ಟೊಮೆಟೊ: ಒಂದಶ್ಟು ಮಾಹಿತಿ
ಕಳೆದ ಕೆಲವು ತಿಂಗಳುಗಳಿಂದ ಎಲ್ಲಿ ನೋಡಿದರೂ, ಕೇಳಿದರೂ ಟೊಮೆಟೊ ಬಗ್ಗೆಯೇ ಮಾತು. ದಿನನಿತ್ಯದ ಅಡುಗೆಯಲ್ಲಿ ನಿರಂತರವಾಗಿ ಬಳಕೆಯಾಗುವ ಈ ಟೊಮೆಟೊ ಬೆಲೆ ಒಂದು ಕಿಲೋಗೆ 180 ರೂ. ಗಳ ವರೆಗೂ ಬೆಲೆಯೇರಿ ಎಲ್ಲರ ಗಮನವನ್ನು ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲೂ ಇದರದೇ ಸುದ್ದಿ, ಹಾಸ್ಯ ಚಟಾಕಿಗಳು. ಸದ್ಯಕ್ಕೆ ಟೊಮೆಟೊ ಬೆಲೆ ಇಳಿಯುತ್ತಿದ್ದಂತೆಯೇ ಇದರ ಬಗೆಗಿನ ಟೀಕೆ ಟಿಪ್ಪಣಿಗಳೂ ಕಡಿಮೆಯಾದಂತಿವೆ.
ಶತಮಾನಗಳ ಹಿಂದೆ ಆಗಿನವರು ಕೇವಲ ಅಲಂಕಾರಕ್ಕಾಗಿಯೇ ಟೊಮೆಟೊ ಗಿಡಗಳನ್ನು ಬೆಳೆಸುತ್ತಿದ್ದರಂತೆ. ಇನ್ನೂ ಕೆಲವರು ಇದನ್ನು ವಿಶಕಾರಿಯೆಂದೇ ಬಾವಿಸಿದ್ದರು. ಕಾಲಕಳೆದಂತೆ ಟೊಮೆಟೊ ಬಗೆಗಿನ ತಪ್ಪು ಅಬಿಪ್ರಾಯಗಳು ಅಳಿದು. ನಮ್ಮ ನಿತ್ಯದ ಆಹಾರ ತಯಾರಿಕೆಯಲ್ಲಿ ಬಳಸಲ್ಪಡುವ ತರಕಾರಿಯಾಗಿ ಪರಿಣಮಿಸಿದೆ ಟೊಮೆಟೊ. ಯಾವುದೇ ತಿಂಡಿಯಾಗಲಿ, ಅಡುಗೆಯಾಗಲೀ ಅದರಲ್ಲಿನ ಹುಳಿಗಾಗಿ ಟೊಮೆಟೊವನ್ನು ಹೆಚ್ಚಾಗಿ ಬಳಸಲಾಗುವುದು.
ಟೊಮೆಟೊ ನಮ್ಮ ಬಾರತಕ್ಕೆ ಪರಿಚಯಿಸಲ್ಪಟ್ಟಿದ್ದು ಪೋರ‍್ಚಗೀಸರಿಂದ ಎನ್ನುವ ಮಾಹಿತಿಯಿದೆ. ಮನೆಯ ಹಿತ್ತಲು, ಕೈತೋಟ ಹೀಗೆ ಎಲ್ಲೆಂದರಲ್ಲಿ ಮಣ್ಣು ಇರುವ ಜಾಗಗಳಲ್ಲಿ ತಾವಾಗಿಯೇ ಹುಟ್ಟಿ ಬೆಳೆಯುವ ಗುಣ ಟೊಮೆಟೊ ಗಿಡಗಳಿಗೆ ಇದೆ. ಸಸ್ಯಶಾಸ್ತ್ರದಲ್ಲಿ ಟೊಮೆಟೊ ಹಣ್ಣಿಗೆ ‘ಸೊಲ್ಯಾನಮ್ ಲೈಕೊಪರ‍್ಸಿಕಂ’ (Solanum Lycopersicum) ಎಂದು ಹೆಸರಿಸಲಾಗಿದೆ. ಹುಳಿ ಮತ್ತು ಸಿಹಿ ಮಿಶ್ರಿತವಾಗಿರುವ ಟೊಮೆಟೊದ ಬಳಕೆಯಲ್ಲಿ ಮುಕ್ಯವಾಗಿ ಎರಡು ಬಗೆಯ ಟೊಮೆಟೊವನ್ನು ನಾವು ಬಳಸುತ್ತೇವೆ. ಒಂದು ನಾಟಿ ಟೊಮೆಟೊ, ಮತ್ತೊಂದು ಆಪಲ್ ಅತವಾ ಪಾರಂ ಟೊಮೆಟೊ. ಹೆಚ್ಚಿನ ಮಂದಿ ನಾಟಿ ಟೊಮೆಟೊವನ್ನು ಉಪಯೋಗಿಸುತ್ತಾರೆ ಕಾರಣ ಇದರಲ್ಲಿ ಹುಳಿ ಹೆಚ್ಚು ಹಾಗೂ ಸಿಹಿ ಅಂಶ ಕಡಿಮೆ. ಇನ್ನು ಕೆಲವರು ಆಪಲ್ ಟೊಮೆಟೊ ಇಶ್ಟ ಪಡುವವರಿದ್ದಾರೆ. ಇದರ ಗಾತ್ರ ದೊಡ್ಡದು ಮತ್ತು ಹುಳಿ ಕಡಿಮೆ. ಚಾಟ್ಸ್ ಸೆಂಟರ್ ಗಳಲ್ಲಿ ಆಪಲ್ ಟೊಮೆಟೊವನ್ನು ಹೆಚ್ಚು ಬಳಸಲಾಗುತ್ತದೆ. ನಾಟಿ ಟೊಮೆಟೊಗಿಂತಲೂ ಇದರ ಬೆಲೆಯು ತುಸು ಹೆಚ್ಚೆಂದೇ ಹೇಳಬಹುದು.
ನಿತ್ಯದ ಬಳಕೆಗೆ ಬಹಳ ಜನ ತಮ್ಮ ಮನೆಯ ಕೈದೋಟಗಳಲ್ಲಿಯೂ ಇದನ್ನು ಬೆಳೆಸುತ್ತಾರೆ. ಚೆರ‍್ರಿ, ಗ್ರೀನ್ ,ಗ್ರೇಪ್ ಹೀಗೆ ಹತ್ತು ಹಲವು ಬಗೆಯ ಟೊಮೆಟೊ ತಳಿಗಳಿವೆ. ಟೊಮೆಟೊ ಬಳಸಿ ಟೊಮೆಟೊ ಬಾತ್, ಗೊಜ್ಜು, ಗ್ರೇವಿ, ಪಲ್ಯ, ಸೂಪ್, ಚಾಟ್ಸ್, ಸಲಾಡ್, ಜ್ಯೂಸ್, ಸಾಂಬಾರ್ ಇತರೆ ಕಾದ್ಯಗಳನ್ನು ತಯಾರಿಸಲಾಗುತ್ತದೆ. ಬೆಳಗಿನ ತಿಂಡಿ ತಯಾರಿಕೆಯಲೂ ಇದರ ಬಳಕೆ ಹೆಚ್ಚಿದೆ. ಹೀಗೆ ಟೊಮೆಟೊ ಉಪಯೋಗಿಸದೇ ಮಾಡುವ ಅಡುಗೆ ವಿರಳ. ಮಕ್ಕಳಾದಿಯಾಗಿ ಎಲ್ಲರೂ ಟೊಮೆಟೊ ಕೆಚಪ್, ಸಾಸ್ಗಳನ್ನು ಇಶ್ಟ ಪಡುತ್ತಾರೆ. ಕೆಚಪ್ ಎಂಬ ಪದ ‘ಕೆಚಿಯಾಪ್’ ಎಂಬ ಚೀನೀ ಪದದಿಂದ ಹುಟ್ಟಿಕೊಂಡರೆ, ಸಾಸ್ ಎಂಬುದು ಪ್ರೆಂಚ್ ಪದವಾಗಿದ್ದು, ‘ಸಲ್ಸಾ’ ಎಂಬ ಲ್ಯಾಟಿನ್ ಪದದಿಂದ ಬಂದಿದೆ. ಕೆಚಪ್ ನಲ್ಲಿ ಹುಳಿ ಮತ್ತು ಸಿಹಿ ಬೆರೆತಿದ್ದರೆ, ಸಾಸ್ ನಲ್ಲಿ ಬರೀ ಹುಳಿ ಅಂಶವಿರುತ್ತದೆ.
ನೋಡಲು ಕೆಂಪಾಗಿ ದುಂಡಾಗಿ ಇರುವ ಟೊಮೆಟೊಗೆ ಕನ್ನಡದಲ್ಲಿ ಗೂರೆಹಣ್ಣು, ತಕ್ಕಾಳಿ ಅತವಾ ಗೂದೆಹಣ್ಣು ಎಂಬ ಹೆಸರುಗಳಿವೆ. ಮೂರರಿಂದ ನಾಲ್ಕು ತಿಂಗಳ ಬೆಳೆ ಇದಾಗಿದ್ದು, ಕೆಂಪು ಮಣ್ಣು ಇದಕ್ಕೆ ಸೂಕ್ತ. ಟೊಮೆಟೊ ಪುಟ್ಟ ಸಸಿಯಾದರೂ ಸಮ್ರುದ್ದಿಯಾದ ಪಸಲನ್ನು ನೀಡುತ್ತದೆ. ಪ್ರಕ್ರುತಿಯಲ್ಲಿರುವ ಎಲ್ಲಾ ಹಣ್ಣು ತರಕಾರಿ ಸೊಪ್ಪುಗಳಿಗೆ ಆರೋಗ್ಯ ದ್ರುಶ್ಟಿಯಿಂದ ಕೆಲವು ವಿಶೇಶತೆಗಳು ಇರುವಂತೆ ಟೊಮೆಟೊದಲ್ಲೂ ಇವೆ. ಇದರಲ್ಲಿ ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಹಾಗೂ ಇತರೆ ಪೋಶಕಾಂಶಗಳಿವೆ. ಆದರೆ ಇದರ ಅತಿಯಾದ ಸೇವನೆ ಕೆಲವರಲ್ಲಿ ಆರೋಗ್ಯದ ತೊಂದರೆ ತಂದಿಡಬಹುದು. ಟೊಮೆಟೊದಲ್ಲಿರುವ ಆಕ್ಸಲೇಟ್ ಅಂಶ ಕಿಡ್ನಿಯಲ್ಲಿ ಹರಳು ಅತವಾ ಕಲ್ಲುಗಳನ್ನು ಉತ್ಪತ್ತಿ ಮಾಡಿ ತುಂಬಾ ಬಾದೆ ತರಿಸುತ್ತದೆ. ಕಡೆಗೆ ಕಿಡ್ನಿ ವೈಪಲ್ಯವೂ ಆಗಬಹುದು. ಹಾಗಾಗಿ ಚೆನ್ನಾಗಿ ಬೇಯಿಸಿ ಮಿತವಾಗಿ ಬಳಸುವಂತೆ ತಜ್ನರು ಸೂಚಿಸಿರುತ್ತಾರೆ. ಟೊಮೆಟೊಗೆ ಕೊಲೆಸ್ಟ್ರಾಲ್ ನಿಯಂತ್ರಿಸುವ ಸಾಮರ‍್ತ್ಯವಿದೆ. ಅಲ್ಲದೆ ಮುಕದ ಕಾಂತಿ ಹೆಚ್ಚಿಸುವುದರಲ್ಲಿಯೂ ಇದು ಪರಿಣಾಮಕಾರಿಯಾಗಿದೆ. ನಮ್ಮ ದೇಶದಲ್ಲಿ ಪ್ರತಿ ವರ‍್ಶವೂ ಬಣ್ಣದೋಕುಳಿ ಆಟ ಆಡುವ ಹೋಳಿ ಹಬ್ಬ ಆಚರಿಸುವಂತೆ, ಸ್ಪೇನ್ ನಲ್ಲಿ ಒಬ್ಬರಿಗೊಬ್ಬರು ಟೊಮೆಟೊ ಎಸೆದುಕೊಳ್ಳವ ‘ಲಾ ಟೊಮ್ಯಾಟಿನ’ (La Tomatina) ಎಂಬ ಹಬ್ಬವನ್ನು ಆಗಸ್ಟ್ ತಿಂಗಳ ಕಡೆಯ ಬುದವಾರದಂದು ಆಚರಿಸುತ್ತಾ ಬಂದಿದ್ದಾರೆ. ಹೀಗೆ ಟೊಮೆಟೊ ಚರ್‍ಮದ ಹೊಳಪಿಗಾಗಿ ಹಾಗೂ ಅಡುಗೆಯಲ್ಲಶ್ಟೇ ಅಲ್ಲದೆ, ಹಬ್ಬದಲ್ಲಿಯೂ ಬಳಕೆಯಾಗುತ್ತದೆ.
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು