ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 11

– ಸಿ. ಪಿ. ನಾಗರಾಜ.

*** ಕೀಚಕನ ಪ್ರಸಂಗ: ನೋಟ – 10 ***

ಅಬುಜ ಬಾಂಧವನು ಅಸ್ತಾಚಲದ ತಪ್ಪಲ ತಾವರೆಯ ಬನಕೆ ಇಳಿದನು. ಕಗ್ಗತ್ತಲೆಯ ಹಬ್ಬುಗೆಯೊಳಗೆ ಕಂಗಳ ಬೆಳಗು ಬಟ್ಟೆಯ ತೋರೆ, ನಳಿನಮುಖಿ ನಲವು ಏರಿ, ಬಾಣಸಿನ ಮನೆಗೆ ಬಂದಳು.

ದ್ರೌಪದಿ: ಭೀಮ, ನಾಟ್ಯನಿಲಯವನು ನಿಂದಿರು. ಆ ಮದಾಂಧಗೆ ನುಡಿದು ಬಂದೆನು. ತಾಮಸವ ಮಾಡದಿರು. ಅಲ್ಪ ಬುದ್ಧಿಗಳ ಹೂಡದಿರು. ಕಾಮುಕನ ನಡೆಗೆಡಹಿ ನಿಜ ಸುಪ್ರೇಮವನು ತೋರು.

(ಎನಲು, ಉದ್ದಾಮನು ನಗುತ ಎದ್ದನು. ಮಲ್ಲಗಂಟಿನಲಿ ಪಳಿಯನು ಉಟ್ಟನು. ಖಳನ ಮುರಿಯೆಂದು ಅಬಲೆ ನೊಸಲಲಿ ತಿಲಕವನು ರಚಿಸಿದಳು, ಸೇಸೆಯ ತಳಿದಳು, ತಿಗುರ ಏರಿಸಿ ಗೆಲಿದಳು. ಹಿಣಿಲ ಹೊಸ ಪರಿಯ ಬಲುಭುಜನ ಹರಸಿದಳು. ಕಗ್ಗತ್ತಲೆಯ ಹಬ್ಬುಗೆಯೊಳಗೆ ನಾಟ್ಯದ ನಿಲಯ ಮಧ್ಯದ ಮಣಿಯ ಮಂಚದ ಮೇಲೆ ಪವಡಿಸಿದ. ಉರಿವ ಮಾರಿಯ ಬೇಟದಾತನು ತುರುಗಿದನು. ಮಲ್ಲಿಗೆಯ ಮೊಗ್ಗೆಯ ನಿರಿಕಿ, ಸಾದು ಜವಾಜಿ ಕತ್ತುರಿಯ ತಾ ಪೂಸಿದನು. ಮೆರೆವ ಗಂಡುಡಿಗೆಯನು ರಚಿಸಿದ ಸೆರಗಿನ ಒಯ್ಯಾರದಲಿ ಸುರಗಿಯ ತಿರುಹುತ, ಇರುಳು ಒಬ್ಬನೆ ನಿಜಾಲಯದಿಂದ ಹೊರವಂಟ. ಕಾಲಪಾಶದಲಿ ಎಳಸಿಕೊಂಬ
ಕರಾಳಮತಿ ಕೃತಾಂತನ ಬಾಯ ಹೊಗುವಂತೆ ಸುಡುಗಾಡಲಿ ಐತಂದು ಆಲಯವ ಹೊಕ್ಕನು. ಮೇಲೆ ಮೇಲಪಶಕುನ ಶತಕವನು ಆಲಿಸದೆ ಸುಮ್ಮಾನದಲಿ ಮಂಚವಿದ್ದ ಎಡೆಗಾಗಿ ತಡವರಿಸಿ ಕೇಡಾಳಿ ಬಂದನು.)

ಕೀಚಕ: ವನಜಮುಖಿ, ವೀಳೆಯವನು ಅನುಲೇಪನವ ಮಲ್ಲಿಗೆಯರಳ ತೊಡಿಗೆಯನು ಅನುಪಮಾಂಬರ ಇವೆ ಮನೋಹರವು ಅಹರೆ ಚಿತ್ತೈಸು. ನಿನಗೆ ಪಾಸಟಿ ಆನು. ಎನ್ನವೊಲು ಅನಿಮಿಷರೊಳು ಆರುಂಟು. ಚೆಲುವರು ಮನುಜರು ಎನ್ನನು ಹೋಲುವರೆ. ಸೈರಂಧ್ರಿ ಕೇಳು, ಎನ್ನವೋಲ್ ಪುರುಷರಲಿ ಚೆಲುವರ ಮುನ್ನ ನೀ ಕಂಡು ಅರಿದೆಯಾದೊಡೆ, ಎನ್ನ ಮೇಲಾಣೆ. ಎಲೆಗೆ, ಹುಸಿಯದೆ ಹೇಳು ಹೇಳು, ಮುನ್ನ  ನಿನ್ನಂತಪ್ಪ ಸತಿಯರು ಎನ್ನನೇ ಬಯಸುವರು. ಎಲೆಗೆ ನಿನ್ನಾಣೆ, ಎನ್ನ ಕಂಡರೆ ನಾರಿಯರು ಸೋಲದವರಿಲ್ಲ.

ಭೀಮ: ಎಲವೊ ಕೀಚಕ, ನಿನ್ನ ಹೋಲುವ ಚೆಲುವರಿಲ್ಲ. ಅಂತಿರಲಿ ತನ್ನಯ ರೂಪು ಲೋಕದ ಲಲನೆಯರ ಪರಿಯಲ್ಲ, ಬೇರೊಂದು. ಇಳೆಯೊಳು ಎನಗೆ ಎಣೆಯಿಲ್ಲ. ನಿನಗೆ ಆನು ಒಲಿದು ಬಂದೆನು. ತನ್ನ ಪರಿಯನು ಬೇಗ ತೋರುವೆನು. ಬಳಿಕ ನೋಡಾ. ಪುರುಷರು ಎನಗೆ ಸೋಲದವರಿಲ್ಲ. ಎನಗೆ ಪಾಸಟಿ ನೀನು. ನಿನಗಾ ಮನವೊಲಿದೆ. ನೀ ನೋಡು ತನ್ನಯ ಹೆಣ್ಣುತನದ ಅನುವ.

(ಎನಲು ಹರುಷದಲಿ ಉಬ್ಬಿ ಕೀಚಕನು ಅನಿಲಜನ ಮೈದಡವಿ ವೃತ್ತಸ್ತನವ ಕಾಣದೆ ಹೆದರಿ, ಬಳಿಕ ಅವ ನಗುತ ಇಂತು ಎಂದನು.)

ಕೀಚಕ: ಎಲೆಗೆ ಕಲುಮೈಯಾದೆ. ಕಡು ಕೋಮಲತೆ ಎತ್ತಲು… ಕರ್ಕಶಾಂಗದ ಬಲುಹು ಇದು ಎತ್ತಲು. ಮೇಣು ಮಾಯ ವೇಷವ ಧರಿಸಿದೆಯೊ ತಿಳುಹು.

ಭೀಮ: ಕೇಳು ಎಲವೊ, ಪರ ಸತಿಗೆ ಅಳುಪಿದಾತಂಗೆ ಅಮೃತ ವಿಷ, ಕೋಮಲತೆ ಕರ್ಕಶ ಅಹುದು.

(ಎನುತ ಮುಂದಲೆಯ ತುಡುಕಿದನು.) ಆಗ ಕೃಪಣಮತಿ

ಕೀಚಕ: ಚಪಳೆ ಫಡ ಹೋಗು.

(ಎನುತ ಹಾಯ್ದನು . ಅನಿಲಜನು ಅಪರಭಾಗಕೆ ಹಾಯ್ದು ಕೀಚಕನ ತುರುಬ ಮುಂಗೈಯಲಿ… ಹಿಡಿದನು. ವಿಪುಳಬಲ ಕಳವಳಿಸಿದನು. ಕಡು ಕುಪಿತನಾದನು.)

ಕೀಚಕ: ಇವನು ಹೆಂಗುಸಲ್ಲ… ಅಪಸದನು… ತೆಗೆ ಕರುಳನು…

(ಎನುತ ಒಳಹೊಕ್ಕು ಹೆಣಗಿದನು. ಅವನು ಉರವಣಿಸಿ ತಿವಿದನು. ಮಾರುತಿ ಕವಿದು ಹೆಣಗಿದನು. ಅಡಸಿ ಬವರಿಯಲಿ ಹೊಯ್ದೊಡೆ, ಟೊಣದು ಔಕಿದೊಡೆ ಮಡ ಮುರಿಯದೆ ಒಳಹೊಕ್ಕು, ಸವಡಿ ಮಂದರದಂತೆ ಕೀಚಕ ಪವನಸುತರು ಒಪ್ಪಿದರು. ಭೀಮನ ಯುವತಿ ನಗುತ ಹೊಯ್ಲ ಹೋರಟೆಯ ಆಲಿಸುತಲಿದ್ದಳು. ಎರಗಿದೊಡೆ ಕೀಚಕನ ಗಾಯಕೆ ತರವರಿಸಿ ಕಲಿಭೀಮ ಮಂಡಿಸಿ ಮರೆವಡೆದು, ಮುರಿದೆದ್ದು ರೋಷದಲಿ ಔಡನು ಒಡೆಯಗಿದು, ಬರಸಿಡಿಲು ಪರ್ವತದ ಶಿಖರವನು ಎರಗುವಂತಿರೆ ರಣಧೀರನು ಉನ್ನತ ಬಾಹುಸತ್ವದಲಿ ಖಳನ ನೆತ್ತಿಯನು ಎರಗಿದನು. ಅರಿಯ ಮುಷ್ಟಿಯ ಗಾಯದಲಿ ತಲೆಬಿರಿಯೆ, ತನು ಡೆಂಡಣಿಸಿ, ಕಂಗಳು ತಿರುಗಿ ಜೋಲಿದು, ಮೆಲ್ಲ ಮೆಲ್ಲನೆ ಅಸುವ ಪಸರಿಸುತ, ಕೆರಳಿ ಕರಿ ಕೇಸರಿಯ ಹೊಯ್ದು ಉರೆ ತಿರುಗುವಂತಿರೆ ಭೀಮಸೇನನ ಬರಿಯ ತಿವಿದನು.)

ಕೀಚಕ: ಖಳರಾಯ ಬೀಳು.

(ಎನುತ ಹಲು ಮೊರೆದ. ತಿರುಗಿ ಪೈಸರವೋಗಿ ಮರಳಿ ಕೀಚಕನ ಪೇರುರವನು ಪವನಜ ತಿವಿದನು. ಎದೆ ಜರ್ಝರಿತವಾಗಲು, ಕರುಳ ಕಾರಿದನು. ಆಲಿಗಳು ಬಿರಿದವು. ಕಣ್ಣು ಉರುಗಿ, ಒಲೆದು ತೊಲೆದು ಧೊಪ್ಪನೆ ಕೆಡೆದು, ನಿಮಿಷಕೆ ಹೊರಳಿ ಕೀಚಕನ ಕಾಯ ಹರಣವ ಕಳುಹಿ ಕಳೆದುದು. ತಲೆಯನು ಎದೆಯೊಳಗೆ ಇಕ್ಕಿ, ಕೈ ಕಾಲ್ಗಳನು ಬಸುರೊಳು ಸಿಕ್ಕಿ, ದೂರಕೆ ತೊಲಗಿದನು. ರಮಣಿಗೆ ಕೀಚಕನ ಹದನ ತೋರಿದನು. ಕಾಲನ ಕೋಣ ಖಳನ ತುಳಿದಂತೆ ಇಳೆಯೊಳು ಒರಗಿರೆ ಕಂಡು, ಭೀಮಸೇನನನು ಅಪ್ಪಿ ಮುಂಡಾಡಿ ಕಾಮಿನಿ ಕಳಕಳಿಸಿದಳು.)

ಭೀಮ: ತರುಣಿ ಬಿಡು ಸಾರು.

(ಎನುತ ಪವನಜ ಅತ್ತಲು ಸರಿದನು.)

ಪದ ವಿಂಗಡಣೆ ಮತ್ತು ತಿರುಳು

ಅಬುಜ=ತಾವರೆ; ಬಾಂಧವ=ನೆಂಟ; ಅಬುಜ ಬಾಂಧವ=ಸೂರ್‍ಯ. ಅಸ್ತ+ಅಚಲ; ಅಸ್ತ=ಮರೆಯಾಗುವುದು; ಅಚಲ=ಬೆಟ್ಟ; ಅಸ್ತಾಚಲ=ಪಶ್ಚಿಮ ದಿಕ್ಕಿನಲ್ಲಿರುವ ಬೆಟ್ಟ; ತಪ್ಪಲು=ಬೆಟ್ಟದ ಮಗ್ಗುಲು; ಬನ=ತೋಟ/ತೋಪು;

ಅಬುಜ ಬಾಂಧವನು ಅಸ್ತಾಚಲದ ತಪ್ಪಲ ತಾವರೆಯ ಬನಕೆ ಇಳಿದನು=ಸೂರ್‍ಯನು ಪಶ್ಚಿಮದಿಕ್ಕಿನಲ್ಲಿದ್ದ ಬೆಟ್ಟದ ತಪ್ಪಲಿನಲ್ಲಿದ್ದ ತಾವರೆಯ ಹೂಗಳ ತೋಪಿನಲ್ಲಿ ಮರೆಯಾಗುತ್ತಿದ್ದಂತೆಯೇ ಕತ್ತಲು ಕವಿಯಿತು;

ಕರಿದು+ಕತ್ತಲೆ; ಹಬ್ಬುಗೆ+ಒಳಗೆ; ಹಬ್ಬುಗೆ=ಹರಡುವಿಕೆ; ಕಗ್ಗತ್ತಲ ಹಬ್ಬುಗೆ=ಹೆಚ್ಚಾಗಿ ಕವಿದಿರುವ ಕತ್ತಲಿನಲ್ಲಿ; ಕಣ್ಣ್+ಗಳ=ಕಂಗಳ; ಕಂಗಳ=ಕಣ್ಣುಗಳ; ಬಟ್ಟೆ=ದಾರಿ; ತೋರೆ=ತೋರುತ್ತಿರಲು;

ಕಗ್ಗತ್ತಲೆಯ ಹಬ್ಬುಗೆಯೊಳಗೆ ಕಂಗಳ ಬೆಳಗು ಬಟ್ಟೆಯ ತೋರೆ=ದಟ್ಟವಾಗಿ ಹಬ್ಬಿಕೊಂಡಿರುವ ಕತ್ತಲೆಯಲ್ಲಿ ಸೈರಂದ್ರಿಯ ಕಣ್ಣಗಳ ಕಾಂತಿಯೇ ದಾರಿಯನ್ನು ತೋರಿಸುತ್ತಿರಲು;

ನಳಿನ=ತಾವರೆ; ನಳಿನಮುಖಿ=ತಾವರೆಯ ಮೊಗದವಳು/ಸುಂದರಿ; ನಲವು=ಆನಂದ; ಏರಿ=ಹೆಚ್ಚಾಗಿ; ಬಾಣಸಿನ ಮನೆ=ಅಡುಗೆ ಮನೆ;

ನಳಿನಮುಖಿ ನಲವು ಏರಿ, ಬಾಣಸಿನ ಮನೆಗೆ ಬಂದಳು=ಸೈರಂದ್ರಿಯು ಅಪಾರವಾದ ಆನಂದದಿಂದ ಬೀಮನು ಇದ್ದ ಅಡುಗೆಯ ಮನೆಗೆ ಬಂದಳು;

ಭೀಮ ನಾಟ್ಯನಿಲಯವನು ನಿಂದಿರು=ಭೀಮ, ನೀನು ನಾಟ್ಯನಿಲಯದಲ್ಲಿದ್ದುಕೊಂಡು ಕೀಚಕನು ಬರುವುದನ್ನೇ ಕಾಯುತ್ತಿರು;

ಮದ+ಅಂಧಗೆ; ಮದ=ಸೊಕ್ಕು/ಗರ್‍ವ; ಅಂಧ=ಕುರುಡ;

ಆ ಮದಾಂಧಗೆ ನುಡಿದು ಬಂದೆನು=ತೋಳ್ಬಲದಿಂದ ಮತ್ತು ತಾನು ರಾಜನ ಸೇನಾನಿಯೆಂಬ ಅದಿಕಾರ ಬಲದಿಂದ ಸೊಕ್ಕಿರುವ ಕಾಮಿ ಕೀಚಕನಿಗೆ ಇಂದು ರಾತ್ರಿ ನಾಟ್ಯ ಮಂದಿರಕ್ಕೆ ಬರುವಂತೆ ಸೂಚಿಸಿ ಬಂದಿದ್ದೇನೆ;

ತಾಮಸ=ತಡ/ವಿಳಂಬ;

ತಾಮಸವ ಮಾಡದಿರು=ನಾಟ್ಯನಿಲಯಕ್ಕೆ ರಾತ್ರಿ ಬರುವುದಕ್ಕೆ ತಡಮಾಡಬೇಡ. ಕೀಚಕನು ಅಲ್ಲಿಗೆ ಬರುವುದಕ್ಕೆ ಮುಂಚೆ ನೀನು ಬಂದು ಕಾಯುತ್ತಿರುವುದು;

ಅಲ್ಪಬುದ್ಧಿ=ಸಣ್ಣತನ/ದಡ್ಡತನ; ಹೂಡು=ಆಲೋಚಿಸು/ಯೋಜಿಸು;

ಅಲ್ಪ ಬುದ್ಧಿಗಳ ಹೂಡದಿರು=ಸಣ್ಣತನದಿಂದ ನಡೆದುಕೊಳ್ಳಬೇಡ. ಅಂದರೆ ಕೊಟ್ಟ ಮಾತಿಗೆ ತಪ್ಪಿ ನಡೆಯಬೇಡ. ಆ ದುರುಳ ಕೀಚಕನನ್ನು ಕೊಲ್ಲುವುದೋ ಬೇಡವೋ ಎಂಬ ತಾಕಲಾಟಕ್ಕೆ ಒಳಗಾಗಬೇಡ;

ನಡೆ+ಕೆಡಹು; ನಡೆ=ನಡಗೆ/ನಡೆಯುವಿಕೆ; ಕೆಡಹು=ಕೆಳಕ್ಕೆ ಉರುಳಿಸು; ನಡೆಗೆಡಹು=ನಡೆಯದಂತೆ ಕೆಳಕ್ಕೆ ಉರುಳಿಸು. ನಡೆಗೆಡಹು ಎಂಬ ಪದರೂಪ ಒಂದು ನುಡಿಗಟ್ಟಾಗಿ ‘ಕೊಲ್ಲು/ನಾಶ ಮಾಡು’ ಎಂಬ ತಿರುಳಿನಲ್ಲಿ ಬಳಕೆಯಾಗಿದೆ.

ಕಾಮುಕನ ನಡೆಗೆಡಹಿ ನಿಜ ಪ್ರೇಮವನು ತೋರು ಎನಲು=ಕಾಮಿ ಕೀಚಕನನ್ನು ಕೆಳಕ್ಕೆ ಉರುಳಿಸಿ ಕೊಂದು, ನನ್ನ ಬಗ್ಗೆ ನೀನು ಇಟ್ಟಿರುವ ನಿಜ ಪ್ರೇಮವನ್ನು ತೋರು ಎಂದು ಸೈರಂದ್ರಿಯು ನುಡಿಯಲು;

ಉದ್ದಾಮ=ಉತ್ತಮವಾದ;

ಉದ್ದಾಮನು ನಗುತ ಎದ್ದನು=ಬಲಶಾಲಿಯೂ ಕರುಣಾಶೀಲನೂ ಆದ ಬೀಮನು ನಗುತ್ತ ಮೇಲೆದ್ದನು;

ಮಲ್ಲಗಂಟು=ಜಟ್ಟಿಗಳು ಕಟ್ಟಿಕೊಳ್ಳುವ ನಡುಕಟ್ಟು; ಪಳಿ=ಬಟ್ಟೆ/ವಸ್ತ್ರ;

ಮಲ್ಲಗಂಟಿನಲಿ ಪಳಿಯನು ಉಟ್ಟನು=ಬೀಮನು ಬಟ್ಟೆಯಿಂದ ತನ್ನ ನಡುವಿಗೆ ಕುಸ್ತಿಪಟುಗಳು ತೊಡುವ ಮಲ್ಲಗಂಟನ್ನು ಬಿಗಿದು ಕಟ್ಟಿಕೊಂಡನು;

ಖಳ=ನೀಚ/ಕೇಡಿ; ಮುರಿ=ಕೊಲ್ಲು; ಅಬಲೆ=ಹೆಂಗಸು; ನೊಸಲು=ಹಣೆ; ತಿಲಕ=ಬೊಟ್ಟು/ ಕುಂಕುಮ, ಅರಿಸಿನ, ಸಿರಿಗಂದದ ಹಸಿ ಮುಂತಾದುವನ್ನು ಒಳ್ಳೆಯ ಕೆಲಸಗಳಿಗೆ ಹೋಗುವಾಗ ಮಂಗಳಕರವೆಂದು ಹಣೆಗೆ ಇಡುತ್ತಾರೆ;

ಖಳನ ಮುರಿಯೆಂದು ಅಬಲೆ ನೊಸಲಲಿ ತಿಲಕವನು ರಚಿಸಿದಳು=ಕಾಮಿ ಕೀಚಕನನ್ನು ಕೊಲ್ಲು ಎಂದು ಹೇಳುತ್ತ ಸೈರಂದ್ರಿಯು ಬೀಮನ ಹಣೆಗೆ ತಿಲಕವನ್ನು ಇಟ್ಟಳು;

ಸೇಸೆ=ಅರಿಸಿನ ಕಲೆಸಿದ ಅಕ್ಕಿಯ ಕಾಳುಗಳು; ತಳಿ=ಎರಚು/ಉದುರಿಸು;

ಸೇಸೆಯ ತಳಿದಳು=ಅರಿಸಿನದ ಅಕ್ಕಿಯ ಕಾಳುಗಳನ್ನು ಬೀಮನ ತಲೆಯ ಮೇಲೆ ಎರಚಿದಳು. ಕಯ್ಗೊಂಡ ಕೆಲಸದಲ್ಲಿ ಜಯ ದೊರೆಯಲಿ ಎಂಬ ಉದ್ದೇಶದಿಂದ ಈ ರೀತಿ ಸೇಸೆಯನ್ನು ಹಾಕುವ ಆಚರಣೆಯಿದೆ;

ತಿಗುರು=ಪರಿಮಳ ದ್ರವ್ಯ; ಏರಿಸು=ಹಾಕಿ; ಗೆಲಿ=ಲೇಪಿಸು;

ತಿಗುರ ಏರಿಸಿ ಗೆಲಿದಳು=ಪರಿಮಳ ದ್ರವ್ಯಗಳನ್ನು ಬೀಮನ ಮೊಗ ಮತ್ತು ದೇಹಕ್ಕೆ ಬಳಿದಳು;

ಹಿಣಿಲು=ಜಡೆ/ಹೆರಳು; ಬಲುಭುಜನು=ಹೆಚ್ಚಿನ ತೋಳ್ಬಲವುಳ್ಳವನು; ಹರಸು=ಒಳಿತನ್ನು ಕೋರುವುದು;

ಹಿಣಿಲ ಹೊಸ ಪರಿಯ ಬಲುಭುಜನ ಹರಸಿದಳು=ಹೊಸ ಬಗೆಯಲ್ಲಿ ತಲೆಗೂದಲನ್ನು ಹೆಣೆದು ಎತ್ತಿಕಟ್ಟಿರುವ ಬಲಶಾಲಿ ಬೀಮನಿಗೆ ಒಳಿತಾಗಲೆಂದು ಹಾರಯಿಸಿದಳು;

ಮಣಿ=ರತ್ನ, ಮುತ್ತು, ವಜ್ರದ ಹರಳುಗಳು; ಪವಡಿಸು=ಮಲಗು;

ಕಗ್ಗತ್ತಲೆಯ ಹಬ್ಬುಗೆಯೊಳಗೆ ನಾಟ್ಯದ ನಿಲಯ ಮಧ್ಯದ ಮಣಿಯ ಮಂಚದ ಮೇಲೆ ಪವಡಿಸಿದ=ದಟ್ಟವಾಗಿ ಹಬ್ಬಿದ್ದ ಕತ್ತಲೆಯಲ್ಲಿ ಅಡುಗೆಯ ಮನೆಯಿಂದ ನಾಟ್ಯನಿಲಯಕ್ಕೆ ಬಂದ ಬೀಮನು, ಅಲ್ಲಿದ್ದ ರತ್ನದ ಹರಳುಗಳಿಂದ ಸಿಂಗರಿಸಿದ್ದ ಮಂಚದ ಮೇಲೆ ಮಲಗಿಕೊಂಡ;

ಉರಿ=ಬೆಂಕಿಯ ನಾಲಗೆ/ಜ್ವಾಲೆ; ಮಾರಿ=ಒಬ್ಬ ದೇವತೆ. ಒಲಿದವರಿಗೆ ಒಳಿತನ್ನು ಮಾಡುವ… ಮುನಿದವರಿಗೆ ಕೇಡನ್ನು ಮಾಡುವ ದೇವತೆಯೆಂದು ಜನಮನದಲ್ಲಿ ಹೆಸರಾಗಿದ್ದಾಳೆ; ಬೇಟ=ಕಾಮದ ಬಯಕೆ; ಬೇಟದಾತ=ಕಾಮದ ಬಯಕೆಯಿಂದ ಪರಿತಪಿಸುತ್ತಿರುವ ಕೀಚಕ; ಉರಿವ ಮಾರಿಯ ಬೇಟದಾತನು=ಉಗ್ರ ದೇವತೆಯಾದ ಮಾರಿಯನ್ನು ಕಾಮಿಸಿ ಬಂದಿರುವ ಕೀಚಕ. ಈಗ ಕೀಚಕನ ಪಾಲಿಗೆ ಸೈರಂದ್ರಿಯು ಸಾವಿನ ದೇವತೆಯಾಗಿದ್ದಾಳೆ; ನಿರಿಕಿ=ಜೋಡಿಸಿಕೊಂಡು; ತುರುಗು=ಮುಡಿದುಕೊಂಡನು/ಒತ್ತಾಗಿ ಇಡು;

ಉರಿವ ಮಾರಿಯ ಬೇಟದಾತನು ಮಲ್ಲಿಗೆಯ ಮೊಗ್ಗೆಯ ನಿರಿಕಿ ತುರುಗಿದನು=ಕಾಮಿಯಾದ ಕೀಚಕನು ಮಲ್ಲಿಗೆಯ ಮೊಗ್ಗುಗಳಿಂದ ತನ್ನನ್ನು ಸಿಂಗರಿಸಿಕೊಂಡನು;

ಸಾದು=ಹಣೆಗೆ ಇಟ್ಟುಕೊಳ್ಳುವ ಒಂದು ಬಗೆಯ ಕಪ್ಪನೆಯ ತಿಲಕ; ಜವಾಜಿ=ಒಂದು ಬಗೆಯ ಸುವಾಸನೆಯ ದ್ರವ್ಯ; ಕತ್ತುರಿ=ಕಸ್ತೂರಿ ಎಂಬ ಪ್ರಾಣಿಯ ಹೊಕ್ಕಳಿನಲ್ಲಿ ದೊರೆಯುವ ಸುವಾಸನೆಯ ವಸ್ತು; ತಾ=ತಾನು; ಪೂಸು=ಬಳಿ/ಸವರು/ಲೇಪಿಸು;

ಸಾದು ಜವಾಜಿ ಕತ್ತುರಿಯ ತಾ ಪೂಸಿದನು=ಸುವಾಸನೆಯ ವಸ್ತುಗಳಾದ ಸಾದು ಜವಾಜಿ ಕಸ್ತೂರಿಯನ್ನು ಮಯ್ಗೆ ಲೇಪಿಸಿಕೊಂಡನು;

ಮೆರೆ=ಕಂಗೊಳಿಸು/ಎದ್ದು ಕಾಣು; ಗಂಡು+ಉಡಿಗೆ; ಉಡಿಗೆ=ಮಯ್ ಮೇಲೆ ಉಟ್ಟುಕೊಳ್ಳುವ ಬಟ್ಟೆ; ಗಂಡುಡುಗೆ=ಪಂಚೆಯ ನಿರಿಯನ್ನು ಹಿಂದಕ್ಕೆ ಹೊರಳಿಸಿ ಬಿಗಿದು ಕಟ್ಟಿದ ಕಚ್ಚೆ; ರಚಿಸು=ಅಣಿಮಾಡು/ಸಜ್ಜುಗೊಳಿಸು; ಸೆರಗು=ಉತ್ತರೀಯದ ಅಂಚು/ಹೆಗಲ ಮೇಲೆ ಹಾಕಿಕೊಳ್ಳುವ ಶಲ್ಯದ ಅಂಚು; ಒಯ್ಯಾರ=ಬೆಡಗು/ಬಿನ್ನಾಣ; ಸುರಗಿ=ಒಂದು ಬಗೆಯ ಸುವಾಸನೆಯ ಹೂವು; ತಿರುಹು=ಚಕ್ರಾಕಾರವಾಗಿ ತಿರುಗಿಸು;

ಮೆರೆವ ಗಂಡುಡಿಗೆಯನು ರಚಿಸಿದ ಸೆರಗಿನ ಒಯ್ಯಾರದಲಿ ಸುರಗಿಯ ತಿರುಹುತ=ಕಂಗೊಳಿಸುವಂತಹ ಗಂಡುಡಿಗೆಯನ್ನು ಹಾಕಿಕೊಂಡು, ಉತ್ತರೀಯದ ಸೆರಗಿನ ಒಯ್ಯಾರದಿಂದ ಕೂಡಿ, ಸುರಗಿಯ ಹೂವನ್ನು ಕಯ್ಯಿಂದ ಚಕ್ರಾಕಾರವಾಗಿ ತಿರುಗಿಸುತ್ತ;

ಇರುಳು=ರಾತ್ರಿ; ನಿಜ+ಆಲಯ+ಇಂದ; ನಿಜ=ತನ್ನ; ಆಲಯ=ಮನೆ;

ಇರುಳು ಒಬ್ಬನೆ ನಿಜಾಲಯದಿಂದ ಹೊರವಂಟ=ಅಂದಿನ ರಾತ್ರಿ ಕೀಚಕನು ತನ್ನ ಮನೆಯಿಂದ ನಾಟ್ಯನಿಲಯದ ಕಡೆಗೆ ಒಬ್ಬನೇ ಹೊರಟನು;

ಕಾಲ=ಯಮ; ಪಾಶ=ಹಗ್ಗ/ಕೊರಳಿಗೆ ಹಾಕಿ ಎಳೆವ ನೇಣಿನ ಕುಣಿಕೆ; ಕಾಲಪಾಶ=ಸಾವಿನ ಕುಣಿಕೆ; ಕರಾಳ=ವಿಕಾರವಾದ; ಮತಿ=ಬುದ್ದಿ; ಕರಾಳಮತಿ=ಕಾಮದ ಬಯಕೆಯಿಂದ ಮನೋವಿಕಾರಕ್ಕೆ ಒಳಗಾಗಿರುವ ಕೀಚಕ; ಕೃತಾಂತ=ಯಮ; ಹೊಗು=ಪ್ರವೇಶಿಸು/ಒಳಸೇರು; ಸುಡುಗಾಡು=ಮಸಣ; ಐತಂದು=ನಡೆದುಬಂದು; ಆಲಯ=ಮಂದಿರ;

ಕಾಲಪಾಶದಲಿ ಎಳಸಿಕೊಂಬ ಕರಾಳಮತಿ ಕೃತಾಂತನ ಬಾಯ ಹೊಗುವಂತೆ ಸುಡುಗಾಡಲಿ ಐತಂದು ಆಲಯವ ಹೊಕ್ಕನು=ಸಾವಿನ ಕುಣಿಕೆಯಲ್ಲಿ ಸಿಲುಕಿದ ಮನೋವಿಕಾರಿಯು ಯಮನ ಬಾಯೊಳಕ್ಕೆ ಹೋಗುವಂತೆ ಕಾಮವಿಕಾರಿಯಾದ ಕೀಚಕನು ತನ್ನ ಮನೆಯಿಂದ ಸುಡುಗಾಡಿನ ಹಾದಿಯಲ್ಲಿ ಹಾಯ್ದುಬಂದು ನಾಟ್ಯ ನಿಲಯವನ್ನು ಹೊಕ್ಕನು;

ಮೇಲೆ+ಅಪಶಕುನ; ಶಕುನ=ಸುಳಿವು/ಸೂಚನೆ; ಅಪಶಕುನ=ಕೇಡು ಉಂಟಾಗಲಿದೆ ಎಂಬುದನ್ನು ಸೂಚಿಸುವ ನೋಟಗಳು ಇಲ್ಲವೇ ಕ್ರಿಯೆಗಳು; ಶತಕ=ನೂರು; ಆಲಿಸು=ಕೇಳು;

ಮೇಲೆ ಮೇಲಪಶಕುನ ಶತಕವನು ಆಲಿಸದೆ=ಕೀಚಕನು ತನ್ನ ಮನೆಯಿಂದ ಕತ್ತಲು ಕವಿದ ರಾತ್ರಿಯಲ್ಲಿ ನಾಟ್ಯಮಂದಿರದ ಕಡೆಗೆ ಬರುತ್ತಿರುವಾಗ, ದಾರಿಯುದ್ದಕ್ಕೂ ಮುಂದೆ ಕೇಡಾಗಲಿದೆ ಎಂಬುದನ್ನು ಸೂಚಿಸುವಂತೆ ಅನೇಕ ಬಗೆಯ ಪ್ರಾಣಿ ಪಕ್ಶಿಗಳ ದನಿಯು ಕೇಳಿಬರುತ್ತಿದ್ದರೂ, ಅಪಶಕುನಗಳನ್ನು ಲೆಕ್ಕಿಸದೆ;

ಸುಮ್ಮಾನ=ಅತಿಯಾದ ಸಡಗರ, ಆನಂದ ಮತ್ತು ಉದ್ರೇಕದ ವರ್ತನೆ; ತಡವರಿಸು=ನಾಟ್ಯಮಂದಿರದ ಕತ್ತಲಕೋಣೆಯೊಳಗೆ ಅತ್ತಿತ್ತ ಕಯ್ ಕಾಲುಗಳನ್ನು ಆಡಿಸಿ ಹುಡುಕುತ್ತ; ಕೇಡಾಳಿ=ಕೇಡಿಗ

ಸುಮ್ಮಾನದಲಿ ಮಂಚವಿದ್ದ ಎಡೆಗಾಗಿ ತಡವರಿಸಿ ಕೇಡಾಳಿ ಬಂದನು=ಕಾಮಜ್ವರದಿಂದ ಉನ್ಮತ್ತನಾಗಿರುವ ಕೀಚಕನು ನಾಟ್ಯಮಂದಿರದಲ್ಲಿ ಮಂಚವಿದ್ದ ಜಾಗವನ್ನು ಕತ್ತಲಲ್ಲಿ ತಡವರಿಸಿಕೊಂಡು ಹುಡುಕುತ್ತ ಒಳಬಂದನು;

ವನಜ=ತಾವರೆ; ವನಜಮುಖಿ=ತಾವರೆ ಮೊಗದವಳು/ಸುಂದರಿ; ವೀಳೆಯ=ಎಲೆ,ಅಡಿಕೆ, ಸುಣ್ಣ ಮೊದಲಾದುವುಗಳಿಂದ ಸಿದ್ದಗೊಂಡಿರುವ ತಾಂಬೂಲ; ಅನುಲೇಪನ=ದೇಹಕ್ಕೆ ಬಳಿದುಕೊಳ್ಳುವ ಸುಗಂದ ವಸ್ತುಗಳು; ಮಲ್ಲಿಗೆ+ಅರಳ; ಅರಳು=ಹೂವು; ತೊಡಿಗೆ=ತೊಟ್ಟುಕೊಳ್ಳುವ ಹಾರ ಮತ್ತು ಇನ್ನಿತರ ಒಡವೆ ; ಅನುಪಮ+ಅಂಬರ; ಅನುಪಮ=ಸೊಗಸಾದ/ಸುಂದರವಾದ; ಅಂಬರ=ಬಟ್ಟೆ/ವಸ್ತ್ರ

ವನಜಮುಖಿ, ವೀಳೆಯವನು ಅನುಲೇಪನವ ಮಲ್ಲಿಗೆಯರಳ ತೊಡಿಗೆಯನು ಅನುಪಮಾಂಬರ ಇವೆ=ಮಂಚದಲ್ಲಿ ಮಲಗಿರುವ ಬೀಮನನ್ನು ಸೈರಂದ್ರಿಯೆಂದು ತಿಳಿದು, ಆಕೆಯನ್ನು ಉದ್ದೇಶಿಸಿ ಕೀಚಕನು ಮಾತನಾಡತೊಡಗುತ್ತಾನೆ. ತಾವರೆಮೊಗದ ಸುಂದರಿಯೇ, ವೀಳೆಯ, ಸುವಾಸನೆಯ ದ್ರವ್ಯಗಳು, ಮಲ್ಲಿಗೆಯ ಮೊಗ್ಗಿನ ಹಾರ, ಅತ್ಯಂತ ಸೊಗಸಾದ ಬಟ್ಟೆಗಳೆಲ್ಲವನ್ನೂ ನಿನಗಾಗಿ ತಂದಿರುವೆ;

ಅಹರೆ=ಆಗಿರಲು; ಚಿತ್ತೈಸು=ಗಮನಿಸು/ಅನುಗ್ರಹಿಸು;

ಮನೋಹರ ಅಹರೆ ಚಿತ್ತೈಸು=ಮನಸ್ಸಿಗೆ ಮುದವನ್ನು ನೀಡುವಂತಿರುವ ಇವೆಲ್ಲವನ್ನೂ ಸ್ವೀಕರಿಸು;

ಪಾಸಟಿ=ಸರಿ/ಸಮ;

ನಿನಗೆ ಪಾಸಟಿ ಆನು=ನಿನಗೆ ನಾನು ಸಮಾನ. ನಿನ್ನಂತಹ ಸುಂದರಿಯಾದ ಹೆಣ್ಣಿನ ಜೊತೆಗೂಡಲು ಯೋಗ್ಯನಾದ ಗಂಡು ನಾನು;

ಅನಿಮಿಷ=ದೇವತೆ; ಆರು+ಉಂಟು;

ಎನ್ನವೊಲು ಅನಿಮಿಷರೊಳು ಆರುಂಟು=ದೇವತೆಗಳ ಸಮೂಹದಲ್ಲಿ ತಾನೆ ನನ್ನಂತಹ ಗಂಡು ಯಾರಿದ್ದಾರೆ;

ಚೆಲುವರು ಮನುಜರು ಎನ್ನನು ಹೋಲುವರೆ=ಲೋಕದಲ್ಲಿನ ಸುಂದರ ಗಂಡುಗಳಲ್ಲಿ ನನ್ನ ಅಂದಚೆಂದವನ್ನು ಹೋಲುವವರು ಯಾರಿದ್ದಾರೆ. ಲೋಕದ ಚೆಲುವರಲ್ಲಿ ಚೆಲುವ ನಾನು;

ಸೈರಂಧ್ರಿ ಕೇಳು= ಸೈರಂದ್ರಿ, ನನ್ನ ಮಾತನ್ನು ಮನವಿಟ್ಟು ಕೇಳು; ಎನ್ನವೋಲ್ ಪುರುಷರಲಿ ಚೆಲುವರ ಮುನ್ನ ನೀ ಕಂಡು ಅರಿದೆಯಾದೊಡೆ=ಗಂಡಸರಲ್ಲಿ ನನ್ನಂತಹ ಚೆಲುವನನ್ನು ನೀನು ನೋಡಿ ಅರಿತಿದ್ದರೆ;

ಎನ್ನ ಮೇಲಾಣೆ. ಎಲೆಗೆ, ಹುಸಿಯದೆ ಹೇಳು ಹೇಳು=ನನ್ನ ಮೇಲಾಣೆ… ಸುಳ್ಳನ್ನಾಡದೆ ಹೇಳು..ನೀನು ನೋಡಿರುವೆಯಾ..ಹೇಳು;

ಮುನ್ನ=ಮೊದಲು; ನಿನ್ನಂತಪ್ಪ=ನಿನ್ನಂತಹ;

ಮುನ್ನ ನಿನ್ನಂತಪ್ಪ ಸತಿಯರು ಎನ್ನನೇ ಬಯಸುವರು=ಮೊದಲಿನಿಂದಲೂ ನಿನ್ನಂತಹ ಹೆಣ್ಣುಗಳು ರೂಪವಂತನಾದ ನನ್ನನ್ನೇ ಕೂಡಲು ಬಯಸುತ್ತಾರೆ;

ಎಲೆಗೆ ನಿನ್ನಾಣೆ= ಎಲೆ ಸೈರಂದ್ರಿಯೇ… ನಿನ್ನಾಣೆಯಾಗಿಯೂ ನಾನು ನಿಜವನ್ನೇ ನುಡಿಯುತ್ತಿದ್ದೇನೆ;

ಸೋಲು=ವಶವಾಗು;

ಎನ್ನ ಕಂಡರೆ ನಾರಿಯರು ಸೋಲದವರಿಲ್ಲ=ನನ್ನನ್ನು ನೋಡಿದರೆ ನನಗೆ ಮನಸೋತು ವಶವಾಗದ ಹೆಣ್ಣುಗಳೇ ಇಲ್ಲ;

ಎಲವೊ ಕೀಚಕ, ನಿನ್ನ ಹೋಲುವ ಚೆಲುವರಿಲ್ಲ=ಕಾಮಿ ಕೀಚಕನು ತನ್ನ ರೂಪದ ಚೆಲುವನ್ನು ತಾನೇ ಹೊಗಳಿಕೊಂಡು ನುಡಿದ ಮಾತುಗಳೆಲ್ಲವನ್ನೂ ಆಲಿಸಿದ ಬೀಮನು ಈಗ ಮಾತನಾಡತೊಡಗುತ್ತಾನೆ; ಎಲವೋ ಕೀಚಕ, ನಿನ್ನ ಮಾತು ನಿಜ. ನಿನ್ನನ್ನು ಹೋಲುವಂತಹ ಚೆಲುವರು ಈ ಬೂಮಂಡಲದಲ್ಲಿ ಯಾರೂ ಇಲ್ಲ;

ಅಂತು+ಇರಲಿ; ಅಂತಿರಲಿ=ನಿನ್ನ ಹೊಗಳಿಕೆಯ ನುಡಿಗಳು ಹಾಗಿರಲಿ. ಈಗ ನನ್ನ ಚೆಲುವನ್ನು ಕೇಳು; ಲಲನೆ=ಹೆಂಗಸು; ಪರಿ=ರೀತಿ;

ತನ್ನಯ ರೂಪು ಲೋಕದ ಲಲನೆಯರ ಪರಿಯಲ್ಲ, ಬೇರೊಂದು=ನನ್ನ ರೂಪು ಲೋಕದಲ್ಲಿನ ಹೆಣ್ಣುಗಳ ರೀತಿಯಲ್ಲಿಲ್ಲ. ನನ್ನ ಅಂದಚೆಂದದ ಬಗೆಯೇ ಮತ್ತೊಂದು ರೀತಿಯಲ್ಲಿದೆ;

ಇಳೆ=ಬೂಮಿ; ಎಣೆ+ಇಲ್ಲ; ಎಣೆ=ಸಮ/ಸಾಟಿ;

ಇಳೆಯೊಳು ಎನಗೆ ಎಣೆಯಿಲ್ಲ=ಈ ಬೂಮಂಡಲದಲ್ಲಿ ನನಗೆ ಸರಿಸಾಟಿಯಾದ ಸುಂದರಿಯೇ ಇಲ್ಲ;

ನಿನಗೆ ಆನು ಒಲಿದು ಬಂದೆನು=ಈಗ ನಾನು ನಿನ್ನನ್ನು ಒಲಿದು ಬಂದಿದ್ದೇನೆ;

ತನ್ನ ಪರಿಯನು ಬೇಗ ತೋರುವೆನು=ನನ್ನ ರೂಪದ ಸೊಬಗಿನ ಸಿರಿಯ ಬಗೆಯನ್ನು… ನನ್ನ ಮಯ್ ಮಾಟವನ್ನು ನಿನಗೆ ಬೇಗ ತೋರಿಸುತ್ತೇನೆ;

ಬಳಿಕ ನೋಡಾ=ಅನಂತರ ನೀನು ನೋಡಿ ಸವಿಯುವುದು; ಸೋಲು=ಮೋಹಗೊಳ್ಳು/ಪರವಶವಾಗು;

ಪುರುಷರು ಎನಗೆ ಸೋಲದವರಿಲ್ಲ=ಲೋಕದ ಗಂಡಸರಲ್ಲಿ ನನ್ನ ಮಯ್ ಮಾಟವನ್ನು ಕಂಡು ಮರುಳಾಗದವರು ಯಾರು ಇಲ್ಲ. ನನ್ನನ್ನು ನೋಡಿದವರೆಲ್ಲರೂ ನನ್ನೊಡನೆ ಕೂಡಿ ಆಡಿ ರಮಿಸಲು ಬಯಸುತ್ತಾರೆ;

ಪಾಸಟಿ=ಸರಿ/ಸಮ;

ಎನಗೆ ಪಾಸಟಿ ನೀನು=ಎಲ್ಲ ರೀತಿಯಿಂದಲೂ ನನಗೆ ನೀನು ಸಮಾನ;

ನಿನಗೆ+ಆ; ಮನ+ಒಲಿದೆ;

ನಿನಗಾ ಮನವೊಲಿದೆ=ನಿನ್ನ ಚೆಲುವಿಗೆ ನಾನು ಮನಸೋತಿದ್ದೇನೆ;

ತನ್ನಯ=ನನ್ನ; ಹೆಣ್ಣುತನ=ಹೆಣ್ಣಿನ ಕೋಮಲವಾದ ದೇಹ, ಇಂಪಾದ ದನಿ ಮತ್ತು ಮನಮೋಹಕವಾದ ನಡೆನುಡಿ; ಅನು=ಸೊಗಸು;

ನೀ ನೋಡು ತನ್ನಯ ಹೆಣ್ಣುತನದ ಅನುವ=ನನ್ನ ದೇಹದ ಸೊಗಸಿನ ಸಿರಿಯನ್ನು ಈಗ ನೀನು ನೋಡು;

ಹರುಷದಲಿ ಉಬ್ಬಿ ಕೀಚಕನು=ಸೈರಂದ್ರಿಯ ಬದಲು ಬಂದಿರುವ ಬೀಮನು ಆಡಿದ ಮಾತುಗಳನ್ನು ಕೇಳಿ ಆನಂದದಿಂದ ಉಬ್ಬಿದ ಕೀಚಕನು;

ಅನಿಲಜ=ಬೀಮ; ಮೈದಡವು=ದೇಹವನ್ನು ನೇವರಿಸುವುದು/ಸವರುವುದು;

ಅನಿಲಜನ ಮೈದಡವಿ=ಕಾಮಾತುರತೆಯಿಂದ ಬೀಮನ ದೇಹದ ಮೇಲೆ ಕಯ್ ಆಡಿಸುತ್ತಿರಲು;

ವೃತ್ತ=ಗುಂಡಾಗಿರುವ/ದುಂಡಾಗಿರುವ; ಸ್ತನ=ಮೊಲೆ;

ವೃತ್ತಸ್ತನವ ಕಾಣದೆ=ದುಂಡನೆಯ ಮೊಲೆಗಳನ್ನು ಕಾಣದೆ;

ಹೆದರಿ ಬಳಿಕ ಅವ ನಗುತ ಇಂತು ಎಂದನು=ಅರೆಗಳಿಗೆ ಬೆಚ್ಚಿಬಿದ್ದ ಕೀಚಕನು, ಅನಂತರ ಚೇತರಿಸಿಕೊಂಡು ನಗುತ್ತ ಈ ರೀತಿ ನುಡಿದನು;

ಎಲೆಗೆ=ಹೆಂಗಸನ್ನು ಕುರಿತು ಮಾತನಾಡಿಸುವಾಗ ಬಳಸುವ ಪದ; ಕಲುಮೈ+ಆದೆ; ಕಲುಮೈ=ಕಲ್ಲಿನಂತೆ ಗಟ್ಟಿಯಾದ ದೇಹ; ಕಡು=ಅತಿಶಯವಾದ; ಕೋಮಲತೆ=ಮೆತ್ತಗಿರುವಿಕೆ; ಎತ್ತಲು=ಯಾವ ಕಡೆ ಹೋಯಿತು/ಏನಾಯಿತು; ಕರ್ಕಶ+ಅಂಗದ; ಕರ್ಕಶ=ಬಲುಗಟ್ಟಿಯಾದ/ಬಿರುಸಾದ; ಅಂಗ=ದೇಹ/ಶರೀರ; ಬಲುಹು=ಶಕ್ತಿ/ಕಸುವು;

ಎಲೆಗೆ ಕಲುಮೈಯಾದೆ… ಕಡು ಕೋಮಲತೆ ಎತ್ತಲು… ಕರ್ಕಶಾಂಗದ ಬಲುಹು ಇದು ಎತ್ತಲು= ಎಲೆ ಸೈರಂದ್ರಿಯೇ… ಇದೇನಿದು ನಿನ್ನ ಮಯ್ ಕಲ್ಲಾಗಿದೆ… ನಿನ್ನ ದೇಹದ ಕೋಮಲತೆ ಎತ್ತ ಹೋಯಿತು…ನಿನ್ನ ದೇಹಕ್ಕೆ ಗಟ್ಟಿತನದ ಕಸುವು ಹೇಗೆ ಉಂಟಾಯಿತು;

ಮೇಣು=ಇಲ್ಲವೇ; ಮಾಯವೇಷ ಧರಿಸುವುದು=ನಿಜವಾದ ರೂಪವನ್ನು ಮರೆಸಿಕೊಂಡು, ಮತ್ತೊಂದು ರೂಪವನ್ನು ಹೊಂದುವುದು;

ಮಾಯ ವೇಷವ ಧರಿಸಿದೆಯೊ ತಿಳುಹು=ಮಾಯಾವೇಶವನ್ನು ಹೊಂದಿ ಕೋಮಲತೆಯ ಪ್ರತಿರೂಪವಾಗಿದ್ದ ನೀನು ಈಗ ಗಡುಸಿನ ಪ್ರತಿರೂಪವನ್ನು ತಳೆದೆಯೋ;

ಕೇಳು ಎಲವೊ=ಕಾಮಿ ಕೀಚಕನನ್ನು ಉದ್ದೇಶಿಸಿ ಬೀಮನು ನುಡಿಯತೊಡಗುತ್ತಾನೆ;

ಪರ ಸತಿ=ಇತರರ ಹೆಂಡತಿ; ಅಳುಪಿದ+ಆತಂಗೆ; ಅಳುಪು=ಬಯಸು/ಕಾಮಿಸು; ಆತಂಗೆ=ಅವನಿಗೆ/ಅಂತಹ ವ್ಯಕ್ತಿಗೆ ಅಮೃತ=ಒಂದು ಬಗೆಯ ಪಾನೀಯ. ಇದನ್ನು ಕುಡಿದವರಿಗೆ ಸಾವು ಬರುವುದಿಲ್ಲವೆಂಬ ಕಲ್ಪನೆಯು ಜನಮನದಲ್ಲಿದೆ; ವಿಷ=ಒಂದು ಬಗೆಯ ವಸ್ತು/ಪಾನೀಯ. ಇದನ್ನು ಸೇವಿಸಿದವರು ಸಾವನ್ನಪ್ಪುತ್ತಾರೆ;

ಪರಸತಿಗೆ ಅಳುಪಿದಾತಂಗೆ ಅಮೃತ ವಿಷ=ಮತ್ತೊಬ್ಬರ ಹೆಂಡತಿಯೊಡನೆ ಕಾಮದ ನಂಟನ್ನು ಪಡೆಯಲು ಬಯಸುವ ವ್ಯಕ್ತಿಗೆ ಅಮ್ರುತವು ನಂಜಾಗುತ್ತದೆ;

ಮುಂದಲೆ=ತಲೆಯ ಮುಂದಿನ ಕೂದಲನ್ನು; ತುಡುಕು=ತಟ್ಟನೆ ಹಿಡಿ

ಕೋಮಲತೆ ಕರ್ಕಶ ಅಹುದು ಎನುತ ಮುಂದಲೆಯ ತುಡುಕಿದನು=ಕೋಮಲವಾಗಿದ್ದುದು ಗಡುಸಾಗುತ್ತದೆ ಎನ್ನುತ್ತ ಕೀಚಕನ ಮುಂದಲೆಯನ್ನು ತಟ್ಟನೆ ಹಿಡಿದುಕೊಂಡನು;

ಕೃಪಣ=ನೀಚ; ಮತಿ=ಬುದ್ದಿ; ಕೃಪಣಮತಿ=ನೀಚಬುದ್ದಿಯ ಕೀಚಕ; ಚಪಳೆ=ಚಂಚಲ ಗುಣದವಳು; ಫಡ=ತಿರಸ್ಕಾರ ಇಲ್ಲವೇ ಕೋಪವನ್ನು ಸೂಚಿಸುವಾಗ ಹೇಳುವ ಪದ; ಹಾಯ್ದನು=ಪಕ್ಕಕ್ಕೆ ಸರಿದನು;

ಕೃಪಣಮತಿ ಚಪಳೆ ಫಡ ಹೋಗು ಎನುತ ಹಾಯ್ದನು= ನೀಚನಾದ ಕೀಚಕನು “ಚಂಚಲೆಯೇ, ಇದೇನಿದು ಹೋಗತ್ತ” ಎಂದು ತಿರಸ್ಕಾರದಿಂದ ನುಡಿಯುತ್ತ ದೂರ ಸರಿದನು;

ಅನಿಲಜ=ಬೀಮ; ಅಪರ=ಹಿಂದುಗಡೆ; ತುರುಬು=ತಲೆಗೂದಲು;

ಅನಿಲಜನು ಅಪರಭಾಗಕೆ ಹಾಯ್ದು ಕೀಚಕನ ತುರುಬ ಮುಂಗೈಯಲಿ ಹಿಡಿದನು=ಬೀಮನು ಕೂಡಲೇ ಹಿಂದಿನಿಂದ ನುಗ್ಗಿ ಕೀಚಕನ ತಲೆಗೂದಲನ್ನು ಮುಂಗಯ್ ಇಂದ ಹಿಡಿದುಕೊಂಡನು;

ವಿಪುಲ=ಹೆಚ್ಚು/ದೊಡ್ಡದಾದ; ವಿಪುಲಬಲ=ಮಹಾಬಲಶಾಲಿ; ಕಳವಳಿಸು=ಆತಂಕಗೊಳ್ಳು/ಚಡಪಡಿಸು;

ವಿಪುಳಬಲ ಕಳವಳಿಸಿದನು=ಮಹಾಬಲಶಾಲಿಯಾಗಿದ್ದ ಕೀಚಕನು ಆತಂಕಗೊಂಡನು;

ಕಡು ಕುಪಿತನಾದನು=ಕೀಚಕನು ಬಹಳ ಕೋಪಗೊಂಡನು;

ಅಪಸದ=ಕೇಡಿ; ಒಳಹೊಕ್ಕು=ಒಳಕ್ಕೆ ಬಂದು; ಹೆಣಗು=ಏಗು/ನಿಭಾಯಿಸು/ಪ್ರಯಾಸಪಡು;

ಹೆಂಗುಸಲ್ಲ… ಇವನು ಅಪಸದನು… ತೆಗೆ ಕರುಳನು ಎನುತ ಒಳಹೊಕ್ಕು ಹೆಣಗಿದನು= “ಇಲ್ಲಿರುವ ವ್ಯಕ್ತಿ ಹೆಂಗುಸಲ್ಲ…ಇವನು ಕೇಡಿ… ಇವನ ಕರುಳನ್ನು ಕಿತ್ತು ತೆಗೆಯಬೇಕು” ಎನ್ನುತ್ತ ಕೀಚಕನು ಮತ್ತೆ ಒಳಕ್ಕೆ ಬಂದು ಇದುವರೆಗೂ ತನ್ನನ್ನು ಏಮಾರಿಸಿದ್ದ ಬೀಮನೊಡನೆ ಪ್ರಯಾಸದಿಂದ ಹೋರಾಡತೊಡಗಿದನು;

ಉರವಣಿಸು=ರಬಸದಿಂದ ಮುಂದೆ ನುಗ್ಗಿ; ತಿವಿ=ಮುಶ್ಟಿಯಿಂದ ಹೊಡೆ/ಗುದ್ದು;

ಅವನು ಉರವಣಿಸಿ ತಿವಿದನು=ಕೀಚಕನು ರಬಸದಿಂದ ಮುನ್ನುಗ್ಗಿ ಬೀಮನಿಗೆ ಮುಶ್ಟಿಯಿಂದ ಗುದ್ದಿದನು;

ಮಾರುತಿ=ಬೀಮ; ಕವಿ=ಮೇಲೆ ಬೀಳು/ಎರಗು

ಮಾರುತಿ ಕವಿದು ಹೆಣಗಿದನು=ಬೀಮನು ತನ್ನ ಸರಿಸಮಾನಬಲವುಳ್ಳ ಕೀಚಕನ ಮೇಲೆ ಬಿದ್ದು ಪ್ರಯಾಸದಿಂದಲೇ ಹೋರಾಡತೊಡಗಿದನು. ಏಕೆಂದರೆ ಬೀಮ ಮತ್ತು ಕೀಚಕ – ದೇಹದ ಶಕ್ತಿ ಮತ್ತು ಗದಾ ಯುದ್ದದ ವಿದ್ಯೆಯಲ್ಲಿ ಇಬ್ಬರು ಸಮಬಲರು;

ಅಡಸು=ಮೆಟ್ಟು/ಬಿಗಿಯಾಗಿ ಒತ್ತು; ಬವರಿ=ಮಲ್ಲಕಾಳೆಗದ ಒಂದು ಪಟ್ಟು/ವರಸೆ;

ಅಡಸಿ ಬವರಿಯಲಿ ಹೊಯ್ದೊಡೆ=ಬೀಮನು ಕೀಚಕನನ್ನು ಮೆಟ್ಟಿಕೊಂಡು ಮಲ್ಲಕಾಳೆಗದ ಒಂದು ಪಟ್ಟಿನಲ್ಲಿ ಹೊಡೆದರೆ;

ಟೊಣೆ=ತಿವಿ/ಚುಚ್ಚು; ಔಕು=ಅದುಮು;

ಟೊಣೆದು ಔಕಿದೊಡೆ=ಕೀಚಕನನ್ನು ಕಯ್ಗಳಿಂದ ತಿವಿದು ಅದುಮಿದರೆ; ಮಡಮುರಿ=ಹಿಮ್ಮೆಟ್ಟು/ಹಿಂದಕ್ಕೆ ಹೊರಳು;

ಮಡಮುರಿಯದೆ ಒಳಹೊಕ್ಕು=ಮಹಾಬಲನಾಗಿದ್ದ ಕೀಚಕನು ಹಿಮ್ಮೆಟ್ಟದೆ, ಒಳಕ್ಕೆ ನುಗ್ಗಿ ಬಂದು;

ಸವಡಿ=ಜೊತೆ/ಜೋಡಿ; ಮಂದರ=ಒಂದು ಪರ್‍ವತದ ಹೆಸರು; ಪವನಸುತ=ಬೀಮ; ಒಪ್ಪು=ಪ್ರಕಟವಾಗು/ಕಂಡುಬರುವುದು;

ಸವಡಿ ಮಂದರದಂತೆ ಕೀಚಕ ಪವನಸುತರು ಒಪ್ಪಿದರು=ಎರಡು ಮಂದರ ಪರ್‍ವತಗಳಂತೆ ಕಂಡುಬಂದ ಕೀಚಕ ಮತ್ತು ಬೀಮ – ಇಬ್ಬರೂ ಮಲ್ಲಯುದ್ದದ ನಾನಾ ಪಟ್ಟುಗಳಲ್ಲಿ ಹೋರಾಡತೊಡಗಿದರು;

ಭೀಮನ ಯುವತಿ=ಸೈರಂದ್ರಿ; ಹೊಯಿಲ್=ಏಟು/ಪೆಟ್ಟು/ಹೊಡೆತ; ಹೋರಟೆ=ಕಾಳೆಗ; ಆಲಿಸು=ಕೇಳು;

ಭೀಮನ ಯುವತಿ ನಗುತ ಹೊಯ್ಲ ಹೋರಟೆಯ ಆಲಿಸುತಲಿದ್ದಳು =ಕತ್ತಲೆ ಕವಿದಿರುವ ನಾಟ್ಯಮಂದಿರದಲ್ಲಿ ಇಬ್ಬರು ಸಮಬಲರ ನಡುವಿನ ಮಲ್ಲಯುದ್ದದ ಹೊಡೆತಗಳ ಶಬ್ದವನ್ನು ಸೈರಂದ್ರಿಯು ನಗುತ್ತ ಕೇಳಿಸಿಕೊಳ್ಳುತ್ತಿದ್ದಳು;

ಗಾಯ=ಪೆಟ್ಟು; ತರವರಿಸು=ತತ್ತರಿಸು/ನಡುಗು; ಮಂಡಿಸು=ಬಾಗಿಸು/ಬಗ್ಗಿಸು; ಮರೆ+ಪಡೆದು; ಮರೆ=ಪ್ರಜ್ನೆಯನ್ನು ಕಳೆದುಕೊಳ್ಳುವುದು;

ಎರಗಿದೊಡೆ ಕೀಚಕನ ಗಾಯಕೆ ತರವರಿಸಿ ಕಲಿಭೀಮ ಮಂಡಿಸಿ ಮರೆವಡೆದು=ಕೀಚಕನು ಆಕ್ರಮಣಮಾಡಿ ಹೊಡೆದ ಪೆಟ್ಟಿಗೆ ಬೀಮನು ಕೆಳಕ್ಕೆ ಕುಸಿದು ಮೂರ್‍ಚೆಹೋಗಿ;

ಮುರಿದು+ಎದ್ದು; ಮುರಿ=ಮತ್ತೆ ಬರುವುದು/ಪುನಹ ಬರುವುದು; ಮುರಿದೆದ್ದು=ಬೀಮನು ಮತ್ತೆ ಚೇತರಿಸಿಕೊಂಡು ಮೇಲೆದ್ದು; ರೋಷ=ಸಿಟ್ಟು/ಆಕ್ರೋಶ; ಔಡು=ದವಡೆ/ಕೆಳತುಟಿ; ಒಡೆಯಗಿದು=ಜೊತೆಯಲ್ಲಿಯೇ ಹಲ್ಲು ಕಚ್ಚುತ್ತ;

ಮುರಿದೆದ್ದು ರೋಷದಲಿ ಔಡನು ಒಡೆಯಗಿದು=ಕೆಲವು ಗಳಿಗೆಗಳಲ್ಲಿಯೇ ಬೀಮನು ಮತ್ತೆ ಚೇತರಿಸಿಕೊಂಡು ಕೋಪೋದ್ರೇಕದಿಂದ ಅವುಡು ಕಚ್ಚುತ್ತ;

ಸಿಡಿಲು=ಮೋಡಗಳ ತಾಕುವಿಕೆಯಿಂದ ದೊಡ್ಡ ಶಬ್ದದೊಡನೆ ಹೊರಹೊಮ್ಮುವ ಬೆಂಕಿ; ಬರಸಿಡಿಲು=ಇದ್ದಕ್ಕಿದ್ದಂತೆ ಬಂದು ಬಡಿಯುವ ಸಿಡಿಲು; ಶಿಖರ=ಮೇಲಿನ ತುದಿ;

ಬರಸಿಡಿಲು ಪರ್ವತದ ಶಿಖರವನು ಎರಗುವಂತಿರೆ=ಬರಸಿಡಿಲು ಪರ್‍ವತದ ಮೇಲಿನ ತುದಿಗೆ ಬಂದು ಬಡಿಯುವಂತೆ;

ರಣಧೀರ=ಕಾಳೆಗದ ಶೂರ; ಉನ್ನತ=ಹೆಚ್ಚಿನ/ಮೇಲಾದ; ಬಾಹುಸತ್ತ್ವ=ತೋಳಿನ ಬಲ; ಖಳ=ನೀಚ/ಕೇಡಿ;

ರಣಧೀರನು ಉನ್ನತ ಬಾಹುಸತ್ವದಲಿ ಖಳನ ನೆತ್ತಿಯನು ಎರಗಿದನು=ಕಾಳೆಗದ ಮಲ್ಲನಾದ ಬೀಮನು ತನ್ನ ದೊಡ್ಡ ಬಾಹುಗಳ ಕಸುವಿನಿಂದ ಕಾಮಿ ಕೀಚಕನ ತಲೆಯ ಮೇಲೆ ಬಡಿದನು;

ಅರಿ=ಹಗೆ/ಶತ್ರು; ಮುಷ್ಟಿ=ಬಿಗಿಹಿಡಿದ ಮುಂಗಯ್; ಅರಿಯ ಮುಷ್ಟಿ=ಕೀಚಕನ ಪಾಲಿಗೆ ಹಗೆಯಾಗಿರುವ ಬೀಮನ ಮುಶ್ಟಿಯ ಹೊಡೆತ; ಬಿರಿ=ಸೀಳು/ಒಡೆ; ಬಿರಿ=ಸೀಳು/ಒಡೆ/ಹೋಳು;

ಅರಿಯ ಮುಷ್ಟಿಯ ಗಾಯದಲಿ ತಲೆಬಿರಿಯೆ=ಬೀಮನ ಮುಶ್ಟಿಯ ಹೊಡೆತದಿಂದ ಉಂಟಾದ ಗಾಯದಿಂದ ಕೀಚಕನ ತಲೆಯು ಒಡೆಯಿತು;

ತನು=ದೇಹ; ಡೆಂಡಣಿಸು=ನಡುಗು/ಕಂಪಿಸು;

ತನು ಡೆಂಡಣಿಸಿ=ಕೀಚಕನ ದೇಹ ನಡುಗತೊಡಗಿತು;

ಕಂಗಳು ತಿರುಗಿ=ಕಣ್ಣುಗಳು ತಿರುಗುತ್ತ ಅಂದರೆ ಮಿದುಳಿಗೆ ಬಿದ್ದ ಪೆಟ್ಟಿನಿಂದಾಗಿ ಕಣ್ಣುಗಳ ದಿಟ್ಟಿ ಮಂಜಾಗುತ್ತಿರಲು;

ಜೋಲು=ಇಳಿಬೀಳು;

ಜೋಲಿದು=ಜೋತುಬಿದ್ದು/ಕುಸಿದು ಬಿದ್ದು;

ಅಸು=ಪ್ರಾಣ/ಜೀವ; ಪಸರಿಸು=ವ್ಯಾಪಿಸು/ಆವರಿಸಿಕೊಳ್ಳು;

ಮೆಲ್ಲ ಮೆಲ್ಲನೆ ಅಸುವ ಪಸರಿಸುತ=ತೀವ್ರವಾದ ಪೆಟ್ಟಾಗಿದ್ದರೂ ಕೀಚಕನು ಮೆಲ್ಲ ಮೆಲ್ಲಗೆ ಮತ್ತೆ ತನ್ನ ಬಲವನ್ನು ಒಗ್ಗೂಡಿಸಿಕೊಂಡು;

ಕರಿ=ಆನೆ; ಕೇಸರಿ=ಸಿಂಹ; ಉರೆ=ಅತಿಶಯವಾಗಿ; ತಿರುಗು=ಹಿಮ್ಮೆಟ್ಟು/ಹೊರಳು;

ಕೆರಳಿ ಕರಿ ಕೇಸರಿಯ ಹೊಯ್ದು ಉರೆ ತಿರುಗುವಂತಿರೆ=ಕೆರಳಿದ ಆನೆಯು ತನ್ನ ಸೊಂಡಲಿನಿಂದ ಸಿಂಹವನ್ನು ಹೊಡೆದು ಹಿಮ್ಮೆಟ್ಟಿಸುವಂತೆ;

ಬರಿ=ಪಕ್ಕೆ; ಹಲು ಮೊರೆ=ಕೋಪೋದ್ರೇಕದಿಂದ ಹಲ್ಲುಗಳನ್ನು ಬಿಗಿಯಾಗಿ ಕಚ್ಚಿಕೊಳ್ಳುವುದು;

ಭೀಮಸೇನನ ಬರಿಯ ತಿವಿದನು= ಕೀಚಕನು ಬೀಮನ ಪಕ್ಕೆಗೆ ಗುದ್ದಿದನು; ಖಳರಾಯ ಬೀಳು ಎನುತ ಹಲು ಮೊರೆದ=ಕೇಡಿಯೇ ಬೀಳು ಎನ್ನುತ್ತ ಹಲ್ಲುಮುರಿಯನ್ನು ಕಚ್ಚಿದ;

ಪೈಸರ+ಪೋಗಿ; ಪೈಸರ=ಮಲ್ಲಯುದ್ದದ ಒಂದು ವರಸೆ/ಪಟ್ಟು; ಮರಳು=ಹಿಂತಿರುಗು;

ತಿರುಗಿ ಪೈಸರವೋಗಿ ಮರಳಿ=ಈಗ ಬೀಮನು ಮಲ್ಲಯುದ್ದದ ಒಂದು ಪಟ್ಟಿನಂತೆ ಕೆಲವು ಹೆಜ್ಜೆ ಹಿಂದಕ್ಕೆ ಸರಿದು ಮತ್ತೆ ಮುಂದೆ ಬಂದು;

ಪವನಜ=ಬೀಮ; ಪಿರಿದು+ಉರ=ಪೇರುರ; ಪಿರಿದು=ಅಗಲವಾದ/ದೊಡ್ಡದಾದ; ಉರ=ಎದೆ; ಪೇರುರ=ದೊಡ್ಡ ಎದೆ;

ಕೀಚಕನ ಪೇರುರವನು ಪವನಜ ತಿವಿದನು=ಕೀಚಕನ ದೊಡ್ಡದಾದ ಎದೆಯ ಮೇಲೆ ಬೀಮನು ಬಲವಾಗಿ ಗುದ್ದಿದನು;

ಜರ್ಝರಿತ=ಚಿದ್ರಚಿದ್ರವಾದುದು/ಒಡೆದುಹೋದುದು;

ಎದೆ ಜರ್ಝರಿತವಾಗಲು=ಕೀಚಕನ ಎದೆಯ ಮೂಳೆಗಳು ನರುಕಿಹೋದವು;

ಕಾರು=ವಾಂತಿ ಮಾಡು

ಕರುಳ ಕಾರಿದನು=ಕೀಚಕನ ಹೊಟ್ಟೆಯಿಂದ ಕರುಳು ಕಿತ್ತು ಹೊರಬಂದಿತು;

ಆಲಿ=ಕಣ್ಣು ಗುಡ್ಡೆ; ಬಿರಿ=ಒಡೆ/ಸೀಳು;

ಆಲಿಗಳು ಬಿರಿದವು=ಕೀಚಕನ ಕಣ್ಣುಗುಡ್ಡೆಗಳು ಒಡೆದವು;

ಉರುಗು=ಹೊರಳು; ಒಲೆದು=ತೂರಾಡು; ಒಲದೊಲೆದು=ತೂರಾಡುತ್ತ;

ಕಣ್ಣು ಉರುಗಿ ಒಲೆದು ತೊಲೆದು=ಕಣ್ಣುಗಳು ಹೊರಳಿ ಅಂದರೆ ಏನೂ ಕಾಣದಂತಾಗಿ ಕೀಚಕನು ತೂರಾಡುತ್ತ;

ಧೊಪ್ಪನೆ ಕೆಡೆದು=ದೊಪ್ಪನೆ ಕೆಳಕ್ಕೆ ಬಿದ್ದು;

ಹೊರಳು=ಉರುಳಾಡು/ಉರುಳು;

ನಿಮಿಷಕೆ ಹೊರಳಿ=ಕೀಚಕನು ಕೆಲವು ಗಳಿಗೆಯ ಕಾಲ ನೆಲದ ಮೇಲೆ ಮಿಲಮಿಲನೆ ಒದ್ದಾಡುತ್ತಿರುವಾಗಲೇ;

ಕಾಯ=ದೇಹ; ಹರಣ=ಜೀವ/ಪ್ರಾಣ

ಕೀಚಕನ ಕಾಯ ಹರಣವ ಕಳುಹಿ ಕಳೆದುದು=ಕೀಚಕನ ದೇಹದಿಂದ ಜೀವ ಹಾರಿಹೋಯಿತು;

ಬಸುರು=ಹೊಟ್ಟೆ; ತಲೆಯನು ಎದೆಯೊಳಗೆ ಇಕ್ಕಿ=ಕೀಚಕನ ತಲೆಯನ್ನು ಎದೆಯಲ್ಲಿಟ್ಟು;

ಕೈ ಕಾಲ್ಗಳನು ಬಸುರೊಳು ಸಿಕ್ಕಿ=ಕೀಚಕನ ಕಯ್ ಕಾಲುಗಳನ್ನು ಅವನ ಹೊಟ್ಟೆಯೊಳಕ್ಕೆ ಸಿಕ್ಕಿಸಿ;

ತೊಲಗು=ಮರಳು/ಹಿಂತಿರುಗು;

ದೂರಕೆ ತೊಲಗಿದನು=ಕೀಚಕನ ಹೆಣ ಬಿದ್ದಿರುವ ಜಾಗದಿಂದ ಬೀಮನು ದೂರ ಬಂದನು;

ರಮಣಿ=ಹೆಂಡತಿ; ಹದನು=ಅವಸ್ತೆ/ಸ್ತಿತಿ;

ರಮಣಿಗೆ ಕೀಚಕನ ಹದನ ತೋರಿದನು=ದ್ರೌಪದಿಗೆ ಕೀಚಕನು ಹೆಣವಾಗಿ ಬಿದ್ದಿರುವುದನ್ನು ತೋರಿಸಿದನು;

ಕಾಲ=ಯಮ; ಕೋಣ=ಗಂಡು ಎಮ್ಮೆ; ಕಾಲನ ಕೋಣ=ಸಾವಿನ ದೇವತೆಯಾದ ಯಮನು ಸಂಚರಿಸಲು ಕೋಣವನ್ನು ವಾಹನವನ್ನಾಗಿ ಬಳಸುತ್ತಾನೆ ಎಂಬ ಕಲ್ಪನೆಯು ಜನಮನದಲ್ಲಿದೆ; ಇಳೆ=ಬೂಮಿ; ಒರಗು=ಮಲಗು;

ಕಾಲನ ಕೋಣ ಖಳನ ತುಳಿದಂತೆ ಇಳೆಯೊಳು ಒರಗಿರೆ ಕಂಡು=ಯಮನ ಕೋಣವೇ ನೀಚನನ್ನು ತುಳಿದಿರುವಂತೆ ನೆಲದಲ್ಲಿ ಬಿದ್ದಿರುವ ಕೀಚಕನ ಹೆಣವನ್ನು ಕಂಡು;

ಅಪ್ಪು=ತಬ್ಬಿಕೊಳ್ಳು/ಆಲಂಗಿಸು; ಮುಂಡಾಡು=ಮುತ್ತಿಡು/ಚುಂಬಿಸು; ಕಾಮಿನಿ=ಹೆಂಗಸು; ಕಳಕಳಿಸು=ಅಕ್ಕರೆ/ಪ್ರೀತಿ

ಕಾಮಿನಿ ಭೀಮಸೇನನನು ಅಪ್ಪಿ ಮುಂಡಾಡಿ ಕಳಕಳಿಸಿದಳು=ದ್ರೌಪದಿಯು ಬೀಮಸೇನನನ್ನು ತಬ್ಬಿಕೊಂಡು ಮುತ್ತನ್ನಿಟ್ಟು ತನ್ನ ಅಕ್ಕರೆಯನ್ನು ತೋರಿಸಿದಳು;

ಸಾರು=ದೂರ ಸರಿ/ಮರೆಯಾಗು; ಪವನಜ=ಬೀಮ; ಅತ್ತಲು=ಆ ಕಡೆ; ಸರಿ=ಹೋಗು/ತೆರಳು;

ತರುಣಿ ಬಿಡು ಸಾರು ಎನುತ ಪವನಜ ಅತ್ತಲು ಸರಿದನು=ದ್ರೌಪದಿಯ ಆಲಿಂಗನದಿಂದ ತನ್ನನ್ನು ಬಿಡಿಸಿಕೊಳ್ಳುತ್ತ, “ದ್ರೌಪದಿಯೇ ನನ್ನನ್ನು ಬಿಡು. ಇಲ್ಲಿಂದ ಮರೆಯಾಗು” ಎಂದು ಹೇಳುತ್ತ ಬೀಮನು ಅಡುಗೆಯ ಮನೆಯತ್ತ ತೆರಳಿದನು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications