ಚಲದಂಕಮಲ್ಲ ರೋಹನ್ ಬೋಪಣ್ಣ

– ರಾಮಚಂದ್ರ ಮಹಾರುದ್ರಪ್ಪ.

ಕಳೆದ ವಾರ ಮೆಲ್ಬರ‍್ನ್ ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ 2024 ರ ಗಂಡಸರ ಡಬಲ್ಸ್ ಪೋಟಿಯ ಪೈನಲ್ ನಲ್ಲಿ ಮ್ಯಾತೀವ್ ಎಬ್ಡೆನ್ ರ ಸರ‍್ವ್ ಅನ್ನು ಬಿರುಸಿನಿಂದ ಹಿಂದುರಿಗಿಸಿದ ಎದುರಾಳಿಯ ಹೊಡೆತವನ್ನು, ನೆಟ್ ಬಳಿ ಇದ್ದ ಬಾರತದ ರೋಹನ್ ಬೋಪಣ್ಣ ಅಶ್ಟೇ ತೀವ್ರತೆಯಿಂದ ಚೆಂಡನ್ನು ಸ್ಮಾಶ್ ಮಾಡಿ ವಿನ್ನರ್ ಗಳಿಸಿದ್ದು ಟೆನ್ನಿಸ್ ನ ಐತಿಹಾಸಿಕ ಕ್ಶಣಗಳಲ್ಲೊಂದು. ಈ ಪಾಯಿಂಟ್ ನಿಂದ 2024 ರ ಆಸ್ಟ್ರೇಲಿಯಾ ಓಪನ್ ಗ್ರಾಂಡ್‌ಸ್ಲ್ಯಾಮ್ ಅನ್ನು ಮುಡಿಗೇರಿಸಿಕೊಂಡ ಎಬ್ಡೆನ್-ಬೋಪಣ್ಣರ ಜೋಡಿ ಡಬಲ್ಸ್ ಪೋಟಿಯ ಹಲವಾರು ದಾಕಲೆಗಳನ್ನು ತನ್ನದಾಗಿಸಿಕೊಂಡಿತು. ಅದರಲ್ಲಿ ಪ್ರಮುಕವಾದ ದಾಕಲೆ ಎಂದರೆ, ಬೋಪಣ್ಣ 43 ನೇ ವಯಸ್ಸಿನಲ್ಲಿ ಗ್ರಾಂಡ್‌ಸ್ಲ್ಯಾಮ್ ಒಂದನ್ನು ಗೆದ್ದು, ಟೆನ್ನಿಸ್ ನ ‘ಓಪನ್ ಎರಾ’ ಇತಿಹಾಸದಲ್ಲಿ ಈ ಸಾದನೆ ಮಾಡಿದ ಪ್ರಪಂಚದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು. ಹಾಗೂ ಇದೇ ಪಂದ್ಯಾವಳಿಯ ವೇಳೆ ತಮ್ಮ ವ್ರುತ್ತಿ ಬದುಕಿನಲ್ಲಿ ಚೊಚ್ಚಲ ಬಾರಿಗೆ ಬೋಪಣ್ಣ ಡಬಲ್ಸ್ ನಲ್ಲಿ ATPಯ ಅಗ್ರಶ್ರೇಯಾಂಕಿತರಾದದ್ದು ವಿಶೇಶ. 35 ರ ಗಡಿ ದಾಟುತ್ತಿದ್ದಂತೆಯೇ ಟೆನ್ನಿಸ್ ಪಟುಗಳು ಆಟದಿಂದ ದೂರ ಸರಿಯುವ ಪ್ರತೀತಿ ಇರುವ ಈ ಅತೀ ಸ್ಪರ‍್ದಾತ್ಮಕ ಯುಗದಲ್ಲಿ ಗೆಲುವುಗಳು ಹಲವಾರು ವರುಶಗಳ ಕಾಲ ಗಗನ ಕುಸುಮದಂತ್ತಿದ್ದರೂ, ಎದೆಗುಂದದೆ ತಮ್ಮ ಹೋರಾಟವನ್ನು 40 ದಾಟಿದ ಮೇಲೂ ಮುಂದುವರಿಸಿ, ಗ್ರಾಂಡ್‌ಸ್ಲ್ಯಾಮ್ ಗೆ ಮುತ್ತಿಟ್ಟ ಕರ‍್ನಾಟಕದ ರೊಹನ್ ಮಚಂದ ಬೋಪಣ್ಣರ ಅದ್ವೀತೀಯ ಸಾದನೆ ನಿಬ್ಬೆರಗಾಗಿಸುವಂತದ್ದು ಎಂದರೆ ಕಂಡಿತ ಅತಿಶಯವೇನಲ್ಲ!

ಹುಟ್ಟು- ಎಳವೆಯ ಟೆನ್ನಿಸ್ ಒಲವು

ಬೆಂಗಳೂರಿನಲ್ಲಿ ಮಾರ‍್ಚ್ 4, 1980 ರಲ್ಲಿ ಹುಟ್ಟಿದ ರೋಹನ್ ಬೋಪಣ್ಣ ತಮ್ಮ ಹನ್ನೊಂದನೇ ವಯಸ್ಸಿನಿಂದಲೇ ಟೆನ್ನಿಸ್ ತರಬೇತಿ ಮೊದಲು ಮಾಡಿದರು. ಟೆನ್ನಿಸ್ ಕುರಿತು ಮನೆಯಲ್ಲಿ ಹೆತ್ತವರ ಅತೀವ ಪ್ರೋತ್ಸಾಹ ರೋಹನ್ ರಿಗೆ ವರವಾಯಿತು. ಹಾಗಾಗಿ, 1996 ರಲ್ಲೇ ಕಿರಿಯ ಆಟಗಾರನಾಗಿ ತಮ್ಮ ವ್ರುತ್ತಿಪರ ಬದುಕು ಆರಂಬಿಸಿದ ಹದಿಹರೆಯದ ರೋಹನ್, ITF ಜೂನಿಯರ್ ವರ‍್ಲ್ಡ್ ರಾಂಕಿಂಗ್ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿ ಗೆದ್ದರು. ಆಟದ ಪಟ್ಟುಗಳನ್ನು ನಿರಂತರ ವ್ರುತ್ತಿಪರ ತರಬೇತಿಯಿಂದ ಮೈಗೂಡಿಸಿಕೊಂಡಿದ್ದ ಅವರಿಗೆ ಮೊದಲ ಕಿರಿಯರ ಪ್ರಶಸ್ತಿ ಗೆಲ್ಲಲು ಹೆಚ್ಚು ಹೊತ್ತು ಹಿಡಿಯಲಿಲ್ಲ. 1997 ರಲ್ಲಿ ರೋಹನ್ ಬೋಪಣ್ಣ, ರೋಹನ್ ಸೈಕಿಯಾರೊಂದಿಗೆ ಡಬಲ್ಸ್ ಪೋಟಿಯಲ್ಲಿ ಅರಬ್ ಚಾಂಪಿಯನ್ಸ್ ಟೂರ‍್ನಿ ಗೆದ್ದು ಬೀಗಿದರು. ಅಲ್ಲಿಂದ ಮೊದಲಾದ ಅವರ ಗೆಲುವಿನ ನಾಗಾಲೋಟ ಕಿರಿಯರ ಪಂದ್ಯಾವಳಿಗಳಲ್ಲಿ ನಾಲ್ಕೈದು ವರುಶಗಳ ಕಾಲ ನಿರಂತರವಾಗಿ ಸಾಗಿತು. ಅವರು ಹಿರಿಯರ ಪೋಟಿಗಳಿಗೆ ಅರ‍್ಹತೆ ಪಡೆದು ಅಂತರಾಶ್ಟ್ರೀಯ ಮಟ್ಟದ ಟೆನ್ನಿಸ್ ಆಡುವ ಹೊಸ್ತಿಲಲ್ಲಿ ನಿಲ್ಲುವ ಹೊತ್ತಿಗೆ, ಲಿಯಾಂಡರ್ ಪೇಸ್, ಮಹೇಶ್ ಬೂಪತಿರ ಉತ್ತರಾದಿಕಾರಿ ಇವರೇ ಎಂದು ಬಾರತದ ಟೆನ್ನಿಸ್ ವಲಯ ಬರವಸೆಯ ಕಣ್ಣುಗಳಿಂದ ಬೋಪಣ್ಣರತ್ತ ನೋಡುತ್ತಿದ್ದದ್ದು ಅವರ ಅಗಾದ ಅಳವಿಗೆ ಸಾಕ್ಶಿಯಾಗಿತ್ತು.

ಸಿಂಗಲ್ಸ್ ನಲ್ಲಿ ದಕ್ಕದ ಯಶಸ್ಸು

ಯಾವುದೇ ಟೆನ್ನಿಸ್ ಆಟಗಾರ ತನ್ನ ಎಳೆ ವಯಸ್ಸಿನಲ್ಲಿ ರಾಕೆಟ್ ಹಿಡಿದಾಗ ಸಿಂಗಲ್ಸ್ ನಲ್ಲಿ ಪೋಟಿ ಮಾಡಲೆಂದೇ ಅಣಿಯಾಗುತ್ತಾನೆ. ಆಟದ ಮೂಲ-ತಂತ್ರಗಾರಿಕೆಯು ಆಟಗಾರನೊಬ್ಬ ಒಂಟಿಯಾಗಿ ಕೋರ‍್ಟ್ ಅನ್ನು ಸಂಪೂರ‍್ಣವಾಗಿ ಸುತ್ತುವರೆಯುತ್ತಾ ಹೊಡೆತಗಳನ್ನು ಆಡುವತ್ತಲೇ ಕೇಂದ್ರೀಕರಿಸಿರುತ್ತದೆ. ಬೋಪಣ್ಣ ಕೂಡ ಎಲ್ಲರಂತೆ ಸಿಂಗಲ್ಸ್ ನಲ್ಲಿ ವ್ರುತ್ತಿಪರರಾಗಿ ಸೆಣಸಲು ತರಬೇತಿ ಪಡೆದು ಕಣಕ್ಕಿಳಿದರೂ ಕಿರಿಯರ ಪಂದ್ಯಾವಳಿಗಳಲ್ಲಿ ದಕ್ಕಿದ ತಕ್ಕಮಟ್ಟಿನ ಯಶಸ್ಸು ಮೇಲ್ಮಟ್ಟದಲ್ಲಿ ಅವರಿಗೆ ದಕ್ಕದೇ ಹೋಗುತ್ತದೆ. 2002 ರಲ್ಲಿ ಬಾರತದ ಡೇವಿಸ್ ಕಪ್ ತಂಡವನ್ನು ಸೇರಿಕೊಂಡ ಬೋಪಣ್ಣರನ್ನು, ಸಿಂಗಲ್ಸ್ ನಲ್ಲಿ ಅಪಾರ ನಿರೀಕ್ಶೆಯ ಬಾರ ಕುಗ್ಗಿಸುತ್ತದೆ. ಒಟ್ಟು ಹದಿನೆಂಟು ವರ‍್ಶಗಳ ತಮ್ಮ ಡೇವಿಸ್ ಕಪ್ ವ್ರುತ್ತಿಬದುಕಿನಲ್ಲಿ 27 ಸಿಂಗಲ್ಸ್ ಪಂದ್ಯಗಳಲ್ಲಿ ಕೇವಲ 10 ಪಂದ್ಯಗಳನ್ನಶ್ಟೇ ಗೆಲ್ಲಲು ಯಶಸ್ವಿಯಾಗುತ್ತಾರೆ. 2008 ರಲ್ಲಿ ಒಮ್ಮೆ ಜಪಾನ್ ನ ಕೇ. ನಿಶಿಕೊರಿ (ಮುಂದೆ ATP 4ನೇ ರಾಂಕ್ ಮಟ್ಟಕ್ಕೆ ಏರಿದ ಆಟಗಾರ) ಅವರನ್ನು ಐದು ಸೆಟ್ ಗಳ ರೋಚಕ ಪಂದ್ಯದಲ್ಲಿ ಮಣಿಸಿದ್ದೇ ಸಿಂಗಲ್ಸ್ ನಲ್ಲಿ ಬೋಪಣ್ಣರ ಅಪ್ರತಿಮ ಗೆಲುವಾಗಿ ಕೊನೆಗೊಳ್ಳುತ್ತದೆ. ಇನ್ನು ಗ್ರಾಂಡ್‌ಸ್ಲ್ಯಾಮ್ ಗಳಲ್ಲಿ ಸುಮಾರು ವರ‍್ಶಗಳ ಕಾಲ ಮುಕ್ಯ ‘ಡ್ರಾ’ ಗೆ ತಲುಪದೇ ಅರ‍್ಹತಾ ಸುತ್ತಿನಲ್ಲೇ ಅವರ ಪಯಣ ಮೊಟಕುಗೊಳ್ಳುತ್ತಾ ಹೋದಂತೆ ಅವರು ತೀವ್ರ ಮುಜುಗರಕ್ಕೆ ಒಳಗಾಗುತ್ತಾರೆ. 2007 ರಲ್ಲಿ 213 ನೇ ರಾಂಕ್ ತಲುಪಿದ್ದೇ ಸಿಂಗಲ್ಸ್ ನಲ್ಲಿ ಬೋಪಣ್ಣರ ಶ್ರೇಶ್ಟ ಸಾದನೆಯಾಗುತ್ತದೆ. ATP ಯ ಯಾವುದೇ ಮಟ್ಟದ ಒಂದೂ ಪಂದ್ಯಾವಳಿಯನ್ನು ಗೆಲ್ಲಲಾಗದೆ, ಸಿಂಗಲ್ಸ್ ನಲ್ಲಿ ಆಡಿದ ಒಟ್ಟು 48 ಪಂದ್ಯಗಳಲ್ಲಿ 13 ರನ್ನಶ್ಟೇ ಗೆದ್ದು, 33 ರಲ್ಲಿ ಸೋಲುಂಡ ಬಳಿಕ ಅವರು ಡಬಲ್ಸ್ ನಲ್ಲಶ್ಟೇ ಕಾದಾಡಲು ತೀರ‍್ಮಾನ ಮಾಡಿ, ಗೆಲುವನ್ನು ಅರಸುತ್ತಾ ತಮ್ಮ ವ್ರುತ್ತಿಬದುಕಿನ ಪಯಣವನ್ನು ಈ ಬಲಗೈ ಆಟಗಾರ ಮುಂದುವರೆಸುತ್ತಾರೆ.

ಡಬಲ್ಸ್ ನಲ್ಲಿ ದಿಗ್ಗಜನಾಗಿ ಬೆಳೆದ ಬೋಪಣ್ಣ

ಡಬಲ್ಸ್ ಪೋಟಿಗಳಿಗೆ ತಮ್ಮ ಆಟವನ್ನು ಹೊಂದಿಕೊಳ್ಳುವಂತೆ ಕೊಂಚ ಮಾರ‍್ಪಾಡುಗಳನ್ನು ಮಾಡಿಕೊಂಡ ಬೋಪಣ್ಣ, ಅಲ್ಲಿಂದ ಎಲ್ಲಾ ಮಾದರಿಯ ATP ಪಂದ್ಯಾವಳಿಗಳಲ್ಲಿ ಅನೇಕ ಜೊತೆಗಾರರೊಂದಿಗೆ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಪಂದ್ಯಗಳಲ್ಲಿ ಆಡುತ್ತಾ ಯಶಸ್ಸಿನ ಒಂದೊಂದೇ ಮೆಟ್ಟಿಲು ಏರುತ್ತಾ ಹೋಗುತ್ತಾರೆ. ತೀವ್ರ ಪೈಪೋಟಿ ಒಳಗೊಂಡ ಮಿಶ್ರ ಡಬಲ್ಸ್ ಪಂದ್ಯಾವಳಿಯಾದ ‘ಹಾಪ್ಮಾನ್ ಕಪ್’ ನಲ್ಲಿ ಬಾರತದ ಪರ ಸಾನಿಯಾ ಮಿರ‍್ಜಾರೊಂದಿಗೆ ಆಡಿ ಕೆಲವು ಪಂದ್ಯಗಳನ್ನು ಗೆದ್ದದ್ದು ಅಂದಿನ ಕಾಲಕ್ಕೆ ಒಂದು ಹೆಮ್ಮೆಯ ಸಂಗತಿಯೇ ಆಗಿತ್ತು. ನಂತರ 2007 ರಲ್ಲಿ ಅವರು ಪ್ರಪಂಚವೇ ಅಚ್ಚರಿ ಪಡುವಂತೆ ಪಾಕಿಸ್ತಾನದ ಐಸಮ್-ಉಲ್-ಹಕ್ ಕುರೇಶಿರನ್ನು ತಮ್ಮ ಡಬಲ್ಸ್ ಜೊತೆಗಾರನನ್ನಾಗಿ ಆರಿಸಿಕೊಂಡು ಹಲವಾರು ಟೂರ‍್ನಿಗಳನ್ನು ಗೆದ್ದರು. 2010 ರ ಅಮೇರಿಕ ಓಪನ್ ಅನ್ನು ಪೈನಲ್ ನಲ್ಲಿ ಕೂದಲೆಳೆಯಲ್ಲಿ ಈ ಜೋಡಿ ಸೋತರೂ ಪ್ರತಿಶ್ಟಿತ 1000 ಮಾಸ್ಟರ‍್ಸ್ ಟೂರ‍್ನಿಯಾದ ಪ್ಯಾರಿಸ್ ಮಾಸ್ಟರ‍್ಸ್ ಅನ್ನು 2011 ರಲ್ಲಿ ತೆಕ್ಕೆಗೆ ಹಾಕಿಕೊಂಡು ಗೆಲುವಿನ ನಗೆ ಬೀರಿತು. ಇದರ ಹೊರತಾಗಿ ಹಾಲ್ ಓಪನ್, ಸ್ಟಾಕ್‌ಹೋಮ್ ಓಪನ್, ದಕ್ಶಿಣ ಆಪ್ರಿಕಾ ಟೆನ್ನಿಸ್ ಓಪನ್, ದಬೈ ಟೆನ್ನಿಸ್ ಚಾಂಪಿಯನ್ಶಿಪ್ ಹಾಗೂ ಸಿಡ್ನಿ ಇಂಟೆರ‍್ನ್ಯಾಶನಲ್ ನಂತಹ ಹಲವಾರು ಪ್ರಶಸ್ತಿಗಳನ್ನು ಗೆದ್ದ ಈ ಜೋಡಿ ಆ ಕಾಲಗಟ್ಟದ ಅತ್ಯಂತ ಯಶಸ್ವಿ ಡಬಲ್ಸ್ ಜೋಡಿಯಾಗಿಯೂ ಹೊರಹೊಮ್ಮಿತು. ಟೆನ್ನಿಸ್ ವಲಯದಲ್ಲಿ ಈ ಜೋಡಿಯನ್ನು ‘ಇಂಡೋ-ಪಾಕ್ ಎಕ್ಸ್ಪ್ರೆಸ್’ ಎಂದು ಅಕ್ಕರೆಯಿಂದ ಕರೆಯುತ್ತಿದ್ದದ್ದು ಅವಿಸ್ಮರಣೀಯ. ಆದರೆ, ಬಾರತದ ದಿಗ್ಗಜರಾದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಬೂಪತಿರೊಂದಿಗೆ ಬೋಪಣ್ಣ ಡಬಲ್ಸ್ ನಲ್ಲಿ ಹೆಚ್ಚೇನೂ ಯಶಸ್ಸು ಕಾಣದ್ದು ತವರಿನ ಅಬಿಮಾನಿಗಳಿಗೆ ನಿರಾಸೆ ಮೂಡಿಸಿದ್ದು ಸುಳ್ಳಲ್ಲ. ಬೂಪತಿ-ಬೋಪಣ್ಣರ ಜೋಡಿ 2012 ರ ಪ್ಯಾರಿಸ್ ಮಾಸ್ಟರ‍್ಸ್ ಒಂದನ್ನು ಗೆದ್ದದ್ದು ಬಿಟ್ಟರೆ ಇನ್ನೆಲ್ಲೂ ಈ ಜೋಡಿ ಪ್ರಬಾವ ಬೀರದೆ ಹೋದದ್ದು ಬಾರತದ ಟೆನ್ನಿಸ್ ಇತಿಹಾಸದ ವಿಪರ‍್ಯಾಸವೇ ಸರಿ. ತಮ್ಮ ಆಟದ ಉತ್ತುಂಗದಲ್ಲಿರುವಾಗ ಬೋಪಣ್ಣರಿಂದ ಬಾರತ ಕಂಡಿತವಾಗಿಯೂ ಒಲಂಪಿಕ್ಸ್ ನಲ್ಲಿ ಕನಿಶ್ಟ ಒಂದು ಪದಕವನ್ನು ಎದುರು ನೋಡುತ್ತಿತ್ತು. ಆದರೆ, 2012 ಮತ್ತು 2016 ರ ಒಲಂಪಿಕ್ಸ್ ನಲ್ಲಿ ಬಾರತದ ಪರ ಆಡಿದ ಬೋಪಣ್ಣರ ಹೋರಾಟ ಎರಡು ಮತ್ತು ಮೂರನೇ ಸುತ್ತಿನಲ್ಲೇ ಕೊನೆಗೊಂಡಿದ್ದು ಇಂದಿಗೂ ತವರಿನ ಅಬಿಮಾನಿಗಳಿಗೆ ನುಂಗಲಾರದ ತುತ್ತಾಗಿ ಉಳಿದಿದೆ. ಇದುವರೆಗೂ ತಮ್ಮ ವ್ರುತ್ತಿ ಬದುಕಿನಲ್ಲಿ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ನಲ್ಲಿ ಒಟ್ಟು 26 ಪಂದ್ಯಾವಳಿಗಳನ್ನು ನಮ್ಮ ಕೊಡಗಿನ ಕುವರ ಗೆದ್ದಿದ್ದಾರೆ. ಆ ಗೆಲುವುಗಳಲ್ಲಿ 5 ಮಾಸ್ಟರ‍್ಸ್-1000 ಪ್ರಶಸ್ತಿಗಳೂ ಇರುವುದು ಆಟಗಾರನಾಗಿ ಅವರ ವರ‍್ಚಸ್ಸನ್ನು ಹಿಗ್ಗಿಸಿದೆ.

ರೋಹನ್ ಬೋಪಣ್ಣರ ಆಟದ ವೈಕರಿ

ತಮ್ಮ 6’4 ರ ಎತ್ತರವನ್ನು ಬಳಸಿಕೊಂಡು ಬಿರುಸಿನ ಸರ‍್ವ್ ಗಳನ್ನು ಹೆಚ್ಚು ಎತ್ತರದಿಂದ ಬೆಂಕಿ ಚಂಡಿನಂತೆ ಹರಿದುಬಿಡುವ ಬೋಪಣ್ಣರ ಆಟದ ತಾಕತ್ತೇ ಅವರ ಕರಾರುವಕ್ಕಾದ ಸರ‍್ವ್. ಇಂದಿಗೆ ರೋಜರ್ ಪೆಡರರ್ ರಂತೆ ಒಂದು ಕೈನ ಬ್ಯಾಕ್-ಹ್ಯಾಂಡ್ ಹೊಡೆತ ಆಡುವ ಕೆಲವೇ ಕೆಲವು ಆಟಗಾರರ ಪೈಕಿ ಇವರೂ ಒಬ್ಬರು. ಇನ್ನು ಹೆಚ್ಚು ಪುಟಿತ ಹಾಗೂ ಟಾಪ್ ಸ್ಪಿನ್ ಒಳಗೊಂಡ ಅವರ ಬಾರವಾದ ಬ್ಯಾಕ್-ಹ್ಯಾಂಡ್ ಹೊಡೆತಗಳೂ ಸಹ ಅವರ ಬತ್ತಳಿಕೆಯಲ್ಲಿರುವ ಮತ್ತೊಂದು ಪ್ರಮುಕ ಅಸ್ತ್ರ. ಈ ಪ್ರಬಾವೀ ಹೊಡೆತಗಳಿಂದ ಸಾಕಶ್ಟು ಬಾರಿ ಲೀಲಾಜಾಲವಾಗಿ ಅವರು ವಿನ್ನರ್ ಗಳನ್ನು ಪಡೆದಿರುವುದನ್ನು ನಾವು ಕಾಣಬಹುದು. ಬೋಪಣ್ಣರ ಆಟದ ತಂತ್ರಗಾರಿಕೆ ವೇಗವುಳ್ಳ ‘ಹಾರ‍್ಡ್-ಕೋರ‍್ಟ್’ ಗಳಿಗೆ ಹೇಳಿಮಾಡಿಸಿದಂತದ್ದು ಎಂದು ಟೆನ್ನಿಸ್ ಪಂಡಿತರ ಅನಿಸಿಕೆಯಾದರೂ ಎಲ್ಲಾ ಬಗೆಯ ಕೋರ‍್ಟ್ ನಲ್ಲಿ ಸಮಾನ ಯಶಸ್ಸು ಕಂಡಿರುವುದು ಕರ‍್ನಾಟಕದ ಈ ಅಪರೂಪದ ಪ್ರತಿಬೆಯ ಅಳವಿಗೆ ಎತ್ತುಗೆ ಎಂದೇ ಹೇಳಬೇಕು!

ಗ್ರಾಂಡ್‌ಸ್ಲ್ಯಾಮ್ ಗಳಲ್ಲಿ ಬೋಪಣ್ಣ

2002/03 ರಲ್ಲಿ ವ್ರುತ್ತಿಪರ ಟೆನ್ನಿಸ್ ಗೆ ಬಡ್ತಿ ಪಡೆದು ಹಲವಾರು ಪಂದ್ಯಾವಳಿಗಳನ್ನು ಗೆಲ್ಲುತ್ತಾ ಹೋದರೂ ಬೋಪಣ್ಣರಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಗ್ರಾಂಡ್‌ಸ್ಲ್ಯಾಮ್ ಗೆಲುವು ಮಾತ್ರ ಕೈಗೆಟುಕದೆ ಹೋಯಿತು. ಆದರೂ ದ್ರುತಿಗೆಡದೆ ಹೋರಾಟ ಮುಂದುವರಿಸಿದ ಅವರಿಗೆ ಕಡೆಗೆ 2017 ರಲ್ಲಿ ಅದ್ರುಶ್ಟ ಕೈಗೂಡಿತು. ಆ ವರ‍್ಶ ಕೆನೆಡಾದ ಗೇಬ್ರಿಯೇಲಾ ಡಬ್ರೋಸ್ಕಿರೊಂದಿಗೆ ಮಿಶ್ರ ಡಬಲ್ಸ್ ಆಡಿದ ಬೋಪಣ್ಣ, ‘ಪ್ರೆಂಚ್ ಓಪನ್’ ಅನ್ನು ನಿರಾಯಾಸಯಾಗಿ ಜಯಗಳಿಸಿ ತಮ್ಮ ಬಹುಕಾಲದ ಗ್ರಾಂಡ್‌ಸ್ಲ್ಯಾಮ್ ಬರವನ್ನು ನೀಗಿಸಿಕೊಂಡರು. ಆ ಬಳಿಕ 2018 ಮತ್ತು 2023 ರ ಆಸ್ಟ್ರೇಲಿಯಾ ಓಪನ್ ನ ಮಿಶ್ರ ಡಬಲ್ಸ್ ಪೈನಲ್ ಲಿ ಎಡವಿದ್ದು ಅವರಿಗೆ ತೀವ್ರ ನಿರಾಸೆ ಮೂಡಿಸಿತು. ಅದರಲ್ಲೂ 2023 ರಲ್ಲಿ ಸಾನಿಯಾ ಮಿರ‍್ಜಾರೊಂದಿಗೆ ಜೋಡಿಯಾಗಿ ಆಡಿದ ಪೈನಲ್ ಸೋತದ್ದು ಮಾತ್ರ ಬಾರತಕ್ಕೆ ದೊಡ್ಡ ಆಗಾತ ಎಂದು ಪತ್ರಿಕೆಗಳು ವರದಿ ಮಾಡಿದವು. ಆ ವರದಿಗಳಲ್ಲಿ ಹುರುಳಿಲ್ಲದೇ ಇರಲಿಲ್ಲ. ಏಕೆಂದರೆ ಬಾರತೀಯರಿಬ್ಬರು ತಂಡವಾಗಿ ಕಣಕ್ಕಿಳಿದು ಗ್ರಾಂಡ್‌ಸ್ಲ್ಯಾಮ್ ಒಂದನ್ನು ಗೆದ್ದು ಒಂದು ದಶಕಕ್ಕಿಂತ ಹೆಚ್ಚು ಕಾಲ ಆಗಿತ್ತು. ನಂತರ ಗಂಡಸರ ಡಬಲ್ಸ್ ಪೋಟಿಯಲ್ಲಿ 2023 ರ ಅಮೇರಿಕ ಓಪನ್ ಪೈನಲ್ ನಲ್ಲಿ ಮತ್ತೊಮ್ಮೆ ಮುಗ್ಗುರಿಸಿದ್ದು ಬೋಪಣ್ಣರಿಗೆ ಗಾಯದ ಮೇಲೆ ಬರೆ ಎಳೆದಂತಾಯಿತು. ಹಲವಾರು ತಿಂಗಳು ಕಾಲ ಗೆಲುವು ಎಂಬುದೇ ಮರೀಚಿಕೆಯಾಗಿದ್ದ ಕಾಲದಲ್ಲಿ ಇನ್ನೇನು ಬೋಪಣ್ಣ ನಿವ್ರುತ್ತರಾಗಲಿದ್ದಾರೆ ಎಂದೇ ಎಲ್ಲರೂ ಎಣಿಸಿದ್ದಾಗ ಅವರು ಮಾತ್ರ ಮಗದೊಮ್ಮೆ ಪೀನಿಕ್ಸ್ ನಂತೆ ಮೇಲೆದ್ದು ರಾಕೆಟ್ ಹಿಡಿದರು. ತಮ್ಮ 43ನೇ ವಯಸ್ಸಿನಲ್ಲಿ ಮ್ಯಾತೀವ್ ಎಬ್ಡೆನ್ ರೊಂದಿಗೆ ಆಡಿ 2024 ರ ಆಸ್ಟ್ರೇಲಿಯಾ ಓಪನ್ ಅನ್ನು ತೆಕ್ಕೆಗೆ ಹಾಕಿಕೊಂಡು, ಗೆಲುವಿನ ಹಸಿವಿದ್ದರೆ ವಯಸ್ಸೆಂಬುದು ಒಂದು ಸಂಕ್ಯೆಯಶ್ಟೇ ಎಂದು ನಿರೂಪಿಸಿ ಪ್ರಪಂಚವೇ ಕೊಂಡಾಡುವಂತಹ ಸಾದನೆಗೈದರು ನಮ್ಮ ನಾಡಿನ ಹೆಮ್ಮೆ ರೋಹನ್ ಬೋಪಣ್ಣ! ಇದರಿಂದ ತಮ್ಮ ಗ್ರಾಂಡ್‌ಸ್ಲ್ಯಾಮ್ ಎಣಿಕೆಯನ್ನು ಎರಡಕ್ಕೆ ಏರಿಸಿಕೊಂಡ ಅವರು, ಆಟದಿಂದ ದೂರ ಸರಿಯದೆ ತಮ್ಮ ರಾಕೆಟ್ ಚಳಕವನ್ನು ಇನ್ನಶ್ಟು ಪಕ್ವಗೊಳಿಸುತ್ತಾ ಮುಂದಿನ ಸವಾಲುಗಳಿಗೆ ಸಿದ್ದರಾಗುತ್ತಿರುವುದು ಅವರ ಗಟ್ಟಿತನ ಹಾಗೂ ಚಲಕ್ಕೆ ಜೀವಂತ ಉದಾಹರಣೆ.

2019 ರಲ್ಲಿ ‘ಅರ‍್ಜುನ’ ಪ್ರಶಸ್ತಿಯನ್ನು ಗೆದ್ದಿದ್ದ ರೋಹನ್ ಬೋಪಣ್ಣ ಈ ವರ‍್ಶದ ಗ್ರಾಂಡ್‌ಸ್ಲ್ಯಾಮ್ ಗೆಲುವಿನ ಬೆನ್ನಲ್ಲೇ ಬಾರತದ ಪ್ರತಿಶ್ಟಿತ ‘ಪದ್ಮಶ್ರೀ’ ಪ್ರಶಸ್ತಿಗೂ ಬಾಜನರಾದರು. ನಮ್ಮ ನಾಡಿನ ಎಲ್ಲಾ ಆಟಗಾರರಂತೆ ಇವರೂ ಕೂಡ ವ್ರುತ್ತಿಪರತೆ ಹಾಗೂ ವಿವಾದಗಳಿಂದ ದೂರ ಉಳಿದು ತಮ್ಮ ನೇರ‍್ಮೆಯ ನಡವಳಿಕೆಯಿಂದ ಕರ‍್ನಾಟಕದ ಹೆಸರನ್ನು ಅಂತರಾಶ್ಟ್ರೀಯ ಮಟ್ಟದಲ್ಲಿ ಬೆಳಗಿದ್ದಾರೆ. ಆಟದ ಅಂಗಳದಲ್ಲಿ ಎರಡು ದಶಕಗಳ ಕಾಲ ಬೆವರು ಹರಿಸಿರುವ ನಮ್ಮ ಬೆಂಗಳೂರಿನ ಹುಡುಗ ಬೋಪಣ್ಣರಿಗೆ ಹುಲ್ಲು-ಹಾಸಿನ ಕೋರ‍್ಟ್ ಗಳು ಅಚ್ಚುಮೆಚ್ಚು. ಹಾಗಾಗಿ ವಿಂಬಲ್ಡನ್ ಗ್ರಾಂಡ್‌ಸ್ಲ್ಯಾಮ್ ಗೆಲ್ಲುವ ಆಸೆಯನ್ನು ಹೊತ್ತು ಇನ್ನೂ ಅಬ್ಯಾಸದಲ್ಲಿ ನಿರತರಾಗಿರುವ ಅವರ ಹಂಬಲ ಈಡೇರಲಿ ಎಂಬುದೇ ಬಾರತದ ಟೆನ್ನಿಸ್ ಅಬಿಮಾನಿಗಳಲ್ಲರ ಹಾರೈಕೆ. ಈಗಾಗಲೇ ಹುಟ್ಟೂರಾದ ಬೆಂಗಳೂರಿನಲ್ಲಿ ತಮ್ಮದೇ ಆದ ಟೆನ್ನಿಸ್ ಅಕ್ಯಾಡೆಮಿಯೊಂದನ್ನು ತೆರೆದು ಮುಂದಿನ ಪೀಳಿಗೆಯ ಯುವ ಆಟಗಾರರಿಗೆ ತರಬೇತಿ ನೀಡುತ್ತಿರುವ ಬೋಪಣ್ಣರಿಗೆ ದೇಶದ ಟೆನ್ನಿಸ್ ಬವಿಶ್ಯದ ಬಗ್ಗೆ ಬಹಳಶ್ಟು ನಿರೀಕ್ಶೆಗಳಿವೆ. ಸಿಂಗಲ್ಸ್ ನಲ್ಲಿ ಗ್ರಾಂಡ್‌ಸ್ಲ್ಯಾಮ್ ಗೆಲ್ಲುವಂತಹ ಆಟಗಾರರು ನಮ್ಮಲ್ಲೂ ಬರಬೇಕು ಎಂಬುದು ಅವರ ಬದುದಿನದ ದೊಡ್ಡ ಕನಸು. ಅವರ ಈ ಕನಸು ನಮ್ಮ ಕಾಲಮಾನದಲ್ಲಿ ನನಸಾಗಲಿ ಎಂದು ಹರಸುತ್ತಾ ಬೋಪಣ್ಣರ ಮುಂದಿನ ಟೆನ್ನಿಸ್ ಪಯಣಕ್ಕೆ ಶುಬ ಕೋರೋಣ!

(ಚಿತ್ರ ಸೆಲೆ:  hindustantimes.com, wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks