ನಿದ್ದೆ ಕಡಿಮೆಯೇ? ’ಬೆಳಕು ಮಯ್ಲಿಗೆ’ ನಿಲ್ಲಿಸಿ!

ನಮಗೆಲ್ಲಾ ಗಾಳಿ ಮಯ್ಲಿಗೆ (air pollution) ಗೊತ್ತು. ಮೊಳಗು ಮಯ್ಲಿಗೆಯೂ (sound pollution) ಗೊತ್ತು. ನಮ್ಮ ನಾಡಿನಲ್ಲಿ ಇವುಗಳು ಹೆಚ್ಚುತ್ತಿರುವುದೂ ಗೊತ್ತು. ಆದರೆ, ಇನ್ನೂ ಒಂದು ಮಯ್ಲಿಗೆ ಇದೆ ಗೊತ್ತೇ? ಎಶ್ಟರ ಮಟ್ಟಿಗೆ ಗಾಳಿ, ನೀರು ಮತ್ತು ಮೊಳಗು ಮಯ್ಲಿಗೆಗಳು ನಮ್ಮ ಮಯ್ಯಿಗೆ ತೊಂದರೆ ಕೊಡಬಲ್ಲವೋ ಅಶ್ಟೆ ತೊಂದರೆ ಕೊಡಬಲ್ಲ ಮಯ್ಲಿಗೆಯ ಬಗ್ಗೆ ನಾವು ಅಶ್ಟು ಗಮನಿಸಿಯೇ ಇಲ್ಲ ಗೊತ್ತೇ? ಅದೇ ಬೆಳಕು ಮಯ್ಲಿಗೆ (light pollution)! ಮಂದಿಯು ಬೇಕಾದ್ದಕ್ಕಿಂತ ಹೆಚ್ಚಾಗಿ ಮಾಳ್ಕೆಯ ಬೆಳಕಿನಲ್ಲಿ (artificial light) ಇರುವುದನ್ನು ಬೆಳಕಿನ ಮಯ್ಲಿಗೆ ಅನ್ನಬಹುದು.

ಚೆಲ್ಲಿದ ಬೆಳಕಲ್ಲಿ ಬಾರದು ನಿದ್ದೆ2

ಇದೇನಿದು ಮಿಂಚಿನ-ಹರಿವಿನ (electric current) ಕೊರತೆಯಿಂದಾಗಿ ಮಕ್ಕಳ ಓದಿಗೇ ತೊಂದರೆ ಆಗುತ್ತಿದೆ. ಇಲ್ಲಿ ನೋಡಿದರೆ ಬೆಳಕಿನ ಮಯ್ಲಿಗೆ ಎಂಬುದಿದೆ ಅಂತಾರಲ್ಲ ಅನ್ನಿಸಬಹುದು. ಆದರೆ ಇದು ದಿಟ! ಮಂದಿಯಲ್ಲಿ ಹೆಚ್ಚುತ್ತಿರುವ ನಿದ್ರೆ-ಕೊರತೆಗೆ ಮತ್ತದು ತಂದೊಡ್ಡುವ ಹಲವಾರು ಕುತ್ತಗಳಿಗೆ ದೊಡ್ಡ ಸಲುವೇ ಬೆಳಕಿನ ಮಯ್ಲಿಗೆ. ಎಲ್ಲರೂ ಹೆಚ್ಚು ದುಡಿವ ನಮ್ಮ ಕಾಲದಲ್ಲಿ ನಿದ್ರೆ-ಕೊರತೆಗೆ ಹಲವಾರು ಸಲುವುಗಳಿವೆ.

ಕೆಲಸಕ್ಕೆ, ಶಾಲೆಗಳಿಗೆ ತುಂಬಾ ಬೇಗ ಹೋಗವುದರಿಂದ, ರಸ್ತೆ ಟ್ರಾಪಿಕ್ಗಳಲ್ಲೇ ಹೆಚ್ಚು ಕಾಲ ಕಳೆದುಹೋಗಿ ಅದನ್ನ ತೂಗಿಸಲು ಪರದಾಡುವುದರಿಂದ, ಕೆಪೇನ್ ಹೆಚ್ಚಿರುವ ಕಾಪಿ ಮತ್ತು ತಂಪು-ಕುಡಿಗೆಗಳನ್ನು ಕುಡಿಯುವುದರಿಂದಳೂ ನಿದ್ರೆ-ಕೊರತೆ ಉಂಟಾಗುತ್ತದೆ. ಆದರೆ ಇವೆಲ್ಲಾ ಸಲುವುಗಳಿಗೆ ಕೊನೆಯ ಮೂಳೆಯೇ ಬೆಳಕಿನ ಮಯ್ಲಿಗೆ.

ನೇಸರ ಮುಳುಗಿದ ಮೇಲೆ ಬೆಳಕೇ ಇಲ್ಲದಿದ್ದಲ್ಲಿ ಮಂದಿಯು ಕೆಪೇನ್ ಇರುವ ಕಾಪಿ ಕುಡಿದು ಎಚ್ಚರವಾಗಿರುವುದಕ್ಕೆ ಹೋಗುವುದಿಲ್ಲ. ನಮ್ಮ ಮಯ್ಯಿಗೆ ಮಾಳ್ಕೆಯ ಬೆಳಕಿನಿಂದ ಕೆಡುಕು ನೇರವಾಗೆ ಆಗುತ್ತದೆ. ನಮ್ಮ ಮಯ್ಯೊಳಗೆ 24 ಗಂಟೆಗೊಮ್ಮೆ ಮರುಕಳಿಸುವ ಲಯವೊಂದಿದೆ. ಅದನ್ನು ನಾಳ್ಸುತ್ತಿನ ಮರುಕಳಿಗೆ (circadian rhythm) ಅನ್ನಬಹುದು. ನಮ್ಮ ಕಣ್ಣುಗಳ ಕೆಲಸ ನೋಟವಶ್ಟೇ ಅಲ್ಲ. ನಮ್ಮ ಕಣ್ಣಿನ ಒಳಪದರದಲ್ಲಿರುವ ಸೆಳೆ (rod) ಮತ್ತು ಮೇರುವೆ (cone) ಎಂಬ ಎರಡು ಬಗೆಯ ಜೀವಕಣಗಳ ಮೇಲೆ ಬೆಳಕು ಬಿದ್ದಾಗ ನಮಗೆ ನೋಡಲು ಆಗುತ್ತದೆ.

ಹಾಗೆಯೇ ಮರುಸುತ್ತುಗೆ (intrinsically photosensitive retinal ganglion cells -ipRGCs)  ಎಂಬ ಇನ್ನೊಂದು ಬಗೆಯ ಜೀವಕಣಗಳ ಮೇಲೆ ಬೆಳಕು ಬಿದ್ದಾಗ ನೋಟವನ್ನು ಬಿಟ್ಟು ಬೇರೆಯದೇ ಕೆಲಸಗಳು ಆಗುತ್ತವೆ.

ಒಂದು, ಬೆಳಕಿನ ಅಳತೆಗೆ ತಕ್ಕಂತೆ ಕಣ್ಣಿನ ಆರಂಬದಲ್ಲಿರುವ ಉಬ್ಬುಗಾಜನ್ನು ಸುತ್ತುವರಿದಿರುವ ದುಂಡನೆಯ ಕಿಟಕಿಯ ಅಗಲವನ್ನು ತೀರ್‍ಮಾನವಾಗುತ್ತದೆ. ದುಂಡಾದ ಕಣ್ಕಿಟಕಿಯು (pupil) ನಾವು ಕತ್ತಲಲ್ಲಿ ಇದ್ದಾಗ ಹೆಚ್ಚು ಬೆಳಕನ್ನು ಬಿಟ್ಟುಕೊಳ್ಳಲು ಅನುವಾಗುವಂತೆ ಅಗಲವಾಗಿ ತೆರೆದುಕೊಳ್ಳುತ್ತದೆ. ಹಾಗೆಯೇ, ರಾಚುವ ಬೆಳಕಿನಲ್ಲಿ ಇದ್ದಾಗ ಕಿಟಕಿಯು ಚಿಕ್ಕದಾಗಿ ಬೆಳಕು ಒಳಗೆ ಹೋಗುವುದನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ರಾಚುವ ಬೆಳಕಿನಿಂದ ಕಣ್ಣು ಕುರುಡಾಗುವುದು ತಪ್ಪುತ್ತದೆ.

ಎರಡು, ಮರುಸುತ್ತುಗೆಯ ಮೇಲೆ ಬೆಳಕು ಬಿದ್ದಾಗ ಮೆಲನೋಪ್ಸಿನ್ ಎನ್ನುವ ಹಾರ್‍ಮೋನು ಬಿಡುಗಡೆಯಾಗುತ್ತದೆ. ಇದು ಮೇಲೆ ತಿಳಿಸಿದ ನಾಳ್ಸುತ್ತಿನ ಮರುಕಳಿಕೆಯನ್ನು ಹೊಸದಾಗಿ ಆರಂಬಿಸುತ್ತದೆ. ಇದರಿಂದಾಗಿ ನಿದ್ದೆ ಬರಿಸುವ ನರಗಳು ಸುಮ್ಮನಾಗಿ ಎಚ್ಚರಿಸುವ ನರಗಳು ಚುರುಕುಗೊಳ್ಳುತ್ತವೆ. ಹಾಗಾಗಿ ನಮಗೆ ನಿದ್ದೆ ಬಾರದೆ ಎಚ್ಚರವಾಗಿ ನಿದ್ದೆಗೆಡುತ್ತದೆ.ಅಂದರೇ, ಮಿಂಚು-ಹರಿವಿನ ಚಳಕವು ನಮ್ಮ ಮತ್ತು 24 ಗಂಟೆಯ ನಾಳ್ಸುತ್ತು ಮರುಕಳಿಕೆಯ ನಂಟನ್ನು ತಪ್ಪಿಸಿದೆ! ಇದು ನಮ್ಮ ಮಯ್ಯಿ ವಿಕಸನವಾದ ಕೋಟಿಗಟ್ಟಲೆ ವರ್‍ಶಗಳಿಂದ ಬೆಳೆದು ಬಂದ ನಂಟು.

ಮೆದುಳಿನ ಕೆಳಬಾಗದಲ್ಲಿರುವ ಅಡಿ-ಮಿದುಳು (hypothalamus) ಎಂಬ ಎಡೆಯೇ ನಾಳ್ಸುತ್ತಿನ ಮರುಕಳಿಕೆಯ ನೆಲೆ. ಇದು ದಿನವೆಲ್ಲಾ ಕೆಲಸ ಮಾಡುತ್ತಿದ್ದು ನೇಸರ ಮುಳುಗುವ ಮುನ್ನ (ಇಳಿಹೊತ್ತು) ಇನ್ನಶ್ಟು ಚುರುಗಾಕಿ ಆಮೇಲೆ ಸುಮ್ಮನಾಗುತ್ತದೆ. ಇಳೊತ್ತಿನಲ್ಲಿ ಅಡಿಮೆದುಳು ಚುರುಕಾಗುವುದರಿಂದ ಹಿಂದಿನವರು ನೇಸರ ಮುಳುಗುವಾಗ ಮತ್ತು ಮುಳುಗಿದ ಕೊಂಚ ಹೊತ್ತಿನ ನಂತರವೂ ಎಚ್ಚರವಾಗಿದ್ದುಕೊಂಡು ಅಂದಿನ ಕೆಲಸಗಳನ್ನು ಮುಗಿಸಿಕೊಳ್ಳುತ್ತಿದ್ದರು.

ಆದರೆ, ನಮ್ಮ ಕಾಲದಲ್ಲಿ ಬಾನು ಮುಳುಗುತ್ತಲೇ ಮಿಂಚು-ಹರಿವಿನ ಬೆಳ್ಗೊಳವೆಗಳನ್ನು ಹಚ್ಚುವುದರಿಂದ ರಾಚುವ ಬೆಳಕು ಮತ್ತೆ ಚೆಲ್ಲುತ್ತದೆ. ಹೀಗೆ ಚೆಲ್ಲಿದ ಬೆಳಕು ಕಣ್ಣಿನ ಒಳಪದರದಲ್ಲಿರುವ ಮರುಸುತ್ತುಗೆಗಳ ಮೇಲೆ ಬಿದ್ದು ಕಣ್ಕಿಟಕಿ ಕಿರಿದಾಗುತ್ತದೆ ಮತ್ತು ಅಡಿ-ಮೆದುಳು ಚುರುಕಾಗುತ್ತದೆ. ಮೆಲನೋಪ್ಸಿನ್ ಎಂಬ ಎಚ್ಚರದ ಹಾರ್‍ನೋಮು ಸೋರಿಕೆಯಾಗುತ್ತದೆ. ಆದರೆ, ಮೆಲಟೋನಿನ್ ಎಂಬ ನಿದ್ದೆಯ ಹಾರ್‍ಮೋನಿನ ಸೋರಿಕೆಗೆ ತಡೆಯಾಗುತ್ತದೆ.

ಅಂದರೆ, ನಾವು ಬೆಳಿಗ್ಗೆ ಏಳುವಾಗ ನಮ್ಮ ಕಣ್ಣು ಮತ್ತು ಅಡಿ-ಮಿದುಳಿನಲ್ಲಿ ನಡೆವ ಹಮ್ಮುಗೆಗಳು ಕತ್ತಲಾಗುತ್ತಲೇ ರಾಚುವ ಬೆಳ್ಗೊಳವೆಗಳನ್ನು ಹಚ್ಚುವ ಗಳಿಗೆಯಲ್ಲಿ ನಡೆದುಬಿಡುತ್ತವೆ! ಇದರಿಂದ ಮರುಕಳಿಕೆಯು ದಿನವೂ ಹಳಿತಪ್ಪುವುದಲ್ಲದೆ ಮತ್ತೆ ಆರಂಬವಾಗುವುದರಿಂದ ದಿನಕ್ಕೆ ಎರಡು ಬಾರಿ ಸುತ್ತಿಬಂದಂತಾಗುತ್ತದೆ! ಅಂದರೆ, ನಾಳ್ಸುತ್ತು-ಮರುಕಳಿಕೆಯ ಲೆಕ್ಕದಲ್ಲಿ ನಮಗೆ ಬೇಗ ವಯಸ್ಸಾಗುತ್ತಿರುತ್ತದೆ. ಓದುಗರು ಗಾಬರಿಪಡುವ ಮೊದಲು ಒಂದು ಮಾತು ನೆನಪಿಡಬೇಕು. ನಾಳ್ಸುತ್ತು-ಮರುಕಳಿಕೆಯು ಪೂರ್‍ತಿ ಹಳಿತಪ್ಪುವುದಿಲ್ಲ. ಕೊಂಚ ಹಳಿತಪ್ಪುತ್ತದೆ. ಪೂರ್‍ತಿ ಹಳಿತಪ್ಪಿಸಬೇಕು ಅಂದರೆ ನೇಸರನು ಮುಳುಗಿದ ಗಳಿಗೆಯಲ್ಲೇ ಮತ್ತೆ ಹುಟ್ಟಿ ಬರಬೇಕು.

ಕೆಲವು ಬಾರಿ ಹಾಗೆ ಆಗುತ್ತದೆ ಗೊತ್ತೇ?! ಅಮೇರಿಕಾ ಮತ್ತು ಕರ್‍ನಾಟಕಗಳು ನೆಲದ ಆಚೀಚೆ ಇವೆ. ನೇಸರನ ಲೆಕ್ಕದಲ್ಲಿ ಸುಮಾರು 12 ಗಂಟೆ ದೂರ ಇವೆ. ಬಾನೋಡದಲ್ಲಿ ಬೆಂಗಳೂರಿನಿಂದ ಅಮೇರಿಕಾದ ಒಂದು ನಗರಕ್ಕೆ ಸರಾಸರಿ 24 ಗಂಟೆಯ ಪಯಣವಾಗುತ್ತದೆ. ಅಮೇರಿಕಾದಿಂದ ನೇಸರನು ಮುಳುಗುವ ಹೊತ್ತಿಗೆ ಒಬ್ಬರು ಹೊರಟರು ಅಂದಿಟ್ಟುಕೊಳ್ಳಿರಿ. 24 ಗಂಟೆಯ ಪಯಣದ ನಂತರ ಅವರು ಬೆಂಗಳೂರಿನಲ್ಲಿ ಇಳಿದಾಗ ನೇಸರ ಮತ್ತೆ ನೆಲದ ತುದಿಯಲ್ಲಿರುತ್ತದೆ.

ಪಯಣಿಗರಿಗೆ ನೇಸರ ಮುಳುಗುತ್ತಿದೆ ಅಂತಲೇ ಅನಿಸುತ್ತಿರುತ್ತದೆ. ಆದರೆ, ನೇಸರ ಹುಡುತ್ತಿರುತ್ತಾನೆ! ಕಣ್ಕಿಟಕಿ ಇರುಳಾಗುತ್ತಿದೆ ಎಂದೆಣಿಸಿ ಅಗಲವಾಗುತ್ತಿರುತ್ತದೆ. ಆದರೆ, ಬೆಳಕಾಗುವುದರಿಂದ ಪರಿಸರವೆಲ್ಲಾ ಹೆಚ್ಚು ಬೆಳಕಿಗೆ ರಾಚುತ್ತಿರುತ್ತದೆ. ಇಂತಾ ಪಯಣಿಗರಲ್ಲಿ ನಾಳ್ಸುತ್ತಿನ ಮರುಕಳಿಕೆಯು ಪೂರ್‍ತಿಯಾಗಿ  ಹಳಿತಪ್ಪಿರುತ್ತದೆ. ಇದಕ್ಕೆ ಬಾನೋಡ ಹಿನ್ನಡೆ ಬೇನೆ (jet lag sickness) ಅನ್ನುತ್ತಾರೆ. ಅಮೇರಿಕಾ-ಕರ್‍ನಾಟಕದ ನಡುವೆ ಪಯಣಿಸುವವರಿಗೆ ಇದು ತುಂಬು ಪ್ರಮಾಣದಲ್ಲಿರುತ್ತದೆ.

ಬೆಳಕನ್ನೇದಿಟ್ಟಿಸುವುದು1

ರಾಚುವ ಬೆಳ್ಗೊಳವೆಗಳನ್ನು ಹಚ್ಚುವುದರಿಂದ ಹಳಿತಪ್ಪುವುದು ಸಣ್ಣ ಅಳತೆಯಲ್ಲಿ ನಡೆಯುತ್ತಿರುತ್ತದೆ. ಇತ್ತೀಚಿನ ಚೂಟಿಯುಲಿಗಳ (smart phones) ಎಣ್ಣುಕಗಳ (computer) ಮತ್ತು ಗೆಂಟುಕಾಣ್ಕೆಗಳ (TV) ಪರದೆಗಳು ಬೆಳಕು ಸೂಸುವ ಇಬ್ಬದಿ, ಬೆಳಸೂಸಿಬ್ಬದಿಗಳಿಂದ (light emitting diode, LED) ಮಾಡಲ್ಪಟ್ಟಿರುತ್ತವೆ. ಅವುಗಳನ್ನು ನೋಡುವುದು ಅಂದರೆ ಬೆಳ್ಗೊಳವೆಗಳನ್ನೇ ಗುರಾಯಿಸಿದಂತೆ!

ಬೆಳಸೂಸಿಬ್ಬದಿಯಿಂದ ಮಾಡಿದ ಬೆಳ್ಗೊಳವೆಗಳಲ್ಲಿ ಹೆಚ್ಚಾಗಿ ನೀಲಿ ಮತ್ತು ನಸು-ಹಸಿರಿನ ಬಣ್ಣದ ಅಳತೆ ಹೆಚ್ಚಿರುತ್ತದೆ. ಇಂತಾ ಬಣ್ಣಗಳ ಅಲೆಯಳತೆ (wave length) ತುಂಡಗಿರುತ್ತದೆ. ಮರುಸುತ್ತುಗೆಯು ಇಂತಾ ಬಣ್ಣಗಳಿಂದ ಸುಳುವಾಗಿ ಚುರುಕುಗೊಳ್ಳುತ್ತದೆ. ಹಾಗಾಗಿ ಇವುಗಳಿಂದ ಕುತ್ತು ಹೆಚ್ಚು. ಇವುಗಳಿಗೆ ಹೋಲಿಸಿದರೆ ನಸುಗೆಂಪು ಬಣ್ಣದ ಅಳತೆ ಹೆಚ್ಚಿರುವ ಬೆಳ್ಗೊಳವೆಗಳು ವಾಸಿ.

ನಿದ್ದೆಯ ಕೊರತೆ ಜೊತೆಜೊತೆಗೆ ನಿದ್ದೆಯಲ್ಲಾಗುವ ಏರುಪೇರು ಹಲವು ಕುತ್ತಗಳನ್ನು ತಂದಿಡುತ್ತದೆ. ಸಕ್ಕರೆ, ರಕ್ತದೊತ್ತಡ, ಮಕ್ಕಳಲ್ಲಿ ಗಮನಿಕೆಯ-ಕೊರತೆ-ಅತಿಚುರುಕು-ಕುತ್ತ (attension deficid hyperactivity dissorder, ADHD), ಸುಸ್ತು, ವಯಸ್ಸಾಗುವುದು ಮುಂತಾದ ಬೇನೆಗಳೂ ಬಂದೊದಗುತ್ತವೆ. ಇರುಳಲ್ಲಿ ಕೆಲಸ ಮಾಡುವವರಿಗೆ ಏಡಿಹುಣ್ಣು (cancer) ಬರುವ ಸಾದ್ಯತೆ ಹೆಚ್ಚು ಎಂದು ಇಡೀನೆಲದ ಹದುಳ ಕೂಟ (WHO) ಹೇಳುತ್ತದೆ. ಗಾಡಿಗಳ ಗುದ್ದುವಿಕೆಗೆ ಕುಡಿದು ಓಡಿಸುವುದರ ನಂತರದಲ್ಲಿರುವ ಎರಡನೇ ಕಾರಣವೇ ನಿದ್ದೆಯಲ್ಲಿ ಓಡಿಸುವುದು.

ಶನಿವಾರ ಮತ್ತು ಬಾನುವಾರದ ರಜಾದಿನಗಳಲ್ಲಿ ತಡವಾಗಿ ಮಲಗಿ ತಡವಾಗಿ ಏಳುವುದರಿಂದಲೂ ನಾಳ್ಸುತ್ತಿನ ಮರುಕಳಿಕೆ ಹಳಿತಪ್ಪುತ್ತದೆ. ಬೆಳಕಿನಿಂದಾಗಿ ಮೊದಲೇ ಹಳಿತಪ್ಪಿ ಓಡುವ ಮರುಕಳಿಕೆಯನ್ನು ವಾರದ ಕೊನೆಗಳು ಇನ್ನೂ ಹೆಚ್ಚು ಹಳಿತಪ್ಪಿಸುತ್ತವೆ.

 ಪರಿಹಾರ ಏನು?

ಇರುಳಲ್ಲಿ ಬೆಳಕಿಲ್ಲದೆ ಇಂದಿನ ಕೂಡಣ ನಡೆಯದು. ಆದರೆ ಎಲ್ಲರೂ ತಕ್ಕ ಮಟ್ಟಿಗೆ ಹೊಂದಾಣಿಗೆ ಮಾಡಿಕೊಳ್ಳಬಹುದು. ನಸುಗೆಂಪು ಬಣ್ಣದ ಅಳತೆ ಹೆಚ್ಚಿರುವ ಬೆಳ್ಗೊಳವೆಗಳನ್ನು ಅಳವಡಿಸಿಕೊಳ್ಳುವುದರಿಂದ ಬೆಳಕಿನ ಮಯ್ಲಿಗೆಯನ್ನು ಕೊಂಚ ಹತೋಟಿಗೆ ತರಬಹುದು. ಬೆಳಕು ಬೇಕಿಲ್ಲದ ಕೆಲಸಗಳನ್ನು ಕತ್ತಲಲ್ಲೇ ಮಾಡುಬಹುದು. ಎತ್ತುಗೆಗೆ, ಅಲೆಯುಲಿಯಲ್ಲಿ ಮಾತಾಡುವುದನ್ನ ಕತ್ತಲಲ್ಲೇ ಮಾಡಬಹುದು. ಇರುಳಿನ 7:00 ಗಂಟೆಯ ಒಳಗೆ ಇರುಳೂಟ (dinner) ಉಂಡುಬಿಡಬೇಕು.

ಎಣ್ಣುಕ ಮತ್ತು ಗೆಂಟ್ಕಾಣ್ಕೆಯ ಕೆಲಸಗಳನ್ನ ಆದಶ್ಟೂ ಹಗಲೊತ್ತು ಮಾಡಿ ಮುಗಿಸುಬೇಕು. ಬೆಳಕರಿಯುವುದಕ್ಕೆ ಮುಂಚೆ ಏಳಬಾರದು. ಇರುಳ 12:00 ಗಂಟೆಯವರೆಗೂ ಎದ್ದಿರಬಾರದು. ವಾರದ ಕೊನೆಗಳಲ್ಲಿ ವಾರದ ಮಿಕ್ಕ ದಿನಗಳಂತೆಯೇ ಮಲಗಿ ಏಳಬೇಕು.

ತಿಟ್ಟ:  http://www.huffingtonpost.com/,  http://favim.com/image/21340/

ಹೆಚ್ಚಿನ ಓದಿಗೆ: http://www.nature.com/nature/journal/v497/n7450_supp/full/497S13a.html

ಸಿದ್ದರಾಜು ಬೋರೇಗವ್ಡ

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ನಾಳ್ಸುತ್ತಿನ ಮರುಕಳಿಗೆ = circadian rhythm….
    ಅಡಿ-ಮಿದುಳು (hypothalamus)
    ಬೆಳ್ಗೊಳವೆ= tube light?
    ಬಾನೋಡ ಹಿನ್ನಡೆ ಬೇನೆ (jet lag sickness)
    ಗಮನಿಕೆಯ-ಕೊರತೆ-ಅತಿಚುರುಕು-ಕುತ್ತ (attension deficid hyperactivity dissorder, ADHD)
    ಅಲೆಯಳತೆ (wave length)…ಈ ಪದಗಳು ತುಂಬಾ ಚೆನ್ನಾಗಿದೆ. 🙂
    ಇಡೀನೆಲದ ಹದುಳ ಕೂಟ (WHO)

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *