ಟೀವಿಯಲ್ಲಿ ಕ್ರಿಕೆಟ್ ನೋಡಿದರೆ ಏನು ಬಂತು?

ಪ್ರಿಯಾಂಕ್ ಕತ್ತಲಗಿರಿ.

cricktv

ಈ ಬಗ್ಗೆ ನೀವು ಈಗಾಗಲೇ ಹಲವು ತಾಣಗಳಲ್ಲಿ, ಸುದ್ದಿಹಾಳೆಗಳಲ್ಲಿ ಓದಿರುತ್ತೀರಿ. ಇಂಡಿಯಾದ ಜನರು, ಅದರಲ್ಲೂ ಅಕ್ಕಿಯನ್ನು ಹೆಚ್ಚು ತಿನ್ನುವವರು ಸಕ್ಕರೆ ಕಾಯಿಲೆಗೆ ತುತ್ತಾಗುವ ಸಾದ್ಯತೆ ಹೆಚ್ಚು ಎಂಬುದು. ಅಲ್ಲದೇ, ಬೊಜ್ಜಿನ ಜೊತೆ ನಂಟು ಹೊಂದಿರುವ ಗುಂಡಿಗೆಯ ಕಾಯಿಲೆಗಳೂ ನಮ್ಮನ್ನು ಕಾಡಬಹುದು ಎಂಬುದನ್ನೂ ತಾವು ಬಹುಶ ಈಗಾಗಲೇ ಬಲ್ಲಿರಿ. ಇತ್ತೀಚೆಗೆ ಬೆಂಗಳೂರಿನ NIMHANSನಲ್ಲಿ ಮಾತನಾಡುತ್ತಾ ಡೇನಿಯಲ್ ಲಯ್ಬರ್‍ಮನ್ ಅವರು, ಇಂಡಿಯಾದ ಮಂದಿ ಮುಂದಿನ ದಿನಗಳಲ್ಲಿ ಎದುರಿಸಬೇಕಾದ ಇಂತಹ ಕಾಯಿಲೆಗಳ ಗಂಡಾಂತರದ ಬಗ್ಗೆ ನೆರೆದಿದ್ದವರ ಗಮನ ಸೆಳೆದರು.

ಈ ಗಂಡಾಂತರಕ್ಕೆ ಡೇನಿಯಲ್ ಲಯ್ಬರ್‍ಮನ್ ಅವರು ಹೇಳುವಂತೆ ಇರುವ ಒಂದು ತಕ್ಕ ಮದ್ದು ಎಂದರೆ, ಆಟ. ಮಯ್ಯಿಗೆ ದಣಿವು ತರುವಂತಹ ಆಟಗಳು ಮಾನವನ ಬೆಳವಣಿಗೆಯ ಹಾದಿಯಲ್ಲಿ ತುಂಬಾ ದೊಡ್ಡ ಪಾತ್ರ ಹೊಂದಿದ್ದವು. ಮಾನವನ ಕೂಡಣದಿಂದ “ಆಟ”ವನ್ನು ಹೊರತೆಗೆದರೆ, ಕೂಡಣದಲ್ಲಿ ಏರುಪೇರಾಗುತ್ತದೆ ಎಂಬುದು ಲಯ್ಬರ್‍ಮನ್‍ ಅವರ ಅಂಬೋಣ. ಅದು ನಿಜ ಎನ್ನಲು ಸಾಕಶ್ಟು ಅಂಕಿ-ಅಂಶಗಳನ್ನೂ ತೋರಿಸುತ್ತಾರೆ. ಒಂದು ದಿನಕ್ಕೆ 30 ನಿಮಿಶ ಆಟ ಆಡಿದರೆ, ಗುಂಡಿಗೆಯ ಕಾಯಿಲೆ ಬರುವ ಸಾದ್ಯತೆ 40%ನಶ್ಟು ಕಮ್ಮಿಯಾಗುತ್ತದಂತೆ, ಲಕ್ವ ಹೊಡೆಯುವ ಸಾದ್ಯತೆ 27%ನಶ್ಟು ಕಮ್ಮಿಯಾಗುತ್ತದಂತೆ ಮತ್ತು ಸಕ್ಕರೆ ಕಾಯಿಲೆ ಬರುವ ಸಾದ್ಯತೆ 50%ನಶ್ಟು ಕಮ್ಮಿಯಾಗುತ್ತದೆಂಬ ಅಂಕಿ ಅಂಶವನ್ನೂ ಅವರು ಮುಂದಿಟ್ಟಿದ್ದಾರೆ.

ಜನರನ್ನು ಆಟ ಆಡುವಂತೆ ಹುರಿದುಂಬಿಸಲು ಕಾಯಿಲೆಗಳ ಮೇಲಿನ ಹೆದರಿಕೆ ಒಂದು ಮಟ್ಟಕ್ಕೆ ಮಾತ್ರ ಕೆಲಸ ಮಾಡಬಲ್ಲುದು. ಆಡಲು ತಕ್ಕ ತಾಣಗಳಿಲ್ಲದಿದ್ದರೆ ಹೆಚ್ಚೆಚ್ಚು ಜನರು ಆಟಕ್ಕೆ ಇಳಿಯುವುದಿಲ್ಲ. ಇವತ್ತು ನಮ್ಮನ್ನು ಕಾಡುತ್ತಿರುವ ತೊಂದರೆ “ಆಡಲು ತಕ್ಕ ತಾಣಗಳಿಲ್ಲದಿರುವುದು”. ಒಳಾಂಗಣ ಆಟದ ಮಯ್ದಾನಗಳು ಸ್ವಲ್ಪವೇ ಸ್ವಲ್ಪವಿದ್ದು ದುಬಾರಿಯಾಗಿರುವುದರಿಂದ ಹಲವರಿಂದ ದೂರವೇ ಇವೆ. ಇನ್ನುಳಿದಂತೆ ಇದ್ದ ಆಟದ ಮಯ್ದಾನಗಳಲ್ಲಿ ಕೆಲವನ್ನು ರಿಯಲ್ ಎಸ್ಟೇಟ್ ಉದ್ದಿಮೆಗಳು ತಮ್ಮ ತೆಕ್ಕೆಗೆ ತೆಗೆದುಕೊಂಡಿವೆ.

ಬಾಕಿ ಉಳಿದಿರುವ ಕೆಲವೇ ಕೆಲವು ಮಯ್ದಾನಗಳು ಸಂತೆಯಂತೆ ತುಂಬಿ ತುಳುಕಾಡುವುದರಿಂದ, ಹೆಚ್ಚಿನ ಜನರು ಆಟದ ಮಯ್ದಾನಗಳಿಂದ ದೂರವೇ ಉಳಿಯುತ್ತಿದ್ದಾರೆ. ಅಯ್ಪಿಎಲ್ ಆಟವನ್ನು ಟೀವಿಯಲ್ಲಿ ನೋಡಿ ಚಪ್ಪಾಳೆ ಹೊಡೆಯುವುದೇ ಹೆಚ್ಚು ಮಂದಿಯ ಮೆಚ್ಚಿನ ಆಟವಾಗಿದೆ. ಹೆಚ್ಚು ಹೊತ್ತು ಟೀವಿ ನೋಡುತ್ತಾ ಕೂರುವುದೂ ಮೇಲೆ ಹೆಸರಿಸಿದ ಕಾಯಿಲೆಗಳಿಗೆ “ಅಕ್ಕರೆಯ ಕರೆಯೋಲೆ ಕೊಟ್ಟು ಕರೆದಂತೆಯೇ”. ಹಾಗಾಗಿ, ಮಂದಿಯ ಒಳಿತಿಗಾಗಿ ಹೆಚ್ಚೆಣಿಕೆಯಲ್ಲಿ ಒಳ್ಳೊಳ್ಳೆ ಆಟದ ಮಯ್ದಾನಗಳನ್ನು ಕಟ್ಟುವುದೂ ನಮ್ಮ ಪಬ್ಲಿಕ್ ಪಾಲಿಸಿಗಳಲ್ಲೊಂದಾಗಬೇಕಾಗಿದೆ.

ಈ ದಿಕ್ಕಿನಲ್ಲಿ ನಮಗೆ ದಾರಿತೋರುಗನಾಗಿ ಡೆನ್ಮಾರ್‍ಕ್ ನಾಡಿನೆಡೆ ನೋಡಬಹುದಾಗಿದೆ. ಡೆನ್ಮಾರ್‍ಕಿನಲ್ಲಿ ಆಟದ ಹಿರಿಮೆಯನ್ನು ಚೆನ್ನಾಗೇ ಅರಿತುಕೊಂಡಿದ್ದಾರೆ. ಆಟದಲ್ಲಿ ತೊಡಗಿರುವ ಕೂಡಣವು ಗಟ್ಟಿ-ಮುಟ್ಟಾಗಿರುತ್ತದೆಯೆಂಬ ನಂಬಿಕೆ ಡೆನ್ಮಾರ್‍ಕಿನದು. ಆಟದ ಮಯ್ದಾನ ಕಟ್ಟುವುದೂ ಸೇರಿದಂತೆ, ಆಟಕ್ಕೆ ಅಂತಲೇ ಡೆನ್ಮಾರ್‍ಕ್ ಸರ್‍ಕಾರ ಎತ್ತಿಡುವ ಹಣ 63.5 ಕೋಟಿ ಕ್ರೋನರ್‍ (ಡೆನ್ಮಾರ್‍ಕಿನ ಹಣದ ಹೆಸರು). 1,90,000 ಮಂದಿಯಿರುವ ಡೆನ್ಮಾರ್‍ಕಿನ ಊರಾದ ಒಡೆನ್ಸಿನಲ್ಲಿ ಸುಮಾರು 400 ಆಟದ ಕೂಟಗಳಿವೆ. ಯಾರು ಬೇಕಿದ್ದರೂ ಆಟದ ಕೂಟ ಶುರು ಮಾಡಬಹುದಾಗಿದ್ದು, ಅದಕ್ಕೆ ಬೇಕಾದ ಹಣದ ಏರ್‍ಪಾಡನ್ನು ಅಲ್ಲಿನ ಸರ್‍ಕಾರವೇ ಮಾಡುತ್ತದೆ. ಈ ಆಟದ ಕೂಟಗಳಿಗೆ ಇರುವ ಕಟ್ಟಲೆಯೆಂದರೆ, ಅದು ಆಸೆಪಟ್ಟು ಬಂದವರೆಲ್ಲರನ್ನೂ ಸೇರಿಸಿಕೊಳ್ಳಬೇಕು. “ಆಟಕ್ಕೆ ನಾವು ಹಣ ತೊಡಗಿಸಿದಶ್ಟೂ, ಕಾಯಿಲೆಗೆ ಬೀಳುವವರ ಆರಯ್ಕೆಗೆ ತೊಡಗಿಸಬೇಕಾದ ಹಣದ ಉಳಿತಾಯವಾದಂತೆಯೇ” ಎನ್ನುತ್ತಾರೆ ಅಲ್ಲಿನ ಆಳ್ಮೆಗಾರರು (authorities). ಒಡೆನ್ಸ್ ಪಟ್ಟಣದ ಕಹಳೆ-ಸೊಲ್ಲು ಏನೆಂದರೆ “ಆಡುವುದೇ ಬಾಳು (to play is to live)”.

ಆಟವೆಂದರೆ ಅದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು, ಕೆಲವರು ಮಾತ್ರ ಆಡುವುದು ಉಳಿದವರು ಚಪ್ಪಾಳೆ ತಟ್ಟುವುದಲ್ಲ ಎಂಬುದನ್ನು ನಮ್ಮ ನಾಡೂ ಅರಿಯಬೇಕಾಗಿದೆ. ಜನದಟ್ಟಣೆ ಕಮ್ಮಿಯಿರುವ ಡೆನ್ಮಾರ್‍ಕಿನಂತಹ ನಾಡುಗಳಲ್ಲಿ ಮಯ್ದಾನ ಕಟ್ಟುವುದು, ಚದರ ಕಿ.ಮೀಗೆ 4,378 ಜನದಟ್ಟಣೆ ಹೊಂದಿರುವ ಬೆಂಗಳೂರಿನಲ್ಲಿ ಮಯ್ದಾನ ಕಟ್ಟಿದಶ್ಟು ಕಶ್ಟವಿರಲಾರದು. ಆದರೆ, ಬೆಂಗಳೂರಿನಂತೆಯೇ ಚದರ ಕಿ.ಮೀಗೆ 6,540 ಜನದಟ್ಟಣೆ ಹೊಂದಿರುವ ಹಾಂಗ್-ಕಾಂಗ್ ಊರಿನವರು ಈ ನಿಟ್ಟಿನಲ್ಲಿ ಏನು ಮಾಡಿದ್ದಾರೆ ಎಂದು ನೋಡಬಹುದು. ಹಾಂಗ್ ಕಾಂಗಿನ ಸರ್‍ಕಾರವು ತನ್ನ ಒಂದೊಂದು ಕಟ್ಟಡದಲ್ಲೂ ಒಂದೆರಡು ಮಹಡಿಯನ್ನು ಆಟಕ್ಕೆಂದೇ ಮೀಸಲಿಟ್ಟಿದೆ. ಹಾಂಗ್ ಕಾಂಗಿನ ಸರ್‍ಕಾರೀ ಮಿಂಬಲೆದಾಣದಲ್ಲಿ (website) ಹೇಳಿರುವಂತೆ, ಅಲ್ಲಿ ಸುಮಾರು 568 ಬ್ಯಾಡ್ಮಿಂಟನ್ ಮಯ್ದಾನಗಳಿವೆ. ಒಂದು ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಯಾರು ಬೇಕಾದರೂ ಬಂದು ಆಡಬಲ್ಲಂತಹ ಬ್ಯಾಡ್ಮಿಂಟನ್ ಮಯ್ದಾನಗಳು ಒಂದು ಡಜನ್ನಿಗಿಂತಾ ಕಮ್ಮಿಯಿವೆ (ಮನೆ ಮುಂದೆ ರಸ್ತೆಯಲ್ಲೇ ಆಡುವಂತ ಬ್ಯಾಡ್ಮಿಂಟನ್ ತಾಣಗಳನ್ನು ಹೊರತುಪಡಿಸಿ).

ಮಾಹಿತಿ ಸೆಲೆ: http://forbesindia.com/printcontent/34825

ಪ್ರಿಯಾಂಕ್ ಕತ್ತಲಗಿರಿ

(ಚಿತ್ರ: www.thehindu.com)

ನಿಮಗೆ ಹಿಡಿಸಬಹುದಾದ ಬರಹಗಳು

5 Responses

  1. cennaagide. sakaalika(idakke kannadadalli eenu?)vaagide.congrats barahagittige.tendulkar, gayle, shah rukh khan irali, avaru maaduvudannu avaru maadali.idu oLLeyadee.aadare naavu eenu maadtaa idivi annuvudu mukya. tvge antikondu beereyavaru eenuu maadidaruu cappaale tattikondu hottu kaleyuvudu sariyalla. salla.namma koduge namagee mattu namma kuudaNakke eenu embudu enduu kaaduva keeLvi aagabeeku!

  2. ಸಕಾಲಿಕ = ಸರಿಹೊತ್ತಿನ = ಈಹೊತ್ತಿನ

  3. Maaysa says:

    ಸಕಾಲಿಕ = opportune, ಸಮಯೋಚಿತ, ಕಾಲೋಚಿತ, ಸಂದರ್ಭೋಚಿತ

    ಹಾಗೆ
    = timely, ತಡವಿಲ್ಲದ, ವಿಳಂಬವಿಲ್ಲದ, ಒಡನೆಯೇ ಮಾಡಿದ

  1. 05/12/2013

    […] ಹೀಗೆ ಎಣ್ಣುಕದಾಟಗಳ ಕೂಟಗಳು ಹಲವು ದಾರಿಗಳನ್ನು ಬಳಸಿ, ಕಡತ ಸಾಗಣೆಯ ದೊಡ್ಡ ತೊಂದರೆಯನ್ನು ಬಗೆಹರಿಸಿಕೊಳ್ಳುತ್ತಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾದ, ಸೊಗಸಾದ ಆಟಗಳು ನಮ್ಮ ಎಣ್ಣುಕದಲ್ಲಿ ಸೇರುವುದಂತು ಕಂಡಿತಾ. ಆದರೆ ನೆನಪಿರಲಿ ಮಕ್ಕಳಿಗೆ  ’ಮನೆಯಲ್ಲಿ ಕುಳಿತು’ ಆಡುವ ಆಟಕ್ಕಿಂತ ’ಬಯಲಿನಲ್ಲಿ ಕುಣಿದು’ ಆಡುವ ಆಟಗಳೇ ಲೇಸು. […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *