ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 12

ಸಿ. ಪಿ. ನಾಗರಾಜ.

*** ಕೀಚಕನ ಪ್ರಸಂಗ: ನೋಟ – 12 ***

ದ್ರುಪದನಂದನೆ ಕರೆದು ಕಾಹಿನವರಿಗೆ ಕೀಚಕನ ಹದನ ನುಡಿದಳು.

ಸೈರಂಧ್ರಿ: ದುರುಳ ಬಲುಹಿಂದ ಎನ್ನನು ಎಳೆದೊಡೆ, ಗಂಧರ್ವರು ನೋಡಿ ಕೆರಳಿದರು. ಈತಗೆ ಹರುವ ಕಂಡರು.

(ಎನೆ ಕಾಹಿನವದಿರು ಅವಳೊಡನೆ ಹರಿತಂದರು. ಕೈದೀವಿಗೆಯಲಿ ಅರಸಿ ಅವನು ಇಹ ಪರಿಯ ಕಂಡರು. ಬೇಗದಲಿ ಹರಿದು ಆತನ ಅನುಜಾತರಿಗೆ ಹೇಳಿದರು. ಕೀಚಕನ ಸೋದರರು ಕರದಿ ಬಾಯ್ಗಳ ಹೊಯ್ದು, ಹೃದಯದೊಳು ಉರಿ ಚಡಾಳಿಸೆ, ಬಿಟ್ಟ ಮಂಡೆಯೊಳಿರದೆ ಬಾಯ್ವಿಡುತ ಬಂದರು.)

ಕೀಚಕನ ಸೋದರರು: ಅಕಟ… ಕೀಚಕ ವೀರ… ಎಮಗೆ ಆರು ಗತಿ… ಆವು ದೇಶಿಗರಾದೆವು… ಇನ್ನಾರ ಸೇರುವೆವು…

(ಎನುತ ಅವನ ತಕ್ಕೈಸಿ ಹಲುಬಿದರು.)

ಕೀಚಕನ ಸೋದರರು: ಕ್ರೂರಕರ್ಮರು ನಿನ್ನ ಕೊಂದವರು ಆರು… ಹಾ… ಹಾ…

(ಎನುತ ಹಲುಬಲು, ವಾರಿಜಾನನೆ ಮುಗುಳುನಗೆಯಲಿ ಖಳರ ನೋಡಿದಳು.)

ಕೀಚಕನ ಸೋದರರು: ಸಹಭವನು ಇವಳಿಗೋಸುಗವೆ ಅಳಿದನೇ… ತಪ್ಪೇನು.

(ಎನುತ, ನಡು ಇರುಳು ಅವದಿರು ಐತಂದು ವೈರಾಟರಾಯಂಗೆ ಅರುಹಿದರು.)

ಕೀಚಕನ ಸೋದರರು: ಅವಳನು ಆತನ ಕೂಡೆ ಕಳುಹುವೊಡೆ ಎವಗೆ ನೇಮ.

(ಎಂದು ಬೀಳ್ಕೊಂಡು, ಅವರು ಮರಳಿದು ಬಂದು ಕಮಲಲೋಚನೆಯ ಹಿಡಿದರು. ಮಂಚದಲಿ ಅವನ ಹೆಣನನು ತೆಗೆದು ಅವಳನು ಕಾಲ ದೆಸೆಯಲಿ ಬಿಗಿದರು.)

ಕೀಚಕನ ಸೋದರರು: ನಗುವುದು ಇನ್ನೊಮ್ಮೆ…

(ಎನುತ ಅವರು ಕಾಮಿನಿಯ ಕಟ್ಟಿದರು. ಬೆಗಡುಗೊಂಡ ಅಂಭೋಜಮುಖಿಯು ಉಬ್ಬೆಗದೊಳು ಒದರಿದಳು.)

ಸೈರಂಧ್ರಿ: ಅಕಟಕಟ… ಪಾಪಿಗಳಿರಾ… ಗಂಧರ್ವರಿರ… ಹಾಯ್…

(ಎನುತ ಹಲುಬಿದಳು.)

ಅಕಟ ಕೇಳು… ಜಯನೇ… ಜಯಂತನೇ ಕೇಳು… ವಿಜಯ… ಜಯೋದ್ಭವನೆ… ನೀ ಕೇಳು… ಜಯಸೇನನೆ… ದುರಾತ್ಮಕರು ಎನ್ನನು ಎಳೆದೊಯ್ದು ಅಗ್ನಿಯಲಿ ಬೀಳಿಸುವರು… ಅಕಟ, ನೀವು ಏಳಿ… ತಡವೇಕೆ…

(ಎನುತ ಮೊರೆಯಿಡೆ… ಸತಿಯ ಆಕ್ರಂದನ ಧ್ವನಿಯ ಕಲಿ ಭೀಮ ಕೇಳಿದನು.)

ಭೀಮ: (ತನ್ನಲ್ಲಿಯೇ) ಈ ದುರಾತ್ಮರಿಗೆ ಅಗ್ರಜನ ಸಾವು ಐದದೇ. ಕುನ್ನಿಗಳನು ಹೊಯ್ದು ಈ ಕ್ಷಣಕೆ ತಮ್ಮ ಅಣ್ಣನಲ್ಲಿಗೆ ಕಳುಹಲುಬೇಕಲಾ. ಬೈಯ್ದು ಫಲವೇನು.

(ಎಂದು ಮಾರುತಿ ಹಾಯ್ದು ಝಂಕಿಸಿ ರುದ್ರಭೂಮಿಯನು ಎಯ್ದಿದನು. ಫಡ ಎನುತ ಹೆಮ್ಮರನ ಮುರಿದುಕೊಂಡನು.)

ಕೀಚಕನ ಸೋದರರು: ಎಲೆಲೆ ಗಂಧರ್ವಕನ ಹೆಂಗುಸ ಕಳಚಿ ಬಿಡಿರೋ… ಪಾಪಿ ಹೋಗಲಿ… ಇವನು ಕೊಲೆಗಡಿಗನು.

(ಎನುತ ಹೆಣನನು ಬಿಸುಟು ದೆಸೆದೆಸೆಗೆ ತಲೆಗೆದರಿ ತೆಗೆದು ಓಡೆ ಕಲಿಭೀಮನು ಕಳಕಳಸಿ ನಕ್ಕನು.)

ಭೀಮ: ಎಲೆ ನಾಯ್ಗಳಿರ ಹೋದೊಡೆ ಬಿಡುವೆನೇ… ಹಾಯ್…

(ಎನುತ ಕೈಕೊಂಡ ಹೆಮ್ಮರನನು ತಿರುಹಿದನು. ಅವದಿರನು ಅರೆದು ನಿಟ್ಟೊರೆಸಿದನು. ದೆಸೆ ದೆಸೆಗೆ ಒರಲಿ ಚಿಮ್ಮುವ ಚಪಲರನು ಬೆಂಬತ್ತಿ, ಬರಿಕೈದು ಕುರಿದರಿಯ ಮಾಡಿದನು. ನೂರೈವರನು ಕೊಂದನು. ಮರನ ಹಾಯಿಕಿ, ಮರಳಿ ಮಿಣ್ಣನೆ ಬಂದು ಬಾಣಸದ ಮನೆಯ ಹೊಕ್ಕನು. ಪೌರಜನವು ಸುಳಿಯಲಮ್ಮದು. ಮಂದಿ ಗುಜುಗುಜಿಸಿ… ಇವರ ಅಳಿವ ವಚನಿಸಲಮ್ಮದು. ಈಕೆಯನು ಅಲುಕಲಮ್ಮದು. ನೋಡಲಮ್ಮದು. ನಳಿನಮುಖಿ ನಸುನಗುತ ತಿಳಿಗೊಳದೊಳಗೆ ಹೊಕ್ಕಳು. ಮಿಂದು ಬೀದಿಗಳೊಳಗೆ ಬರುತಿರೆ ಕಂಡು ಅಖಿಲಜನ ಕೈಗಳ ಮುಗಿದುದು.)

ಪುರಜನರು-1: ಅಕಟ… ಅವಿವೇಕಿ ಕೀಚಕನು ಈಕೆಗೋಸುಗ ಅಳಿದನು.

(ಎಂದು ಕೆಲಬರು… )

ಪುರಜನರು-2: ಇದೇಕೆ ನಮಗೆ ಈ ಚಿಂತೆ ಶಿವಶಿವ.

(ಎಂದು ಕೆಲಕೆಲರು ನೂಕಿ ಕವಿದುದು. ಮಂದಿ ಮಧ್ಯದೊಳು ಈಕೆ ಮೆಲ್ಲನೆ ಬರುತಲು ಆ ಲೋಕೈಕ ವೀರನ ಆ ಬಾಣಸಿನ ಬಾಗಿಲಲಿ ಕಂಡಳು. ಮುಗುಳು ನಗೆಯಲಿ ಕಣ್ಣ ಕಡೆಯಲಿ ವಿಗಡ ಭೀಮನ ನೋಡಿ… )

ಸೈರಂಧ್ರಿ: ಗಂಧರ್ವಪತಿಗೆ ಆವ್ ಕೈಗಳ ಮುಗಿದೆವು… ನಮೋ ನಮೋ…

(ಎನುತ ಹೊಗರಿಡುವ ಹರುಷದಲಿ, ರೋಮಾಳಿಗಳ ಗುಡಿಯಲಿ ತನ್ನ ನಿಳಯಕೆ ಮುಗುದೆ ಬಂದಳು.

ಪದ ವಿಂಗಡಣೆ ಮತ್ತು ತಿರುಳು

ದ್ರುಪದ ನಂದನೆ=ದ್ರುಪದ ರಾಜನ ಮಗಳು ದ್ರೌಪದಿ; ಕಾಹು=ಕಾಯುವಿಕೆ/ಪಹರೆ; ಕಾಹಿನವರು=ಕಾವಲುಗಾರರು; ಹದನ=ಸುದ್ದಿ;

ದ್ರುಪದನಂದನೆ ಕರೆದು ಕಾಹಿನವರಿಗೆ ಕೀಚಕನ ಹದನ ನುಡಿದಳು=ದ್ರೌಪದಿಯು ರಾಜಬಟರನ್ನು ಕರೆದು ಕೀಚಕನ ಸಾವಿನ ಸುದ್ದಿಯನ್ನು ಅವರಿಗೆ ಹೇಳಿದಳು;

ದುರುಳ=ನೀಚ; ಬಲುಹು=ಬಲಾತ್ಕಾರ; ಎನ್ನನು=ನನ್ನನ್ನು; ಎಳೆದೊಡೆ=ಎಳೆದಿದ್ದರಿಂದ;

ದುರುಳ ಬಲುಹಿಂದ ಎನ್ನನು ಎಳೆದೊಡೆ=ನೀಚನಾದ ಕೀಚಕನು ಬಲಾತ್ಕಾರದಿಂದ ನನ್ನ ಮಾನಹಾನಿ ಮಾಡಲು ಎಳೆದಿದ್ದರಿಂದ;

ಗಂಧರ್ವ=ದೇವತೆ; ಕೆರಳು=ಕೋಪಗೊಳ್ಳು/ಉದ್ರಿಕ್ತವಾಗು;

ಗಂಧರ್ವರು ನೋಡಿ ಕೆರಳಿದರು=ನನ್ನ ಗಂಡಂದಿರಾದ ದೇವತೆಗಳು ಕೀಚಕನ ಹಲ್ಲೆಯನ್ನು ನೋಡಿ ಕೋಪಗೊಂಡರು;

ಹರುವು=ನಾಶ/ಅಳಿವು/ಕೊನೆ;

ಈತಗೆ ಹರುವ ಕಂಡರು=ಈತನಿಗೆ ಕೊನೆಗಾಣಿಸಿದರು/ ಇವನನ್ನು ಕೊಂದರು;

ಎನೆ=ಎಂದು ಹೇಳಲು;

ಕಾಹಿನ+ಅವದಿರು; ಕಾಹಿನ=ಕಾವಲಿನ; ಅವದಿರು=ಅವರು; ಕಾಹಿನವದಿರು=ಕಾವಲಿನ ಪಡೆಯವರು; ಹರಿ=ಓಡು/ವೇಗವಾಗಿ ಚಲಿಸು;

ಕಾಹಿನವದಿರು ಅವಳೊಡನೆ ಹರಿತಂದರು=ಕಾವಲಿನ ಪಡೆಯವರು ಸೈರಂದ್ರಿಯೊಡನೆ ನಾಟ್ಯಮಂದಿರದೊಳಕ್ಕೆ ಓಡೋಡಿ ಬಂದರು;

ದೀವಿಗೆ=ಸೊಡರು/ದೀಪ; ಕೈದೀವಿಗೆ=ಪಂಜು; ಅರಸು=ಹುಡುಕು; ಇಹ=ಇರುವ; ಪರಿ=ರೀತಿ/ಅವಸ್ತೆ;

ಕೈದೀವಿಗೆಯಲಿ ಅರಸಿ ಅವನು ಇಹ ಪರಿಯ ಕಂಡರು=ಕತ್ತಲು ಕವಿದಿದ್ದ ನಾಟ್ಯಮಂದಿರದೊಳಗೆ ಪಂಜನ್ನು ಹಿಡಿದುಕೊಂಡು ಹುಡುಕುತ್ತ ಹೋಗಿ, ನೆಲದ ಮೇಲೆ ಸತ್ತು ಬಿದ್ದಿರುವ ಕೀಚಕನನ್ನು ಕಂಡರು;

ಅನುಜಾತ=ಒಡಹುಟ್ಟಿದ/ತಮ್ಮ;

ಬೇಗದಲಿ ಹರಿದು ಆತನ ಅನುಜಾತರಿಗೆ ಹೇಳಿದರು=ಕಾವಲು ಪಡೆಯವರು ಅಲ್ಲಿಂದ ವೇಗವಾಗಿ ಓಡಿಬಂದು ಕೀಚಕನ ತಮ್ಮಂದಿರಿಗೆ ಕೀಚಕನ ಸಾವಿನ ಸುದ್ದಿಯನ್ನು ತಿಳಿಸಿದರು;

ಕರ=ಕಯ್;

ಕೀಚಕನ ಸೋದರರು ಕರದಿ ಬಾಯ್ಗಳ ಹೊಯ್ದು=ಅಣ್ಣನ ಸಾವಿನ ಸುದ್ದಿಯನ್ನು ಕೇಳಿ ಸಂಕಟಕ್ಕೀಡಾದ ಕೀಚಕನ ತಮ್ಮಂದಿರು ತಮ್ಮ ಕಯ್ಗಳಿಂದ ಬಾಯನ್ನು ಬಡಿದುಕೊಳ್ಳುತ್ತ;

ಹೃದಯ=ಎದೆ; ಉರಿ=ಸಂಕಟ/ಬೆಂಕಿಯ ಜ್ವಾಲೆ; ಚಡಾಳಿಸು=ಹಬ್ಬು/ಹೆಚ್ಚಾಗು/ತುಂಬು;

ಹೃದಯದೊಳು ಉರಿ ಚಡಾಳಿಸೆ=ಎದೆಯಲ್ಲಿ ಸಂಕಟವು ಬೆಂಕಿಯ ಉರಿಯಂತೆ ಹಬ್ಬುತ್ತಿರಲು;

ಮಂಡೆ=ತಲೆ; ಮಂಡೆಯೊಳು+ಇರದೆ; ಬಿಟ್ಟ ಮಂಡೆ=ಕೆದರಿದ ತಲೆಗೂದಲು; ಬಾಯ್+ಬಿಡು; ಬಾಯ್ವಿಡು=ಗೋಳಾಡು/ಸಂಕಟಪಡು;

ಬಿಟ್ಟ ಮಂಡೆಯೊಳಿರದೆ ಬಾಯ್ವಿಡುತ ಬಂದರು=ಕೀಚಕನ ಸಾವಿನ ಸುದ್ದಿಯನ್ನು ಕೇಳಿದ ಕೂಡಲೇ ಉಟ್ಟಬಟ್ಟೆಯಲ್ಲಿಯೇ ಹೇಗಿದ್ದರೋ ಹಾಗೆ ಗೋಳಾಡುತ್ತ ನಾಟ್ಯಮಂದಿರಕ್ಕೆ ಬಂದರು;

ಅಕಟ=ಅಯ್ಯೋ; ಗತಿ=ಆದಾರ/ಆಶ್ರಯ;

ಅಕಟ, ಕೀಚಕ ವೀರ, ಎಮಗೆ ಆರು ಗತಿ=ಅಯ್ಯೋ… ಅಣ್ಣಾ… ಇನ್ನು ಮುಂದೆ ನಮಗೆ ಯಾರು ದಿಕ್ಕು. ನಮ್ಮನ್ನು ಕಾಪಾಡುವವರು ಯಾರು;

ದೇಶಿಗರು+ಆದೆವು; ದೇಶಿಗ=ಗತಿಯಿಲ್ಲದವನು/ಪರದೇಶಿ/ತಬ್ಬಲಿ;

ಆವು ದೇಶಿಗರಾದೆವು=ನಾವು ತಬ್ಬಲಿಗಳಾದೆವು;

ಇನ್ನಾರ ಸೇರುವೆವು ಎನುತ=ಇನ್ನು ಯಾರ ಜತೆಗೂಡಿ ಬಾಳುವೆವು ಎಂದು ಗೋಳಿಡುತ್ತ;

ತಕ್ಕೈಸು=ಅಪ್ಪು/ಆಲಂಗಿಸು; ಹಲುಬು=ರೋದಿಸು/ಗೋಳಾಡು;

ಅವನ ತಕ್ಕೈಸಿ ಹಲುಬಿದರು=ಕೀಚಕನ ಹೆಣವನ್ನು ತಬ್ಬಿಕೊಂಡು ಅಳತೊಡಗಿದರು;

ಕ್ರೂರ=ಕರುಣೆಯಿಲ್ಲದ; ಕರ್ಮ=ಕೆಲಸ; ಕ್ರೂರಕರ್ಮರು=ದಯೆಯಿಲ್ಲದವರು/ಕರುಣೆಯಿಲ್ಲದವರು; ಆರು=ಯಾರು; ಹಾ… ಹಾ=ಸಂಕಟದ ದನಿ;

ಕ್ರೂರಕರ್ಮರು ನಿನ್ನ ಕೊಂದವರು ಆರು… ಹಾ… ಹಾ… ಎನುತ ಹಲುಬಲು=ನಿನ್ನನ್ನು ಕೊಂದ ಕ್ರೂರಿಗಳು ಯಾರು… ಎಂದು ಸಂಕಟದಿಂದ ಬಾಯ್ಬಿಡುತ್ತ ಅಳುತ್ತಿರಲು;

ವಾರಿಜ+ಆನನೆ; ವಾರಿಜ=ತಾವರೆ; ಆನನ=ಮೊಗ; ವಾರಿಜಾನನೆ=ತಾವರೆ ಮೊಗದವಳು/ಸುಂದರಿ; ಖಳ=ನೀಚ;

ವಾರಿಜಾನನೆ ಮುಗುಳುನಗೆಯಲಿ ಖಳರ ನೋಡಿದಳು=ಸೈರಂದ್ರಿಯು ಮುಗುಳುನಗೆಯನ್ನು ಬೀರುತ್ತ ನೀಚರಾದ ಕೀಚಕನ ತಮ್ಮಂದಿರನ್ನು ನೋಡಿದಳು;

ಸಹಭವ=ಒಡಹುಟ್ಟಿದವನು/ಸೋದರ; ಇವಳಿಗೆ+ಓಸುಗವೆ; ಓಸುಗ=ಸಲುವಾಗಿ/ದೆಸೆಯಿಂದ; ಅಳಿ=ಸಾಯು;

ಸಹಭವನು ಇವಳಿಗೋಸುಗವೆ ಅಳಿದನೇ=ನಮ್ಮ ಅಣ್ಣನು ಇವಳ ದೆಸೆಯಿಂದ ಸತ್ತನೇ;

ತಪ್ಪೇನು ಎನುತ =ಈಕೆಯನ್ನು ನಮ್ಮ ಅಣ್ಣ ಬಯಸಿದ್ದರಲ್ಲಿ ಯಾವ ತಪ್ಪು ಇಲ್ಲ. ಏಕೆಂದರೆ ಮಹಾಬಲನಾಗಿದ್ದ ಆತ ತಾನು ಬಯಸಿದ ಯಾವುದೇ ಹೆಣ್ಣನ್ನು ಪಡೆಯಬಲ್ಲ ಅದಿಕಾರವನ್ನು ಹೊಂದಿದ್ದ ಎಂದು ತಮ್ಮ ಅಣ್ಣನ ಪರವಾಗಿಯೇ ಮಾತನಾಡುತ್ತ; ನಡು=ಮಧ್ಯ;

ಇರುಳು=ರಾತ್ರಿ; ಐತಂದು=ಆಗಮಿಸಿ; ಅರುಹು=ತಿಳಿಸು;

ನಡು ಇರುಳು ಅವದಿರು ಐತಂದು ವೈರಾಟರಾಯಂಗೆ ಅರುಹಿದರು=ನಡುರಾತ್ರಿಯಲ್ಲಿ ಅವರು ನಾಟ್ಯಮಂದಿರದಿಂದ ಅರಮನೆಗೆ ಬಂದು ವಿರಾಟರಾಯನಿಗೆ ಕೀಚಕನ ಸಾವಿನ ಸುದ್ದಿಯನ್ನು ತಿಳಿಸಿದರು;

ಎವಗೆ=ನಮಗೆ; ನೇಮ=ಕಟ್ಟಳೆ/ನಿಯಮ. ಈ ಪದ ಮಹಾಬಾರತ ರಚನೆಗೊಂಡ ಕಾಲದಲ್ಲಿ ಇದ್ದ ಒಂದು ಸಾಮಾಜಿಕ ಆಚರಣೆಯನ್ನು ತಿಳಿಸುತ್ತದೆ. ಗಂಡನು ಸಾವನ್ನಪ್ಪಿದಾಗ, ಆತನ ಚಿತೆಯೊಡನೆ ಅವನ ಹೆಂಡತಿಯನ್ನು ಸುಡುವ ‘ಸಹಗಮನ ಪದ್ದತಿ’ ಎನ್ನುವ ಆಚರಣೆಯಿತ್ತು. ‘ಎವಗೆ ನೇಮ’ ಎಂಬ ಮಾತು ಕೀಚಕನ ಹೆಣದ ಚಿತೆಯಲ್ಲಿ ಅವನು ಬಯಸಿದ್ದ ಸೈರಂದ್ರಿಯನ್ನು ಬಲಿಕೊಡುತ್ತೇವೆ ಎಂಬುದನ್ನು ರಾಜನ ಗಮನಕ್ಕೆ ತರುತ್ತಾರೆ;

ಅವಳನು ಆತನ ಕೂಡೆ ಕಳುಹುವೊಡೆ ಎವಗೆ ನೇಮ ಎಂದು ಬೀಳ್ಕೊಂಡು=ಸೈರಂದ್ರಿಯನ್ನು ಅಣ್ಣನ ಚಿತೆಯೊಡನೆ ಸುಡುವುದೇ ನಮಗೆ ಕಟ್ಟಳೆ ಎಂದು ಹೇಳಿ, ವಿರಾಟರಾಯನಿಂದ ಬೀಳ್ಕೊಂಡು;

ಮರಳಿದು=ಹಿಂತಿರುಗಿ; ಕಮಲಲೋಚನೆ=ಕಮಲದ ಹೂವಿನ ಕಣ್ಣುಳ್ಳವಳು/ಸುಂದರಿ;

ಅವರು ಮರಳಿದು ಬಂದು ಕಮಲಲೋಚನೆಯ ಹಿಡಿದರು=ಅರಮನೆಯಿಂದ ನಾಟ್ಯಮಂದಿರಕ್ಕೆ ಹಿಂತಿರುಗಿ ಬಂದು ಸೈರಂದ್ರಿಯನ್ನು ಹಿಡಿದುಕೊಂಡರು;

ಮಂಚದಲಿ ಅವನ ಹೆಣನನು ತೆಗೆದು=ನೆಲದಲ್ಲಿ ಬಿದ್ದಿದ್ದ ಕೀಚಕನ ಹೆಣವನ್ನು ಒಂದು ಮರದ ಮಂಚದ ಮೇಲಿಟ್ಟು;

ದೆಸೆ=ಎಡೆ/ಜಾಗ;

ಅವಳನು ಕಾಲ ದೆಸೆಯಲಿ ಬಿಗಿದರು=ಸೈರಂದ್ರಿಯನ್ನು ಮಂಚದ ಒಂದು ಕಾಲಿಗೆ ಬಿಗಿದುಕಟ್ಟಿದರು;

ಕಾಮಿನಿ=ಹೆಂಗಸು;

ನಗುವುದು ಇನ್ನೊಮ್ಮೆ ಎನುತ ಅವರು ಕಾಮಿನಿಯ ಕಟ್ಟಿದರು=ಈಗ ಇನ್ನೊಮ್ಮೆ ನಗು ನೋಡೋಣ ಎಂದು ಹಂಗಿಸುತ್ತ, ಸೈರಂದ್ರಿಯನ್ನು ಮಂಚದ ಕಾಲಿಗೆ ಕಟ್ಟಿದರು;

ಬೆಗಡು=ಹೆದರಿಕೆ/ಅಂಜಿಕೆ; ಅಂಭೋಜ=ತಾವರೆ ಹೂವು; ಅಂಭೋಜಮುಖಿ=ತಾವರೆಮೊಗದವಳು/ಸುಂದರಿ; ಉಬ್ಬೆಗ=ತಳಮಳ/ಉದ್ವೇಗ; ಒದರು=ಕಿರುಚು/ಜೋರಾಗಿ ಅರಚು/ದೊಡ್ಡದನಿಯಲ್ಲಿ ಕೂಗು;

ಬೆಗಡುಗೊಂಡ ಅಂಭೋಜಮುಖಿಯು ಉಬ್ಬೆಗದೊಳು ಒದರಿದಳು=ಸಾವಿನ ಅಂಜಿಕೆಯಿಂದ ತತ್ತರಿಸಿದ ಸೈರಂದ್ರಿಯು ಉದ್ವೇಗದಿಂದ ಜೋರಾಗಿ ಕಿರುಚತೊಡಗಿದಳು;

ಅಕಟಕಟ=ಅಯ್ಯಯ್ಯೋ;

ಅಕಟಕಟ ಪಾಪಿಗಳಿರಾ=ಅಯ್ಯಯ್ಯೋ… ಪಾಪಿಗಳೇ ಏನನ್ನು ಮಾಡುತ್ತಿರುವಿರಿ. ತನ್ನನ್ನು ಮಂಚಕ್ಕೆ ಬಿಗಿದುಕಟ್ಟಿ ಕೀಚಕನ ಚಿತೆಯೊಡನೆ ಸುಡಲಿರುವ ಕೀಚಕನ ತಮ್ಮಂದಿರನ್ನು ಆಕ್ರೋಶದಿಂದ ಕೇಳುತ್ತಾಳೆ;

ಗಂಧರ್ವರಿರ… ಹಾಯ್ ಎನುತ ಹಲುಬಿದಳು=ಮರುಗಳಿಗೆಯಲ್ಲಿಯೇ ತನ್ನ ಗಂಡಂದಿರನ್ನು ನೆನೆದುಕೊಂಡು ಅಯ್ಯೋ ಎಂದು ಅಳತೊಡಗುತ್ತಾಳೆ;

ಅಕಟ ಕೇಳು… ಜಯನೇ… ಜಯಂತನೇ ಕೇಳು… ವಿಜಯ… ಜಯೋದ್ಭವನೆ ನೀ ಕೇಳು.. ಜಯಸೇನನೆ= ಅಯ್ಯೋ… ಜಯ… ಜಯಂತ… ವಿಜಯ… ಜಯೋದ್ಬವ… ಜಯಸೇನ… ನೀವೆಲ್ಲರೂ ನಾನು ಎಂತಹ ಆಪತ್ತಿಗೆ ಸಿಲುಕಿದ್ದೇನೆ ಎಂಬುದನ್ನು ಕೇಳಿಸಿಕೊಳ್ಳಿರಿ. ಪಾಂಡವರು ವಿರಾಟನಗರಿಯಲ್ಲಿ ಅಜ್ನಾತವಾಸದಲ್ಲಿದ್ದಾಗ ಈ ಬಗೆಯ ಹೆಸರುಗಳನ್ನು ಜಯ/ದರ್ಮರಾಯ; ಜಯಂತ/ಬೀಮ; ವಿಜಯ/ಅರ್ಜುನ; ಜಯೋದ್ಬವ/ನಕುಲ; ಜಯಸೇನ/ಸಹದೇವ ಎಂಬ ಹೆಸರುಗಳನ್ನು ಸಂಕೇತವಾಗಿ ಇಟ್ಟುಕೊಂಡಿದ್ದರು; ಪಾಂಡವರು ತಮ್ಮಲ್ಲಿಯೇ ಈ ಹೆಸರಿನಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು;

ದುರಾತ್ಮಕ=ಕೇಡಿ/ನೀಚ;

ದುರಾತ್ಮಕರು ಎನ್ನನು ಎಳೆದೊಯ್ದು ಅಗ್ನಿಯಲಿ ಬೀಳಿಸುವರು=ಕೇಡಿಗಳಾದ ಕೀಚಕನ ತಮ್ಮಂದಿರು ನನ್ನನ್ನು ಎಳೆದೊಯ್ದು ಕೀಚಕನ ಚಿತೆಯ ಬೆಂಕಿಗೆ ತಳ್ಳುತ್ತಿದ್ದಾರೆ;

ತಡ=ವಿಳಂಬ/ನಿದಾನ; ಮೊರೆಯಿಡು=ಬೇಡಿಕೊಳ್ಳು;

ಅಕಟ, ನೀವು ಏಳಿ… ತಡವೇಕೆ ಎನುತ ಮೊರೆಯಿಡೆ=ಅಯ್ಯೋ… ನೀವೆಲ್ಲರೂ ಎಚ್ಚರಗೊಳ್ಳಿ… ಏಕೆ ತಡಮಾಡುತ್ತಿರುವಿರಿ ಎಂದು ಗೋಳಿಡುತ್ತ ಬೇಡಿಕೊಳ್ಳುತ್ತಿರಲು;

ಆಕ್ರಂದನ=ಗಟ್ಟಿಯಾಗಿ ಅಳು/ದೊಡ್ಡದನಿಯಲ್ಲಿ ಗೋಳಾಡು; ಕಲಿ=ಶೂರ;

ಸತಿಯ ಆಕ್ರಂದನ ಧ್ವನಿಯ ಕಲಿ ಭೀಮ ಕೇಳಿದನು=ಸೈರಂದ್ರಿಯ ಗೋಳಿನ ಮೊರೆಯ ದನಿಯನ್ನು ಬೀಮ ಕೇಳಿಸಿಕೊಂಡನು;

ದುರಾತ್ಮ=ಕೇಡಿ/ನೀಚ; ಅಗ್ರಜ=ಅಣ್ಣ; ಐದು=ಬರುವುದು;

ಈ ದುರಾತ್ಮರಿಗೆ ಅಗ್ರಜನ ಸಾವು ಐದದೇ=ಈ ಕೇಡಿಗಳೆಲ್ಲರಿಗೂ ಅವರ ಅಣ್ಣ ಕೀಚಕನಂತೆಯೇ ಸಾವು ಬರದಿರುವುದೇ;

ಕುನ್ನಿ=ನಾಯಿ. ತಿರಸ್ಕಾರವನ್ನು ಸೂಚಿಸುವ ಬಯ್ಗುಳದ ಪದ; ಹೊಯ್=ಹೊಡಿ/ಬಡಿ; ಕ್ಷಣ=ಗಳಿಗೆ;

ಕುನ್ನಿಗಳನು ಹೊಯ್ದು ಈ ಕ್ಷಣಕೆ ತಮ್ಮ ಅಣ್ಣನಲ್ಲಿಗೆ ಕಳುಹಲುಬೇಕಲಾ=ಈ ನಾಯಿಗಳನ್ನು ಹೊಡೆದು ಕೊಂದು ಈ ಗಳಿಗೆಯಲ್ಲಿಯೇ ಅವರ ಅಣ್ಣನ ಬಳಿಗೆ ಕಳುಹಿಸಬೇಕಲ್ಲವೇ;

ಮಾರುತಿ=ಬೀಮ; ಹಾಯ್ದು=ಮುನ್ನುಗ್ಗಿ; ಝಂಕಿಸು=ಅಬ್ಬರಿಸುವುದು/ದೊಡ್ಡ ದನಿಯಲ್ಲಿ ಗರ್ಜಿಸುವುದು; ರುದ್ರಭೂಮಿ=ಮಸಣ; ಎಯ್ದಿದನು=ಬಂದು ಸೇರಿದನು;

ಬೈಯ್ದು ಫಲವೇನು ಎಂದು ಮಾರುತಿ ಹಾಯ್ದು ಝಂಕಿಸಿ ರುದ್ರಭೂಮಿಯನು ಎಯ್ದಿದನು=ದ್ರೌಪದಿಯನ್ನು ಕೀಚಕನ ಚಿತೆಗೆ ಒಡ್ಡುತ್ತಿರುವ ಈ ಕೇಡಿಗಳನ್ನು ಬಯ್ಯುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ತೀರ್ಮಾನಿಸಿಕೊಂಡ ಬೀಮನು ಅಬ್ಬರದ ದನಿಯಿಂದ ಕೂಗುತ್ತ, ಮಸಣದ ಜಾಗಕ್ಕೆ ಬಂದನು;

ಫಡ=ತಿರಸ್ಕಾರ ಹಾಗೂ ಕೋಪವನ್ನು ಸೂಚಿಸುವ ಉದ್ಗಾರದ ಪದ; ಪಿರಿದಾದ ಮರ=ಪೆರ್ಮರ=ಹೆಮ್ಮರ; ಹೆಮ್ಮರ=ದೊಡ್ಡ ಮರ;

ಫಡ ಎನುತ ಹೆಮ್ಮರನ ಮುರಿದುಕೊಂಡನು=ಪಡ ಎಂದು ಅಬ್ಬರಿಸುತ್ತ ಕೇಡಿಗಳನ್ನು ಸದೆಬಡಿಯಲು ದೊಡ್ಡ ಮರದ ಗಟ್ಟಿಯಾದ ಕೊಂಬೆಯೊಂದನ್ನು ಮುರಿದುಕೊಂಡ;

ಕೊಲೆ+ಕಡಿಗ; ಕೊಲೆಗಡಿಗ=ಕೊಲೆಗಾರ; ದೆಸೆ=ದಿಕ್ಕು; ದೆಸೆದೆಸೆ=ಎಲ್ಲಾ ದಿಕ್ಕಿನ ಕಡೆಗೆ/ದಿಕ್ಕಾಪಾಲಾಗಿ; ತಲೆ+ಕೆದರು; ತಲೆಕೆದರು=ಬಿಚ್ಚಿದ ಮುಡಿ;

ಎಲೆಲೆ ಗಂಧರ್ವಕನ ಹೆಂಗುಸ ಕಳಚಿ ಬಿಡಿರೋ. ಪಾಪಿ ಹೋಗಲಿ. ಇವನು ಕೊಲೆಗಡಿಗನು ಎನುತ ಹೆಣನನು ಬಿಸುಟು ದೆಸೆದೆಸೆಗೆ ತಲೆಗೆದರಿ ತೆಗೆದು ಓಡೆ=ಮಸಣದಲ್ಲಿ ಕೀಚಕನ ಚಿತೆಯನ್ನು ಸಿದ್ದಪಡಿಸುತ್ತಿದ್ದ ತಮ್ಮಂದಿರು ತಮ್ಮತ್ತ ದೊಡ್ಡ ಮರದ ಕೊಂಬೆಯೊಂದನ್ನು ಹಿಡಿದು ಅಬ್ಬರಿಸುತ್ತ ಬರುತ್ತಿರುವ ಬೀಮನನ್ನ ಕಂಡು ಬೆದರಿ “ಎಲೆಲೆ ಗಂದರ್ವನ ಹೆಂಡತಿಯನ್ನು ಮಂಚದ ಕಾಲಿನಿಂದ ಕಳಚಿ ಬಿಟ್ಟುಬಿಡಿರೋ. ಈ ಪಾಪಿ ಹೆಂಗಸು ತೊಲಗಲಿ… ಬರುತ್ತಿರುವವನು ಕೊಲೆಗಡಿಗನು” ಎಂದು ಕೀಚಕನ ಹೆಣವನ್ನು ಅಲ್ಲಿಯೇ ಬಿಟ್ಟು ಬಿಚ್ಚಿದ ಮುಡಿಯಲ್ಲಿಯೇ ದಿಕ್ಕಾಪಾಲಾಗಿ ಓಡುತ್ತಿರಲು;

ಕಳಕಳಿಸು=ಉತ್ಸಾಹದ ದನಿಯನ್ನು ಮಾಡುವುದು;

ಕಲಿಭೀಮನು ಕಳಕಳಸಿ ನಕ್ಕನು=ಶೂರನಾದ ಬೀಮನು ಸಡಗರದಿಂದ ನಕ್ಕನು;

ಎಲೆ ನಾಯ್ಗಳಿರ ಹೋದೊಡೆ ಬಿಡುವೆನೇ… ಹಾಯ್ ಎನುತ ಕೈಕೊಂಡ ಹೆಮ್ಮರನನು ತಿರುಹಿದನು=ಎಲೆ ನಾಯಿಗಳಿರ, ತಪ್ಪಿಸಿಕೊಂಡು ಓಡಲು ತೊಡಗಿದರೆ ಬಿಡುತ್ತೇನೆಯೇ. ಹಾಯ್ ಎಂದು ಗರ್‍ಜಿಸುತ್ತ ತನ್ನ ಕಯ್ಯಲ್ಲಿದ್ದ ಹೆಮ್ಮರದ ಕೊಂಬೆಯನ್ನು ಚಕ್ರಾಕಾರವಾಗಿ ತಿರುಗಿಸಿ ಹೊಡೆಯತೊಡಗಿದನು;

ಅವದಿರನು=ಅವರನ್ನು; ಅರೆ=ನುಣ್ಣಗೆ ಪುಡಿ ಮಾಡು/ತೇಯು; ನಿಟ್ಟೊರೆಸು=ಸಂಪೂರ್ಣವಾಗಿ ನಾಶಮಾಡು;

ಅವದಿರನು ಅರೆದು ನಿಟ್ಟೊರೆಸಿದನು=ಕೀಚಕನ ತಮ್ಮಂದಿರೆಲ್ಲರನ್ನೂ ಸದೆಬಡಿದು ಕೀಚಕನ ವಂಶವನ್ನೇ ನಾಶ ಮಾಡತೊಡಗಿದನು;

ದೆಸೆ=ದಿಕ್ಕು; ಒರಲು=ಅರಚು/ಕೂಗಿಕೊಳ್ಳು; ಚಿಮ್ಮುವ=ನೆಗೆಯುವ; ಚಪಲರು=ಜೀವಬಯದಿಂದ ನಡುಗುತ್ತಿರುವವರು; ಬೆಂಬತ್ತಿ=ಹಿಂಬಾಲಿಸಿ/ಬೆನ್ನಟ್ಟಿ;

ದೆಸೆ ದೆಸೆಗೆ ಒರಲಿ ಚಿಮ್ಮುವ ಚಪಲರನು ಬೆಂಬತ್ತಿ=ಜೀವಬಯದಿಂದ ಕಿರುಚುತ್ತ , ಜೀವವನ್ನು ಉಳಿಸಿಕೊಳ್ಳಲೆಂದು ದಿಕ್ಕಾಪಾಲಾಗಿ ಬಿದ್ದಂಬೀಳ ಓಡುತ್ತಿರುವ ಕೀಚಕನ ತಮ್ಮಂದಿರನ್ನು ಬೆನ್ನಟ್ಟಿ;

ಬರಿಕೈದು=ಕೊಂದು/ಸಂಹರಿಸಿ; ಕುರಿ+ತರಿ; ತರಿ=ಕಡಿ/ಕತ್ತರಿಸು; ಕುರಿದರಿ=ಕುರಿಗಳ ತಲೆಯನ್ನು ಕತ್ತರಿಸುವಂತೆ ಕತ್ತರಿಸಿ ತುಂಡುತುಂಡು ಮಾಡುವುದು/ಕಗ್ಗೊಲೆ ಮಾಡು;

ಬರಿಕೈದು ಕುರಿದರಿಯ ಮಾಡಿದನು=ಕೀಚಕನ ತಮ್ಮಂದಿರನ್ನು ಕೊಂದು, ಅವರ ದೇಹಗಳನ್ನು ಮರದ ಕೊಂಬೆಯಿಂದ ಬಡಿಬಡಿದು ತುಂಡು ತುಂಡು ಮಾಡಿದನು;

ನೂರೈವರನು ಕೊಂದನು=ಕೀಚಕನ ತಮ್ಮಂದಿರಾದ ನೂರ ಅಯ್ದುಮಂದಿಯನ್ನು ಕೊಂದನು;

ಹಾಯಿಕು=ಎಸೆ/ತೂರು;

ಮರನ ಹಾಯಿಕಿ=ಕೊಲ್ಲುವುದಕ್ಕೆ ಹಿಡಿದಿದ್ದ ಮರದ ಕೊಂಬೆಯನ್ನು ಅತ್ತ ಬಿಸಾಡಿ;

ಮರಳಿ=ಹಿಂತಿರುಗಿ; ಮಿಣ್ಣನೆ=ಸದ್ದಿಲ್ಲದೆ;

ಮರಳಿ ಮಿಣ್ಣನೆ ಬಂದು ಬಾಣಸದ ಮನೆಯ ಹೊಕ್ಕನು=ಮಸಣದಿಂದ ಸದ್ದಿಲ್ಲದೆ ಹಿಂತಿರುಗಿ ಬಂದು ಅಡುಗೆಯ ಮನೆಯನ್ನು ಹೊಕ್ಕನು; ಸುಳಿಯಲು+ಅಮ್ಮದು; ಅಮ್ಮು=ಶಕ್ತವಾಗು;

ಅಮ್ಮದು=ಶಕ್ತಿಯಿಲ್ಲ/ಮಾಡಲು ಆಗುತ್ತಿಲ್ಲ; ಸುಳಿ=ಕಾಣಿಸಿಕೊಳ್ಳು;

ಪೌರಜನವು ಸುಳಿಯಲಮ್ಮದು=ವಿರಾಟನಗರದ ಪುರಜನರು ಹೊರಬಂದು ಕಾಣಿಸಿಕೊಳ್ಳುವ ದೈರ್ಯ ಮಾಡುತ್ತಿಲ್ಲ;

ಮಂದಿ=ಜನರು; ಗುಜುಗುಜಿಸು=ತಮ್ಮತಮ್ಮಲ್ಲಿಯೇ ಮೆಲುದನಿಯಲ್ಲಿ ಮಾತನಾಡುವುದು; ಇವರ=ಕೀಚಕ ಮತ್ತು ಕೀಚಕನ ತಮ್ಮಂದಿರ; ಅಳಿವು=ಸಾವು/ಮರಣ; ವಚನಿಸಲು+ಅಮ್ಮದು; ವಚನ=ಮಾತು; ವಚನಿಸಲು=ಮಾತನಾಡಲು/ಮಾತನಾಡಿಕೊಳ್ಳಲು;

ಮಂದಿ ಗುಜುಗುಜಿಸಿ… ಇವರ ಅಳಿವ ವಚನಿಸಲಮ್ಮದು=ಜನರು ತಮ್ಮತಮ್ಮಲ್ಲಿಯೇ ಮೆಲುದನಿಯಲ್ಲಿ ಮಾತನಾಡಿಕೊಳ್ಳುತ್ತಾರೆಯೇ ಹೊರತು ಬಹಿರಂಗವಾಗಿ ಕೀಚಕಾದಿಗಳ ಸಾವಿನ ಸುದ್ದಿಯನ್ನು ಮಾತನಾಡಲು ಹಿಂಜರಿಯುತ್ತಾರೆ;

ಅಲುಕಲು+ಅಮ್ಮದು; ಅಲುಕು=ಒಂದು ಕಡೆ ನಿಲ್ಲುವುದು;

ಈಕೆಯನು ಅಲುಕಲಮ್ಮದು=ಸೈರಂದ್ರಿಯನ್ನು ತಡೆದು ನಿಲ್ಲಿಸಿ ಏನಾಯಿತೆಂದು ಕೇಳುವುದಕ್ಕೂ ಹೆದರುತ್ತಾರೆ;

ನೋಡಲು+ಅಮ್ಮದು;

ನೋಡಲಮ್ಮದು=ಸೈರಂದ್ರಿಯನ್ನು ನೋಡುವುದಕ್ಕೂ ಅಂಜುತ್ತಾರೆ;

ನಳಿನ=ತಾವರೆ ಹೂವು; ನಳಿನಮುಖಿ=ತಾವರೆ ಮೊಗದವಳು/ಸುಂದರಿ; ತಿಳಿ+ಕೊಳದ+ಒಳಗೆ; ಹೊಕ್ಕಳು=ಪ್ರವೇಶಿಸಿದಳು;

ನಸುನಗುತ ತಿಳಿಗೊಳದೊಳಗೆ ಹೊಕ್ಕಳು=ಮುಗುಳ್ನಗುತ್ತ ತಿಳಿನೀರಿನ ಕೊಳವನ್ನು ಪ್ರವೇಶಿಸಿದಳು;

ಮೀ=ಸ್ನಾನ ಮಾಡು;

ಮಿಂದು ಬೀದಿಗಳೊಳಗೆ ಬರುತಿರೆ=ಸೈರಂದ್ರಿಯು ಸ್ನಾನ ಮಾಡಿಕೊಂಡು ಮಡಿಯಾಗಿ ಬರುತ್ತಿರಲು;

ಅಖಿಲ=ಸಮಸ್ತ/ಎಲ್ಲ;

ಅಖಿಲ ಜನ ಕಂಡು ಕೈಗಳ ಮುಗಿದುದು=ಈಗ ಯಾವ ಆತಂಕವಾಗಲಿ ಸಂಕಟವಾಗಲಿ ಇಲ್ಲದೆ ಶಾಂತಚಿತ್ತದಿಂದ ಪುರದ ಬೀದಿಯಲ್ಲಿ ಬರುತ್ತಿರುವ ಸೈರಂದ್ರಿಯನ್ನು ಜನರೆಲ್ಲರೂ ನೋಡಿ ಕಯ್ ಮುಗಿದರು;

ಅವಿವೇಕಿ=ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬ ವಿವೇಚನೆಯಿಲ್ಲದ ವ್ಯಕ್ತಿ; ಈಕೆಗೆ+ಓಸುಗ; ಓಸುಗ=ಸಲುವಾಗಿ;

ಅಕಟ, ಅವಿವೇಕಿ ಕೀಚಕನು ಈಕೆಗೋಸುಗ ಅಳಿದನು ಎಂದು ಕೆಲಬರು=ಅಯ್ಯೋ… ಅವಿವೇಕಿಯಾದ ಕೀಚಕನು ಈಕೆಯನ್ನು ಪಡೆಯಲೆಂದು ಹೋಗಿ ಸಾವನ್ನಪ್ಪಿದನು ಎಂದು ಕೆಲವರು ಮಾತನಾಡಿಕೊಂಡರು;

ಶಿವ…ಶಿವ=ವ್ಯಕ್ತಿಯು ತನ್ನಿಂದ ಏನನ್ನೂ ಮಾಡಲಾಗದು ಎನ್ನುವ ಹಂತಕ್ಕೆ ತಲುಪಿದಾಗ ಉಚ್ಚರಿಸುವ ಪದಗಳು; ನೂಕಿ=ತಳ್ಳಿಕೊಂಡು; ಕವಿ=ಮುತ್ತು/ಸುತ್ತುವರಿ;

ಇದೇಕೆ ನಮಗೆ ಈ ಚಿಂತೆ ಶಿವ ಶಿವ ಎಂದು ಕೆಲಕೆಲರು ನೂಕಿ ಕವಿದುದು=ನಮಗೇಕೆ ದೊಡ್ಡವರ ಸುದ್ದಿ. ಇಂತಹವರ ಬಗ್ಗೆ ನಾವೇನು ಮಾಡಲಾಗದು… ಆಡಲಾಗದು. ಶಿವ… ಶಿವ… ಎನ್ನುತ್ತ ಜನರಲ್ಲಿ ಕೆಲವರು ಮುನ್ನುಗ್ಗಿ ಬಂದು ದಾರಿಯಲ್ಲಿ ಬರುತ್ತಿದ್ದ ದ್ರೌಪದಿಯನ್ನು ಸುತ್ತುವರಿದರು;

ಮಂದಿ ಮಧ್ಯದೊಳು ಈಕೆ ಮೆಲ್ಲನೆ ಬರುತಲು=ತನ್ನ ಸುತ್ತುವರಿದ ಜನರ ನಡುವೆ ಸೈರಂದ್ರಿಯು ಮೆಲ್ಲನೆ ಬರುತ್ತ;

ಲೋಕ+ಏಕ; ಲೋಕೈಕ=ಲೋಕದಲ್ಲಿ ಒಬ್ಬನೇ; ಲೋಕೈಕ ವೀರ=ಇದೊಂದು ನುಡಿಗಟ್ಟು. ಮಹಾಪರಾಕ್ರಮಿ ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ;

ಆ ಲೋಕೈಕ ವೀರನ ಆ ಬಾಣಸಿನ ಬಾಗಿಲಲಿ ಕಂಡಳು=ಲೋಕದಲ್ಲಿಯೇ ಮಹಾವೀರನೆಂದು ಹೆಸರಾಂತ ಬೀಮನನ್ನು ಅಡುಗೆಯ ಮನೆಯ ಬಾಗಿಲ ಬಳಿ ಕಂಡಳು;

ಕಣ್ಣ ಕಡೆಯಲಿ=ಕಣ್ಣಂಚಿನ ನೋಟ/ಕಡೆಗಣ್ಣಿನ ನೋಟ/ಕುಡಿನೋಟ; ವಿಗಡ=ಶೂರ/ವೀರ;

ಮುಗುಳು ನಗೆಯಲಿ ಕಣ್ಣ ಕಡೆಯಲಿ ವಿಗಡ ಭೀಮನ ನೋಡಿ=ದ್ರೌಪದಿಯು ಮುಗುಳು ನಗೆಯನ್ನು ಚೆಲ್ಲುತ್ತ, ಕಡೆಗಣ್ಣಿನ ನೋಟದಿಂದ ಕಲಿಬೀಮನನ್ನು ನೋಡುತ್ತ;

ಗಂಧರ್ವ=ದೇವತೆ; ಪತಿ=ಒಡೆಯ; ಗಂಧರ್ವಪತಿ=ದೇವತೆಗಳ ಒಡೆಯ; ಆವ್=ನಾವು; ನಮೋ=ನಮಸ್ಕಾರ ಮಾಡುತ್ತೇನೆ;

ಗಂಧರ್ವಪತಿಗೆ ಆವ್ ಕೈಗಳ ಮುಗಿದೆವು… ನಮೋ ನಮೋ ಎನುತ=ದೇವತೆಗಳ ಒಡೆಯನಿಗೆ ನಾವು ಕಯ್ ಮುಗಿಯುತ್ತಿದ್ದೇವೆ. ನಮೋ ನಮೋ ಎನ್ನುತ್ತ;

ಹೊಗರು+ಇಡು; ಹೊಗರು=ಹೆಚ್ಚಳ; ಹೊಗರಿಡು=ಹೆಚ್ಚಾಗುತ್ತಿರುವ;

ಹೊಗರಿಡುವ ಹರುಷದಲಿ=ಇಮ್ಮಡಿಯಾದ ಆನಂದದಲ್ಲಿ; ರೋಮಾಳಿ=ರೋಮಾಂಚನ; ಗುಡಿ=ಗುಂಪು;

ರೋಮಾಳಿಗಳ ಗುಡಿಯಲಿ=ಕೀಚಕಾದಿಗಳ ನಾಶದಿಂದ ಉಂಟಾದ ಆನಂದದಿಂದ ಸೈರಂದ್ರಿಯು ರೋಮಾಂಚನಗೊಂಡವಳಾಗಿ;

ಮುಗುದೆ=ಸುಂದರಿ;

ತನ್ನ ನಿಳಯಕೆ ಮುಗುದೆ ಬಂದಳು=ರಾಣಿವಾಸದಲ್ಲಿದ್ದ ತನ್ನ ಕೊಟಡಿಗೆ ಸೈರಂದ್ರಿಯು ಹಿಂತಿರುಗಿ ಬಂದಳು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications