ರವೀಂದ್ರನಾತ ಟ್ಯಾಗೋರರ ಕವನಗಳು ಓದು – 9 ನೆಯ ಕಂತು

– ಸಿ.ಪಿ.ನಾಗರಾಜ.

ಕನಸು ಕಾಣುವ ಧೀರರೆಲ್ಲ ಸೋಲುಂಡಾಗ
ಸೋಲುಗಳನೊಗೆಯುವರು ಹಿಂದೆ ಮಣ್ಣಿನಲಿ
ಅವು ಮೊಳೆತು ನೆಲದಲ್ಲಿ ಚಿಗುರೊಡೆದು ಬೆಳೆಯುವುವು
ಗೆಲುವಿನಾ ಗೆಲ್ಲುಗಳು ಬಾಗಿ ಫಲಗಳಲಿ.

ಮಾನವ ಸಮುದಾಯದ ಒಳಿತಿಗಾಗಿ ಹೋರಾಡುವ ವ್ಯಕ್ತಿಗಳ ಸೋಲು… ಸೋಲಲ್ಲ. ಅವರು ಜನಮನದಲ್ಲಿ ಬಿತ್ತಿದ ಸಾಮಾಜಿಕ ಅರಿವು ಮತ್ತು ಸಾಮಾಜಿಕ ಎಚ್ಚರದ ಒಳಮಿಡಿತಗಳು ಇಂದಲ್ಲ, ನಾಳೆ ಕ್ರಿಯೆಗಳಾಗಿ ರೂಪುಗೊಂಡು ಜನರಿಗೆ ಒಳ್ಳೆಯದನ್ನು ಮಾಡುತ್ತವೆ ಎಂಬ ಸಂಗತಿಯನ್ನು ಈ ಕವನದಲ್ಲಿ ರೂಪಕವೊಂದರ ಮೂಲಕ ಚಿತ್ರಿಸಲಾಗಿದೆ.

‘ಸಾಮಾಜಿಕ ಅರಿವು’ ಎಂದರೆ “ಲೋಕಜೀವನದಲ್ಲಿ ಯಾವುದು ಸರಿ/ಯಾವುದು ತಪ್ಪು; ಯಾವುದು ನೀತಿ/ಯಾವುದು ಅನೀತಿ; ಯಾವುದು ವಾಸ್ತವ/ಯಾವುದು ಕಲ್ಪಿತ” ಎಂಬುದನ್ನು ಒರೆಹಚ್ಚಿ ನೋಡಿ, ತನ್ನನ್ನು ಒಳಗೊಂಡಂತೆ ಜನಸಮುದಾಯಕ್ಕೆ ಒಳಿತನ್ನು ಮಾಡುವ ನುಡಿ ಮತ್ತು ದುಡಿಮೆಯ ಸ್ವರೂಪವನ್ನು ತಿಳಿಯುವುದು:

‘ಸಾಮಾಜಿಕ ಎಚ್ಚರ’ ಎಂದರೆ ಜಾತಿ, ಮತ , ದೇವರ ಹೆಸರಿನಲ್ಲಿ ನಡೆಯುತ್ತಿರುವ ಆಚರಣೆಗಳಿಂದ ಮಾನವರ ಬದುಕಿನಲ್ಲಿ ಉಂಟಾಗುತ್ತಿರುವ ಪರಿಣಾಮಗಳನ್ನು ಸರಿಯಾಗಿ ಗಮನಿಸಿ , ಯಾವ ಬಗೆಯ ಆಚರಣೆಗಳು ಮಾನವ ಸಮುದಾಯದ ಸಂಕಟಗಳಿಗೆ ಕಾರಣವಾಗಿವೆ ಎಂಬುದನ್ನು ಅರಿತುಕೊಂಡು, ಅಂತಹ ಆಚರಣೆಗಳಿಂದ ದೂರವಿರುವುದು.

ಕನಸು=ವ್ಯಕ್ತಿಯ ನಿದ್ರಿಸುವ ಸಮಯದಲ್ಲಿ ಕಾಣುವ ನೋಟಗಳು; ಧೀರರ್+ಎಲ್ಲ; ಧೀರ=ದಿಟ್ಟತನವುಳ್ಳವನು/ಎದೆಗಾರಿಕೆಯುಳ್ಳವನು/ಶೂರ/ವೀರ;

ಕನಸು ಕಾಣುವ ಧೀರರು=ಇದೊಂದು ನುಡಿಗಟ್ಟಾಗಿ ಬಳಕೆಗೊಂಡಿದೆ. ಮಾನವ ಸಮುದಾಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನಕ್ಕೆ ಅತ್ಯಗತ್ಯವಾದ ಅನ್ನ,ಬಟ್ಟೆ,ವಸತಿ,ವಿದ್ಯೆ,ಉದ್ಯೋಗ,ಆರೋಗ್ಯವನ್ನು ಪಡೆದು, ಎಲ್ಲರ ಜತೆಗೂಡಿ ಒಲವು ನಲಿವು ನೆಮ್ಮದಿಯಿಂದ ಬಾಳುವಂತಾಗಲು ಏನೇನು ಮಾಡಬೇಕು ಎಂಬ ಯೋಜನೆಗಳನ್ನು ತಮ್ಮ ಮನದಲ್ಲಿ ಕಲ್ಪಿಸಿಕೊಂಡು, ಅವನ್ನು ನಿಜಜೀವನದಲ್ಲಿ ಕಾರ್‍ಯರೂಪಕ್ಕೆ ತರುವಾಗ, ಯಾವುದೇ ಬಗೆಯ ಅಡೆತಡೆಗಳು ಎದುರಾದರೂ ಹಿಂಜರಿಯದೆ, ಅಂಜದೆ, ಮುನ್ನುಗ್ಗಿ ಹೋರಾಡುವ ವ್ಯಕ್ತಿಗಳು;

ಸೋಲು+ಉಂಡಾಗ; ಸೋಲು=ಅಪಜಯ; ಉಣ್=ಹೊಂದು/ಪಡೆ;

ಕನಸು ಕಾಣುವ ಧೀರರೆಲ್ಲ ಸೋಲುಂಡಾಗ=ಮಾನವ ಸಮುದಾಯದ ಒಳಿತಿಗಾಗಿ ಯೋಜನೆಗಳನ್ನು ಮನದಲ್ಲಿ ರೂಪಿಸಿಕೊಂಡು, ಅವನ್ನು ಕಾರ್‍ಯರೂಪಕ್ಕೆ ತರುವಾಗ ಸಾವು ನೋವಿಗೆ ಗುರಿಯಾಗುವ ವೀರರು;

ಸೋಲುಗಳನ್+ಒಗೆಯುವರು; ಒಗೆ=ಎಸೆ/ಬಿಸಾಡು/ಬಿತ್ತು; ಮಣ್ಣು=ಬೂಮಿ;

ಸೋಲುಗಳನೊಗೆಯುವರು ಹಿಂದೆ ಮಣ್ಣಿನಲಿ=ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡಿವೆ. ಮಾನವ ಸಮುದಾಯದ ಒಳಿತಿಗಾಗಿ ಹೋರಾಡಿ ಸಾವು ನೋವಿಗೆ ಗುರಿಯಾಗಿ ಕಣ್ಮರೆಯಾಗುವ ವೀರರು, ತಾವು ಅಳಿದರೂ ತಮ್ಮ ಯೋಜನೆಗಳ ವಿಚಾರಗಳನ್ನು ಜನಮನದಲ್ಲಿ ಬಿತ್ತುವರು; ಅಂದರೆ ಹೋರಾಟಗಾರರು ಸಾವನ್ನಪ್ಪಿದ್ದರೂ ಅವರ ಹೋರಾಟದ ಆಶಯಗಳು ಜನಮನದಲ್ಲಿ ಜೀವಂತವಾಗಿರುತ್ತವೆ;

ಅವು=ಮಾನವ ಸಮುದಾಯಕ್ಕೆ ಒಳಿತನ್ನು ಮಾಡುವ ವಿಚಾರಗಳು; ಮೊಳೆತು=ಬೀಜದ ಕುಡಿಯೊಡೆಯುವುದು; ನೆಲದಲ್ಲಿ=ಬೂಮಿಯಲ್ಲಿ; ಚಿಗುರು+ಒಡೆದು; ಚಿಗುರು=ಚಿಕ್ಕ ಎಲೆಗಳು; ಒಡೆ=ಬಿರಿ/ಮೂಡು; ಚಿಗುರೊಡೆದು=ಚಿಗುರೆಲೆಗಳು ಮೂಡಿ; ಗೆಲುವು=ಜಯ; ಗೆಲ್ಲು=ಕೊಂಬೆ/ರೆಂಬೆ; ಬಾಗಿ=ಬಗ್ಗಿ; ಫಲ=ಹೂ ಕಾಯಿ ಹಣ್ಣುಗಳಿಂದ ತುಂಬಿ ಕಂಗೊಳಿಸುವುದು;

ಅವು ಮೊಳೆತು ನೆಲದಲ್ಲಿ ಚಿಗುರೊಡೆದು ಬೆಳೆಯುವುವು… ಗೆಲುವಿನಾ ಗೆಲ್ಲುಗಳು ಬಾಗಿ ಫಲಗಳಲಿ=ಈ ನುಡಿಗಳು ರೂಪಕವಾಗಿ ಬಳಕೆಗೊಂಡಿವೆ. ಹದವಾದ ಮಣ್ಣಿನಲ್ಲಿ ನೆಟ್ಟ ಬೀಜ ಮೊಳಕೆಯೊಡೆದು, ಚಿಗುರಾಗಿ, ಗಿಡವಾಗಿ, ಮರವಾಗಿ ಬೆಳೆದು, ಹೂವು ಕಾಯಿ ಹಣ್ಣುಗಳ ಬಾರಕ್ಕೆ ಕೊಂಬೆರೆಂಬೆಗಳು ಬಾಗಿ ಬಳುಕಿ ಕಂಗೊಳಿಸುತ್ತ ಜನರ ಉಪಯೋಗಕ್ಕೆ ಬರುತ್ತವೆಯೋ ಅಂತೆಯೇ ಹೋರಾಟಗಾರರ ಮನದ ಚಿಂತನೆಗಳು ಮತ್ತು ಯೋಜನೆಗಳು ಜನಮನದಲ್ಲಿ ನೆಲೆಸಿ ಮುಂದಿನ ತಲೆಮಾರುಗಳ ಜನರಿಗೆ ಪ್ರಯೋಜನಕಾರಿಯಾಗಿ ಒಳಿತನ್ನು ಉಂಟುಮಾಡುತ್ತವೆ.

ಕಾಲಕ್ರಮೇಣ ದುಡಿಯುವ ವರ್‍ಗದ ಶ್ರಮಜೀವಿಗಳ ಮನದಲ್ಲಿ ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ಮೂಡಿಸಿ, ಜಾತಿ, ಮತ, ದೇವರುಗಳ ಹೆಸರಿನಲ್ಲಿ ಸಿರಿವಂತರು ಮತ್ತು ಆಡಳಿತಗಾರರು ಮಾಡುತ್ತಿರುವ ವಂಚನೆ, ಸುಲಿಗೆ ಮತ್ತು ಕ್ರೂರತನದ ಹಲ್ಲೆಯ ಎದುರು ಹೋರಾಡಿ ಜಯಗಳಿಸಿ, ಮಾನವ ಸಮುದಾಯಕ್ಕೆ ಒಲವು ನಲಿವು ನೆಮ್ಮದಿಯ ಬಾಳನ್ನು ತಂದುಕೊಡಬಲ್ಲ ಕಸುವನ್ನು ಜನಸಮುದಾಯಕ್ಕೆ ನೀಡುತ್ತವೆ.

ಈ ಕವನದಲ್ಲಿ ಹೇಳಿರುವ ಸಂಗತಿಗಳ ಹಿನ್ನೆಲೆಯಲ್ಲಿ ಬಸವಣ್ಣನವರ, ಜ್ಯೋತಿರಾವ ಪುಲೆ ಮತ್ತು ಸಾವಿತ್ರಿ ಬಾಯಿ ಪುಲೆ ದಂಪತಿಗಳ ಮತ್ತು ಅಂಬೇಡ್ಕರ್ ಅವರ ಜೀವನದ ಸೋಲುಗೆಲುವುಗಳನ್ನು ನಾವು ಒರೆಹಚ್ಚಿ ನೋಡಬಹುದು.

ಹನ್ನೆರಡನೆಯ ಶತಮಾನದ ಕನ್ನಡ ನಾಡಿನಲ್ಲಿ ಕೆಳಜಾತಿಯವರು ಎಂಬ ಒಂದು ಕಾರಣದಿಂದಲೇ ವಿದ್ಯೆ, ಆಡಳಿತ ಮತ್ತು ಸಂಪತ್ತಿನಿಂದ ವಂಚಿತರಾಗಿದ್ದ ಜನಸಮುದಾಯದ ಪರವಾಗಿ ಹೋರಾಡಿ, ನಾಡಿನ ಜನರೆಲ್ಲರನ್ನು ಮೇಲು ಕೀಳು ಎಂದು ತಾರತಮ್ಯ ಮಾಡದೆ, ಸಮಾನತೆಯ ನೆಲೆಗೆ ತರಲು ಹೋರಾಡಿದ ಬಸವಣ್ಣನವರು ಕಲ್ಯಾಣದಲ್ಲಿ ನಡೆದ ಕ್ರಾಂತಿಯ ಸಮಯದಲ್ಲಿ ನಡುಹರೆಯದಲ್ಲಿಯೇ ಸಾವನ್ನಪ್ಪಿದರು.

ಹತ್ತೊಂಬತ್ತನೆಯ ಶತಮಾನದಲ್ಲಿ ಮಹಾರಾಶ್ಟ್ರದಲ್ಲಿ ಕೆಳಜಾತಿಯವರಿಗೆ, ಕೆಳವರ್‍ಗದವರಿಗೆ ಮತ್ತು ಎಲ್ಲಾ ಜಾತಿ ಮತದ ಹೆಂಗಸರಿಗೆ ವಿದ್ಯೆಯನ್ನು ನೀಡಿ, ಅವರ ಬದುಕನ್ನು ಹಸನುಗೊಳಿಸಬೇಕೆಂದು ಹೋರಾಡಿದ ಜ್ಯೋತಿರಾವ ಪುಲೆ ಮತ್ತು ಸಾವಿತ್ರಿಬಾಯಿ ಪುಲೆ ದಂಪತಿಗಳು ತಮ್ಮ ಆಸ್ತಿ ಮತ್ತು ಆದಾಯವೆಲ್ಲವನ್ನೂ ಜನಹಿತಕ್ಕಾಗಿ ಬಳಸಿ, ತಾವು ಬಡತನದ ಬೇಗೆಯಲ್ಲಿಯೇ ಬೆಂದು ನೊಂದರು.

ಇಪ್ಪತ್ತನೆಯ ಶತಮಾನದಲ್ಲಿ ಕೋಟಿಗಟ್ಟಲೆ ದಲಿತರ ಮತ್ತು ಶೂದ್ರರ ಹಸಿವು, ಬಡತನ ಮತ್ತು ಅಪಮಾನದ ಬದುಕನ್ನು ತೊಲಗಿಸಲು ಇಂಡಿಯಾ ದೇಶದ ಉದ್ದಗಲದಲ್ಲಿ ಹೋರಾಡಿದ ಅಂಬೇಡ್ಕರ್ ಅವರು ತಮ್ಮ ಬದುಕನ್ನೇ ಜನಸಮುದಾಯದ ಒಳಿತಿಗಾಗಿ ಮುಡಿಪಾಗಿಟ್ಟಿದ್ದರು.

ಮೇಲು ಕೀಳಿನ ಜಾತಿ ಪದ್ದತಿ ಮತ್ತು ಬಡವ ಬಲ್ಲಿದ ಎಂಬ ವರ್‍ಗ ತಾರತಮ್ಯದ ಸಮಾಜದಲ್ಲಿ ಇವರೆಲ್ಲರೂ ತಮ್ಮ ಜೀವಿತ ಕಾಲದಲ್ಲಿ ಅತಿ ಹೆಚ್ಚಿನ ನೋವು, ಅಪಮಾನ ಮತ್ತು ಸಂಕಟಕ್ಕೆ ಒಳಗಾಗಿದ್ದರು. ಇಂದು ಈ ಹೋರಾಟಗಾರರು ಕಣ್ಮರೆಯಾಗಿದ್ದರೂ, ಅಂದು ಇವರು ಆಡಿದ ನುಡಿಗಳು ಮತ್ತು ಮಾಡಿದ ಕಾರ್‍ಯಗಳು ನೂರಾರು ವರುಶಗಳು ಉರುಳಿದರೂ ಕೆಳವರ್‍ಗದ ಮತ್ತು ಕೆಳಜಾತಿಯ ಕೋಟಿಗಟ್ಟಲೆ ಜನರ ಮನದಲ್ಲಿ ನೆಲೆಗೊಂಡು, ಇಂದಿಗೂ ಎಂದೆಂದಿಗೂ ಜನರು ತಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಪ್ರೇರಣೆಯನ್ನು ನೀಡುತ್ತಲೇ ಇರುತ್ತವೆ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *