ಉಗುರು ಕತ್ತರಿಯ ಇತಿಹಾಸ

– ಕಿಶೋರ್ ಕುಮಾರ್.

ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಹಲವಾರು ವಸ್ತುಗಳನ್ನು ಬಳಸುತ್ತೇವೆ, ಅವುಗಳಲ್ಲಿ ಕೆಲವು ನಮ್ಮ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿದ್ದರೂ ಅವುಗಳ ಹಿನ್ನೆಲೆ ತಿಳಿಯಬೇಕೆನ್ನುವ ಕುತೂಹಲ ಮೂಡದೆ ಇರಬಹುದಾದರೂ, ಅವುಗಳಿಲ್ಲದಿದ್ದರೆ ಏನಾಗುತ್ತಿತ್ತು ಎಂದು ಊಹಿಸಬಹುದು. ಅಂತಹ ವಸ್ತುಗಳಲ್ಲಿ ಉಗುರು ಕತ್ತರಿಸುವ ನೇಲ್ ಕಟರ್ ಕೂಡ ಒಂದು.

ಹಳೆಯ ಕಾಲದಲ್ಲಿ, ಅಂದರೆ ನೇಲ್ ಕಟರ್ ಗಳು ಬಳಕೆಗೆ ಬರುವ ಮುನ್ನ ಜನರು ತಮ್ಮ ಉಗುರುಗಳನ್ನು ಹಲ್ಲುಗಳಿಂದ ಕಚ್ಚಿ ತುಂಡು ಮಾಡುತ್ತಿದ್ದರು. ಆರೋಗ್ಯದ ದ್ರುಶ್ಟಿಯಿಂದ ಇದು ಸರಿಯಾದ ಕ್ರಮವಲ್ಲದಿದ್ದರೂ, ಇದು ಹೆಚ್ಚು ಬಳಕೆಯಲ್ಲಿತ್ತು. ಇದಲ್ಲದೆ ಕಲ್ಲುಗಳಿಗೆ ಉಗುರುಗಳನ್ನು ಉಜ್ಜುವ ಮೂಲಕ, ಹರಿತವಾದ ಕಲ್ಲುಗಳು, ಇಲ್ಲವೇ ಇತರೆ ಚೂಪಾದ ವಸ್ತುಗಳಿಂದ ಉಗುರುಗಳನ್ನು ಕತ್ತರಿಸಲಾಗುತ್ತಿತ್ತು.

ಪುರಾತತ್ವ ಶಾಸ್ತ್ರಗ್ನರ ಅದ್ಯಯನ ಗಳ ಪ್ರಕಾರ, ಹಿಂದಿನ ನಾಗರೀಕತೆಗಳಲ್ಲಿ ಉಗುರು ಕತ್ತರಿಸಲು ಕಲ್ಲಿನಿಂದ ಹಾಗೂ ಮೂಳೆಯಿಂದ ಮಾಡಿದ ವಸ್ತುಗಳನ್ನು ಬಳಸಲಾಗುತಿತ್ತು ಎಂದು ತಿಳಿದು ಬರುತ್ತದೆ. ಮೊದಲ ನೇಲ್ ಕಟರ್ ನ ಲಿಕಿತ ದಾಕಲೆಗಳು ಇಲ್ಲದಿದ್ದರೂ, ಇವುಗಳ ಬಳಕೆ 19ನೇ ಶತಮಾನದಲ್ಲಿ ಮೊದಲಾಯಿತು ಎಂದು ತಿಳಿದುಬರುತ್ತದೆ.

1875 ರ ಸುಮಾರಿಗೆ ನೇಲ್ ಕಟರ್ ಗಳ ಪೇಟೆಂಟ್ ಗಳು ಮೊದಲಾದವು. ಇವುಗಳಲ್ಲಿ ಮೊದಲು ಎನ್ನಬಹುದಾದ ಮಾದರಿಯನ್ನು ವ್ಯಾಲೆಂಟೀನ್ ಪೊಗರ‍್ಟಿ ಎನ್ನುವವರು ತಯಾರಿಸಿದರು. ಇದು ದುಂಡಾಕಾರದ್ದಾಗಿತ್ತು, ಆದ್ದರಿಂದ ಹೆಚ್ಚು ಜನಪ್ರಿಯಗೊಳ್ಳಲಿಲ್ಲ. ಮುಂದೆ 1881 ರಲ್ಲಿ ಇವ್ಜೀನ್ ಹೈಮ್ ಹಾಗೂ ಒಲಿಸ್ಟಿನ್ ಮಟ್ಜ್ ಎನ್ನುವವರು ತಮ್ಮ ನೇಲ್ ಕಟರ್ ಗೆ ಪೇಟೆಂಟ್ ಪಡೆದರು. ಇದು ಇಂದು ನಾವು ಬಳಸುವ ನೇಲ್ ಕಟರ್ ಗಳಿಗೆ ಹೋಲುತಿತ್ತು. ಹೆಚ್ಚೆಚ್ಚು ಪೇಟೆಂಟ್ ಗಳನ್ನು ನೀಡುತ್ತಿದ್ದಂತೆ, ಹಲವಾರು ಮಾದರಿಯ ನೇಲ್ ಕಟರ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. ಇದರ ಜೊತೆಗೆ ಕೆಲವು ಮೂಡನಂಬಿಕೆಗಳು ಸಹ ಹುಟ್ಟಿಕೊಂಡವು. ಅವೆಂದರೆ, ವಾರಾಂತ್ಯದಲ್ಲಿ ಉಗುರು ಕತ್ತರಿಸುವುದರಿಂದ ದುರಾದ್ರುಶ್ಟ ಉಂಟಾಗುವುದು ಹೀಗೆ. ಮಾರುಕಟ್ಟೆ ಬೆಳೆದಂತೆಲ್ಲ ಮೂಡನಂಬಿಕೆಗಳೆಲ್ಲ ಮೂಲೆಗೆ ಸೇರಿದ್ದಲ್ಲದೆ, ಹಲವು ಬಗೆಯ ನೇಲ್ ಕಟರ್ ಗಳು ಬಳಕೆಗೆ ಬಂದಿವೆ. ಹಿಡಿಕೆಯಲ್ಲಿ ಬರೀ ಲೋಹದ್ದಲ್ಲದೆ ಪ್ಲಾಸ್ಟಿಕ್ ಹೊದಿಕೆಯ ನೇಲ್ ಕಟರ್ ಗಳು, ಹಾಗೆ ಐಶಾರಾಮಿ ನೇಲ್ ಕಟರ್ ಗಳೂ ಸಹ ಲಬ್ಯವಿವೆ. ಇದಶ್ಟೆ ಅಲ್ಲದೆ ಎಲ್.ಇ.ಡಿ ಇರುವ ನೇಲ್ ಕಟರ್ ಗಳೂ ಸಹ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನಾವು ದಿನ ನಿತ್ಯವೂ ಬಳಸುತ್ತಿದ್ದರೂ ಹೆಚ್ಚು ಗಮನ ಹರಿಸದ ನೇಲ್ ಕಟರ್ ಗಳು ಇಲ್ಲದಿದ್ದರೆ ಏನಾಗುತ್ತಿತ್ತು ಒಮ್ಮೆ ಊಹಿಸಿ ನೋಡಿ!

(ಮಾಹಿತಿ ಮತ್ತು ಚಿತ್ರಸೆಲೆ: tedium.co, nghianippersusa.com, backthenhistory.com, pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks