ಕವಿತೆ: ಶ್ರೀರಾಮ

– .

ಕೋಸಲ ರಾಜ್ಯದ
ದಶರತ ಮಹಾರಾಜ
ಕೌಸಲ್ಯೆಯ ಗರ‍್ಬದಿ
ಶಿಶುವಾಗಿ ಜನಿಸಿ
ಅಸುರ ಕುಲಕ್ಕೆ ಮರಣ
ಶಾಸನ ಬರೆದ ಶ್ರೀರಾಮ

ಗನ ಮಹಿಮೆಯ ಶಿವ
ದನಸ್ಸನು ಮುರಿದು
ಜನರನ್ನು ಅಚ್ಚರಿಗೊಳಿಸಿ
ಜನಕರಾಜನ ಮಗಳು
ಜಾನಕಿಯ ಹ್ರುದಯ ಗೆದ್ದು
ಜಾನಕಿರಾಮನಾದ ಶ್ರೀರಾಮ

ಪಿತ್ರುವಾಕ್ಯ ಪರಿಪಾಲನೆಗಾಗಿ
ಕ್ಶಿತಿಯೊಡೆತನವ ಬದಿಗೊತ್ತಿ
ಸತಿ, ಸಹೋದರನೊಡನೆ
ಯತಿಯುಡುಗೆಯ ತೊಟ್ಟು
ದ್ರುತಿವಂತನಾಗಿ ವನವಾಸಕ್ಕೆ
ಸಂತೋಶದಿ ಹೊರಟನು ಶ್ರೀರಾಮ

ಅನುಜೆಯ ಮಾತು ಕೇಳಿ
ಕಾನನದೊಳಿದ್ದಂತಹ
ಜಾನಕಿಯ ಅಪಹರಣದ
ಹೀನ ಕ್ರುತ್ಯಕ್ಕೆ ಕೈಹಾಕಿದಂತಹ
ದ್ಯಾನಮಾಲಿನಿ ಪತಿ ರಾವಣನ
ತಾನು ಕೊಲ್ಲುವೆನೆಂದನು ಶ್ರೀರಾಮ

ಬಲು ಜಾಣ್ಮೆಯಿಂದ
ಬಲಶಾಲಿಯಾದಂತಹ
ವಾಲಿಯನು ಮರೆಯಲಿ ನಿಂತು
ಬಿಲ್ಲು ಬಾಣ ಪ್ರಯೋಗದಿಂ ಕೊಂದು
ವಾಲಿಯನುಜ ಸುಗ್ರೀವನಿಗೆ ಪಟ್ಟಕಟ್ಟಿ
ಬಲಶಾಲಿ ಹನುಮನೊಡೆಯನಾದ ಶ್ರೀರಾಮ

ಕಾನನದೊಳಗೆ
ಮನದನ್ನೆಯಾದ
ಜಾನಕಿಯ ಕಳೆದುಕೊಂಡು
ಅನುಜ ಲಕ್ಶ್ಮಣ
ವಾನರರೊಡಗೂಡಿ
ಜಾನಕಿಯ ಹುಡುಕಿದ ಶ್ರೀರಾಮ

ಅಳಿಲ ಸೇವೆ
ಮಳಲ ಬಕ್ತಿಗೆ
ಒಲಿದು ಸಂತಸದಿ
ಅಳಿಲ ಜೊತೆ
ಕೆಲಕಾಲವಾಡಿ
ನಲಿದ ಶ್ರೀರಾಮ

ಪಂಕಜಾಕ್ಶಿ ಸೀತೆಯ
ಸಂಕೋಲೆಯನು ಕಳಚಲು
ಲಂಕೆಯ ಅದಿಪತಿ
ಲಂಕೇಶನ ಜಾಡನರಸಿ
ಲಂಕೆಯ ಕಡೆಗೆ ಹೊರಟನು
ಪಂಕಜಲೋಚನ ಶ್ರೀರಾಮ

ವೀರ ಕಪಿಗಳ ಜೊತೆಗೆ
ಶರದಿಗೆ ಸೇತುವೆಯ ಕಟ್ಟಿ
ವಾರಿದಿಯ ದಾಟಿ ಲಂಕೇಶನ
ಕ್ರೂರ ಕ್ರುತ್ಯಕ್ಕೆ ನಾಂದಿ ಹಾಡಿ
ದರಣಿ ಜಾತೆ ಸೀತೆಯ
ಮರಳಿ ಪಡೆದ ಶ್ರೀರಾಮ

(ಚಿತ್ರ ಸಲೆ: flickr.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *