ್ಲವೇ ಪ್ರಾಣಿಗಳನ್ನು ಕೂಡಿ ಹಾಕಲು ಬಳಸುವ ಲೋಹದ ಸರಳುಗಳಿಂದ ಮಾಡಿರುವ ಉಪಕರಣ; ಪಂಜರದ ಪಕ್ಷಿ=ಪಂಜರದೊಳಗೆ ಸೆರೆಯಾಗಿ ಹಾರಾಡಲಾಗದೆ, ಪಂಜರದ ಕಿರಿದಾದ ಜಾಗದಲ್ಲಿಯೇ ಬದುಕುತ್ತಿರುವ ಹಕ್ಕಿ;

ಬಳಿಸಾರಿ=ಹತ್ತಿರ ಬಂದು; ಕುಶಲ=ನೆಮ್ಮದಿ/ಆರೋಗ್ಯ; ಕೇಳಿತ್ತು=ವಿಚಾರಿಸಿತು;

ಎನ್ನ+ಒಲವೆ; ಎನ್ನ=ನನ್ನ; ಒಲವು=ಪ್ರೀತಿ; ನಾವು+ಇಂದು; ಜೊತೆ+ಆಗಿ; ಎನಲು=ಎನ್ನಲು; ಪಿಸುಮಾತು=ಮೆಲ್ಲನೆಯ ದನಿಯಲ್ಲಿ; ಬಲು=ಬಹಳ/ಹೆಚ್ಚಿನ; ಹಿತ=ಒಳ್ಳೆಯದು;

“ಎನ್ನೊಲವೆ ನಾವಿಂದು ಜೊತೆಯಾಗಿ ಹಾರುತ್ತ ಕಾನನದ ಮನೆ ಸೇರಿ ಬಾಳೋಣ” ಎನಲು, ಪಂಜರದ ಪಕ್ಷಿ ಪಿಸುಮಾತಿನಿಂ ಹೇಳಿತ್ತು “ಒಳಗೆ ಬಾ ಬಲು ಹಿತವು ಪಂಜರದ ಬಾಳು”=ಪಂಜರದ ಸೆರೆಯಲ್ಲಿರುವ ಹಕ್ಕಿಯನ್ನು ಕಂಡ ಕಾನನದ ಹಕ್ಕಿಯು  ತನ್ನಂತೆಯೇ ಸ್ವತಂತ್ರವಾಗಿ ಬಾಳುವ ಕಡೆಗೆ ಪ್ರೀತಿಯಿಂದ ಕರೆದಾಗ,  ಪಂಜರದ ಹಕ್ಕಿಯು ಪಂಜರದ ಬಾಳಿನಲ್ಲಿಯೇ ಹೆಚ್ಚು ಹಿತವೆಂದು ಹೇಳುತ್ತ, ಅದನ್ನೇ ತಾನಿರುವ ಪಂಜರದೊಳಕ್ಕೆ ಕರೆಯುತ್ತದೆ. ದಾಸ್ಯಕ್ಕೆ ಒಗ್ಗಿಹೋಗಿರುವ ಪಂಜರದ ಹಕ್ಕಿಯ ಮಯ್ ಮನಕ್ಕೆ ಸ್ವತಂತ್ರವಾಗಿ ಬದುಕಬೇಕೆಂಬ ಆಸೆಯೇ ಇಲ್ಲವಾಗಿದೆ ಎಂಬುದನ್ನು ಈ ನುಡಿಗಳು ಸೂಚಿಸುತ್ತವೆ;

ರೆಕ್ಕೆ=ಹಕ್ಕಿಯು ಹಾರಾಡಲು ನೆರವಾಗುವ ಗರಿಗಳು; ಸ್ಥಳ+ಇಹುದು; ಸ್ಥಳ=ಜಾಗ/ಎಡೆ; ಇಹುದು=ಇರುವುದು; ಕನಿಕರ=ಕರುಣೆ/ಮರುಕ; ತೋರೆ=ತೋರಲು; ಕಾಣೆ=ಕಾಣೆನು; ಆಗಸ=ಆಕಾಶ/ಗಗನ;

“ರೆಕ್ಕೆ ಬಿಚ್ಚಲು ಎಲ್ಲಿ ಸ್ಥಳವಿಹುದು ಪಂಜರದಿ?”ಎಂದು ಕಾಡಿನ ಹಕ್ಕಿ ಕನಿಕರವ ತೋರೆ “ಕುಳಿತುಕೊಳ್ಳಲು ಸ್ಥಳವ ನಾ ಕಾಣೆ ಆಗಸದಿ ಅದಕೆ ಪಂಜರದಿಂದ ಹೊರಗೆ ಬರಲಾರೆ”=ಕಿರಿದಾದ ಪಂಜರದಲ್ಲಿ ರೆಕ್ಕೆಯನ್ನು ಬಿಚ್ಚಿ ಹಾರಾಡಲು ಜಾಗವು ಎಲ್ಲಿದೆಯೆಂದು ಗಗನದ ಹಕ್ಕಿಯು ಆತಂಕದಿಂದ ನುಡಿದರೆ, ಅನಂತವಾದ ಆಕಾಶದಲ್ಲಿ ಕುಳಿತುಕೊಳ್ಳಲು ಜಾಗವನ್ನೇ ನಾನು ಕಾಣೆನು ಎಂದು ಪಂಜರದ ಹಕ್ಕಿ ತಾನು ಹೊರಬಾರದಿರುವುದಕ್ಕೆ ನೆಪವನ್ನು ಹೇಳುತ್ತದೆ. ಸ್ವತಂತ್ರವಾಗಿ ಬದುಕನ್ನು ನಡೆಸುವ ಕಾನನದ ಹಕ್ಕಿಯು ಹಾರಾಡುತ್ತ ಬಾಳಬೇಕೆಂಬ ಕ್ರಿಯಾಶೀಲತೆಯಿಂದ ಕೂಡಿದ್ದರೆ, ದಾಸ್ಯದಿಂದ ಕುಗ್ಗಿಹೋಗಿರುವ ಪಂಜರದ ಹಕ್ಕಿಯು ಏನನ್ನು ಮಾಡದೆ ಕುಳಿತುಕೊಳ್ಳಲು ಬಯಸುವ ಜಡಮನಸ್ಸನ್ನು ಹೊಂದಿದೆ;

ಪಕ್ಷಿಗೆ+ಇಹ; ಇಹ=ಇರುವ; ಆತಂಕ=ಹೆದರಿಕೆ/ಚಿಂತೆ;

ಪಂಜರದ ಪಕ್ಷಿಗಿಹ ಆತಂಕವನು ಕಂಡು ಸ್ವಾತಂತ್ರ್ಯಪ್ರಿಯ ಪಕ್ಷಿ ದುಃಖಗೊಂಡಿತ್ತು=ದಾಸ್ಯಕ್ಕೆ ಒಳಗಾಗಿ ಸ್ವತಂತ್ರವಾಗಿ ಬದುಕಬೇಕೆಂಬ ಆಸೆಯನ್ನೇ ಕಳೆದುಕೊಂಡು, ಹೆದರಿಕೆಯಿಂದ ಕುಗ್ಗಿಹೋಗಿರುವ ಪಂಜರದ ಹಕ್ಕಿಯನ್ನು ನೋಡಿ,  ಎಂದೆಂದಿಗೂ ಸ್ವಾತಂತ್ರ್ಯದ ಬದುಕನ್ನೇ ಮೆಚ್ಚುವ ಕಾನನದ ಹಕ್ಕಿಯು ಸಂಕಟಕ್ಕೆ ಒಳಗಾಯಿತು;

ವನ=ಕಾಡು/ಅರಣ್ಯ; ಸೌಂದರ್ಯ=ಚೆಲುವು/ಸೊಬಗು; ಬಣ್ಣಿಸುವ=ವಿವರಿಸುವ;

 “ಎನ್ನೊಲವೆ ವನದ ಸೌಂದರ್ಯವನು ಬಣ್ಣಿಸುವ ಹಾಡುಗಳ ಹಾಡುವೆಯ?” ಎಂದು ಕೇಳಿತ್ತು=ಕಾಡಿನ ಮರಗಿಡಗಳ ಅಂದಚೆಂದವನ್ನು, ಬೆಟ್ಟಗುಡ್ಡಗಳ ಸುಂದರ ನೋಟವನ್ನು, ಸುವಾಸನೆಯಿಂದ ಕೂಡಿದ ಹೂ ಕಾಯಿ ಹಣ್ಣುಗಳ ಬಣ್ಣವನ್ನು ಮತ್ತು ಹಕ್ಕಿಗಳ ಕೊರಳೊಳಗಿಂದ ಹೊರಹೊಮ್ಮುವ ಇಂಪಾದ ದನಿಯನ್ನು ಕುರಿತು ಬಣ್ಣಿಸುವ ಹಾಡುಗಳನ್ನು ಹಾಡಬಲ್ಲೆಯ ನೀನು ಎಂದು ಕಾನನದ ಹಕ್ಕಿಯು ಪಂಜರದ ಹಕ್ಕಿಯನ್ನು ಪ್ರಶ್ನಿಸುತ್ತದೆ. ಈ ಪ್ರಶ್ನೆಯ ಹಿನ್ನೆಲೆಯಲ್ಲಿ “ಕಾಡಿನ ಸ್ವತಂತ್ರ ಜೀವನದಲ್ಲಿ ನಿಸರ್‍ಗದ ಚೆಲುವಿನ ಮಡಲಲ್ಲಿ ನಾವು ಇದನ್ನೆಲ್ಲ ಕಾಣಬಹುದು ಮತ್ತು ಪಡೆದು ಆನಂದದಿಂದ ಬಾಳಬಹುದು” ಎಂಬುದನ್ನು ಪಂಜರದ ಹಕ್ಕಿಗೆ ಸೂಚಿಸುತ್ತದೆ;

ಮಾನವರ ಮಾತು=ಮಾನವರು ಕಲಿತು ಆಡುತ್ತಿರುವ ನುಡಿಗಳು; ಪಂಡಿತ=ಅಕ್ಕರದ ವಿದ್ಯೆಯನ್ನು ಚೆನ್ನಾಗಿ ಕಲಿತಿರುವವನು; ಜ್ಞಾನ=ತಿಳುವಳಿಕೆ/ಅರಿವು;

“ಕಾನನದ ಹಾಡುಗಳ ನಾನು ಮರೆತಿಹೆ ನೋಡು ಕುಳಿತಿಕೋ ನನ್ನ ಬಳಿ ಈ ಪಂಜರದಲಿ ಮಾನವರ ಮಾತನ್ನು ಹೇಳಿ ಕೊಡುವೆನು ನಾನು ಪಂಡಿತರ ಜ್ಞಾನವನು ನಿನಗೆ ಕಲಿಸುವೆನು”=ದಾಸ್ಯಕ್ಕೆ ಬಲಿಯಾಗಿರುವ ಪಂಜರದ ಹಕ್ಕಿಗೆ ನಿಸರ್‍ಗ ಸಹಜವಾದ ಸ್ವತಂತ್ರ ಬದುಕಿಗಿಂತಲೂ ಮಾನವರ ಕಟ್ಟುಪಾಡುಗಳಿಂದ ರಚನೆಗೊಂಡಿರುವ ಸಮಾಜದ ಬದುಕು ದೊಡ್ಡದಾಗಿ ಕಾಣಿಸುತ್ತಿದೆ;

ಕಂಪಿಸಿತು=ನಡುಗಿತು; ಹೊಮ್ಮಬೇಕು+ಎದೆಯಲ್ಲಿ; ಹೊಮ್ಮಬೇಕು=ಹೊರಸೂಸು/ಮೂಡಿಬರುವುದು; ಎದೆ=ಮನಸ್ಸು;

“ಹೇಳಿಕೊಟ್ಟರೆ ಕಲಿಯಲಾರೆ ನೀ ಹಾಡುಗಳ ಹೊಮ್ಮಬೇಕೆದೆಯಲ್ಲಿ” ಎಂದು ಹೇಳಿತ್ತು=ಈ ಜಗತ್ತಿನಲ್ಲಿ ಇತರರು  ಹೇಳಿಕೊಟ್ಟ ನುಡಿಗಳಿಂದ ಕಲಿಯುವುದಕ್ಕಿಂತಲೂ ಯಾವುದೇ ಜೀವಿಯು ತಾನಾಗಿ ಪಡೆಯುವ ಅರಿವು ದೊಡ್ಡದು. ಆದ್ದರಿಂದ ಜೀವಿಯು ತನ್ನ ಸ್ವತಂತ್ರ ಮತಿಯಿಂದ ಲೋಕದ ಅರಿವನ್ನು ಪಡೆಯಬೇಕು. ದಾಸ್ಯಕ್ಕೆ ಒಗ್ಗಿಹೋದ ಮನಸ್ಸು ಹೊಸದೇನನ್ನೂ ಕಾಣಲಾರದು ಮಾತ್ರವಲ್ಲ,  ಹೊಸತನ್ನು ಮೂಡಿಸಲಾರದು ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ;

ಮಧುರ=ಸವಿಯಾದ/ಸಿಹಿಯಾದ/ಇಂಪಾದ; ಮಿಲನ=ಜೊತೆಗೂಡುವಿಕೆ/ಒಬ್ಬರನ್ನೊಬ್ಬರು ಒಡಗೂಡುವುದು; ಬಯಕೆ+ಇಂದ; ಬಯಕೆ=ಆಸೆ/ಇಚ್ಚೆ; ಒಲವಿನ+ಆಸೆ; ತೀವ್ರಗೊಂಡಿತ್ತು=ಹೆಚ್ಚಾಯಿತು;

ಈ ಜೋಡಿ ವಿಧಿಯಾಟದಲ್ಲಿ ಸಿಲುಕಿತ್ತು=ಈ ಎರಡು ಹಕ್ಕಿಗಳು ಬೇರೆ ಬೇರೆ ಬದುಕಿನ ನೆಲೆಗಳಿಗೆ ಒಗ್ಗಿಕೊಂಡಿದ್ದವು;

ಕಂಬಿ=ಲೋಹದ ಸರಳು; ಎಡೆ+ಇಂದು; ರೋದಿಸು=ಅಳು/ಗೋಳಾಡು; ಅನ್ಯೋನ್ಯ=ಪರಸ್ಪರ ಪ್ರೀತಿಯಿಂದ; ಅರಿಯಲು=ಒಂದು ಮತ್ತೊಂದನ್ನು ತಿಳಿದುಕೊಳ್ಳಲು; ತೊಳಲಾಡು=ಸಂಕಟಪಡು/ತುಂಬಾ ಆತಂಕದಿಂದ ಒದ್ದಾಡು; ಮೂಡು=ಹುಟ್ಟು/ಉದಯಿಸು; ಸಹಮತ=ಇಬ್ಬರಲ್ಲೂ ಒಂದೇ ಬಗೆಯ ನಿಲುವು;

ಸನಿಹ=ಹತ್ತಿರ/ಸಮೀಪ; ಬಾರ+ಎಂದು;

ರೆಕ್ಕೆಗಳ ಬಡಿಯುತ್ತ ಹಕ್ಕಿಗಳು ಹಾಡಿದವು ಎನ್ನೊಲವೆ ಸನಿಹ ಬಾ ಸನಿಹ ಬಾರೆಂದು=ಎರಡು ಹಕ್ಕಿಗಳು ಒಂದೆಡೆಯಲ್ಲಿ ಬಾಳಬೇಕೆಂದು ಬಹಳ ಹಂಬಲಿಸಿದವು. ಆದರೆ ಅದು ಆಗುತ್ತಿಲ್ಲ. ಏಕೆಂದರೆ ಅವುಗಳ ಬದುಕಿನ ನೆಲೆ ಬೇರೆ ಬೇರೆಯಾಗಿದೆ;

ಕವಿ=ಕಾವ್ಯವನ್ನು ರಚಿಸುವವನು; ಉದ್ಗರಿಸಿದನು=ತನ್ನ ಮನದ ಒಳಮಿಡಿತಗಳನ್ನು ನುಡಿಗಳ ರೂಪದಲ್ಲಿ ಹೇಳಿದನು; ಇದಕೆ+ಎನ್ನುವರು; ವಿಧಿಯಾಟ=ಜಗತ್ತಿನಲ್ಲಿ ನಡೆಯುವ ಯಾವುದೇ ಒಂದು ಕ್ರಿಯೆಗೆ ಇಲ್ಲವೇ ಆಗುಹೋಗುಗಳಿಗೆ ಕಾರ್‍ಯ ಕಾರಣದ ನಡುವಣ ನಂಟನ್ನು ಸರಿಯಾಗಿ ಗುರುತಿಸಿ ಹೇಳಲು ಆಗದಿದ್ದಾಗ, ಅದನ್ನು

ವಿದಿಬರಹ/ಹಣೆಬರಹ/ವಿದಿಯ ಆಟ ಎಂದು ಹೇಳುವುದು ಲೋಕರೂಡಿಯಾಗಿದೆ;

“ಪಂಜರದ ಮುಚ್ಚಿರುವ ಬಾಗಿಲಿಗೆ ಹೆದರುವೆನು ನಾನು ಬರಲೊಲ್ಲೆ” ಎಂದಿತು ಕಾಡಹಕ್ಕಿ=ಕಾಡಿನ ಹಕ್ಕಿಗೆ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು ಬಾಳುವುದಕ್ಕೆ ಇಚ್ಚೆಯಿಲ್ಲ;

ಬಲಹೀನ=ಶಕ್ತಿಯಿಲ್ಲದ/ಕಸುವಿಲ್ಲದ; ರೆಕ್ಕೆಯಿಂ=ರೆಕ್ಕಿಯಿಂದ; ಮೆಲುದನಿಯಲಿ+ಉಸುರಿತ್ತು; ಉಸುರು=ಹೇಳು/ನುಡಿ;

“ಬಲಹೀನ ರೆಕ್ಕೆಯಿಂ ಹಾರಲಾರೆನು ನಾನು” ಮೆಲುದನಿಯಲುಸುರಿತ್ತು ಪಂಜರದ ಪಕ್ಷಿ=ದಾಸ್ಯಕ್ಕೆ ಒಗ್ಗಿಹೋಗಿರುವ ಪಂಜರದ ಹಕ್ಕಿಯು ಸ್ವತಂತ್ರವಾಗಿ ಬಾಳಬೇಕೆಂಬ ಮನಸ್ಸನ್ನೇ ಹೊಂದಿಲ್ಲ. ಆದ್ದರಿಂದಲೇ ಹಾರುವ ರೆಕ್ಕೆಗಳಿದ್ದರೂ ಅದನ್ನು ಬಳಿಸಿಕೊಂಡು ಬಾಳಬೇಕೆಂಬ ಇಚ್ಚೆಯಾಗಲಿ, ಕೆಚ್ಚಾಗಲಿ, ತನ್ನಲ್ಲಿ ತನಗೆ ನಂಬಿಕೆಯಾಗಲಿ  ಪಂಜರದ ಹಕ್ಕಿಯ ಮಯ್ ಮನದಲ್ಲಿ ಇಲ್ಲವಾಗಿದೆ;

‘ಖಗ ವಿಲಾಪ’ ಕವನದ ರೂಪಕವನ್ನು ಮತ್ತೊಂದು ರೀತಿಯಲ್ಲಿಯೂ ವಿವರಿಸಿಕೊಳ್ಳಬಹುದು. ಕ್ರಿ.ಶ.1969 ರಲ್ಲಿ ಇಂಗ್ಲೆಂಡಿನ Desmond Morris ಎಂಬ ಹೆಸರಿನ ಪ್ರಾಣಿಶಾಸ್ತ್ರಜ್ಞರು ‘The  Human Zoo’ ಎಂಬ ಹೊತ್ತಿಗೆಯನ್ನು ರಚಿಸಿದ್ದಾರೆ. ಹೊರನೋಟಕ್ಕೆ ಮಾನವ ಸಮುದಾಯವು ಸರ್‍ವ ಸ್ವತಂತ್ರವಾಗಿ ಬಾಳುತ್ತಿರುವಂತೆ ಕಂಡುಬಂದರೂ, ನಿಜಜೀವನದಲ್ಲಿ ಹೇಗೆ ಪ್ರತಿಯೊಬ್ಬ ವ್ಯಕ್ತಿಯು ತಾನು ವಾಸಮಾಡುತ್ತಿರುವ ದೇಶದ ಕಾನೂನುಕಟ್ಟಲೆಗಳ ಮತ್ತು ತಾನು ಹುಟ್ಟಿ ಬೆಳೆದು ಬಾಳುತ್ತಿರುವ ಕುಟುಂಬದ ಜಾತಿಮತದ ಆಚರಣೆ ಹಾಗೂ ಸಂಪ್ರದಾಯಗಳ ಪಂಜರದಲ್ಲಿ ಮಾನಸಿಕವಾಗಿ ಸೆರೆಯಾಳಾಗಿದ್ದಾನೆ ಎಂಬುದನ್ನು ಈ ಹೊತ್ತಿಗೆಯಲ್ಲಿ ವಿವರಿಸಿದ್ದಾರೆ.

ಪ್ರಾಣಿಸಂಗ್ರಹಾಲಯದಲ್ಲಿರುವ ಪ್ರಾಣಿಗಳ ಮತ್ತು ಸಾಮಾಜಿಕ ಒಕ್ಕೂಟಗಳಾದ ಲಿಂಗ, ಜಾತಿ, ಮತ, ನುಡಿ, ಪ್ರಾಂತ್ಯ ಮತ್ತು ಆಡಳಿತದ  ಕಟ್ಟುಪಾಡುಗಳಿಗೆ ಒಳಗಾಗಿ ಬಾಳುತ್ತಿರುವ ಮಾನವರ ವರ್‍ತನೆಗಳನ್ನು ಪರಸ್ಪರ ಹೋಲಿಕೆ ಮಾಡಿ ತೋರಿಸುತ್ತ, ಪ್ರಾಣಿಗಳ ಮತ್ತು ಮಾನವರ ವರ್‍ತನೆಗಳಲ್ಲಿ ಕಂಡು ಬರುವ ಕೆಲವು ಸಮಾನ ಸಂಗತಿಗಳನ್ನು ಗುರುತಿಸಿ,  ಪಂಜರದೊಳಗಿನ ಪ್ರಾಣಿಗಳಂತೆಯೇ ಮಾನವರು ಬಹುಬಗೆಯ ನಿಯಂತ್ರಣಕ್ಕೆ ಒಳಪಟ್ಟಿದ್ದಾರೆ ಎಂಬುದನ್ನು ನಿರೂಪಿಸಿದ್ದಾರೆ.

ಪಂಜರದ ಹಕ್ಕಿಯು ಹೇಗೆ ಪಂಜರದಿಂದ ಹೊರಬರಲಾರದೆ ಹಿಂಜರಿಯಿತೋ  ಅಂತೆಯೇ ಮಾನವರು ಕೂಡ ತಮ್ಮ ತಮ್ಮ ಸಾಮಾಜಿಕ ಮತ್ತು ಪ್ರಾದೇಶಿಕ  ಕಟ್ಟುಪಾಡುಗಳಿಂದ ಮಾನಸಿಕವಾಗಿ ಹೊರಬರಲಾರದೆ,  ಹುಟ್ಟಿನಿಂದ ಸಾವಿನ ಕೊನೆಗಳಿಗೆಯ ತನಕ ಪಂಜರದ ಪ್ರಾಣಿಗಳಂತೆಯೇ  ಆಗಿರುತ್ತಾರೆ. ಆದ್ದರಿಂದಲೇ ಮಾನವ ಸಮುದಾಯ ಒಂದಾಗಿ ಪರಸ್ಪರ ಒಲವು, ನಲಿವು ಮತ್ತು ನೆಮ್ಮದಿಯಿಂದ ಬಾಳಲು ಆಗುತ್ತಿಲ್ಲವೆಂಬ ಸಂಗತಿಯನ್ನು ಈ ಕವನದ ರೂಪಕದಿಂದ ತಿಳಿಯಬಹುದು.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications