ನೋಡಿ, ಹೀಗಿದೆ ಒಲವ ಜೋಡಿ!

romance_um7wkhcs

ಕಣ್ ನೋಟ ಎಡತಾಕಿ ನಗು ಎದುರು ಬದರಾಗಿ
ಎದೆಗೂಡು ನುಡಿದಿದೆ ಪಿಸುಮಾತಿನಲ್ಲಿ
ಅಡಿಗಡಿಗೆ ಜೊತೆಯಿರುವ ತುಡಿತಗಳು ಹೆಚ್ಚಾಗಿ
ಕಟ್ಟು ಬಿದ್ದವು ಇವು ಒಲವೆಂಬ ನಂಟಲ್ಲಿ।

ಕಚಗುಳಿಯ ಮಾತುಗಳು ಹಸಿಬಿಸಿಯ ಮುತ್ತುಗಳು
ಹಬ್ಬವಿದೊ ನಡೆಯುತಿದೆ ಹರೆಯದ ಬಯಕೆಗೆ
ಅವನಿಗಾಗಿಯೇ ನಾನು ನನಗಾಗಿಯೇ ಅವಳು
ಬರೆಯದೊಪ್ಪಂದವಿದೆ ಬಿಡಿಸದ ಬೆಸುಗೆಗೆ ।

ಬೆಚ್ಚನೆಯ ಇಳಿಹೊತ್ತು, ಮೆಚ್ಚುಗೆಯ ಕಯ್ ತುತ್ತು
ತುಸುಕೋಪ ಮತ್ತೆಲ್ಲೋ ಅಪರೂಪದ ತಪ್ಪು
ಹೊಂದಿಕೆಯ ಅಂದಕ್ಕೆ ಜಗಳ ಮರೆಯಾಗಿತ್ತು
ಇರಬೇಕಿವೆ ಇವು ಬಾಳ ಸಿಹಿ ಕಾರ ಹುಳಿ ಉಪ್ಪು।

ಮಂದಿಗಂಟಿದೆ ಇಂದು ತಳಿ-ಬಳಿಯ ಜಡ್ಡುಗಳು
ಇದರ ಹುಟ್ಟಡಗಿಸಲೆಂದೆ ಹುಟ್ಟಿದೆಯೊ ಒಲವು
ಈ ಕಾಳಗದಲ್ಲೀಗ ಜೋಡಿಗಳೆ ಕಟ್ಟಾಳು
ಮಡಿದಿಹವು ಕೆಲವು ಮೆರೆದಿಹವು ಹಲವು ।

ಒಲವು ಚಿಗುರಾಗಿಹುದು ವಯಸು ಹಣ್ಣಾದರು
ನಂಬುಗೆಯ ತಾಯ್ ಬೇರು ಅಲುಗಾಡದಿರಲು
ಉಸಿರುರುವವರೆಗೂ ಹಸಿರಾಗಿ ಒಲವಿದ್ದರು
ಹೆಸರ್ ಹೇಳುವಂತಿಹುದು ಉಸಿರಾದಮೇಲು ।

– ರತೀಶ ರತ್ನಾಕರ.

(ಚಿತ್ರ: www.mobile9.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.