ಪೀಡೆನಾಶಕಗಳ ಜಗತ್ತು – 2 ನೇ ಕಂತು

–  ರಾಜಬಕ್ಶಿ ನದಾಪ.

 

ಹಿಂದಿನ ಕಂತಿನಲ್ಲಿ ಪೀಡೆನಾಶಕಗಳ ಪ್ರತಿರೋದಕತೆಯ ಬಗ್ಗೆ ತಿಳಿದುಕೊಂಡೆವು, ಈಗ ಪೀಡೆನಾಶಕಗಳ ವಿಂಗಡನೆ ಬಗ್ಗೆ ತಿಳಿಯೋಣ

ಪೀಡೆನಾಶಕಗಳ ವಿಂಗಡಣೆ

ಸಾಮಾನ್ಯವಾಗಿ ಪೀಡೆನಾಶಕಳನ್ನು ಅವುಗಳ ರಾಸಾಯನಿಕ ಸಂಯೋಜನೆ, ಪೀಡೆಗಳ ದೇಹದಲ್ಲಿ ಒಳಹೋಗುವ ಪ್ರಕ್ರಿಯೆ, ಪೀಡೆಗಳ ದೇಹದಲ್ಲಿ ಕಾರ‍್ಯನಿರ‍್ವಹಿಸುವ ವಿದಾನ, ಅವುಗಳ ವಿಶಕಾರಿ ಪ್ರಮಾಣ, ಬಳಸುವ ಹಂತ ಹೀಗೆ ಹಲವಾರು ಅಂಶಗಳ ಆದಾರದ ಮೇಲೆ ವಿಂಗಡಿಸಲಾಗುತ್ತದೆ. ಕೆಲವೊಂದು ಸಂಶೊದನಾ ಸಂಸ್ತೆಗಳು, ಈ ರಾಸಾಯನಿಕಗಳು ಪೀಡೆಗಳ ದೇಹದಲ್ಲಿ ಕಾರ‍್ಯನಿರ‍್ವಹಿಸುವ ಅಂಶವನ್ನೇ ಮುಕ್ಯವಾಗಿ ಪರಿಗಣಿಸಿ ಅವುಗಳ ಆದಾರದ ಮೇಲೆಯೇ ವ್ಯವಸ್ತಿತವಾಗಿ ವಿಬಾಗಿಸುತ್ತವೆ. ಈ ರಾಸಾಯನಿಕಗಳ ಜಗತ್ತು ತುಂಬಾ ಸಂಕೀರ‍್ಣವಾದುದುರಿಂದ ತಿಳಿಯಲು ಸ್ವಲ್ಪ ಕಶ್ಟವೆನಿಸಿದರೂ ಕೆಲವು ಉದಾಹರಣೆಗಳ ಮೂಲಕ ವಿವರಿಸಿದರೆ ತಿಳಿಯಲು ಸುಲಬವಾಗಬಹುದು.

ನಮ್ಮ ರೈತರು ರಸಹೀರುವ ಕೀಟಗಳ ನಿಯಂತ್ರಣಕ್ಕಾಗಿ ಬಳಸುವ ‘ಬಾಯರ್’ ಕಂಪನಿಯ ‘ಕಾನ್ಪಿಡಾರ್’ ಎಂಬ ಕೀಟನಾಶಕ ‘ಇಮಿಡಾಕ್ಲೋಪ್ರಿಡ್’ ಎಂಬ ಸಕ್ರಿಯ ಗಟಕವನ್ನು ಹೊಂದಿರುತ್ತದೆ. ಈ ‘ಇಮಿಡಾಕ್ಲೋಪ್ರಿಡ್’ ಕೀಟದ ನರಮಂಡಲದ ಮೇಲೆ ಪರಿಣಾಮ ಬೀರುವ ಕೀಟನಾಶಕವಾಗಿದ್ದು ‘ನಿಕೋಟಿನಿಕ್ ಅಸಿಟೈಲ್‍ಕ್ಹೋಲಿನ್ ರೆಸೆಪ್ಟಾರ್ ನ ಸ್ಪರ‍್ದಾತ್ಮಕ ನಿಯಂತ್ರಕಗಳು’ ಎಂಬ 4ನೇ ಪ್ರವರ‍್ಗದ 1ನೇ ಗುಂಪಾದ ‘ನೀಯೊನಿಕೋಟಿನಾಯ್ಡ್ಸ್’ ಗುಂಪಿಗೆ ಸೇರುತ್ತದೆ. ಕಾಯಿಕೊರಕ ಮತ್ತು ಎಲೆತಿನ್ನುವ ಕೀಟಗಳ ನಿಯಂತ್ರಣಕ್ಕಾಗಿ ಬಳಸುವ ‘ಎಪ್.ಎಮ್.ಸಿ’ ಕಂಪನಿಯ ‘ಕೊರಾಜೆನ್’ ಎಂಬ ಕೀಟನಾಶಕ ‘ಕ್ಲೋರಾಂತ್ರಾನಿಲಿಪ್ರೋಲ್’ ಎಂಬ ಸಕ್ರಿಯ ಗಟಕವನ್ನು ಹೊಂದಿದ್ದು ‘ರ‍್ಯೇನೋಡಿನ್ ರೆಸೆಪ್ಟಾರ್ ನ ನಿಯಂತ್ರಕಗಳು’ ಎಂಬ 28ನೇ ಪ್ರವರ‍್ಗದ ಏಕೈಕ ಗುಂಪಾದ ‘ಡೈಅಮೈಡ್ಸ್’ ಗೆ ಸೇರುತ್ತದೆ. ತಿಳಿಯಲು ಕ್ಲಿಶ್ಟವೆನಿಸುವ ಈ ವಿಂಗಡಣೆಗಳು, ಒಂದು ಕೀಟನಾಶಕ ಹೇಗೆ ಕೀಟವನ್ನು ಕೊಲ್ಲುತ್ತದೆ ಎಂದು ತಿಳಿಯಲು ತುಂಬಾ ಉಪಯುಕ್ತ ಹಾಗೂ ಅನಿವಾರ‍್ಯ.

 

 

 

 

 

 

.

 

 

 

ಕೀಟನಾಶಕಗಳ ಲೋಕದಲ್ಲಿ

ಕೀಟನಾಶಕಗಳ ಬಗ್ಗೆ ಹೇಳುವುದಾದರೆ ಇವುಗಳನ್ನೂ ಕೂಡ ಮೇಲೆ ಹೇಳಿದಂತೆ ಸುಮಾರು ವಿದಗಳಲ್ಲಿ ವಿಂಗಡಿಸಬಹುದು. ಸದ್ಯ ಪ್ರಚಲಿತದಲ್ಲಿರುವ ವಿಂಗಡಣೆಯೆಂದರೆ, ಕೀಟಗಳ ಪ್ರತಿರೋದಕತೆಯನ್ನು ಅದ್ಯಯನ ಮಾಡುವ ಸಂಸ್ತೆಯಾದ ಐ.ಆರ್.ಏ.ಸಿ (ಇನ್ಸೆಕ್ಟಿಸೈಡ್ ರೆಸಿಸ್ಟನ್ಸ್ ಆ್ಯಕ್ಶನ್ ‍ಕಮಿಟಿ) ಯ ವಿಂಗಡಣೆ. ಐ.ಆರ್.ಏ.ಸಿ ಒಟ್ಟು 325 ಕೀಟನಾಶಕಗಳನ್ನು ಈ ಕೆಳಗಿನಂತೆ ಅವುಗಳು ಕೀಟದ ದೇಹಬಾಗಗಳ ಮೇಲೆ ನಿರ‍್ವಹಿಸುವ ಕಾರ‍್ಯವಿದಾನದ ಆದಾರದ ಮೇಲೆ ವಿಶಾಲವಾಗಿ 5 ವರ‍್ಗಗಳಾಗಿ ವಿಂಗಡಿಸುತ್ತದೆ. ಅವುಗಳೆಂದರೆ,

  1. ನರಮಂಡಲ ಹಾಗೂ ಮಾಂಸಕಂಡ
  2. ಬೆಳವಣಿಗೆ
  3. ಉಸಿರಾಟ
  4. ಉದರ
  5. ಗುರುತಿಸಲಾಗದ ಅತವಾ ಬಹುಅಂಗಗಳ ಮೇಲೆ ಪರಿಣಮಿಸುವ.

ಈ 5 ವರ‍್ಗಗಳನ್ನು ಸುಮಾರು 41 ಪ್ರವರ‍್ಗಗಳಾಗಿ ಹಾಗೂ ಆ 41 ಪ್ರವರ‍್ಗಗಳನ್ನು 72 ಗುಂಪುಗಳಾಗಿ ವಿಂಗಡಿಸಿದೆ. ಮುಂದಿನ ಕಂತಿನಲ್ಲಿ ಈ ಮೇಲಿನ 5 ವರ್‍ಗಗಳ ಬಗ್ಗೆ ಸಂಕ್ಶಿಪ್ತವಾಗಿ ತಿಳಿಯೋಣ.

(ಚಿತ್ರ ಹಾಗೂ ಮಾಹಿತಿ ಸೆಲೆ: pixabay.com, irac-online, amazon.in, amazon.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks