ಸಂಬಂದಗಳಲ್ಲಿ ಹೊಂದಾಣಿಕೆ
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು; ಈ ಗಾದೆ ಗಂಡ ಹೆಂಡಿರ ನಡುವಿನ ನಂಟಿನ ಬಗ್ಗೆ ತಿಳಿಸುತ್ತದೆ.
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ, ದಿನವು ನಿತ್ಯ ಉಗಾದಿನೇ, ನನ್ನ ನಿನ್ನ ಪಾಲಿಗೆ…
ಎಂಬ ಈ ಹಾಡು ಕೇಳುತಿದ್ದರೆ ಗಂಡ ಹೆಂಡತಿಯ ಅನ್ಯೋನ್ಯತೆ, ಪ್ರೀತಿ ಅನುಬಂದದ ಉತ್ತುಂಗವನ್ನು ಮುಟ್ಟಿದಂತೆ ಬಾಸವಾಗುತ್ತದೆ. ಗಂಡ ಹೆಂಡತಿಯ ಸಂಬಂದ ಗಾಡತೆ ಪಡೆದುಕೊಂಡು ಪ್ರೀತಿ, ಅನುರಾಗ ಹಾಸುಹೊಕ್ಕಾಗಬೇಕಾದರೆ ನಮಗೆ ಹಾಸಿಗೆಯಿದ್ದಶ್ಟು ಕಾಲು ಚಾಚಲು ಬರಬೇಕು. ಆಸೆಗಳು ಅತಿಯಾಗಿ, ಪಡೆಯುವ ಅವಕಾಶ ಕಡಿಮೆಯಾದರೆ ಮನಸ್ಸು ಕಿನ್ನತೆಗೆ ಜಾರಿ ವ್ಯಂಗ್ಯ, ಅಹಂ, ಕೀಳರಿಮೆಗಳು ತಮ್ಮ ಪ್ರಾಬಲ್ಯ ಮೆರೆಯುತ್ತವೆ. ಗಂಡ ಕೈಲಾಗದವನು ಎಂಬ ಸಂಕುಚಿತತೆಗೆ ಮನ ಹೊರಳುತ್ತದೆ, ಇದರಿಂದಾಗಿ ಗಂಡ ಹೆಂಡಿರ ಸಂಬಂದ ನರಳುತ್ತದೆ. ನಮ್ಮ ದೌರ‍್ಬಲ್ಯವನ್ನು ಕಂಡುಕೊಂಡ ಕೆಲವರು ಆತ್ಮೀಯರಂತೆ ನಟಿಸುತ್ತ ಗಂಡ ಹೆಂಡತಿಯ ಸುಮದುರ ಸಂಬಂದದ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಾರೆ. ನಾವು ಹಿತ್ತಾಳೆ ಕಿವಿಯವರಾದರಂತೂ ಮುಗಿಯಿತು ಅವರ ಚಾಡಿ ಮಾತುಗಳು ನಮ್ಮ ತಲೆಯಲ್ಲಿ ಕೀಟದಂತೆ ಕೊರೆದು ಗಂಡ ಹೆಂಡತಿ ಸಂಬಂದಗಳು ಒಡೆದು ಚೂರಾಗುತ್ತವೆ, ಅಲ್ಲಿ ಅನುಮಾನ, ಅಸಡ್ಡೆ ಮನೆಮಾಡಿಕೊಂಡರೆ ಗಂಡಹೆಂಡತಿಯ ಸಂಬಂದ ಶಾಶ್ವತವಾಗಿ ಸರಿಪಡಿಸಲಾಗದಶ್ಟು ಅಸ್ತವ್ಯಸ್ತವಾಗುತ್ತದೆ. ಅದಕ್ಕಾಗಿಯೇ ಏನೋ “ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು” ಎಂಬ ಗಾದೆ ಮಾತು ಹುಟ್ಟಿರಬಹುದು. ಇದು ಪರಸ್ಪರರಿಗೂ ಅನ್ವಯಿಸುವ ಗಾದೆಮಾತು.
ಮನುಶ್ಯನ ಬದುಕು ಎಂದರೇನೆ ಹೊಂದಾಣಿಕೆ. ಹರೆಯದಲ್ಲಿ ಪ್ರತಿಯೊಬ್ಬರ ಕನಸು ಊಹಾತೀತ. ಹುಡುಗರ ಕನಸು ರಂಬೆ, ಊರ‍್ವಶಿ, ಮೇನಕೆಯಂತಹ ಸುರಸುಂದರಿಯರನ್ನು ಪತ್ನಿಯಾಗಿ ಪಡೆಯಬೇಕೆಂಬುದಾದರೆ, ಹುಡುಗಿಯರು ಶ್ರೀರಾಮನಂತಹ ಗಂಡ ಬೇಕೆನ್ನುತ್ತಾರೆ. ಇನ್ನೂ ಕೆಲವರು ಹಾಲಿವುಡ್, ಬಾಲಿವುಡ್, ಟಾಲಿವುಡ್ ನ ಟ್ರೆಂಡಿ ಚಾಕೊಲೇಟ್ ಹೀರೋ, ಹೀರೋಯಿನ್ ನಮ್ಮನ್ನು ವರಿಸಬೇಕು ಎಂಬ ಕನಸು ಕಟ್ಟುತ್ತಾರೆ. ಆದರೆ ವಾಸ್ತವದ ಬದುಕಲ್ಲಿ ಅಶ್ಟೊಂದು ಆಯ್ಕೆಗೆ ಅವಕಾಶವಿಲ್ಲ ಎಂದು ತಿಳಿದು ಪಾಲಿಗೆ ಬಂದದ್ದು ಪಂಚಾಮ್ರುತ ಎಂಬ ಹೊಂದಾಣಿಕೆ ಬದುಕಿಗೆ ಜೋತು ಬೀಳಬೇಕಾಗುತ್ತದೆ. ಸಂಸಾರದಲ್ಲಿ ಮಕ್ಕಳು ಕೂಡ ಅರಳಿ ಕೂಡಿಕೊಳ್ಳುವ ಸುಂದರ ಸುಮಗಳು. ಮಕ್ಕಳು ಬೆಳೆದು ದೊಡ್ಡವರಾಗಿ ಜವಾಬ್ದಾರಿಯುತ ಸ್ತಾನಕ್ಕೆ ಬಂದ ಮೇಲೆ, ಯಾವುದೇ ಸಬೂಬು ಹೇಳದೆ ತಂದೆತಾಯಿಯರೊಡಗೂಡಿ ಎಲ್ಲ ಸಂಬಂದಗಳನ್ನು ಪ್ರೀತಿಯಿಂದ, ಹೊಂದಾಣಿಕೆಯಿಂದ ನಿಬಾಯಿಸಿ ತಮ್ಮ ಕರ‍್ತವ್ಯ ಮೆರೆಯಬೇಕು.
ಈ ಸಾಮಾಜಿಕ ಚೌಕಟ್ಟಿನಲ್ಲಿ ಬದುಕುವ ನಾವೆಲ್ಲ ಸಂಸಾರಕ್ಕೆ ಬೇಕಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಬಾಯಿಸಲೇ ಬೇಕು. ಹಾಗಿದ್ದರೆ ಮಾತ್ರ ಸಂಸಾರದ ಪ್ರತಿಯೊಂದು ಸಂಬಂದಗಳು ಬಿಗಿದು ಮಾದುರ‍್ಯತೆ ಪಡೆದುಕೊಳ್ಳುತ್ತವೆ. ಅಪ್ಪ ಅಮ್ಮ, ಅಜ್ಜ ಅಜ್ಜಿ, ಅಣ್ಣ ತಮ್ಮ, ಅಕ್ಕ ತಂಗಿ, ಚಿಕ್ಕಪ್ಪ ಚಿಕ್ಕಮ್ಮ ಹೀಗೆ ಸಾಗುವ ಸಂಬಂದಗಳಿಂದ ನಮಗೆಶ್ಟೇ ಒತ್ತಡ ಇದ್ದರೂ, ಸಮಯಕೊಟ್ಟು ನಂಟನ್ನು ಕಾಯ್ದುಕೊಂಡು ಕಶ್ಟಸುಕಗಳಲ್ಲಿ ಬಾಗಿಯಾಗಬೇಕು.
ನಾವು ಪ್ರೀತಿ ಕೊಟ್ಟು ಪೋಶಿಸಿದ ಸಂಬಂದಗಳು ಕೆಲವೊಮ್ಮೆ ತಪ್ಪು ತಿಳುವಳಿಕೆ, ಮನಸ್ತಾಪಗಳಿಂದ ದೂರವಾದರೆ ಮನಹಿಂಡಿ ಮರುಗುತ್ತದೆ. ಮತ್ತದೆ ಪ್ರೀತಿಯ ಬಂದಕ್ಕೆ ಮನ ಹಾತೊರೆಯುತ್ತದೆ. ಆದ್ದರಿಂದ ಎಂತಹದ್ದೆ ಸಂದರ‍್ಬ ಬಂದರೂ ಸಂಬಂದಗಳ ನಡುವೆ ಮನಸ್ತಾಪ ಚಿಗುರೊಡೆಯದಂತೆ ಕಾಳಜಿವಹಿಸುವುದರ ಜೊತೆಗೆ, ನಮ್ಮ ನಮ್ಮ ಅಹಂ ಬದಿಗಿಟ್ಟು, ಹೊಂದಾಣಿಕೆ ಮಾಡಿಕೊಂಡು ಬದುಕುವ ಎಲ್ಲಾ ಸಂಬಂದಗಳು ಸುಮವರಳಿ ನಳನಳಿಸುವ ಹೂದೋಟದಂತೆ ಮನೋಹರವಾಗಿರುತ್ತವೆ.
ಈ ಬಂದದ ಹೊಂದಾಣಿಕೆ ಕೇವಲ ಕುಟುಂಬಗಳಿಗೆ ಸೀಮಿತವಾಗಿಲ್ಲ ಇದು ಸುಲಲಿತ ಸಾಮಾಜಿಕ ಬದುಕಿಗೂ ಅನ್ವಯಿಸುತ್ತದೆ. ನಮ್ಮ ಬದುಕು ಕಿರಿಕಿರಿ ಇಲ್ಲದೆ ಸರಳವಾಗಿ ನಡೆದುಕೊಂಡು ಹೋಗಬೇಕಾದರೆ ನಮ್ಮ ನಿತ್ಯ ಬದುಕಲ್ಲಿ ಎದುರಾಗುವ ವಿವಿದ ಜನರೊಡನೆಯೂ ಕೂಡ ಹೊಂದಾಣಿಕೆಯ ಬಂದ ಇಟ್ಟುಕೊಳ್ಳಲೇ ಬೇಕು. ಏಕೆಂದರೆ ಮನುಶ್ಯ ಸಂಗ ಜೀವಿ ಆತ ಒಂಟಿಯಾಗಿ ಬದುಕಲಾರ. ಒಟ್ಟಾರೆ ನಮಗೆ ನೆಮ್ಮದಿ, ಸಂತೋಶದ ಬದುಕು ಬೇಕೆಂದರೆ ನಮ್ಮ ಅಹಂಗಳನ್ನು ಗಂಟುಮೂಟೆ ಕಟ್ಟಿ ಬದಿಗಿಟ್ಟು, ಪ್ರತಿಯೊಂದು ಸಂಬಂದಗಳನ್ನು ತಾಳ್ಮೆಯಿಂದ, ಹೊಂದಾಣಿಕೆಯಿಂದ, ಪ್ರೀತಿಯಿಂದ ಹೆಣೆದು ಬದುಕಿದರೆ ಕಂಡಿತವಾಗಿಯೂ ಸ್ವರ‍್ಗಕ್ಕೆ ಮೂರೇ ಗೇಣು.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು