ಕತೆ: ಹೊಸಬಾಳು

– ಸುರಬಿ ಲತಾ.


ಸೂರ‍್ಯ ಮುಳುಗುವ ಸಮಯ. ದಿಬ್ಬದ ಮೇಲೆ ಕುಳಿತ ಕುಸುಮಾಗೆ ಹಿತವೆನಿಸಿತು. ತಂಗಾಳಿಗೆ ಮೈಯೊಡ್ಡಿ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕುಳಿತಳು. ಹಿಂದಿನ ನೆನಪುಗಳು ತೇಲಿ ಬಂತು.

ಅಮ್ಮ ಎಶ್ಟು ನೋವು ಅನುಬವಿಸಿದ್ದಳು. ತಾನು ಹುಟ್ಟಿದಾಗಿನಿಂದ ಅಮ್ಮನಿಗೆ ಅಪ್ಪನ ಮೂದಲಿಕೆಯ ಮಾತು ಶುರುವಾಗಿತ್ತು. ಹೆಣ್ಣು ಮಗು ಹುಟ್ಟಿದಾಗ ಅಪ್ಪನಿಗೆ ಆಗಲಿ ಅಜ್ಜಿಗಾಗಲಿ ಸಂತೋಶವಾಗಿರಲಿಲ್ಲ. ತಾಯಿಯನ್ನು ಚುಚ್ಚುಮಾತಿನಿಂದಲೇ ಮಾತನಾಡುವ ಅಬ್ಯಾಸ ಮಾಡಿಕೊಂಡಿದ್ದರು. ಅಮ್ಮ ಏನೂ ಮಾತಾಡದೇ ನೋವೆಲ್ಲ ನುಂಗಿ ಬದುಕುತ್ತಿದ್ದಳು. ನನ್ನ ನಗುವಲ್ಲೇ ತನ್ನ ನೋವನ್ನು ಮರೆಯುತ್ತಿದ್ದಳು.

ತಂದೆಯಿಂದಾಗಲಿ, ಅಜ್ಜಿಯಿಂದಾಗಲಿ ತನಗೆ ಸಿಕ್ಕ ಪ್ರೀತಿ ಅಶ್ಟಕಶ್ಟೇ. ಶಾಲೆಗೆ ಹೋಗುವ ದಿನಗಳಲ್ಲಿ ಅಮ್ಮ ತನ್ನ ಕೆಲಸದಲ್ಲೂ ನನ್ನ ತನ್ನ ಕಣ್ಣಿನಂತೆ ಕಾಪಾಡುತ್ತಿದ್ದಳು. ಸಂಜೆಯಲ್ಲಿ ನನ್ನ ಓದಿಸುತ್ತಿದ್ದಳು. ಮೊದಲಿನಿಂದಲೂ ನಾನು ಓದಿನಲ್ಲಿ ಮುಂದು. ನೂರಕ್ಕೆ ನೂರು ಅಂಕಗಳನ್ನು ಗಳಿಸುತ್ತಲೇ ಬಂದಿದ್ದೆ. ಆಗ ಅಮ್ಮನ ಆನಂದಕೆ ಪಾರವೇ ಇರುತ್ತಿರಲಿಲ್ಲ. ಕಣ್ಣು ತುಂಬಿ ಬಂದು ನನ್ನ ಮುದ್ದಿಸುತ್ತಿದ್ದಳು. ತಂದೆ ಕುಡಿನೋಟ ಬೀರಿ ಹೊರಟು ಹೋಗುತ್ತಿದ್ದರು. ‘ಎಶ್ಟು ಓದಿದರೇನು ಹೆಣ್ಣು ಬೇರೆ ಮನೆಯ ಕಣ್ಣಾಗುವಳು, ಅದರಿಂದ ನಮಗೇನು ಉಪಯೋಗವಿಲ್ಲ’ ಎನ್ನುತ್ತಿದ್ದರು. ಆ ಮಾತುಗಳು ಇನ್ನೂ ನನ್ನ ಮನದಲ್ಲಿ ಹಚ್ಚ ಹಸಿರಾಗೇ ಇದೆ.

ಅಮ್ಮ ಕೊರಗಿನಲ್ಲಿ ಕಳೆದ ದಿನಗಳೇ ಜಾಸ್ತಿ. ಅಮ್ಮನ ಆರೋಗ್ಯ ಕ್ಶೀಣಿಸುತ್ತಾ ಬಂದಿತ್ತು. ಅಮ್ಮನಿಗೆ ಒಂದೇ ಆಸೆ ನಾನು ಎತ್ತರಕ್ಕೆ ಬೆಳೆಯಬೇಕು. ಯಾರ ಹಂಗಿನಲ್ಲೂ ಇರಬಾರದು ಎಂದು. ಅದರಂತೆ ಇಂದು ನಾನು ದೊಡ್ಡ ಹೆಸರು ಮಾಡಿರುವ ಡಾಕ್ಟರ್. ಪದವಿ ಪಡೆದು ಅಮ್ಮನ ಬಳಿ ನಿಂತಾಗ ಅಮ್ಮನ ಕಣ್ಣಲ್ಲಿ ಸಾರ‍್ತಕ ಮನೋಬಾವ ಕಂಡಿತ್ತು. ಅಜ್ಜಿಯ ಕಣ್ಣಲ್ಲೂ ನೀರಾಡಿತ್ತು. ತನ್ನಲ್ಲಿ ಬಂದು ಕೈ ಹಿಡಿದು ‘ನನ್ನ ಕ್ಶಮಿಸುವೆಯಾ?’ ಎಂದು ಕೇಳಿತ್ತು ಮುದಿಜೀವ.

ನಾನು ಅವಳ ಕಾಲಿಗೆರಗಿ “ಹಾಗೆಲ್ಲ ಹೇಳಬಾರದು ಅಜ್ಜಿ. ನೀನು ನನಗೆ ಆಶೀರ‍್ವಾದ ಮಾಡು” ಎಂದು ಆಕೆಯ ಕಾಲಿಗೆ ಬಿದ್ದಿದ್ದೆ. ತಂದೆ ತಲೆ ತಗ್ಗಿಸಿ ನಿಂತಿದ್ದರು. ಕಾಲಿಗೆ ಬಿದ್ದಾಗಲೂ ಒಂದು ಮಾತು ಆಡದೆ ಹೊರಟಿದ್ದರು. ಇಂದು ಅಮ್ಮನಾಗಲಿ ಅಜ್ಜಿಯಾಗಲಿ ನನ್ನ ಪಾಲಿಗೆ ಇಲ್ಲ. ಅವರನ್ನು ಕಳಕೊಂಡ ನಾನು ಅನಾತಳಾಗಿರುವೆ. ಟ್ರೇನಿಂಗ್ ಎಂದು ಬೇರೆ ಊರಿಗೆ ಬಂದಾಗಿತ್ತು. ಅಪ್ಪನ ಮುಕ ಇಂದಿನವರೆಗೂ ನೋಡಿಲ್ಲ.

ಕುಸುಮಾಗೆ ತಿಳಿಯದಂತೆ ಕಣ್ಣೀರು ಅವಳ ಒಡಲ ತುಂಬಿತ್ತು. ಎಶ್ಟು ಹೊತ್ತು ಕುಳಿತಳೋ ತಿಳಿದಿಲ್ಲ. ಸುತ್ತಲೂ ಕತ್ತಲಾವರಿಸಿತ್ತು. ಎದ್ದು ಕಣ್ಣೀರು ಒರೆಸಿ ಹೊರಡಲು ಅನುವಾದಳು. ಹಿಂದೆ ತಿರುಗಲು ಅಲ್ಲಿ ಒಂದು ಆಕ್ರುತಿ ಕಾಣಿಸಿತು. ಕತ್ತಲಲ್ಲಿ ಯಾರೆಂದು ಸರಿಯಾಗಿ ಕಾಣಿಸಲಿಲ್ಲ. ಸ್ವಲ್ಪ ಬಯವೂ ಆಯಿತು. ಮುಂದೆ ಹೆಜ್ಜೆ ಇಟ್ಟು ನಡೆಯತೊಡಗಿದಳು. ಆ ಆಕ್ರುತಿಯು ತನ್ನ ಬಳಿ ಬರತೊಡಗಿತು. ಪರಿಚಿತ ನಡಿಗೆ..ಆಕಾರ..ಸ್ವಲ್ಪವೇ ಬೆಳಕಿನಲ್ಲಿ ಆ ವ್ಯಕ್ತಿಯ ಮುಕ ಗುರುತು ಸಿಕ್ಕಾಗ ಅವಳಲ್ಲಿ ಆನಂದ ಉಕ್ಕಿ ಹರಿಯಿತು. ತನ್ನ ತಂದೆ!!

ತಾನು ಕಾಣುತ್ತಿರುವುದು ನಿಜವೇ ??? ಆತ ತನ್ನ ಕೈ ಹಿಡಿದು ಬಿಕ್ಕಳಿಸುವ ತನಕಾ ಗೊಂದಲದಲ್ಲೇ ಇದ್ದಳು.

“ಕುಸುಮಾ..ಅಮ್ಮ ಬಿಟ್ಟು ಹೋದಳು..ಇವಳೂ(ಹೆಂಡತಿ) ಬಿಟ್ಟು ಹೋದಳು..ನೀನು ನನ್ನ ಅನಾತನಾಗಿ ಮಾಡುವೆಯಾ ಮಗಳೇ? ನನ್ನ ಮೇಲೆ ಕೋಪ ಹೋಗಿಲ್ಲವಾ ನಿನಗೆ?”

ಮುಂದೆ ಮಾತನಾಡದೇ ತಲೆ ತಗ್ಗಿಸಿ ಕಣ್ಣೀರು ಸುರಿಸುತ್ತಿದ್ದ ತಂದೆಯ ಕೈ ಹಿಡಿದುಕೊಂಡಳು.

“ಅಪ್ಪಾ..” ಎಂದವಳಿಗೆ ತಾನೂ ಬಿಕ್ಕಳಿಸುತ್ತಿರುವುದು ಅರಿವಿಗೆ ಬಂತು.

ವ್ರುದ್ದ ತಂದೆಯ ಮೇಲೆ ನನಗೆ ಕೋಪವೇ?? ಕಂಡಿತಾ ಇಲ್ಲ. ನನ್ನ ಜೀವವಿರುವವರೆಗೂ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಮನದಲ್ಲಿ ನಿಶ್ಚಯ ಮಾಡಿಕೊಂಡು ತಂದೆಯ ಕೈ ಹಿಡಿದು ನಡೆದಳು.

( ಚಿತ್ರ ಸೆಲೆ: preemieprimer.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *