ಓದುವ ಹಾಗೆಯೇ ಬರೆಯುವುದು

ಡಿ.ಎನ್.ಶಂಕರ ಬಟ್.

ನುಡಿಯರಿಮೆಯ ಇಣುಕುನೋಟ – 10

nudi_inukuಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡ ಬರಹಗಳಲ್ಲಿ ಓದುವ ಹಾಗೆಯೇ ಬರೆಯಬೇಕು ಎಂದು ಹೇಳಿದರೆ, ಎಲ್ಲರೂ ಅವರವರು ಹೇಗೆ ಓದುತ್ತಾರೋ ಹಾಗೆ ಬರೆಯಬಹುದು, ಇಲ್ಲವೇ ಎಲ್ಲರೂ ತಮಗೆ ಕುಶಿಬಂದ ಹಾಗೆ ಬರೆಯಬಹುದು ಎಂದು ಹೇಳಿದ ಹಾಗಾಗುವುದಿಲ್ಲ; ಅಂತಹ ಪ್ರತಿಕ್ರಿಯೆ ಬಾರದಂತೆ ನಾನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆಯಬೇಕು ಎಂಬುದಾಗಿ ಬರೆದಿದ್ದೆ. ಈ ಪದಗಳನ್ನು ಇವತ್ತು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಿದ್ದಾರೆ ಎಂಬುದನ್ನು ತಿಳಿವಿಗರು ಕಂಡುಹಿಡಿಯಬೇಕು, ಮತ್ತು ಅದಕ್ಕೆ ಅನುಸಾರವಾಗಿ, ಅವನ್ನು ಹೇಗೆ ಬರೆಯಬೇಕು ಎಂಬುದನ್ನು ತೀರ‍್ಮಾನಿಸಬೇಕು.

ಬರಹದ ಮೂಲಕ ನಾವು ನಮ್ಮ ಅನಿಸಿಕೆಗಳನ್ನು ಇನ್ನೊಬ್ಬರಿಗೆ ತಿಳಿಸುತ್ತೇವೆ, ಮತ್ತು ಬರಹ ರೂಪದಲ್ಲಿರುವ ಇನ್ನೊಬ್ಬರ ಅನಿಸಿಕೆಗಳನ್ನು ಓದಿನ ಮೂಲಕ ತಿಳಿದುಕೊಳ್ಳುತ್ತೇವೆ. ಈ ಎರಡು ಕೆಲಸಗಳೂ ಸರಿಯಾಗಿ ನಡೆಯಬೇಕಿದ್ದಲ್ಲಿ, ಎಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿ ಬರೆಯುವ ಮತ್ತು ಓದುವ ಕೆಲಸಗಳನ್ನು ನಡೆಸಬೇಕಾಗುತ್ತದೆ. ಈ ಕೆಲಸಗಳನ್ನು ಇವತ್ತು ಶಾಲೆಗಳಲ್ಲಿ ಕಲಿಸಲಾಗುತ್ತದೆಯಾದ ಕಾರಣ, ಎಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿ ಬರೆಯುವಂತೆ ಮತ್ತು ಓದುವಂತೆ ಮಾಡುವುದು ತೊಡಕಿನ ಕೆಲಸವೇನಲ್ಲ.

ಶಕಾರವನ್ನು ಹೆಚ್ಚಿನ ಕನ್ನಡಿಗರೂ ಶಕಾರವಾಗಿಯೇ ಓದುತ್ತಾರಲ್ಲದೆ ಸಕಾರವಾಗಿ ಬದಲಾಯಿಸಿ ಓದುವುದಿಲ್ಲ. ಆದರೆ, ಷಕಾರವನ್ನು ಹೆಚ್ಚಿನವರೂ ಶಕಾರವಾಗಿ ಬದಲಾಯಿಸಿ ಓದುತ್ತಾರೆ. ಹಾಗಾಗಿ, ಸಂಸ್ಕ್ರುತ ಎರವಲುಗಳಲ್ಲಿ ಬರುವ ಷಕಾರವನ್ನು ಶಕಾರವಾಗಿ ಬದಲಾಯಿಸಿ ಬರೆಯಬೇಕು, ಮತ್ತು ಶಕಾರವನ್ನು ಹಾಗೆಯೇ ಉಳಿಸಬೇಕು ಎಂಬ ತೀರ‍್ಮಾನಕ್ಕೆ ಬರಬೇಕಾಗುತ್ತದೆ.

ಇದೇ ರೀತಿಯಲ್ಲಿ, ಋಕಾರ, ಮಹಾಪ್ರಾಣ, ವಿಸರ‍್ಗ ಮೊದಲಾದ ಬೇರೆ ಕೆಲವು ಬರಿಗೆಗಳ ವಿಶಯದಲ್ಲೂ ಹೆಚ್ಚಿನ ಕನ್ನಡಿಗರ ಓದು ಹೇಗಿದೆಯೆಂಬುದನ್ನು ಕಂಡುಹಿಡಿದು, ಅದಕ್ಕನುಸಾರವಾಗಿ ಬರವಣಿಗೆಯನ್ನು ಬದಲಾಯಿಸಬೇಕು. ಹೀಗೆ ಮಾಡಿದಲ್ಲಿ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗಬಲ್ಲುದು, ಮತ್ತು ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗುವಂತೆ ಮಾಡುವ ಕೆಲಸವೂ ಸುಲಬವಾಗಬಲ್ಲುದು.

ಹಳೆಗನ್ನಡದ ಱಕಾರ ಮತ್ತು ೞಕಾರಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೆ ಎಂಬುದನ್ನು ಗಮನಿಸಿ, ಹೊಸಗನ್ನಡವನ್ನು ಬರಹದಲ್ಲಿ ಬಳಸಲು ತೊಡಗಿದ ಕಾಲದಲ್ಲಿ ಅವನ್ನು ರಕಾರ ಮತ್ತು ಳಕಾರಗಳಾಗಿ ಬದಲಾಯಿಸಿ ಬರೆಯಲು ತೊಡಗಲಾಯಿತು. ಈ ಮಾರ‍್ಪಾಡನ್ನು ಮಾಡಿರದಿದ್ದರೆ, ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಇನ್ನಶ್ಟು ತೊಡಕಿನದಾಗುತ್ತಿತ್ತು. ಸಂಸ್ಕ್ರುತ ಎರವಲುಗಳಲ್ಲಿ ಬರುವ ಬರಿಗೆಗಳನ್ನು ಓದುವ ಹಾಗೆ ಬರೆಯುವಂತೆ ಮಾರ‍್ಪಡಿಸುವುದೂ ಇಂತಹದೇ ಒಂದು ಕೆಲಸ ಎಂಬುದನ್ನು ಇಲ್ಲಿ ಗಮನಿಸಬೇಕು.

ಇಶ್ಟರ ವರೆಗೆ ಈ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯುತ್ತಿದ್ದುದಕ್ಕೆ ಎರಡು ಮುಕ್ಯ ಕಾರಣಗಳಿದ್ದುವು: ಹಿಂದಿನ ಕಾಲದಲ್ಲಿ ಹೊಸ ಹೊಸ ತಿಳಿವುಗಳನ್ನು ಕಂಡುಹಿಡಿದವರೆಲ್ಲ ಅದನ್ನು ಸಂಸ್ಕ್ರುತದಲ್ಲಿ ಬರೆದಿರಿಸುತ್ತಿದ್ದರು; ಹಾಗಾಗಿ, ಯಾವುದೇ ಒಂದು ವಿಶಯದಲ್ಲಿ ಹೊಸ ತಿಳಿವನ್ನು ಪಡೆಯಬೇಕಿದ್ದರೂ ಸಂಸ್ಕ್ರುತದ ಮೊರೆಹೊಗಬೇಕಾಗಿತ್ತು.

ಇದರಿಂದಾಗಿ ಸಂಸ್ಕ್ರುತ ಬರಹಕ್ಕೆ ಒಂದು ಬಗೆಯ ಮೇಲ್ಮೆ ಬಂದಿತ್ತು; ಅದರ ಪದಗಳನ್ನು ಕನ್ನಡದಲ್ಲಿಯೂ ಸಂಸ್ಕ್ರುತದಲ್ಲಿರುವ ಹಾಗೆಯೇ ಉಳಿಸಿಕೊಳ್ಳುವುದರಿಂದ, ಮುಂದೆ ಸಂಸ್ಕ್ರುತ ಬರಹಗಳನ್ನು ಓದಲು ಕಲಿಯುವ ಕೆಲಸ ಕನ್ನಡಿಗರಿಗೆ ಸುಲಬವಾಗಬಹುದಾಗಿತ್ತು. ಕನ್ನಡ ಓದಿನ ಕಲಿಕೆ ಮುಂದೆ ನಡೆಸಲೇಬೇಕಾಗಿದ್ದ ಸಂಸ್ಕ್ರುತ ಓದಿಗೆ ಒಂದು ಮೆಟ್ಟಲಾಗಬಹುದಾಗಿತ್ತು. ಇದು ಒಂದು ಕಾರಣ.

ಆದರೆ, ಇವತ್ತು ಹೊಸ ಹೊಸ ತಿಳಿವುಗಳನ್ನು ಕಂಡುಹಿಡಿದಿರುವವರು ಯಾರೂ ಅದನ್ನು ಸಂಸ್ಕ್ರುತದಲ್ಲಿ ಬರೆಯಲು ಹೋಗುವುದಿಲ್ಲ; ಹಾಗಾಗಿ, ಹಿಂದಿನ ಕಾಲದಲ್ಲಿ ಅದಕ್ಕಿದ್ದ ಮೇಲ್ಮೆ ಇಂದು ಉಳಿದಿಲ್ಲ, ಮತ್ತು ಅದರ ಪದಗಳನ್ನು ಅದರ ಬರಹಗಳಲ್ಲಿರುವ ಹಾಗೆ ಬರೆಯಲು ಕಲಿಯುವ ಅವಶ್ಯಕತೆಯೂ ಇವತ್ತು ಕನ್ನಡಿಗರಿಗಿಲ್ಲ.

ಹಿಂದಿನ ಕಾಲದಲ್ಲಿ ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸವನ್ನು ಮುಕ್ಯವಾಗಿ ಉತ್ತರದಿಂದ ವಲಸೆಬಂದ ಮೇಲ್ವರ‍್ಗದ ಜನರು ನಡೆಸುತ್ತಿದ್ದರು; ಆರ‍್ಯರಾಗಿದ್ದ ಇವರಿಗೆ ಸಂಸ್ಕ್ರುತದ ಮೇಲೆ ಹೆಚ್ಚಿನ ಆದರ ಮತ್ತು ಪೂಜ್ಯಬಾವಗಳಿದ್ದುವು. ಹಾಗಾಗಿ, ಅದರ ಪದಗಳನ್ನು ಮಾರ‍್ಪಡಿಸದೆ ಉಳಿಸುವುದು ಅವರ ಮಟ್ಟಿಗೆ ಅವಶ್ಯವಾಗಿತ್ತು. ಇದು ಇನ್ನೊಂದು ಕಾರಣ.

ಆದರೆ, ಇವತ್ತು ಎಲ್ಲಾ ವರ‍್ಗಗಳಿಗೆ ಸೇರಿದ ಕನ್ನಡಿಗರೂ ಕನ್ನಡ ಬರಹವನ್ನು ಬಳಸಲು ಕಲಿಯಬೇಕಾಗಿದೆ. ಇವರಲ್ಲಿ ಹೆಚ್ಚಿನವರೂ ದ್ರಾವಿಡ ಮೂಲದವರಾಗಿದ್ದು, ಅವರ ಮಟ್ಟಿಗೆ ಸಂಸ್ಕ್ರುತ ಪದಗಳನ್ನು ಮಾರ‍್ಪಡಿಸದೆ ಉಳಿಸಿಕೊಳ್ಳುವುದು ಅಂತಹ ಒಂದು ಪೂಜ್ಯವಾದ ವಿಶಯವೇ ಅಲ್ಲ; ಅದರಿಂದ ಅವರಿಗೆ ಬೇರೆ ಪ್ರಯೋಜನಗಳೂ ದೊರಕುವುದಿಲ್ಲ. ಹಾಗಾಗಿ, ಸಂಸ್ಕ್ರುತ ಎರವಲುಗಳನ್ನು ಕನ್ನಡದ ಸೊಗಡನ್ನು ಕೆಡಿಸದಂತೆ ಮಾರ‍್ಪಡಿಸುವುದಕ್ಕೆ ಹೆಚ್ಚಿನ ಕನ್ನಡಿಗರಿಂದಲೂ ವಿರೋದ ಬರಲಾರದು.

ಬೇರೆ ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನು ಯಾವ ನುಡಿಯಲ್ಲೂ ಆ ನುಡಿಯಲ್ಲಿರುವ ಹಾಗೆ ಬರೆಯಲು ಹೋಗುವುದಿಲ್ಲ; ಇದಕ್ಕೆ ಕೆಲವೇ ಕೆಲವು ಹೊರಪಡಿಕೆಗಳು ಮಾತ್ರ ಇವೆ. ಎತ್ತುಗೆಗಾಗಿ, ಸಂಸ್ಕ್ರುತ ಇಲ್ಲವೇ ಪ್ರಾಕ್ರುತ ಬರವಣಿಗೆಗಳಿಗೆ ಬಳಕೆಯಾಗುತ್ತಿದ್ದ ಬ್ರಾಹ್ಮೀ ಲಿಪಿಯನ್ನು ಕನ್ನಡದಂತಹ ಕೆಲವು ನುಡಿಗಳಿಗೆ ಅಳವಡಿಸುವಾಗ, ಸಂಸ್ಕ್ರುತದ ಎರವಲುಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಾಯಿತು, ಮತ್ತು ಈ ಕಾರಣಕ್ಕಾಗಿ, ಈ ನುಡಿಗಳ ಬರಹಗಳಲ್ಲಿ ಸಂಸ್ಕ್ರುತ ಎರವಲುಗಳನ್ನು ಆ ನುಡಿಯಲ್ಲಿರುವ ಹಾಗೆಯೇ ಬರೆಯುವ ಹೊಲಬು ಬಳಕೆಗೆ ಬಂತು.

ಇದೇ ರೀತಿಯಲ್ಲಿ, ಅರೇಬಿಕ್ ಬರವಣಿಗೆಗಳಿಗೆ ಬಳಕೆಯಾಗುತ್ತಿದ್ದ ಲಿಪಿಯನ್ನು ಟರ‍್ಕಿಶ್‌ನಂತಹ ಕೆಲವು ನುಡಿಗಳಿಗೆ ಅಳವಡಿಸುವಾಗ, ಅರೇಬಿಕ್ ಎರವಲುಗಳನ್ನು ಬರೆಯಲು ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಾಯಿತು, ಮತ್ತು ಈ ಕಾರಣಕ್ಕಾಗಿ, ಈ ನುಡಿಗಳ ಬರಹಗಳಲ್ಲಿ ಅರೇಬಿಕ್ ಎರವಲುಗಳನ್ನು ಆ ನುಡಿಯಲ್ಲಿರುವ ಹಾಗೆಯೇ ಬರೆಯುವ ಹೊಲಬು ಬಳಕೆಗೆ ಬಂತು.

ಆದರೆ, ಎಲ್ಲಾ ನುಡಿಗಳೂ ಈ ರೀತಿ ಬೇರೊಂದು ನುಡಿಯ ಲಿಪಿಯನ್ನು ತಮ್ಮ ನುಡಿಗೆ ಅಳವಡಿಸಿಕೊಳ್ಳುವಾಗ ಆ ನುಡಿಯ ಪದಗಳನ್ನು ಅದರಲ್ಲಿರುವಂತೆ ಬರೆಯಲು ಬೇಕಾಗುವ ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಿಲ್ಲ; ಎತ್ತುಗೆಗಾಗಿ, ನಾಗರಿ ಲಿಪಿಯನ್ನು ಪಂಜಾಬಿ ನುಡಿಗೆ ಅಳವಡಿಸುವಾಗ, ಷಕಾರ, ಋಕಾರ, ಹಲವು ಬಗೆಯ ಒತ್ತುಬರಿಗೆಗಳು ಮೊದಲಾದುವನ್ನು ಉಳಿಸಿಕೊಂಡಿಲ್ಲ; ಈ ಕಾರಣಕ್ಕಾಗಿ, ಸಂಸ್ಕ್ರುತ ಎರವಲು ಪದಗಳನ್ನು ಇವತ್ತು ಪಂಜಾಬಿ ಬರಹದಲ್ಲಿ ಓದುವ ಹಾಗೆ ಬರೆಯಲಾಗುತ್ತದೆಯಲ್ಲದೆ ಸಂಸ್ಕ್ರುತದಲ್ಲಿರುವ ಹಾಗೆ ಬರೆಯುವುದಿಲ್ಲ.

ಮಲಯಾಳ ಬರಹದಲ್ಲೂ ಮೊದಲಿಗೆ ಮಹಾಪ್ರಾಣಾಕ್ಶರಗಳು, ಗಜಡದಬ ಮೊದಲಾದ ಆ ನುಡಿಗೆ ಬೇಡದಿರುವ ಹಲವು ಬರಿಗೆಗಳು ಇರಲಿಲ್ಲ; ಸಂಸ್ಕ್ರುತ ಬರಹಗಳನ್ನು ಬರೆಯಲು, ಮತ್ತು ಕೆಲವೊಮ್ಮೆ ಸಂಸ್ಕ್ರುತ ಪದಗಳನ್ನು ಮಲಯಾಳ ಬರಹಗಳಲ್ಲಿ ಬರೆಯಲು ಆ ಸಮಯದಲ್ಲಿ ಗ್ರಂತಲಿಪಿಯೆಂಬ ಬೇರೆಯೇ ಒಂದು ಲಿಪಿಯನ್ನು ಬಳಸಲಾಗುತ್ತಿತ್ತು.

ಆದರೆ, ಹದಿನೇಳನೇ ಶತಮಾನಕ್ಕಾಗುವಾಗ, ಮಲಯಾಳ ಸಾಹಿತ್ಯದಲ್ಲಿ ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾಯಿತು; ಇವರಿಗೆ ಸಂಸ್ಕ್ರುತದ ಮೇಲೆ ಹೆಚ್ಚಿನ ಒಲವಿದ್ದುದರಿಂದ, ಮತ್ತು ಇವರ ಬರಹಗಳಲ್ಲಿ ತುಂಬಾ ಸಂಸ್ಕ್ರುತ ಪದಗಳು ಬಳಕೆಯಾಗುತ್ತಿದ್ದುದರಿಂದ, ಇವರು ತಮ್ಮ ಮಲಯಾಳ ಬರಹಗಳಲ್ಲೂ ಗ್ರಂತ ಲಿಪಿಯನ್ನೇ ಬಳಸಲು ತೊಡಗಿದರು. ಇದರಿಂದಾಗಿ, ಇವತ್ತಿನ ಮಲಯಾಳ ಬರಹ ಕನ್ನಡ ಬರಹದ ಹಾಗೆಯೇ ಅನವಶ್ಯಕವಾಗಿ ತೊಡಕಿನದಾಗಿದೆ.

ಎಲ್ಲಾ ಜನರೂ ಬರಹಬಲ್ಲವರಾಗಬೇಕಿರುವ ಇವತ್ತಿನ ದಿನಗಳಲ್ಲಿ ಈ ರೀತಿ ಒಂದು ನುಡಿಯ ಬರವಣಿಗೆಗೆ ಅವಶ್ಯವಿಲ್ಲದ ಬರಿಗೆಗಳನ್ನು ಎರವಲು ಪದಗಳ ಬರವಣಿಗೆಗಾಗಿ ಉಳಿಸಿಕೊಳ್ಳುವುದು ಜಾಣತನವಲ್ಲ; ಇದನ್ನು ಮನಗಂಡ ತಿಳಿವಿಗರು ಟರ‍್ಕಿ, ಇಂಡೊನೇಶಿಯಾ, ಮಲಯೇಶಿಯಾ ಮೊದಲಾದ ನಾಡುಗಳಲ್ಲಿ ಅರೇಬಿಕ್ ಮೂಲದ ಲಿಪಿಯನ್ನೇ ಬಿಟ್ಟುಕೊಟ್ಟು ರೋಮನ್ ಮೂಲದ ಲಿಪಿಯನ್ನು ತಮ್ಮ ಬರಹಕ್ಕೆ ಅಳವಡಿಸಿಕೊಂಡಿದ್ದಾರೆ.

ಕೊರಿಯಾದಂತಹ ಬೇರೆ ಕೆಲವು ನಾಡುಗಳಲ್ಲಿ ಎರವಲು ಪದಗಳನ್ನು ಓದುವ ಹಾಗೆಯೇ ಬರೆಯಲು ತೊಡಗುವ ಮೂಲಕ ಈ ತೊಡಕನ್ನು ನಿವಾರಿಸಿಕೊಳ್ಳಲಾಗಿದೆ. ಕನ್ನಡದಲ್ಲಿಯೂ ಇಂತಹದೇ ಮಾರ‍್ಪಾಡನ್ನು ನಾವು ಇವತ್ತು ನಡೆಸಬೇಕಾಗಿದೆ.

 (ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

 << ನುಡಿಯರಿಮೆಯ ಇಣುಕುನೋಟ – 9

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 09/10/2013

    […] << ನುಡಿಯರಿಮೆಯ ಇಣುಕುನೋಟ – 10 […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *