ಗೋರನ್ ಇವಾನಿಸೆವಿಚ್: ಟೆನ್ನಿಸ್ ಜಗತ್ತಿನ ಅಚ್ಚರಿಯ ಆಟಗಾರ!

– ರಾಮಚಂದ್ರ ಮಹಾರುದ್ರಪ್ಪ.

ಟೆನ್ನಿಸ್ ಆಟದಲ್ಲಿ ಒಬ್ಬ ಆಟಗಾರರ ಗ್ರಾಂಡ್‌ಸ್ಲ್ಯಾಮ್ ಹಾದಿ ಆತನ/ಆಕೆಯ ATP/WTA ರಾಂಕಿಂಗ್ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ಟೆನ್ನಿಸ್ ಒಲವಿಗರಿಗೆ ತಿಳಿದಿರುವ ಸಂಗತಿ. ಹಾಗಾಗಿ ಗ್ರಾಂಡ್‌ಸ್ಲ್ಯಾಮ್ ಗೆಲ್ಲುವ ಹೆಬ್ಬಯಕೆ ಇರುವ ಆಟಗಾರರು ಕನಿಶ್ಟ ಮೂರನೇ ಸುತ್ತಿನವರೆಗಾದರೂ ತಮ್ಮ ಹಾದಿ ಸುಗಮವಾಗಿಸಿಕೊಳ್ಳಲು ವರ‍್ಶವಿಡೀ ನಡೆಯುವ ಹಲವಾರು ATP/WTA ಪಂದ್ಯಾವಳಿಗಳಲ್ಲಿ ಸೆಣಸಿ, ಪಾಯಿಂಟ್ ಗಳನ್ನು ಸಂಪಾದಿಸಿ, ತಮ್ಮ ರ್‍ಯಾಂಕಿಂಗ್ ಅನ್ನು ಸುದಾರಿಸಿಕೊಳ್ಳಲು ಶ್ರಮಿಸುತ್ತಾರೆ. ಹಾಗೆ ಮಾಡದಿದ್ದಲ್ಲಿ ಆರಂಬದ ಸುತ್ತುಗಳಲ್ಲೇ ಗಟಾನುಗಟಿ ಆಟಗಾರರ ಎದುರು ಕಾದಾಡಬೇಕಾದ ಪ್ರಮೇಯ ಎದುರಾಗುತ್ತದೆ. ಹೀಗೆ 2001 ರಲ್ಲಿ ATPಯ 125 ನೇ ರ್‍ಯಾಂಕ್ ಗೆ ಕುಸಿಯಲ್ಪಟ್ಟಿದ್ದ ಆಟಗಾರನೊಬ್ಬ ವೈಲ್ಡ್ ಕಾರ‍್ಡ್ ಮೂಲಕ ಗ್ರಾಂಡ್‌ಸ್ಲ್ಯಾಮ್ ಗೆ ಪ್ರವೇಶ ಪಡೆದು, ಕಟಿಣ ಹಾದಿಯಲ್ಲಿ ಸಾಗಿ, ಆ ವರ‍್ಶ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರೆಂದು ಹಣೆಪಟ್ಟಿ ಹೊತ್ತಿದ್ದ ಮೂರ‍್ನಾಲ್ಕು ಆಟಗಾರರನ್ನು ಸೋಲಿಸಿ ವಿಂಬಲ್ಡನ್ ಗೆದ್ದಿದ್ದು ಟೆನ್ನಿಸ್ ನ ಬಹುದೊಡ್ಡ ಅಚ್ಚರಿಗಳಲ್ಲೊಂದು. ಈ ಪವಾಡದಂತಹ ಗೆಲುವನ್ನು ದಾಕಲಿಸಿ, ಟೆನ್ನಿಸ್ ಇತಿಹಾಸದಲ್ಲಿ ವೈಲ್ಡ್ ಕಾರ‍್ಡ್ ನಿಂದ ಅರ‍್ಹತೆ ಪಡೆದು ವಿಂಬಲ್ಡನ್ ಗೆದ್ದ ಮೊದಲ ಹಾಗೂ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಗಳಿಸಿದವರು ಕ್ರೊಯೇಶಿಯಾದ ‘ಗೋರನ್ ಇವಾನಿಸೆವಿಚ್’.

ಬಿರುಸಿನ ಕರಾರುವಾಕ್ ಸರ‍್ವ್ ಗಳೊಂದಿಗೆ ಆಕ್ರಮಣಕಾರಿ ಎಡಗೈ ವಾಲಿ ಆಟಗಾರರಾಗಿದ್ದ ಇವಾನಿಸೆವಿಚ್ ರಿಗೆ ಹುಲ್ಲು ಹಾಸಿನ ಕೋರ‍್ಟ್ ಗಳು ನೆಚ್ಚಿನವಾಗಿದ್ದವು. ಹಾಗೇ ಈ ವೇಗದ ಮೇಲ್ಮೈ ಅಂಗಳ ಅವರ ಬಗೆಯ ಆಟಕ್ಕೆ ಸೂಕ್ತವೆಂಬಂತೆ ಹೇಳಿ ಮಾಡಿಸಿದಂತ್ತಿದ್ದವು. ಆ ವೇಳೆಗಾಗಲೇ 90ರ ದಶಕದಲ್ಲಿ ಮೂರು ಬಾರಿ ವಿಂಬಲ್ಡನ್ ಪೈನಲ್ ವರೆಗೂ ತಲುಪಿದ್ದರೂ ಎರಡು ಬಾರಿ ಪೀಟ್ ಸಾಂಪ್ರಾಸ್ ಹಾಗೂ ಒಮ್ಮೆ ಆಂಡ್ರೇ ಅಗಾಸ್ಸಿ ಎದುರು ಅವರು ಸೋಲುಂಡಿದ್ದರು. ಸರ‍್ವ್ ಹಿಂದಿರುಗಿಸುವಲ್ಲಿ ಇವಾನಿಸೆವಿಚ್ ಹೊಂದಿದ್ದ ದೊಡ್ಡಮಟ್ಟದ ಕುಂದು ದಿಗ್ಗಜ ಆಟಗಾರರ ಎದುರು ಗ್ರಾಂಡ್‌ಸ್ಲ್ಯಾಮ್ ನ ಪ್ರಮುಕ ಗಟ್ಟಗಳಲ್ಲಿ ಅವರನ್ನು ಸೋಲಿನ ಸುಳಿಗೆ ಸಿಲುಕಿಸುತ್ತಿತ್ತು. ಹೀಗಿದ್ದರೂ ಹಲವಾರು ATP ಪಂದ್ಯಾವಳಿಗಳನ್ನು ಗೆದ್ದು 1994 ರಲ್ಲಿ ಒಮ್ಮೆ ಎರಡನೇ ರ್‍ಯಾಂಕ್ ವರೆಗೂ ಏರಿದ್ದರು ಕ್ರೊಯೇಶಿಯಾದ ಈ ವಿಶಿಶ್ಟ ಪ್ರತಿಬೆ. ಶ್ರೇಶ್ಟ ಮಟ್ಟದ ಸರ‍್ವ್ ಮೊದಲೇ ಹೊಂದಿದ್ದ ಅವರು ತಮ್ಮ ಹಿಂದಿರುಗಿಸುವ ಹೊಡೆತಗಳಲ್ಲಿ ಹತೋಟಿ ಸಾದಿಸಿದ ದಿನ ಇವಾನಿಸೆವಿಚ್ ರನ್ನು ಮಣಿಸುವುದು ಅಸಾದ್ಯವೆಂದೇ ಒಮ್ಮೊಮ್ಮೆ ತೋರುತ್ತಿತ್ತು. ಅಂತಹ ದಿನದಂದು ಅವರು ಎಂತಹ ದಿಗ್ಗಜ ಆಟಗಾರನನ್ನಾದರೂ ಸೋಲಿಸುತ್ತಿದ್ದರು ಎಂಬುದಕ್ಕೆ ಆ ಹೊತ್ತಿನ ಅಗ್ರ-ಶ್ರೇಯಾಂಕಿತ ಆಟಗಾರರ ಎದುರು ಗೋರನ್ ಸಾದಿಸಿರುವ ಕೆಲವು ಗೆಲುವುಗಳೇ ಸಾಕ್ಶಿ. ಹಾಗಾಗಿ ಸಹಜವಾಗಿಯೇ ಯಾರೂ ಅವರನ್ನು ಹಗುರವಾಗಿ ಪರಿಗಣಿಸುತ್ತಿರಲಿಲ್ಲ. 90ರ ದಶಕದ ಇವಾನಿಸೆವಿಚ್ ರ ಉತ್ತುಂಗದ ದಿನಗಳಲ್ಲಿ ಗ್ರಾಂಡ್‌ಸ್ಲ್ಯಾಮ್ ಗಳಲ್ಲಿ ಗೆಲ್ಲುವ ‘dark-horse’ ಎಂದೇ ಅವರನ್ನು ಟೆನ್ನಿಸ್ ಪಂಡಿತರು ಗುರುತಿಸುತ್ತಿದ್ದರು.

2001 ರ ವಿಂಬಲ್ಡನ್ – ಟೆನ್ನಿಸ್ ಜಗತ್ತನ್ನು ಬೆಕ್ಕಸ ಬೆರಗಾಗಿಸಿದ ಇವಾನಿಸೆವಿಚ್ ರ ಸಾದನೆ

ವಿಂಬಲ್ಡನ್ ಗೂ ಮುನ್ನ ಆ ಸಾಲಿನ ಕೆಲವು ಪಂದ್ಯಾವಳಿಗಳಲ್ಲಿ ನೀರಸ ಪ್ರದರ‍್ಶನ ತೋರಿ ಹೊರನಡೆದಿದ್ದ ಇವಾನಿಸೆವಿಚ್ ರಿಂದ ಅವರ ಆಪ್ತ ವರ‍್ಗವೂ ಸಹ ಅವರಿಂದ ಹೆಚ್ಚೇನೂ ಎದುರು ನೋಡಿರಲಿಲ್ಲ. ಆದರೆ ಎರಡು ವಾರಗಳಲ್ಲಿ ಈ ಅಳವುಳ್ಳ ಎಡಗೈ ಆಟಗಾರ ತಮ್ಮ ಮಾನಸಿಕ ಹಾಗೂ ದೈಹಿಕ ಗಟ್ಟಿತನವನ್ನು ಪ್ರದರ‍್ಶಿಸಿ ಟೆನ್ನಿಸ್ ಇತಿಹಾಸದ ಅತೀ ರೋಚಕ ಕತೆಗೆ ನಾಯಕರಾದರು. ಮೊದಲ ಸುತ್ತಿನಲ್ಲಿ ಎದುರಾದ ಸ್ವೀಡನ್ ನ ಪ್ರೆಡ್ರಿಕ್ ಜಾನ್ಸನ್ ರನ್ನು 6-4, 6-4, 6-4 ನೇರ ಸೆಟ್ ಗಳಿಂದ ಸೋಲಿಸಿದ ಇವಾನಿಸೆವಿಚ್ ಎರಡನೇ ಸುತ್ತಿಗೆ ಬಡ್ತಿ ಪಡೆದಾಗ ಇವರ ಹೋರಾಟ ಇಲ್ಲೇ ಕೊನೆಗೊಳ್ಳಲಿದೆ ಎಂದೇ ಟೆನ್ನಿಸ್ ವಲಯ ತಿಳಿದಿತ್ತು. ಏಕೆಂದರೆ ಅಲ್ಲಿ ಅವರಿಗೆ ಸವಾಲೊಡ್ಡಲು ಅಣಿಯಾಗಿದ್ದು ಮಾಜಿ ಪ್ರೆಂಚ್ ಓಪನ್ ವಿಜೇತ ಸ್ಪೇನ್ ನ ಕಾರ‍್ಲೋಸ್ ಮೋಯ. ಟೆನ್ನಿಸ್ ತಿಳಿದವರು ನೆನೆದಂತೆಯೇ ಮೊದಲ ಸೆಟ್ ಅನ್ನು ಟೈ-ಬ್ರೇಕರ್ ನಲ್ಲಿ ಸೋತು ಹಿನ್ನಡೆ ಅನುಬವಿಸಿದ ಇವಾನಿಸೆವಿಚ್ ರ ಅದ್ರುಶ್ಟ ಇಲ್ಲಿಗೆ ಕೊನೆಗೊಳ್ಳವಂತೆ ಕಾಣುತ್ತಿದ್ದಾಗ ಪೀನಿಕ್ಸ್ ನಂತೆ ಪುಟಿದೆದ್ದ ಅವರು ಅಲ್ಲಿಂದ ಎಡಬಿಡದೆ ಮೂರು ಸೆಟ್ ಗಳನ್ನು 6-3, 6-4, 6-4 ರಿಂದ ಗೆದ್ದು ಮೂರನೇ ಸುತ್ತಿಗೆ ಜಿಗಿದರು. ಮೋಯ ತಮ್ಮ ಎದುರಾಳಿಯ ಆಟವನ್ನು ಕಂಡು ಬೆರಗಾಗುವುದರ ಜೊತೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿ ಹೊರನಡೆದರು. ಬಳಿಕ ಮೂರನೇ ಸುತ್ತಿನಲ್ಲಿ ಎದುರಾದ ಅಮೇರಿಕಾದ ಯುವ ಪ್ರತಿಬೆ ಆಂಡಿ ರಾಡಿಕ್ ರನ್ನು 7-6, 7-5, 3-6, 6-3 ರಿಂದ ಮಣಿಸಿ ಮುಂದೆ ಸಾಗಿದ ಇವಾನಿಸೆವಿಚ್ ರ ಹೆಸರು ಕೊಂಚ ಮಟ್ಟಿಗೆ ಸದ್ದು ಮಾಡಲಾರಂಬಿಸಿತು. ಆ ನಂತರ ನಾಲ್ಕನೇ ಸುತ್ತಿನಲ್ಲಿ ನಿರಾಯಾಸವಾಗಿ ಬ್ರಿಟನ್ ನ ಗ್ರೆಗ್ ರುಸೆಡ್ಸ್ಕಿರಿಗೆ 7-6, 6-4, 6-4 ರಿಂದ ಸೋಲುಣಿಸಿ ಇವಾನಿಸೆವಿಚ್ ವಿಂಬಲ್ಡನ್ ನ ಎರಡನೇ ವಾರದ ನಾಕೌಟ್ ಪಂದ್ಯಗಳಿಗೆ ದಾಪುಗಾಲಿಟ್ಟರು.

ಆ ವರ‍್ಶದ ನಾಲ್ಕನೇ ಸುತ್ತಿನ ಪಂದ್ಯಗಳ ಬಳಿಕ ವಿಂಬಲ್ಡನ್ ನಲ್ಲಿ ನೀರಸ ಮೌನ ಮನೆಮಾಡಿತ್ತು. ಅದಕ್ಕೆ ಕಾರಣ ಜನರ ಅಚ್ಚುಮೆಚ್ಚಿನ ಆಟಗಾರ ಹಾಗೂ ಹಿಂದಿನ ವರ‍್ಶದ ವಿಂಬಲ್ಡನ್ ವಿಜೇತ ದಿಗ್ಗಜ ಪೀಟ್ ಸಾಂಪ್ರಸ್ ಸ್ವಿಟ್ಜರ್‍ಲೆಂಡಿನ ಬರವಸೆಯ ಯುವ ಆಟಗಾರ ರೋಜರ್ ಪೆಡೆರರ್ ಎದುರು ಸೋಲುಂಡಿದ್ದಾಗಿತ್ತು. ಆ ವೇಳೆ ಈ ಸಾಲಿನ ವಿಂಬಲ್ಡನ್ ನಲ್ಲಿ ಇನ್ನೇನೇನು ಅಚ್ಚರಿಗಳು ನೋಡಸಿಗಲಿದೆಯೋ ಎಂದು ಪತ್ರಿಕೆಗಳು ಹೌಹಾರಿ ವರದಿ ಮಾಡಿದವು. ವಿಂಬಲ್ಡನ್ ನ ಎರಡನೇ ವಾರದ ಕ್ವಾರ‍್ಟರ್ ಪೈನಲ್ ನಲ್ಲಿ 4ನೇ ರ್‍ಯಾಂಕ್ ನ ರಶಿಯಾದ ದೈತ್ಯ ಪ್ರತಿಬೆ ಮರಾಟ್ ಸಪಿನ್ ಗೆಲುವಿನ ನಾಗಾಲೋಟದಲ್ಲಿದ್ದ ಇವಾನಿಸೆವಿಚ್ ರಿಗೆ ಸವಾಲೊಡ್ಡಿದರು. ಆದರೆ ಕೊಂಚವೂ ಒತ್ತಡಕ್ಕೊಳಗಾಗದ ಅವರು 7-6, 7-5, 3-6, 7-6 ರಿಂದ ಸಪಿನ್ ರನ್ನು ಸೋಲಿಸಿ ಅದೇ ವೇಗದಲ್ಲಿ ತಮ್ಮ ಮಿಂಚಿನ ಓಟವನ್ನು ಸೆಮಿಪೈನಲ್ ನ ಹೊಸ್ತಿಲವರೆಗೂ ಮುಂದುವರೆಸಿದರು. ಆಗ ಇವಾನಿಸೆವಿಚ್ ರಿಗೆ ಎದುರಾದವರು 6ನೇ ಶ್ರೇಯಾಂಕಿತ ಬ್ರಿಟನ್ ನ ಟಿಮ್ ಹೆನ್ಮಾನ್. ಮಳೆಯ ಕಾರಣ ಮೂರು ದಿನಗಳ ಕಾಲ ನಡೆದ ಈ ಪಂದ್ಯ ಹಲವಾರು ಏರಿತಗಳನ್ನು ಕಂಡಿತು. ಮೊದಲ ಸೆಟ್ ಅನ್ನು 7-5 ರಿಂದ ಗೆದ್ದು ಅದರ ಬೆನ್ನಲೇ 6-7, 0-6 ರಿಂದ ಸತತ ಎರಡು ಸೆಟ್ ಗಳನ್ನು ಸೋತು ಕುಸಿದಿದ್ದ ಇವಾನಿಸೆವಿಚ್ ಮತ್ತೊಮ್ಮೆ ಪವಾಡ ಮಾಡಲು ವೇದಿಕೆ ಸಜ್ಜಾಗಿತ್ತು. ಅಂತೆಯೇ ನಾಲ್ಕನೇ ಸೆಟ್ ಅನ್ನು ಟೈ ಬ್ರೇಕರ್ ನಲ್ಲಿ 7-6 ರಿಂದ ಗೆದ್ದು ಕೊನೆಯ ಸೆಟ್ ಗೆ ಪಂದ್ಯ ಮುನ್ನಡೆದಾಗ ಕ್ರೊಯೇಶಿಯಾದ ಮಾಂತ್ರಿಕ ತಮ್ಮ ತನ್ನಂಬಿಕೆಯನ್ನು ಮರಳಿ ಪಡೆದಿದ್ದರು. ಐದನೇ ಸೆಟ್ ಅನ್ನು 6-3 ರಿಂದ ಗೆದ್ದು ತವರಿನ ಆಟಗಾರ ಹೆನ್ಮಾನ್ ಒಟ್ಟಿಗೆ ನೆರೆದಿದ್ದ ನೋಡುಗರಿಗೂ ನೋವುಣಿಸಿ ಅವರು ತಮ್ಮ ವ್ರುತ್ತಿ ಬದುಕಿನ ನಾಲ್ಕನೇ ವಿಂಬಲ್ಡನ್ ಪೈನಲ್ ಗೆ ಲಗ್ಗೆ ಇಟ್ಟಾಗ ಅಕ್ಶರಶಹ ಎಲ್ಲೆಡೆ ಇವಾನಿಸೆವಿಚ್ ರೇ ಮುಕ್ಯ ಸುದ್ದಿಯಾದರು. ಸಹಸ್ರಾರು ಟೆನ್ನಿಸ್ ಅಬಿಮಾನಿಗಳು ತಮ್ಮ ಕಣ್ಣೆದುರು ನಡೆದುದ್ದನ್ನು ನಂಬಲಾರದಂತಾದರು.

ಪೈನಲ್ ಎದುರಾಳಿ ಪ್ಯಾಟ್ರಿಕ್ ರಾಪ್ಟರ್

2001 ರ ಜುಲೈ ನ ಎರಡನೇ ವಾರದಲ್ಲಿ ನಡೆದ ಈ ವಿಂಬಲ್ಡನ್ ಪೈನಲ್ ನಲ್ಲಿ ಇವಾನಿಸೆವಿಚ್ ರ ಕನಸಿನ ಓಟಕ್ಕೆ ಕಡಿವಾಣ ಹಾಕಲು ಕಡೆಯದಾಗಿ 3ನೇ ಶ್ರೇಯಾಂಕಿತ ಹಾಗೂ ಎರಡು ಬಾರಿ ಯು.ಎಸ್ ಓಪನ್ ಗೆದ್ದ ಆಸ್ಟ್ರೇಲಿಯಾದ ಪ್ಯಾಟ್ರಿಕ್ ರಾಪ್ಟರ್ ಕಣಕ್ಕಿಳಿದರು. ಮೊದಲ ಸೆಟ್ ಅನ್ನು 6-3 ರಿಂದ ಇವಾನಿಸೆವಿಚ್ ಗೆದ್ದರೆ ಎರಡನೇ ಸೆಟ್ ಅನ್ನು ರಾಪ್ಟರ್ ಕೂಡ 6-3 ರಿಂದಲೇ ಗೆದ್ದು ಸಮಬಲ ಸಾದಿಸುತ್ತಾರೆ. ನಂತರ ಇವಾನಿಸೆವಿಚ್ ಮೂರನೇ ಸೆಟ್ ಅನ್ನು ಮತ್ತೊಮ್ಮೆ 6-3 ರಿಂದ ಗೆದ್ದರೆ, ರಾಪ್ಟರ್ ನಾಲ್ಕನೇ ಸೆಟ್ ಅನ್ನು 6-2 ರಿಂದ ಗೆದ್ದು ಪಂದ್ಯವನ್ನು ಐದನೇ ಸೆಟ್ ಗೆ ಕೊಂಡೊಯ್ಯುತ್ತಾರೆ. ಪೈಪೋಟಿಯಿಂದ ಕೂಡಿದ ಪೈನಲ್ ಅನ್ನು ನಿರೀಕ್ಶಿಸುತ್ತಿದ್ದ ಮಂದಿಗೆ ಅಲ್ಲಿವರೆಗೂ ನಡೆದ ಈ ಏಕಮುಕಿ ಸಪ್ಪೆಯಾಟ ಬೇಸರ ಉಂಟುಮಾಡಿತ್ತಾದರೂ ಇತಿಹಾಸದ ಪುಟ ಸೇರಿದ ಕಡೇ ಸೆಟ್ ನ ರೋಚಕ ಆಟ ಎಲ್ಲರ ಬೇಸರ ದೂರ ಮಾಡಿ ನಲಿವು ತಂದಿತು ಎಂದು ನಿಸ್ಸಂದೇಹವಾಗಿ ಹೇಳಬಹುದು. ವಿಂಬಲ್ಡನ್ ಉದ್ದಕ್ಕೂ ಹಿನ್ನಡೆಯಲ್ಲಿದ್ದಾಗಲೆಲ್ಲಾ ಎದುರಾಳಿ ಮುಟ್ಟಲಾಗದಂತೆ ನಿಕರತೆಯಿಂದ ಬಿರುಸಿನ ‘ಏಸ್’ ಗಳನ್ನು ಬೆಂಕಿ ಚೆಂಡಿನಂತೆ ತಮ್ಮ ರಾಕೆಟ್ ನಿಂದ ಹರಿದು ಬಿಡುತ್ತಿದ್ದ ಇವಾನಿಸೆವಿಚ್ ರ ಅದ್ರುಶ್ಟ ಕಡೆಗೂ ಕೈಗೂಡಿ 9-7 ರಿಂದ ಕೊನೆ ಸೆಟ್ ಗೆದ್ದು ತಮ್ಮ ಚೊಚ್ಚಲ ಗ್ರಾಂಡ್‌ಸ್ಲ್ಯಾಮ್ ಅನ್ನು ಮುಡಿಗೇರಿಸಿಕೊಂಡಾಗ ಸೆಂಟರ್ ಕೋರ‍್ಟ್ ಒಂದು ಕ್ಶಣ ಸ್ತಬ್ದವಾಯಿತು. ಟ್ರೋಪಿ ಹಿಡಿದು ಇವಾನಿಸೆವಿಚ್ ಅದಕ್ಕೆ ಮುತ್ತಿಟ್ಟಾಗ ಅಲ್ಲಿ ನೆರೆದಿದ್ದ ಅವರ ಅಬಿಮಾನಿಗಳ ಮತ್ತು ಕುಟುಂಬ ವರ‍್ಗದವರ ಕಣ್ಣಾಲೆಗಳು ವದ್ದೆಯಾದವು. ಬಳಿಕ ಸಂದರ‍್ಶನವೊಂದರಲ್ಲಿ ‘ಆ ಎರಡು ವಾರದುದ್ದಕ್ಕೂ ಎರಡೇ ಜೊತೆ ಶರ‍್ಟ್ ಅನ್ನು ತೊಟ್ಟು ಆಡಿದ್ದೆ, ಹಾಗೂ ಪ್ರತೀ ದಿನ ಬೆಳಗ್ಗೆ ಟಿವಿಯಲ್ಲಿ ‘ಟೆಲಿಟಬ್ಬಿಸ್’ ನೋಡುತ್ತಿದ್ದೆ’ ಎಂದು ತಮ್ಮ ದಿನಚರಿಯನ್ನು ತಮಾಶೆಯಾಗಿ ಹೇಳಿಕೊಂಡು ಅಬಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದರು. ಅತ್ಯಂತ ಕಟಿಣ ‘ಡ್ರಾ’ ಹಾದಿಯನ್ನು ಕ್ರಮಿಸಿ ಗೊರನ್ ಪಡೆದ ಗೆಲುವನ್ನು ನಿಜಕ್ಕೂ ಪದಗಳಲ್ಲಿ ಬಣ್ಣಿಸಲಾಗದು ಎಂದೇ ಅವರ ತವರಿನಲ್ಲಿ ಮಂದಿ ಆನಂದಬಾಶ್ಪ ಸುರಿಸಿದರು. ಆ ನಂತರ ಪ್ರಶಂಸೆಗಳ ಮಹಾಪೂರವೇ ಇವಾನಿಸೆವಿಚ್ ರೆಡೆಗೆ ಹರಿದು ಬಂದಿತು. ‘ವಿಂಬಲ್ಡನ್ ನ ಹೊಸ ದೊರೆ!’, ‘ಇವನಿಗೆ ಅಸಾದ್ಯವೆಂಬುದು ಯಾವುದು ಇಲ್ಲ!’ ಎಂದೆಲ್ಲಾ ಪತ್ರಿಕೆಗೆಳು ಇವಾನಿಸೆವಿಚ್ ರ ವಿಂಬಲ್ಡನ್ ಸಾದನೆಯನ್ನು ಹಾಡಿ ಹೊಗಳಿದವು.

ಇಂದು 22 ವರ‍್ಶಗಳ ಬಳಿಕ ಇತಿಹಾಸದ ಪುಟವನ್ನು ತಿರುಗಿಸಿ ನೋಡಿದಾಗ ಈ ಅಪರೂಪದ ಗೆಲುವನ್ನು ನಂಬಲು ಕಶ್ಟವೆನಿಸುತ್ತದೆ. ಈ ಗೆಲುವಿನ ಬಳಿಕ ನಿರಂತರತೆ ಕಾಪಾಡಿಕೊಳ್ಳಲಾಗದೆ ಮತ್ತೆಂದೂ ಇವಾನಿಸೆವಿಚ್ ಗ್ರಾಂಡ್‌ಸ್ಲ್ಯಾಮ್ ಗೆಲ್ಲದೇ ಹೋದರೂ ಅವರ ಹೆಸರು ಮಾತ್ರ ಟೆನ್ನಿಸ್ ಇರುವ ತನಕ ಅಜರಾಮರ ಎಂದೇ ಹೇಳಬಹುದು. 2004 ರಲ್ಲಿ ನಿವ್ರುತ್ತರಾದ ಇವಾನಿಸೆವಿಚ್ 2013-16 ವರೆಗೂ ಮಾರಿನ್ ಸಿಲಿಚ್ ರ ಕೋಚ್ ಆಗಿ ಅವರು 2014 ರಲ್ಲಿ ಯು.ಎಸ್ ಓಪನ್ ಗೆಲ್ಲುವಲ್ಲಿ ಮುಕ್ಯ ಪಾತ್ರ ವಹಿಸಿದರು. ಆ ಬಳಿಕ ಟಾಮಸ್ ಬೆರ‍್ಡಿಚ್ ಮತ್ತು ಮಿಲೋಸ್ ರೋನಿಚ್ ರ ಕೋಚ್ ಆಗಿಯೂ ದುಡಿದ ಅವರು 2019 ರಿಂದ ಸೆರ‍್ಬಿಯಾದ ದಿಗ್ಗಜ ನೊವಾಕ್ ಜೊಕೊವಿಚ್ ರ ಕೋಚ್ ಆಗಿ ತಮ್ಮ ಶಿಶ್ಯನ ಗ್ರಾಂಡ್‌ಸ್ಲ್ಯಾಮ್ ಬೇಟೆಗೆ ಕೊಡುಗೆ ನೀಡುತ್ತಿದ್ದಾರೆ. 2020 ರಲ್ಲಿ ಗೋರನ್ ಇವಾನಿಸೆವಿಚ್ ರ ಟೆನ್ನಿಸ್ ಬದುಕಿನ ಸಾದನೆಯನ್ನು ಗುರುತಿಸಿ ಟೆನ್ನಿಸ್ ‘ಹಾಲ್ ಆಪ್ ಪೇಮ್’ ಗೆ ಅವರ ಹೆಸರನ್ನು ಸೇರಿಸಲಾಯಿತು. ಟೆನ್ನಿಸ್ ದಂತಕತೆಗಳ ಹೆಸರಿರುವ ಪಟ್ಟಿಯಲ್ಲಿ ಎಡೆ ಸಂಪಾದಿಸಿದ್ದು ಅವರ ವ್ರುತ್ತಿಬದುಕಿನ ಶ್ರೇಶ್ಟ ಕ್ಶಣ ಎಂದೇ ಹೇಳಬೇಕು. ಇಂದಿಗೂ ವೈಲ್ಡ್ ಕಾರ‍್ಡ್ ಮೂಲಕ ಅರ‍್ಹತೆ ಪಡೆದು ಕಣಕ್ಕಿಳಿಯುವವರಿಗೆ ಏನನ್ನಾದರೂ ಸಾದಿಸಬಹುದು ಎಂದು ತನ್ನಂಬಿಕೆ ತುಂಬುತ್ತಿರುವ ಏಕೈಕ ಹೆಸರು ಎಂದರೆ ಅದು ‘ಗೊರನ್ ಇವಾನಿಸೆವಿಚ್’!

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: