ಮೂರು ಮುದ್ದು ಜಿಂಕೆ ಮರಿಗಳು – ಮಕ್ಕಳ ಕತೆ

ಸಪ್ನ ಕಂಬಿ

deer

ಒಂದು ಕಾಡಿನಲ್ಲಿ ಮೂರು ಜಿಂಕೆ ಮರಿಗಳು ಇದ್ದವು. ಪುಟ್ಟ, ಗುಂಡ ಹಾಗೂ ತಿಮ್ಮ. ಅವುಗಳ ತಂದೆ ತಾಯಿ ಉರಿ ಬೇಸಿಗೆಯ ಕಾಡ್ಗಿಚ್ಚಿನಲ್ಲಿ ಸಿಲುಕಿ ಸಾವನ್ನಪ್ಪಿದ್ದವು. ಅದಲ್ಲದೆ ಬೆಂಕಿಯಿಂದ ತಪ್ಪಿಸಿಕೊಳ್ಳುವ ರಗಳೆಯಲ್ಲಿ, ಮರಿಗಳು ತಮ್ಮ ಗುಂಪಿನಿಂದ ಕೂಡ ಬಲು ದೂರ ಹೋಗಿಬಿಟ್ಟಿದ್ದವು. ಇಂತಹ ಸಮಯದಲ್ಲಿ ಬರುವ ಮಳೆ ಹಾಗೂ ಚಳಿಗಾಲವನ್ನು ಕಳೆಯುವ ಚಿಂತೆ ಬೇರೆ. ಹೀಗೆ ದಣಿದ ಮರಿಗಳನ್ನು ಗಮನಿಸುತ್ತಿದ್ದ ಒಂದು ಕಳ್ಳ ನರಿ, ಅವುಗಳನ್ನು ತಿನ್ನಲು ಸರಿಯಾದ ಸಮಯಕ್ಕೆ ಕಾಯುತ್ತಾ ಹೊಂಚು ಹಕುತ್ತಿತ್ತು.

ಈ ಮೂರು ಮರಿಗಳಲ್ಲಿ “ಪುಟ್ಟ” ಜಾಣ ಹಾಗು ಜವಾಬ್ದಾರಿ ಇರುವ ಮರಿಯಾಗಿತ್ತು. ಗುಂಡ  ಮತ್ತು ತಿಮ್ಮ ಸೋಮಾರಿಗಳಾಗಿದ್ದು ಯಾವಾಗಲೂ ಆಟ ಆಡುತ್ತಾ ಕಾಲ ಕಳಿಯುತ್ತಿದ್ದರು. ಪುಟ್ಟ ಯಾವಾಗಲೂ ಶ್ರಮ ಪಟ್ಟು ಎಲ್ಲರಿಗೂ ಊಟ ತರುವುದು, ಚಳಿಗಾಲಕ್ಕೆ ಬೇಕಾಗುವ ವಸ್ತುಗಳನ್ನು ಕೂಡಿಡುವುದು ಮತ್ತು ಕಳ್ಳ ನರಿಯಿಂದ ತಮ್ಮೆಲ್ಲರ ರಕ್ಶಣೆ ಮಾಡಿಕೊಳ್ಳಲು ಇಟ್ಟಿಗೆಯ ಮನೆ ಕಟ್ಟುವುದು, ಹೀಗೆ ಇತರೆ ಕೆಲಸಗಳನ್ನು ಮಾಡುತಿದ್ದ. ಜವಾಬ್ದಾರಿ ಹಾಗೂ ದೂರಾಲೋಚನೆ ಇರುವ ಪುಟ್ಟನನ್ನು ಗುಂಡ ಹಾಗು ತಿಮ್ಮ “ಪುಟ್ಟ ಯಾವಾಗಲೂ ಕೆಲಸ ಮಾಡುತ್ತಿರುತ್ತಾನೆ , ಅವನಿಗೆ ಆಟ ಆಡುವುದಕ್ಕೆ ಬರುವುದಿಲ್ಲ , ಅವನೊಬ್ಬ ಮೂರ್‍ಕ” ಎಂದು ಯಾವಾಗಲು ಟೀಕೆ ಮಾಡುತ್ತಿದ್ದರು. ಇದ್ಯಾವುದಕ್ಕು ಗಮನ ಕೊಡದೆ ಪುಟ್ಟ ತನ್ನ ಕೆಲಸಗಳನ್ನು ಮಾಡುತಿದ್ದ.

ಒಂದು ದಿನ ಗುಂಡ ಹಾಗು ತಿಮ್ಮ , ಕೆಲಸ ಮಾಡುತ್ತಿರುವ ಪುಟ್ಟನಿಗೆ ಸಹಾಯ ಮಾಡದೆ ಆಟವಾಡುತ್ತ “ನೀನು ಇಶ್ಟು ದಿನಗಳಿಂದ ಕಟ್ಟಿತ್ತಿರುವ ಮನೆಯನ್ನು ನಾವು ಒಂದೇ ದಿನದಲ್ಲಿ ಕಟ್ಟುತ್ತೇವೆ. ಇದು ಬಲು ಸುಲಬದ ಕೆಲಸ ” ಎಂದು ಪುಟ್ಟನನ್ನು ಕೆಣಕಿದರು. ಈ ಮಾತುಗಳನ್ನು ಕೇಳಿ ಸಿಟ್ಟು ಬಂದ ಪುಟ್ಟ “ಹಾಗಿದ್ದರೆ ನೀವು ನಿಮ್ಮ ನಿಮ್ಮ ಮನೆಗಳನ್ನು ನೀವೇ ಕಟ್ಟಿಕೊಳ್ಳಿ , ಆಗ ನಿಮಗೆ ಅದರ ಶ್ರಮವೇನೆಂದು ತಿಳಿಯುತ್ತದೆ” ಎಂದು ಹೇಳಿದ. ಇದು ಯಾವ ಮಹಾ ಕಾರ್‍ಯ ಎಂದು ತಿಮ್ಮ ಮತ್ತು ಗುಂಡ ತಮ್ಮ ತಮ್ಮ ಮನೆಗಳನ್ನು ಕಟ್ಟಲು ಹೊರಟರು.

ಸೋಮಾರಿ ಗುಂಡ “ಬೇಗ ಮನೆ ಕಟ್ಟಿದರೆ ಚೆನ್ನಾಗಿ ನಿದ್ದೆ ಮಾಡಬಹುದು” ಎಂದು ಬೇರೆ ಯಾವ ವಿಚಾರವನ್ನೂ ಗಮನದಲ್ಲಿ ಇಟ್ಟುಕೊಳ್ಳದೆ ಅತಿ ಸುಲಬವಾಗಿ ಹುಲ್ಲಿನಿಂದ ಮನೆಯನ್ನು ಕಟ್ಟುತ್ತಾನೆ. ತುಂಟನಾದ ತಿಮ್ಮ “ಬೇಗ ಮನೆ ಕಟ್ಟಿ ಮುಗಿಸಿದರೆ ಆಟ ಆಡಬಹುದು” ಎಂದು ಬೇರೆ ಯಾವ ವಿಚಾರವನ್ನೂ ಗಮನದಲ್ಲಿ ಇಟ್ಟುಕೊಳ್ಳದೆ ಒಣಗಿ ಬಿದ್ದಿರುವ ಮರದ ಕಡ್ಡಿಗಳು ಹಾಗು ಸಣ್ಣ ಕೊಂಬೆಗಳಿಂದ ಮನೆ ಕಟ್ಟುತ್ತಾನೆ.

ಪುಟ್ಟ ಕೂಡ ಮೊದಲಿನಿಂದಲು ಕಟ್ಟುತ್ತಿದ್ದ ತನ್ನ ಇಟ್ಟಿಗೆಯ ಮನೆಯನ್ನು ಪೂರ್‍ಣಗೊಳಿಸುತ್ತಾನೆ. ಆ ದಿನ ರಾತ್ರಿ ಎಲ್ಲರು ತಮ್ಮ ತಮ್ಮ ಮನೆಯಲ್ಲಿ ಮಲಗುತ್ತಾರೆ. ಕಳ್ಳ ನರಿ ಇಡಿ ದಿನ ಇದೆಲ್ಲವನ್ನು ದೂರದಿಂದ ಮರದಡಿಯಲ್ಲಿ ಬಚ್ಚಿಟ್ಟುಕೊಂಡು ನೋಡುತ್ತಿತ್ತು. ಈ ರಾತ್ರಿ ಮೂರು ಮರಿಗಳು ಬೇರೇ ಬೇರೇ ಮಲಗಿದ್ದವು. ಅದಲ್ಲದೆ ಅವರ ಮನೆಗಳು ಬಲು   ಸುಲಬವಾಗಿ ಬೀಳಿಸಬಹುದಾಗಿತ್ತು. “ಇಂತಹ ಸಮಯ ಮತ್ತೆ ಸಿಗುವುದಿಲ್ಲ, ಇಂದು ಈ ಮರಿಗಳನ್ನು ಕೊಂದು ತಿಂದು ಬಿಡಬೇಕು” ಎಂದು ನರಿ ಹೊಂಚು ಹಾಕಿತು. ಕಳ್ಳ ನರಿ ಮೊದಲಿಗೆ ಸುಲಬ ಬೇಟೆಯಾದ ಗುಂಡನ ಮನೆಗೆ ಹೋಗಿ ಬಾಗಿಲನ್ನು ಬಡಿಯಿತು.

ಸೋಮಾರಿ ಗುಂಡ ನಿದ್ದೆಯಿಂದ ಎದ್ದು ಕಿಟುಕಿಯಲ್ಲಿ ನೋಡುತ್ತಾನೆ. ಕಳ್ಳ ನರಿಯನ್ನು ಕಂಡು ತರ ತರ ನಡುಗುತ್ತಾನೆ. ಕಳ್ಳ ನರಿ ಗುಂಡನಿಗೆ ಬಾಗಿಲು ತೆಗೆಯುವಂತೆ ಆದೇಶಿಸುತ್ತದೆ. ಆದರೆ ಗುಂಡ ಬಾಗಿಲು ತೆಗೆಯುವುದಿಲ್ಲ. ಸಿಟ್ಟು ಬಂದ ನರಿ ಗುಂಡನ ಹುಲ್ಲಿನ ಮನೆಯನ್ನು ತನ್ನ ಉಸಿರನ್ನು ಗಟ್ಟಿಯಾಗಿ ಊದಿ ಕೆಡವಿ ಬಿಡುತ್ತದೆ. ಇದನ್ನು ನೊಡುತ್ತಿದ್ದ ಗುಂಡ ಹೆದರಿ ಹೇಗೊ ತಪ್ಪಿಸಿಕೊಂಡು ಓಡುತ್ತಾನೆ. ಆದರೆ ನರಿ ಅವನ ಹಿಂದೆ ಬರುತ್ತದೆಯಾದರು ಸಣ್ಣ ವಯಸ್ಸಿನ ಜಿಂಕೆಯ ಓಟದ ಮುಂದೆ ಮುದಿ ನರಿ ಹಿಂದುಳಿಯುತ್ತದೆ. ಇಶ್ಟರಲ್ಲಿ ಗುಂಡ ತಿಮ್ಮನ ಮನೆಯನ್ನು ಹೋಗಿ ಸೇರುತ್ತಾನೆ.

ಅವರಿಬ್ಬರು ಮನೆಯ ಬಾಗಿಲನ್ನು ಗಟ್ಟಿಯಾಗಿ ಹಾಕಿ ಕಡ್ಡಿ ಕೊಂಬೆಗಳಿಂದ ಮಾಡಿದ ಮನೆಯನ್ನು ನರಿ ಏನೂ ಮಾಡುವುದಕ್ಕೆ ಸಾದ್ಯ ಇಲ್ಲ ಎಂದು ಮಲಗುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ ನರಿ ತಿಮ್ಮನ ಮನೆಗೆ ಬಂದು ಬಾಗಿಲು ಬಡಿಯುತ್ತದೆ. ಇವರಿಬ್ಬರು ಕಿಟುಕಿಯಲ್ಲಿ ಕಳ್ಳ ನರಿಯನ್ನು ನೋಡಿ ಹೆದರುತ್ತಾರೆ. ಕಳ್ಳ ನರಿ ಇವರಿಗೆ ಬಾಗಿಲು ತೆಗೆಯುವಂತೆ ಆದೇಶಿಸುತ್ತದೆ. ಆದರೆ ಗುಂಡ ಮತ್ತು ತಿಮ್ಮ ಗಟ್ಟಿಯಾಗಿ ಬಾಗಿಲನ್ನು ಒತ್ತಿ ಹಿಡಿಯುತ್ತಾರೆ.

ಸಿಟ್ಟು ಬಂದ ನರಿ ಕಡ್ಡಿ ಮತ್ತು ಸಣ್ಣ ಕೊಂಬೆಗಳಿಂದ ಮಾಡಿದ ಮನೆಯ ಮೇಲೆ ಎಗರಿ ಮನೆಯನ್ನು ದ್ವಂಸ ಮಾಡಿಬಿಡುತ್ತದೆ. ಗುಂಡ ಮತ್ತು ತಿಮ್ಮ ಮತ್ತೆ ಹೇಗೊ ತಪ್ಪಿಸಿಕೊಂಡು ಓಡಿ ಪುಟ್ಟನ ಮನೆಯ ಬಾಗಿಲನ್ನು ಬಡಿಯುತ್ತಾರೆ. ಎಚ್ಚರವಾಗಿದ್ದ ಪುಟ್ಟ ಕಂಗಾಲಾಗಿದ್ದ ಇವರನ್ನು ಕಂಡು ತಕ್ಶಣ ಬಾಗಿಲು ತೆರೆಯುತ್ತಾನೆ. ಗುಂಡ ಮತ್ತು ತಿಮ್ಮ ನಡೆದ ಎಲ್ಲಾ ಕತೆಯನ್ನು ಪುಟ್ಟನಿಗೆ ಹೇಳುತ್ತಾರೆ. ಅಶ್ಟರಲ್ಲಿ ಕಳ್ಳ ನರಿ ಪುಟ್ಟನ ಮನೆಗೆ ಕೂಡ ಬರುತ್ತದೆ. ಬಾಗಿಲು ತೆಗೆಯುವಂತೆ ಇವರಿಗೆಲ್ಲ ಆದೇಶಿಸುತ್ತದೆ. ಮನೆಯನ್ನು ಪುಡಿ ಪುಡಿ ಮಾಡುವೆ ಎಂದು ನರಿ ಬೆದರಿಸುತ್ತದೆ. ನರಿಯ ಬೆದರಿಕೆಗೆ ಹೆದರದ ಪುಟ್ಟ ಕಳ್ಳ ನರಿಗೆ “ನೀನು ಏನು ಮಾಡುವುದಕ್ಕೂ ಆಗುವುದಿಲ್ಲ , ಇದು ಇಟ್ಟಿಗೆಯ ಮನೆ. ನಾವು ನಿನಗೆ ಹೆದರುವುದಿಲ್ಲ” ಎಂದು ಹೇಳುತ್ತಾನೆ.

ಸಿಟ್ಟಿಗೆ ಬಂದ ನರಿ ಮನೆಯನ್ನು ಊದಿ ಬೀಳಿಸಲು ನೊಡುತ್ತದೆ. ಆದರೆ ಪುಟ್ಟನ ಮನೆ ಬೀಳುವುದಿಲ್ಲ. ನಂತರ ನರಿ ಮನೆಯ ಮೇಲೆ ಎಗರಿ ತಳ್ಳಲು ಪ್ರಯತ್ನ ಮಾಡುತ್ತದೆ. ಆದರೂ ಪುಟ್ಟನ ಇಟ್ಟಿಗೆಯ ಮನೆ ಬೀಳುವುದಿಲ್ಲ. ಹೀಗೆ ಹಲವು ಸಲ ಪ್ರಯತ್ನ ಪಟ್ಟು ಪಟ್ಟು ದಣಿದು ಸೋತು ಕಳ್ಳ ನರಿ ಇನ್ನು ಜಿಂಕೆ ಮರಿಗಳು ತನ್ನ ಕಯ್ಗೆ ಸಿಗುವುದಿಲ್ಲ ಎಂದು ತಿಳಿದು ಬಂದ ದಾರಿ ಹಿಡಿದು ತನ್ನ ಕಾಡಿನ ಕಡೆಗೆ ಹೊರಟುಹೋಗುತ್ತದೆ. ಗುಂಡ ಮತ್ತು ತಿಮ್ಮ ರಿಗೆ ತಮ್ಮ ತಪ್ಪಿನ ಅರಿವಾಗಿ ಪುಟ್ಟನಿಗೆ ಮನ್ನಿಸುವಂತೆ ಕೇಳಿಕೊಳ್ಳುತ್ತಾರೆ. ಪುಟ್ಟ ಅವರನ್ನು ಮನ್ನಿಸಿ ಎಲ್ಲರೂ ಒಟ್ಟಿಗೆ ಪುಟ್ಟ ಕಟ್ಟಿದ ಇಟ್ಟಿಗೆಯ ಮನೆಯಲ್ಲಿ ನರಿಯ ಬಯದಿಂದ ಮುಕ್ತರಾಗಿ ಇರುತ್ತರೆ. ಅಶ್ಟೇ ಅಲ್ಲದೆ ಗುಂಡ ಹಾಗು ತಿಮ್ಮ , ಪುಟ್ಟನಿಗೆ ಎಲ್ಲ ಕೆಲಸಗಳಲ್ಲೂ ಸಹಾಯ ಮಾಡಿಕೊಂಡು ಮತ್ತು ಜವಾಬ್ದಾರಿಗಳನ್ನು ಹಂಚಿಕೊಂಡು ಸಂತೋಶದಿಂದ ಬಾಳುತ್ತಾರೆ.

(ಮೂಲ: ಇಂಗ್ಲೀಶ್ ಕತೆ “The Three Little Pigs”)

(ಚಿತ್ರ: www.123rf.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: