ಕವಿತೆ: ನಮ್ಮ ಬಾರತ

– ಮಹೇಶ ಸಿ. ಸಿ.

ಜಗ್ಗದಿರಲಿ ಕುಗ್ಗದಿರಲಿ
ನಮ್ಮ ಹೆಮ್ಮೆ ಬಾರತ
ನಿಲ್ಲದಿರಲಿ ನಡೆಯುತಿರಲಿ
ಮುನ್ನುಗ್ಗುತಿರಲಿ ಬಾರತ
ಬೆಳೆಯುತಿರಲಿ ಬೆಳಗುತಿರಲಿ
ಜಗದ ಬೆಳಕು ಬಾರತ
ಚರಿತ್ರೆಯ ಪುಟ ತಿರುವಿನೋಡಿ
ವೀರ ಬೂಮಿ ಬಾರತ

ಮಹಾತ್ಮ ಹುಟ್ಟಿ ಬೆಳೆದ
ಪುಣ್ಯ ಬೂಮಿ ನಮ್ಮ ಬಾರತ
ಶಾಂತಿಮಂತ್ರದಿಂದಲೇನೆ
ಸ್ವಾತಂತ್ರ‍್ಯ ಪಡೆದ ಬಾರತ
ಲೋಕಕೆಲ್ಲಾ ನೀತಿಪಾಟ
ಹೇಳಿಕೊಟ್ಟ ಬಾರತ
ಅದರ‍್ಮವನ್ನು ಮೆಟ್ಟಿ
ನಿಲುವ ಶಕ್ತಿ ಇರುವ ಬಾರತ

ಗಾನ ಕೋಗಿಲೆಗಳ
ಮಾದುರ‍್ಯದಲ್ಲಿ ಬಾರತ
ಸುಗಮ ಸಂಗೀತ ಕ್ಶೇತ್ರ
ಆಳುತಿರುವ ಬಾರತ
ಶಿಲ್ಪಕಲೆಯ ತವರೂರ
ತೊಟ್ಟಿಲೇ ನಮ್ಮ ಬಾರತ
ಸಾಂಸ್ಕ್ರುತಿಕ ಕಲೆಗಳ
ನೆಲೆವೀಡು ನಮ್ಮ ಬಾರತ

ಅಜ್ನಾನವನ್ನು ತೊಡೆದು ಹಾಕಿ
ಬೆಳೆಯುತಿಹುದು ಬಾರತ
ವಿಜ್ನಾನದಲ್ಲಿ ಪಾರುಪತ್ಯ
ಮೆರೆಯುತಿರುವ ಬಾರತ
ದೇಶದ ಬೆನ್ನೆಲುಬೆ ನಮ್ಮ
ರೈತಶಕ್ತಿ ಬಾರತ
ಕ್ರೀಡೆಯಲ್ಲಿ ನವಕಲಿಗಳ
ಅಬ್ಬರವಿಹುದು ನಮ್ಮ ಬಾರತ

ನವ ಯುವಕರ ಕಾರ‍್ಯಪಡೆಯ
ಹೊಂದಿರುವ ಬಾರತ
ವೈರಿ ಪಡೆಗೂ ಬೀತಿಯಿಹುದು
ವೀರ ಪುತ್ರರ ಬಾರತ
ಕಣಕಣದಲಿ ದೇಶಪ್ರೇಮ
ತುಂಬಿರುವ ಬಾರತ
ಜಗದಗಲ ಪಸರಿಸಿದೆ
ಪ್ರೀತಿಯ ನಮ್ಮ ಬಾರತ

ನಿರೀಕ್ಶೆ ಮೀರಿ ಬೆಳೆಯುತಿಹುದು
ಹೊಳಪು ನಮ್ಮ ಬಾರತ
ಸ್ವಾಬಿಮಾನದಲ್ಲಿ ಕಿಚ್ಚು
ಹಚ್ಚುತಿಹುದು ಬಾರತ
ಹಲವು ಬಾಶೆ, ಹಲವು ನುಡಿಯು
ದ್ಯೇಯ ಒಂದೇ ಬಾರತ
ಹಲವು ಜಾತಿ, ಹಲವು ದರ‍್ಮ
ಸಹಿಶ್ಣು ನಮ್ಮ ಬಾರತ

( ಚಿತ್ರಸೆಲೆ : pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: