ಯುಎಪ್ಓ – ಇಲ್ಲಿ ರಾತ್ರಿಯ ಅನುಬವ ಪಡೆಯಿರಿ

– .

ಬೇರೆ ಗ್ರಹದಿಂದ ಬೂಮಿಗೆ ಬರುವ ವಸ್ತುವನ್ನು ಮೊದಮೊದಲು “ಹಾರುವ ತಟ್ಟೆ” ಎಂದು ಗುರುತಿಸಲಾಗುತಿತ್ತು. ಕ್ರಮೇಣ ಅದರ ಪೂರ‍್ವಾಪರ ತಿಳಿಯದ ಕಾರಣ ಅದು “ಅಪರಿಚಿತ ಹಾರಾಡುವ ವಸ್ತು” ಎಂದು ಕರೆಯಲ್ಪಟ್ಟಿತು. ಇದೇ ಕಾರಣಕ್ಕೆ ಅದನ್ನು ಇಂಗ್ಲೀಶ್ ನಲ್ಲಿ “ಅನ್ ಐಡೆಂಟಿಪೈಡ್ ಪ್ಲಯಿಂಗ್ ಆಬ್ಜೆಕ್ಟ್” (Unidentified flying object) ಎನ್ನುತ್ತಾರೆ. ಮಾನವ ತಾನು ಕಲ್ಪಿಸಿಕೊಂಡ ಅತ್ಯಂತ ಸುಂದರ ವಸ್ತು ಇದಾಗಿರಬಹುದೆ? ನಿಜವಾದ ಯುಎಪ್ಓ ನೋಡಿದವರಿಲ್ಲ. ಆದರೆ ಕಲ್ಪನೆಗೆ ಮಿತಿಯಿದೆಯೆ? ಕಂಡಿತ ಇಲ್ಲ. ಅಂತಹ ಅದ್ಬುತ ಕಲ್ಪನೆಯಲ್ಲಿ ಮೂಡಿಬಂದಿರುವುದೇ ಯುಎಪ್ಓ ಹೋಟೆಲ್.

ಮರಗಳಿಂದ ಸುತ್ತುವರೆದ ದಟ್ಟ ಕಾಡಿನಲ್ಲಿ ಪಕ್ಶಿಗಳ ಗೂಡಿನಂತಹ ಕೋಣೆಗಳನ್ನು ಕಂಡಿರಬಹುದು, ನೆಲದಿಂದ ಹತ್ತಾರು ಅಡಿ ಎತ್ತರದಲ್ಲಿ ನಿರ‍್ಮಿಸಿರುವ ಚಿತ್ರ ವಿಚಿತ್ರ ರೀತಿಯ ಮರದ ಕೋಣೆಗಳನ್ನು ಕಂಡಿರಬಹುದು. ಅವುಗಳಲ್ಲಿ ಒಮ್ಮೆಯಾದರೂ ರಾತ್ರಿ ಕಳೆಯುವ ಆಸೆ ಹುಟ್ಟುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ಯುಎಪ್ಓ ಮಾದರಿಯ ಅನನ್ಯ ಹೋಟೇಲಿನ ರೂಮು ಸಿಕ್ಕರೆ, ಅಂತಹ ವಿಶಿಶ್ಟವಾದ ಕೋಣೆಯಲ್ಲಿ ಒಂದು ರಾತ್ರಿ, ಅದೂ ತಮ್ಮ ಪ್ರೀತಿಪಾತ್ರರೊಂದಿಗೆ ಕಳೆಯುವ ಅನುಬವ ಬಣ್ಣಿಸಲಾಗದು.

ಯುಎಪ್ಓದ ವಿಶಿಶ್ಟ ವಿನ್ಯಾಸ ಮಾತ್ರ ಅದರ ಆಕರ‍್ಶಣೆಯಲ್ಲ, ಅದರ ನಿಜವಾದ ಆಕರ‍್ಶಣೆಯಿರುವುದು ಅದಿರುವ ಸ್ತಳದಲ್ಲಿ. ಪೈನ್ ಕಾಡಿನ ವಿಶಾಲವಾದ ಪ್ರದೇಶದಲ್ಲಿ ನೆಲೆಗೊಂಡಿರುವ ಯುಎಪ್ಓ ಕೋಣೆಯು ಲುಲ್ ನದಿಯ ವಿಶಿಶ್ಟ ನೋಟವನ್ನು ಒದಗಿಸುತ್ತದೆ. ಈ ಟ್ರೀ ಹೋಟೆಲ್ ರೆಸಾರ‍್ಟ್ ನಲ್ಲಿರುವ ಇತರ ವಿಶಿಶ್ಟ ಕೋಣೆಗಳಂತೆಯೇ, ಯುಎಪ್ಓ ಕೂಡ ನೆಲದಿಂದ 4 ರಿಂದ 6 ಮೀಟರ್ ಎತ್ತರದಲ್ಲಿದೆ. ಇದರಲ್ಲಿ ಕುಳಿತು ಅತಿ ಸುಂದರವಾದ ಸುತ್ತಮುತ್ತಲಿನ ಬೂದ್ರುಶ್ಯವನ್ನು ಆಸ್ವಾದಿಸಬಹುದು. ಇದರ ಒಳ ಹೋಗಲು ಇಳಿಜಾರು ಸೇತುವೆಯನ್ನು ಬಳಸಬಹುದು ಇಲ್ಲವೇ ವಿದ್ಯುತ್ ಮೆಟ್ಟಿಲುಗಳನ್ನು ಬಳಸಬಹುದು.

ಸ್ವೀಡನ್ನಿನ ಈ ಟ್ರೀ ಹೋಟೆಲಿನಲ್ಲಿ ಮೊದಲ ನಾಲ್ಕು ಕೋಣೆಗಳಲ್ಲಿ ನೀವು ಉಳಿದರೆ ವಿಶಿಶ್ಟ ಅನುಬವ ನಿಮ್ಮದಾಗುತ್ತದೆ. ಕೋಣೆಗಳ ಸುತ್ತಮುತ್ತಲಿನ ಪ್ರದೇಶ ಕಣ್ಮರೆಯಾಗುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಕನ್ನಡಿಗಳಿಂದ ತುಂಬಿದ ಕೋಣೆಯ ಒಳ ಹೊಕ್ಕರೆ ಕೋಣೆಯ ಸುತ್ತಮುತ್ತಲಿನ ಪರಿಸರದ ಪ್ರತಿಬಿಂಬಗಳೇ ತುಂಬಿದಂತೆ ಕಾಣುತ್ತದೆ. ಮತ್ತೊಂದು ಕೋಣೆ ‘ದಿ ಬರ‍್ಡ್ಸ್ ನೆಸ್ಟ್’ ಹಕ್ಕಿಗಳ ಗೂಡಿನಂತಹುದು. ಕೊಂಬೆಗಳ ನಡುವೆ ಕಾಣದಂತೆ ಮುಚ್ಚಲ್ಪಟ್ಟಿರುತ್ತದೆ. ನಂತರದ ಕೋಣೆಯೇ ಯುಎಪ್ಓ ಕೋಣೆ. ಇವೆಲ್ಲಕ್ಕಿಂತಲೂ ತೀರಾ ಬಿನ್ನ.

ಯುಎಪ್ಓ ಹೋಟೆಲ್ ಸ್ವೀಡನ್ ನ ಲುಲಿಯಾ ವಿಮಾನ ನಿಲ್ದಾಣದಿಂದ ಸರಿಸುಮಾರು ಒಂದು ಗಂಟೆ ಪ್ರಯಾಣದಶ್ಟು ದೂರದಲ್ಲಿದೆ. ಈ ಯುಎಪ್ಓ ಟ್ರಿ ಹೌಸ್ ಲೋಹದಿಂದ ಮಾಡಲಾಗಿದ್ದು, ಅದನ್ನು ತಂತಿಗಳ ಸಹಾಯದಿಂದ ನಾಲ್ಕು ಮರಗಳಿಗೆ ತೂಗುಹಾಕಲಾಗಿದೆ. ಇದರಿಂದಾಗಿ ಅಕ್ಕ ಪಕ್ಕದ ಮರಗಳು ಇದಕ್ಕೆ ಸದಾ ಕಾಲ ತಂಪನ್ನೀಯುತ್ತವೆ. ಬೂಮ್ಯಾತೀತ ಅನುಬವವನ್ನು ಹಂಬಲಿಸುವವರಿಗೆ ಈ ಹೋಟೆಲ್ ಬಣ್ಣಿಸಲಾಗದ ಅನುಬವವನ್ನು ನೀಡುತ್ತದೆ. ಇದರ ಒಳ ಹೊಕ್ಕವರಿಗೆ, ಯಾವುದೇ ಕ್ಶಣದಲ್ಲಾದರೂ ಈ ಯುಎಪ್ಓ ಮೇಲಕ್ಕೆ ಹಾರಿ, ನಬದಲ್ಲಿನ ನಕ್ಶತ್ರಪುಂಜದಲ್ಲಿ ತನ್ನ ಸ್ವಸ್ತಾನ ಸೇರಬಹುದು ಎಂಬ ಅನಿಸಿಕೆ ಮೂಡುವುದು ಸಾಮಾನ್ಯ. ಇಂತಹ ಅನನ್ಯ ಅನುಬವ ನೀಡುವ ಲೋಹದ ಯುಎಪ್ಓ ರೂಮನ್ನು ತಯಾರಿಸಿದ ವ್ಯಕ್ತಿ ಯಾರಿರಬಹುದು? ಎಂಬ ಕುತೂಹಲ ಮೂಡುವುದು ಸಹಜ. ಇದರ ರೂವಾರಿ ವಾಸ್ತು ಶಿಲ್ಪಿ ಬರ‍್ಟಿಲ್ ಹಾರ‍್ಸ್ಟೋಮ್. ಇದರ ವಿಶಿಶ್ಟ ರಚನೆ ಅತ್ಯಂತ ಮಹತ್ವಾಕಾಂಕ್ಶೆಯದಾಗಿತ್ತು. ಈ ಪ್ರದೇಶಕ್ಕೆ ಬರುವವರ ಗಮನವನ್ನು ಸೆಳೆಯುವುದು ಹಾಗೂ ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡುವಂತೆ ಮಾಡುವುದೇ ಆತನ ಇಚ್ಚೆಯಾಗಿತ್ತು.

ಯುಎಪ್ಓ ರೂಮುಗಳ ಒಳಾಂಗಣದಲ್ಲಿ ಆಕಾಶದ ಚಿತ್ರಣವಿದ್ದು, ರೂಮಿನ ಒಳ ಚಾವಣಿಯಲ್ಲಿ ನಕ್ಶತ್ರಗಳು ಮಿನುಗುವಂತೆ ಚಿತ್ರಿಸಲಾಗಿದೆ. ಮಲಗುವ ಹಾಸಿಗೆ ದಿಂಬುಗಳನ್ನೂ ಸಹ ಇದಕ್ಕೆ ಪೂರಕವಾಗಿ ರಚಿಸಲಾಗಿದೆ. ಇದಕ್ಕೆ ಅಳವಡಿಸಿರುವ ಚಿಕ್ಕ ಚಿಕ್ಕ ಕಿಟಕಿಗಳು, ಯುಎಪ್ಓದ ಸುತ್ತುವರೆದ ಕಾಡಿನ ಆಕಾಶದೆತ್ತರದ ಮರಗಳ ದ್ರುಶ್ಯವನ್ನು ನೋಡಲು ಅನುವು ಮಾಡಿಕೊಡುತ್ತವೆ. ಈ ಯುಎಪ್ಓ ರೂಮುಗಳನ್ನು ತಂತಿಗಳ ಸಹಾಯದಿಂದ ತೂಗುಹಾಕಲಾಗಿರುವುದರಿಂದ ಇವು ಸದಾಕಾಲ ತೂಗಾಡುತ್ತಿರುತ್ತವೆ. ಇಂತಹ ಚಲನೆಯನ್ನು ಇಶ್ಟಪಡದವರಿಗೆ ಇದು ಸೂಕ್ತ ಸ್ತಳವಲ್ಲ. ಸರಿ ರಾತ್ರಿಯ ಸಮಯದಲ್ಲಿ ಎಚ್ಚರವಾದಲ್ಲಿ, ಇದರಲ್ಲಿ ಮಲಗಿದ್ದವರಿಗೆ ತಾವು ಬ್ರಹ್ಮಾಂಡದಲ್ಲಿ ತೇಲುತ್ತಿರುವಂತೆ ಹಾಗೂ ಬಾಹ್ಯಾಕಾಶ (ಹೊರಬಾನು) ದಲ್ಲಿ ಮೇಲಕ್ಕೆ ಏರುತ್ತಿರುವ ಚೆಂದದ ಅನುಬವವಾಗುತ್ತದೆ.

ಐದು ಮಂದಿ ಅತಿತಿಗಳಿಗೆ ಅವಕಾಶವಿರುವ ಯುಎಪ್ಓ ಕೋಣೆ, ಮೂವತ್ತು ಚದರ ಮೀಟರ್ ನಶ್ಟು ವಿಸ್ತೀರ‍್ಣ ಹೊಂದಿದೆ. ಇಬ್ಬರು ವಯಸ್ಕರು ಮತ್ತು ಇಬ್ಬರು ಮಕ್ಕಳಿಗೆ ಒಂದು ರಾತ್ರಿ ತಂಗಲು 490 ಯುರೋಗಳ ಬಾಡಿಗೆ ಪಾವತಿಸಬೇಕಾಗುತ್ತದೆ. ಕುಟುಂಬಕ್ಕೆ ಸೂಕ್ತವಾದ ಈ ಕೋಣೆಯಲ್ಲಿ ವಾಸಿಸುವ ಪ್ರದೇಶ ಮತ್ತು ಸ್ನಾನದ ಮನೆಯನ್ನು ಆದುನಿಕ ದಿನದ ಪ್ರವಾಸಿಗರನ್ನು ಗಮನದಲ್ಲಿರಿಸಿಕೊಂಡು ರಚಿಸಲಾಗಿದೆ. ಬೂಮಿಯ ಮೇಲೆ ಯುಎಪ್ಓದ ವಿಶಿಶ್ಟ ಅನುಬವವನ್ನು ತಮ್ಮದಾಗಿಸಿಕೊಳ್ಳುವ ಇಚ್ಚೆಯಿರುವವರು ತಮ್ಮ ಕನಸನ್ನು ಇಲ್ಲಿ ನನಸು ಮಾಡಿಕೊಳ್ಳಬಹುದು.

(ಮಾಹಿತಿ ಮತ್ತು ಚಿತ್ರ ಸೆಲೆ: treehotel.se, wired.co.uk, treehousemap.com, canopyandstars.co.uk, theodderway.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಧನ್ಯವಾದ ಸಂಪಾದಕ ಬಳಗಕ್ಕೆ 🙏

ಅನಿಸಿಕೆ ಬರೆಯಿರಿ: