ಆಗದು ಎಂದು ಕೈ ಕಟ್ಟಿ ಕುಳಿತರೆ

– ವೆಂಕಟೇಶ ಚಾಗಿ.

ಜೀವನದಲ್ಲಿ ಕಶ್ಟ ಸುಕಗಳು ಸಹಜ. ಯಾರಿಗೂ ಅವರ ಬದುಕಿನಲ್ಲಿ ಸಂಪೂರ‍್ಣವಾಗಿ ಕಶ್ಟವೇ ಇರುವುದಿಲ್ಲ. ಹಾಗೆಯೇ ಸಂಪೂರ‍್ಣವಾಗಿ ಸುಕವೇ ಇರುವುದಿಲ್ಲ. ಹುಟ್ಟುವಾಗ ಇವನು ಸಂಪೂರ‍್ಣ ಸುಕದಿಂದ ಬದುಕಲಿ ಎಂದು ದೇವರು ಆಶೀರ‍್ವಾದ ಮಾಡಿ ಕಳುಹಿಸಿರುವುದಿಲ್ಲ ಅತವಾ ಕಶ್ಟವೇ ಇವನ ಬದುಕಾಗಲಿ ಎಂದು ಶಾಪ ನೀಡಿ ಕಳುಹಿಸಿರುವುದಿಲ್ಲ. ಬದುಕು ಶೂನ್ಯದಿಂದಲೇ ಪ್ರಾರಂಬವಾಗುತ್ತದೆ. ನಮಗೆ ಒದಗಿಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಾಗಲೇ ಸುಕದ ಯಶಸ್ಸಿನ ಅನುಬವ ದೊರೆಯುತ್ತದೆ. ಯಶಸ್ಸಿನ ಶಿಕರವೇರುವಾಗ ಮಾಡಬೇಕಾದ ಪ್ರಯತ್ನವೇ ಕಶ್ಟವೆನಿಸುತ್ತದೆ ಹೊರತು, ಕಶ್ಟವೆಂಬುದು ಬೇರೊಂದಿಲ್ಲ.

ಯಶಸ್ಸು ಪಡೆಯುವಂತಹ ವ್ಯಕ್ತಿಗಳು ಯಾವತ್ತೂ ಕೈ ಕಟ್ಟಿಕೊಂಡು ಕುಳಿತಿರುವುದಿಲ್ಲ. ಕ್ರೀಡೆ, ಸಿನಿಮಾ, ರಾಜಕೀಯ, ಕಲೆ ಸಾಹಿತ್ಯ, ವಿಜ್ನಾನ , ಕ್ರುಶಿ, ಆಡಳಿತ, ಸೇವೆ ಹೀಗೆ ಹಲವಾರು ಕ್ಶೇತ್ರಗಳು ಅವಕಾಶಗಳು ನಮ್ಮ ಮುಂದಿವೆ. ಯಾವುದೇ ಅವಕಾಶವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ‍್ಯ ನಮಗಿದೆ. ಯಾವುದೇ ರಂಗವನ್ನು ಆಯ್ಕೆಮಾಡಿಕೊಂಡರೂ ಯಶಸ್ಸು ಪಡೆಯುವುದು ಅಶ್ಟು ಸುಲಬವಲ್ಲ. ಯಶಸ್ಸಿಗಾಗಿ ಶ್ರಮ ಪಡದೆ ಇರುವುದು ಜೀವನವೇ ಅಲ್ಲ.

ಒಂದು ಪಕ್ಶಿ ತಾನು ಒಂದು ಗೂಡು ಕಟ್ಟಿಕೊಂಡು ಅದರಲ್ಲಿ ಮೊಟ್ಟೆ ಇಟ್ಟು, ಕಾವು ಕೊಟ್ಟು, ಮರಿಗಳನ್ನು ಮಾಡಿ, ಅವುಗಳನ್ನು ಬದುಕಲು ಶಕ್ತರನ್ನಾಗಿ ಮಾಡುವಂತಹ ಪ್ರಯತ್ನ ಅಶ್ಟು ಸುಲಬವಲ್ಲ. ಅಯ್ಯೋ ಅಶ್ಟೊಂದು ಕಶ್ಟ ನನಗ್ಯಾಕೆ ಎಂದು ಪಕ್ಶಿ ಯಾವತ್ತೂ ಸುಮ್ಮನೆ ಕೂರುವುದಿಲ್ಲ. ಗೂಡು ಕಟ್ಟಲು ಸೂಕ್ತವಾದ ಸ್ತಳ ಹುಡುಕುವುದೇ ಅದರ ಮುಂದಿರುವ ಅತೀ ದೊಡ್ಡ ಸವಾಲು. ಆದರೂ ಸಮಯ ವ್ಯರ‍್ತ ಮಾಡದೆ ಅಂತಹ ಸ್ತಳವನ್ನು ಹುಡುಕುತ್ತದೆ. ತನ್ನ ಶ್ರಮ ಮುಂದಿನ ದಿನಗಳಲ್ಲಿ ವ್ಯರ‍್ತ ಆಗಬಾರದು ಎಂಬುದು ಅದರ ಉದ್ದೇಶ. ಗೂಡು ಕಟ್ಟುವುದು ಅಶ್ಟು ಸುಲಬವಲ್ಲ.‌ ಹಲವಾರು ಪ್ರದೇಶಗಳಿಗೆ ತೆರಳಿ ತನ್ನ ಗೂಡಿಗೆ ಬೇಕಾದ ಸೂಕ್ತವಾದ ಹುಲ್ಲು ಕಡ್ಡಿಗಳನ್ನು ಆಯ್ದುಕೊಂಡು ಬಂದು ಹಲವು ದಿನಗಳ ವರೆಗೆ ಶ್ರಮವಹಿಸಿ ಗೂಡು ಕಟ್ಟುತ್ತದೆ. ನಂತರ ಮೊಟ್ಟೆ ಇಟ್ಟು ಮರಿ ಮಾಡಿ ಅವುಗಳ ಪೋಶಣೆ ಮಾಡುತ್ತದೆ. ಇದು ಹಕ್ಕಿಯ ಜೀವನ.

ಹಕ್ಕಿಯ ಬದುಕಿನಲ್ಲೂ ಹಲವಾರು ಕಶ್ಟಗಳು ಎದುರಾಗುತ್ತವೆ ಅಂದ ಮೇಲೆ ಮನುಶ್ಯನ ಬದುಕಿನಲ್ಲೂ ಕಶ್ಟಗಳು ಬರದೇ ಇರುವುದಿಲ್ಲ. ಮಾಡಬೇಕಾದ ಕೆಲಸ ಕಾರ‍್ಯ ಸಾದ್ಯವಿಲ್ಲ ಎಂದು ಕುಳಿತಾಗ ಜೀವನ ಸಾರ‍್ತಕವಾಗುವುದಾದರೂ ಹೇಗೆ? ಬದುಕನ್ನು ಜೀವಿಸಿ. ಬದುಕಿ ಸಾದಿಸಿ. ಸಾದಿಸಿ ಬದುಕನ್ನು ಗೆಲ್ಲಿಸಿ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *