ಹಾಸ್ಯ ಬರಹ: ಶನಿ ಹಿಡ್ದು ಸಂತೆಗೆ ಹೋದ್ರೆ…?

– .

ದೊಡ್ಡ ದೊಡ್ಡ ಉದ್ಯಮದಾರರು ಕೋಟಿಗಟ್ಟಲೆ ಸಾಲದ ಹಣವನ್ನು ಬ್ಯಾಂಕಿಗೆ ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾಗಿ ಆರಾಮವಾಗಿ ಕಾಲಕಳೆಯುತ್ತಿರುವಾಗ, ದೀಡಿರ್ ಹಣ ಮಾಡುವ ಉಮೇದು ಪರಮಶೆಟ್ಟರ ಕಿರಾಣಿ ಅಂಗಡಿಯ ಸಾಮಾನು ಕಟ್ಟಿಕೊಡುವ ಪಡಪೋಶಿ ಪರಣ್ಣನಿಗೂ ತಲೆಯಲ್ಲಿ ಹಾದು ಹೊದದ್ದು ನಿಜ. ಆಗ ದಿನಕ್ಕೆ ಕೊಡುತಿದ್ದ ಐವತ್ತು ರೂಪಾಯಿ ಸಂಬಳದಲ್ಲಿ ಹತ್ತು ರೂಪಾಯಿ ಓಸಿಗೂ (open close ಮಟ್ಕಾ) ಹತ್ತು ರೂಪಾಯಿ ಸಂಜೆಗೆ ಕೆಂಪು ಬಣ್ಣದ ಶೀಸೆಗೂ ಇಟ್ಟರೆ ಇನ್ನುಳಿದ ಇಪ್ಪತೈದು ರೂಪಾಯಿಯಲ್ಲಿ ಅವನ ಸಂಸಾರ ತೂಗಿಸುವುದು (ಹೆಂಡತಿ, ಮೂರು ಮಕ್ಕಳು) ಹಳವಂಡವಾಗುತಿತ್ತು. ಮಟ್ಕಾ ಆಡೋದು ಸಂಜೆಗೆ ಒಂದಿಶ್ಟು ಸಾರಾಯಿ ಹುಯ್ದುಕೊಳ್ಳೋದು ಬಿಟ್ಟರೆ ಪರಣ್ಣ ಈ ಪರಮಶೆಟ್ಟರ ಪರಂಪರಾಗತ ಕಿರಾಣಿ ಅಂಗಡಿಗೆ ಪ್ರಾಮಾಣಿಕ ಸೇವಕನಾಗಿದ್ದ.

ಪರಣ್ಣನ ಪ್ರಾಮಾಣಿಕತೆಗೆ ಮೆಚ್ಚಿ ಪರಮಶೆಟ್ಟರು ತಮ್ಮ ದಾಸ್ತಾನು ಮಳಿಗೆಯಿಂದ ಕಿರಾಣಿ ಸಾಮನುಗಳನ್ನು ಲಾರಿಗೆ ಲೋಡಿಂಗ್ ಅನ್ನ್ಲೋಡಿಂಗ್ ಮಾಡಿ ಲೆಕ್ಕ ಬರೆದುಕೊಳ್ಳುವ ಕೆಲಸದ ಉಸ್ತುವಾರಿಗೂ ಹಾಕುತಿದ್ದರು. ಅವನ ಎಂದೂ ಕೈಕೊಡದೆ ಕೆಲಸ ಸರಾಗವಾಗಿ ಮಾಡಿ ಮುಗಿಸುತಿದ್ದ. ಮನೆಯಲ್ಲಿ ತಿನ್ನುವ ಬಾಯಿಗಳು, ಶಾಲೆಗೆ ಹೋಗುವ ಹೈಕ್ಳು, ಹೆಂಡತಿಯ ಕಾಯಿಲೆ ಕಸಾಲಿಕೆ, ಅವನ ಬೆನ್ನು ಬಿಡದ ಮಟ್ಕಾ, ನಶೆಯೇರಿಸೋ ಸರಾಯಿ ಇವುಗಳಿಗೆ ಹೇಗೆ ಹಣ ಹೊಂದಿಸುವುದು? ಒಮ್ಮೊಮ್ಮೆ ತಲೆ ಬಿಸಿಯಾಗಿ ಪ್ರಾಮಾಣಿಕತೆ ಕೈ ಕೊಡುತಿತ್ತು.

ಅಂದು ಯಾರೋ ಗ್ಯಾರಂಟಿ ಹೇಳಿದ್ರು ಅಂತ ಡಬಲ್ ಒಂದು ನಂಬರ್ ಗೆ ಮೂವತ್ತು ರೂಪಾಯಿ ಒಸಿ ಕಟ್ಟಿ ಉಳಿದ ಇಪ್ಪತ್ತು ರೂಪಾಯಿಯಲ್ಲಿ ನಶೆಯೇರಿಸಿಕೊಂಡು ನಾಳೆ ಬೆಳಕು ಹರಿದರೆ ಮುನ್ನೂರು ರೂಪಾಯಿ ಒಸಿ ಗೆಲ್ಲುತ್ತೇನೆ ಮತ್ತೇನು ಹಣದ ಚಿಂತೆ ಎಂದು ಕನಸು ಕಾಣುತ್ತ ಕುಶಿಯಲ್ಲಿ ಮನೆ ಸೇರಿದ. ಬೆಳಿಗ್ಗೆ ಬೆಳಿಗ್ಗೆನೆ ಪರಣ್ಣ ಒಸಿ ಕಟ್ಟಿಸಿಕೊಳ್ಳೋ ಪಾಂಡಣ್ಣನ ಪೆಟ್ಟಿಗೆ ಅಂಗಡಿ ಮುಂದೆ ಬಂದ. ಆದರೆ ಅಂದು ಡಬಲ್ ಎರಡು ನಂಬರ್ ಹೊಡೆದು ಪರಣ್ಣನ ಲೆಕ್ಕಚಾರ ಉಲ್ಟಾ ಆಗಿತ್ತು. ಪಾಪ ಪರಣ್ಣನಿಗೆ ದಿಗಿಲು ಬಡಿದಿತ್ತು. ಮನೆಯಲ್ಲಿ ಕರ‍್ಚಿಗೆ ಒಂದು ನಯಾಪೈಸೆ ಇಲ್ಲ. ಹೆಂಡತಿಗೆ ಔಶದಿ ಮಾತ್ರೆ ತಗೊಂಡು ಬರ‍್ತಿನಿ ಅಂತ ಬೇರೆ ಹೇಳಿದ್ದ. ಅಂದು ಬೆಳಿಗ್ಗೆ ತಲೆ ಕೆರೆದುಕೊಂಡೆ ಅಂಗಡಿಗೆ ಬಂದ.

ಪರಮ ಶೆಟ್ಟರು ಪರಣ್ಣನಿಗೆ ಅಂದು “ಗೋದಾಮಿಗೆ ಹೋಗಿ ಮೆಣಸಿನಕಾಯಿ ಮೂಟೆ ಲಾರಿಗೆ ಲೋಡ್ ಮಾಡ್ಸಿ ಲೆಕ್ಕ ತಗೊಂಡು ಬಾ” ಎಂದು ಹೇಳಿದರು. ಅಂದು ಯಾಕೋ ಅವನಿಗೆ ಅತಿ ಪ್ರಾಮಾಣಿಕತೆಯಿಂದ ಪ್ರಯೋಜನವಿಲ್ಲ ಎನಿಸಿ, ಹೆಂಗಾದ್ರೂ ಮಾಡಿ ಕಳೆದುಕೊಂಡ ಹಣ ಪಡೆದುಕೊಳ್ಳಬೇಕು ಎಂದುಕೊಂಡ. ಗೋದಾಮಿನಿಂದ ಮೆಣಸಿನಕಾಯಿ ಚೀಲ ಲಾರಿಗೆ ಲೋಡ್ ಮಾಡುವ ಮುನ್ನ ತನ್ನ ಪರಮಾಪ್ತರಲ್ಲಿ ಒಬ್ಬನಾದ ಹಮಾಲಿ ಶಂಬಣ್ಣನನ್ನು ಬದಿಗೆ ಕರೆದು “ಮೆಣಸಿನಕಾಯಿ ಚೀಲ ಲೋಡು ಮಾಡುವ ಲೆಕ್ಕದಲ್ಲಿ ಒಂದು ಚೀಲ ಎತ್ತಿ ಕಾಂಪೌಂಡ್ ಬದಿಗೆ ಹಾಕ್ತೀನಿ, ನೀನು ಸಂಜೆ ಕತ್ತಲಲ್ಲಿ ಬಂದು ಹೊತ್ಕಂಡು ಹೋಗಿ ಊರ ಹೊರಗೆ ‘ಇಂದು ನನಗೆ ನಾಳೆಗೆ ನಿನಗೆ’ ಅಂತ ಬೋರ‍್ಡ್ ಬರೆದಿದೆಯಲ್ಲ ಕಿರಿಸ್ತಾನರ ಸ್ಮಶಾನ ಅದರೊಳಗೆ ಒಂದು ಆಲದಮರ ಐತೆ ಅದರ ಹಿಂದೆ ಬಚ್ಚಿಡು ನಿನಗೆ ಸಾಯಂಕಾಲ ಕರ‍್ಚಿಗೆ ಐವತ್ತು ರೂಪಾಯಿ ಕೊಡ್ತೀನಿ” ಎಂದು ಕರಾರು ಮಾಡಿಕೊಂಡ. ಸಂಜೆ ಅಂಗಡಿಯೆಲ್ಲ ಮುಗಿಸಿ ರಾತ್ರಿ ಒಂಬತ್ತು ಗಂಟೆಗೆ ಗಡಿಬಿಡಿಯಿಂದ ಹೊರಟ ಪರಣ್ಣ ಸೀದಾ ಸ್ಮಶಾನಕ್ಕೆ ಎಂಟ್ರಿ ಕೊಟ್ಟ. ಅಮವಾಸ್ಯೆ ಕತ್ತಲು ಬೇರೆ, ತನ್ನ ಬಳಿಯಿದ್ದ ಪೆನ್ ಟಾರ‍್ಚಿನಿಂದ ಮಂದ ಬೆಳಕು ಬೀರುತ್ತ ಅಡ್ಡಲಾಗಿದ್ದ ಗೋರಿಗಳಿಗೆ, ಕಲ್ಲುಗಳಿಗೆ ಎಡವುತ್ತ ಬೀಳುತ್ತ ತನಗೆ ತಾನೆ ಶಪಿಸಿಕೊಳ್ಳುತ್ತ ಆಲದಮರದ ಬಳಿ ಹೋಗಿ ಟಾರ‍್ಚಿನ ಮಂದ ಬೆಳಕು ಬಿಟ್ಟರೆ ಮರದ ಬಿಳಲುಗಳು ಗಾಳಿಗೆ ಅತ್ತಿಂದಿತ್ತ ತೂಗಿ ದೆವ್ವಗಳಂತೆ ನರ‍್ತಿಸುವುದು ಬಿಟ್ಟರೆ ಅವನಿಗೆ ಮೆಣಸಿನಕಾಯಿ ಚೀಲ ಮಾತ್ರ ಕಾಣುತ್ತಿಲ್ಲ. ಹಣದ ತೀವ್ರತೆ ಬೇರೆ, ಗಂಟೆಗಟ್ಟಲೆ ಸ್ಮಶಾನ ಜಾಲಾಡತೊಡಗಿದ. ರಾತ್ರಿ ಹನ್ನೆರಡಾದ್ರೂ ಅವನ ಹುಡುಕಾಟ ಮುಗಿದಿಲ್ಲ. ಸರಿ ಶಂಬಣ್ಣ ಮರೆತು ಬೇರೆ ಜಾಗದಲ್ಲಿ ಇಟ್ಟಿರಬೇಕು ಎಂದು ಅವನನ್ನು ಹುಡುಕಿಕೊಂಡು ಆ ರಾತ್ರಿಯಲ್ಲಿ ಅವನ ಮನೆಗೆ ನಡೆದ. ಅವನು ಆ ಸರಿ ರಾತ್ರಿಯಲ್ಲಿ ಸಾರಾಯಿ ಹೆಚ್ಚಾಗಿದ್ದರಿಂದ ಹೆಂಡತಿ ಮನೆಯಿಂದಾಚೆಗೆ ದಬ್ಬಿದ್ದಳು. ಕುಡಿದ ಅಮಲಿನಲ್ಲಿ ನಾಳೆ ಡಬಲ್ ಐದು, ನಾಳೆ ಡಬಲ್ ಐದು ಎಂದು ಗೊಣಗುತಿದ್ದ. ಅವನು ಆಗ ಸರಿಯಾಗಿ ಏನು ಮಾತನಾಡುವ ಸ್ತಿತಿಯಲ್ಲಿ ಇಲ್ಲ ಎಂದು ತಿಳಿದು ಪರಣ್ಣ ಅಲ್ಲಿಂದ ಮೆತ್ತಗೆ ಕಾಲು ಕಿತ್ತ.

ಮಾರನೆ ದಿನ ಬೆಳಿಗ್ಗೆನೇ ಶಂಬಣ್ಣನ ಮನೆಗೆ ಹೋಗಿ “ಮೆಣಸಿನಕಾಯಿ ಮೂಟೆ ಎಲ್ಲೊ?” ಎಂದು ಗದರಿ ಕೇಳಿದ. “ಪರಣ್ಣ ತಪ್ಪು ತಿಳ್ಕೊಬ್ಯಾಡ”, ನೀನು ಹೇಳ್ದಂಗೆ ಸಂಜೆ ಕತ್ತಲಲ್ಲಿ ಮೂಟೆ ಸೈಕಲ್ ಮೇಲೆ ಹೊತ್ಕೊಂಡು ಹೋಗ್ತಿದ್ನ ಎದುರಿಗೆ ಹೋಟೆಲ್ ರಾಮಣ್ಣ ಸಿಕ್ರ, “ಏನೋ ಶಂಬಣ್ಣ ಅದು” ಅಂದ್ರ, ನನಗೂ ಸುಳ್ಳು ಹೇಳಕ್ಕಾಗ್ದೆ “ಮೆಣಸಿನಕಾಯಿ ಅಂದ್ನ”, “ಕೊಡೋದೇನೂ ಅಂದ್ರು”, ನಾನು ತಡಬಡಾಯಿಸಿ “ಹ್ನೂಂ…” ಅಂದೆ. ಅಶ್ಟೆ ಅವರು ಎರಡನೂರು ರೂಪಾಯಿ ರೇಟ್ ಮಾಡಿ ತಗೊಂಡ್ರು. ನನಗೆ ಅಶ್ಟು ದುಡ್ಡು ನೋಡಿ ಕುಶಿ ತಡಕಳ್ಳಕ್ಕೆ ಆಗ್ಲಿಲ್ಲ ಯಾರೋ “ನಾಳೆ ಡಬಲ್ ಐದು ನಂಬರ್ ಹೊಡೆಯೋದು ಗ್ಯಾರಂಟಿ” ಅಂದ್ರ, ನಾಳೆ ನೂರು ರೂಪಾಯಿಗೆ ಸಾವಿರ ರೂಪಾಯಿ ಗ್ಯಾರಂಟಿ ಅಂತ ನೂರು ರೂಪಾಯಿ ಒಸಿ ಕಟ್ಬಿಟ್ಟೆ. ಮತ್ತದೇ ಕುಶಿಲಿ ಎಣ್ಣೆ ಅಂಗಡಿಗೆ ಹೋದ್ನ ನನ್ನ ಕೈಲಿ ನೂರು ರೂಪಾಯಿ ನೋಡಿ ಎಣ್ಣೆ ಅಂಗಡಿ ಸಾಹುಕಾರ ಕಿತ್ಕೊಂಡು ಎಂಬತ್ತು ರೂಪಾಯಿ ಹಳೆ ಬಾಕಿಗೆ ಮುರೆ ಹಾಕ್ಕೊಂಡು ಇಪ್ಪತ್ತು ರೂಪಾಯಿಗೆ ಎಣ್ಣೆ ಕೊಟ್ಟ. “ಪರಣ್ಣ ಇವತ್ತು ಡಬಲ್ ಐದು ಗ್ಯಾರಂಟಿ, ಬಂದ ದುಡ್ಡು ಅಶ್ಟು ಬೇಕಾದ್ರೆ ನೀನೇ ಇಟ್ಕೋ” ಎಂದು ಸಮಾದಾನದ ಮಾತು ಆಡತೊಡಗಿದ‌. ಆದ್ರೆ ಅವತ್ತು ಡಬಲ್ ಏಳು ನಂಬರ್ ಹೊಡೆದಿತ್ತು. ‘ಶನಿ ಹಿಡ್ದು ಸಂತೆಗೆ ಹೋದ್ರೆ ನರಿ ಹಿಡ್ದು ತಲೆ ಬೋಳ್ಸಿತ್ತು’, ‘ಪಾಪಿ ಸಮುದ್ರ ಹೊಕ್ರು ಮೊಳಕಾಲುದ್ದ ನೀರು’ ಎಂಬ ಮಾತುಗಳೆಲ್ಲ ತನ್ನಂತವರನ್ನು ನೋಡಿಯೇ ಸ್ರುಶ್ಟಿಯಾಗಿದೆ ಎಂದೆನಿಸಿತು ಪರಣ್ಣನಿಗೆ. ಈ ರಾತ್ರಿ ಸಾಲ ಮಾಡಿ ಸಾರಾಯಿ ಕುಡಿದು ಟೈಟಾಗಿ ಡಬಲ್ ಪೈವ್… ಡಬಲ್ ಪೈವ್… ಎಂದು ಗೊಣಗುವ ಸರದಿ ಪರಣ್ಣನದಾಗಿತ್ತು.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications