ಪುಟ್ಟ – ಸಣ್ಣಕತೆ

– ಬರತ್ ಕುಮಾರ್.

metnal_

ಹೊತ್ತಿಗೆ ಮುಂಚೆ ಏಳುವುದು ಪುಟ್ಟನಿಗೆ ಮೊದಲಿನಿಂದಲೇ ಒದಗಿ ಬಂದಿತ್ತು. ಆದರೂ ಆ ದಿನ ಪುಟ್ಟ ಏಕೋ ಏನೋ ಕೊಂಚ ತಡವಾಗಿಯೇ ಎದ್ದು, ಗನಂದಾರಿ ಕೆಲಸಕ್ಕೆ ಹೊರಡುವಂತೆ ದಾಪುಗಾಲು ಹಾಕುತ್ತ ಹೊರಟ.

ಇದನ್ನು ದೂರದಿಂದಲೇ ಗಮಿನಿಸಿದ ಅವನ ನಾದಿನಿ ರತ್ನಿ –
“ಇದ್ಯಾಕ್ ಬಾವಜ್ಜಿ, ಕಾಪಿ ಕುಡಿದೇ ಎಲ್ಗ್ ವೊಯ್ತಿದ್ದಿರಿ?”

ಪುಟ್ಟ, ಒಂದು ಗಳಿಗೆ ನಿಂತು ಏನೂ ಮಾತಾಡದೇ ಹೊರಟು ಹೋದ. ಹಟ್ಟಿಯಿಂದಾಚೆ ಬಂದು ಕೆಲವು ಹೆಜ್ಜೆಗಳನ್ನಿಟ್ಟು ಅರಳಿಕಟ್ಟೆಯ ಹತ್ತಿರ ಬಂದಾಗ-
“ಲೋ ಪುಟ್ಟ, ಎಲ್ಲಿಗ್ಲ ಸವಾರಿ?…ಬರೀ ಮನೆ ಮನೆ ತಿರ‍್ಗದೇ ಆಗೋಯ್ತು ನಿಂಗೆ” ಎಂದು ಅಲ್ಲಿ ಕೂತಿದ್ದವರಲ್ಲಿ ಒಬ್ಬ ಚುಡಾಯಿಸಿದ. ಎಂದಿನಂತೆ ಹಲ್ಲು ಕಿರಿದು ಮುಕ ಗಂಟಿಕ್ಕಿಕೊಂಡು ಬಿರ‍್ಬಿರನೆ ನಡೆದ.

ಪುಟ್ಟನಿಗೆ ವಯಸ್ಸಾಗಿದ್ದರೂ, ವಯಸ್ಸಿಗೆ ತಕ್ಕಹಾಗೆ ಬುದ್ದಿ ಬೆಳೆದಿರಲಿಲ್ಲ ಎಂದು ಊರಿನವರು ನಂಬಿದ್ದರು. ಕೂಡಣದಲ್ಲಿ ಅವನ ನಡವಳಿಕೆಯೂ ಈ ನಂಬಿಕೆಯನ್ನು ಗಟ್ಟಿಗೊಳಿಸಿತ್ತು. ತಲೆಯ ತುಂಬ ಬಿಳಿಕೂದಲು, ಕುರುಚಲು ಬಿಳಿಗಡ್ಡ, ಹಳೆ ಶರ‍್ಟ್, ಹಳೆ ಕಾಕಿ ಚಡ್ಡಿ, ಸುಮ್ ಸುಮ್ಮನೆ ಹಲ್ಲುಕಿರಿದು ಮುಕದ ತುಂಬ ನೆರಿಗೆ ಮೂಡಿಸುವುದು- ಇವೇ ಪುಟ್ಟನ ಗುರುತುಗಳಾಗಿತ್ತು. ಹಾಗಾಗಿ, ಪುಟ್ಟನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರಲಿಲ್ಲ; ಬಾಳಿನುದ್ದಕ್ಕು ಒಂಟಿಯಾಗಿಯೇ ಉಳಿಯಬೇಕಾಯಿತು.

ಪ್ರತಿದಿನ ಎದ್ದು ಊರಲ್ಲಿರುವವರ, ಗೊತ್ತಾದ ನಂಟರ ಮನೆಮನೆಗೂ ಬೇಟಿ ಕೊಡುವುದು ಪುಟ್ಟನಿಗೆ ಅಬ್ಯಾಸವಾಗಿತ್ತು. ಅವನು, ಏಕೆ ಪ್ರತಿದಿನ ನಂಟರ ಮನೆಮನೆಗೆ ಹೋಗುತ್ತಾನೆಂದು ಯಾರಿಗೂ ಗೊತ್ತಿರಲಿಲ್ಲ; ಅದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಮನೆಗೆ ಬಂದಾಗ ತಿಂಡಿನೋ, ಕಾಪಿನೋ ಕೊಟ್ಟು ಕಳಿಸುತ್ತಿದ್ದರು. ಕೆಲವರು ಸಣ್ಣಪುಟ್ಟ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ಅವನು ಇಲ್ಲಿನ ಸುದ್ದಿ ಅಲ್ಲಿಗೆ, ಅಲ್ಲಿನ ಸುದ್ದಿ ಇಲ್ಲಿಗೆ ಮುಟ್ಟಿಸುತ್ತಿದ್ದರೂ, ಯಾರಿಗೂ ಕೇಡು ಮಾಡಿದವನಲ್ಲ. ಆದರೂ ಅವನನ್ನು ಕೆಲವರು ಸುಮ್ ಸುಮ್ಮನೆ ಕೆಣಕುತ್ತಿದ್ದರು.

ಊರ ಅಂಕದ ಹತ್ತಿರ ಬಂದು ಅಲ್ಲಿಯೇ ಮಲಗಿದ್ದ ಬೀದಿನಾಯಿಗಳ ಕಡೆಗೆ ರೊಟ್ಟಿಯ ಚೂರನ್ನು ಎಸೆದ. ನಾಯಿಗಳು ನಾಮುಂದು-ತಾಮುಂದು ಅನ್ನುವಂತೆ, ನೆಗೆನೆಗೆದು ಚೂರನ್ನು ಕಚ್ಚಿ ತಿಂದವು. ಮನುಶ್ಯರೇ ಮನುಶ್ಯನನ್ನು ದೂರ ತಳ್ಳಿದಾಗ ಪ್ರಾಣಿಗಳೇ ಅವನಿಗೆ ಆಸರೆಯಾಗುತ್ತವೆ ಎಂಬ ಮಾತು ಪುಟ್ಟನ ಬದುಕಿನಲ್ಲಿ ದಿಟವೇ ಆಗಿತ್ತು. ಆ ನಾಯಿಗಳೊಂದಿಗೆ ಅಲ್ಲಿಯೆ ಕೊಂಚ ಹೊತ್ತನ್ನು ಕಳೆದ.

ಅಲ್ಲಿ-ಇಲ್ಲಿ ಸುತ್ತಿಕೊಂಡು ನಡುಹೊತ್ತಿನಲ್ಲಿ ನಂಟರ ಮನೆಯೊಬ್ಬರಲ್ಲಿ ಊಟ ಮುಗಿಸಿಕೊಂಡು, ಪುಟ್ಟ ಕೆರೆಯ ಏರಿಯ ಮೇಲೆ ನಡೆದುಕೊಂಡು ಬರುತ್ತಿದ್ದ. ಕೊಂಚ ದೂರದಲ್ಲಿ ಯಾರೋ ಚೀರುತ್ತಿದ್ದ ದನಿ ಕೇಳಿಸಿತು. ಹತ್ತಿರ ಹತ್ತಿರ ಬಂದಾಗ ಯಾರೋ ನೀರಿನಲ್ಲಿ ಮುಳುಗುತ್ತಿರುವುದಾಗಿ ಕಂಡು ಬಂದಿತು. ಏರಿಯ ಮೇಲೆ ನಿಂತುಕೊಂಡು ಕೆಲವು ಹೆಂಗಸರು “ಮೊಗ ನೀರ‍್ಗೆ ಬಿದ್ಬುಟ್ಟದೆ…ಕಾಪಾಡ್ರಪ್ಪೊ…ಕಾಪಾಡ್ರಪ್ಪೊ” ಎಂದು ಕೂಗುತ್ತಿದ್ದರು. ಪುಟ್ಟನು ಕೂಡಲೆ ಏನು ಮಾಡಲಿಲ್ಲವಾದರೂ ಅವನಿಗೆ ಒಳಗೊಳಗೆ ಏನೋ ಕಸಿವಿಸಿ ಶುರುವಾಯಿತು. “ಏನ್ಮಾಡದು? ಏನ್ಮಾಡದು?” ಎಂಬ ಕೇಳ್ವಿಹೊಳೆ ಒಳಗೊಳಗೆ ಬೋರ‍್ಗರೆಯಿತು.
ತಾನು ಏನು ಮಾಡುತ್ತಿದ್ದೇನೆಂಬುದನ್ನೇ ಅರಿಯದೆ ನೀರಿಗೆ ಬಿದ್ದ. ಮುಳುಗುತ್ತಿದ್ದ ಹುಡುಗನ ಹತ್ತಿರ ಈಜಿಕೊಂಡು ಹೋದ. ಕೊನೆಗೂ ಹುಡುಗನ ಕಯ್ ಪುಟ್ಟನಿಗೆ ಸಿಕ್ಕಿತು. ಆಮೇಲೆ ಮೆಲ್ಲಗೆ ನೀರಿನಲ್ಲಿ ಈಜುತ್ತ ಹುಡುಗನನ್ನು ಏರಿಗೆ ತಲುಪಿಸಿದ. ಅಲ್ಲಿಗಾಗಲೆ ಮಂದಿ ನೆರೆದಿತ್ತು. ನೆರೆದಿದ್ದವರು ಹುಡುಗನನ್ನು ಬೋರಲು ಮಲಗಿಸಿ, ಅವನ ಬಾಯಿಯಿಂದ ನೀರನ್ನು ಕಕ್ಕಿಸಿದರು. ಹುಡುಗ ಮೆಲ್ಲಗೆ ಎಚ್ಚರಗೊಳ್ಳುತ್ತ ಮೇಲೆದ್ದು ಕುಳಿತುಕೊಂಡ. ಅಲ್ಲಿದ್ದವರಲ್ಲಿ ಒಬ್ಬ-
“ಇಂವ ನಮ್ ಪಟೇಲ್ರ್ ಮಗ ಕಯ್ಯೊ” ಅಂದ.
ಅದಕ್ಕೆ ಅಲ್ಲಿದ್ದವರಲ್ಲಿ ಹಲವರು ’ಹವ್ದು, ಹವ್ದು’ ಎಂದು ದನಿಗೂಡಿಸಿದರು.

ತುಂಬ ಮಂದಿ ನೆರೆದಿದ್ದರಿಂದ ಪುಟ್ಟನಿಗೆ ಅಲ್ಲಿ ನಿಲ್ಲಲಾಗಲಿಲ್ಲ. ಅವನಿಗೆ ಜನದಟ್ಟಣೆಯಾದ ಕಡೆ ನಿಲ್ಲಲಾಗುತ್ತಿರಲಿಲ್ಲ, ಹಾಗಾಗಿ ಅವನು ಏರಿಯಿಂದಲೇ ಕಣ್ಮರೆಯಾಗಿದ್ದ. ಅಶ್ಟೊತ್ತಿಗೆ ಪಟೇಲರು ಬಂದು ತಮ್ಮ ಮಗನನ್ನು ಸಂತಯ್ಸಿದರು. ಅಲ್ಲಿ ನಡೆದಿದ್ದೆಲ್ಲವನ್ನೂ ಮಂದಿ ಪಟೇಲರಿಗೆ ಒಪ್ಪಿಸಿದರು. ಆಮೇಲೆ ಅಲ್ಲಿಂದ ಗುಂಪು ಚದುರಲು ತೊಡಗಿತು. ಅಲ್ಲಿದ್ದವರಲ್ಲಿ ಹಲವರ ಬಗೆಯಲ್ಲಿ
“ಎಲಾ, ಇವನ?!..ನಮ್ ಪುಟ್ಟನ್ನ ಏನೊ ಅನ್ಕೊಂಬುಟ್ಟಿದ್ವಲ್ಲ” ಎಂಬ ಅನಿಸಿಕೆಯೊಂದಿಗೆ ಅಚ್ಚರಿಯು ಮೂಡಿತು.

(ಚಿತ್ರ: teenlinkseattle.blogspot.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Azad IS says:

    ಕತೆ ಚನ್ನಾಗಿದೆ.. ಪುಟ್ಟನಂತಹವರು ಎಷ್ಟೋ ಮಂದಿ ಇಂದೂ ಹಳ್ಳಿಗಳಲ್ಲಿ ಇದ್ದಾರೆ… ಶುಭವಾಗಲಿ ಭರತ್..

  2. ಕತೆ ಯಾಕೋ ಇದ್ದಕ್ಕಿದ್ದಂತೆ ನಿಂತೋಯ್ತೇನೋ ಅನ್ನಿಸ್ತು. ಅದು ಏನೇಳಬೇಕು ಅನ್ತ ಇದೆಯೋ ತಿಳೀಲಿಲ್ಲ. ಆದರೆ ನುಡಿ ಹಮ್ಮುಗೆಗೆ ತಕ್ಕಂತಿದೆ ಅನ್ನಬಹುದು.

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *