ಬ್ರೆಕ್ಟ್ ಕವನಗಳ ಓದು – 11 ನೆಯ ಕಂತು

– ಸಿ.ಪಿ.ನಾಗರಾಜ.

*** ಚಹ ಮಾಡುತ್ತ ದಿನಪತ್ರಿಕೆ ಓದುವುದು ***

(ಕನ್ನಡ ಅನುವಾದ: ಶಾ.ಬಾಲುರಾವ್)

ಮುಂಜಾನೆ ದಿನಪತ್ರಿಕೆಯಲ್ಲಿ
ದೊರೆಗಳ ಧರ್ಮಗುರುಗಳ
ಬ್ಯಾಂಕರುಗಳ ಎಣ್ಣೆದಣಿಗಳ
ಯುಗಪ್ರವರ್ತಕ ಯೋಜನೆಗಳನ್ನು
ಕುರಿತು ಓದುತ್ತೇನೆ

ಇನ್ನೊಂದು ಕಣ್ಣು ಚಹದ ಪಾತ್ರೆಯ ಮೇಲಿದೆ
ನೀರು ಆವಿಯಾಡುತ್ತದೆ
ಗುಳುಗುಳು ಗುಳ್ಳೆಗಳೇಳುತ್ತವೆ
ಮತ್ತೆ ತಿಳಿಗೊಳ್ಳುತ್ತದೆ
ನಂತರ ಮೇಲುಕ್ಕಿ ಹರಿದು
ಬೆಂಕಿ ತಣ್ಣಗಾಗುತ್ತದೆ.

ಆಡಳಿತ, ದರ್‍ಮ ಮತ್ತು ಸಂಪತ್ತಿನ ಗದ್ದುಗೆಯಲ್ಲಿ ಕುಳಿತಿರುವವರು ರೂಪಿಸುವ ಯೋಜನೆಗಳೆಲ್ಲವೂ ಅವರವರ ಹಿತವನ್ನು ಕಾಪಾಡುತ್ತವೆಯೇ ಹೊರತು, ನಾಡಿನ ಜನಸಮುದಾಯಕ್ಕೆ ಒಳಿತನ್ನು ಮಾಡುವುದಿಲ್ಲವೆಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

ಮುಂಜಾನೆ=ಬೆಳಗ್ಗೆ; ದೊರೆ=ರಾಜ/ನಾಡಿನ ಆಡಳಿತದ ಗದ್ದುಗೆಯಲ್ಲಿರುವ ವ್ಯಕ್ತಿ; ಧರ್ಮಗುರು=ಜಗತ್ತಿನ ಜನಸಮುದಾಯದಲ್ಲಿರುವ ಬಹುಬಗೆಯ ದರ್‍ಮಗಳಲ್ಲಿ, ಒಂದೊಂದು ದರ್‍ಮಕ್ಕೂ ಒಬ್ಬೊಬ್ಬ ಗುರು ಇರುತ್ತಾರೆ; ಬ್ಯಾಂಕರ್=ಜನರ ಬಹುಬಗೆಯ ವ್ಯವಹಾರಗಳಿಗೆ ಹಣವನ್ನು ಬಡ್ಡಿಗೆ ನೀಡುವವನು ಮತ್ತು ಗ್ರಾಹಕರ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುವವನು; ಎಣ್ಣೆದಣಿ=ಪೆಟ್ರೋಲಿಯಮ್ ಉತ್ಪನ್ನಗಳಿಗೆ ಒಡೆಯನಾಗಿರುವವನು; ಯುಗ=ಹೆಚ್ಚಿನ ಕಾಲ; ಪ್ರವರ್ತಕ=ಕೆಲಸದಲ್ಲಿ ತೊಡಗಿಸುವಂತೆ ಮಾಡುವ; ಯೋಜನೆ=ಕಾರ್‍ಯರೂಪಕ್ಕೆ ತರಲೆಂದು ಕ್ರಮಬದ್ದವಾಗಿ ರೂಪಿಸಿರುವ ಕೆಲಸಗಳು;

ಯುಗಪ್ರವರ್ತಕ ಯೋಜನೆ=ಜನಸಮುದಾಯದ ಹಸಿವು, ಬಡತನ ಮತ್ತು ನಿರುದ್ಯೋಗವನ್ನು ತೊಲಗಿಸಿ, ಅವರ ಬದುಕಿಗೆ ಹೊಸ ಚೇತನವನ್ನು ನೀಡುವಂತಹ ದೊಡ್ಡ ದೊಡ್ಡ ಯೋಜನೆಗಳು / ಹಿಂದಿನ ಶತಮಾನಗಳಲ್ಲಿ ಜನರನ್ನು ಕಾಡುತ್ತಿದ್ದ ಸಾಮಾಜಿಕ ಕೇಡನ್ನು ನಾಶಮಾಡಿ, ಜನರೆಲ್ಲರಿಗೂ ಸರ್‍ವಸಮಾನತೆಯ ಮತ್ತು ನೆಮ್ಮದಿಯಿಂದ ಕೂಡಿದ ಬದುಕನ್ನು ರೂಪಿಸುವ ಯೋಜನೆಗಳು;

ಆವಿ+ಆಡುತ್ತದೆ; ಆವಿ=ನೀರನ್ನು ಕುದಿಸಿದಾಗ ಮೇಲಕ್ಕೆ ಏಳುವ ನೀರಿನ ಕಣಗಳ ಹಬೆ;

ಪ್ರತಿ ನಿತ್ಯ ಬೆಳಗ್ಗೆ ನಾವು ಓದುವ ದಿನಪತ್ರಿಕೆಗಳಲ್ಲಿ ದೇಶದ ಆಡಳಿತದ ಸೂತ್ರವನ್ನು ಹಿಡಿದಿರುವ ರಾಜಕಾರಣಿಗಳು, ದರ್‍ಮದ ಗದ್ದುಗೆಯನ್ನು ಅಲಂಕರಿಸಿರುವ ಗುರುಗಳು ಮತ್ತು ಕೋಟಿಗಟ್ಟಲೆ ಸಂಪತ್ತಿನ ಒಡೆಯರಾದ ಬಂಡವಾಳಶಾಹಿಗಳು ದೇಶದ ಜನರ ಒಳಿತಿಗಾಗಿ ಆಡುತ್ತಿರುವ ಮಾತುಗಳನ್ನು ಮತ್ತು ರೂಪಿಸುತ್ತಿರುವ ಯೋಜನೆಗಳ ವಿವರಗಳನ್ನು ಓದುತ್ತಿರುತ್ತೇವೆ. ಯೋಜನೆಯಲ್ಲಿನ ಕಾರ್‍ಯಕ್ರಮಗಳೆಲ್ಲವೂ ಇಡಿ ಮಾನವ ಸಮುದಾಯವನ್ನೇ ಪ್ರಗತಿಯ ದಾರಿಯಲ್ಲಿ ಮುನ್ನಡೆಸುವಂತಹ ನುಡಿಗಳಿಂದ ಕೂಡಿರುತ್ತವೆ. ಆದರೆ ದಿನೇ ದಿನೇ ಮಾನವ ಸಮುದಾಯದ ಬದುಕು ಇನ್ನೂ ಹೆಚ್ಚಿನ ಸಂಕಟಗಳಿಗೆ ಬಲಿಯಾಗುತ್ತಿದೆ. ಇದಕ್ಕೆ ಕಾರಣವೇನೆಂದರೆ ಯುಗಪ್ರವರ್‍ತಕ ಯೋಜನೆಗಳನ್ನು ರೂಪಿಸುವವರ ಒಳ ಉದ್ದೇಶಗಳು ಬೇರೆಯಾಗಿರುತ್ತವೆ.

ನಾಡನ್ನು ಆಳುವ ಗದ್ದುಗೆಯಲ್ಲಿ ದೊರೆಯಿರಲಿ ಇಲ್ಲವೇ ಬೇರೆ ಯಾವುದೇ ಬಗೆಯ ಆಡಳಿತಗಾರನಿರಲಿ ಇಲ್ಲವೇ ಸರಕಾರವಿರಲಿ… ಅವರು ರೂಪಿಸುವ ಯೋಜನೆಗಳೆಲ್ಲವೂ ನಿಜಜೀವನದಲ್ಲಿ ಪ್ರಾಮಾಣಿಕವಾಗಿ ಕಾರ್‍ಯರೂಪಕ್ಕೆ ಬಂದಿದ್ದರೆ ದೇಶದಲ್ಲಿರುವ ಪ್ರಜೆಗಳೆಲ್ಲರೂ ನೆಮ್ಮದಿಯ ಜೀವನಕ್ಕೆ ಅತ್ಯಗತ್ಯವಾದ ಅನ್ನ,ಬಟ್ಟೆ,ವಸತಿ,ವಿದ್ಯೆ,ಉದ್ಯೋಗ ಮತ್ತು ಆರೋಗ್ಯವನ್ನು ಪಡೆಯುತ್ತಿದ್ದರು. ಆದರೆ ಇಂದಿಗೂ ನಮ್ಮ ಸುತ್ತಮುತ್ತಣ ಸಮಾಜದ ಎಲ್ಲೆಡೆಯಲ್ಲಿಯೂ ಹಸಿವು, ಬಡತನ ಮತ್ತು ಅಪಮಾನದಿಂದ ನರಳುತ್ತಿರುವವರ ಸಂಕೆಯು ಒಟ್ಟು ಜನಸಮುದಾಯದಲ್ಲಿ ಶೇ. 40ಕ್ಕಿಂತ ಹೆಚ್ಚಿದೆ.

ಮೇಲು ನೋಟಕ್ಕೆ ಆಳುವ ಸರಕಾರದ ಯೋಜನೆಗಳ ಸ್ವರೂಪ ಜನಪರವಾಗಿರುವಂತೆ ಕಂಡುಬಂದರೂ, ಅವು ಕಾರ್‍ಯರೂಪಕ್ಕೆ ಬರುವಾಗ ಯೋಜನೆಗಳಲ್ಲಿ ತೊಡಗಿಸಿದ್ದ ಹಣದಲ್ಲಿ ಬಹು ದೊಡ್ಡ ಪಾಲು ಮೇಲು ಜಾತಿಯವರ, ಮೇಲು ವರ್‍ಗದವರ , ರಾಜಕಾರಣಿಗಳ, ಬಂಡವಾಳಶಾಹಿಗಳ ಮತ್ತು ಆಡಳಿತಶಾಹಿಗಳ ಪಾಲಾಗುತ್ತದೆ. ಇದರಿಂದಾಗಿ ದುಡಿಯುವ ಶ್ರಮಜೀವಿಗಳಾದ ಕೋಟಿಗಟ್ಟಲೆ ಬಡಜನರ ಬದುಕಿನ ಸಂಕಟಗಳು ಹಾಗೆಯೇ ಮುಂದುವರಿಯುತ್ತಿರುತ್ತವೆ.

ದೊರೆಗಳು ಅಂದರೆ ಆಡಳಿತದ ಗದ್ದುಗೆಯಲ್ಲಿರುವ ವ್ಯಕ್ತಿಗಳು ಹಾಕುವ ಯೋಜನೆಗಳು ಅವರ ಅದಿಕಾರವನ್ನು ಎಂದೆಂದಿಗೂ ಶಾಶ್ವತವಾಗಿ ಇರುವಂತೆ ಮಾಡಿಕೊಳ್ಳುವ ದಿಕ್ಕಿನಲ್ಲಿರುತ್ತವೆ. ಪ್ರಜೆಗಳನ್ನು ನಿಯಂತ್ರಿಸುವಂತಹ ಕಾಯಿದೆಗಳನ್ನು ಮಾಡುವುದರ ಜತೆಜತೆಗೆ ದೇಶಕ್ಕೆ ಶತ್ರುಗಳಿಂದ ಅಪಾಯವಿದೆಯೆಂಬ ಗುಲ್ಲನ್ನೆಬ್ಬಿಸಿ, “ನಾವು ಆಡಳಿತದಲ್ಲಿ ಇದ್ದರೆ ಮಾತ್ರ ನಾಡು ಉಳಿಯುತ್ತದೆ, ಬೇರೆಯವರು ಬಂದರೆ ನಾಡು ನಾಶವಾಗುತ್ತದೆ” ಎಂಬ ಹೆದರಿಕೆಯನ್ನು ಜನಮನದಲ್ಲಿ ಬಿತ್ತಿ, ಸದಾಕಾಲ ಜನಸಮುದಾಯವನ್ನು ಆತಂಕದಲ್ಲಿ ಇಟ್ಟಿರುತ್ತಾರೆ;

ದರ್‍ಮ ಗುರುಗಳು ರೂಪಿಸುವ ಯೋಜನೆಗಳು ಎಂದೆಂದಿಗೂ ಇಡೀ ಮಾನವ ಸಮುದಾಯದ ಒಳಿತನ್ನು ಒಳಗೊಂಡಿರುವುದಿಲ್ಲ. ಜಗತ್ತಿನಲ್ಲಿರುವ ಹಲವು ದರ್‍ಮಗಳ ಗುರುಗಳೆಲ್ಲರೂ ಮಾನವ ಸಮುದಾಯದಲ್ಲಿ ಪರಸ್ಪರ ಪ್ರೀತಿ, ಕರುಣೆ ಮತ್ತು ಗೆಳೆತನದ ನಂಟು ಇರಬೇಕೆಂದು ಬಾಯಲ್ಲಿ ಹೇಳುತ್ತಿದ್ದರೂ, ಇಡೀ ಜಗತ್ತಿನ ಚರಿತ್ರೆಯಲ್ಲಿ ಯಾವೊಂದು ದರ್‍ಮವು ತನ್ನದಲ್ಲದ ದರ್‍ಮದ ಜನರ ಬಗ್ಗೆ ಸಹನೆಯಿಂದ ನಡೆದುಕೊಂಡಿಲ್ಲ. ಪ್ರತಿಯೊಂದು ದರ್‍ಮದ ಗುರುವೂ ತಮ್ಮ ದರ್‍ಮವೇ ಜಗತ್ತಿನಲ್ಲಿ ಅತ್ಯುತ್ತಮವೆಂದು ಹೇಳಿಕೊಳ್ಳುತ್ತಾರೆ.

ಜಾತಿ, ದರ್‍ಮ ಮತ್ತು ದೇವರ ಹೆಸರಿನಲ್ಲಿ ನಡೆಯುವ ಯುದ್ದ ಇಲ್ಲವೇ ಹೊಡೆದಾಟದಲ್ಲಿ ತಮ್ಮ ಪಂಗಡಕ್ಕೆ ಸೇರಿರದ ಜನರನ್ನು ಸಾವು ನೋವುಗಳಿಗೆ ಗುರಿಮಾಡಿ ಗೆದ್ದಾಗ, ತಮ್ಮ ದರ್‍ಮ ಉಳಿಯಿತೆಂದು ಹೆಮ್ಮೆಪಟ್ಟಿದ್ದಾರೆಯೇ ಹೊರತು, ಮಾನವಜೀವಿಗಳ ದುರಂತಕ್ಕಾಗಿ ಕಣ್ಣೀರನ್ನು ಹಾಕಿಲ್ಲ. ಪ್ರತಿಯೊಂದು ದರ್‍ಮದ ಗುರುವೂ ತನ್ನ ದರ್‍ಮದ ಇಲ್ಲವೇ ತನ್ನ ಜಾತಿಯ ಜನರ ಹಿತಕ್ಕಾಗಿ ಯೋಜನೆಗಳನ್ನು ರೂಪಿಸುತ್ತಾನೆಯೇ ಹೊರತು ಇತರ ಜಾತಿ ದರ್‍ಮದವರ ಒಳಿತಿನ ಬಗ್ಗೆ ಚಿಂತಿಸುವುದಿಲ್ಲ.

ಬ್ಯಾಂಕರುಗಳು ಮತ್ತು ಎಣ್ಣೆದಣಿಗಳಂತಹ ಬಂಡವಾಳಶಾಹಿಗಳು ಹಾಕುವ ಯೋಜನೆಗಳು ಮೇಲು ನೋಟಕ್ಕೆ ತುಂಬಾ ಉಪಯುಕ್ತವಾಗಿರುವಂತೆ ಕಂಡುಬರುತ್ತವೆ. ಆದರೆ ಅದರ ಅಂತರಂಗದಲ್ಲಿ ದುಡಿಯುವ ವರ್‍ಗದ ಜನರ ಸಂಪತ್ತನ್ನು ದೋಚುವ ನಿಯಮಗಳ ಜಾಲದ ಹೆಣಿಗೆಯಿರುತ್ತದೆ. ಹಣವನ್ನು ಸಾಲದ ರೂಪದಲ್ಲಿ ಕೊಡುವ ಯೋಜನೆಗಳೆಲ್ಲವೂ ಹೆಚ್ಚಿನ ಬಡ್ಡಿಯನ್ನು ಸುಲಿದು ಜನರನ್ನು ಸಾಲಸೋಲದ ಕೂಪಕ್ಕೆ ತಳ್ಳುವ ರೀತಿಯಲ್ಲಿಯೇ ಇರುತ್ತವೆ. ಹಣದ ಮುಗ್ಗಟ್ಟಿನಲ್ಲಿ ನರಳುತ್ತಿರುವ ಜನರು ಬೇರೆ ದಾರಿಯಿಲ್ಲದೆ ಬಂಡವಾಳಶಾಹಿಗಳ ಸಾಲದ ಬಲೆಗೆ ಸಿಲುಕಿ, ಅದರಿಂದ ಬಿಡುಗಡೆಯನ್ನು ಪಡೆಯುವುದಕ್ಕೆ ತುಂಬಾ ಶ್ರಮಪಡುತ್ತಿರುವ ಪ್ರಸಂಗಗಳನ್ನು ದಿನನಿತ್ಯ ನಾವು ನೋಡುತ್ತಿರುತ್ತೇವೆ..

ಆದ್ದರಿಂದಲೇ ದಿನ ಕಳೆದಂತೆಲ್ಲಾ ಬಂಡವಾಳಶಾಹಿಗಳ ಸಂಪತ್ತು ಇಮ್ಮಡಿಯಾಗಿ, ನೂರ್‍ಮಡಿಯಾಗಿ, ಸಾವಿರಾರು ಪಟ್ಟು ಹೆಚ್ಚಾದಂತೆಲ್ಲಾ ನಾಡಿನಲ್ಲಿ ದುಡಿಯುವ ವರ್‍ಗದ ಶ್ರಮಜೀವಿಗಳ ಬದುಕು ದುರಂತಮಯವಾಗುತ್ತಿದೆ.

ನಮ್ಮ ಕಣ್ಣಮುಂದಿನ ಸಮಾಜದಲ್ಲಿ ಶ್ರಮಜೀವಿಗಳ ದುಡಿಮೆಯಿಂದ ಉತ್ಪನ್ನಗೊಳ್ಳುವ ಸಂಪತ್ತನ್ನು ಮತ್ತು ನಿಸರ್‍ಗ ಸಂಪತ್ತನ್ನು ದೋಚುವ ಕೆಲಸದಲ್ಲಿ ಆಡಳಿತಗಾರರು, ದರ್‍ಮಗುರುಗಳು ಮತ್ತು ಬಂಡವಾಳಶಾಹಿಗಳು ಪರಸ್ಪರ ಸಾಮೀಲಾಗಿರುವ ವಾಸ್ತವ ಎದ್ದು ಕಾಣುತ್ತಿದೆ.

ಚಹದ ಪಾತ್ರೆಯಲ್ಲಿ ನೀರನ್ನು ಹಾಕಿ, ಅದನ್ನು ಕುದಿಸಿ, ಚಹದ ಪುಡಿಯನ್ನು ಮತ್ತು ಬೆಲ್ಲ/ಸಕ್ಕರೆಯನ್ನು ಹಾಕದೆ ಬಿಟ್ಟಾಗ, ಬರಿ ನೀರು ಕುದಿಕುದಿದು ಆವಿಯಾಗುವ, ನೀರಿನ ಗುಳ್ಳೆಗಳು ಮೇಲೆದ್ದು, ಮರುಗಳಿಗೆಯಲ್ಲಿಯೇ ಇಲ್ಲವಾಗುವ, ಇನ್ನುಳಿದ ಕಾದ ನೀರು ಉಕ್ಕಿ ಹರಿದು ಒಲೆಯ ಬೆಂಕಿಯೇ ನಂದಿಹೋಗುವ ರೂಪಕದ ಮೂಲಕ ಜನರನ್ನು ಮರುಳು ಮಾಡುವ ಮಾತುಗಳನ್ನಾಡುತ್ತ, ತಮ್ಮ ಉಳಿವಿಗಾಗಿಯೇ ಈ ಮೂವರು ರೂಪಿಸುವ ಯೋಜನೆಗಳಿಂದ ನಾಡಿನ ಜನತೆಗೆ ಯಾವುದೇ ಬಗೆಯ ಪ್ರಯೋಜನವಿಲ್ಲ ಎಂಬುದನ್ನು ಈ ಕವನದಲ್ಲಿ ಚಿತ್ರಿಸಲಾಗಿದೆ.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *