ಮೊಟ್ಟೆ ಶಾಕ್‌ಶುಕಾ

– ವಿಜಯಮಹಾಂತೇಶ ಮುಜಗೊಂಡ.

‘ಮೊಟ್ಟೆ ಶಾಕ್‌ಶುಕಾ’ ಇದು ಆಪ್ರಿಕಾದ ಪಡುವಡಗಣದ (Northwest) ನಾಡುಗಳಲ್ಲಿ ಹುಟ್ಟಿದ ಅಡುಗೆಯಾಗಿದೆ. ಶಾಕ್‌ಶೌಕಾ, ಚಾಕ್‌ಚುಕಾ ಎಂದೂ ಕರೆಯಲಾಗುವ ಇದನ್ನು 16ನೇ ಶತಮಾನದಲ್ಲಿ ಒಟ್ಟೋಮನ್ ಸಾಮ್ರಾಜ್ಯದ ಆಳ್ವಿಕೆ ಹೊತ್ತಿನಲ್ಲಿ ಪರಿಚಯಿಸಲಾಯಿತು ಎಂದು ಹೇಳಲಾಗುತ್ತದೆ. ಇಂದು ಜಗತ್ತಿನ ಮೂಲೆಗಳಲ್ಲಿ ಸ್ತಳೀಯವಾಗಿ ಸಿಗುವ ನಾನಾ ಬಗೆಯ ಸೊಪ್ಪು ಮತ್ತು ಮಸಾಲೆ ಸಾಮಾನುಗಳಿಂದ ತರೇವಾರಿ ಬಗೆಯಲ್ಲಿ ಶಾಕ್‌ಶುಕಾ ಮಾಡಲಾಗುತ್ತಿದೆ. ನಮ್ಮಲ್ಲೇ ಸಿಗುವ ತರಕಾರಿ-ಸೊಪ್ಪು ಹಾಗೂ ಮಸಾಲೆಗಳನ್ನು ಬಳಸಿ ಇದನ್ನುಮಾಡುವ ಬಗೆ ಹೇಗೆಂದು ನೋಡೋಣ ಬನ್ನಿ.

ಬೇಕಾಗುವ ಸಾಮಾನುಗಳು

ಮೊಟ್ಟೆ – 3-4
ಈರುಳ್ಳಿ – 2
ಟೊಮೆಟೋ – 5
ಕೊತ್ತಂಬರಿ – 10-12 ದಂಟು
ಜೀರಿಗೆ – 2 ಚಮಚ
ಹಸಿ ಮೆಣಸಿನಕಾಯಿ – 2
ಒಣ ಕಾರದ ಪುಡಿ – 2 ಚಮಚ
ಶುಂಟಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಟೊಮೆಟೋ ಸಾಸ್ – 2 ಚಮಚ
ಕೆನೆ/ಕ್ರೀಮ್ – 1/2 ಬಟ್ಟಲು
ಬೆಣ್ಣೆ/ಎಣ್ಣೆ – 2 ಚಮಚ
ದನಿಯಾ ಪುಡಿ – 2 ಚಮಚ
ಗರಂ ಮಸಾಲೆ – 1 ಚಮಚ
ಅರಿಶಿಣ ಪುಡಿ – 1/2 ಚಮಚ
ಕಾಳು ಮೆಣಸಿನ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಮೊದಲಿಗೆ ಹಸಿ ಮೆಣಸಿನ ಕಾಯಿ, ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ಟೊಮೆಟೋ ಹಣ್ಣುಗಳನ್ನು ದೊಡ್ಡ ದೊಡ್ಡ ಹೋಳುಗಳಾಗಿ ಮಾಡಿಕೊಳ್ಳಿ. ಕೆನೆ ಬಳಸುವುದಾದರೆ ಒಂದು ಬಟ್ಟಲಲ್ಲಿ ಹಾಕಿ ಕ್ರೀಮ್‌ ಆಗುವವರೆಗೆ ಚಮಚದಿಂದ ಚೆನ್ನಾಗಿ ಒಡೆದುಕೊಳ್ಳಿ.

ಒಲೆಯ ಮೇಲೆ ಬಾಣಲೆ ಬಿಸಿ ಮಾಡಲು ಇಟ್ಟು ಚಮಚ ಬೆಣ್ಣೆ ಇಲ್ಲವೇ ಎಣ್ಣೆ ಹಾಕಿ. ಇದಕ್ಕೆ ಜೀರಿಗೆ, ಕತ್ತರಿಸಿದ ಹಸಿ ಮೆಣಸಿನ ಕಾಯಿ, ಶುಂಟಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ, ಈರುಳ್ಳಿ ಸೇರಿಸಿ ಚೆನ್ನಾಗಿ ಬೇಯಿಸಿ. ಈರುಳ್ಳಿ ಬೆಂದ ಮೇಲೆ ಇದಕ್ಕೆ ದನಿಯಾ ಪುಡಿ, ಕೆಂಪು ಕಾರದ ಪುಡಿ, ಗರಂ ಮಸಾಲೆ, ಸ್ವಲ್ಪ ಉಪ್ಪು ಸೇರಿಸಿ 2 ನಿಮಿಶ ಬೇಯಿಸಿ. ನಂತರ ಟೊಮೆಟೋ ಹೋಳುಗಳನ್ನು ಸೇರಿಸಿ ಚೆನ್ನಾಗಿ ಬಾಡಿಸಿ. ಟೊಮೆಟೋ ಬೇಯಲು 4-5 ನಿಮಿಶ ಹಿಡಿಯುತ್ತದೆ. ಇದಕ್ಕೆ ಟೊಮೆಟೋ ಸಾಸ್ ಹಾಕಿ ಕೊಂಚ ಬೇಯಿಸಿದ ಮೇಲೆ ಕೆನೆ ಇಲ್ಲವೇ ಕ್ರೀಮ್ ಸೇರಿಸಿಕೊಳ್ಳಿ. ಯಾವುದೇ ಹಂತದಲ್ಲಿ ನೀರು ಸೇರಿಸಿಕೊಳ್ಳುವುದ ಬೇಡ. ಉರಿಯನ್ನು ಸಣ್ಣಗೆ ಮಾಡಿ ಬೇಯಿಸಿದ ಪಲ್ಯದಂತಹ ಮಿಶ್ರಣದಲ್ಲಿ ಸಣ್ಣ ಕುಳಿಗಳನ್ನು ಮಾಡಿಕೊಂಡು ಮೊಟ್ಟೆ ಒಡೆದು ಹಾಕಿಕೊಳ್ಳಿ. ಮೊಟ್ಟೆ ಒಳಗಿನ ಹಳದಿ ಬಾಗ ಒಡೆಯದಂತೆ ನೋಡಿಕೊಳ್ಳುವುದು ಒಳ್ಳೆಯದು.

ಮೊಟ್ಟೆಯ ಮೇಲೆ ಚಿಟಿಕೆ ಉಪ್ಪು ಮತ್ತು ಕಾಳು ಮೆಣಸಿನ ಪುಡಿಯನ್ನು ಉದುರಿಸಿಕೊಳ್ಳಿ. ಒಲೆಯನ್ನು ಸಣ್ಣಗೆ ಇಟ್ಟುಕೊಂಡು ಮೊಟ್ಟೆಯ ಬಿಳಿ ಬಾಗ ಬೇಯುವವರೆಗೆ ಪಾತ್ರೆಯ ಮೇಲೆ ಮುಚ್ಚಿ. ಸುಮಾರು 4-5 ನಿಮಿಶದ ಬಳಿಕ ಮೊಟ್ಟೆಯ ಬಿಳಿ ಬಾಗ ಬೆಳ್ಳಗೆ ಆಗುತ್ತದೆ, ಇದಕ್ಕೆ ಕೊನೆಯಲ್ಲಿ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ಮೊಟ್ಟೆಯ ಶಾಕ್‌ಶುಕಾ ಸವಿಯಲು ತಯಾರು. ಇದನ್ನು ಬ್ರೆಡ್ ಜೊತೆ ಸವಿಯಿರಿ. ಚಪಾತಿ ಇಲ್ಲವೇ ಅನ್ನದ ಜೊತೆಗೂ ತಿನ್ನಬಹುದು.

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks