ಕಾರದ ಕೋಳಿ ಬಾಡು
– ನಿತಿನ್ ಗೌಡ.
ಬೇಕಾಗುವ ಸಾಮಾನುಗಳು
- ಕೋಳಿ ಮಾಂಸ – ಅರ್ದ ಕಿಲೋ
- ಬೆಳ್ಳುಳ್ಳಿ – 12 -14 ಎಸಳು
- ಶುಂಟಿ – 2 ಇಂಚು
- ಗರಂ ಮಸಾಲೆ – ಒಂದು ಚಮಚ
- ಮೊಸರು – ಅರ್ದ ಕಪ್ಪು
- ಕಾರದ ಪುಡಿ – 2 ಚಮಚ
- ಅರಿಶಿಣ – ಅರ್ದ ಚಮಚ
- ಉಪ್ಪು – ರುಚಿಗೆ ತಕ್ಕಶ್ಟು
- ಕಾಳುಮೆಣಸು – 1 ಚಮಚ
- ಎಣ್ಣೆ – ಕರಿಯಲು ಬೇಕಾದಶ್ಟು
- ನಿಂಬೆ ಹಣ್ಣು – 1
ಮಾಡುವ ಬಗೆ
ಮೊದಲಿಗೆ ಕೋಳಿ ಕಾಲಿನ ತುಂಡುಗಳನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿರಿ. ಜೊತೆಗೆ ಶುಂಟಿ, ಬೆಳ್ಳುಳ್ಳಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿರಿ. ಈಗ ಕೋಳಿಗೆ ಅರಿಶಿಣ, ಉಪ್ಪು ಸವರಿ ಅರ್ದ ಗಂಟೆ ಬಿಡಿ. ಈಗ ಇನ್ನೊಂದು ಪಾತ್ರೆಯಲ್ಲಿ ಮೊಸರು, ಕಾರದ ಪುಡಿ, ಮೆಣಸಿನ ಪುಡಿ, ಶುಂಟಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆ, ಅರ್ದ ಹೊಳಕೆ ನಿಂಬೆ ಹುಳಿ ಹಾಕಿ ಕಲಸಿಕೊಳ್ಳಿರಿ. ನಂತರ ಇದನ್ನು ಕೋಳಿಗೆ ಸವರಿ 5-6 ಗಂಟೆ ಹಾಗೇ ಇಡಿ.
ಈಗ ಇದನ್ನು ತಂದೂರಿ ಮಾದರಿ ಬೇಕಾದಲ್ಲಿ ಒಂದು ಪಾನ್ ಗೆ ಎಣ್ಣೆ ಹಾಕಿ, ಸ್ವಲ್ಪ ಹುರಿದುಕೊಳ್ಳಿರಿ. ನಂತರ ಇದನ್ನು ಒಂದು ಗ್ರಿಲ್ ಗೆ ಹಾಕಿ ಬೆಂಕಿಯಲ್ಲಿ ಸುಡಬೇಕು. ಒಲೆಯ ಬೆಂಕಿಯಲ್ಲಿ ಹೊಗೆಯ ಗಮ ಕೂಡಿ ಇನ್ನೂ ಚೆನ್ನಾಗಿರುತ್ತದೆ. ತಂದೂರಿ ಬೇಡವಾದಲ್ಲಿ, ಈ ಮೇಲಿನ ತಿಟ್ಟದಲ್ಲಿ ತೋರಿಸಿದಂತೆ, ಇದನ್ನು ನೇರವಾಗಿ ಎಣ್ಣೆಯಲ್ಲಿ ಕರಿದು ತೆಗೆದು, ಅದರ ಮೇಲೆ ಚೂರು ನಿಂಬೆ ಹುಳಿ ಇಲ್ಲವೇ ಕಾಳುಮೆಣಸಿನ ಪುಡಿ ಉದುರಿಸಿಕಂಡು ತಿನ್ನಬಹುದು. ಇದನ್ನು ಚೆಂದಗಾಣಿಸಲು ಈರುಳ್ಳಿ, ಸವತೆಕಾಯಿ ಹೆಚ್ಚಿ ಇದರ ಸುತ್ತ ಇಡಬಹುದು.
(ಚಿತ್ರಸೆಲೆ: ಬರಹಗಾರರದ್ದು)
ಇತ್ತೀಚಿನ ಅನಿಸಿಕೆಗಳು