ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 2

ಸಿ. ಪಿ. ನಾಗರಾಜ.

*** ಉತ್ತರಕುಮಾರನ ಪ್ರಸಂಗ: ನೋಟ-2 ***

ವಿರಾಟನಗರದ ಪ್ರಜೆಗಳು: ಎಲವೋ ರಣದ ವಾರ್ತೆಯು ಅದೇನದು.

(ಎನುತ ಜನವೆಲ್ಲ ಗಜಬಜಿಸೆ… )

ಗೋಪಾಲಕ: ರಣವು ಕಿರಿದಲ್ಲ. ಗಣನೆಯಿಲ್ಲದು, ಮತ್ತೆ ಮೇಲಂಕಣದ ಭಾರಣೆ ನೂಕಿತು.

(ಎನುತ ಐತಂದು ಮೇಳದ ಗಣಿಕೆಯರ ಮಧ್ಯದಲಿ ಮೆರೆದಿರೆ ಉತ್ತರನ ಕಂಡನು. ಬೆಗಡು ಮುಸುಕಿದ ಭೀತಿಯ ಮುಖದ… ಢಗೆಯ ಹೊಯ್ಲಿನ ಹೃದಯ…ತುದಿ ನಾಲಗೆಯ ತೊದಳಿನ… ಬೆರಗಿನ ಬರತ ತಾಳಿಗೆಯ ಅಗಿವ ಹುಯ್ಯಲುಗಾರ ಬಹಳೋಲಗಕೆ ಬಂದನು. ನೃಪ ವಿರಾಟನ ಮಗನ ಕಾಲಿಂಗೆ ಎರಗಿದನು. ಕಳಕಳವ ದೂರಿದನು.)

ಗೋಪಾಲಕ: ಏಳು ಮನ್ನೆಯ ಗಂಡನಾಗು. ನೃಪಾಲ ಕೌರವ ರಾಯ ತುರುಗಳ ಕೋಳ ಹಿಡಿದನು. ಧರಣಿಯಗಲದಲಿ ಸೇನೆ ಬಂದುದು. ದಾಳಿ ಬರುತಿದೆ. ನಿನ್ನಾಳು ಕುದುರೆಯ ಕರೆಸಿಕೋ. ರಾಣಿವಾಸದ ಗೂಳೆಯವ ತೆಗೆಸು ಎಂದು ಬಿನ್ನಹದ ಬಿರುಬ ನುಡಿದನು.

ಉತ್ತರ ಕುಮಾರ: ಏನೆಲವೊ… ತುದಿ ಮೂಗಿನಲಿ ಬಿಳುಪೇನು… ಢಗೆ ಹೊಯ್ದೇಕೆ ಬಂದೆ… ಇದೇನು… ನಿನ್ನಿನ ರಣವನು ಅಯ್ಯನು ಗೆಲಿದುದೇನಾಯ್ತು… ಇನ್ನು ಏನು ಭಯ ಬೇಡ. ಅದೇನು ಕಲಹ ನಿಧಾನ ವಾರ್ತೆ.

ಗೋಪಾಲಕ: ಜೀಯ ಬಿನ್ನಹ. ಕುರುಸೇನೆ ಬಂದುದು. ರಾಯ ತಾನು ಐತಂದನು. ಆತನ ನಾಯಕರು ಗುರುಸುತನು, ಗುರು, ಗಾಂಗೇಯ, ಶಕುನಿ, ವಿಕರ್ಣ, ಕರ್ಣ ಜಯದ್ರಥಾದಿಗಳು. ಬಡಗ ದಿಕ್ಕಿನಲಿ ತುರುವ ಹಿಡಿದರು. ತಾಯಿಮಳಲ ಅಂಬುಧಿಗೆ ದಳದ ತೆರಳಿಕೆ. ಮೋಹರದ ಆಯತವ ಹೊಕ್ಕು ಹೊಗಳುವರೆ ನಾನೆತ್ತ ಬಲ್ಲೆನು. ಎತ್ತ ಆಲಿಗಳ ದುವ್ವಾಳಿಸುವಡೆ… ಅತ್ತಲು ಆನೆಯ ಥಟ್ಟು; ಕಾಲಾಳೊತ್ತರದ ರಣವಾಜಿ;

ರೂಢಿಯ ರಾಯ ರಾವುತರು. ಸುತ್ತ ಬಳಸಿಹುದು; ಎತ್ತ ಮನ ಹರಿವತ್ತ ಮೋಹರವಲ್ಲದೆ ಅನ್ಯವ ಮತ್ತೆ ಕಾಣೆನು. ಜೀಯ, ಇದು ವೈರಿ ವಾಹಿನಿಯ ಹದನ. ಪಡಿನೆಲನನು ಒಡ್ಡಿದರೊ… ಮೇಣ್… ಅವನಿಯ ದಡ್ಡಿಯೋ ಎನಲು, ಚಮರ ಸೀಗುರಿಗಳ ಪತಾಕೆಯಲಿ ಝಲ್ಲರಿಯೊಡ್ಡು ತಳಿತುದು. ಅಡ್ಡ ಹಾಯ್ದು ಇನಕಿರಣ ಪವನನ ಖಡ್ಡತನ ನಗೆಯಾಯ್ತು. ಕೌರವನ ಒಡ್ಡನು ಅಭಿವರ್ಣಿಸುವಡೆ ಅರಿಯೆನು. ಜೀಯ ಕೇಳು… ಒಳಗೆ ನೀ ಕಾದುವೊಡೆ ದುರ್ಗವ ಬಲಿಸು. ಬವರಕೆ ಹಿಂದುಗಳೆಯದೆ ನಿಲುವ ಮನ ನಿನಗೀಗಲು ಉಂಟೇ… ನಡೆಯಬೇಕು.

(ಎನಲು, ಉತ್ತರ ಕೆಲಬಲನ ನೋಡಿದನು. ಮೀಸೆಯನು ಅಲುಗಿದನು. ತನ್ನಿದಿರ ಮೇಳದ ಲಲನೆಯರ ಮೊಗ ನೋಡುತ ಬಿರುದ ಕೆದರಿದನು.)

ಉತ್ತರ ಕುಮಾರ: ಕುನ್ನಿಯನು ನೂಕು. ತಾನೀಗ ಆಹವದ ಭೀತಾಕುಳನು. ಇವನು ಹೆಂಡಿರ ಸಾಕಿ ಬದುಕುವ ಲೌಲ್ಯತೆಯಲಿ ಒಟ್ಟೈಸಿ ಬಂದು, ಎನಗೆ ಕಾಕ ಬಳಸುವನು. ತಾನು ಉದ್ರೇಕಿಸಿಯೆ ನಿಲಲು ಸಮರದಲಿ ಪಿನಾಕಧರನಿಗೆ ನೂಕದು.

(ಎಂದನು ಸತಿಯರ ಇದಿರಿನಲಿ… )

ಗೊಲ್ಲ: ಜೀಯ, ಬಲ ಎನಿತು ಘನವಾದೊಡೇನು… ಅದು ನಿನಗೆ ಗಹನವೆ. ಜಗದಲಿ ದಿನಪನ ಇದಿರಲಿ ತಮದ ಗಾವಳಿಗೆ ದಿಟ್ಟತನವೇ. ಬಿನುಗು ರಾಯರ ಬಿಂಕ ಗೋವರ ಮೊನೆಗೆ ಮೆರೆದೊಡೆ ಸಾಕು. ಜನಪ ನಿಂದಿರು. ಕೌರವನ ಥಟ್ಟಿನಲಿ ಕೈಗುಣವ ತೋರಿಸು.

(ಎಂದಡೆ ಉಬ್ಬರಿಸಿದನು. ತಾ ಕಲಿಯೆಂದು ಬಗೆದನು. ಮೀಸೆಯನು ಬೆರಳಿಂದ ತಿರುಹುತ ಮುಗುಳುನಗೆ ಹರುಷದಲಿ ಮೈಮರೆದ. ರೋಮಾಂಚ ಸಂದಣಿಸಿ ಕೆಲಬಲದ ಇಂದುಮುಖಿಯರ ನೋಡಿದನು. ತನ್ನ ಪೌರುಷತನದ ಪರಿಣತೆಯ ನಲವಿಂದ ನುಡಿದನು.)

ಉತ್ತರ ಕುಮಾರ: ಅಹುದಹುದು ತಪ್ಪೇನು. ಸುಯೋಧನನು ಜೂಜಿನ ಕುಹಕದಲಿ ಪಾಂಡವರ ಸೋಲಿಸಿ ಮಹಿಯ ಕೊಂಡಂತೆ ಎನ್ನ ಕೆಣಕಿದನೇ. ಸಹಸದಿಂದವೆ ತುರುವ ಮರಳಿಚಿ ತಹೆನು. ಬಳಿಕ ಆ ಕೌರವನ ನಿರ್ವಹಿಸಲು ಈವೆನೆ. ಹಸ್ತಿನಾಪುರವ ಸೂರೆಗೊಂಬೆನು. ಹಿಡಿದು ರಾಜ್ಯವ ಕೊಂಡು, ಹೆಂಗುಸ ಬಡಿದು ಪಾಂಡವ ರಾಯರನು ಹೊರವಡಿಸಿ ಕೊಬ್ಬಿದ ಭುಜಬಲವನು ಎನ್ನೊಡನೆ ತೋರಿದನೆ… ಬಡಯುಧಿಷ್ಠಿರನೆಂದು ಬಗೆದನೆ… ಅರಿಯನಲಾ… ಕಡುಗಿದೊಡೆ ಕೌರವನ ಕೀರ್ತಿಯ ತೊಡೆವೆನು…

(ಎನುತ ಸುಕುಮಾರ ಖತಿಗೊಂಡ)

ತನಗೆ ಬಡ ಪಾಂಡವರ ತೆವರಿದ ಮನದ ಗರ್ವದ ಕೊಬ್ಬು ಕಾಲನ ಮನೆಯನಾಳ್ವಿಪುದು. ಅಲ್ಲದಿದ್ದೊಡೆ ತನ್ನ ವೈರವನು ನೆನೆದು ದುರ್ಯೋಧನನು ತಾ ಮೇದಿನಿಯನು ಆಳ್ವನೆ. ಹಾ ಮಹಾದೇವ.

(ಎನುತಲು ಹೆಂಗಳಿದಿರಿನಲಿ ಉತ್ತರ ಬಿರುದ ನುಡಿದನು.)

ಜವನ ಮೀಸೆಯ ಮುರಿದನೋ… ಭೈರವನ ದಾಡೆಯನು ಅಲುಗಿದನೊ… ಮೃತ್ಯುವಿನ ಮೇಲುದ ಸೆಳೆದನೋ… ಕೇಸರಿಯ ಕೆಣಕಿದನೋ… ಬವರವನು ತೊಡಗಿದನಲಾ… ಅಕಟ, ಕೌರವನು ಮರುಳಾದನು.

(ಎಂದು ಆ ಯುವತಿಯರ ಮೊಗ ನೋಡುತ ಉತ್ತರ ಬಿರುದ ಕೆದರಿದನು.)

ಆರೊಡನೆ ಕಾದುವೆನು… ಕೆಲಬರು ಹಾರುವರು… ಕೆಲರು ಅಂತಕನ ನೆರೆ ಊರವರು… ಕೆಲರು ಅಧಮ ಕುಲದಲಿ ಸಂದು ಬಂದವರು… ವೀರರು ಎಂಬವರು ಇವರು… ಮೇಲೆ ಇನ್ನು ಆರ ಹೆಸರುಂಟು ಅವರೊಳು.

(ಎಂದು ಕುಮಾರ ಹೆಂಗಳ ಇದಿರಿನಲಿ ನೆಣಗೊಬ್ಬಿನಲಿ ನುಡಿದನು)

ಪೊಡವಿಪತಿಗಳು ಬಂದು ತುರುಗಳ ಹಿಡಿವರೇ. ಲೋಕದಲಿ ಅಧಮರ ಬಡಮನದ ಮನ್ನೆಯರ ಮೈಸಿರಿ ಕೌರವನೊಳು ಆಯ್ತು. ಕಡೆಗೆ ದುರಿಯಶವು ಉಳಿವುದು. ಅಲ್ಲದೆ ಗೋಧನವನು ಬಿಡುವೆನೇ. ಎನ್ನೊಳು ತೊಡಕಿ ಬದುಕುವನು ಆವನು?

(ಎಂದು ಖಂಡೆಯವ ಜಡಿದು… )

ಖಳನ ಮುರಿವೆನು. ಹಸ್ತಿನಾಪುರದೊಳಗೆ ಠಾಣಾಂತರವನು ಇಕ್ಕುವೆ. ಕೌರವನ ಸೇನೆಯ ಧೂಳಿಪಟ ಮಾಡಿ ತೊಲಗಿಸುವೆ. ಗೆಲವ ತಹೆನು.

(ಎಂದು ಕೋಮಲೆಯರ ಇದಿರಲಿ ಉತ್ತರನು ಬಾಯ್ಗೆ ಬಂದುದು ಗಳಹುತಿದ್ದನು.)

ಬೇಕು ಬೇಡ ಎಂಬವರ ನಾ ಕಾಣೆ. ಅರಿಯೆನೇ ಗಾಂಗೆಯನನು… ತಾನು ಅರಿಯದವನೇ ದ್ರೋಣ… ಕುಲದಲಿ ಕೊರತೆ ಎನಿಸುವ ಕರ್ಣನ್ ಎಂಬವನು ಎನಗೆ ಸಮಬಲನೆ. ಬರಿಯ ಬಯಲಾಡಂಬರದಿ ಬರಿ ತುರುವ ಹಿಡಿದೊಡೆ ತನ್ನ ಹೆಂಡಿರ ಸೆರೆಯ ತಾರದೆ ಮಾಣೆನು.

(ಎಂದನು ನಾರಿಯರ ಮುಂದೆ.)

ಇನ್ನು ನುಡಿದು ಫಲವೇನು. ನಿನ್ನಿನ ಬವರದಲಿ ಸಾರಥಿ ಮಡಿದ. ಶಿವ ಶಿವಾ ತಾನು ಉಡುಹನಾದೆನು. ಇಂದು ಎನ್ನ ಕೈಮನಕೆ ಗಡಣಿಸುವ ಸಾರಥಿಯನು ಒಬ್ಬನ ಪಡೆದೆನಾದಡೆ ಕೌರವೇಂದ್ರನÀ ಪಡೆಗೆ ಹಬ್ಬವ ಮಾಡುವೆನು. ಕೈಗುಣವ ತೋರುವೆನು. ಸಾರಥಿಯ ಶಿವ ಕೊಟ್ಟನಾದಡೆ ಮಾರಿಗೆ ಉಬ್ಬಸವಾಗದೆ… ಅಂತಕನ ಊರು ತುಂಬದೆ… ರಣಪಿಶಾಚರಿಗೆ ದೋರೆ ಕರುಳಲಿ ದೊಳ್ಳು ನೂಕದೆ… ದಾನವಿಯರ ಒಡಲು ಏರು ಹತ್ತದೆ… ಭೂರಿಬೇತಾಳರಿಗೆ ಹಬ್ಬವಾಗದೆ. ರಣ ಬರಿದೆ ಹೋಹುದೆ.

(ಎಂದ. ಕಲಿಪಾರ್ಥನು ಈತನ ಬಾಲಭಾಷೆಗಳೆಲ್ಲವನು ಕೇಳಿದನು. ಪಾಂಚಾಲೆಗೆ ಎಕ್ಕಟಿ ನುಡಿದ..)

ಪಾರ್ಥ: ನಾವು ಇನ್ನು ಇಹುದು ಮತವಲ್ಲ. ಕಾಲ ಸವೆದುದು. ನಮ್ಮ ರಾಜ್ಯದ ಮೇಲೆ ನಿಲುಕಲು ಬೇಕು. ಕೌರವರ ಆಳು ನವಗೋಸುಗವೆ ಬಂದುದು. ಕಾಂತೆ ಕೇಳು, ನರನ ಸಾರಥಿಯೆಂದು ನೀನು ಉತ್ತರೆಗೆ ಸೂಚಿಸಿ ತನ್ನನು ಈಗಳೆ ಕರೆಸು.

(ಎನಲು ಕೈಕೊಂಡು ದುರುಪದಿ ಒಲವಿನಲಿ ಬಂದಳು.)

ಸೈರಂಧ್ರಿ: (ಉತ್ತರೆಗೆ)

ತರುಣಿ ಕೇಳು. ವರ ಬೃಹನ್ನಳೆ ಅರ್ಜುನನ ಸಾರಥಿ. ಇವ ತಾನು ಖಾಂಡವ ಅಗ್ನಿಯ ಹೊರೆದನು.

(ಉತ್ತರೆ ಕೇಳಿ ಹರುಷಿತೆಯಾದಳು . ಲೋಲಲೋಚನೆಯು ಒಲಗಕೆ ಬಂದು ಅಣ್ಣನ ಅಂಘ್ರಿಗೆ ಎರಗಿ ಕೈಮುಗಿದು ಈ ಹದನ ಎಂದಳು.)

ಉತ್ತರೆ: ಸಾರಥಿಯ ನೆಲೆಯನು ಕೇಳಿದೆನು. ಅಣ್ಣದೇವ ಕಾಳಗಕೆ ನಡೆ . ನೃಪಾಲಕರ ಜಯಿಸು.

(ಎಂದಡೆ ಉತ್ತರ ನಗುತ ಬೆಸಗೊಂಡ.)

ಉತ್ತರ ಕುಮಾರ: ತಂಗಿ ಹೇಳೌ ತಾಯೆ. ನಿನಗೆ ಈ ಸಂಗತಿಯನು ಆರು ಎಂದರು. ಆವ ಅವನು ಸಾರಥಿತನದ ಕೈಮೆಯಲಿ ಅಂಗವಣೆಯುಳ್ಳವನೆ. ಮಂಗಳವಲೆ… ಬಳಿಕ ನಿನ್ನಾಣೆ, ರಣದೊಳು ಅಭಂಗನಹೆ. ತನ್ನಯ ತುಂಗ ವಿಕ್ರಮತನವನು ಉಳುಹಿದೆ ಹೇಳು ಹೇಳು. ಉತ್ತರೆ: ಈ ಹದನ ನಾವು ಅರಿಯೆವು. ಈ ಸೈರಂಧ್ರಿ ಎಂದಳು. ಸುರಪನ ನಂದನವ ಸುಡುವಂದು ಪಾರ್ಥನ ಮುಂದೆ ಸಾರಥಿಯಾದ ಗಡ. ಹಿಂದುಗಳೆಯದೆ ನಮ್ಮ ಬೃಹನ್ನಳೆಯನು ಕರೆಸು.

(ಎನೆ ನಗುತ “ಲೇಸಾಯ್ತು” ಎಂದು ಪರಮ ಉತ್ಸಾಹದಲಿ ಸೈರಂಧ್ರಿಗೆ ಇಂತೆಂದ.)

ಉತ್ತರ ಕುಮಾರ: ಸಾರಥಿಯ ಕೊಟ್ಟು ಎನ್ನನು ಉಳುಹಿದೆ. ವಾರಿಜಾನನೆ ಲೇಸು ಮಾಡಿದೆ. ಕೌರವನ ತನಿಗರುಳ ಬಗಿವೆನು. ತಡವ ಮಾಡಿಸದೆ ನಾರಿ ನೀನೇ ಹೋಗಿ ಪಾರ್ಥನ ಸಾರಥಿಯ ತಾ. ಸೈರಂಧ್ರಿ: ನಮ್ಮನು ವೀರ ಬಗೆಯನು. ನಿಮ್ಮ ತಂಗಿಯ ಕಳುಹಿ ಕರೆಸುವುದು.

ಉತ್ತರ ಕುಮಾರ: (ಉತ್ತರೆಗೆ ) ತಾಯೆ, ನೀನೇ ಹೋಗಿ ಸೂತನ ತಾ.

(ಎನಲು ಕೈಕೊಂಡು ಕಮಲದಳಾಯತಾಕ್ಷಿ ಮನೋಭವನ ಮರಿಯಾನೆಯ ಅಂದದಲಿ ರಾಯಕುವರಿ ನವಾಯಿ ಗತಿ ಗರುವಾಯಿಯಲಿ ಬರೆ… ಬರವ ಕಂಡನು ಪಾರ್ಥನು..)

ಬೃಹನ್ನಳೆ: ಏನು ಉತ್ತರ ಕುಮಾರಿ, ಕಠೋರ ಗತಿಯಲಿ ಬರವು ಭಾರಿಯ ಕಾರಿಯವ ಸೂಚಿಸುವುದು.

(ಎನಲು ನಗುತ)

ಉತ್ತರ ಕುಮಾರಿ: ಬರವು ಬೇರೆ ಇಲ್ಲ. ಎನ್ನ ಮಾತನು ಹುರುಳು ಕೆಡಿಸದೆ ಸಲಿಸುವೊಡೆ ನಿಮಗೆ ಅರುಹಿದಪೆನು.

ಬೃಹನ್ನಳೆ: ಮೀರಬಲ್ಲನೆ ಮಗಳೆ ಹೇಳು. ಉತ್ತರ ಕುಮಾರಿ: ಹಸ್ತಿನಾಪುರದ ಅರಸುಗಳು ಪುರಕೆ ಹಾಯ್ದರು. ಹೊಲನೊಳಗೆ ಶತ ಸಾವಿರದ ತುರುಗಳ ಹಿಡಿದರು. ಗೋಪ ಪಡೆ ಅಳಿದುದು. ಕಾದಿ ಮರಳಿಚುವೊಡೆ ಎಮ್ಮಣ್ಣ ದೇವನ ಧುರಕೆ ಸಾರಥಿ ಇಲ್ಲ. ನೀವು ಆ ನರನ ಸಾರಥಿಯೆಂದು ಕೇಳಿದೆವು. ಇನ್ನು ನೀವೇ ಬಲ್ಲಿರಿ.

ಬೃಹನ್ನಳೆ: ನಿನ್ನ ಮಾತನು ಮೀರಬಲ್ಲನೆ. ಮುನ್ನ ಸಾರಥಿ ಅಹೆನು, ನೋಡುವೆನು.

(ಎನುತ ವಹಿಲದಲಿ ಅಬಲೆಯನು ಬೆನ್ನಲಿ ಐದಲು, ಆ ಸಂಪನ್ನಬಲನು ಓಲಗಕೆ ಬರೆ

ಹರುಷೋನ್ನತಿಯಲಿ ಉತ್ತರ ಕುಮಾರನು ಕರೆದು ಮನ್ನಿಸಿದ.)

ಉತ್ತರ ಕುಮಾರ: ಎಲೆ ಬೃಹನ್ನಳೆ, ಎನಗೆ ಅಗ್ಗಳೆಯರೊಳು ವಿಗ್ರಹವು ತೆತ್ತುದು. ಎನ್ನವ ಸಾರಥಿ ಅಳಿದನು. ಸಮರದಲಿ ನೀನು ಸಾರಥಿಯಾಗಿ ಉಳುಹ ಬೇಹುದು. ಫಲುಗುಣನ ಸಾರಥಿಯಲೈ. ನೀ ಸಮರ್ಥನು. ನೀನು ಒಲಿದು ಮೆಚ್ಚಲು ಸೇನೆಯಲಿ ಕಾದಿ ತೋರುವೆನು.

ಬೃಹನ್ನಳೆ: ನಮಗೆ ಭರತ ವಿದ್ಯಾ ವಿಷಯದಲಿ ಪರಿಚಯತನ. ಅಲ್ಲದೆ ಹಲವು ಕಾಲದಲಿ ಈ ಸಂಗರದ ಸಾರಥಿತನವ ಮರೆದೆವು. ಅರಿಭಟರು ಭೀಷ್ಮಾಧಿಗಳು. ನಿಲಲು ಅರಿದು. ಸಾರಥಿತನದ ಕೈ ಮನ ರಣ ಸೂರೆಯಲ್ಲಿ ಬರಡರಿಗೆ ದೊರೆಕೊಂಬುದೇ. ಉತ್ತರ ಕುಮಾರ: ಆನು ಇರಲು ಭೀಷ್ಮಾದಿಗಳು ನಿನಗೆ ಏನ ಮಾಡಲು ಬಲ್ಲರು. ಅಳುಕದೆ ನೀನು ನಿಲು ಸಾಕು. ಅವರುಗಳ ಒಂದು ನಿಮಿಷಕೆ ಗೆಲುವೆನು. ತಾನು ಅದು ಆರೆಂದು ಅರಿಯಲಾ. ಗುರುಸೂನು, ಕರ್ಣ, ದ್ರೋಣರು ಎಂಬವರು ಆನು ಅರಿಯದವರಲ್ಲ. ಸಾರಥಿಯಾಗು ಸಾಕು.

ಬೃಹನ್ನಳೆ: ವೀರನು ಅಹೆ. ಬಳಿಕ ಏನು. ರಾಜಕುಮಾರನು ಇರಿವೊಡೆ ಹರೆಯವಲ್ಲಾ. ಸಾರಥಿತ್ವವ ಮಾಡಿ ನೋಡುವೆ. ರಥವ ತರಿಸು.

(ಕಲಿಪಾರ್ಥ ವಾರುವದ ಮಂದಿರದಲಿ ಆಯಿದು ಚಾರು ತುರಗಾವಳಿಯ ಬಿಗಿದನು. ತೇರ ಸಂವರಿಸಿದನು. ರಥವ ಏರಿದನು. ನಿಖಿಳಾಂಗನೆಯರು ಉತ್ತರಗೆ ಮಂಗಳಾರತಿಯ ಎತ್ತಿದರು. ನಿಜ ಸರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ ಹೊಂಗೆಲಸಮಯ ಕವಚವನು ಪಾರ್ಥಂಗೆ ಕೊಟ್ಟನು. ರಾಜಕುಮಾರನು ಜೋಡು ಸೀಸಕದ ಅಂಗಿಗಳನು ಅಳವಡಿಸಿ ಅನುವಾದ. ನರನು ತಲೆ ಕೆಳಗಾಗಿ ಕವಚವ ಸರಿವುತ ಇರೆ ಘೊಳ್ಳೆಂದು ಕೈ ಹೊಯ್ದು ಅರಸಿಯರು ನಗೆ… ನಾಚಿದಂತಿರೆ ಪಾರ್ಥ… ತಲೆವಾಗಿ ತಿರುಗಿ ಮೇಲ್ಮುಖನಾಗಿ ತೊಡಲು, ಉತ್ತರೆ ಬಳಿಕ ನಸುನಗಲು… )

ಉತ್ತರ ಕುಮಾರ: ಸಾರಥಿ ಅರಿಯ. ತಪ್ಪೇನು.

(ಎನುತಲು ಉತ್ತರ ತಾನೆ ತೊಡಿಸಿದನು.)

ನಾರಿಯರು: ಕವಚವನು ತೊಡಲು ಅರಿಯದವನು ಆಹವಕೆ ಸಾರಥಿತನವ ಮಾಡುವ ಹವಣು ತಾನೆಂತು.

ಉತ್ತರೆ: ಬವರವನು ನಮ್ಮಣ್ಣ ಗೆಲಿದಪನು. ಅವರ ಮಣಿ ಪರಿಧಾನ ಆಭರಣವನು ಸಾರಥಿ ಕೊಂಡು ಬಾ.

(ಎಂದಳು ಸರೋಜಮುಖಿ. ಅರ್ಜುನನು ನಸು ನಗುತ ರಥವನು ಕೈಕೊಂಡನು, ಎಸಗಿದನು. ವಿಗಡ ವಾಜಿಗಳು ಸಮೀರನ ಮಿಸುಕಲು ಈಯದೆ ಮುಂದೆ ಮಿಕ್ಕವು.)

ಸೇನೆಯವರು: ಹೊಸ ಪರಿಯ ಸಾರಥಿಯಲಾ. ನಮಗೆ ಸಂಗಾತ ಬರಲು ಅಸದಳವು…

(ಎಂದು ಚಾತುರಂಗ ಬಲ ಪುರದಲಿ ಹಿಂದೆ ಉಸುರದೆ ಉಳಿದುದು.)

ಪದ ವಿಂಗಡಣೆ ಮತ್ತು ತಿರುಳು

ಎಲವೋ=ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡುವಾಗ ಬಳಸುವ ಪದ ; ರಣ=ಯುದ್ದರಂಗ/ಕಾಳೆಗ; ವಾರ್ತೆ=ಸುದ್ದಿ/ಸಮಾಚಾರ; ಅದು+ಏನದು; ಗಜಬಜಿಸು=ಕೋಲಾಹಲ/ಗದ್ದಲ;

ಎಲವೋ ರಣದ ವಾರ್ತೆಯು ಅದೇನದು ಎನುತ ಜನವೆಲ್ಲ ಗಜಬಜಿಸೆ=ದುರ್‍ಯೋದನನ ಸೇನೆಯಿಂದ ಮೂಗಿನ ಮೇಲೆ ಸುಣ್ಣವನ್ನು ಬಳಿಸಿಕೊಂಡು ಅಪಮಾನಿತನಾಗಿ ವಿರಾಟನಗರದೊಳಕ್ಕೆ ಬರುತ್ತಿರುವ ಗೋಪಾಲಕನನ್ನು ಜನರು ಸುತ್ತುವರಿದು “ಎಲವೋ ರಣರಂಗದ ಸುದ್ದಿಯೇನು” ಎಂದು ಆತಂಕದ ದನಿಯಲ್ಲಿ ಕೇಳತೊಡಗಿದಾಗ ದೊಡ್ಡ ಗದ್ದಲವೇ ಉಂಟಾಯಿತು ;

ರಣವು ಕಿರಿದಲ್ಲ=ಯುದ್ದರಂಗದಲ್ಲಿ ನಡೆದ ಹೋರಾಟ ಚಿಕ್ಕದಲ್ಲ;

ಗಣನೆಯಿಲ್ಲ+ಅದು; ಗಣನೆ=ಎಣಿಕೆ/ಲೆಕ್ಕ;

ಗಣನೆಯಿಲ್ಲದು =ಎಣಿಕೆ ಮಾಡಲಾರದಶ್ಟು ದೊಡ್ಡ ಸಂಕೆಯಲ್ಲಿ ಶತ್ರುವಿನ ಸೇನೆಯಿದೆ;

ಮೇಲಂಕಣ=ತೀವ್ರವಾದ ಹೋರಾಟದಿಂದ ನಡೆದ ಯುದ್ದ; ಭಾರಣೆ=ಹೆಚ್ಚಳ/ಅತಿಶಯ; ನೂಕು=ತಳ್ಳುವಿಕೆ; ಐತರು=ಸಮೀಪಿಸು/ಬರು;

ಮತ್ತೆ ಮೇಲಂಕಣದ ಭಾರಣೆ ನೂಕಿತು ಎನುತ ಐತಂದು=“ದೊಡ್ಡ ಸೇನೆ ಮಾತ್ರವಲ್ಲ ದೊಡ್ಡದಾಗಿ ನಡೆದ ಯುದ್ದದಿಂದಾಗಿ ಗೋಪಾಲಕರ ಪಡೆಯು ಹಿಮ್ಮೆಟ್ಟಿತು ” ಎಂದು ಜನರಿಗೆ ಹೇಳುತ್ತ ಅರಮನೆಯತ್ತ ಬಂದು; ಮೇಳ=ಸಂಗೀತ/ನಾಟ್ಯ/ವಾದ್ಯ ಮೊದಲಾದ ಕಲಾವಿದರ ಗುಂಪು; ಗಣಿಕೆ=ಕಲಾವಿದೆ; ಮೆರೆ=ಎದ್ದುತೋರು/ಬೀಗು/ಉತ್ಸಾಹಗೊಳ್ಳು;

ಮೇಳದ ಗಣಿಕೆಯರ ಮಧ್ಯದಲಿ ಮೆರೆದಿರೆ ಉತ್ತರನ ಕಂಡನು=ಕಲಾವಿದೆಯರ ಗುಂಪಿನ ನಡುವೆ ಉತ್ಸಾಹ ಆನಂದ ಸಡಗರದಿಂದ ಬೀಗುತ್ತಿರುವ ಉತ್ತರಕುಮಾರನನ್ನು ಗೋಪಾಲಕನು ನೋಡಿದನು;

ಬೆಗಡು=ಬೆರಗು/ದೊಡ್ಡದನ್ನು ಇಲ್ಲವೇ ವಿಚಿತ್ರವಾದುದನ್ನು ಕಂಡಾಗ ಮನದಲ್ಲಿ ಉಂಟಾಗುವ ತಲ್ಲಣ; ಮುಸುಕು=ಆವರಿಸು/ಕವಿ; ಭೀತಿ=ಹೆದರಿಕೆ/ಅಂಜಿಕೆ;

ಬೆಗಡು ಮುಸುಕಿದ ಭೀತಿಯ ಮುಖದ=ಆತಂಕ, ತಲ್ಲಣ ಮತ್ತು ಹೆದರಿಕೆಯ ಬಾವಗಳು ಕವಿದಿರುವ ಮೊಗ; ಢಗೆ=ತಳಮಳ/ಕಳವಳ;ಹೊಯ್ಲು=ಹೊಡೆತ/ಪೆಟ್ಟು;

ಢಗೆಯ ಹೊಯ್ಲಿನ ಹೃದಯ=ಕಳವಳದಿಂದ ಬಡಿದುಕೊಳ್ಳುತ್ತಿರುವ ಹ್ರುದಯ; ತೊದಲು=ಮಾತನಾಡುವಾಗ ಸರಿಯಾಗಿ ಪದಗಳನ್ನು ಉಚ್ಚರಿಸಲಾಗದೆ ತಡವರಿಸುವುದು;

ತುದಿ ನಾಲಗೆಯ ತೊದಳಿನ=ಹೇಳಬೇಕೆಂದಿರುವ ಸಂಗತಿಯನ್ನು ಸರಿಯಾಗಿ ಹೇಳಲಾಗದೆ ತಡವರಿಸುತ್ತಿರುವ; ಬೆರಗು=ಆತಂಕ ಮತ್ತು ಹೆದರಿಕೆಯ ತೀವ್ರತೆಯಿಂದ ದೇಹವು ಸೆಟೆದುಕೊಳ್ಳುವುದು; ಬರತ=ಕಡಲಿನ ಅಲೆಗಳ ಉಬ್ಬರವಿಳಿತ. ಬೆರಗಿನ ಬರತ=ಈ ನುಡಿಗಟ್ಟು ಒಂದು ರೂಪಕವಾಗಿ ಬಂದಿದೆ. ಆತಂಕ, ತಲ್ಲಣ, ಹೆದರಿಕೆಯಿಂದ ಕಂಪಿಸುತ್ತಿರುವ; ತಾಳಿಗೆ=ಅಂಗುಳು; ಅಗಿ=ಕುಗ್ಗು; ತಾಳಿಗೆ ಅಗಿ=ಅಂಜಿಕೆಯಿಂದ ಗಂಟಲು ಒಣಗಿಹೋಗಿರುವುದು; ಹುಯ್ಯಲು=ದೂರು/ಅಹವಾಲು/ಮನವಿ; ಹುಯ್ಯಲುಗಾರ=ಮೊರೆಯಿಡುವವನು/ಮನವಿಯನ್ನು ಸಲ್ಲಿಸುವವನು; ಬಹಳ+ಓಲಗ; ಬಹಳ=ವಿಸ್ತಾರವಾದ/ದೊಡ್ಡದಾದ; ಓಲಗ=ದರ್ಬಾರು; ಬಹಳೋಲಗ=ಯುವರಾಜನಾದ ಉತ್ತರಕುಮಾರನು ಭಾಗವಹಿಸಿದ್ದ ಸಬೆ: ತಾಳಿಗೆಯ ಅಗಿವ ಹುಯ್ಯಲುಗಾರ ಬಹಳೋಲಗಕೆ ಬಂದನು=ಅಂಜಿಕೆಯಿಂದ ಗಂಟಲು ಬತ್ತಿಹೋಗಿರುವ ಗೋಪಾಲಕನು ಯುದ್ದರಂಗದ ವಾರ್ತೆಯನ್ನು ಹೇಳಿ, ಗೋವುಗಳನ್ನು ಕಾಪಾಡುವಂತೆ ಮೊರೆಯಿಡಲೆಂದು ಯುವರಾಜನಿದ್ದ ಓಲಗಕ್ಕೆ ಬಂದನು; ಎರಗು=ನಮಸ್ಕರಿಸು;

ನೃಪ ವಿರಾಟನ ಮಗನ ಕಾಲಿಂಗೆ ಎರಗಿದನು=ರಾಜ ವಿರಾಟರಾಯನ ಮಗ ಉತ್ತರಕುಮಾರನ ಕಾಲುಗಳಿಗಿ ನಮಿಸಿದನು; ಕಳಕಳ=ಸಂಕಟ/ಚಿಂತೆ/ಗದ್ದಲ; ದೂರು=ಸುದ್ದಿಮುಟ್ಟಿಸು/ಹೇಳು;

ಕಳಕಳವ ದೂರಿದನು=ದುರ್‍ಯೋದನನ ಸೇನೆಯಿಂದಾದ ಹಾನಿಯೆಲ್ಲವನ್ನು ಹೇಳಿದನು;

ಏಳು=ದಂಡೆತ್ತಿಹೋಗು/ಸಿದ್ದನಾಗು/ಎಚ್ಚರಗೊಳ್ಳು; ಮನ್ನೆಯ=ನಾಯಕ/ಮನ್ನಣೆಗೆ ಯೋಗ್ಯನಾದವನು; ಗಂಡ=ಶೂರ/ವೀರ/ಪರಾಕ್ರಮಿ;

ಏಳು ಮನ್ನೆಯ ಗಂಡನಾಗು=ಯುವರಾಜನೇ ಯುದ್ದಕ್ಕೆ ಸಿದ್ದನಾಗಿ ನಿನ್ನ ಪರಾಕ್ರಮವನ್ನು ತೋರಿಸು;

ನೃಪಾಲ=ರಾಜ; ತುರು=ದನ/ಗೋವು; ಕೋಳ್=ವಶಪಡಿಸುವುದು/ಕಯ್ ಸೆರೆ/ಬಂದನ; ಕೋಳ್ಗೊಳ್=ಅಪಹರಿಸು;

ನೃಪಾಲ ಕೌರವ ರಾಯ ತುರುಗಳ ಕೋಳಹಿಡಿದನು=ರಾಜನಾದ ದುರ್‍ಯೋದನನು ನಮ್ಮ ದನಗಳನ್ನು ವಶಪಡಿಸಿಕೊಂಡನು;

ಧರಣಿ+ಅಗಲದಲಿ; ಧರಣಿ=ಭೂಮಿ; ಧರಣಿಯಗಲ=ಇದೊಂದು ನುಡಿಗಟ್ಟು. ಬೂಮಿಯ ಅಗಲಕ್ಕೂ ಎಂದರೆ ಎಲ್ಲೆಡೆಯಲ್ಲಿಯೂ;

ಧರಣಿಯಗಲದಲಿ ಸೇನೆ ಬಂದುದು=ಬೂಮಿಯ ಉದ್ದಗಲಕ್ಕೂ ಸೇನೆ ಬಂದಿತು. ಬಲುದೊಡ್ಡ ಸೇನೆಯು ಬಂದಿದೆ; ದಾಳಿ=ಲಗ್ಗೆ/ಮುತ್ತಿಗೆ/ಆಕ್ರಮಣ;

ದಾಳಿ ಬರುತಿದೆ=ವಿರಾಟರಾಜನ ಗೋಸಂಪತ್ತನ್ನು ಅಪಹರಿಸಲೆಂದು ಸೇನೆಯು ಲಗ್ಗೆ ಹಾಕುತ್ತಿದೆ;

ಆಳು=ರಣರಂಗದಲ್ಲಿ ನೆಲದ ಮೇಲೆ ನಿಂತು ಹೋರಾಡುವ ಕಾಲ್ದಳದವರು; ;

ನಿನ್ನಾಳು ಕುದುರೆಯ ಕರೆಸಿಕೋ=ನಿನ್ನ ಕಾಲ್ದಳದವರನ್ನು ಮತ್ತು ಕುದುರೆಯ ಪಡೆಯವರನ್ನು ಕರೆಸಿಕೊಂಡು ರಣರಂಗಕ್ಕೆ ಅಣಿಯಾಗು;

ರಾಣಿವಾಸ=ಅರಮನೆಯಲ್ಲಿ ರಾಜನ ಮನೆತನದ ಹೆಂಗಸರು ಮತ್ತು ಇನ್ನಿತರ ದಾಸಿಯರು ವಾಸ ಮಾಡುವ ಕೊಟಡಿ; ಗೂಳೆಯ=ಗುಂಪು; ಗೂಳೆಯವ ತೆಗೆಸು=ಗಂಟುಮೂಟೆ ಕಟ್ಟಿಕೊಂಡು ಹೊರಡುವುದು; ಬಿನ್ನಹ=ಮನವಿ/ಬೇಡಿಕೆ; ಬಿರುಬು=ಬಿರುಸು/ಉಗ್ರತೆ; ಬಿರುಬು ನುಡಿ=ಒರಟು ಮಾತು/ಚುಚ್ಚು ಮಾತು/ಕಟಕಿ;

ರಾಣಿವಾಸದ ಗೂಳೆಯವ ತೆಗೆಸು ಎಂದು ಬಿನ್ನಹದ ಬಿರುಬ ನುಡಿದನು=ರಾಣಿವಾಸದ ಹೆಂಗಸರ ಗುಂಪಿನ ನಡುವೆ ಮೆರೆಯುತ್ತಿರುವ ನೀನು ಈ ಕೂಡಲೇ ಇವರೆಲ್ಲರನ್ನೂ ಕಳುಹಿಸಿ, ರಣರಂಗಕ್ಕೆ ತೆರಳಲು ಸಿದ್ದನಾಗು ಎಂದು ಒರಟಾದ ಹಾಗೂ ವ್ಯಂಗ್ಯದ ದನಿಯಲ್ಲಿ ಹೇಳಿದನು;

ಏನೆಲವೊ … ತುದಿ ಮೂಗಿನಲಿ ಬಿಳುಪೇನು=ಏನೆಲವೊ… ನಿನ್ನ ಮೂಗಿನ ತುದಿಯಲ್ಲಿ ಬಿಳಿಯ ಗೆರೆಗಳು ಕಾಣುತ್ತಿವೆಯಲ್ಲ… ಇದೇನಿದು; ಢಗೆ=ಕಳವಳ/ತಳಮಳ; ಹೊಯ್ದು+ಏಕೆ; ಹೊಯ್=ದಡಬಡಿಸು/ಬಡಿದುಕೊಳ್ಳು;

ಇದೇನು … ಢಗೆ ಹೊಯ್ದೇಕೆ ಬಂದೆ=ನಿನ್ನ ವಿಕಾರವಾದ ರೂಪಕ್ಕೆ ಕಾರಣವೇನು… ಏಕೆ ತಳಮಳದಿಂದ ದಡಬಡಿಸುತ್ತ ನನ್ನ ಬಳಿಗೆ ಬಂದೆ; ರಣ=ಯುದ್ದ/ಕಾಳೆಗ; ಅಯ್ಯ=ತಂದೆ; ಗೆಲಿದುದು+ಏನಾಯ್ತು;

ನಿನ್ನಿನ ರಣವನು ಅಯ್ಯನು ಗೆಲಿದುದೇನಾಯ್ತು=ನಿನ್ನೆಯ ದಿನ ವಿರಾಟನಗರದ ದಕ್ಷಿಣ ದಿಕ್ಕಿನಲ್ಲಿದ್ದ ಗೋಸಂಪತ್ತನ್ನು ಅಪಹರಿಸಲು ಬಂದಿದ್ದ ದುರ್‍ಯೋದನ ಸೇನೆಯನ್ನು ನಮ್ಮ ತಂದೆಯಾದ ವಿರಾಟರಾಯನು ಸದೆಬಡಿದು ಗೆದ್ದುಬಂದಿದ್ದನಲ್ಲವೇ… ಈಗ ಏನಾಯಿತು; ದುರ್‍ಯೋದನನ ಸೇನೆಯವರು ಪಾಂಡವರ ಅಜ್ನಾತವಾಸದ ಗುಟ್ಟನ್ನು ರಟ್ಟುಮಾಡಬೇಕೆಂಬ ಉದ್ದೇಶದಿಂದ ಮೊದಲು ವಿರಾಟನಗರದ ದಕ್ಷಿಣ ದಿಕ್ಕಿನಲ್ಲಿದ್ದ ಗೋವುಗಳನ್ನು ಅಪಹರಿಸಲು ಲಗ್ಗೆಹಾಕುತ್ತಾರೆ. ಆಗ ರಾಣಿವಾಸದಲ್ಲಿ ಬೃಹನ್ನಳೆಯಾಗಿದ್ದ ಅರ್‍ಜುನನನ್ನು ಹೊರತುಪಡಿಸಿ, ಇನ್ನುಳಿದ ನಾಲ್ಕು ಮಂದಿ ಪಾಂಡವರು ವಿರಾಟರಾಯನ ಜತೆಯಲ್ಲಿ ರಣರಂಗಕ್ಕೆ ಹೋಗುತ್ತಾರೆ. ಯುದ್ದ ನಡೆಯುತ್ತಿರುವಾಗ ದುರ್‍ಯೋದನನ ಕಡೆಯ ಸುಶರ್‍ಮನೆಂಬ ರಾಜನು ವಿರಾಟರಾಯನನ್ನು ಸೆರೆಹಿಡಿದು ಎಳೆದೊಯ್ಯುತ್ತಿರುವಾಗ, ಬೀಮನು ಮುನ್ನುಗ್ಗಿ ದುರ್‍ಯೋದನನ ಸೇನೆಯನ್ನು ಸದೆಬಡಿದು, ಸುಶರ್‍ಮನನ್ನು ಸೆರೆಹಿಡಿದು ವಿರಾಟರಾಯನನ್ನು ಸೆರೆಯಿಂದ ಬಿಡಿಸಿ, ವಿರಾಟರಾಯನ ಸೇನೆಗೆ ಗೆಲುವನ್ನು ತಂದುಕೊಡುತ್ತಾನೆ. ಈ ರೀತಿ ನಿನ್ನೆ ನಡೆದ ರಣರಂಗದಲ್ಲಿ ವಿರಾಟರಾಯನಿಗೆ ಗೆಲುವು ದೊರಕಿತ್ತು; ಕಲಹ=ಕಾಳೆಗ/ಯುದ್ದ;

ನಿಧಾನ=ನೆಲೆ; ವಾರ್ತೆ=ಸುದ್ದಿ/ಸಮಾಚಾರ;

ಇನ್ನು ಏನು ಭಯ ಬೇಡ. ಅದೇನು ಕಲಹ ನಿಧಾನ ವಾರ್ತೆ=ಇನ್ನೇನು ಹೆದರಿಕೆ ಬೇಡ. ರಣರಂಗದಲ್ಲಿ ಏನಾಯಿತು ಎಂಬುದನ್ನು ಹೇಳು;

ಜೀಯ=ಒಡೆಯ/ಸ್ವಾಮಿ; ಬಿನ್ನಹ=ಮನವಿ/ಅರಿಕೆ;

ಜೀಯ ಬಿನ್ನಹ=ಒಡೆಯನೇ… ರಣರಂಗದ ಸುದ್ದಿಯನ್ನು ನಿನ್ನಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ;

ಕುರುಸೇನೆ ಬಂದುದು=ದುರ್‍ಯೋದನ ಸೇನೆಯು ನಮ್ಮ ಗೋಪಡೆಯನ್ನು ವಶಪಡಿಸಿಕೊಳ್ಳಲೆಂದು ಬಂದಿತು;

ಐತರು=ಆಗಮಿಸು/ಬರು;

ರಾಯ ತಾನು ಐತಂದನು=ರಾಜನಾದ ದುರ್‍ಯೋದನನು ಸೇನೆಯೊಡನೆ ಬಂದನು;

ನಾಯಕ=ದಳಪತಿ; ಗುರುಸುತ=ದ್ರೋಣಾಚಾರ್ಯರ ಮಗನಾದ ಅಶ್ವತ್ತಾಮ; ಗುರು=ದ್ರೋಣಾಚಾರ್ಯ; ಗಾಂಗೇಯ=ಬೀಶ್ಮ; ಜಯದ್ರಥ+ಆದಿಗಳು; ಆದಿಗಳು=ಮೊದಲಾದವರು;

ಆತನ ನಾಯಕರು ಗುರುಸುತನು, ಗುರು, ಗಾಂಗೇಯ, ಶಕುನಿ, ವಿಕರ್ಣ, ಕರ್ಣ ಜಯದ್ರಥಾದಿಗಳು=ದುರ್‍ಯೋದನನ ದಳಪತಿಗಳಾದ ಅಶ್ವತ್ತಾಮ, ದ್ರೋಣಾಚಾರ್‍ಯ, ಗಾಂಗೇಯ, ಶಕುನಿ, ವಿಕರ್‍ಣ, ಕರ್‍ಣ, ಜಯದ್ರತ ಮೊದಲಾದವರು;

ಬಡಗ=ಉತ್ತರ;

ಬಡಗ ದಿಕ್ಕಿನಲಿ ತುರುವ ಹಿಡಿದರು=ವಿರಾಟನಗರದ ಉತ್ತರ ದಿಕ್ಕಿನ ವಲಯದಲ್ಲಿದ್ದ ದನಗಳನ್ನು ಸೆರೆಹಿಡಿದರು;

ತಾಯಿಮಳಲು=ತಳದಲ್ಲಿರುವ ಮರಳು/ಅಡಿಮಳಲು; ಅಂಬುಧಿ=ಕಡಲು/ಸಮುದ್ರ; ತೆರಳಿಕೆ=ಹರಡುವಿಕೆ/ವ್ಯಾಪಿಸುವಿಕೆ;

ತಾಯಿಮಳಲ ಅಂಬುಧಿಗೆ ದಳದ ತೆರಳಿಕೆ=ಸಮುದ್ರದ ದಂಡೆಯಲ್ಲಿರುವ ಮರಳರಾಶಿಯಂತೆ ಅಗಣಿತ ಪ್ರಮಾಣದಲ್ಲಿ ಶತ್ರುವಿನ ಸೇನೆಯು ಹರಡಿಕೊಂಡಿದೆ;

ಮೋಹರ=ಸೇನೆ/ದಂಡು; ಆಯತ=ಹೆಚ್ಚಳ; ನಾನು+ಎತ್ತ; ಎತ್ತ=ಯಾವ ರೀತಿ; ಹೊಕ್ಕು=ಒಳನುಗ್ಗಿ; ಹೊಗಳು=ಬಣ್ಣಿಸು/ವಿವರವಾಗಿ ಹೇಳು;

ಮೋಹರದ ಆಯತವ ಹೊಕ್ಕು ಹೊಗಳುವರೆ ನಾನೆತ್ತ ಬಲ್ಲೆನು=ಸೇನೆಯು ಎಶ್ಟು ದೊಡ್ಡದಾಗಿದೆ ಎಂಬುದನ್ನು ಒಳಹೊಕ್ಕು ನೋಡಿ ವಿವರಿಸಿ ಹೇಳಲು ನಾನು ಹೇಗೆ ತಾನೆ ಶಕ್ತನು;

ಎತ್ತ=ಯಾವ ಕಡೆ; ಆಲಿ=ಕಣ್ಣು; ದುವ್ವಾಳಿಸು=ಪ್ರಸರಿಸು/ಹಬ್ಬಿಸು/ಹರಡು;

ಎತ್ತ ಆಲಿಗಳ ದುವ್ವಾಳಿಸುವಡೆ=ಯಾವ ಕಡೆ ಕಣ್ಣಾಡಿಸಿದರೂ/ಎತ್ತ ತಿರುಗಿ ನೋಡಿದರೂ;

ಥಟ್ಟು=ಪಡೆ; ಅತ್ತಲು ಆನೆಯ ಥಟ್ಟು=ಆ ಕಡೆ ಆನೆಯ ಪಡೆ; ಕಾಲಾಳ್+ಒತ್ತರದ;

ಕಾಲಾಳು=ನೆಲದ ಮೇಲೆ ನಿಂತು ಯುದ್ದಮಾಡುವ ಸೈನಿಕರು; ಒತ್ತರ=ವೇಗ; ರಣ=ಯುದ್ದ; ವಾಜಿ=ಕುದುರೆ;

ಒತ್ತರದ ರಣವಾಜಿ=ವೇಗವಾಗಿ ಮುನ್ನುಗ್ಗುತ್ತಿರುವ ಕುದುರೆಗಳ ಪಡೆ;

ರೂಢಿ=ಕೀರ್ತಿ/ಒಳ್ಳೆಯ ಹೆಸರನ್ನು ಪಡೆದಿರುವುದು; ರಾಯ=ರಾಜ; ರಾವುತ=ಕುದುರೆ ಸವಾರ;

ರೂಢಿಯ ರಾಯ ರಾವುತರು =ಹೆಸರಾಂತ ವೀರರಾದ ಕುದುರೆ ಸವಾರರು;

ಸುತ್ತ ಬಳಸಿಹುದು=ವಿರಾಟರಾಯನ ದನಗಳನ್ನು ಮತ್ತು ಗೋಪಾಲಕರನ್ನು ಅತ್ತಿತ್ತ ಹೋಗದಂತೆ ಸುತ್ತುಗಟ್ಟಿದೆ; ಮೋಹರ=ಸೇನೆ;

ಎತ್ತ ಮನ ಹರಿವತ್ತ ಮೋಹರವಲ್ಲದೆ ಅನ್ಯವ ಮತ್ತೆ ಕಾಣೆನು=ಯಾವ ಕಡೆ ಮನಸ್ಸು ಹರಿದರೂ ಅತ್ತ ಕಡೆಯಲ್ಲೆಲ್ಲಾ ಶತ್ರುವಾದ ದುರ್‍ಯೋದನನ ಸೇನೆಯಲ್ಲಿದೆ ಮತ್ತಾವುದು ಕಣ್ಣಿಗೆ ಬೀಳುತ್ತಿಲ್ಲ;

ವೈರಿ=ಹಗೆ/ಶತ್ರು; ವಾಹಿನಿ=ಸೇನೆ/ದಳ; ಹದನ=ಇರುವಿಕೆ;

ಜೀಯ, ಇದು ವೈರಿ ವಾಹಿನಿಯ ಹದನ=ಒಡೆಯ, ಹಗೆಯ ಸೇನಾಬಲದ ಇರುವಿಕೆಯು ಇಶ್ಟು ದೊಡ್ಡಪ್ರಮಾಣದಲ್ಲಿದೆ;

ಪಡಿ=ಸಮಾನವಾದುದು/ಪ್ರತಿಯಾದುದು/ಬದಲು; ಪಡಿನೆಲ=ಇನ್ನೊಂದು ಬೂಮಿ; ಒಡ್ಡು=ವ್ಯೂಹ ರಚನೆ ಮಾಡು/ಮುಂದಿಡು;

ಪಡಿನೆಲನನು ಒಡ್ಡಿದರೊ=ಈ ಬೂಮಿಯ ಉದ್ದಗಲದಲ್ಲಿ ಮತ್ತೊಂದು ಬೂಮಿಯನ್ನೇ ಮುಂದಿಟ್ಟರೋ; ಅಂದರೆ ನೆಲವೇ ಕಾಣದಂತೆ ಸೇನೆಯು ಎಲ್ಲಾ ಕಡೆ ಆವರಿಸಿಕೊಂಡಿದೆ;

ಮೇಣ್=ಇಲ್ಲವೇ; ಅವನಿ=ಬೂಮಿ; ದಡ್ಡಿ=ಹೊದಿಕೆ;

ಅವನಿಯ ದಡ್ಡಿಯೋ ಎನಲು=ಬೂಮಂಡಲದ ಮೇಲೆ ಹೊದಿಸಿರುವ ಹೊದಿಕೆಯೋ ಎನ್ನುವಂತೆ;

ಚಮರ=ಚಮರವೆಂಬ ಪ್ರಾಣಿಯ ಉದ್ದನೆಯ ಕೂದಲುಗಳಿಂದ ಮಾಡಿರುವ ಬೀಸಣಿಗೆ; ಸೀಗುರಿ=ಒಂದು ಬಗೆಯ ಕೊಡೆ-ದೇವರ ಉತ್ಸವ ಮತ್ತು ರಾಜರ ಮೆರವಣಿಗೆಯಲ್ಲಿ ಹಿಡಿದುಕೊಂಡು ಹೋಗುವ ದೊಡ್ಡ ಕೊಡೆ; ಪತಾಕೆ=ಬಾವುಟ; ಝಲ್ಲರಿ+ಒಡ್ಡು; ಝಲ್ಲರಿ=ಉತ್ಸವಗಳಲ್ಲಿ ಎತ್ತಿಹಿಡಿಯುವ ಮೀನು ಮೊಸಳೆ ಮುಂತಾದ ಪ್ರಾಣಿಗಳ ಚಿತ್ರಗಳಿಂದ ಕೂಡಿರುವ ತೋರಣ; ಒಡ್ಡು=ಗುಂಪು; ತಳಿತು=ಅರಳು/ವಿಕಸಿಸು;

ಚಮರ ಸೀಗುರಿಗಳ ಪತಾಕೆಯಲಿ ಝಲ್ಲರಿಯೊಡ್ಡು ತಳಿತುದು=ದೊಡ್ಡ ಆಕಾರದಲ್ಲಿರುವ ಬೀಸಣಿಗೆಗಳು, ಕೊಡೆಗಳು, ಬಾವುಟಗಳು ಮತ್ತು ಜಲ್ಲರಿಗಳೆಲ್ಲವೂ ಸೇನೆಯ ಉದ್ದಗಲದಲ್ಲಿ ಹರಡಿಕೊಂಡಿದ್ದವು;

ಅಡ್ಡಹಾಯ್ದು=ನಡುವೆ ಸುಳಿದು ಬರುವುದು; ಇನ=ಸೂರ್‍ಯ; ಕಿರಣ=ಕಾಂತಿ; ಇನಿಕಿರಣ=ಸೂರ್‍ಯನ ಬೆಳಕಿನ ಕಿರಣ; ಪವನ=ಗಾಳಿ/ವಾಯು; ಖಡ್ಡತನ=ದಿಟ್ಟತನ;

ಅಡ್ಡ ಹಾಯ್ದು ಇನಕಿರಣ ಪವನನ ಖಡ್ಡತನ ನಗೆಯಾಯ್ತು=ಈ ನುಡಿಗಳು ಅತಿಶಯೋಕ್ತಿಯಾಗಿ ಬಳಕೆಗೊಂಡಿವೆ. ಸೇನೆಯಲ್ಲಿ ಹಿಡಿದಿದ್ದ ದೊಡ್ಡದೊಡ್ಡ ಚಾಮರ, ಕೊಡೆ,ಬಾವುಟ, ಜಲ್ಲರಿಗಳ ನಡುವೆ ಸೂರ್‍ಯಕಿರಣವಾಗಲಿ ಇಲ್ಲವೇ ಗಾಳಿಯಾಗಲಿ ಸುಳಿದಾಡುವುದಕ್ಕೂ ಎಡೆಯಿರಲಿಲ್ಲ ಎಂಬ ತಿರುಳಿನಲ್ಲಿ ಬಳಕೆಯಾಗಿವೆ; ಒಡ್ಡು=ಸೇನೆ/ಪಡೆ; ಅಭಿವರ್ಣಿಸು=ಸಮಗ್ರವಾಗಿ ವಿವರಿಸು; ಅರಿ=ತಿಳಿ;

ಕೌರವನ ಒಡ್ಡನು ಅಭಿವರ್ಣಿಸುವಡೆ ಅರಿಯೆನು=ದುರ್‍ಯೋದನನ ಸೇನೆಯ ಪ್ರಮಾಣವನ್ನಾಗಲಿ ಇಲ್ಲವೇ ಸೇನಾಬಲವನ್ನಾಗಲಿ ಸಮಗ್ರವಾಗಿ ವಿವರಿಸಲು ನನಗೆ ತಿಳಿಯದಾಗಿದೆ; ದುರ್ಗ=ಕೋಟೆ; ಬಲಿಸು=ಬದ್ರಪಡಿಸು;

ಜೀಯ ಕೇಳು… ಒಳಗೆ ನೀ ಕಾದುವೊಡೆ ದುರ್ಗವ ಬಲಿಸು=ಒಡೆಯನೇ ಕೇಳು… ಈಗ ನೀನು ರಣರಂಗಕ್ಕೆ ತೆರಳದೆ, ವಿರಾಟನಗರವನ್ನು ಹಗೆಯ ಆಕ್ರಮಣದಿಂದ ಕಾಪಾಡಬೇಕೆಂದಿದ್ದರೆ ಕೋಟೆಯ ಹೆಬ್ಬಾಗಿಲನ್ನು ಮುಚ್ಚಿಸಿ, ಕಾವಲು ಪಡೆಯನ್ನು ಬಲಗೊಳಿಸು; ಬವರ=ಕಾಳೆಗ/ಯುದ್ದ; ಹಿಂದುಗಳೆ=ಹಿಂಜರಿ/ಅಂಜು; ನಿನಗೆ+ಈಗಲು;

ಬವರಕೆ ಹಿಂದುಗಳೆಯದೆ ನಿಲುವ ಮನ ನಿನಗೀಗಲು ಉಂಟೇ ನಡೆಯಬೇಕು ಎನಲು=ಯುದ್ದಮಾಡಲು ಹಿಂಜರಿಯದೆ ಹಗೆಯನ್ನು ರಣರಂಗದಲ್ಲಿಯೇ ಎದುರಿಸಿ ಹೋರಾಡಬೇಕೆಂಬ ಮನಸ್ಸು ಈಗ ನಿನಗಿದ್ದರೆ, ರಣರಂಗದ ಕಡೆಗೆ ಮುನ್ನುಗ್ಗಬೇಕು ಎಂದು ಗೋಪಾಲಕನು ಹೇಳಲು; ಕೆಲಬಲ=ಅಕ್ಕಪಕ್ಕ;

ಉತ್ತರ ಕೆಲಬಲನ ನೋಡಿದನು=ಉತ್ತರಕುಮಾರನು ತಾನು ಮಹಾಶೂರನೆಂಬುದನ್ನು ತೋರಿಸಿಕೊಳ್ಳುವಂತೆ ಅಕ್ಕಪಕ್ಕದಲ್ಲಿದ್ದ ಹೆಂಗಸರ ಕಡೆಗೆ ನೋಟವನ್ನು ಬೀರಿದನು; ಅಲುಗು=ತಿರುಗಿಸು;

ಮೀಸೆಯನು ಅಲುಗಿದನು=ಪರಾಕ್ರಮದ ಸಂಕೇತವಾಗಿ ಮೀಸೆಯನ್ನು ಕಯ್ ಬೆರಳುಗಳಿಂದ ತಿರುಗಿಸಿದನು; ತನ್ನ+ಇದಿರ; ಇದಿರು=ಮುಂದೆ ಇರುವ; ಲಲನೆ=ಹೆಂಗಸು; ಬಿರುದು=ಪ್ರಶಸ್ತಿ/ಯಾವುದೇ ರಂಗದಲ್ಲಿ ದೊಡ್ಡ ಸಾದನೆಯನ್ನು ಮಾಡಿದವರನ್ನು ಗುರುತಿಸಿ ನೀಡುವ ಮನ್ನಣೆ ; ಕೆದರು=ಹರಡು ;

ತನ್ನಿದಿರ ಮೇಳದ ಲಲನೆಯರ ಮೊಗ ನೋಡುತ ಬಿರುದ ಕೆದರಿದನು=ತನ್ನ ಮುಂದಿದ್ದ ಮೇಳದ ಹೆಂಗಸರ ಮೊಗವನ್ನು ನೋಡುತ್ತ ತನ್ನ ಪರಾಕ್ರಮದ ಕೀರ್ತಿಯನ್ನು ತಾನೇ ಹೇಳಿಕೊಳ್ಳತೊಡಗಿದ; ಕುನ್ನಿ=ನಾಯಿ ಮರಿ/ವ್ಯಕ್ತಿಯ ಬಗ್ಗೆ ತಿರಸ್ಕಾರ ಮತ್ತು ನಿಂದನೆಯನ್ನು ಸೂಚಿಸುವ ಬಯ್ಗುಳದ ಪದವಾಗಿ ಬಳಕೆಗೊಂಡಿದೆ;

ಕುನ್ನಿಯನು ನೂಕು=ಈ ನಾಯಿಮರಿಯನ್ನು ಹೊರಕ್ಕೆ ಹಾಕು; ತಾನ್+ಈಗ; ತಾನ್=ಈತನು; ಆಹವ=ಯುದ್ದ/ಕಾಳೆಗ; ಭೀತ+ಆಕುಳನು; ಭೀತಿ=ಹೆದರಿಕೆ/ಅಂಜಿಕೆ; ಆಕುಳ=ತುಂಬಿದ/ಆವರಿಸಿದ; ಭೀತಾಕುಳ=ಹೆದರಿಕೆಯಿಂದ ಕೂಡಿದವನು; ತಾನೀಗ ಆಹವದ ಭೀತಾಕುಳನು=ಈಗ ಈತನು ಕಾಳೆಗದ ಹೆದರಿಕೆಯಿಂದ ನಡುಗುತ್ತಿದ್ದಾನೆ; ಲೌಲ್ಯತೆ=ಅತಿಯಾಸೆ/ಗೀಳು; ಒಟ್ಟೈಸು=ಮುತ್ತು/ಕವಿ; ಕಾಕು=ಸುಳ್ಳು/ಕೆಲಸಕ್ಕೆ ಬಾರದ ಮಾತು;

ಇವನು ಹೆಂಡಿರ ಸಾಕಿ ಬದುಕುವ ಲೌಲ್ಯತೆಯಲಿ ಒಟ್ಟೈಸಿ ಬಂದು, ಎನಗೆ ಕಾಕ ಬಳಸುವನು=ಇವನು ಜೀವವನ್ನು ಉಳಿಸಿಕೊಂಡು ತನ್ನ ಹೆಂಡಿರೊಡನೆ ಬಾಳಬೇಕೆಂಬ ದುರಾಸೆಯಿಂದ ಕೂಡಿದವನಾಗಿ ರಣರಂಗದಿಂದ ಓಡಿಬಂದು ನನ್ನ ಮುಂದೆ ಕೆಲಸಕ್ಕೆ ಬಾರದ ಮಾತುಗಳನ್ನಾಡುತ್ತಿದ್ದಾನೆ; ಉದ್ರೇಕಿಸು=ಕೆರಳು/ಆವೇಶಗೊಳ್ಳು; ಸಮರ=ಕಾಳೆಗ/ಯುದ್ದ; ಪಿನಾಕಧರ=ಶಿವ; ನೂಕು=ಶಕ್ಯವಾಗು/ಸಾದ್ಯವಾಗು;

ತಾನು ಉದ್ರೇಕಿಸಿಯೆ ಸಮರದಲಿ ನಿಲಲು ಪಿನಾಕಧರನಿಗೆ ನೂಕದು ಎಂದನು ಸತಿಯರ ಇದಿರಿನಲಿ=ನಾನು ಕೆರಳಿ ನಿಂತರೆ ರಣರಂಗದಲ್ಲಿ ನನ್ನನ್ನು ಎದುರಿಸಲು ಶಿವನಿಗೆ ಸಾದ್ಯವಾಗದು ಎಂದು ರಾಣಿವಾಸದ ಹೆಂಗಸರ ಮುಂದೆ ಉತ್ತರಕುಮಾರನು ನುಡಿದನು;

ಎನಿತು=ಎಶ್ಟು ; ಬಲ=ಸೇನೆ; ಘನ+ಆದೊಡೆ+ಏನು; ಘನ=ದೊಡ್ಡದು; ಆದೊಡೆ=ಆದರೆ/ಆಗಿದ್ದರೆ; ಜೀಯ, ಎನಿತು ಬಲ ಘನವಾದೊಡೇನು=ಒಡೆಯನೆ… ದುರ್‍ಯೋದನನ ಸೇನೆಯು ಎಷ್ಟು ದೊಡ್ಡದಾಗಿದ್ದರೆ ತಾನೆ ಏನು; ಗಹನ=ಕಷ್ಟವಾದ/ಸುಲಭವಲ್ಲದ;

ಅದು ನಿನಗೆ ಗಹನವೆ=ಅದನ್ನು ಸದೆಬಡೆದು ಗೆಲ್ಲುವುದು ಕಶ್ಟವೇನಲ್ಲ; ದಿನಪ=ಸೂರ್‍ಯ; ತಮ=ಕತ್ತಲೆ; ಗಾವಳಿ=ಗುಂಪು/ರಾಶಿ; ದಿಟ್ಟತನ=ಕೆಚ್ಚು/ಶಕ್ತಿ;

ಜಗದಲಿ ದಿನಪನ ಇದಿರಲಿ ತಮದ ಗಾವಳಿಗೆ ದಿಟ್ಟತನವೇ=ಜಗತ್ತಿನಲ್ಲಿ ಬೆಳಗುತ್ತಿರುವ ಒಬ್ಬ ಸೂರ್‍ಯನ ಮುಂದೆ ನಿಲ್ಲುವ ಶಕ್ತಿಯಾಗಲಿ ಇಲ್ಲವೇ ದಿಟ್ಟತನವಾಗಲಿ ಕತ್ತಲೆಯ ರಾಶಿಗೆ ಇರುವುದೆ; ಬಿನುಗು=ಹೀನ ವ್ಯಕ್ತಿ; ರಾಯ=ರಾಜ; ಬಿಂಕ=ಗರ್ವ/ಸೊಕ್ಕು/ಸಾಹಸ/ಪರಾಕ್ರಮ; ಗೋವರ=ಗೋಪಾಲಕರ; ಮೊನೆ=ಪಡೆ/ದಳ; ಮೆರೆ=ಎದ್ದು ತೋರು/ಬೀಗು;

ಬಿನುಗು ರಾಯರ ಬಿಂಕ ಗೋವರ ಮೊನೆಗೆ ಮೆರೆದೊಡೆ ಸಾಕು=ಹೀನವ್ಯಕ್ತಿಗಳಾದ ದುರ್‍ಯೋದನನ ಕಡೆಯ ರಾಜರ ಪರಾಕ್ರಮ ಗೋಪಾಲಕರ ಪಡೆಯ ಮುಂದೆ ನಡೆದಂತೆ ನಿನ್ನ ಮುಂದೆ ನಡೆಯಲಾರದು; ಜನಪ=ರಾಜ;

ಜನಪ ನಿಂದಿರು=ಯುವರಾಜನೇ, ಹಗೆಗಳನ್ನು ಸದೆಬಡಿಯಲು ಸಿದ್ದನಾಗು; ಥಟ್ಟು=ಸೇನೆ/ಪಡೆ; ಕೈಗುಣ=ವ್ಯಕ್ತಿಯು ಕಯ್ಗೊಂಡ ಕೆಲಸವನ್ನು ಚೆನ್ನಾಗಿ ಮಾಡುವ ಗುಣ/ವ್ಯಕ್ತಿಯ ಶಕ್ತಿ; ಕೌರವನ ಥಟ್ಟಿನಲಿ ಕೈಗುಣವ ತೋರಿಸು ಎಂದಡೆ=ದುರ್‍ಯೋದನನ ಸೇನೆಯ ಮುಂದೆ ನಿನ್ನ ಪರಾಕ್ರಮ ಎಂತಹುದು ಎಂಬುದನ್ನು ತೋರಿಸು ಎಂದು ಗೋಪಾಲಕನು ಹೇಳಲು;

ಉಬ್ಬರಿಸಿದನು=ಹಿಗ್ಗಿದನು; ಬಗೆ=ಕಲ್ಪನೆ/ಊಹೆ;

ತಾ ಕಲಿಯೆಂದು ಬಗೆದನು=ತಾನೊಬ್ಬ ಮಹಾಪರಾಕ್ರಮಿಯೆಂದು ಮನದಲ್ಲಿಯೇ ಕಲ್ಪಿಸಿಕೊಂಡನು;

ಮೀಸೆಯನು ಬೆರಳಿಂದ ತಿರುಹುತ ಮುಗುಳುನಗೆ ಹರುಷದಲಿ ಮೈಮರೆದ=ಮೀಸೆಯನ್ನು ಬೆರಳುಗಳಿಂದ ತಿರುಗಿಸುತ್ತ, ಮುಗುಳನಗೆಯನ್ನು ಬೀರುತ್ತ, ಆನಂದದಲ್ಲಿ ತನ್ನ ಶಕ್ತಿಯ ಇತಿಮಿತಿಗಳೇನೆಂಬುದನ್ನೇ ಮರೆತ;

ರೋಮಾಂಚ=ಮಯ್ ನವಿರೇಳುವುದು; ಸಂದಣಿಸು=ಒತ್ತಾಗಿಬಂದು/ತುಂಬಿಬಂದು; ಇಂದು=ಚಂದ್ರ; ಇಂದುಮುಖಿ=ಚಂದಿರನ ಕಾಂತಿಯ ಮೊಗದವಳು/ಸುಂದರಿ;

ರೋಮಾಂಚ ಸಂದಣಿಸಿ ಕೆಲಬಲದ ಇಂದುಮುಖಿಯರ ನೋಡಿದನು=ರೋಮಾಂಚನಗೊಂಡು ತನ್ನ ಅಕ್ಕಪಕ್ಕದಲ್ಲಿದ್ದ ಸುಂದರಿಯರತ್ತ ಕಣ್ಣೋಟವನ್ನು ಬೀರಿದನು; ಪೌರುಷತನ=ಶೂರತನ/ವೀರತನ/ಪರಾಕ್ರಮ; ಪರಿಣತೆ=ನಿಪುಣತೆ/ಕುಶಲತೆ; ನಲವು=ಹಿಗ್ಗು/ಆನಂದ;

ತನ್ನ ಪೌರುಷತನದ ಪರಿಣತೆಯ ನಲವಿಂದ ನುಡಿದನು=ತನ್ನ ಶೂರತನದ ನಿಪುಣತೆಯನ್ನು ಹಿಗ್ಗಿನಿಂದ ಹೇಳಿಕೊಳ್ಳತೊಡಗಿದನು;

ಅಹುದಹುದು ತಪ್ಪೇನು=ಗೋಪಾಲಕನು “ದುರ್‍ಯೋದನನ ಸೇನೆ ಎಷ್ಟು ದೊಡ್ಡದಾಗಿದ್ದರೇನು. ನಿನಗದು ಲೆಕ್ಕವೇ” ಎಂದು ತನ್ನ ಪರಾಕ್ರಮವನ್ನು ಹಾಡಿಹೊಗಳಿದ್ದನ್ನು ಉತ್ತರಕುಮಾರನು ಮೆಚ್ಚಿಕೊಂಡು, ಅಹುದು ಅಹುದು ನೀನು ಹೇಳಿದ ಮಾತುಗಳಲ್ಲಿ ತಪ್ಪೇನಿಲ್ಲ. ನೀನು ಹೇಳಿದಂತೆ ನಾನು ಮಹಾವೀರನೇ ಆಗಿದ್ದೇನೆ;

ಕುಹಕ=ಮೋಸ/ವಂಚನೆ; ಮಹಿ=ಭೂಮಿ/ರಾಜ್ಯ; ಕೊಳ್=ಕಿತ್ತುಕೊಳ್ಳು/ವಶಪಡಿಸಿಕೊಳ್ಳು; ಕೆಣಕು=ರೇಗಿಸು/ಕೆರಳಿಸು;

ಸುಯೋಧನನು ಜೂಜಿನ ಕುಹಕದಲಿ ಪಾಂಡವರ ಸೋಲಿಸಿ ಮಹಿಯ ಕೊಂಡಂತೆ ಎನ್ನ ಕೆಣಕಿದನೇ=ದುರ್‍ಯೋದನನು ಜೂಜಾಟದಲ್ಲಿ ಮೋಸದಿಂದ ಪಾಂಡವರನ್ನು ಸೋಲಿಸಿ, ಅವರ ರಾಜ್ಯವನ್ನು ಕಿತ್ತುಕೊಂಡಂತೆ, ಬಹುಸುಲಬವಾಗಿ ಮತ್ಸ್ಯದೇಶವನ್ನು ವಶಪಡಿಸಿಕೊಳ್ಳಬಹುದೆಂದು ತಿಳಿದು ನಮ್ಮ ದೇಶದ ಮೇಲೆ ಆಕ್ರಮಣಮಾಡಿ ನನ್ನನ್ನು ಕೆಣಕಿದ್ದಾನೆ; ಸಹಸ=ಸಾಹಸ/ಕಸುವು; ಮರಳಿಚು=ಹಿಂತಿರುಗಿಸು; ತಹೆನು=ತರುತ್ತೇನೆ;

ಸಹಸದಿಂದವೆ ತುರುವ ಮರಳಿಚಿ ತಹೆನು=ನನ್ನ ಶಕ್ತಿ ಏನೆಂಬುದನ್ನು ತೋರಿಸಿಯೇ ದುರ್‍ಯೋದನನ ಸೇನೆಯನ್ನು ಸದೆಬಡಿದು, ಅವನು ಅಪಹರಿಸಿಕೊಂಡಿರುವ ಗೋವುಗಳನ್ನು ಬಿಡಿಸಿಕೊಂಡು ತರುತ್ತೇನೆ; ನಿರ್ವಹಿಸು=ಬದುಕು/ಉಳಿ; ಈ=ಕೊಡು/ಅವಕಾಶವನ್ನು ನೀಡು;

ಬಳಿಕ ಆ ಕೌರವನ ನಿರ್ವಹಿಸಲು ಈವೆನೆ=ಗೋವುಗಳನ್ನು ಸೆರೆಯಿಂದ ಬಿಡಿಸಿದ ನಂತರ ಆ ದುರ್‍ಯೋದನನ್ನು ಬದುಕಲು ಬಿಡುತ್ತೇನೆಯೇ; ಸೂರೆ=ಕೊಳ್ಳೆ/ಲೂಟಿ;

ಹಸ್ತಿನಾಪುರವ ಸೂರೆಗೊಂಬೆನು=ಹಸ್ತಿನಾಪುರದ ಮೇಲೆ ದಂಡೆತ್ತಿಹೋಗಿ, ದುರ್‍ಯೋದನನ ಹುಟ್ಟಡಗಿಸಿ, ಹಸ್ತಿನಾಪುರವನ್ನು ಕೊಳ್ಳೆಹೊಡೆಯುತ್ತೇನೆ; ಹಿಡಿ=ಹೊಂಚು/ತಂತ್ರ ರೂಪಿಸಿ; ಬಡಿ=ಹೊಡೆ; ಹೊರವಡು=ಬೇರೆ ಜಾಗಕ್ಕೆ ಹೋಗು; ಕೊಬ್ಬು=ಸೊಕ್ಕು/ಅಹಂಕಾರ; ಭುಜಬಲ=ತೋಳ್ಬಲ;

ಹಿಡಿದು ರಾಜ್ಯವ ಕೊಂಡು, ಹೆಂಗುಸ ಬಡಿದು ಪಾಂಡವ ರಾಯರನು ಹೊರವಡಿಸಿ ಕೊಬ್ಬಿದ ಭುಜಬಲವನು ಎನ್ನೊಡನೆ ತೋರಿದನೆ=ಜೂಜಾಟದ ತಂತ್ರವನ್ನು ಹೆಣೆದು ಪಾಂಡವರ ರಾಜ್ಯವನ್ನು ಕಿತ್ತುಕೊಂಡು, ದ್ರೌಪದಿಯನ್ನು ಒಡ್ಡೋಲಗದಲ್ಲಿ ಅಪಮಾನಪಡಿಸಿ, ಪಾಂಡವರನ್ನು ಹಸ್ತಿನಾವತಿಯಿಂದ ಹೊರದಬ್ಬಿ ಸೊಕ್ಕಿನಿಂದ ಮೆರೆಯುತ್ತಿರುವ ಆ ದುರ್‍ಯೋದನನು ತನ್ನ ತೋಳ್ಬಲವನ್ನು ಈಗ ನನ್ನ ಮುಂದೆ ತೋರಿಸಲು ಬಂದಿದ್ದಾನೆಯೇ;

ಬಡ=ಅಲ್ಪ ಶಕ್ತಿಯ/ಸೊರಗಿದ. ಯುಧಿಷ್ಠಿರ=ದರ್ಮರಾಯ;

ಬಡಯುಧಿಷ್ಠಿರನೆಂದು ಬಗೆದನೆ=ಏನೇ ಅನ್ಯಾಯ ನಡೆದರೂ ಹೋರಾಡಲು ಮುನ್ನುಗ್ಗದ ಬಡಪಾಯಿ ದರ್ಮರಾಯನೆಂದು ನನ್ನನ್ನು ಬಾವಿಸಿದನೆ; ಅರಿಯನಲಾ=ದುರ್‍ಯೋದನನಿಗೆ ನನ್ನ ಶಕ್ತಿ ಪ್ರತಾಪ ಏನೆಂದು ತಿಳಿಯದು;

ಕಡುಗು=ಮಸಗು/ಕೆರಳು/ಮೇಲೆ ಬೀಳು; ತೊಡೆ=ಅಳಿಸು/ಗುಡಿಸು; ಖತಿ=ಕೋಪ;

ಕಡುಗಿದೊಡೆ ಕೌರವನ ಕೀರ್ತಿಯ ತೊಡೆವೆನು ಎನುತ ಸುಕುಮಾರ ಖತಿಗೊಂಡ=ನಾನು ಕೆರಳಿ ಹಗೆಯ ಸೇನೆಯ ಮೇಲೆ ಆಕ್ರಮಣಮಾಡಿದರೆ ದುರ್‍ಯೋದನನ ಹೆಸರನ್ನೇ ಅಳಿಸುತ್ತೇನೆ ಎನ್ನುತ್ತ ಉತ್ತರಕುಮಾರನು ಕೋಪಗೊಂಡನು;

ತನಗೆ=ಆ ದುರ್‍ಯೋದನನಿಗೆ; ಬಡ=ದುರ್ಬಲ/ಶಕ್ತಿಹೀನ; ತೆವರು=ಓಡಿಸು/ನಿವಾರಿಸು; ಕೊಬ್ಬು=ಸೊಕ್ಕು; ಕಾಲ=ಯಮ; ಮನೆಯನ್+ಆಳ್ವಿಪುದು; ಆಳ್=ಒಳಸೇರು;

ತನಗೆ ಬಡ ಪಾಂಡವರ ತೆವರಿದ ಮನದ ಗರ್ವದ ಕೊಬ್ಬು ಕಾಲನ ಮನೆಯನಾಳ್ವಿಪುದು=ಬಲಹೀನರಾಗಿದ್ದ ಪಾಂಡವರನ್ನು ಜೂಜಿನ ನೆಪದಲ್ಲಿ ವಂಚಿಸಿ ಹಸ್ತಿನಾವತಿಯಿಂದ ಓಡಿಸಿದ ದುರ್‍ಯೋದನನ ಮನದ ಸೊಕ್ಕಿನ ಅಹಂಕಾರವನ್ನು ಅಡಗಿಸಿ ನಾನು ಅವನನ್ನು ಯಮನ ಮನೆಗೆ ಕಳುಹಿಸುತ್ತೇನೆ;

ಅಲ್ಲದಿದ್ದೊಡೆ=ಅಲ್ಲದಿದ್ದರೆ ಅಂದರೆ ದುರ್‍ಯೋದನನಿಗೆ ಸಾವು ಸಮೀಪಿಸಿದೆ. ಆದ್ದರಿಂದಲೇ ಅವನು ಈಗ ನನ್ನನ್ನು ಕೆಣಕಿದ್ದಾನೆ; ವೈರ=ಹಗೆತನ; ತನ್ನ ವೈರ=ನನ್ನನ್ನು ಹಗೆಮಾಡಿಕೊಂಡು; ಮೇದಿನಿ=ಬೂಮಂಡಲ/ರಾಜ್ಯ;

ತನ್ನ ವೈರವನು ನೆನೆದು ದುರ್ಯೋಧನನು ತಾ ಮೇದಿನಿಯನು ಆಳ್ವನೆ=ನನ್ನೊಡನೆ ಹಗೆತನವನ್ನು ಕಟ್ಟಿಕೊಂಡು ದುರ್‍ಯೋದನನು ರಾಜ್ಯವನ್ನು ಆಳುವುದಕ್ಕೆ ಆಗುತ್ತದೆಯೇ;

ಹಾ=ಅಚ್ಚರಿ ಇಲ್ಲವೇ ಆತಂಕವನ್ನು ಸೂಚಿಸುವಾಗ ಬಳಸುವ ದನಿ; ಮಹಾದೇವ=ಶಿವ; ಹಾ ಮಹಾದೇವ=ಓ… ದೇವರೇ;

ಹಾ ಮಹಾದೇವ ಎನುತಲು ಹೆಂಗಳಿದಿರಿನಲಿ ಉತ್ತರ ಬಿರುದ ನುಡಿದನು=ಓ… ದೇವರೇ… ದುರ್‍ಯೋದನನು ನನ್ನನ್ನು ಕೆಣಕಿ ಎಂತಹ ಆಪತ್ತಿಗೆ ಒಳಗಾದ ಎಂದು ನುಡಿಯುತ್ತ ತನ್ನ ಸುತ್ತಲೂ ಇದ್ದ ಹೆಂಗಸರ ಮುಂದೆ ತನ್ನ ಪ್ರತಾಪವನ್ನು ಉತ್ತರಕುಮಾರನು ಕೊಚ್ಚಿಕೊಳ್ಳತೊಡಗಿದನು;

ಜವ=ಯಮ; ಮುರಿ=ತಿರುಗಿಸು/ಕೆಳಕ್ಕೆ ಬಾಗಿಸು;

ಜವನ ಮೀಸೆಯ ಮುರಿದನೋ=ಸಾವಿನ ದೇವತೆಯಾದ ಯಮನ ಮೀಸೆಗೆ ಕಯ್ಯಿಕ್ಕಿ ತಿರುಗಿಸಿದನೊ;

ಭೈರವ=ಉಗ್ರರೂಪದಲ್ಲಿರುವ ಶಿವ; ದಾಡೆ=ದವಡೆ/ಕೋರೆಹಲ್ಲು; ಅಲುಗು=ಅಲ್ಲಾಡಿಸು;

ಭೈರವನ ದಾಡೆಯನು ಅಲುಗಿದನೊ=ಕೇಡಿಗಳನ್ನು ನಾಶಮಾಡಲೆಂದು ಉಗ್ರರೂಪವನ್ನು ತಳೆದು ಬಂದಿರುವ ಬೈರವನ ದಾಡೆಗೆ ಕಯ್ಯಿಕ್ಕಿ ಅಲ್ಲಾಡಿಸಿದನೊ;

ಮೃತ್ಯು=ಸಾವಿನ ದೇವತೆಯಾದ ಮಾರಿ; ಮೇಲುದ=ಸೆರಗು/ಹೆಂಗಸರು ತಮ್ಮ ಎದೆಯ ಮೇಲೆ ಹಾಕಿಕೊಳ್ಳುವ ಸೀರೆಯ ಹೊದಿಕೆ; ಸೆಳೆ=ಎಳೆ/ಕೀಳು/ಜಗ್ಗು;

ಮೃತ್ಯುವಿನ ಮೇಲುದ ಸೆಳೆದನೋ=ಸಾವಿನ ದೇವತೆಯಾದ ಮಾರಿಯ ಸೆರಗಿಗೆ ಕಯ್ಯಿಕ್ಕಿ ಎಳೆದನೊ;

ಕೇಸರಿ=ಸಿಂಹ;

ಕೇಸರಿಯ ಕೆಣಕಿದನೋ=ಸಿಂಹವನ್ನು ಕೆರಳಿಸಿದನೊ; ಯಮ, ಬೈರವ, ಮಾರಿ, ಸಿಂಹದ ರೂಪಕಗಳೆಲ್ಲವೂ ಸಾವಿನ ಸಂಕೇತವಾಗಿ ಬಂದಿವೆ; ಬವರ=ಕಾಳೆಗ/ಯುದ್ದ; ತೊಡಗು=ಮೊದಲು ಮಾಡು;

ಬವರವನು ತೊಡಗಿದನಲಾ=ನನ್ನೊಡನೆ ಕಾಳೆಗಕ್ಕೆ ಮೊದಲುಮಾಡಿದನಲ್ಲಾ; ಅಕಟ=ಅಯ್ಯೋ; ಮರುಳು=ಹುಚ್ಚು/ತಿಳಿಗೇಡಿತನ;

ಅಕಟ, ಕೌರವನು ಮರುಳಾದನು ಎಂದು ಆ ಯುವತಿಯರ ಮೊಗ ನೋಡುತ ಉತ್ತರ ಬಿರುದ ಕೆದರಿದನು=ಅಯ್ಯೋ… ದುರ್‍ಯೋದನನು ನನ್ನನ್ನು ಕೆಣಕಿ ತನಗೆ ತಾನೆ ಸಾವನ್ನು ತಂದುಕೊಳ್ಳುವ ತಿಳಿಗೇಡಿಯಾದನು ಎಂದು ಅಲ್ಲಿದ್ದ ಯುವತಿಯರ ಮೊಗವನ್ನು ನೋಡುತ್ತ ಉತ್ತರಕುಮಾರನು ತನ್ನ ಪ್ರತಾಪವನ್ನು ತಾನೇ ಹೊಗಳಿಕೊಂಡನು; ಆರ್+ಒಡನೆ; ಆರ್=ಯಾರು; ಒಡನೆ=ಜತೆಯಲ್ಲಿ/ಸಂಗಡ; ಕಾದು=ಹೋರಾಡು/ಕದನಮಾಡು;

ಆರೊಡನೆ ಕಾದುವೆನು=ದುರ್‍ಯೋದನನ ಸೇನೆಯನ್ನು ಸದೆಬಡಿಯಲೆಂದು ನಾನು ರಣರಂಗಕ್ಕೆ ದಂಡೆತ್ತಿಹೋದಾಗ ಅಲ್ಲಿ ಯಾರೊಡನೆ ಹೋರಾಡಲಿ; ಕೆಲಬರು=ಕೆಲವರು; ಹಾರುವ=ಬ್ರಾಹ್ಮಣ;

ಕೆಲಬರು ಹಾರುವರು=ಕೆಲವರು ಬ್ರಾಹ್ಮಣರು. ಪಾಂಡವರ ಗುರುವಾದ ದ್ರೋಣಾಚಾರ್ಯ, ಕ್ರುಪಾಚಾರ್ಯ, ದ್ರೋಣಾಚಾರ್ಯರ ಮಗ ಅಶ್ವತ್ತಾಮ; ಅಂತಕ=ಯಮ; ನೆರೆ+ಊರವರು; ನೆರೆ=ಪಕ್ಕ/ಹತ್ತಿರ; ಊರವರು=ಊರಿನವರು;

ಕೆಲರು ಅಂತಕನ ನೆರೆ ಯೂರವರು=ಕೆಲವರು ಯಮನ ಊರಿಗೆ ಬಹುಹತ್ತಿರದಲ್ಲಿ ಇರುವವರು. ಅಂದರೆ ಮುಪ್ಪು ಕವಿದು ದೇಹ ಸವೆದು ಇನ್ನೇನು ಸಾಯಲಿರುವವರು. ವಯಸ್ಸಾಗಿರುವ ಬೀಶ್ಮ; ದ್ರೋಣ, ಕ್ರುಪ; ಅಧಮ=ಕೀಳು; ಕುಲ=ಜಾತಿ; ಸಂದು ಬಂದವರು=ಹುಟ್ಟಿದವರು;

ಕೆಲರು ಅಧಮ ಕುಲದಲಿ ಸಂದು ಬಂದವರು=ಕೆಲವರು ಕೀಳು ಜಾತಿಯಲ್ಲಿ ಹುಟ್ಟಿಬಂದಿರುವವರು; ಸೂತಪುತ್ರನೆಂದು ಕರೆಯಲಾಗುತ್ತಿರುವ ಕರ್ಣ;

ವೀರರು ಎಂಬವರು ಇವರು =ದುರ್‍ಯೋದನ ಸೇನೆಯಲ್ಲಿರುವ ವೀರರು ಎಂದರೆ ಇಂತಹವರು. ಕಾಳೆಗದಲ್ಲಿ ಹೋರಾಡಲು ತೋಳ್ಬಲವಾಗಲಿ ಇಲ್ಲವೇ ಕೆಚ್ಚಾಗಲಿ ಇಲ್ಲದ ಹಾರುವರು, ಮುದುಕರು ಮತ್ತು ಹೀನಜಾತಿಯಲ್ಲಿ ಹುಟ್ಟಿಬಂದವರೇ ದುರ್‍ಯೋದನನ ಸೇನೆಯ ಮಹಾವೀರರು; ಮೇಲೆ=ಇವರನ್ನು ಹೊರತುಪಡಿಸಿದರೆ; ನೆಣಗೊಬ್ಬು=ಅತಿಯಾದ ಸೊಕ್ಕು/ಹೆಮ್ಮೆ;

ಮೇಲೆ ಇನ್ನು ಆರ ಹೆಸರುಂಟು ಅವರೊಳು ಎಂದು ಕುಮಾರ ಹೆಂಗಳ ಇದಿರಿನಲಿ ನೆಣಗೊಬ್ಬಿನಲಿ ನುಡಿದನು=ಇವರನ್ನು ಹೊರತುಪಡಿಸಿ ನೋಡಿದರೆ ಇನ್ನು ಯಾರು ತಾನೆ ಹೆಸರಾಂತ ಕಲಿಗಳು ದುರ್‍ಯೋದನನ ಸೇನೆಯಲ್ಲಿದ್ದಾರೆ ಎಂದು ಉತ್ತರಕುಮಾರನು ಅತಿಯಾದ ಸೊಕ್ಕಿನಿಂದ ರಾಣಿವಾಸದ ಹೆಂಗಸರ ಮುಂದೆ ತನ್ನ ಪರಾಕ್ರಮವನ್ನು ಬಣ್ಣಿಸಿಕೊಂಡನು;

ಪೊಡವಿ=ಬೂಮಿ; ಪತಿ=ಒಡೆಯ; ಪೊಡವಿಪತಿ=ರಾಜ;

ಪೊಡವಿಪತಿಗಳು ಬಂದು ತುರುಗಳ ಹಿಡಿವರೇ=ರಾಜರಾದವರು ದಂಡೆತ್ತಿಬಂದು ದನಗಳನ್ನು ಹಿಡಿಯುತ್ತಾರೆಯೇ. ಅಂದರೆ ದುರ್‍ಯೋದನನು ತಾನು ರಾಜನೆಂಬುದನ್ನು ಮರೆತು, ತನ್ನ ಅಂತಸ್ತಿಗೆ ತಕ್ಕುದಲ್ಲದ ರೀತಿಯಲ್ಲಿ ಗೋವುಗಳನ್ನು ಕದಿಯಲು ಬಂದಿದ್ದಾನೆ; ಅಧಮ=ನೀಚ; ಬಡಮನ=ಹೇಡಿ/ಸಣ್ಣಬುದ್ದಿ; ಮನ್ನೆಯ=ಮಾಂಡಲಿಕ/ಚಿಕ್ಕ ಪ್ರಾಂತ್ಯಕ್ಕೆ ಒಡೆಯನಾದವನು; ಮೈಸಿರಿ=ಶಕ್ತಿ/ಕಸುವು;

ಲೋಕದಲಿ ಅಧಮರ ಬಡಮನದ ಮನ್ನೆಯರ ಮೈಸಿರಿ ಕೌರವನೊಳು ಆಯ್ತು=ಲೋಕದಲ್ಲಿ ಅತ್ಯಂತ ನೀಚರೂ ಹೇಡಿಗಳೂ ಆದ ಮಾಂಡಲಿಕರ ದನಗಳ್ಳರಾಗಿದ್ದಾರೆ. ಅವರಂತೆಯೇ ಈಗ ಗೋವುಗಳನ್ನು ಕದಿಯಲು ಬಂದಿದ್ದರಿಂದ ರಾಜನಾಗಿರುವ ದುರ್‍ಯೋದನನ ವ್ಯಕ್ತಿತ್ವದಲ್ಲಿ ಕೀಳುತನ ಉಂಟಾಗಿದೆ; ದುರ್ಯಶ&gಣ;ದುರಿಯಶ=ಕೆಟ್ಟ ಹೆಸರು/ಅಪಕೀರ್ತಿ;

ಕಡೆಗೆ ದುರಿಯಶವು ಉಳಿವುದು=ಗೋವುಗಳ್ಳನೆಂಬ ಕೆಟ್ಟಹೆಸರು ದುರ್‍ಯೋದನನಿಗೆ ಶಾಶ್ವತವಾಗಿ ಉಳಿದುಕೊಳ್ಳುತ್ತದೆ;

ಅಲ್ಲದೆ ಗೋಧನವನು ಬಿಡುವೆನೇ=ದುರ್‍ಯೋದನನು ಈಗ ಸೆರೆಹಿಡಿದಿರುವ ಗೋಸಂಪತ್ತನ್ನು ಅವನು ಕೊಂಡೊಯ್ಯಲೆಂದು ಬಿಟ್ಟುಬಿಡುವುದಿಲ್ಲ; ತೊಡಕು=ಸೆಣಸು/ಹೋರಾಡು; ಆವನು=ಯಾವನು; ಖಂಡೆಯ=ಕತ್ತಿ; ಜಡಿ=ಹೊರಸೆಳೆದು ಜಳಪಿಸುತ್ತ;

ಎನ್ನೊಳು ತೊಡಕಿ ಬದುಕುವನು ಆವನು ಎಂದು ಖಂಡೆಯವ ಜಡಿದು=ನನ್ನ ಎದುರಾಗಿ ಹೋರಾಡಿ ಬದುಕಿ ಉಳಿವವನು ಯಾರಿದ್ದಾನೆ ಎಂದು ಅಬ್ಬರಿಸುತ್ತ ಒರೆಯಿಂದ ಕತ್ತಿಯನ್ನು ಹೊರಸೆಳೆದು ಜಳಪಿಸುತ್ತ;

ಖಳ=ನೀಚ/ಕೇಡಿ; ಮುರಿ=ತುಂಡುಮಾಡು;

ಖಳನ ಮುರಿವೆನು=ಕೇಡಿಯಾದ ದುರ್‍ಯೋದನನ್ನು ತುಂಡರಿಸುತ್ತೇನೆ; ಠಾಣಾಂತರ=ಪಾಳೆಯ/ಬೀಡು;

ಹಸ್ತಿನಾಪುರದೊಳಗೆ ಠಾಣಾಂತರವನು ಇಕ್ಕುವೆ=ಹಸ್ತಿನಾಪುರವನ್ನು ವಶಪಡಿಸಿಕೊಂಡು ಅಲ್ಲಿ ನನ್ನ ಪಾಳೆಯವನ್ನು ಹೂಡುತ್ತೇನೆ; ಧೂಳಿಪಟ=ಹಾಳಾಗುವಿಕೆ/ನಾಶವಾಗುವಿಕೆ; ಧೂಳಿಪಟಮಾಡು=ಸಂಪೂರ್ಣವಾಗಿ ನಾಶಮಾಡುವುದು; ತೊಲಗು=ದೂಡು/ಹಿಮ್ಮೆಟ್ಟು;

ಕೌರವನ ಸೇನೆಯ ಧೂಳಿಪಟ ಮಾಡಿ ತೊಲಗಿಸುವೆ=ದುರ್‍ಯೋದನನ ಸೇನೆಯನ್ನು ಚಿದ್ರಚಿದ್ರಗೊಳಿಸಿ ಸಂಪೂರ್ಣವಾಗಿ ನಾಶಮಾಡಿ, ಅವನನ್ನು ಹಿಮ್ಮೆಟ್ಟಿಸುವೆ; ಗಳಹು=ಹರಟು/ಸುಮ್ಮನೆ ಮಾತನಾಡು/ಸುಳ್ಳಾಡು;

ಗೆಲವ ತಹೆನು ಎಂದು ಕೋಮಲೆಯರ ಇದಿರಲಿ ಉತ್ತರನು ಬಾಯ್ಗೆ ಬಂದುದು ಗಳಹುತಿದ್ದನು=ವಿರಾಟರಾಯನಿಗೆ ಗೆಲುವನ್ನು ತರುತ್ತೇನೆ ಎಂದು ಸುಂದರಿಯರ ಮುಂದೆ ಉತ್ತರಕುಮಾರನು ಬಾಯಿಗೆ ಬಂದಂತೆ ಹರಟುತ್ತಿದ್ದನು;

ಬೇಕು ಬೇಡ ಎಂಬವರ ನಾ ಕಾಣೆ=ಉತ್ತರಕುಮಾರನು ಆಡುತ್ತಿರುವ ಮಾತಿನಲ್ಲಿ “ಇದು ಸರಿ-ಇದು ತಪ್ಪು; ಇದನ್ನು ಆಡಬೇಕು-ಇದನ್ನು ಆಡಬಾರದು ” ಎಂದು ಎಚ್ಚರಿಸುವ ಯಾವೊಬ್ಬ ವ್ಯಕ್ತಿಯನ್ನು ಆ ಹೆಂಗಸರ ಓಲಗದಲ್ಲಿ ನಾನು ಕಾಣಲಿಲ್ಲ.-ಈ ನುಡಿಗಳನ್ನು ಮಹಾಬಾರತದ ಕತೆಯನ್ನು ಜನಮೇಜಯರಾಜನಿಗೆ ಹೇಳುತ್ತಿರುವ ವೈಶಂಪಾಯನ ಮುನಿಯು ಉತ್ತರಕುಮಾರನ ಪೊಳ್ಳುಮಾತುಗಳ ಬಗ್ಗೆ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾನೆ;

ಅರಿಯೆನೇ ಗಾಂಗೇಯನನು =ಆ ಮುದುಕ ಗಾಂಗೇಯನು ನಾನು ಕಾಣೆನೇ; ತಾನು ಅರಿಯದವನೇ ದ್ರೋಣ=ನನಗೆ ಗೊತ್ತಿಲ್ಲದವನೇ ಆ ದ್ರೋಣ; ಕುಲ=ಜಾತಿ; ಕೊರತೆ=ಕಡಿಮೆ; ಕುಲದಲಿ ಕೊರತೆ=ಜಾತಿಯಲ್ಲಿ ಕೀಳು;

ಕುಲದಲಿ ಕೊರತೆ ಎನಿಸುವ ಕರ್ಣನ್ ಎಂಬವನು ಎನಗೆ ಸಮಬಲನೆ=ಕೀಳುಜಾತಿಯವನಾದ ಆ ಕರ್ಣನು ನನಗೆ ಸಮಾನವಾದ ಬಲವುಳ್ಳವನೆ; ಬರಿದು=ಪೊಳ್ಳು/ಏನೂ ಇಲ್ಲದಿರುವುದು; ಬಯಲ್+ಆಡಂಬರ; ಬಯಲು=ಶೂನ್ಯವಾದುದು; ಆಡಂಬರ=ತೋರಿಕೆ; ಬಯಲಾಡಂಬರ=ಇದೊಂದು ನುಡಿಗಟ್ಟು. ಬೂಟಾಟಿಕೆಯ/ಸೋಗಿನ ನಡೆನುಡಿ; ಬರಿ=ಕೇವಲ/ಮಾತ್ರ; ತನ್ನ=ಹಗೆಯಾದ ದುರ್‍ಯೋದನನ; ಸೆರೆ=ಕಟ್ಟು/ಬಂದನ; ತಾರದೆ=ತರದೆ; ಸೆರೆಯ ತಾರದೆ=ಬಂದಿಸಿಕೊಂಡು ತರದೆ; ಮಾಣೆನು=ಬಿಡೆನು;

ರಿಯ ಬಯಲಾಡಂಬರದಿ ಬರಿ ತುರುವ ಹಿಡಿದೊಡೆ ತನ್ನ ಹೆಂಡಿರ ಸೆರೆಯ ತಾರದೆ ಮಾಣೆನು ಎಂದನು ನಾರಿಯರ ಮುಂದೆ=ದುರ್‍ಯೋದನನು ಪೊಳ್ಳು ಪರಾಕ್ರಮವನ್ನು ತೋರಿಸಿ ಕೇವಲ ನಮ್ಮ ಗೋವುಗಳನ್ನು ಹಿಡಿದರೆ, ನಾನು ನನ್ನ ನಿಜವಾದ ಪರಾಕ್ರಮವನ್ನು ತೋರಿಸಿ ಅವನ ಹೆಂಡರನ್ನೇ ಸೆರೆಹಿಡಿದು ತರದೆ ಬಿಡೆನು;

ಇನ್ನು ನುಡಿದು ಫಲವೇನು=ಇನ್ನು ಕೇವಲ ಮಾತನಾಡುತ್ತಿರುವುದರಿಂದ ಪ್ರಯೋಜನವೇನು; ಬವರ=ಕಾಳೆಗ/ಯುದ್ದ; ಸಾರಥಿ=ತೇರನ್ನು ನಡೆಸುವ ವ್ಯಕ್ತಿ; ಮಡಿ=ಮರಣ ಹೊಂದು/ಸಾಯು; ನಿನ್ನಿನ ಬವರದಲಿ ಸಾರಥಿ ಮಡಿದ=ನಿನ್ನೆಯ ದಿನ ದುರ್‍ಯೋದನನ ಸೇನೆಯು ಸುಶರ್‍ಮನ ಮುಂದಾಳುತನದಲ್ಲಿ ವಿರಾಟನಗರದ ಹೊರವಲಯದಲ್ಲಿ ದಕ್ಷಿಣ ದಿಕ್ಕಿನಲ್ಲಿದ್ದ ಗೋವುಗಳನ್ನು ಅಪಹರಿಸಿದಾಗ ನಡೆದ ಕಾಳೆಗದಲ್ಲಿ ನನ್ನ ಸಾರತಿಯು ಸಾವನ್ನಪ್ಪಿದ; ಶಿವ=ಈಶ್ವರ;</ಟi>

ಶಿವ ಶಿವ=ಸಂಕಟ ಇಲ್ಲವೇ ಆಪತ್ತಿನ ಸಮಯದಲ್ಲಿ ವ್ಯಕ್ತಿಯು ಅಸಹಾಯಕನಾದಾಗ ದೇವರಲ್ಲಿ ಮೊರೆಯಿಡುತ್ತ ಹೇಳುವ ಪದಗಳು; ಉಡುಹನ್+ಆದೆನು; ಉಡುಹ=ಅಂಗಹೀನ/ಶಕ್ತಿಗುಂದಿದವನು;

ಶಿವ ಶಿವಾ ತಾ ನು ಉಡುಹನಾದೆನು=ರಣರಂಗದಲ್ಲಿ ನನ್ನ ತೇರನ್ನು ಮುನ್ನಡೆಸುವ ಸಾರತಿಯಿಲ್ಲದೆ ನನ್ನ ಕಯ್ ಮುರಿದಂತಾಗಿದೆ; ಇಂದು=ಈ ದಿನ; ಎನ್ನ=ನನ್ನ; ಕೈಮನ=ದೇಹ ಮತ್ತು ಮನಸ್ಸು; ತೋಳ್ಬಲ ಮತ್ತು ಪರಾಕ್ರಮ; ಗಡಣಿಸು=ಜತೆಗೂಡು; ಪಡೆದನ್+ಆದಡೆ; ಪಡೆ=ಹೊಂದು/ದೊರಕಿಸು; ಆದಡೆ=ಆದರೆ;

ಇಂದು ಎನ್ನ ಕೈಮನಕೆ ಗಡಣಿಸುವ ಸಾರಥಿಯನು ಒಬ್ಬನ ಪಡೆದೆನಾದಡೆ=ಈ ದಿನ ನನ್ನ ತೋಳ್ಬಲ ಮತ್ತು ಪರಾಕ್ರಮಕ್ಕೆ ಹೊಂದಿಕೊಳ್ಳುವಂತಹ ಒಬ್ಬ ಸಾರತಿಯನ್ನು ನಾನು ಪಡೆಯುವಂತಾದರೆ; ಹಬ್ಬಮಾಡು=ಇದೊಂದು ನುಡಿಗಟ್ಟು. ತಕ್ಕ ದಂಡನೆಯನ್ನು ಮಾಡುವುದು;

ಕೌರವೇಂದ್ರನÀ ಪಡೆಗೆ ಹಬ್ಬವ ಮಾಡುವೆನು=ದುರ್‍ಯೋದನನ ಸೇನೆಗೆ ತಕ್ಕ ದಂಡನೆಯನ್ನು ಮಾಡುತ್ತೇನೆ; ಕೈಗುಣ=ವ್ಯಕ್ತಿಯು ಹೊಂದಿರುವ ಅಸಾದಾರಣವಾದ ಕಸುವು;

ಕೈಗುಣವ ತೋರುವೆನು=ನಾನು ಎಂತಹ ಬಲಶಾಲಿ ಮತ್ತು ವೀರನೆಂಬುದನ್ನು ರಣರಂಗದಲ್ಲಿ ಹಗೆಗಳಿಗೆ ತೋರಿಸುತ್ತೇನೆ; ಉಬ್ಬಸ=ಮೇಲುಸಿರು ಬಿಡುವುದು; ಮಾರಿಗೆ ಉಬ್ಬಸವಾಗುವುದು=ಇದೊಂದು ನುಡಿಗಟ್ಟು. ಸಾವಿನ ದೇವತೆಯಾದ ಮಾರಿಯೇ ತನ್ನ ಮುಂದೆ ನಡೆಯುತ್ತಿರುವ ಹಗೆಗಳ ಸಾವಿನ ಸರಣಿಯನ್ನು ಕಂಡು ಅಚ್ಚರಿ ಮತ್ತು ಗಾಸಿಗೆ ಒಳಗಾಗುವುದು;

ಸಾರಥಿಯ ಶಿವ ಕೊಟ್ಟನಾದಡೆ ಮಾರಿಗೆ ಉಬ್ಬಸವಾಗದೆ=ಶಿವನು ಒಬ್ಬ ಸಾರತಿಯನ್ನು ನನಗೆ ಅನುಗ್ರಹಿಸಿದರೆ, ಇಂದು ರಣರಂಗದಲ್ಲಿ ನನ್ನಿಂದ ಹತರಾಗುವ ಹಗೆಗಳ ಹೆಣಗಳನ್ನು ನೋಡಿ ಮಾರಿಯೇ ಏದುಸಿರನ್ನು ಬಿಡದೆ ಇರುತ್ತಾಳೆಯೇ;

ಅಂತಕನ ಊರು ತುಂಬದೆ=ಯಮನ ಊರು ಸತ್ತ ವ್ಯಕ್ತಿಗಳ ಜೀವದಿಂದ ತುಂಬಿಹೋಗದೆ ಇರುವುದೆ;

ಪಿಶಾಚ=ದೆವ್ವ; ರಣಪಿಶಾಚ=ರಣರಂಗದಲ್ಲಿ ಸತ್ತುಬಿದ್ದಿರುವ ಹೆಣಗಳ ರಕ್ತವನ್ನು ಹೀರಿ, ಮಾಂಸವನ್ನು ತಿನ್ನುವ ಪಿಶಾಚಿಗಳು; ದೋರೆ+ಕರುಳು;ದೋರೆ=ಕಾಯಿ ಹಣ್ಣಾಗುವ ಮುನ್ನ ತಳೆಯುವ ಕೆಂಪನೆಯ ಬಣ್ಣ; ದೋರೆಗರುಳು=ದೋರೆಗಾಯಿಯಂತೆ ಕೆಂಪಗಿರುವ ಕರುಳು; ದೊಳ್ಳು=ಬೊಜ್ಜು; ನೂಕು=ಉಂಟಾಗು;

ರಣಪಿಶಾಚರಿಗೆ ದೋರೆ ಗ ರುಳಲಿ ದೊಳ್ಳು ನೂಕದೆ=ಹೆಣಗಳ ಹೊಟ್ಟೆಯಿಂದ ರಕ್ತಸಿಕ್ತವಾದ ಕರುಳನ್ನು ಬಗೆಬಗೆದು ತೆಗೆದು ತಿನ್ನುವ ರಣಪಿಶಾಚಿಗಳಿಗೆ ಬೊಜ್ಜು ಉಂಟಾಗದಿಲ್ಲವೇ; ದಾನವಿ=ರಕ್ಕಸಿ; ಒಡಲು=ಹೊಟ್ಟೆ; ಏರುಹತ್ತು=ಉಬ್ಬಿಕೊಳ್ಳುವುದು;

ದಾನವಿಯರ ಒಡಲು ಏರು ಹತ್ತದೆ=ಹೆಣಗಳ ಮೂಳೆ ಮಾಂಸವನ್ನು ತಿಂದುತಿಂದು ರಕ್ಕಸಿಯರ ಹೊಟ್ಟೆಯು ಉಬ್ಬರಿಸಿಕೊಳ್ಳುವುದಿಲ್ಲವೇ; ಭೂರಿ=ಹೆಚ್ಚು; ಬೇತಾಳ=ಪಿಶಾಚಿ/ದೆವ್ವ; ಹಬ್ಬ=ರುಚಿಕರವಾದ ಊಟ ದೊರಕಿ ಆನಂದವುಂಟಾಗುವುದು;

ಭೂರಿಬೇತಾಳರಿಗೆ ಹಬ್ಬವಾಗದೆ=ರಣರಂಗದಲ್ಲಿ ಹೆಚ್ಚಿನ ಸಂಕೆಯಲ್ಲಿ ಸೇರಿರುವ ದೆವ್ವಗಳಿಗೆ ಹೆಣಗಳ ರಕ್ತಮಾಂಸದ ಊಟದಿಂದ ಆನಂದವುಂಟಾಗುವುದಿಲ್ಲವೇ; ಬರಿದೆ=ಏನೂ ಇಲ್ಲದೆ; ಹೋಹುದೆ=ಹೋಗುವುದೆ;

ರಣ ಬರಿದೆ ಹೋಹುದೆ ಎಂದ=ಕಾಳೆಗವು ಸುಮ್ಮನೆ ನಡೆಯುವುದೇ ಎಂದನು. ಅಂದರೆ ನನ್ನ ಪರಾಕ್ರಮದ ಹೊಡೆತ ಸಿಲುಕಿ ದುರ್‍ಯೋದನ ಸೇನೆಯಲ್ಲಿ ಅಪಾರಪ್ರಮಾಣದಲ್ಲಿ ಸಾವುನೋವು ಉಂಟಾಗುತ್ತದೆ; ಕಲಿಪಾರ್ಥ=ಶೂರನಾದ ಅರ್‍ಜುನ; ಈತನ=ಉತ್ತರಕುಮಾರನ; ಬಾಲಭಾಷೆ=ಮಕ್ಕಳ ಮಾತು/ತಿಳುವಳಿಕೆಯಿಲ್ಲದ ಮಾತು/ವಿವೇಚನೆಯಿಲ್ಲದ ನುಡಿ;

ಕಲಿಪಾರ್ಥನು ಈತನ ಬಾಲಭಾಷೆಗಳೆಲ್ಲವನು ಕೇಳಿದನು=ರಾಣಿವಾಸದ ಮತ್ತೊಂದು ಕೊಟಡಿಯಲ್ಲಿದ್ದ ಬೃಹಂದಲೆಯ ಮಾರುವೇಶದಲ್ಲಿರುವ ಅರ್‍ಜುನನು ಉತ್ತರಕು ಮಾರನ ಪೊಳ್ಳುಮಾತುಗಳನ್ನು ಕೇಳಿಸಿಕೊಂಡನು; ಪಾಂಚಾಲೆ=ಪಾಂಚಾಲ ರಾಜ್ಯದ ದ್ರುಪದನ ಮಗಳಾದ ದ್ರೌಪದಿ/ಸೈರಂದ್ರಿ; ಎಕ್ಕಟಿ=ಏಕಾಂತ;

ಪಾಂಚಾಲೆಗೆ ಎಕ್ಕಟಿ ನುಡಿ ದ=ಸೈರಂದ್ರಿಯನ್ನು ಏಕಾಂತಕ್ಕೆ ಕರೆದು ಹೇಳಿದನು;

ಮತ=ಉದ್ದೇಶ/ಗುರಿ;

ನಾವು ಇನ್ನು ಇಹುದು ಮತವಲ್ಲ=ನಾವು ಇನ್ನು ಮುಂದೆ ಅಜ್ನಾತವಾಸದಲ್ಲಿರಬೇಕಾದ ಅಗತ್ಯವಿಲ್ಲ. ಇಂದಿನಿಂದ ನಮ್ಮ ಉದ್ದೇಶ ಕಳೆದುಹೋಗಿರುವ ರಾಜ್ಯವನ್ನು ಮತ್ತೆ ಪಡೆಯುವುದು; ಸವೆ=ಮುಗಿ/ತೀರು; ಕಾಲ ಸವೆದುದು=ಅಜ್ನಾತವಾಸದ ಒಂದು ವರುಶದ ಅವದಿಯು ಮುಗಿದಿದೆ; ನಿಲುಕು=ದೊರಕಿಸಿಕೊಳ್ಳು/ಪಡೆದುಕೊಳ್ಳು;

ನಮ್ಮ ರಾಜ್ಯದ ಮೇಲೆ ನಿಲುಕಲು ಬೇಕು=ನಮ್ಮ ಪಾಲಿನ ರಾಜ್ಯವನ್ನು ಮತ್ತೆ ಪಡೆದುಕೊಳ್ಳಬೇಕು; ಆಳು=ಸೇನೆಯ ಪಡೆ; ನವಗೆ+ಓಸುಗವೆ; ನವಗೆ=ನಮಗೆ; ಓಸುಗ=ಸಲುವಾಗಿ;

ಕೌರವರ ಆಳು ನವಗೋಸುಗವೆ ಬಂದುದು=ಅಜ್ನಾತವಾಸದಲ್ಲಿರುವ ನಮ್ಮ ಗುಟ್ಟನ್ನು ರಟ್ಟುಮಾಡುವುದಕ್ಕಾಗಿಯೇ ಗೋವುಗಳನ್ನು ಸೆರೆಹಿಡಿಯುವ ನೆಪದಲ್ಲಿ ವಿರಾಟನಗರದ ಮೇಲೆ ದುರ್‍ಯೋದನನ ಸೇನೆಯು ದಂಡೆತ್ತಿ ಬಂದಿದೆ; ಕಾಂತೆ=ಹೆಂಡತಿ; ನರ=ಅರ್‍ಜುನ; ಕಾಂತೆ ಕೇಳು, ನರನ ಸಾರಥಿಯೆಂದು ನೀನು ಉತ್ತರೆಗೆ ಸೂಚಿಸಿ ತನ್ನನು ಈಗಳೆ ಕರೆಸು ಎನಲು=ಕಾಂತೆ ಕೇಳು… ಬೃಹನ್ನಳೆಯಾಗಿರುವ ನನ್ನನ್ನು “ಅರ್‍ಜುನನಿಗೆ ಸಾರತಿಯಾಗಿದ್ದನು” ಎಂದು ನೀನು ಉತ್ತರೆಗೆ ಹೇಳಿ, ತನ್ನನ್ನು ಈಗಳೆ ಉತ್ತರಕುಮಾರನ ಬಳಿಗೆ ಕರೆಸುವುದಕ್ಕೆ ಏರ್ಪಾಡನ್ನು ಮಾಡು ಎಂದು ಹೇಳಲು; ಕೈಕೊಂಡು=ಕೆಲಸವನ್ನು ಮಾಡಲು ಒಪ್ಪಿಕೊಂಡು; ಒಲವು=ಪ್ರೀತಿ;

ಕೈಕೊಂಡು ದುರುಪದಿ ಒಲವಿನಲಿ ಬಂದಳು=ದ್ರೌಪದಿಯು ಅರ್‍ಜುನನು ಹೇಳಿದ ಕೆಲಸವನ್ನು ಮಾಡಲು ಪ್ರೀತಿಯಿಂದ ಒಪ್ಪಿಕೊಂಡು, ರಾಣಿವಾಸದ ಮೇಳದಲ್ಲಿದ್ದ ಉತ್ತರೆಯ ಬಳಿಗೆ ಬಂದಳು;

ವರ=ಉತ್ತಮನಾದ; ಇವ=ಇವನು; ಖಾಂಡವ=ದೇವೇಂದ್ರನ ಒಡೆತನಕ್ಕೆ ಸೇರಿದ ಒಂದು ಕಾಡಿನ ಪ್ರದೇಶ. ಅಗ್ನಿದೇವನು ತನ್ನ ಹಸಿವನ್ನು ನೀಗಿಸಿಕೊಳ್ಳಲು ಈ ಕಾಡಿನ ಮರಗಿಡಬಳ್ಳಿ ಮತ್ತು ಪ್ರಾಣಿಪಕ್ಶಿಗಳೆಲ್ಲವನ್ನು ಸುಡುವಾಗ ಕ್ರಿಶ್ಣನ ಸಾರತ್ಯದಲ್ಲಿ ಅರ್‍ಜುನನು ಅಗ್ನಿದೇವನಿಗೆ ನೆರವಾಗಿದ್ದನು ಎಂಬ ಕಾವ್ಯಪ್ರಸಂಗವಿದೆ; ಅಗ್ನಿ=ಬೆಂಕಿಯನ್ನು ಒಂದು ದೇವತೆಯನ್ನಾಗಿ ಜನಮನದಲ್ಲಿ ಕಲ್ಪಿಸಿಕೊಳ್ಳಲಾಗಿದೆ; ಹೊರೆ=ಕಾಪಾಡು/ಸಲಹು;

ತರುಣಿ ಕೇಳು. ವರ ಬೃಹನ್ನಳೆ ಅರ್ಜುನನ ಸಾರಥಿ. ಇವ ತಾನು ಖಾಂಡವ ಅಗ್ನಿಯ ಹೊರೆದನು=ಉತ್ತರೆಯೇ ಕೇಳು… ರಾಣಿವಾಸದಲ್ಲಿರುವ ಬೃಹನ್ನಳೆಯು ಇಲ್ಲಿಗೆ ಬರುವ ಮೊದಲು ಅರ್‍ಜುನನಿಗೆ ಸಾರತಿಯಾಗಿದ್ದಳು. ಅರ್‍ಜುನನು ಅಗ್ನಿದೇವನಿಗೆ ನೆರವನ್ನು ನೀಡುವಾಗ ತೇರನ್ನು ಮುನ್ನಡೆಸಿದ್ದಳು;

ಉತ್ತರೆ ಕೇಳಿ ಹರುಷಿತೆಯಾದಳು=ಈ ಸುದ್ದಿಯನ್ನು ಕೇಳಿ ಉತ್ತರೆಯು ಹಿಗ್ಗಿದಳು; ಲೋಲ=ಹೊಳೆ/ಪ್ರಕಾಶಿಸು; ಲೋಚನ=ಕಣ್ಣು; ಲೋಲಲೋಚನೆ=ಹೊಳೆಯುವಂತಹ ಕಣ್ಣುಗಳುಳ್ಳವಳು/ಸುಂದರಿ; ಅಂಘ್ರಿ=ಪಾದ; ಎರಗಿ=ನಮಸ್ಕರಿಸಿ; ಹದನ=ಸುದ್ದಿ/ವರ್ತಮಾನ;

ಲೋಲಲೋಚನೆಯು ಓ ಲಗಕೆ ಬಂದು ಅಣ್ಣನ ಅಂಘ್ರಿಗೆ ಎರಗಿ ಕೈಮುಗಿದು ಈ ಹದನ ಎಂದಳು=ಉತ್ತರೆಯು ರಾಣಿವಾಸದಲ್ಲಿ ನಡೆಯುತ್ತಿದ್ದ ಉತ್ತರಕುಮಾರನ ಓಲಗಕ್ಕೆ ಬಂದು, ಅಣ್ಣನ ಪಾದಗಳಿಗೆ ನಮಸ್ಕರಿಸಿ, ಸಾರತಿಯು ದೊರೆಯುವ ಸುದ್ದಿಯನ್ನು ತಿಳಿಸಿದಳು; ನೆಲೆ=ಜಾಗ/ನಿವಾಸ;

ಸಾರಥಿಯ ನೆಲೆಯನು ಕೇಳಿದೆನು=ಸಾರತಿಯು ಇರುವ ಜಾಗದ ಸಂಗತಿಯನ್ನು ಸೈರಂದ್ರಿಯಿಂದ ಕೇಳಿದೆನು; ನೃಪಾಲ=ರಾಜ;

ಅಣ್ಣದೇವ ಕಾಳಗಕೆ ನಡೆ . ನೃಪಾಲಕರ ಜಯಿಸು ಎಂದಡೆ=ಅಣ್ಣದೇವನೇ… ಕಾಳಗಕ್ಕೆ ತೆರಳು. ಹಗೆಗಳಾದ ರಾಜರನ್ನು ಜಯಿಸು ಎಂದು ಹೇಳಲು; ಬೆಸಗೊಳ್=ವಿಚಾರಿಸು/ಕೇಳು;

ಉತ್ತರ ನಗುತ ಬೆಸಗೊಂಡ=ಉತ್ತರಕುಮಾರನು ನಗುತ್ತ ಸಾರತಿಯ ಬಗ್ಗೆ ವಿಚಾರಿಸತೊಡಗಿದನು;

ತಂಗಿ ಹೇಳೌ ತಾಯೆ. ನಿನಗೆ ಈ ಸಂಗತಿಯನು ಆರು ಎಂದರು=ತಂಗಿ… ನಿನಗೆ ಈ ಸಾರತಿಯು ದೊರೆಯುವ ಸಂಗತಿಯನ್ನು ಯಾರು ಹೇಳಿದರು; ಸಾರಥಿತನ=ತೇರನ್ನು ಮುನ್ನಡೆಸುವುದು; ಆವ=ಯಾವ; ಆವ ಅವನು=ನೀನು ಹೇಳುತ್ತಿರುವ ವ್ಯಕ್ತಿಯು; ಕೈಮೆ=ನಿಪುಣತೆ/ಪರಿಣತಿ; ಅಂಗವಣೆ+ಉಳ್ಳವನೆ; ಅಂಗವಣೆ=ಸಾಹಸ/ಪರಾಕ್ರಮ; ಉಳ್ಳುವನು=ಹೊಂದಿರುವವನು;

ಆವ ಅವನು ಸಾರಥಿತನದ ಕೈಮೆಯಲಿ ಅಂಗವಣೆಯುಳ್ಳವನೆ=ನೀನು ಹೇಳುತ್ತಿರುವ ವ್ಯಕ್ತಿಯು ತೇರನ್ನು ಮುನ್ನಡೆಸುವ ನಿಪುಣತೆಯ ಜತೆಜತೆಗೆ ಸಾಹಸಿಯು ಆಗಿದ್ದಾನೆಯೇ. ಏಕೆಂದರೆ ರಣರಂಗದಲ್ಲಿ ತೇರನ್ನು ನಡೆಸುವವನು ಕೆಚ್ಚೆದೆಯುಳ್ಳವನಾಗಿರಬೇಕು; ಮಂಗಳ=ಕಲ್ಯಾಣ/ಶ್ರೇಯಸ್ಸು/ಒಳಿತನ್ನುಂಟುಮಾಡುವುದು; ಅಭಂಗನ್+ಅಹೆ; ಅಭಂಗನ್=ಸೋಲಿಲ್ಲದವನು; ಅಹೆ=ಆಗುವೆನು;

ಮಂಗಳವಲೇ… ಬಳಿಕ ನಿನ್ನಾಣೆ ರಣದೊಳು ಅಭಂಗನಹೆ=ಸಾರತಿಯು ದೊರೆಯುವಂತಾದುದರಿಂದ ಒಳ್ಳೆಯದಾಯಿತು. ಈ ಬಳಿಕ ನಿನ್ನಾಣೆಯಾಗಿಯೂ ಹೇಳುತ್ತೇನೆ ಕೇಳು… ರಣರಂಗದಲ್ಲಿ ನಾನು ಗೆಲುವನ್ನು ಪಡೆಯುತ್ತೇನೆ; ತುಂಗ=ಉನ್ನತವಾದ/ಅತಿಶಯವಾದ; ವಿಕ್ರಮತನ=ಪರಾಕ್ರಮ/ವೀರತನ;

ತನ್ನಯ ತುಂಗ ವಿಕ್ರಮತನವನು ಉಳುಹಿದೆ=ಸಾರತಿಯು ಹುಡುಕಿಕೊಟ್ಟು ನನ್ನ ಪರಾಕ್ರಮವನ್ನು ಉಳಿಸಿದೆ;

ಹೇಳು ಹೇಳು=ಈಗ ಸಾರತಿಯು ಎಲ್ಲಿದ್ದಾನೆ ಎಂಬುದನ್ನು ಬೇಗ ಹೇಳು;

ಈ ಹದನ ನಾವು ಅರಿಯೆವು=ಸಾರತಿಯು ಯಾರು ಮತ್ತು ಎಲ್ಲಿದ್ದಾನೆ ಎಂಬ ಸಂಗತಿಯು ನನಗೆ ತಿಳಿಯದು;

ಈ ಸೈರಂಧ್ರಿ ಎಂದಳು=ಸಾರತಿಯ ಸುದ್ದಿಯನ್ನು ನನ್ನೊಡನೆ ಸೈರಂದ್ರಿಯು ಹೇಳಿದಳು;

ಸುರಪ=ದೇವೇಂದ್ರ; ನಂದನ=ತೋಟ/ಉದ್ಯಾನ; ಸುಡು=ಬೆಂಕಿಯಲ್ಲಿ ಬೇಯಿಸು; ಗಡ=ಕಂಡೆಯಾ; ಅಚ್ಚರಿ, ಆನಂದ ಮುಂತಾದ ಮನದ ಒಳಮಿಡಿತಗಳನ್ನು ಮಾತಿನಲ್ಲಿ ಹೇಳುವಾಗ ಬಳಸುವ ಪದ;

ಸುರಪನ ನಂದನವ ಸುಡುವಂದು ಪಾರ್ಥನ ಮುಂದೆ ಸಾರಥಿಯಾದ ಗಡ=ದೇವೇಂದ್ರನ ಒಡೆತನದ ತೋಟವನ್ನು ಅರ್‍ಜುನನು ಬೆಂಕಿಗೆ ಆಹುತಿಯನ್ನಾಗಿ ನೀಡುವಾಗ, ಅರ್‍ಜುನನ ತೇರನ್ನು ಈತನೆ ಸಾರತಿಯಾಗಿ ನಡೆಸಿದನಂತೆ… ಕಂಡೆಯಾ;

ಹಿಂದುಗಳೆ=ನಿರಾಕರಿಸು;

ಹಿಂದುಗಳೆಯದೆ ನಮ್ಮ ಬೃಹನ್ನಳೆಯನು ಕರೆಸು ಎನೆ=ಈ ನನ್ನ ಸಲಹೆಯನ್ನು ನಿರಾಕರಿಸಿದೆ ಬೃಹನ್ನಳೆಯನ್ನು ಕರೆಸಿ, ಸಾರತಿಯ ಬಗ್ಗೆ ವಿಚಾರಿಸು ಎಂದು ಉತ್ತರೆಯು ಹೇಳಲು;

ಲೇಸು+ಆಯ್ತು; ಲೇಸು=ಒಳ್ಳೆಯದು; ಪರಮ=ಹೆಚ್ಚಾದ; ಇಂತು+ಎಂದ;

ನಗುತ “ಲೇಸಾಯ್ತು ಎಂದು ಪರಮ ಉತ್ಸಾಹದಲಿ ಸೈರಂಧ್ರಿಗೆ ಇಂತೆಂದ=ಉತ್ತರೆಯ ಮಾತುಗಳಿಗೆ ನಗುತ್ತ “ನೀನು ಸಾರತಿಯ ಸುದ್ದಿಯನ್ನು ಹೇಳಿದ್ದು ನನಗೆ ಒಳ್ಳೆಯದೇ ಆಯಿತು” ಎಂದು ಹೆಚ್ಚಿನ ಸಡಗರದಿಂದ ಉತ್ತರಕುಮಾರನು ಸೈರಂದ್ರಿಯನ್ನು ಕುರಿತು ಈ ರೀತಿ ಹೇಳಿದ;

ಸಾರಥಿಯ ಕೊಟ್ಟು ಎನ್ನನು ಉಳುಹಿದೆ =ಸಾರತಿಯನ್ನು ಒದಗಿಸಿ ನನ್ನನ್ನು ಉಳಿಸಿದೆ; ವಾರಿಜ+ಆನನೆ; ವಾರಿಜ=ತಾವರೆಯ ಹೂವು; ಆನನ=ಮೊಗ; ವಾರಿಜಾನನೆ=ತಾವರೆಯ ಮೊಗದವಳು/ಸುಂದರಿ;

ವಾರಿಜಾನನೆ ಲೇಸು ಮಾಡಿದೆ =ಸೈರಂದ್ರಿಯೇ ಒಳಿತನ್ನು ಮಾಡಿದೆ; ತನಿ+ಕರುಳು; ತನಿ=ಚೆನ್ನಾಗಿ ಬೆಳೆದ; ತನಿಗರುಳು=ಚೆನ್ನಾಗಿ ಬೆಳೆದ ಕರುಳು; ಬಗಿ=ಸೀಳು;

ಕೌರವನ ತನಿಗರುಳ ಬಗಿವೆನು =ದುರ್‍ಯೋದನನ ಹೊಟ್ಟೆಯನ್ನು ಸೀಳಿ ತನಿಗರುಳನ್ನು ಹೊರತೆಗೆಯುತ್ತೇನೆ;

ತಡವ ಮಾಡಿಸದೆ ನಾರಿ ನೀನೇ ಹೋಗಿ ಪಾರ್ಥನ ಸಾರಥಿಯ ತಾ =ಸೈರಂದ್ರಿಯೇ, ಇನ್ನು ತಡಮಾಡದೇ ನೀನೇ ಹೋಗೆ ಅರ್‍ಜುನನ ಸಾರತಿಯನ್ನು ಕರೆದುಕೊಂಡು ಬಾ; ಬಗೆ=ಗಣಿಸು/ಲೆಕ್ಕಿಸು;

ನಮ್ಮನು ವೀರ ಬಗೆಯನು =ನಮ್ಮ ಮಾತನ್ನು ಬೃಹನ್ನಳೆಯು ಲೆಕ್ಕಿಸುವುದಿಲ್ಲ. ನಾನು ಕರೆದರೆ ಬರುವುದಿಲ್ಲ;

ನಿಮ್ಮ ತಂಗಿಯ ಕಳುಹಿ ಕರೆಸುವುದು =ನಿಮ್ಮ ತಂಗಿಯನ್ನು ಕಳುಹಿಸಿ ಕರೆಸುವುದು; ಸೂತ=ಸಾರತಿ; ತಾಯಿ=ಹೆಣ್ಣುಮಕ್ಕಳನ್ನು ಒಲವು ನಲಿವಿನಿಂದ ಕರೆಯುವಾಗ ಬಳಸುವ ಪದ;

ತಾಯೆ, ನೀನೇ ಹೋಗಿ ಸೂತನ ತಾ ಎನಲು=ತಾಯೆ, ನೀನೇ ಹೋಗಿ ಸಾರತಿಯನ್ನು ಕರೆದುಕೊಂಡು ಬಾ ಎಂದು ಉತ್ತರಕುಮಾರನು ತಂಗಿ ಉತ್ತರೆಗೆ ಹೇಳಲು; ಕೈಕೊಂಡು=ಆ ಕೆಲಸವನ್ನು ಮಾಡಲು ಒಪ್ಪಿಕೊಂಡು; ಕಮಲ+ದಳ+ಆಯತ+ಅಕ್ಷಿ; ದಳ=ಎಸಳು; ಆಯತ=ನೀಳವಾದ/ವಿಶಾಲವಾದ; ಅಕ್ಷಿ=ಕಣ್ಣು; ಕಮಲದಳಾಯತಾಕ್ಷಿ=ಕಮಳದ ದಳದಂತೆ ವಿಶಾಲವಾದ ಕಣ್ಣುಳ್ಳವಳು/ಸುಂದರಿ; ಮನೋಭವ=ಮನ್ಮತ; ಮರಿಯಾನೆ=ಚಿಕ್ಕ ಆನೆ; ಅಂದ=ರೀತಿ; ಮನೋಭವನ ಮರಿಯಾನೆ=ತಾರುಣ್ಯದ ಚೆಲುವಿನಿಂದ ಕಂಗೊಳಿಸುತ್ತಿರುವ ಉತ್ತರೆಯನ್ನು ಮನ್ಮತನ ಮರಿಯಾನೆ ಎಂದು ಬಣ್ಣಿಸಲಾಗಿದೆ; ರಾಯಕುವರಿ=ವಿರಾಟರಾಜನ ಮಗಳು; ನವಾಯಿ=ವೇಗ; ಗತಿ=ನಡಗೆ; ಗರುವಾಯಿ=ಬೆಡಗು/ಸೊಗಸು/ಟೀವಿ;

ಕೈಕೊಂಡು ಕಮಲದಳಾಯತಾಕ್ಷಿ ಮನೋಭವನ ಮರಿಯಾನೆಯ ಅಂದದಲಿ ರಾಯಕುವರಿ ನವಾಯಿ ಗತಿ ಗರುವಾಯಿಯಲಿ ಬರೆ =ಮನ್ಮತನ ಮರಿಯಾನೆಯೋ ಎನ್ನುವಂತೆ ತಾರುಣ್ಯದ ಚೆಲುವಿನಿಂದ ಕಂಗೊಳಿಸುತ್ತಿರುವ ಉತ್ತರೆಯು ಅಣ್ಣನ ಮಾತಿನಂತೆ ಸಾರತಿಯನ್ನು ಕರೆತರುವುದಕ್ಕಾಗಿ ವೇಗವಾಗಿ ಒಯ್ಯಾರದಿಂದ ಬೃಹನ್ನಳೆಯ ಬಳಿಗೆ ಬಂದಳು;

ಪಾರ್ಥನು ಬರವ ಕಂಡನು=ಉತ್ತರೆಯ ಬರುವಿಕೆಯನ್ನು ಅರ್‍ಜುನನು ನೋಡಿದನು;

ಕಠೋರ=ಬಿರುಸಾದ; ಕಠೋರ ಗತಿ=ವೇಗವಾದ ನಡಗೆ;

ಏನು ಉತ್ತರ ಕುಮಾರಿ, ಕಠೋರ ಗತಿಯಲಿ ಬರವು ಭಾರಿಯ ಕಾರಿಯವ ಸೂಚಿಸುವುದು ಎನಲು=ಏನು ಉತ್ತರಕುಮಾರಿ, ಬಿರುಸಾದ ಹೆಜ್ಜೆಗಳನ್ನಿಡುತ್ತ ವೇಗವಾಗಿ ಬರುತ್ತಿರುವ ನಿನ್ನ ನಡಗೆಯೇ ದೊಡ್ಡ ಕಾರ್ಯದ ಕಾರಣಕ್ಕಾಗಿ ಬರುತ್ತಿರುವುದನ್ನು ಸೂಚಿಸುತ್ತಿದೆ ಎಂದು ಬೃಹನ್ನಳೆಯು ನುಡಿಯಲು; ಹುರುಳು=ಆಶಯ/ಸತ್ತ್ವ; ಸಲಿಸು=ಈಡೇರಿಸು/ನೆರವೇರಿಸು; ಅರುಹು=ಹೇಳು/ತಿಳಿಸು;

ನಗುತ ಬರವು ಬೇರೆ ಇಲ್ಲ =ಉತ್ತರೆಯು ನಗುತ್ತ ನನ್ನ ಬರುವಿಕೆಗೆ ಮತ್ತೇನು ಕಾರಣವಿಲ್ಲ;

ಎನ್ನ ಮಾತನು ಹುರುಳು ಕೆಡಿಸದೆ ಸಲಿಸುವೊಡೆ ನಿಮಗೆ ಅರುಹಿದಪೆನು =ನನ್ನ ಮಾತಿನ ಸಂಗತಿಯನ್ನು ನಿರಾಕರಿಸಿದೆ ಈಡೇರಿಸುತ್ತೇನೆ ಎಂದು ಹೇಳಿದರೆ ಮಾತ್ರ ನಿಮಗೆ ನಾನು ಬಂದ ಕೆಲಸವನ್ನು ಹೇಳುತ್ತೇನೆ;

ಮೀರಬಲ್ಲನೆ ಮಗಳೆ ಹೇಳು =ಅದೇನೆಂದು ಹೇಳು ಮಗಳೇ… ನಿನ್ನ ಮಾತನ್ನು ತೆಗೆದುಹಾಕುತ್ತೇನೆಯೇ;

ಹಸ್ತಿನಾಪುರದ ಅರಸುಗಳು ಪುರಕೆ ಹಾಯ್ದರು =ಹಸ್ತಿನಾಪುರದ ರಾಜರು ವಿರಾಟನಗರದ ಮೇಲೆ ದಂಡೆತ್ತಿ ಬಂದರು; ಹೊಲ=ನಗರದ ಹೊರವಲಯ; ಶತ=ನೂರು;

ಹೊಲನೊಳಗೆ ಶತ ಸಾವಿರದ ತುರುಗಳ ಹಿಡಿದರು =ನಗರದ ಹೊರವಲಯದಲ್ಲಿದ್ದ ನಮ್ಮ ನೂರುಸಾವಿರ ದನಗಳನ್ನು ಸೆರೆಹಿಡಿದರು; ಅಳಿ=ನಾಶವಾಗು;

ಗೋಪ ಪಡೆ ಅಳಿದುದು =ಗೋಪಾಲಕರ ಪಡೆಯು ನಾಶವಾಯಿತು; ಕಾದಿ=ಯುದ್ದವನ್ನು ಮಾಡಿ; ಮರಳಿಚು=ಹಿಂತಿರುಗಿಸು;

ಕಾದಿ ಮರಳಿಚುವೊಡೆ =ಹಸ್ತಿನಾಪುರದ ಅರಸುಗಳ ಸೇನೆಯೊಡನೆ ಯುದ್ದಮಾಡಿ, ಅಪಹರಣಗೊಂಡಿರುವ ದನಗಳನ್ನು ಮತ್ತೆ ವಿರಾಟನಗರಕ್ಕೆ ಹಿಂತಿರುಗಿ ಕರೆತರಬೇಕಾದರೆ; ಧುರ=ಯುದ್ದ/ಕಾಳೆಗ;

ಎಮ್ಮಣ್ಣ ದೇವನ ಧುರಕೆ ಸಾರಥಿ ಇಲ್ಲ =ಕಾಳೆಗದಲ್ಲಿ ಹೋರಾಡಲು ನಮ್ಮ ಅಣ್ಣದೇವನಿಗೆ ಸಾರತಿಯು ಇಲ್ಲ;

ನೀವು ಆ ನರನ ಸಾರಥಿಯೆಂದು ಕೇಳಿದೆವು =ನೀವು ಈ ಮೊದಲು ಅರ್‍ಜುನನಿಗೆ ಸಾರತಿಯಾಗಿದ್ದಿರಿ ಎಂಬುದನ್ನು ಕೇಳಿ ತಿಳಿದೆವು;

ಇನ್ನು ನೀವೇ ಬಲ್ಲಿರಿ =ಇಂತಹ ಸಮಯದಲ್ಲಿ ಏನು ಮಾಡಬೇಕೆಂಬುದು ನಿಮಗೆ ಗೊತ್ತಿದೆ;

ನಿನ್ನ ಮಾತನು ಮೀರಬಲ್ಲನೆ =ನಿನ್ನ ಮಾತನ್ನು ಮೀರುತ್ತೇನೆಯೇ. ನೀನು ಹೇಳಿದಂತೆಯೇ ಆಗಲಿ;

ಮುನ್ನ ಸಾರಥಿ ಅಹೆನು, ನೋಡುವೆನು ಎನುತ=ಮೊದಲು ನಿನ್ನ ಅಣ್ಣನಿಗೆ ಸಾರತಿಯಾಗುತ್ತೇನೆ. ಅನಂತರ ರಣರಂಗದಲ್ಲಿ ಏನು ನಡೆಯುತ್ತದೆಯೊ ನೋಡುತ್ತೇನೆ ಎಂದು ಹೇಳಿ; ವಹಿಲ=ವೇಗ; ಅಬಲೆ=ಹೆಂಗಸು; ಬೆನ್ನಲಿ ಐದಲು=ಹಿಂಬಾಲಿಸಿ ಬರಲು;

ವಹಿಲದಲಿ ಅಬಲೆಯನು ಬೆನ್ನಲಿ ಐದಲು=ವೇಗವಾಗಿ ಉತ್ತರೆಯನ್ನು ಹಿಂಬಾಲಿಸುತ್ತ ಬರಲು; ಸಂಪನ್ನ=ಉತ್ತಮ/ಸಜ್ಜನ; ಬಲ=ಶಕ್ತಿ; ಸಂಪನ್ನಬಲ=ಒಳ್ಳೆಯ ವ್ಯಕ್ತಿತ್ವವುಳ್ಳವನು/ಮಹಾಬಲಶಾಲಿ;

ಆ ಸಂಪನ್ನಬಲ ನು ಓಲಗಕೆ ಬರೆ=ಬೃಹನ್ನಳೆ ವೇಶದಾರಿಯಾದ ಅರ್‍ಜುನನು ಉತ್ತರಕುಮಾರನ ಓಲಗಕ್ಕೆ ಬರಲು; ಹರುಷ+ಉನ್ನತಿಯಲಿ; ಮನ್ನಿಸು=ಮರ್ಯಾದೆಯನ್ನು ತೋರಿಸು;

ಹರುಷೋನ್ನತಿಯಲಿ ಉತ್ತರ ಕುಮಾರನು ಕರೆದು ಮನ್ನಿಸಿದ=ಹೆಚ್ಚಿನ ಆನಂದದಿಂದ ಉತ್ತರಕುಮಾರನು ಬೃಹನ್ನಳೆಯನ್ನು ಹತ್ತಿರಕ್ಕೆ ಕರೆದು ಆದರದಿಂದ ಬರಮಾಡಿಕೊಂಡನು; ಅಗ್ಗಳೆಯರ+ಒಳ್; ಅಗ್ಗಳೆ=ಹೆಚ್ಚಿನ; ಅಗ್ಗಳೆಯರು=ದೊಡ್ಡವರು/ದೊಡ್ಡಸ್ತಿಕೆಯುಳ್ಳವರು; ವಿಗ್ರಹ=ಕಾಳೆಗ/ಯುದ್ದ; ತೆತ್ತುದು=ಏರ್ಪಟ್ಟಿದೆ/ಆರಂಬವಾಗಿದೆ;

ಎಲೆ ಬೃಹನ್ನಳೆ, ಎನಗೆ ಅಗ್ಗಳೆಯರೊಳು ವಿಗ್ರಹವು ತೆತ್ತುದು=ಎಲೆ ಬೃಹನ್ನಳೆ… ನನಗೆ ಮಹಾಬಲಶಾಲಿಗಳೊಡನೆ ಕಾಳೆಗವು ಆರಂಬಗೊಂಡಿದೆ; ಎನ್ನವ=ನನ್ನ; ಅಳಿ=ಸಾಯಿ/ಮರಣಹೊಂದು;

ಎನ್ನವ ಸಾರಥಿ ಅಳಿದನು=ನನ್ನ ಸಾರತಿಯು ಮರಣಹೊಂದಿದನು; ಸಮರ=ಕಾಳೆಗ; ಉಳುಹು=ಕಾಪಾಡು; ಬೇಹುದು=ಬೇಕಾಗಿರುವುದು;

ಸಮರದಲಿ ನೀನು ಸಾರಥಿಯಾಗಿ ಉಳುಹ ಬೇಹುದು=ಈಗ ಆರಂಬಗೊಂಡಿರುವ ಕಾಳೆಗದಲ್ಲಿ ನೀನು ನನ್ನ ಸಾರತಿಯಾಗಿ ನನ್ನ ವೀರತನವನ್ನು ಕಾಪಾಡಬೇಕು/ಮಹಾವೀರನೆಂಬ ನನ್ನ ಹೆಸರನ್ನು ಉಳಿಸಬೇಕು; ಫಲುಗುಣ=ಅರ್‍ಜುನ;

ಫಲುಗುಣನ ಸಾರಥಿಯಲೈ=ನೀನು ಅರ್‍ಜುನನಿಗೆ ಸಾರತಿಯಾಗಿದ್ದವನಲ್ಲವೇ; ಸಮರ್ಥ=ಬಲಶಾಲಿ/ಗಟ್ಟಿಗ;

ನೀ ಸಮರ್ಥ ನು=ನೀನು ಬಲಶಾಲಿ. ಸಾರತ್ಯವನ್ನು ಚೆನ್ನಾಗಿ ಬಲ್ಲವನು; ಒಲ್=ಒಪ್ಪು/ಸಮ್ಮತಿಸು;

ನೀನು ಒಲಿದು ಮೆಚ್ಚಲು ಸೇನೆಯಲಿ ಕಾದಿ ತೋರುವೆನು=ನೀನು ಪ್ರೀತಿಯಿಂದ ಒಪ್ಪಿಕೊಂಡು ನನ್ನ ಸಾರತಿಯಾದರೆ ರಣರಂಗದಲ್ಲಿ ವೀರಾವೇಶದಿಂದ ಹೋರಾಡಿ ನಾನು ಎಂತಹ ಪರಾಕ್ರಮಿ ಎಂಬುದನ್ನು ತೋರಿಸುತ್ತೇನೆ;

ಭರತ=ನಾಟ್ಯಶಾಸ್ತ್ರವನ್ನು ರಚಿಸಿದ ಮುನಿ; ಭರತ ವಿದ್ಯೆ=ನಟನೆ ಮತ್ತು ನಾಟ್ಯ ಕಲೆಯ ಬಗೆಗಿನ ಜ್ನಾನ ಮತ್ತು ಪರಿಣತಿ; ವಿಷಯ=ಸಂಗತಿ; ಪರಿಚಯ=ಮಾಹಿತಿ;

ನಮಗೆ ಭರತ ವಿದ್ಯಾ ವಿಷಯದಲಿ ಪರಿಚಯತನ=ನನಗೆ ನಟನೆ ಮತ್ತು ನಾಟ್ಯಕಲೆಯ ಸಂಗತಿಗಳಲ್ಲಿ ಪರಿಚಯ ಮತ್ತು ಪರಿಣತಿ ಇದೆಯೇ ಹೊರತು ಮತ್ತಾವುದರಲ್ಲೂ ಇಲ್ಲ; ಸಂಗರ=ಯುದ್ದ/ಕಾಳೆಗ;

ಅಲ್ಲದೆ ಹಲವು ಕಾಲದಲಿ ಈ ಸಂಗರದ ಸಾರಥಿತನವ ಮರೆದೆವು=ಹಲವು ವರುಶಗಳಿಂದ ರಣರಂಗದಲ್ಲಿ ತೇರನ್ನು ಮುನ್ನಡೆಸುವುದನ್ನೇ ಮರೆತಿದ್ದೇನೆ; ಅರಿ=ಹಗೆ/ಶತ್ರು; ಭಟ=ಕಾಳೆಗ ಮಾಡುವ ಸೈನಿಕ; ಅರಿಭಟರು=ಕಾಳೆಗದ ಹೋರಾಡುವ ಕಲಿಗಳು; ಭೀಷ್ಮ+ಆದಿಗಳು; ಆದಿಗಳು=ಮೊದಲಾದವರು; ನಿಲಲ್=ನಿಲ್ಲಲು; ಅರಿದು=ಬಹಳ ಕಶ್ಟಕರವಾದುದು/ಅಸಾದ್ಯವಾದುದು;

ಅರಿಭಟರು ಭೀಷ್ಮಾಧಿಗಳು. ನಿಲಲು ಅರಿದು=ಈಗ ರಣರಂಗದಲ್ಲಿ ನಮ್ಮ ಹಗೆಗಳಾಗಿರುವವರು ಬೀಶ್ಮ, ದ್ರೋಣ ಮುಂತಾದ ಮಹಾವೀರರು. ಅವರ ಎದುರಾಗಿ ಹೋರಾಡಲು ಬಹಳ ಕಶ್ಟ; ಸಾರಥಿತನ=ತೇರನ್ನು ಮುನ್ನಡೆಸುವ ವಿದ್ಯೆ; ಕೈಮನ=ದೇಹ ಮತ್ತು ಮನಸ್ಸು/ಮಯ್ ಮನವನ್ನು ಒಗ್ಗೂಡಿಸಿ ಕಲಿಯುವ ವಿದ್ಯೆ; ಸಾರಥಿತನದ ಕೈಮನ=ಸಾರತಿಯಾಗಿ ತೇರನ್ನು ಮುನ್ನಡೆಸುವ ವಿದ್ಯೆಯಲ್ಲಿ ಪರಿಣತಿ; ಸೂರೆ=ಲೂಟಿ/ಕೊಳ್ಳೆ; ರಣಸೂರೆ=ರಣರಂಗದಲ್ಲಿ ಹಗೆಗಳನ್ನು ಕಡಿದಿಕ್ಕಿ ಮಾಡುವ ಆಕ್ರಮಣಕಾರಿತನ; ಬರಡು=ಪೊಳ್ಳು/ದುರ್ಬಲ; ದೊರೆಕೊಳ್=ಸಿಗುವಂತೆ ಮಾಡು/ಲಬಿಸುವಂತೆ ಮಾಡು;

ಸಾರಥಿತನದ ಕೈಮನ ರಣ ಸೂರೆಯಲ್ಲಿ ಬರಡರಿಗೆ ದೊರೆಕೊಂಬುದೇ=ಸಾರತಿತನದಲ್ಲಿ ಪರಿಣತಿಯನ್ನು ಪಡೆದಿರುವ ನನ್ನಂತಹ ಬಲಹೀನರಿಗೆ ರಣರಂಗದಲ್ಲಿ ಹಗೆಗಳನ್ನು ಕಡಿದಿಕ್ಕಿ, ಹಗೆಗಳ ಸಂಪತ್ತನ್ನು ಲೂಟಿಮಾಡುವ ಶಕ್ತಿಯು ದೊರಕುತ್ತದೆಯೇ; ಆನು=ನಾನು;

ಆನು ಇರಲು ಭೀಷ್ಮಾದಿಗಳು ನಿನಗೆ ಏನ ಮಾಡಲು ಬಲ್ಲರು=ನಾನು ನಿನ್ನೊಡನೆ ಇರುವಾಗ ಬೀಶ್ಮ, ದ್ರೋಣ ಮುಂತಾದವರು ನಿನಗೆ ಏನನ್ನು ತಾನೆ ಮಾಡಲು ಶಕ್ತರು. ನನ್ನ ಮುಂದೆ ಅವರ ಆಟ ನಡೆಯುವುದಿಲ್ಲ;

ಅಳುಕದೆ ನೀನು ನಿಲು ಸಾಕು=ರಣರಂಗದಲ್ಲಿ ಹೆದರಿಕೊಳ್ಳದೆ ತೇರನ್ನು ನಡೆಸು. ಅಶ್ಟು ಸಾಕು;

ಅವರುಗಳ ಒಂದು ನಿಮಿಷಕೆ ಗೆಲುವೆನು=ದುರ್‍ಯೋದನನ ಕಡೆಯ ಸೇನಾನಿಗಳನ್ನು ಒಂದು ಗಳಿಗೆಯಲ್ಲಿ ಸದೆಬಡಿದು ಗೆಲ್ಲುತ್ತೇನೆ;

ತಾನು ಅದು ಆರೆಂದು ಅರಿಯಲಾ=ನಾನು ಎಂತಹ ಗಂಡುಗಲಿ ಎಂಬುದು ನಿನಗೆ ಗೊತ್ತಿಲ್ಲವೇ; ಗುರುಸೂನು=ಗುರುಪುತ್ರನಾದ ಅಶ್ವತ್ತಾಮ; ಆನು=ನಾನು; ಅರಿಯದವರಲ್ಲ=ತಿಳಿಯದವರೇನಲ್ಲ;

ಗುರುಸೂನು, ಕರ್ಣ, ದ್ರೋಣರು ಎಂಬವರು ಆನು ಅರಿಯದವರಲ್ಲ=ದುರ್‍ಯೋದನನ ಪಡೆಯ ಅಶ್ವತ್ತಾಮ, ಕರ್ಣ, ದ್ರೋಣ ಎಂಬ ವ್ಯಕ್ತಿಗಳು ನನಗೆ ಗೊತ್ತಿಲ್ಲದವರಲ್ಲ. ಅವರೆಲ್ಲರ ಶಕ್ತಿಸಾಹಸಗಳ ಇತಿಮಿತಿಯನ್ನು ನಾನು ಬಲ್ಲವನಾಗಿದ್ದೇನೆ;

ಸಾರಥಿಯಾಗು ಸಾಕು=ನೀನು ಹಗೆಗಳ ಶಕ್ತಿಸಾಹಸದ ಬಗ್ಗೆ ಚಿಂತಿಸಿ ಆತಂಕಗೊಳ್ಳಬೇಡ: ಸುಮ್ಮನೆ ಸಾರತಿಯಾಗಿ ತೇರನ್ನು ನಡೆಸು. ಅಶ್ಟನ್ನು ಮಾತ್ರ ನಿನ್ನಂದ ನಾನು ಬಯಸುತ್ತೇನೆ;

ವೀರನ್+ಅಹೆ; ಅಹೆ=ಆಗಿರುವೆ;

ವೀರ ನಹೆ ಬಳಿಕ ಏನು=ನೀನು ವೀರನಾಗಿರುವುದರಿಂದ ಸಾರತಿಯಾದ ನನಗೆ ಯಾವ ಆಪತ್ತು ಬರುವುದಿಲ್ಲ; ಇರಿ=ಕೊಲ್ಲು/ಕತ್ತರಿಸು; ಹರೆಯ=ಯವ್ವನ;

ರಾಜಕುಮಾರನು ಇರಿವೊಡೆ ಹರೆಯವಲ್ಲಾ=ರಣರಂಗದಲ್ಲಿ ಹಗೆಗಳನ್ನು ಕೊಲ್ಲಲು ಕಸುವುಳ್ಳ ನೀನು ಹರೆಯದ ರಾಜಕುಮಾರನಲ್ಲವೇ;

ಸಾರಥಿತ್ವವ ಮಾಡಿ ನೋಡುವೆ=ರಣರಂಗದಲ್ಲಿ ತೇರನ್ನು ಮುನ್ನಡೆಸಿ ನಿನ್ನ ಪರಾಕ್ರಮವನ್ನು ನೋಡುವೆನು;

ರಥವ ತರಿಸು=ತೇರನ್ನು ತರಿಸು ಎಂದು ಬೃಹನ್ನಳೆಯು ಉತ್ತರಕುಮಾರನಿಗೆ ಹೇಳಿದಳು; ವಾರುವ=ಕುದುರೆ; ಮಂದಿರ=ವಾಸದ ಜಾಗ; ವಾರುವ ಮಂದಿರ=ಕುದುರೆ ಲಾಯ; ಆಯ್=ಆರಿಸು/ಆಯ್ಕೆ ಮಾಡು; ಚಾರು=ಉತ್ತಮವಾದ; ತುರಗ+ಆವಳಿಯ; ತುರಗ=ಕುದುರೆ; ಆವಳಿ=ಗುಂಪು/ಸಾಲು; ಬಿಗಿ=ಕಟ್ಟು/ರಚಿಸು;

ಕಲಿಪಾರ್ಥ ವಾರುವದ ಮಂದಿರದಲಿ ಆಯಿದು ಚಾರು ತುರಗಾವಳಿಯ ಬಿಗಿದನು=ಅರ್‍ಜುನನು ತಾನೇ ಕುದುರೆಯ ಲಾಯಕ್ಕೆ ಹೋಗಿ, ಕುದುರೆಗಳ ಗುಂಪಿನಲ್ಲಿ ಉತ್ತಮವಾದ ಕುದುರೆಗಳನ್ನು ಆಯ್ಕೆಮಾಡಿಕೊಂಡು ತೇರಿಗೆ ಕಟ್ಟಿದನು; ಸಂವರಿಸು=ಸಜ್ಜುಮಾಡು/ಸಿದ್ದಗೊಳಿಸು;

ತೇರ ಸಂವರಿಸಿದನು=ರಣರಂಗಕ್ಕೆ ಹೋಗಲು ಅನುವಾಗುವಂತೆ ತೇರನ್ನು ಸಜ್ಜುಗೊಳಿಸಿದನು;

ರಥವ ಏರಿದನು=ತೇರನ್ನೇರಿ ಕುಳಿತನು; ನಿಖಿಲ+ಅಂಗನೆಯರು; ನಿಖಿಲ=ಎಲ್ಲ/ಸಮಸ್ತ; ಅಂಗನೆ=ಹೆಂಗಸು; ನಿಖಿಳಾಂಗನೆಯರು ಉತ್ತರಗೆ ಮಂಗಳಾರತಿಯ ಎತ್ತಿದರು=ರಾಣಿವಾಸದ ಹೆಂಗಸರೆಲ್ಲರೂ ಉತ್ತರಕುಮಾರನಿಗೆ ರಣರಂಗದಲ್ಲಿ ಜಯವಾಗಲಿ ಎಂಬ ಆಶಯದಿಂದ ಮಂಗಳಾರತಿಯನ್ನು ಎತ್ತಿದರು; ನಿಜ=ತನ್ನ/ಉತ್ತರಕುಮಾರನ ; ಸರ್ವಾಂಗ=ಇಡೀ ದೇಹ; ಶೃಂಗಾರ=ಅಲಂಕಾರ;

ನಿಜ ಸರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ=ಉತ್ತರಕುಮಾರನು ತನ್ನ ದೇಹವನ್ನು ಅಲಂಕರಿಸಿಕೊಂಡು ತೇಜೋರೂಪಿಯಾಗಿ ತೇರನ್ನು ಏರಿ; ಹೊನ್+ಕೆಲಸ+ಮಯ; ಹೊನ್=ಹೊನ್ನು/ಚಿನ್ನ; ಮಯ=ಕೂಡಿದ/ತುಂಬಿದ; ಕವಚ=ರಣರಂಗದ ಅಪಾಯಗಳಿಂದ ಪಾರಾಗಲೆಂದು ದೇಹಕ್ಕೆ ಹಾಕಿಕೊಳ್ಳುವ ಲೋಹದ ಅಂಗಿ; ಹೊಂಗೆಲಸಮಯ ಕವಚ=ಚಿನ್ನದ ಹಾಳೆಗಳಿಂದಲೇ ಮಾಡಿರುವ ಕವಚ;

ಹೊಂಗೆಲಸಮಯ ಕವಚವನು ಪಾರ್ಥಂಗೆ ಕೊಟ್ಟನು=ಚಿನ್ನದ ತಗಡುಗಳಿಂದಲೇ ಮಾಡಿದ್ದ ಯುದ್ದದ ಅಂಗಿಯನ್ನು ಅರ್‍ಜುನನಿಗೆ ಕೊಟ್ಟನು;

ಜೋಡು=ಜೊತೆ/ಎರಡು; ಸೀಸಕ=ಒಂದು ಬಗೆಯ ಲೋಹ; ಸೀಸಕದ ಅಂಗಿ=ಲೋಹದ ಕವಚ; ಜೋಡು ಸೀಸಕದ ಅಂಗಿಗಳು=ತಲೆಗೆ ಹಾಕಿಕೊಳ್ಳುವ ಕವಚ ಮತ್ತು ಎದೆಯ ಮೇಲೆ ತೊಡುವ ಕವಚಗಳು; ಅಳವಡಿಸು=ಹಾಕಿಕೊಳ್ಳುವುದು; ಅನು=ಸಿದ್ದತೆ/ಸಜ್ಜು;

ರಾಜಕುಮಾರನು ಜೋಡು ಸೀಸಕದ ಅಂಗಿಗಳನು ಅಳವಡಿಸಿ ಅನುವಾದ=ಉತ್ತರಕುಮಾರನು ಒಂದು ಜೊತೆ ಲೋಹದ ಕವಚಗಳನ್ನು ತೊಟ್ಟುಕೊಂಡು ರಣರಂಗಕ್ಕೆ ತೆರಳಲು ಸಿದ್ದನಾದನು; ನರ=ಬೃಹನ್ನಳೆ; ಸರಿ=ಒಳಸೇರಿಸು/ತುರುಕು; ಇರೆ=ಇರಲು; ಘೊಳ್+ಎಂದು; ಘೊಳ್=ಇದು ಒಂದು ಅನುಕರಣ ಪದ. ಹೆಂಗಸರೆಲ್ಲರೂ ಒಮ್ಮೆಲೆಯೇ ಜೋರಾಗಿ ಚಪ್ಪಾಳೆಯನ್ನ ತಟ್ಟಿದಾಗ ಹೊರಹೊಮ್ಮಿದ ದನಿ; ಕೈಹೊಯ್ದು=ಚಪ್ಪಾಳೆಯನ್ನು ತಟ್ಟಿ;

ನರನು ತಲೆ ಕೆಳಗಾಗಿ ಕವಚವ ಸರಿವುತ ಇರೆ ಘೊಳ್ಳೆಂದು ಕೈ ಹೊಯ್ದು ಅರಸಿಯರು ನಗೆ=ಸಾರತಿಗೆ ತೊಡಲೆಂದು ಕೊಟ್ಟಿದ್ದ ಅಂಗಕವಚವನ್ನು ಬೃಹನ್ನಳೆಯು ತೊಡಲು ಅರಿಯದವಳಂತೆ ತಲೆಕೆಳಗಾಗಿ ತೊಟ್ಟುಕೊಳ್ಳತೊಡಗಿದಾಗ ರಾಣಿವಾಸದ ಹೆಂಗಸರೆಲ್ಲರೂ ಒಮ್ಮೆಲೆ ಚಪ್ಪಾಳೆಯನ್ನು ತಟ್ಟುತ್ತ ಜೋರಾಗಿ ನಗಲು; ಮೇಲ್ಮುಖ=ಮೇಲುಗಡೆಯಿಂದ;

ನಾಚಿದಂತಿರೆ ಪಾರ್ಥ… ತಲೆವಾಗಿ ತಿರುಗಿ ಮೇಲ್ಮುಖನಾಗಿ ತೊಡಲು=ನಾಚಿಕೊಂಡ ಬೃಹನ್ನಳೆಯು ತಲೆಬಗ್ಗಿಸಿಕೊಂಡು, ಮತ್ತೆ ಅಂಗಕವಚವನ್ನು ಸರಿಯಾಗಿ ತೊಟ್ಟುಕೊಳ್ಳಲು ಪ್ರಯತ್ನಿಸುತ್ತಿರಲು; ನಸುನಗು=ಮುಗುಳುನಗೆ/ಮಂದಹಾಸ;

ಉತ್ತರೆ ಬಳಿಕ ನಸುನಗಲು=ಬೃಹನ್ನಳೆಯ ಪಾಡನ್ನು ಕಂಡು ಉತ್ತರೆಯು ಮುಗುಳುನಗುತ್ತಿರಲು;

ಸಾರಥಿ ಅರಿಯ ತಪ್ಪೇನು ಎನುತಲು ಉತ್ತರ ತಾನೆ ತೊಡಿಸಿದನು=ಸಾರತಿಗೆ ಅಂಗಕವಚವನ್ನು ಹೇಗೆ ತೊಟ್ಟುಕೊಳ್ಳಬೇಕು ಎಂಬುದು ಗೊತ್ತಿಲ್ಲ. ಇದರಲ್ಲಿ ತಪ್ಪೇನು ಎಂದು ಹೇಳುತ್ತ ಉತ್ತರಕುಮಾರನು ತಾನೇ ಬೃಹನ್ನಳೆಗೆ ಅಂಗಕವಚವನ್ನು ತೊಡಿಸಿದನು;

ಆಹವ=ಕಾಳೆಗ/ಯುದ್ದ; ಹವಣು=ನಿಪುಣತೆ/ಶಕ್ತಿ; ತಾನ್+ಎಂತು; ತಾನೆಂತು=ಅದು ಹೇಗೆ ಇರುತ್ತದೆ;

ಕವಚವನು ತೊಡಲು ಅರಿಯದವನು ಆಹವಕೆ ಸಾರಥಿತನವ ಮಾಡುವ ಹವಣು ತಾನೆಂತು=ಕವಚವನ್ನೇ ತೊಡಲು ತಿಳಿಯದ ಬೃಹನ್ನಳೆಯು ಇನ್ನು ರಣರಂಗದಲ್ಲಿ ತೇರನ್ನು ಹೇಗೆ ತಾನೆ ಕುಶಲತೆಯಿಂದ ಮುನ್ನಡೆಸಲು ಆಗುತ್ತದೆ ಎಂಬ ಅನುಮಾನವನ್ನು ಅಲ್ಲಿದ್ದ ಹೆಂಗಸರು ವ್ಯಕ್ತಪಡಿಸಿದರು;

ಬವರ=ಕಾಳೆಗ/ಯುದ್ದ; ಅವರ=ದುರ್‍ಯೋದನನ ಪಡೆಯ ಸೈನಿಕರ; ಮಣಿ=ಬೆಲೆಬಾಳುವ ಮುತ್ತು, ರತ್ನ, ವಜ್ರದ ಹರಳುಗಳು; ಪರಿಧಾನ=ಉಡುಪು; ಆಭರಣ=ಒಡವೆ; ಸರೋಜ=ತಾವರೆಯ ಹೂವು; ಸರೋಜಮುಖಿ=ತಾವರೆಯ ಮೊಗದವಳು/ಸುಂದರಿ;

ವರವನು ನಮ್ಮಣ್ಣ ಗೆಲಿದಪನು. ಅವರ ಮಣಿ ಪರಿಧಾನ ಆಭರಣವನು ಸಾರಥಿ ಕೊಂಡು ಬಾ ಎಂದಳು ಸರೋಜಮುಖಿ=ಯುದ್ದವನ್ನು ನಮ್ಮಣ್ಣ ಗೆಲ್ಲುತ್ತಾನೆ. ನಮ್ಮಣ್ಣನ ಪರಾಕ್ರಮದ ಹೋರಾಟಕ್ಕೆ ಬಲಿಯಾಗಿ ರಣರಂಗದಲ್ಲಿ ಸತ್ತುಬಿದ್ದಿರುವ ದುರ್‍ಯೋದನನ ಕಡೆಯ ಸೈನಿಕರ ಅಂಗಕವಚದಲ್ಲಿರುವ ಮುತ್ತು ರತ್ನ ವಜ್ರದ ಒಡವೆಗಳನ್ನು ತೆಗೆದುಕೊಂಡು ಬಾ ಎಂದು ಉತ್ತರೆಯು ಬೃಹನ್ನಳೆಗೆ ಆದೇಶವನ್ನು ನೀಡಿದಳು;

ಕೈಕೊಳ್=ಹಿಡಿ/ತೊಡಗು; ಎಸಗು=ತೇರನ್ನು ನಡೆಸು ;

ಅರ್ಜುನನು ನಸು ನಗುತ ರಥವನು ಕೈಕೊಂಡನು, ಎಸಗಿದನು=ಬೃಹನ್ನಳಾ ವೇಶದಾರಿಯಾದ ಅರ್‍ಜುನನು ಮುಗುಳುನಗುತ್ತ ತೇರಿಗೆ ಕಟ್ಟಿದ್ದ ಕುದುರೆಗಳ ಕಡಿವಾಣದ ಹಗ್ಗವನ್ನು ಹಿಡಿದುಕೊಂಡು ತೇರನ್ನು ರಣರಂಗದ ಕಡೆಗೆ ಮುನ್ನಡೆಸಿದನು;

ವಿಗಡ=ಬಲವುಳ್ಳ; ವಾಜಿ=ಕುದುರೆ; ಸಮೀರ=ಗಾಳಿ/ವಾಯು; ಮಿಸುಕು=ಅಲ್ಲಾಡು/ಚಲಿಸು/ಕದಲು; ಈ=ಕೊಡು/ಅವಕಾಶವನ್ನು ನೀಡು; ಮಿಗು=ದಾಟು/ಅತಿಕ್ರಮಿಸು; ಮುಂದೆ ಮಿಕ್ಕವು=ಮುಂದೆ ನುಗ್ಗಿದವು;

ವಿಗಡ ವಾಜಿಗಳು ಸಮೀರನ ಮಿಸುಕಲು ಈಯದೆ ಮುಂದೆ ಮಿಕ್ಕವು=ಬಲವುಳ್ಳ ಕುದುರೆಗಳು ಬೀಸುತ್ತಿರುವ ಗಾಳಿಯು ತಮ್ಮನ್ನು ದಾಟಿಹೋಗಲು ಅವಕಾಶವನ್ನು ನೀಡದೆ, ಗಾಳಿಗಿಂತಲೂ ವೇಗವಾಗಿ ಮುನ್ನಡೆದವು;

ಪರಿ=ರೀತಿ; ಸಂಗಾತ=ಸಂಗಡ/ಜೊತೆಯಲ್ಲಿ; ಅಸದಳ=ಅಸಾದ್ಯ/ಆಗವುದಿಲ್ಲ ; ಚಾತುರಂಗ ಬಲ=ಆನೆ/ಕುದುರೆ/ತೇರು/ಕಾಲ್ದಳ ಎಂಬ ನಾಲ್ಕು ಬಗೆಯ ಪಡೆ ; ಪುರ=ವಿರಾಟನಗರ; ಉಸುರು=ಮಾತನಾಡು/ಹೇಳು;

ಹೊಸ ಪರಿಯ ಸಾರಥಿಯಲಾ. ನಮಗೆ ಸಂಗಾತ ಬರಲು ಅಸದಳವು ಎಂದು ಚಾತುರಂಗ ಬಲ ಪುರದಲಿ ಹಿಂದೆ ಉಸುರದೆ ಉಳಿದುದು=ವಾಯುವೇಗವನ್ನು ಮೀರಿಸುವಂತೆ ಬೃಹನ್ನಳೆಯು ಉತ್ತರಕುಮಾರನು ಕುಳಿತಿದ್ದ ತೇರನ್ನು ಮುನ್ನಡೆಸುತ್ತ ರಣರಂಗದತ್ತ ಹೊರಟಾಗ, ಉತ್ತರಕುಮಾರನ ಹಿಂದೆ ಹೊರಟ ಚತುರಂಗಬಲದ ಸೈನಿಕರು ಆ ತೇರಿನ ವೇಗಕ್ಕೆ ತಾವು ಹೋಗಲು ಆಗಲಿಲ್ಲ. ಆಗ ಸೈನಿಕರು “ಇವನಾರು ಹೊಸಬಗೆಯ ಸಾರತಿ. ನಮಗೆ ಯುವರಾಜನ ಜೊತೆಯಲ್ಲಿಯೇ ಸಾಗಲು ಆಗುತ್ತಿಲ್ಲ” ಎಂದು ಗೊಣಗಿಕೊಳ್ಳುತ್ತ, ಉಸುರುಗಟ್ಟಿದಂತಾಗಿ ಅಂದರೆ ಏನನ್ನೂ ಮಾಡಲು ತೋಚದೆ ವಿರಾಟನಗರದಲ್ಲಿಯೇ ಉಳಿದುಬಿಟ್ಟರು;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks