ವಿಶ್ವದ ಅತ್ಯಂತ ವರ‍್ಣರಂಜಿತ ಉದ್ಯಾನವನ – ಕ್ಯುಕೆನ್ಹಾಪ್

– .

‘ಹೂವು ಚೆಲುವೆಲ್ಲ ನಂದೆಂದಿತು….’ ಇದು ಜನಪ್ರಿಯ ಚಿತ್ರಗೀತೆಯ ಸಾಲುಗಳು. ಹೂವಿನ ಚಿತ್ರಣದ ಬಗ್ಗೆ ಹುಡುಕುತ್ತಾ ಹೋದಲ್ಲಿ “ಹೂವಿನಂತ ಸುಕೋಮಲ ಮನಸ್ಸು”, “ಹೂವಿನಂತಹ ಚೆಲುವೆ” ಎಂಬಿತ್ಯಾದಿ ಪದಪುಂಜಗಳನ್ನು ಕೇಳಿರುತ್ತೀರಿ. ಯುವಕ ಯುವತಿಗೆ ಪ್ರೇಮ ನಿವೇದನೆ ಮಾಡುವಾಗ ಸಹ ಕೆಂಪು ಗುಲಾಬಿ ಹೂವು ಬಳಕೆಯಾಗುತ್ತದೆ. ಹಾಗಾಗಿ ಹೂವಿನ ಸೌಂದರ‍್ಯಕ್ಕೆ ಮರುಳಾಗದವರೇ ಇಲ್ಲ. ಅಶ್ಟೇ ಏಕೆ? ಹೂವಿನ ಬಳಕೆ ಸಬೆ ಸಮಾರಂಬಗಳ ಅಲಂಕಾರಕ್ಕಾಗಿ ಹಾಗೂ ಗಣ್ಯರನ್ನು ಸ್ವಾಗತಿಸಲು, ಗುಡಿಯಲ್ಲಿ ದೇವರ ಪೂಜೆಗೆ, ಕೊನೆಗೆ ಸತ್ತಾಗಲೂ ಸಹ ಹೂವಿನ ಬಳಕೆಯಾಗುತ್ತದೆ. ಮಾನವನ ನಡೆನುಡಿಯಲ್ಲೂ ಹೂವು ಹಾಸುಹೊಕ್ಕಾಗಿ ಬೆರೆತು ಹೋಗಿದೆ. ಕವಿಗಳಿಗಂತೂ ಹೂವು ಸ್ಪೂರ‍್ತಿದಾಯಕ. ಹೂವಿನ ಗಿಡಗಳನ್ನು ಎಲ್ಲೆಲ್ಲೂ ಕಾಣಬಹುದು. ಕಾಡಿನಲ್ಲೂ ಸಹ ಹೂವನ್ನು ಕಾಣಬಹುದು. ಆದರೆ ವಿಶ್ವದಲ್ಲೆ ಅತಿ ದೊಡ್ಡ ಹೂವಿನ ಉದ್ಯಾನವಿರುವುದು ಮರಳುಗಾಡಿಗೆ ಹೆಸರುವಾಸಿಯಾದ ದುಬೈನಲ್ಲಿ ಎಂದರೆ ನಂಬಲೇ ಬೇಕು. ಅದರ ನಂತರದ ಸ್ತಾನ ಹಾಲೆಂಡಿನ ಕ್ಯುಕೆನ್ಹಾಪ್ ಉದ್ಯಾನವನಕ್ಕೆ ದಕ್ಕಿದೆ.

ಕ್ಯುಕೆನ್ಹಾಪ್ ಉದ್ಯಾನವನ ದಕ್ಶಿಣ ನೆದರ‍್ಲ್ಯಾಂಡಿನ ಲಿಸ್ಸೆ ಪುರಸಬೆಯ ವ್ಯಾಪ್ತಿಯಲ್ಲಿ ನೆಲೆಗೊಂಡಿದೆ. 32 ಹೆಕ್ಟೇರ್ (79 ಎಕರೆ) ಪ್ರದೇಶದಲ್ಲಿ ಹರಡಿರುವ ಈ ಹೂವಿನ ಉದ್ಯಾನವನ ವಸಂತ ಕಾಲದ ಉದ್ಯಾನವನ ಎಂತಲೂ ಪ್ರಸಿದ್ದಿಯಾಗಿದೆ. ಇದಕ್ಕೆ ಮೂಲ ಕಾರಣ ಇಲ್ಲಿನ ಹೂವಿನ ಗಿಡಗಳು ವಸಂತ ಕಾಲದಲ್ಲಿ ಅರಳಿ ತಮ್ಮ ಸೌಂದರ‍್ಯವನ್ನು ಪ್ರಕಟಿಸುತ್ತವೆ. ಈ ಸಮಯವೇ ಕ್ಯುಕೆನ್ಹಾವ್ ಉದ್ಯಾನವನವನ್ನು ನೋಡಲು ಅತ್ಯಂತ ಪ್ರಶಸ್ತವಾದ ಸಮಯ. ಉಳಿದಂತೆ ಉದ್ಯಾನವನ ಸಹ ಮುಚ್ಚಿರುತ್ತದೆ.

ಹಾಲೆಂಡಿನ ಅಚ್ಚುಮೆಚ್ಚಿನ ಟ್ಯುಲಿಪ್ಗಳ 800 ಕ್ಕೂ ಹೆಚ್ಚು ಪ್ರಬೇದಗಳನ್ನು ಈ ಉದ್ಯಾನವನದಲ್ಲಿ ಕಾಣಬಹುದು. ಈ ಉದ್ಯಾನವನಕ್ಕೆ ಪ್ರತಿವರ‍್ಶವೂ ನೂರಕ್ಕೂ ಹೆಚ್ಚು ಗಿಡಗಳ ಪೂರೈಕೆದಾರರು, ಅತ್ಯುತ್ತಮ ಹೂವಿನ ಕಾಂಡಗಳನ್ನು ನೆಡಲು ನೀಡುತ್ತಾರೆ. ಈ ವರ‍್ಣರಂಜಿತ ಉದ್ಯಾನವನಕ್ಕೆ ಇದೇ ಆಸ್ತಿ. ಟ್ಯುಲಿಪ್ಗಳಿಗೂ ನೆದರ‍್ಲ್ಯಾಂಡಿಗೂ ಅವಿನಾಬಾವ ಸಂಬಂದವಿದೆ. 16ನೇ ಶತಮಾನದಲ್ಲಿ ಟ್ಯುಲಿಪ್ಗಳನ್ನು ಓಟ್ಟೊವಾನ್ ಸಾಮ್ರಾಜ್ಯವು ಈ ದೇಶಕ್ಕೆ ಪರಿಚಯಿಸಿತು. ಹದಿನೇಳನೇ ಶತಮಾನದಲ್ಲಿ ಇದರ ಜನಪ್ರಿಯತೆ ಹಾಲೆಂಡಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು.

ಕ್ಯುಕೆನ್ಹಾಪ್ ಉದ್ಯಾನವನದ ಅಸ್ತಿತ್ವದ ಬಗ್ಗೆ, ಇದರ ಇತಿಹಾಸವನ್ನು ಹುಡುಕುತ್ತಾ ಹೋದರೆ, ಅದು ನೂರಾರು ವರ‍್ಶಗಳ ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ. ಈ ಪ್ರದೇಶದಲ್ಲಿ, ಬವೇರಿಯಾದ ಅಡುಗೆ ಸಿಬ್ಬಂದಿ ಜಾಕ್ವೆಲಿನ್ ಗಾಗಿ (ಅಂದಿನ ಬವೇರಿಯಾದ ಮಹಾರಾಣಿ) ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದರಂತೆ. ಹಾಗಾಗಿಯೇ ಈ ಉದ್ಯಾನವನಕ್ಕೆ ಕ್ಯುಕೆನ್ಹಾಪ್ ಎನ್ನುವುದು. ಕ್ಯುಕೆನ್ಹಾಪ್ ಎಂದರೆ ‘ಕಿಚನ್ ಗಾರ‍್ಡನ್’ ಎಂಬರ‍್ತ ಬರುತ್ತದೆ.

ಈ ಉದ್ಯಾನವನದಲ್ಲಿ ವಸಂತ ಕಾಲದ ಹೂವುಗಳನ್ನು ಪ್ರದರ‍್ಶಿಸುವ ಸಂಪ್ರದಾಯವು 1949ರಲ್ಲಿ ಮೊದಲಾಯಿತು. ಇದನ್ನು ಸದುಪಯೋಗ ಪಡಿಸಿಕೊಂಡ ದೇಶದ ಸುಮಾರು ಇಪ್ಪತ್ತು ಪ್ರಮುಕ ಹೂ ಬೆಳೆಗಾರರು, ತಮ್ಮ ಸರಕುಗಳ ಪ್ರದರ‍್ಶನಕ್ಕೆ ಮತ್ತು ಮಾರಾಟಕ್ಕೆ ಇದನ್ನು ಸಂಪೂರ‍್ಣವಾಗಿ ಬಳಸಿಕೊಂಡರು. ಇದಕ್ಕೂ ಮುನ್ನ ಈ ಉದ್ಯಾನವನದ ಬೂದ್ರುಶ್ಯವನ್ನು ಇಂಗ್ಲೆಂಡಿನ ಉದ್ಯಾನವನಗಳನ್ನು ಅನುಕರಿಸುವಂತೆ ವಿನ್ಯಾಸಗೊಳಿಸಲಾಗಿತ್ತು.
ಸಾಮಾನ್ಯವಾಗಿ ಪ್ರತಿವರ‍್ಶ ಮಾರ‍್ಚ್ ಮದ್ಯಬಾಗದಿಂದ ಮೇ ಮದ್ಯದವರೆವಿಗೂ ಈ ಉದ್ಯಾನವನ ಸಾರ‍್ವಜನಿಕರಿಗೆ ತೆರದಿರುತ್ತದೆ. ಈ ಸಮಯದಲ್ಲಿ ಇಲ್ಲಿ ಅರಳಿದ ವರ‍್ಣರಂಜಿತ ಹೂವುಗಳನ್ನು ನೋಡಿ ಆನಂದಿಸಲು ವಿಶ್ವದ ಮೂಲೆ ಮೂಲೆಗಳಿಂದಲೂ ಪ್ರವಾಸಿಗರು ಬರುತ್ತಾರೆ.

ವಸಂತಕಾಲದಲ್ಲಿ ಕ್ಯುಕೆನ್ಹಾಪ್ ಉದ್ಯಾನದಲ್ಲಿ ಬಹಳಶ್ಟು ಸಾವಯವ ಚಟುವಟಿಕೆಗಳು ನಡೆಯುತ್ತವೆ. ಈ ಸಮಯದಲ್ಲಿ ಅಲ್ಲಿನ ಕೆಲಸಗಾರರ ಸಂಕ್ಯೆ 750ಕ್ಕೂ ಹೆಚ್ಚಿರುತ್ತದೆ. ಹಿಂದಿನ ದಿನಗಳಲ್ಲಿ ನೆಟ್ಟಿದ್ದ ಗಿಡಗಳ ಪೋಶಣೆ ಬರದಿಂದ ಸಾಗುತ್ತಿರುತ್ತದೆ. ಇದಕ್ಕೆ ಅಂತರರಾಶ್ಟ್ರೀಯ ಹೂ ಅರಳುವ ಸ್ಪರ‍್ದೆಯ ಪ್ರದರ‍್ಶನ ಕಾರಣ. ಒಮ್ಮೆ ಸಾರ‍್ವಜನಿಕರಿಗೆ ಉದ್ಯಾನವನ ಮುಚ್ಚಿದ ನಂತರ ಕೆಲಸಗಾರರ ಸಂಕ್ಯೆಯನ್ನು 50ಕ್ಕೆ ಕಡಿತಗೊಳಿಸಿ, ಅವರನ್ನು ದೈನಂದಿನ ಕೆಲಸಕ್ಕೆ ಹಚ್ಚಲಾಗುತ್ತದೆ.

ಕ್ಯುಕೆನ್ಹಾಪ್ ಉದ್ಯಾನವನವನ್ನು “ವಿಶ್ವದ ಅತ್ಯಂತ ಸುಂದರವಾದ ವಸಂತ ಕಾಲದ ಉದ್ಯಾನವನ” ಎಂದು ಗುರುತಿಸಲಾಗುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ: albertdros.com, boredpanda.com, time4tulips.com, prnewswire.com, sananimam.com, pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks