ನಗೆಯ ಮಾರಿತಂದೆಯ ವಚನಗಳ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ನಗೆಯ ಮಾರಿತಂದೆ

ಕಾಲ: ಕ್ರಿ.ಶ.ಹನ್ನೆರಡನೆಯ ಶತಮಾನ

ಕಸುಬು: ಜನರನ್ನು ನಕ್ಕುನಲಿಯುವಂತೆ ಮಾಡುವ ಕಲೆಯಲ್ಲಿ ಪರಿಣತಿ/ನಿಪುಣತೆ/ಕುಶಲತೆ

ದೊರೆತಿರುವ ವಚನಗಳು: 99

ವಚನಗಳ ಅಂಕಿತನಾಮ: ಆತುರವೈರಿ ಮಾರೇಶ್ವರ

=================================================

ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ
ಇದು ಮೆಲ್ಲಮೆಲ್ಲನೆ ಕಲ್ಲಾಗಿ ಬರುತ್ತಿದೆ
ಇದ ನಾನೊಲ್ಲೆ
ಬಲ್ಲವರು ಹೇಳಿ
ಉಂಬಡೆ ಬಾಯಿಲ್ಲ
ನೋಡುವಡೆ ಕಣ್ಣಿಲ್ಲ
ಎನ್ನ ಬಡತನಕ್ಕೆ ಬೇಡುವಡೆ ಏನೂ ಇಲ್ಲ
ಆತುರ ವೈರಿ ಮಾರೇಶ್ವರಾ.

ಮಾನವನ ಬದುಕಿನಲ್ಲಿ ಬಡತನದಿಂದ ಉಂಟಾಗುವ ನೋವು, ಅಪಮಾನ ಮತ್ತು ಸಂಕಟಗಳ ನಿವಾರಣೆಯು ದೇವರಿಂದ ಆಗುವುದಿಲ್ಲ. ಏಕೆಂದರೆ ದೇವರು ಎಂಬುವನು ಮಾನವನ ಮನದ ಕಲ್ಪನೆಯಿಂದ ಮೂಡಿರುವ ವ್ಯಕ್ತಿ/ಶಕ್ತಿಯೇ ಹೊರತು ವಾಸ್ತವದಲ್ಲಿ ಇಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಕಾರ‍್ಯ-ಕಾರಣದ ನೆಲೆಯಲ್ಲಿ ಒರೆಹಚ್ಚಿ ನೋಡಲಾಗಿದೆ.

‘ಕಾರ‍್ಯ-ಕಾರಣದ ನೆಲೆ’ ಎಂದರೆ ನಾವು ಹುಟ್ಟಿ ಬೆಳೆದು ಬಾಳಿ ಸಾಯುತ್ತಿರುವ ಈ ಲೋಕದಲ್ಲಿ ಯಾವುದೇ ಒಂದು ಕಾರ‍್ಯ/ಕೆಲಸ/ಎಸಕ/ಗೆಯ್ಮೆಯು ನಡೆಯಬೇಕಾದರೆ, ಅದಕ್ಕೆ ಕಾರಣವಾಗುವ ವ್ಯಕ್ತಿ/ಜೀವಿ/ವಸ್ತುಗಳು ಇರಲೇಬೇಕು ಮತ್ತು ಅವುಗಳ ನಡುವೆ ನಂಟು ಉಂಟಾಗಲೇಬೇಕು.

ನಮ್ಮ ಕಣ್ಣ ಮುಂದಿನ ನಿಸರ‍್ಗದಲ್ಲಿ ನಿತ್ಯನಿರಂತರವಾಗಿ ನಡೆಯುತ್ತಿರುವ ಪ್ರತಿಯೊಂದು ಕ್ರಿಯೆಗೆ ಎರಡು ಇಲ್ಲವೇ ಅನೇಕ ವಸ್ತುಗಳ ಕೂಡುವಿಕೆ/ಸೇರುವಿಕೆ ಕಾರಣವಾಗಿರುತ್ತದೆ. ಮಾನವ ಸಮುದಾಯದ ಬದುಕಿನಲ್ಲಿ ಉಂಟಾಗುತ್ತಿರುವ ಆಗುಹೋಗುಗಳಿಗೆ ವ್ಯಕ್ತಿ/ಜೀವಿ/ವಸ್ತುಗಳ ನಡುವಣ ನಂಟು ಮತ್ತು ಮಾನವನ ನಡೆನುಡಿಗಳೇ ಕಾರಣವಾಗಿರುತ್ತವೆ.

ಮಾನವರ ಬದುಕಿನಲ್ಲಿ ಮತ್ತು ನಿಸರ‍್ಗದ ಸಂಗತಿಗಳಲ್ಲಿ ಕಾರ‍್ಯ-ಕಾರಣಗಳ ನಂಟನ್ನು ನೇರವಾಗಿ ಗುರುತಿಸಲಾಗುತ್ತದೆ/ಕಾಣಲಾಗುತ್ತದೆ. ಆದರೆ ಇದೇ ರೀತಿಯಲ್ಲಿ ಮಾನವ ಮತ್ತು ದೇವರ ನಡುವಣ ನಂಟಿನಲ್ಲಿ ಯಾವುದೇ ಬಗೆಯ ಕಾರ‍್ಯ-ಕಾರಣಗಳನ್ನು ಕಾಣಲಾಗದು/ಗುರುತಿಸಲಾಗದು ಎಂಬುದು ವಚನಕಾರನ ನಿಲುವು.

(ಎನ್ನ=ನನ್ನ; ಕೈ+ಅಲ್ಲಿ; ಕೈ=ಕರ/ಹಸ್ತ; ಕೊಟ್ಟುದ=ಕೊಟ್ಟಿರುವುದನ್ನು/ನೀಡಿರುವುದನ್ನು; ದೇವರು+ಎಂದು+ಇದ್ದೆ; ದೇವರು=ಜೀವನದಲ್ಲಿ ಬರುವ ಎಡರು ತೊಡರುಗಳನ್ನು ನಿವಾರಿಸಿ, ತಮಗೆ ಒಳಿತನ್ನು ಮಾಡಿ ಕಾಪಾಡುವ ವ್ಯಕ್ತಿಯನ್ನು/ಶಕ್ತಿಯನ್ನು ದೇವರೆಂದು ಮಾನವ ಸಮುದಾಯ ನಂಬಿದೆ; ಎಂದಿದ್ದೆ=ಎಂದು ತಿಳಿದುಕೊಂಡಿದ್ದೆ/ನಂಬಿಕೊಂಡಿದ್ದೆ/ಅಂದುಕೊಂಡಿದ್ದೆ;

ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರು ತಮ್ಮ ಅಂಗಯ್ ಮೇಲೆ ಚಿಕ್ಕದಾದ ಲಿಂಗವನ್ನು ಇಟ್ಟುಕೊಂಡು ಪೂಜಿಸುತ್ತಿದ್ದರು. ಇದನ್ನು ಇಶ್ಟಲಿಂಗವೆಂದು ಕರೆಯಲಾಗುತ್ತಿತ್ತು; ಇದು=ನನ್ನ ಕಯ್ಯಲ್ಲಿರುವ ಶಿವನ ಸಂಕೇತವಾದ ಲಿಂಗ; ಮೆಲ್=ಬಿಡುವು/ವಿರಾಮ/ಸಾವಕಾಶ/ನಿದಾನ/ತಡ; ಮೆಲ್ಲನೆ=ವಿರಾಮವಾಗಿ/ತಡವಾಗಿ/ನಿದಾನವಾಗಿ; ಮೆಲ್ಲಮೆಲ್ಲನೆ=ಚೆನ್ನಾಗಿ ಗಮನಿಸಲು ತೊಡಗಿದಾಗ/ಏನೆಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ; ಕಲ್ಲ್+ಆಗಿ; ಕಲ್ಲು=ಶಿಲೆ; ಕಲ್ಲಾಗಿ ಬರುತ್ತಿದೆ=ಕೇವಲ ಕಲ್ಲಾಗಿ ಮಾತ್ರ ಕಾಣುತ್ತಿದೆ. ಅಂದರೆ ಇದರಲ್ಲಿ ದೇವರ ಇರುವಿಕೆಯು ಕಂಡುಬರುತ್ತಿಲ್ಲ;

ಇದ=ಕಲ್ಲಿನ ರೂಪದಲ್ಲಿರುವ ವಸ್ತುವನ್ನು; ನಾನ್+ಒಲ್ಲೆ; ನಾನ್=ನಾನು; ಒಲ್ಲೆ=ಒಲ್+ಎ; ಒಲ್=ಒಪ್ಪು/ಅಂಗೀಕರಿಸು/ಸ್ವೀಕರಿಸು/ಪಡೆಯುವುದು; ಒಲ್ಲೆ=ಒಪ್ಪಿಕೊಳ್ಳುವುದಿಲ್ಲ/ಸ್ವೀಕರಿಸುವುದಿಲ್ಲ/ಪಡೆಯುವುದಿಲ್ಲ/ಇಟ್ಟುಕೊಳ್ಳುವುದಿಲ್ಲ; ಇದ ನಾನೊಲ್ಲೆ=ನನ್ನ ಬದುಕಿನ ಆಗುಹೋಗುಗಳಿಗೆ ವಿಗ್ರಹ ರೂಪಿಯಾದ ದೇವರ ಅಗತ್ಯವಿಲ್ಲ; ‘ಶಿವಶರಣ-ಶರಣೆಯರು ವ್ಯಕ್ತಿಯು ತನಗೆ ಮತ್ತು ತನ್ನ ಕುಟುಂಬಕ್ಕೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಸಾಮಾಜಿಕ ನಡೆನುಡಿಗಳಲ್ಲಿ ದೇವರನ್ನು ಕಾಣುತ್ತಿದ್ದರು’ ಎಂಬ ನಿಲುವನ್ನು ಈ ಸೊಲ್ಲು ಸೂಚಿಸುತ್ತಿದೆ;

ಬಲ್ಲ+ಅವರು; ಬಲ್=ತಿಳಿ/ಅರಿ; ಬಲ್ಲವರು=ತಿಳಿದವರು/ಅರಿತವರು/ಗೊತ್ತಿರುವವರು; ಹೇಳಿ=ಉತ್ತರಿಸಿ/ತಿಳಿಸಿ; ಉಣ್=ತಿನ್ನು/ಊಟ ಮಾಡು/ಸೇವಿಸು/ಮೆಲ್ಲು; ಉಂಬಡೆ=ಉಣಿಸು ತಿನಸುಗಳನ್ನು ತಿನ್ನಬೇಕೆಂದರೆ/ಉಣ್ಣಬೇಕೆಂದರೆ; ಬಾಯ್+ಇಲ್ಲ; ನೋಡುವಡೆ=ನೋಡಬೇಕೆಂದರೆ/ಕಾಣಬೇಕೆಂದರೆ; ಕಣ್ಣ್+ಇಲ್ಲ; ಎನ್ನ=ನನ್ನ; ಬಡತನ=ಆಸ್ತಿಪಾಸ್ತಿ/ಹಣಕಾಸು/ಒಡವೆ ವಸ್ತುಗಳಿಲ್ಲದೆ ಉಣಲು/ಉಡಲು/ವಾಸಿಸಲು ಬೇಕಾದ ವಸ್ತುಗಳಿಂದ ವಂಚಿತರಾಗಿ ನೋವು ಅಪಮಾನ ಸಂಕಟಗಳಿಂದ ಕೂಡಿರುವುದು; ಬೇಡು=ಕೇಳು/ಯಾಚಿಸು/ಬಯಸು; ಬೇಡುವಡೆ=ಯಾಚಿಸಿದರೆ/ಕೇಳಿಕೊಂಡರೆ/ಬಯಸಿದರೆ; ಏನೂ ಇಲ್ಲ=ಬಯಸಿದ/ಬೇಡಿದ/ಯಾಚಿಸಿದ ಯಾವೊಂದು ವಸ್ತುವೂ ದೊರೆಯುವುದಿಲ್ಲ; ಉಂಬಡೆ ಬಾಯಿಲ್ಲ ನೋಡುವಡೆ ಕಣ್ಣಿಲ್ಲ=ವಿಗ್ರಹರೂಪಿ ಲಿಂಗಕ್ಕೆ ನನ್ನಂತೆ ಜೀವವಾಗಲಿ ಮತ್ತು ಯಾವುದೇ ಬಗೆಯ ಒಳಮಿಡಿತಗಳಾಗಲಿ ಇಲ್ಲ; ಎನ್ನ ಬಡತನಕ್ಕೆ ಬೇಡುವಡೆ ಏನೂ ಇಲ್ಲ=ಬಡತನದ ಕಾರಣದಿಂದ ತಿನ್ನಲು ಅನ್ನವಿಲ್ಲದೆ, ತೊಡಲು ಬಟ್ಟೆಯಿಲ್ಲದೆ, ಇರಲು ಮನೆಯಿಲ್ಲದೆ ನರಳುತ್ತಿರುವ ನನ್ನ ನೋವಿಗೆ ದೇವರು ಎಂದು ಪೂಜಿಸುವ ಈ ಲಿಂಗದಿಂದ ಯಾವುದೇ ಬಗೆಯ ಪರಿಹಾರವೂ ದೊರೆಯುವುದಿಲ್ಲ.

ಆತುರ=ಅವಸರ/ತ್ವರೆ/ಬೇಗಬೇಗನೆ/ಮಯ್ ಮನಗಳ ಯಾತನೆಯಿಂದ ನರಳುವವನು/ಅತಿಯಾದ ಆಸೆ; ವೈರಿ=ಶತ್ರು/ಹಗೆ; ಮಾರೇಶ್ವರ=ಶಿವ/ದೇವರು; ಆತುರವೈರಿ ಮಾರೇಶ್ವರ=ನಗೆಯ ಮಾರಿತಂದೆಯ ವಚನಗಳ ಅಂಕಿತನಾಮ)

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *