ಬೆಳಗಾಗೋ ಮೊದಲೆದ್ದು ಯಾರ‍್ಯಾರ ಮನೆಯ…!?

ಗೀತಾಮಣಿ

kodagu flower 4

“ತೂಕ ಕಡಿಮೆ ಮಾಡಿ,ಮಾರ್‍ನಿಂಗ್ ವಾಕ್ ಮಾಡಿ” ಕಾಲು ನೋವಿಗೆ, ಬರೆದ ಔಶದಿಯ ಜೊತೆಗೆ ವಯ್ದ್ಯರು ಹೇಳಿದ ಪರಿಹಾರ!…..ಚೆ!……. ಈ ಚಳಿಯಲ್ಲಿ ಪಾತ್ರೆ ತೊಳೆಯೋದೇ ಕಶ್ಟ, ಅಂತದ್ರಲ್ಲಿ ಇದು ಬೇರೇನಾ?!……ಅಳತೆ ಮಾಡಿ ತಿಂದರೂ ಹೆಚ್ಚುತ್ತಿರುವ ದೇಹದ ವಿಸ್ತೀರ‍್ಣ, ತೂಕ ಎರಡಕ್ಕೂ ಹಿಡಿ ಶಾಪ ಹಾಕುತ್ತಾ ಮನೆಗೆ ಬಂದೆ. ಸುರಕ್ಶೆ, ಸಂಕೋಚ ಎರಡನ್ನೂ ದ್ರುಶ್ಟಿಯಲ್ಲಿಟ್ಟುಕೊಂಡು ಎದುರು ಮನೆ ಸರೋಜಮ್ಮನಿಗೆ ಅವರು ವಾಕ್ ಹೋಗುವಾಗ ನನ್ನನ್ನೂ ಕರೆಯುವಂತೆ ವಿನಂತಿಯ ಅರ್‍ಜಿ ಹಾಕಿದೆ.

ಬೆಳಕು ಹರಿಯುವ ಮೊದಲೆ ಬಾಯಿ ಬಡಿದುಕೊಳ್ಳಲು ಪ್ರಾರಂಬಿಸಿದ ಗಡಿಯಾರದ ತಲೆಯ ಮೇಲೊಂದು ಮೊಟಕಿದೆ! ?ಇದ್ದ ಕೆಲಸಗಳೆ ಸಾಕಾಗಿತ್ತು. ಇದೊಂದು ಹೊಸ ಕೆಲಸ?… ಗೊಣಗುತ್ತಲೇ ಸ್ವೆಟರ್ ಹಾಕಿಕೊಂಡು,ತಲೆಗೆ ಮಪ್ಲರ್ ಸುತ್ತಿ,ಮೇಲೊಂದು ಶಾಲ್ ಹೊದ್ದುಕೊಂಡು, ಕಾಲಿಗೆ ಚಪ್ಪಲಿ ಹಾಕಿಕೊಂಡು ಹೊರಟು ನಿಂತು, ಮನೆ ಮಂದಿಯ ಕಡೆ ದ್ರುಶ್ಟಿ ಹಾಯಿಸಿದೆ. ನನ್ನ ಗೊಣಗಾಟ ಯಾರ ಮೇಲೂ, ಯಾವ ಪ್ರಬಾವವನ್ನೂ ಬೀರಲಿಲ್ಲ.

“ಬರ‍್ತೀರಾ…?” ಸರೋಜಮ್ಮ ಗುಟುರು ಹಾಕಿದರು…ಕಾಯೋದಿಕ್ಕೆ ಆಗಲ್ಲ ಎನ್ನುವಂತೆ! “ಬಂದೇ” ಅನ್ನುತ್ತಾ ಹಲ್ಲುಗಿಂಜಿ ನಾನೂ ಹೊರಟೆ…..”ತುಂಬಾ ಚಳಿ ಅಲ್ವಾ” ಅಂದೆ. “ಬೇಗ ಬೇಗ ಹೆಜ್ಜೆ ಹಾಕಿ, ಸ್ವಲ್ಪ ದಿನ ನಡೆದ್ರೆ ತಾನೇ ಅಬ್ಯಾಸ ಆಗುತ್ತೆ” ಅಂದರು, ಚಳಿಗೆ ತಾನೇನೂ ಹೆದರುವುದಿಲ್ಲ ಎನ್ನುವಂತಿತ್ತು ಅವರ ದೋರಣೆ.

ಮಯ್ ಕೊರೆಯುವ ಚಳಿ ಇದ್ದರೂ ಶುದ್ದವಾದ ಗಾಳಿ. ಸಾಲು ಮನೆಗಳ ಮನೆಗಳಲ್ಲಿ ಕೆಲವು ಮನೆಗಳ ಮುಂದೆ ಪುಟ್ಟ ಪುಟ್ಟ ಕಯ್ತೋಟ. ಅರೆಬಿರಿದು ಸುವಾಸನೆ ಬೀರುತ್ತಿರುವ ಬಣ್ಣಬಣ್ಣದ ಹೂವುಗಳ ಅಂದ ಕಣ್ಮನಗಳಿಗೆ ಹಿತ ನೀಡುತ್ತಿತ್ತು. ಸ್ವಲ್ಪ ಕಶ್ಟವಾದರೂ ಪರವಾಗಿಲ, ಇನ್ಮೇಲೆ ಪ್ರತಿದಿನ ಮಾರ್‍ನಿಂಗ್ ವಾಕ್ ಬರ‍್ತೇನೆ ಎಂದು ನನ್ನಶ್ಟಕ್ಕೆ ನಾನೇ ದ್ರುಡಪಡಿಸಿಕೊಂಡೆ!

ಸ್ವಲ್ಪ ದೂರವಶ್ಟೇ ಹೋಗಿದ್ದು…….. ನೋಡು ನೋಡುತ್ತಿದ್ದಂತೆ ಸರೋಜಮ್ಮ ದಾರಿಯಲ್ಲಿ ಮನೆಯೊಂದರ ಕಂಪೌಂಡಿನಿಂದ ಹೊರಬಾಗಿದ ಹೂಗಿಡದ ಕೊಂಬೆಯೊಂದರಿಂದ ಪಟಪಟನೇ ಹೂ ಕೀಳಲು ಪ್ರಾರಂಬಿಸಿದರು! ಅಂಗಯ್ನಲ್ಲಿ ಮುದುರಿಕೊಂಡು ಕೂತಿದ್ದ ಪ್ಲಾಸ್ಟಿಕ್ ಬ್ಯಾಗ್ ಸರಪರ ಸದ್ದು ಮಾಡುತ್ತಾ ದೊಡ್ಡದಾಯಿತು!……. ನನಗೆ ನಿಂತಲ್ಲೇ ಕಸಿವಿಸಿ!…….ಅಯ್ಯೋ ದೇವರೇ….ದಾಕ್ಶಿಣ್ಯಕ್ಕಾದರೂ ಮನೆಯವರನ್ನು ಕೇಳಬೇಡವೇ? ಅಂತ ಅನಿಸಿತು. ಆಕಡೆ ಈ ಕಡೆ ದ್ರುಶ್ಟಿ ಹಾಯಿಸಿದೆ. ಇಂತದೇ ಕೆಲವು ದ್ರುಶ್ಯಗಳು ಕಣ್ಣಿಗೆ ಬಿದ್ದವು! ಹತ್ತಾರು ಮನೆಯ ಹೂವೆತ್ತಿದ ಮೇಲೆ ಸರೋಜಮ್ಮ “ಸಾಕು ಹೋಗೋಣ” ಅನ್ನುತ್ತ ನಕ್ಕರು. ಅವರ ಕಯ್ಯಲ್ಲಿದ್ದ ಉಬ್ಬಿದ ಪ್ಲಾಸ್ಟಿಕ್ ಬ್ಯಾಗನ್ನು ನೋಡಿದೆ. ಮನೆಯ ಕಿಟಕಿಯಿಂದ ಯಾರೋ ಗಮನಿಸುತ್ತಿರುವಂತೆ ನನಗೆ ಬಾಸವಾಯಿತು. ಮುಜುಗರದಿಂದ ಹೇಳಿದೆ, “ಇಶ್ಟೊಂದು ಹೂವು……” ಅವರಿಗೇನನ್ನಿಸಿತೋ “ಶ್ರಾವಣ ಅಲ್ವಾ” ಅಂತ ರಾಗ ಎಳೆದರು…..”ಅಂದ ಹಾಗೆ…ನಮ್ಮನೇಲಿ ಇವತ್ತು ಸತ್ಯನಾರಾಯಣ ಸ್ವಾಮಿ ಪೂಜೆ, ಬೇಗ ಕೆಲಸ ಮುಗಿಸಿಕೊಡು ಬಂದು ಬಿಡಿ” ಎಂದು ಪೂಜೆಗೆ ಆಹ್ವಾನ ನೀಡಿದರು.

ತಿಂಡಿ-ತೀರ್‍ತ ಇತ್ಯಾದಿ ಕೆಲಸ ಮುಗಿಸಿ ಸರೋಜಮ್ಮನ ಮನೆಗೆ ಪೂಜೆಗೆಹೋದೆ. ಪೂಜೆ ಅದಾಗಲೇ ಮುಕ್ಕಾಲು ಬಾಗ ಮುಗಿದಿತ್ತು. ಪೂಜೆಯೆಂದರೆ ಸರೋಜಮ್ಮನಿಗೆ ಬಲೇ ಪ್ರೀತಿ. ಅದ್ದೂರಿಯಿಂದಲೇ ಮಾಡಿದ್ದರು. ತರೇವಾರಿ ಹೂಗಳ ಸುವಾಸನೆ ಜೊತೆಗೆ ಊದುಬತ್ತಿಯ ಹೊಗೆ ಗಮಗಮಿಸುತ್ತಿತ್ತು. ನನಗೆ ಮುಂಜಾನೆಯ ವಾಕ್ ನೆನಪಾಯಿತು.

“ಪೂಜೆ ತುಂಬಾ ಚೆನ್ನಾಗಿ ಮಾಡಿದ್ದಾರೆ ಅಲ್ವ!?” ಪಕ್ಕದ ಮನೆಯಾಕೆ ನಗುತ್ತ ನನ್ನ ತೋಳಿಗೆ ಹಗುರವಾಗಿ ತಿವಿದಳು. “ಹವ್ದುಹವ್ದು”……. ನಾನು ಉತ್ತರ ಕೊಡುವ ಮೊದಲೇ ಇನ್ನೊಬ್ಬಾಕೆ ಹೇಳತೊಡಗಿದಳು……. ” ತುಂಬಾನೇ ಚೆನ್ನಾಗಿ ಮಾಡಿದ್ದಾರೆ…….ಎಶ್ಟೊಂದು ತರದ ಹೂವಿಟ್ಟಿದಾರೆ ನೋಡಿ ನಮ್ಮ ಸರೋಜಮ್ಮ ಎಲ್ಲೆಲ್ಲಿಂದಾನೋ ಜೋಡಿಸ್ಬಿಡ್ತಾರಪ್ಪ?” ಹಿಂದಿನಿಂದ ಯಾರೋ ಮುಸಿ ಮುಸಿ ನಕ್ಕ ಹಾಗೆ ಅನಿಸಿತು.

“ನಮ್ಮನೇ ಗಿಡದಲ್ಲಿ ಒಂದೂ ಹೂವಿರಲ್ಲ ಕಣ್ರೀ, ಒಂದೆರಡು ದೇವ್ರಿಗಿಡೋಣ ಅಂದ್ರೆ, ಅದ್ಯಾವ ಮಾಯದಲ್ಲಿ ಬಂದು ಕೀಳ್ತಾರೋ ಏನೋ…….ಇಶ್ಟಪಟ್ಟು ಚೆಂದಕ್ಕೋ…….ಪೂಜೆಗೋ ಅಂತ ಎರಡು ಗಿಡ ನೀರು ಹಾಕಿ ಬೆಳ್ಸಿದರೆ ಏನೂ ಪ್ರಯೋಜನವಿಲ್ಲ” ಹಿಂದಿನಿಂದ ದ್ವನಿಯೊಂದು ತೂರಿ ಬಂತು.

“ಅಯ್ಯೋ ಇನ್ಯಾರ್‍ರೀ ಬರ‍್ತಾರೆ! ಬೆಳಗ್ಗೆ ವಾಕ್ ಬರ‍್ತಾರಲ್ಲ, ಅವರ‍್ದೇ ಕೆಲ್ಸ ಅದು”…ದ್ವನಿ ಬಂದ ಕಡೆ ತಿರುಗಿ ನೋಡಿದೆ. ಆಕೆ ಮುಂದುವರೆಸಿದಳು…”ದುಡ್ಡು ಕೊಟ್ಟು ಕೊಂಡ್ಕೊಂಡು ಪೂಜೆ ಮಾಡೋದಲ್ವ, ಮೊಗ್ಗು ಕೂಡ ಬಿಡಲ್ಲ…..ಹಾಗೆ ಗಿಡದ ಟೊಂಗೇನೂ ಮುರಿದು ಹಾಕ್ತಾರೆ…..” ಮಾತಿನಲ್ಲಿ ಬೇಸರ ಮನೆ ಮಾಡಿತ್ತು. ಆದರೆ ನೋಟ ನನ್ನ ಕಡೆಗೇ ಇತ್ತು! ಅಲ್ಲಿದ್ದ ವ್ಯಂಗ್ಯ “ನಿನಗೂ ಗೊತ್ತಲ್ಲ” ಅನ್ನುವಂತಿತ್ತು. ಅದು ಸಹಜವಾಗೇ ಇದ್ದರೂ ನನಗೆ ಅಲ್ಲಿ ಬಹಳ ಹೊತ್ತು ಕುಳಿತಿರಲಾಗಲಿಲ್ಲ. ಮಾಡಿದವರ ಪಾಪ ನೋಡಿದವರ ಜೊತೆಯಲ್ಲಿ! ಪ್ರಸಾದ ತೆಗೆದುಕೊಂಡು ಮನೆಗೆ ಬಂದೆ, ಜನಪ್ರಿಯ ಕವಿತೆಗೆ ಹೊಸ ಪದಗಳನ್ನು ಸೇರಿಸಿಕೊಂಡು ಗುನುಗುತ್ತಾ…..! ಇವರ ಮನೆಯ ಹೂವನವರು ಕಿತ್ತು, ಅವರ ಮನೆಯ ಹೂವನಿವರು ಕಿತ್ತು, ಇವರ ಮುಡಿಯನವರು ಹಿಡಿದು,ಅವರ ಮುಡಿಯನಿವರು ಹಿಡಿದು,ಸಾಕ್ಶಿಯಾಗಿ ನನ್ನ ಬಡಿದು ಬೇಡ….ಬೇಡ……!  ಕಲ್ಪನೆಯ ಓಟಕ್ಕೊಂದು ಬ್ರೇಕ್ ಹಾಕಿದೆ. ಮುಂಜಾನೆಯ ವಾಕಿಂಗನ್ನು ಸಂಜೆಗೆ ಶಿಪ್ಟ್ ಮಾಡಿಕೊಂಡೆ!! ಅದೂ ಒಂ….ಟಿ….ಯಾ….ಗಿ…..!!!

(ಚಿತ್ರ: www.icarelive.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *