ಮಂಗಳ ಗ್ರಹಕ್ಕೆ ಹೋಗಿ ಬರಲು ಬರೀ 30 ದಿನ!

ಪ್ರಶಾಂತ ಸೊರಟೂರ.

ಇದು ತೋರಿಕೆಗಾಗಿ ಅಶ್ಟೇ ಮಾಡಿದ ತಿಟ್ಟ. ಈ ರಾಕೆಟಿನ ಮುಂಬಾಗದಲ್ಲಿ ನಡೆಸುಗರು ಕುಳಿತುಕೊಳ್ಳುತ್ತಾರೆ. ರಾಕೆಟ್ ಓಡಿಸಲು ಬೇಕಾಗುವ ಮೊದಲ ಕಸುವನ್ನು ನೀಲಿ ನೇಸರಪಟ್ಟಿಗಳು ಬೆಳಕಿನಿಂದ ಪಡೆದುಕೊಳ್ಳುತ್ತವೆ.

ಇದು ತೋರಿಕೆಗಾಗಿ ಅಶ್ಟೇ ಮಾಡಿದ ತಿಟ್ಟ. ಈ ರಾಕೆಟಿನ ಮುಂಬಾಗದಲ್ಲಿ ನಡೆಸುಗರು ಕುಳಿತುಕೊಳ್ಳುತ್ತಾರೆ. ರಾಕೆಟ್ ಓಡಿಸಲು ಬೇಕಾಗುವ ಮೊದಲ ಕಸುವನ್ನು ನೀಲಿ ನೇಸರಪಟ್ಟಿಗಳು ಬೆಳಕಿನಿಂದ ಪಡೆದುಕೊಳ್ಳುತ್ತವೆ.

ನೆಲದಿಂದ ಹಾರಿ ಬಾನಿನ ಇತರ ನೆಲೆಗಳ ಬಗ್ಗೆ ಹುಡುಕಾಟ, ಅವುಗಳ ಬಗ್ಗೆ ಅರಸುವಿಕೆ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಾನರಿಮೆ (astronomy) ಮುಂದುವರೆದಂತೆ ಇದಕ್ಕೆ ರೆಕ್ಕೆಪುಕ್ಕಗಳು ಬೆಳೆದು ಇಂದು ನಾವು ಚಂದ್ರನಲ್ಲಿ ಕಾಲಿಟ್ಟು ಬಂದಿದ್ದರೆ, ನೆಲದಂತೆ ಬದುಕುಗಳು ಈಗಾಗಲೇ ಬೆಳೆದಿರಬಹುದಾದ ಮತ್ತು ಮುಂದೆ ಬೆಳೆಯಲು ತಾಣವಾಗಬಹುದಾದ ಮಂಗಳ ಗ್ರಹದಂತ ನೆಲೆಯತ್ತ ಹೆಜ್ಜೆ ಹಾಕಿದ್ದೇವೆ.

ನೆಲದಾಚೆಗಿನ ನೆಲೆಗಳಿಗೆ ತಲುಪಲು ನಮ್ಮ ಮುಂದೆ ಹಲವು ಸವಾಲುಗಳೂ ಇವೆ. ಅವುಗಳಲ್ಲಿ ಏರುಗಣೆಯಂತಹ (ರಾಕೆಟನಂತಹ) ಬಾನಬಂಡಿಗಳನ್ನು ಸಾಗಿಸಲು ಬೇಕಾಗುವ ಉರುವಲು ಕೂಡಾ ಒಂದು. ಇಂದಿನ ಚಳಕ (technology) ಬಳಸಿ ಮನುಶ್ಯರನ್ನು ನೆಲದಾಚೆಗಿನ ಹುಡುಕಾಟಕ್ಕೆ ಕಳಿಸುವುದು ಸಾದ್ಯವಿಲ್ಲ ಅನ್ನುವಂತಾಗಿದೆ. ಏಕೆಂದರೆ ಈಗಿರುವ ಉರುವಲಗಳನ್ನು ಬಳಸಿ ಮಂಗಳದಂತಹ ಗ್ರಹಕ್ಕೆ ಹೋಗಿ ಬರಲು ಸುಮಾರು 500 ದಿನಗಳು ಬೇಕಾಗಬಹುದು ಮತ್ತು ಇಶ್ಟು ಹೊತ್ತು ಮನುಶ್ಯರು ನೆಲದಾಚೆಗಿನ ವಾತಾವರಣವನ್ನು ತಡೆದುಕೊಳ್ಳಲಾರರು ಎಂದು ಅರಿತುಕೊಳ್ಳಲಾಗಿದೆ. ಈ ತೊಡಕನ್ನು ಮೀರಲು ಅಮೇರಿಕಾದ ವಾಶಿಂಗ್ಟನ್ ಕಲಿಕೆವೀಡು (university) ಮತ್ತು MSNW ಎಂಬ ಕೂಟವೊಂದು ಕೂಡಿ ಕೆಲಸ ಮಾಡುತ್ತಿದ್ದು ಇದರಲ್ಲಿ ಗೆಲುವಿನ ಹೆಜ್ಜೆಗಳನ್ನು ಇಟ್ಟಿರುವುದಾಗಿ ತಿಳಿಸಿವೆ. ಅಮೇರಿಕಾದ ನಾಸಾ (NASA) ಕೂಡಾ ಈ ಹಮ್ಮುಗೆಗೆ ಹಣ ಹೂಡಲು ಮುಂದಾಗಿದೆ.

ವರದಿಯಲ್ಲಿ ತಿಳಿಸಿರುವಂತೆ ಮಂಗಳ ಗ್ರಹ ತಲುಪಲು ಇಂದು ತಗಲುತ್ತಿರುವ ಹೊತ್ತಿಗಿಂತ ಮುಂದೊಂದು ದಿನ ತುಂಬಾ ಕಡಿಮೆ ಹೊತ್ತಿನಲ್ಲಿ ತಲುಪಬಹುದು. ಈ ಹಮ್ಮಿಕೊಂಡ ಕೆಲಸ ಗೆಲುವು ಕಂಡರೆ ಮಾನವರನ್ನು ಹೊತ್ತ ಬಾನಬಂಡಿ ಮಂಗಳ ಗ್ರಹಕ್ಕೆ ಬರೀ 30 ದಿನಗಳಲ್ಲಿ ಹೋಗಿಬರಬಹುದು!

ಈ ಏರ‍್ಪಾಟಿನಲ್ಲಿ ’ಕಣನಡುಗಳ ಬೆಸುಗೆ’ಯಿಂದ (nuclear fusion) ಕಸುವನ್ನು ಪಡೆಯಲಾಗುವುದೆಂದು ಕಲಿಕೆವೀಡಿನ ಅರಿಗರು ತಿಳಿಸಿದ್ದಾರೆ. ’ಕಣನಡುಗಳ ಬೆಸುಗೆ’ ಎಂದರೆ ವಸ್ತುಗಳೊಳಗಿನ ಪುಟಾಣಿ ಕಣಗಳ ನಟ್ಟನಡುವನ್ನು ಹೆಚ್ಚಿನ ಓಟಕ್ಕೆ, ಬಿಸುಪಿಗೆ (temperature) ಒಳಪಡಿಸಿ, ಅವುಗಳನ್ನು ಬೆಸೆಯುವಂತೆ ಮಾಡುವುದು. ಹೀಗೆ ಎರಡು ಕಣ ನಡುಗಳ ಬೆಸುಗೆಯಾದಾಗ ಹೇರಳವಾದ ಕಸುವು ಬಿಡುಗಡೆಯಾಗುತ್ತದೆ. ಇಂತಹ ಬೆಸುಗೆಗಾಗಿ ಲೀತಿಯಮ್ಮಿನಂತಹ ವಸ್ತುಗಳ ಕಣಗಳನ್ನು ಬಳಸಲಾಗುತ್ತದೆ. ಕಣನಡುಗಳ ಬೆಸುಗೆಗೆ ಇನ್ನೊಂದು ಉದಾಹರಣೆ ಎಂದರೆ ನೇಸರಿನಲ್ಲಿ (ಸೂರ‍್ಯ) ನಡೆಯುವ ಹಯಡ್ರೋಜನ ಕಣಗಳ ಬೆಸುಗೆ, ಇದರಿಂದಾಗಿಯೇ ನೇಸರಿನಿಂದ ಕಸುವು ಬಿಡುಗಡೆಯಾಗಿ ನಮಗೆಲ್ಲ ಬೆಳಕು ದೊರೆಯುತ್ತದೆ.

ಬಾನರಿಮೆಯಲ್ಲಿ (astronomy) ನಡೆಯುತ್ತಿರುವ ಇಂತಹ ಬೆಳವಣಿಗೆಗಳಿಂದಾಗಿ ನೆಲದಾಚೆಗಿನ ನೆಲೆಗಳಲ್ಲಿ ಬದುಕು ಅರಸುವುದು, ಅಲ್ಲಿ ತಮ್ಮ ಬದುಕು ಕಟ್ಟುವ ಮಾನವರ ಬಯಕೆ ಇನ್ನಶ್ಟು ಗರಿಗೆದರಲಿದೆ.

ಪ್ರಶಾಂತ ಸೊರಟೂರ

(ಚಿತ್ರ: www.space.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 24/06/2013

    […] ಮಂಗಳ ತಲುಪಲು ಹಲವಾರು ತೊಡಕುಗಳಿದ್ದರೂ ಇತ್ತೀಚಿನ ಅರಕೆಗಳು ಇವುಗಳನ್ನು ನೀಗಿಸುವಲ್ಲಿ ಗೆಲುವಿನ […]

ಅನಿಸಿಕೆ ಬರೆಯಿರಿ: