ಉಂಚಳ್ಳಿ ಅರ‍್ಬಿಗೆ ಪ್ರವಾಸ – 2

unchalli-2

(ಇಲ್ಲಿಯವರೆಗೆ: …ಆ ಹಾವನ್ನು ನೋಡಿ, ಮುಂದೆ ಇದ್ದವನು, “ಅದೇನು ಮಾಡಲ್ಲ ಬಿಡ್ರಿ” ಅಂದ. ಅಲ್ಲೇ ಹತ್ತಿರದ ಹಳ್ಳಿಯವರಂತೆ. ಸರಿ ಅಂತ ನಾನು ಮುಂದೆ ನಡೆದೆ. ಶ್ಯಾಮ ಸ್ವಲ್ಪ ಹೊತ್ತು ಕಾಣಿಸ್ತಲೇ ಇರಲಿಲ್ಲ. ಆಮೇಲೆ ಮತ್ತೆ ಹಿಂದೆ ಕಾಣಿಸಿಕೊಂಡ. “ಪಾಪ, ಆ ಹಾವನ್ನ ತುಳಿದು ಸಾಯಿಸಿಬಿಟ್ಟ್ರು ಕಣೋ ಆ ಹುಡುಗ್ರು” ಅಂದ. “ಅಯ್ಯೋ, ಅದೇನು ಮಾಡ್ತು ಇವರಿಗೆ, ಪಾಪ ಸಾಯಿಸಿಬಿಟ್ರಲ್ಲ” ಅಂತ ಮನಸಿಗೆ ತುಂಬಾ ಬೇಸರವಾಯ್ತು… ಉಂಚಳ್ಳಿ ಅರ‍್ಬಿಗೆ ಪ್ರವಾಸ – 1)

ಎಲ್ಲರೂ  ಬರಲಿ ಎಂದು ಮತ್ತೆ ಒಂದೆಡೆ ನಿಂತು ಕಾಯುತ್ತಿದ್ದೆವು. ಆ ಹಳ್ಳಿಯ ಹುಡುಗರು ನಮ್ಮನ್ನು ದಾಟಿ ಮುಂದೆ ಹೋದರು. ನಾವು ಅಲ್ಲೇ ನಿಂತು ಪೊಟೋಗಳನ್ನು ತೆಗೆಯುತ್ತಿದ್ದೆವು. ಆಗ ಜಗ್ಗು, ಒಂದು ಜಿಗಣೆ ಹಿಡಿದು, ಅವನ ಹೆಬ್ಬೆರಳ ಹತ್ತಿರ ರಕ್ತ ಕುಡಿಸಬೇಕೆಂದು ಅಲ್ಲಿ ಅದನ್ನು ಕಚ್ಚಿಸುವುದಕ್ಕೆ ತೊಡಗಿದ್ದ. “ಅಲ್ಲಿ ಏನೋ ಏಟಾಗಿ ರಕ್ತ ಕೆಟ್ಟಿದೆ. ಅದಕ್ಕೆ ರಕ್ತ ತೆಗೆಸ್ತೀನಿ ಜಿಗಣೆ ಕಯ್ಯಲ್ಲಿ” ಅಂದ. ನಾನು ಅದರ ಒಂದೆರಡು ಪೋಟೋಗಳನ್ನು ತೆಗೆದೆ. ಅಶ್ಟು ಹೊತ್ತಿಗೆ, ಶ್ಯಾಮ, ಮತ್ತು ಮದು ಬಂದರು. ಗವ್ತಮ, ಗುರು ಕೂಡ ಹಿಂದೆಯೇ ಕಾಣಿಸಿಕೊಂಡರು. ನಾವು ಮತ್ತೆ ಮುಂದೆ ನಡೆದೆವು.

ಮುಂದೆ ಮರೆಯಾಗಿದ್ದ ಜಗ್ಗು ಸ್ವಲ್ಪ ಮುಂದೆ ನಡೆದ ಮೇಲೆ ಮತ್ತೆ ಸಿಕ್ಕನು. ಆಗ ಹಾವಿನ ವಿಶಯ ನೆನಪಾಗಿ ಅದನ್ನು ಆ ಹುಡುಗರು ಸಾಯಿಸಿದ್ದು ಅವನಿಗೆ ಹೇಳಿದೆ. “ನಾ ಅಂದುಕೊಂಡಿದ್ದೆ, ಆ ಹುಡುಗ್ರು ಅದನ್ನ ಸಾಯಿಸಬಹುದು ಅಂತ. ಹಾಗೆ ಆಯ್ತು ನೋಡು. ಅವರಿಗೆ ತೋರಿಸ್ಲೇ ಬಾರದಾಗಿತ್ತು” ಎಂದ. ಅವನಿಗೂ ತುಂಬಾ ಬೇಸರವಾಯ್ತು. ಇನ್ನೇನು ಮಾಡಲಾಗುತ್ತದೆಂದು ಮುಂದೆ ನಡೆದೆವು. ಕಾಡಲ್ಲಿ ಎಲ್ಲ ಸಣ್ಣ ಜಾತಿಯ ಮರಗಳು. ಸಾಕಶ್ಟು ಬಿದಿರು ಮರಗಳನ್ನೂ ನೋಡಿದೆವು. ಸುಮಾರು ಮರಗಳು ಕೊಡೆಯಾಕಾರದವು. ಅದರ ಸಲುವಾಗಿ ಕಾಡೊಳಗೆ ಬಿಸಿಲೇ ಬೀಳುವುದಿಲ್ಲ. ಮತ್ತೆ, ಆ ಕಾಲ್ದಾರಿ ಬಿಟ್ಟು ಬೇರೆ ಎಲ್ಲ ಕಡೆಯೂ ಹುಲ್ಲು ಮತ್ತು ಸಣ್ಣ ಪೊದೆ. ಇಡೀ ಕಾಲ್ದಾರಿಯೆಲ್ಲ ಇಳಿಜಾರು. ಮತ್ತೆ ಸುಮಾರು ಕಡೆ ಪಾಚಿ. ಕಾಲಿಟ್ಟರೆ ಸಾಕು, ಬಿದ್ದು ಬೆನ್ನು ಮೂಳೆ ಮುರಿಯುವಶ್ಟು. ರೆಂಬೆ, ಕೊಂಬೆ, ಬೇರು, ಪೊದೆ ಹೀಗೆ ಎನು ಸಿಕ್ಕರೂ ಅದನ್ನು ಊರಿ ಇಳಿಯುವ ಹಾಗೆ ಇಲ್ಲ. ಹಿಡಿದ ಕೂಡಲೆ ಕಯ್ಗೆ ಬರುತ್ತಿದ್ದವು. ಒಂದೇ ಸಮನೆ ನೀರು ಬಿದ್ದು ಬಿದ್ದು ಹಾಗೆ ಸಡಿಲವಾಗಿದ್ದವು ಎಲ್ಲ. ಒಣ ಎಲೆ ಮತ್ತು ತೇವಾಂಶ ಹೆಚ್ಚಿರುವ ಜಾಗಗಳಲ್ಲಂತೂ ಸಿಕ್ಕಾಪಟ್ಟೆ ಜಿಗಣೆಗಳು. ಅಂತಹ ಜಾಗಗಳಲ್ಲಿ ನಾವು ಓಡಿಕೊಂಡು ಹೋಗುತ್ತಿದ್ದೆವು. ಅದನ್ನು ದಾಟಿ ಕಾಲಿಗೆ ಹತ್ತಿರುವ ಜಿಗಣೆಗಳನ್ನು ತೆಗೆದು ಮತ್ತೆ ಮುಂದೆ ನಡೆಯುತ್ತಿದ್ದೆವು.

ಸುಮಾರು ಕೆಳಗೆ ಇಳಿದಾಗ ಒಂದೆರಡು ಕಡೆ ಬಂಡೆಗಳಿವೆ. ಅವನ್ನು ದಾಟಿ ಇಳಿಯಬೇಕು. ಒಂದು ಕಡೆ ನಾನು ಒಂದು ದುಂಡನೆಯ ಕಲ್ಲಿನ ಮೇಲೆ ತೂಕ ಬಿಟ್ಟು ಇಳಿಯುವಾಗ, ಒದ್ದೆಯಾಗಿ ಸಡಿಲವಾಗಿದ್ದ ಮಣ್ಣು ಆ ಕಲ್ಲನ್ನು ತನ್ನ ಹಿಡಿತದಿಂದ ಬಿಟ್ಟಿತು. ನಾ ಊರಿದ್ದ ಕಯ್ ಜಾರಿ, ನಾನು ಕೊಂಚ ಜಾರಿದೆ. ಇದಕ್ಕಿದ್ದಂತೆ ಆ ಕಲ್ಲು ನನ್ನ ತೊಡೆ ಮೇಲೆ ಬಂದು, ಜಾರಿ ನನ್ನ ಕಾಲ ಬೆರಳಗಳ ಮೇಲೆ ಬಿತ್ತು. ಬೆರಳುಗಳು ಹೋದವು ಎಂದುಕೊಂಡೆ. ಜಗ್ಗು, “ಹುಶಾರು ಕಣ್ಲ ಕಾಲ್ ಮೇಲೆ ಬೀಳಲಿಲ್ಲ ತಾನೆ?” ಎಂದನು. ನಾನು “ಬಿತ್ತು” ಎಂದು ಹೇಳಿ ಪಕ್ಕಕ್ಕೆ ಬಂದು ಕುಳಿತೆ. ಆದರೆ ಏನೂ ಹೆಚ್ಚಗೆ ನೋವಾಗಲಿಲ್ಲ. ಆ ಕಲ್ಲು ಸರಿಯಾಗಿ ನನ್ನ ಮೆಟ್ಟಿನ ಪಟ್ಟಿ ಮೇಲೆ ಬಿದ್ದಿತ್ತು. ಅದಕ್ಕೆ ಬೆರಳಿಗೆ ಏನೂ ಆಗಿರಲಿಲ್ಲ!

ಅಲ್ಲಿಂದ ಕೊಂಚ ದೂರದಲ್ಲೇ, ನೀರಿನ ಸದ್ದು ಕೇಳಿಸುತ್ತಿತ್ತು. ಅರ್‍ಬಿಗೆ ಬಹಳ ಹತ್ತಿರ ಇದ್ದೇವೆಂದು ಗೊತ್ತಾಯ್ತು. ಅಶ್ಟರಲ್ಲೇ ಹೊಳೆ ಕೂಡ ಕಾಣಿಸಿತು. ಕತ್ತಲಿದ್ದ ಕಾಡಿಂದ ಹೊರಗೆ ಬಂದ ಕೂಡಲೇ ಬೆಳಕು ಹೆಚ್ಚಾಯ್ತು. ನಮಗೆ ಕಂಡಿದ್ದು ತೆರೆದ ಜಾಗ. ಕಣಿವೆಯ ಒಳಗೆ ಇದ್ದೆವು. ನಮ್ಮ ಮುಂದೆ ರಬಸವಾಗಿ ಹರಿಯುತ್ತಿದ್ದ ಹೊಳೆ. ಹೊಳೆಯ ಆ ದಡದಾಚೆ ಕಣಿವೆಯ ಇಳಿಜಾರಲ್ಲಿ ಹಚ್ಚ ಹಸಿರು ಹಾಸು. ಹಸುರಿನ ನಡುವೆ ಅಲ್ಲಲ್ಲಿ ಮಂಜು ಕವಿದಿದೆ. ಎಡಗಡೆ ಒಂದಶ್ಟು ದೂರದಲ್ಲಿ ಅರ್‍ಬಿ ಕಾಣಿಸುತ್ತಿದೆ. ಅದರ ಬೋರ್‍ಗರೆತ ಅಶ್ಟು ದೂರದಿಂದಲೂ ಕೇಳಿಸುತ್ತಿದೆ. ಕಣಿವೆಯ ಚೆಲುವನ್ನು ಸವಿಯುತ್ತ ಅಲ್ಲೇ ಬೆರಗಾಗಿ ಮಯ್ ಮರೆತು ನಿಂತೆವು. ಹೊಳೆಯಲ್ಲೇ ಇದ್ದ ಬಂಡೆಯೊಂದರ ಮೇಲೆ ಹೋಗಿ ಕುಳಿತುಕೊಂಡೆ. ಶ್ಯಾಮ ಕೂಡ ಬಂದ. ಇನ್ನೂ ಮುಂದೆ ಬಂಡೆಗಳಿಗೆ ಹೋಗುವುದು ಕುತ್ತೇ. ಯಾಕೆಂದರೆ ಅಲ್ಲಿಂದಾಚೆಗೆ ಹೊಳೆಯ ಹರಿವು ಹೆಚ್ಚಿತ್ತು. ನಾನಂತೂ ಅರ್‍ಬಿ ನೋಡಿಕೊಂಡೇ ಕುಳಿತು ಬಿಟ್ಟೆ.

ಗವ್ತಮ ಎಂದಿನಂತೆ ಬಂದ ಕೂಡಲೆ ಶೂ ಕಿತ್ತು ಬಿಸಾಕಿ ಕಾಲ ತುಂಬಾ ಮುತ್ತಿದ್ದ ಜಿಗಣೆಗಳನ್ನು ಕೀಳುತ್ತಿದ್ದನು. ಕಾಲಿಂದ ರಕ್ತ ಸಿಕ್ಕಾಪಟ್ಟೆ ಸೋರುತ್ತಿತ್ತು. ಎರಡು ಮೂರು ರಕ್ತ ಕುಡಿದು ಊದಿದ್ದ ಜಿಗಣೆಗಳು ಅಲಲ್ಲೇ ಅವನ ಕಾಲಲ್ಲಿ ಜೊಂಪು ಹತ್ತಿದ ಹಾಗೆ ವಾಲಾಡಿಕೊಂಡು ನೇತಾಡ್ತಿದ್ದವು. ಅದನ್ನೆಲ್ಲಾ ಕಿತ್ತು ಹಾಕಿ ನಾವೆಲ್ಲರೂ ಕೂತಿದ್ದ ಬಂಡೆಗೆ ಬಂದ “ಲೀಚಪ್ರಿಯ” (ಇದು ಮಹೇಶ ಕೊಟ್ಟ ಬಿರುದು, ಬಲ್ಲಾಳರಾಯನ ದುರ್‍ಗದಲ್ಲಿ). ಅಲ್ಲೇ ಸುಮಾರು ಪೋಟೊಗಳನ್ನು ತೆಗೆದ ಮೇಲೆ ಅರ್‍ಬಿಯ ಹತ್ತಿರ ಹೋಗೋಣ ಅಂತ ಅಂದುಕೊಂಡೆವು. ಅರ್‍ಬಿಯಿಂದ ಬಂದ ನೀರೇ ಹೊಳೆಯಾಗಿದ್ದದ್ದು. ಹೊಳೆ ದಡದಲ್ಲೇ ಒಂದು ಅರೆ ಕಿಲೋಮೀಟರ್‍ ಮುಂದೆ ನಡೆದರೆ ಅರ್‍ಬಿಯ ಅಡಿಗೆ ಹೋಗುತ್ತೇವೆ. ಮದು ಆಗಲೇ ಮುಂದೆ ಹೊರಟಿದ್ದ. ನಾನು, ಜಗ್ಗು ಅವನ ಹಿಂದೆ ಹೊರಟೆವು. ಆ ದಡದಲ್ಲಿ ಸಿಕ್ಕಾಪಟ್ಟೆ ದೊಡ್ಡ ಬಂಡೆಗಳು. ಅವಗಳನ್ನು ದಾಟೋದು ಅಶ್ಟು ಸಲೀಸಾದ ಕೆಲಸವಲ್ಲ. ನಡು ನಡುವೆ ಕಣಿವೆಯಿಂದ ಹರಿದು ಬೀಳುತ್ತಿದ್ದ ಸಣ್ಣಹೊಳೆಗಳು ಬೇರೆ. ಒಂದೊಂದು ಕಡೆ ಹೊಳೆಗೆ ಬಹಳ ಹತ್ತಿರವಾಗಿ (ನೀರು ನಮ್ಮ ಕಾಲುಗಳನ್ನು ತಾಗುವಶ್ಟು ಹತ್ತಿರ) ತೀರಾ ಇಳಿಜಾರಾದ ಬಂಡೆಗಳನ್ನು ದಾಟಿ ಹೋಗಬೇಕಾಯಿತು. ಆದರೆ ಯಾವ ಬಂಡೆಯೂ ಸದ್ಯಕ್ಕೆ ಅಶ್ಟಾಗಿ ಜಾರುತ್ತಿರಲಿಲ್ಲ. ಸ್ವಲ್ಪ ಎಚ್ಚರದಿಂದ ನಡೆದರೆ ಸಾಕು. ಕೆಲವೊಂದು ಕಡೆ ಕಾಲುಬೆರಳುಗಳನ್ನು ಇಟ್ಟು ನಡೆಯುವುದಕ್ಕೆಂದು ಬಂಡೆಯನ್ನು ಸಣ್ಣದಾಗಿ ಕೊರೆದಿದ್ದಾರೆ. ಅವುಗಳ ನೆರವಿಂದ, ಈ ಬಂಡೆಗಳ ಮೇಲೆ ಎಚ್ಚರದಿಂದ ಕಾಲುಹಾಕುತ್ತ ಹೋದೆವು. ಹಿಂದಿರುಗುವಾಗ “ಒಳ್ಳೆ ಮಜ ಇರುತ್ತೆ” ಎಂದುಕೊಂಡೆ.

ಸುಮಾರು ಅರ್‍ದ-ಮುಕ್ಕಾಲು ದಾರಿ ಹೋಗುವಶ್ಟರಲ್ಲಿ ನಮಗೆ ಆ ಹಳ್ಳಿ ಹುಡುಗರು ಸಿಕ್ಕರು. ನಾನು ಹಿಂದೆ ಇದ್ದೆ. ಜಗ್ಗು, ಮದು ಅವರ ಜೊತೆ ಮಾತಾಡುತ್ತಿದ್ದರು. ನಾನು ಬರುವಶ್ಟರಲ್ಲಿ ಅವರು ಹೊರಟರು. “ಅವರು ಪಾಲ್ಸ್ ಹತ್ತಿರ ಹೋಗಿದ್ರಂತೆ ಕಣೊ. ತುಂಬ ಚೆನ್ನಾಗಿದೆಯಂತೆ. ಅಲ್ಲಿ ಪ್ರೇಯರ್‍ ಕೂಡ ಮಾಡಿದ್ರಂತೆ” ಎಂದು ಜಗ್ಗು ಹೇಳಿದನು.

ಒಂದು ಕಡೆ ಬಂಡೆಯಿಂದ ಬಂಡೆಗೆ ಎಗರಬೇಕಿತ್ತು. ಜಗ್ಗು ಮೊದಲು ದಾಟಿ ನನಗೂ, ಮದುಗೂ ದಾಟುವುದಕ್ಕೆ ಹೇಳಿದನು. ಸುಮಾರು 5 ಅಡಿಯಶ್ಟು ದೂರವಾದರೂ ಹಾರಬೇಕಿತ್ತು. ನಡುವೆ ಸುಮಾರು 10 ಅಡಿ ಆಳ ಇದ್ದುದರಿಂದ ನನಗೆ ತುಸು ದಿಗಿಲಾಯಿತು. ಬೇರೆ ಕಡೆಯಿಂದ ಬರೋಣ ಅಂದರೆ ಬೇರೆ ದಾರಿಯಿಲ್ಲ. ಬಂಡೆ ಇಳಿದು ಮತ್ತೆ ಮುಂದಿನ ಬಂಡೆ ಹತ್ತುವುದಕ್ಕೆ ಬಹಳ ಹೊತ್ತಾಗುತ್ತದೆ. “ಏನಾಗಲ್ಲ, ಜಿಗಿಯೋ ಮಗ. ಮೆಂಟಲ್ ಬ್ಲಾಕ್ ಅಶ್ಟೇ” ಎಂದ ಜಗ್ಗು. ನಾನು ಮೆಟ್ಟು ತೆಗೆದೆ. ನನ್ನ ಅಡಿಗಳಿಗೆ ಹೆಚ್ಚು ಹಿಡಿತ ಸಿಕ್ಕಿ, ಬಹಳ ಸಲೀಸಾಗಿ ದಾಟಬಹುದು ಎನ್ನಿಸಿತು. ಜೋಡಿ ಮೆಟ್ಟುಗಳನ್ನು ಎದುರಿನ ಬಂಡೆಗೆ ಎಸೆದು ಬಹಳ ಸಲೀಸಾಗಿ ಜಿಗಿದೆ. “ನೋಡಿದ್ಯ, ಅಶ್ಟೇ” ಎಂದ ಜಗ್ಗು. ಮದು ಕೂಡ ಹಾಗೇ ಬಹಳ ಸಲೀಸಾಗಿ ಬಂಡೆ ದಾಟಿದ. ಅರ್‍ಬಿಗೆ ಹತ್ತಿರ ಆಗುತ್ತಿದ್ದಶ್ಟೂ ಪ್ರಕ್ರುತಿಯ ಚೆಲವು ಹೆಚ್ಚಾಗುತ್ತಿತ್ತು. ಕ್ಯಾಮರ ಇಲ್ಲ. ಮತ್ತೆ ಹಿಂದುರುಗಿ ಗವ್ತಮನಿಂದ ತೊಗೊಂಡು ಬರೋಣ ಎಂದು ಜಗ್ಗು ಹೇಳಿದ. “ಆಗಲ್ಲ ಹೋಗಲೇ, ಸ್ಯಾನೆ ಕಶ್ಟ ಅಯ್ತೆ, ಗವ್ತಮನೇ ಬರಬಹುದು ನೋಡೋಣ ತಡ್ಕ” ಎಂದೆ. “ಅವನು ಬರಲ್ಲ ಅನಿಸುತ್ತೆ ಕಣ್ಲ. ಇಶ್ಟು ದೂರ ಬಂದು, ಇಶ್ಟು ಚೆನ್ನಾಗಿರೊ ಅರ್‍ಬಿಯ ಒಂದೆ ಒಂದು ಸ್ನ್ಯಾಪ್ ಕೂಡ ತೊಗೊಳ್ದೇ ಹೋಗೋದು ಹೇಗೋ?” ಎಂದು ಜಗ್ಗು ಕೊರಗಿದ. ನನಗಂತೂ ಮತ್ತೆ ಆ ಬಂಡೆಗಳನ್ನೆಲ್ಲ ದಾಟಿ ಕ್ಯಾಮರಾ ತೆಗೆದುಕೊಂಡು ಬರುವಶ್ಟು ಉತ್ಸಾಹ ಇರಲಿಲ್ಲ. ಮದುನಂತೂ ಕೇಳುವ ಹಾಗೇ ಇರಲಿಲ್ಲ. ಅಂಗಯ್ ಅಗಲ ಜಾಗ ಸಿಕ್ಕರೂ ಅಲ್ಲೇ ಪಾರ್‍ಕ್ ಮಾಡೋ ಆಸಾಮಿ ಅವನು. ನಮ್ಮಪ್ಪರಾಣೆಗೂ ಅವನು ಕ್ಯಾಮರಾ ತರೋದಕ್ಕೆ ಹೋಗ್ತಿರಲಿಲ್ಲ.

ಅರ್‍ಬಿಗೆ ಬಹಳ ಹತ್ತಿರ ಇರೋ ಬಂಡೆಗಳ ಮೇಲೆ ನೀರು ಒಂದೇ ಸಮನೆ ಚಿಮ್ಮುವುದರಿಂದ ಸಿಕ್ಕಾಪಟ್ಟೆ ಪಾಚಿ. ನಿಲ್ಲುವುದಕ್ಕೂ ಆಗುವುದಿಲ್ಲ ಕೂರುವುದಕ್ಕೂ ಆಗುವುದಿಲ್ಲ. ನಿದಾನವಾಗಿ ತೆವೆಳಿಕೊಂಡು ಹೋದೆವು. ಅರ್‍ಬಿಯ ಅಡಿಗೆ ಹೋಗುವುದಕ್ಕೆ ಆಗುವುದಿಲ್ಲ. ಅದರ ಎದುರಿನ ದಡದಲ್ಲಿ ಬಂಡೆಯ ಏಣಿನವರೆಗೂ ಹೋಗಬಹುದು. ಅರ್‍ಬಿಯ ಕೆಳಗೆ ಒಂದು ದೊಡ್ಡ ಮಡುವಾಗಿ, ಅಲ್ಲಿಂದಲೇ ನೀರು ಮುಂದೆ ರಬಸವಾಗಿ ಹರಿದು ಹೊಳೆಯಾಗುತ್ತದೆ. ನಾವು ಅದೇ ಎದುರಿನ ತೀರದ ಬಂಡೆಯ ಮೆಲೆ ಕುಳಿತು ಮಯ್ಮರೆತು ನೀರು ಬೀಳುವುದನ್ನು ನೋಡುತ್ತ ಕುಳಿತೆವು. ಜಗ್ಗು ಕುಳಿತಿದ್ದರ ಕೊಂಚ ಎಡಗಡೆ ಹೋಗಿ ಒಳ್ಳೆಯ ಜಾಗ ಮಾಡಿಕೊಂಡು ಕುಳಿತೆನು. ಮದು ನನ್ನ ಹಿಂದೆ ಕುಳಿತನು. ಅರ್‍ಬಿ ನೋಡುತ್ತ ಹಾಗೇ ಮಯ್ ಮರೆತಿದ್ದೆವು.

ಅಲ್ಲಿ ಕುಳಿತ ಕ್ಶಣವೇ ನಾನು ಮಯ್ ಮರೆತಿದ್ದೆ. ಮಾತೆಲ್ಲ ನಿಂತೇ ಹೋಗಿತ್ತು. ಅರ್‍ಬಿಯ ಬೋರ್‍ಗರೆತವಲ್ಲದೆ ನನಗಂತೂ ಏನೂ ಕೇಳಿಸುತ್ತಿರಲಿಲ್ಲ. ಆ ನೊರೆ ಹಾಲು ಬಿಳುಪಿನ ಹರಿವೊಂದನ್ನು ಬಿಟ್ಟು ಏನೂ ಕಾಣುತ್ತಲೂ ಇಲ್ಲ. ನೀರು ಬಿದ್ದು ಅಲ್ಲಿಂದ ಏಳುತ್ತಿದ್ದ ಮಂಜು ನೋಡಿದರೆ ಗೊತ್ತಾಗುತ್ತಿತ್ತು, ಅದು ಎಶ್ಟು ರಬಸವಾಗಿ ಬೀಳುತ್ತಿದೆ ಎಂದು. ಅರ್‍ಬಿಯ ಬಲಗಡೆ ಎದುರಿಗೆ ಒಂದು ನೇರ ನಿಂತ ಬಂಡೆ ಇದೆ. ಅದರ ಮೇಲಿಂದ ಚಿಮ್ಮಿದ ನೀರು ಸುರಿದು ಕೆಳಕ್ಕೆ ಬೀಳುತ್ತದೆ. ಆದರೆ, ಆ ಅರ್‍ಬಿಯಿಂದ ಬಿದ್ದ ನೀರಿನ ರಬಸ ಎಶ್ಟಿತ್ತೆಂದರೆ, ಅಲ್ಲಿಂದ ಬೀಸುವ ಗಾಳಿ, ಎದುರಿನ ಬಂಡೆಯಿಂದ ಬೀಳೋ ನೀರನ್ನು ಕೆಳಕ್ಕೆ ಬೀಳುವುದಕ್ಕೇ ಬಿಡುತ್ತಿರಲಿಲ್ಲ. ಮೇಲಕ್ಕೆ ಎತ್ತಿ ಬಿಸಾಕುತ್ತಿತ್ತು. ಇದನ್ನು ನೋಡಿ ಎಲ್ಲ ಸೋಜಿಗ ಪಟ್ಟೆವು.

ನಾನು ಅರ್‍ಬಿಯ ಬಂಡೆ ಎಶ್ಟು ಎತ್ತರ ಇರಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ಜಗ್ಗುಗೆ ಹೇಳಿದೆ “ಸುಮಾರು 120 ಅಡಿ ಇರಬಹುದಲ್ವಾ?” ಎಂದು. ಅವನು “ಏ, ಇಲ್ಲ ಹೋಗೊ, ಇದು ಕಂಡಿತ, 300 ಅಡಿಗಿಂತ ಹೆಚ್ಚಿದೆ” ಎಂದ. ಮದು ಕೂಡ ಹಾಗೇ ಸುಮಾರು 300 ಅಡಿ ಎಂದು ಹೇಳಿದ. ಅಲ್ಲಿಂದಲೇ ವಾದ ಶುರುವಾಯ್ತು. ನಾನು “ಗೊಮ್ಮಟೇಶ್ವರ ಮೂರ್‍ತಿ 57 ಅಡಿ ಇದೆ. ನೀ ಹೇಳ್ದಂತೆ ಇದು 300 ಅಡಿ ಆದ್ರೆ ಅದು ಅರ್‍ಬಿಗೆ ಇಶ್ಟು ಎತ್ತರಕ್ಕೆ ಬರುತ್ತೆ. ನೋಡು ಅದು ಅಶ್ಟು ಚಿಕ್ಕದಾ?” ಅಂದೆ. ಹಾಗೆ ಅವನು ಕೂಡ ಬೇರೆ ಏನೇನೋ ಮಾದರಿಗಳನ್ನ ಕೊಟ್ಟ. ಒಟ್ಟಿನಲ್ಲಿ ಒಂದು ಒಪ್ಪಿಗೆಗೆ ಬರಲಿಲ್ಲ.

ಅಶ್ಟರಲ್ಲಿ ನನಗೆ ಗುರು ಕಾಣಿಸಿದ. ಪರವಾಗಿಲ್ಲ, ಗುರು ಬಂದನಲ್ಲ ಎಂದು ಹಿಗ್ಗಾಯಿತು. ಆದರೆ ಅವನು ಅಲ್ಲೇ ಕುಳಿತನು. ಅಶ್ಟರಲ್ಲೇ ಶ್ಯಾಮ ನಾವು ಕುಳಿತಿದ್ದ ಬಂಡೆ  ಹತ್ತುತ್ತಿರುವುದು ಕಾಣಿಸಿತು. ಬಂಡೆಗಳು  ಅಡ್ಡ ಇದ್ದಿದ್ದರಿಂದ ಅವನು ಗುರುಗಿಂತ ಮುಂದಿರೋದು ಗೊತ್ತಾಗಲಿಲ್ಲ. ಶ್ಯಾಮ ಬಂದಿದ್ದನ್ನು ನೋಡಿ, ಗವ್ತಮ ಎಲ್ಲಿ ಅಂತ ಜಗ್ಗು ಕೇಳಿದ. “ಗವ್ತಮ ಬರದೇ ಇದ್ರೇನಂತೆ ಅವನ ಕ್ಯಾಮ್ರಾ ತೊಗೊಂಡು ಬರೋದಲ್ವೇನ್ಲಾ” ಅಂತ ಸರಿಯಾಗಿ ಉಗಿಯೋದಕ್ಕೆ ಜಗ್ಗು ಅಣಿಯಾಗಿದ್ದ. ಶ್ಯಾಮ “ಹಿಂದೆ ಬಂದ ನೋಡು” ಅಂದ. ಗವ್ತಮನ ಜೊತೆ ಅವನ ಕ್ಯಾಮ್ರಾನೂ ಬಂದಿದ್ದನ್ನು ನೋಡಿ, ಜಾಗು ಹಿಗ್ಗಿಗೆ ಎಲ್ಲೆಯೇ ಇರಲಿಲ್ಲ.

ಕೊಂಚ ಹೊತ್ತಾದ ಮೇಲೆ ಗುರು ಕೂಡ ನಾವಿದ್ದಲ್ಲಿಗೆ ಬಂದ. ಸುಮಾರು ಒಂದು ಗಂಟೆ ಹೊತ್ತು ಪೋಟೋ, ವಿಡಿಯೋ ತೆಗೆದೆವು. ನಾನು ಅಲ್ಲೇ ಹಾಗೇ ಮಲಗಿ ಬರೀ ಅರ್‍ಬಿಯನ್ನು ಎಡಬಿಡದೆ ನೋಡುತ್ತಲೇ ಇದ್ದೆ. ಗವ್ತಮ ಬಂದು “ಏನ್ಲಾ ಕಂಡು ಹಿಡಿದೆ” ಎಂದು ರೇಗಿಸಿದ. ಆ ಒಂದು ಗಂಟೆ ಹೇಗೆ ಕಳಿಯಿತೋ ಗೊತ್ತೇ ಆಗಲಿಲ್ಲ. ಒಳ್ಳೆ ಗರ ಬಡಿದವರ ಹಾಗೆ ನಾನು ಅರ್‍ಬಿಯನ್ನು ನೋಡುತ್ತಲೇ ಇದ್ದೆ. ಅಶ್ಟು ಹೊತ್ತಿಗೆ ಶ್ಯಾಮ, ಗುರು, ಮದು, ಗವ್ತಮ ಹೊರಡುವುದಕ್ಕೆ ಅಣಿಯಾದರು. “ನಾವು ಆಮೇಲೆ ಬರ್‍ತೀವಿ, ನೀವು ಹೋಗಿರಿ” ಎಂದು ನಾನೂ ಜಗ್ಗು ಅಲ್ಲೆ ಇದ್ದೆವು. ಎದುರಿನ ಬಂಡೆ ಕೆಳಗೆ ಸೂರ್‍ಯ ಹೋದ ಕೂಡಲೇ ನಾವು ಹೊರಡೋಣ ಎಂದು ಮಾತಾಡಿ ಕೊಂಡೆವು.

ಕೊಂಚ ಮೋಡ ಕವಿದಿದ್ದರಿಂದ ಬಿಸಿಲು ಕೊಂಚ ಕಡಿಮೆ ಆಗಿ ಸುತ್ತ ಇನ್ನೂ ಚೆಲುವಾಗಿ ಕಾಣುತ್ತಿತ್ತು. ಕುಳಿತಿರುವುದು ಕಣಿವೆಯಲ್ಲಿ, ಸುತ್ತ ಬರೀ ಹಸಿರು, ಎದುರಿಗೆ ದೊಡ್ಡ ಬಿಳಿ ಅರ್‍ಬಿ. ನಮ್ಮ ಹಿಂದೆ ತಿರುಗಿ ನೋಡಿದರೆ ದೊಡ್ಡ ದೊಡ್ಡ ಬಂಡೆ ಕಲ್ಲುಗಳು. ಇನ್ನೇನು ಬೇಕು? ಅಲ್ಲೇ ಇದ್ದು ಬಿಡೋಣ ಎನ್ನಿಸುತ್ತಿತ್ತು. ಬಾಳೆಲ್ಲ ಅಲ್ಲೇ ಕಳೆದು ಬಿಡೋಣ ಎನ್ನಿಸಿತು. ಅಲ್ಲೇ ಯಾವುದೋ ಹಕ್ಕಿಯಾಗೋ, ಎಲೆಯಾಗೋ, ಮೀನಾಗೋ, ಪಾಚಿಯಾಗೋ, ಹೇಗಾದರೂ ಸರಿ. ಆ ಕೂಡಲೇ, ನನಗೆ ನೆನಪಾಗಿದ್ದು ನಮ್ಮ ಆದಿ ಕವಿ ಪಂಪ. ಯಾಕೆ ಎಂದರೆ ನನಗೆ ಅನ್ನಿಸಿದ ಹಾಗೆ ಅವನಿಗೂ ತನ್ನ ಬನವಾಸಿ ದೇಶದ ಬಗ್ಗೆ ಅನ್ನಿಸಿತ್ತು. “ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್”. ಅವನಿಗೆ ಬನವಾಸಿ ಬಿಡುವುದಕ್ಕೆ ಒಂದು ಕ್ಶಣವೂ ಮನಸ್ಸಿರಲಿಲ್ಲವಂತೆ. ಮುಂದಿನ ಜನ್ಮದಲ್ಲೂ ಅವನು ಬನವಾಸಿಯಲ್ಲೇ ಹುಟ್ಟಬೇಕೇಂಬ ಬಯಕೆ. ಮನುಶ್ಯನಾಗಿ ಆಗದೇ ಇದ್ದರೂ ಮರಿದುಂಬಿಯಾಗೋ, ಕೋಗಿಲೆಯಾಗೋ ಅವನಿಗೆ ಬನವಾಸಿಯಲ್ಲಿ ಹುಟ್ಟಿ ಬರುವ ಆಸೆ. ಇದನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ, ಈಗಿನ ಉಂಚಳ್ಳಿ ಆಗಿನ ಬನವಾಸಿ ದೇಶದಲ್ಲಿ ಬರುತ್ತಿತ್ತು. ಪಂಪನೂ ಈ ಉಂಚಳ್ಳಿ ಅರ್‍ಬಿಯನ್ನು ನೋಡಿರ ಬಹುದು. ನಮ್ಮ ಹಾಗೆಯೇ ಕಾಡಲ್ಲಿ ಕಣಿವೆಗೆ ಇಳಿದು, ಬಂಡೆಗಳನ್ನು ದಾಟಿ ಇದೇ ಬಂಡೆ ಮೇಲೆ ಕುಳಿತು ಮಯ್ ಮರೆತು ಅರ್‍ಬಿಯನ್ನು ನೋಡುತ್ತ ಕುಳಿತಿದ್ದಿರಬಹುದು. ಇದರ ಅಂದವನ್ನು ಹಾಡಿ ಹೊಗಳಿದ್ದಿರಬಹುದು. “ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್” ಎಂದು ಇಲ್ಲೇ ಎಲ್ಲೋ ಕುಳಿತೇ ಬರೆದಿರಲೂಬಹುದು! ಎಲ್ಲ ನೆನಸಿಕೊಂಡು ಒಂದು ಕ್ಶಣ ಮಯ್ನವಿರೆದ್ದಿತು.

(ಚಿತ್ರ: http://www.allposters.com)

ಸಂದೀಪ್ ಕಂಬಿ.

(ಮುಂದಿನ ವಾರ ಮುಂದುವರೆಯಲಿದೆ…)Categories: ನಡೆ-ನುಡಿ

ಟ್ಯಾಗ್ ಗಳು:, , , , , , , , , , , ,

2 replies

Trackbacks

  1. ಉಂಚಳ್ಳಿ ಅರ್ಬಿಗೆ ಪ್ರವಾಸ – 3 | ಹೊನಲು
  2. ಉಂಚಳ್ಳಿ ಅರ‍್ಬಿಗೆ ಪ್ರವಾಸ – 3 | ಹೊನಲು

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s