ಜಾತಿವಿರೋದಕ್ಕೆ ಒಂದೇ ವಚನ ಸಾಕು
ವಚನ ಚಳುವಳಿ ಕಾಯಕಕ್ಕೆ ಮೇಲ್ಮೆ ಕೋಡುವ, ಸಾಟಿತನಕ್ಕೆ ಮೇಲ್ಮೆ ಕೊಡುವ, ದೇವರ ಅಡಿ ಎಲ್ಲರನ್ನೂ ಒಳಗೊಳ್ಳುವ ಚಳುವಳಿ. ಆದಶ್ಟೂ ಆಡುಮಾತನ್ನು ಬಳಸಿಕೊಂಡ ಸಲುವಿಗೆ ಅದು ಮುರುಕಲು ಸಾಹಿತ್ಯವಾಗದೆ ಮಂದಿಗೆ ತಲುಪಿತು. ಜಾತಿಯೇರ್‍ಪಾಡು ಇವೆಲ್ಲಾ ಬಗೆಗೆಳಲ್ಲೂ ವಚನಕಾರರಿಗೆ ವಿರುದ್ದವಾದುದು. ಜಾತಿಯೇರ್‍ಪಾಡು ಮಂದಿಯಲ್ಲಿ ಮತ್ತವರ ಕಾಯಕದಲ್ಲಿ ಮೇಲು ಕೀಳನ್ನು ಕಾಣಿಸುತ್ತದೆ. ವಯ್ದಿಕರ ಮೆಲುಸ್ತುವಾರಿಯಲ್ಲಿ ಆಚರಿಸಲ್ಪಡುವ ಜಾತಿಯ ಏರ್‍ಪಾಡಿನಲ್ಲಿ ದೇವರಲ್ಲೇ ಬೇದವಿದೆ. ದೇವರಿಗೇ ಒಂದು ನುಡಿಯಿದೆ. ಅದು ಪೂಜಾರಿಗೆ ಮಾತ್ರ ತಿಳಿಯುತ್ತದೆ.
‘ಜಾತಿ’ ಪದ ಬಳಕೆ ಅಶ್ಟಾಗಿ ಇಲ್ಲವೆಂದು ವಚನಚಳುವಳಿಯನ್ನು ಜಾತಿವಿರೋದಿಯಲ್ಲ ಅನ್ನುವುದು ಸರಿಯಾಗಲಾರದು. ಇವತ್ತಿನ ಅರಿಮೆಯ ಹೊತ್ತಗೆಗಳನ್ನು ನೋಡಿದರೆ ನೆಲವು ಚಪ್ಪಟೆಯಾಗಿದೆ ಎಂಬ ವಾದದ ವಿರೋದ ಕಾಣಸಿಗದು. ಅಂದಮಾತ್ರಕ್ಕೆ ಅರಿಮೆಯ ಹೊತ್ತಗೆಗೆಳು ‘ನೆಲ-ಚಪ್ಪಟೆ ವಾದದ’ ವಿರೋದಿಯಲ್ಲ ಅನ್ನಲಾಗದು. ಇಂದಿಗೂ ನೆಲ ಚಪ್ಪಟೆಯಾಗಿದೆ ಎಂದು ನಂಬುವವರು ಇದ್ದಾರೆ. ಅರಿಮೆ/ನಾಗರೀಕತೆಗಳು ಕುಸಿದಲ್ಲಿ ನೆಲ ಚಪ್ಪಟೆಯಾಗಿದೆ ಅನ್ನುವವರ ಎಣಿಕೆಯೇ ಹೆಚ್ಚಬಹುದು.
ವಚನಕಾರರು ಕಾಯಕವೇ ಕಯ್ಲಾಸ ಅನ್ನುವುದೂ, ಎಲ್ಲಾ ಜಾತಿಯವರೂ ಒಂದೇ ಮಂಟಪದಡಿ ಕೂತು ಸಮಾನರಾಗಿ ಮಾತುಕತೆ ನಡೆಸುವುದೂ, ಜಾತಿಯೇರ್‍ಪಾಡಿನ ವಿರೋದವೇ! “ಕನ್ನಡಿಗರ ಆಳ್ವಿಕೆಯು ಅಚ್ಚಾಕಿರುವ 21,788 ವಚನಗಳಲ್ಲಿ 195 ಮಾತ್ರ ಬ್ರಾಮಣರ ಕುರಿತು, 458 ಮಾತ್ರ ಜಾತಿ-ಕುಲಗಳ ಕುರಿತು ಮಾತಾಡುತ್ತವಾದ್ದರಿಂದ ವಚನಗಳನ್ನು ಜಾತಿ/ಬ್ರಾಮಣವಿರೋದಿ ಅನ್ನಲಾಗದು” ಎಂಬ ಡಂಕಿನ್ ಜಳಕಿ ಅವರ ಅನಿಸು ಪೇಲವವಾದದ್ದು. “ವಚನ ಚಳುವಳಿ ಮುಕ್ಯವಾಗಿ ಜಾತಿವಿರೋದಿ” ಎಂಬ ಹೇಳ್ವಿಕೆ ಅನಿಸುವಿಕೆಯ (subjective) ಹೇಳಿಕೆಯೇ ಹೊರತು ಅಳೆಯಬಲ್ಲ (objective) ಹೇಳಿಕೆಯಲ್ಲ. ಅದನ್ನು ಲೆಕ್ಕಹಾಕಿ ತೂಗುವುದಕ್ಕೆ ಆಗುವುದಿಲ್ಲ. ಒಂದೇ ಒಂದು ವಚನವನ್ನು ಇಟ್ಟುಕೊಂಡು ಜಾತಿವಿರೋದಿ ಚಳುವಳಿ ಮಾಡುವುದು ಸಾದ್ಯವಿದೆ!
ಡಂಕಿನ್ನರ ಟಿಪ್ಪಣಿಯಲ್ಲಿ ಅವರೇ ಕೊಟ್ಟಿರುವ ಆದಾರಗಳನ್ನು ಓದಿದ ಮೇಲೆ ಜಾತಿವಿರೋದ ಇಲ್ಲವೆಂಬ ವಾದ ಮುಂದಿಡುತ್ತಿರುವುದನ್ನು ನೋಡಿ ಇದು ಸೇನ್ಸೇಶನಲಿಸಂ ಅಂದುಕೊಂಡೆ. ಯಾಕೆಂದರೆ, ಒಟ್ಟಾರೆಯಾಗಿ ಅಲ್ಲಿ ಜಾತಿವಿರೋದದ ಕುರುಹುಗಳಿವೆ. ವಚನಗಳ ಆದಾರದ ಮೇಲೆ ಜಾತಿವಿರೋದವೂ ಚಳುವಳಿಯ ಒಂದು ಮುಕ್ಯವಾದ ಬಾಗ ಅನ್ನಬಹುದು. ಯಾವುದೇ ಚಳುವಳಿಯು ಸಂಕೀರ್‍ಣವಾದುದು. ಅದರಲ್ಲಿ ಅನುಮಾನವೇ ಇಲ್ಲ. ಆದರೆ ಅವುಗಳನ್ನು ಗುರುತಿಸಲಾಗುವುದು ಯಾವುದನ್ನು ಯಶಸ್ವಿಯಾಗಿ ಎದುರಿಸಿದವು ಅನ್ನುವುದರ ಮೇಲೆಯೇ.
ಸ್ವತಂತ್ರ ಹೋರಾಟದ ಚಳುವಳಿಯಲ್ಲಿ ಬ್ರಿಟಿಶರೇ ಬಿಟ್ಟುಹೋಗಿ ಅಂದಿದ್ದು ಮಾತ್ರವೇ ಅಲ್ಲ. ಸಮಾಜ ಸುದಾರಣೆಯದು ಹಲವು ಆಯಾಮಗಳಿವೆ. ಹಾಗಂದ ಮಾತ್ರಕ್ಕೆ ಅದು ಬ್ರಿಟಿಶರ ವಿರುದ್ದವಾಗಿರಲಿಲ್ಲ ಅನ್ನಲಾಗದು. ವಂದೇ ಮಾತರಂನಲ್ಲಿ ಬ್ರಿಟಿಶರೇ ಬಿಟ್ಟುಹೋಗಿ ಎಂದು ಎಲ್ಲೂ ಹೇಳಿಲ್ಲ. ಆದರೂ ಅದು ಸ್ವತಂತ್ರ ಸಂಗ್ರಾಮದ ಹಾಡು. ಯಾವುದೇ ಚಳುವಳಿಯನ್ನು ಹಿಂತಿರುಗಿ ನೋಡಿದಾಗ ಅದರ ಗುರಿಹಾದಿಗಳು ಹುಣಸೇ ಮರದ ರೆಂಬೆ-ಕೊಂಬೆಗಳಂತೆ ಟಿಸಿಲೊಡೆದಿರುತ್ತದೆ ಎಂಬುದನ್ನು ಗಮನದಲ್ಲಿಟ್ಟಿರಬೇಕು.
ಮೂಡಲೆಡೆಯ ಮಾತುಕತೆಯಲ್ಲಿ (Orientalist discourse) ವಚನ ಚಳುವಳಿಯನ್ನು ಹೇಗೆ ಬಿಂಬಿಸಲಾಗಿದೆ, ಮತ್ತು ಹತ್ತೊಂಬತ್ತು-ನೂರರ ಲಿಂಗಾಯತ ಎಚ್ಚರಿಕೆಯು ಅದರಿಂದ ಹೇಗೆ ಪ್ರಬಾವಗೊಂಡಿದೆ ಎಂಬುದ ವಿವರಿಸಬೇಕಿತ್ತು. ಇಲ್ಲಾ, ಅದಕ್ಕೆ ಆದಾರ ಕೊಡಬೇಕಿತ್ತು. ಅದನ್ನು ಮಾಡದೇ ಬ್ರಿಟಿಶರು ಮೂಡಲೆಡೆಯ ಮಾತುಕತೆಯಾಡಿದರು, ಅವರು ಆಳುವವರು, ಲಿಂಗಾಯತರು ಆಳಿಸಿಕೊಂಡವರ ಬುದ್ದಿಯಿಂದಾಗಿ ಅವರು ಹೇಳಿದ್ದನ್ನೇ ಕಲಿತುಕೊಂಡರು ಎಂದು ಹೇಳುತ್ತಾ ಹೋಗುವುದು ಕಾಗಕ್ಕ-ಗೂಬಕ್ಕನ ಕತೆಯಂತೆ ಕೇಳಿಸುತ್ತದೆ.
ಮೂಡಲೆಡೆಯ ಮಾತುಕತೆಯು ಕರ್‍ನಾಟಕದ ವಚನ ಚಳುವಳಿಯನ್ನು ಹೇಗೆ ವ್ಯಾಕ್ಯಾನಿಸಿತ್ತು, ಅದನ್ನು ಒಪ್ಪಿ, ಅಪ್ಪಿ, ಅಳವಡಿಸಿಕೊಂಡ 19ನೇ ನೂರರ ಲಿಂಗಾಯತ ಹೋರಾಟಗರರು ಯಾರು ಎಂಬ ಮಾಹಿತಿ ಮಬ್ಬು ಮಬ್ಬಾಗಿದೆ. 13 ಪುಟಗಳ ಸಿನಾಪ್ಸಿಸ್ನಲ್ಲಿ ಕತೆಗಳನ್ನು ಎಣೆಯುತ್ತಾ ಹೋಗುವ ಬದಲು ಆದಾರವನ್ನು ಕೊಡಬಹುದಿತ್ತು. ಒಂದು ವೇಳೆ ‘ಮೂಡಲೆಡೆಯ ಮಾತುಕತೆ’ಯು ಪ್ರೊಟೆಸ್ಟಂಟ್ ಅನುಬವದಿಂದ ಪ್ರಬಾವಗೊಂಡಿತ್ತು ಅಂತಲೇ ಅಂದುಕೊಂಡರೂ, ಆ ಪ್ರಬಾವದಿಂದಲೇ ವಚನ ಚಳುವಳಿಯನ್ನು ಅಳೆಯಿತು ಅಂದುಕೊಂಡರೂ, 19ರ ನೂರರ ಲಿಂಗಾಯತರು ಅದನ್ನು ಅಪ್ಪಿಕೊಂಡರು ಅಂದುಕೊಂಡರೂ, ಅದು ಸರಿಯಿಲ್ಲ (ಅರಿಮೆಯದಲ್ಲ) ಎಂದು ಹೇಳುವುದಕ್ಕಾಗುವುದಿಲ್ಲ. ಪ್ರೊಟೆಸ್ಟಂಟ್ ಚಳುವಳಿಗೂ, ವಚನ ಚಳುವಳಿಗೂ ಹೋಲಿಕೆ ಇದ್ದಲ್ಲಿ ಅದನ್ನು ಗುರುತಿಸುವುದರಲ್ಲಿ ಯಾವ ತಪ್ಪೂ ಇಲ್ಲ.
ನಮ್ಮ ಕಾಲದ ಅರಿಮೆಯನ್ನು ‘ಪಡುವಣರ ಅರಿಮೆ’ಯೆನ್ನುವುದು, ವೇದಗಳ ಅರಿಮೆಯೇ ನಮ್ಮ ಅರಿಮೆಯೆನ್ನುವುದು, ಹಾಗೇ ಅರಿಮೆಯ ವ್ಯಾಕ್ಯಾನವನ್ನು ಆಳಿದವರ (ಬ್ರಿಟಿಶರ) ವ್ಯಾಕ್ಯಾನ ಅನ್ನುವುದು ಹೊಸ ಹಿಂದುವಾದಿಗಳ ಹೊಸ ಚಳಕ. ಆ ಗುಂಪಿಗೆ ಡಂಕಿನ್ನರದು ಹೊಸ ಸೇರ್‍ಪಡೆ. ತಮ್ಮ ವ್ಯಾಕ್ಯಾನವನ್ನು ಹೊಸ ವ್ಯಾಕ್ಯಾನವೆಂದು ಕರೆದುಕೊಳ್ಳುವ ಡಂಕಿನ್ನರು ಅಲ್ಲಿಗೇ ಸುಮ್ಮನಾಗುವುದಿಲ್ಲ. ತಮ್ಮದು ಕೂಡಣದರಿಮೆಗಳಲ್ಲಿ ಆಳಿದವರ ವ್ಯಾಕ್ಯಾನವನ್ನು ಪಕ್ಕಕ್ಕೆ ಸರಿಸುವ ದಾರಿಯೆಂದು ಕೂಡ ಹೇಳಿಕೊಳ್ಳುತ್ತಾರೆ.
ವಚನಗಳು ಹಾಗೂ ಬಸವಣ್ಣನವರಿಂದ ಹೊಲೆಯರ ನಿಂದನೆ ನಡೆದಿದೆ ಎಂದೂ ಡಂಕಿನ್ನರು ವಾದಿಸುತ್ತಾರೆ. ಡಂಕಿನ್ನರಲ್ಲಿ ಮುಂತೀರ್‍ಮಾನವಿಲ್ಲದ ತರ್‍ಕದ ಬದಲು ಅನುಕೂಲಕ್ಕೆ ತಕ್ಕ ವಾದಗಳಿರುವುದು ಇದರಿಂದ ತಿಳಿಯುತ್ತದೆ. ಜಾತಿ-ವಿರೋದವಿಲ್ಲ ಎಂದು ವಾದಿಸಲು ಒಂದು ಅನುಕೂಲ, ಜಾತಿ-ನಿಂದನೆ ಇದೆ ಎಂದು ವಾದಿಸಲು ಇನ್ನೊಂದು ಅನುಕೂಲ ಮಾಡಿಕೊಂಡಿದ್ದಾರೆ. ಎಲ್ಲವನ್ನೂ ಒಳಗೊಂಡ ಒಟ್ಟಾರೆ ತಿಳಿಹವನ್ನು (complete data) ಎರಡು ಕಡೆಯಲ್ಲೂ ಗಣನೆ ಮಾಡಿಲ್ಲ. ಆದ್ದರಿಂದಲೇ ಹಿಂದೆ ಜಾತಿಯೇರ್‍ಪಾಡು ಇರಲಿಲ್ಲ, ವಚನಗಳಲ್ಲಿ ಜಾತಿ ವಿರೋದವಿರಲಿಲ್ಲ ಅನ್ನುತ್ತಲೇ ಜಾತಿನಿಂದನೆಯಿತ್ತು ಅನ್ನುವ ತನ್ನೆದುರ್‍ನುಡಿತಗಳು (contradiction) ಸಾದ್ಯವಾಗುತ್ತವೆ. ಬಸವಣ್ಣನವರ ವಚನಗಳಲ್ಲಿದೆ ಎನ್ನಲಾಗಿರುವ ಹೊಲೆಯ ಮಾದಿಗರ ನಿಂದನೆಯನ್ನು ಎಚ್ಚರಿಕೆಯಿಂದ ವ್ಯಾಕ್ಯಾನಿಸಬೇಕಾಗುತ್ತದೆ. ಅದು ಜಾತಿ ನಿಂದನೆಯೇ, ಚೇಡಿಕೆಯೇ ಎಂದು ತೀರ್‍ಮಾನಿಸುವುದು ಅರಿದಾದುದು. ಎತ್ತುಗೆಗೆ, ಕೆಳಗಿನ ವಚನವನ್ನು ಡಂಕಿನ್ನರು ನಿಂದನೆಯೆಂದೇ ತೀರ್‍ಮಾನಿಸುತ್ತಾರೆ:
ಹೊಲತಿ ಹೊಲೆಯ(ನು) ಹೋಗಿ ಹೊಳೆಯಲ್ಲಿ ಮಿಂದಡೆ
ಹೊಲೆ ಹೊಯಿತ್ತಿಲ್ಲ, ಕುಲ ಹೋಗಲಿಲ್ಲ
ಕಂಬಳಿಯೊಳಗೆ ಕೂಳಕಟ್ಟಿ ಕೂಡಲನರಸುವರೆ?
ಇಂತ ಡಂಬಕರ ಕೂಡಲಸಂಗಮದೇವರು ಮೆಚ್ಚರಯ್ಯಾ
ಆದರೆ, ಈ ವಚನವು ಮೀಯುವುದರಿಂದಲ್ಲ, ಬದಲಿಗೆ ಕೂಡಲ ಸಂಗಮನಿಗೆ ಶರಣಾಗುವುದರಿಂದ ಕುಲ ಹೋಗುತ್ತದೆ ಎಂದೇ ತಿಳಿಸುತ್ತಿದೆ. ಇಶ್ಟಲಿಂಗವನ್ನು ಒಪ್ಪಿ ಜಾತಿಯೇರ್‍ಪಾಡಿನಿಂದ ಬಿಡುಗಡೆ ಹೊಂದದೆ ಹಳೇ ಜಾತಿಯೇರ್‍ಪಾಡಿನಲ್ಲೇ ಕೊಳೆಯುವ ಹೊಲೆಯರನ್ನು ಕಂಡು ಬಸವಣ್ಣನವರಿಗೆ ನಿರಾಶೆಯಾಗಿರುವಂತೆಯೇ ಈ ವಚನದಲ್ಲಿ ತೋರುತ್ತಿದೆ!
ಒಕ್ಕಲಿಗರವನಾದ ನಾನು ದಲಿತ ಗೆಳೆಯರ ನಡುವೆ ಇದ್ದಾಗ ದಲಿತರಲ್ಲಿರುವ ಹಲವು ಮವ್‍ಡ್ಯಗಳ, ಸಿಡಿದೇಳದ ಬುದ್ದಿಯ ಬಗ್ಗೆ ನಿರಾಶೆಗೊಂಡು ಬಯ್ದುಕೊಳ್ಳುವುದು ಉಂಟು. ಅಂದಮಾತ್ರಕ್ಕೆ ನಾನು ದಲಿತರ ನಿಂದಕನಲ್ಲ! ಸಾಟಿತನವನ್ನು (equality) ಬಯಸುವ ಅಮೇರಿಕಾದ ಲಿಬರಲ್ಗಳು ಕಪ್ಪು ಜನರನ್ನು ಚೇಡಿಸುವುದು ಉಂಟು, ಅವರು ರೇಸಿಸ್ಟುಗಳಲ್ಲ. ಮಂಡ್ಯದಲ್ಲಿ ಗೆಳೆಯರು ಗೆಳೆಯರನ್ನು ಸಿಕ್ಕಾಗ ‘ಏನೋ ಬೊಡ್ಡಿದೆ’ ಎಂದು ಹಾರಯ್ಸಿಕೊಳ್ಳುತ್ತಾರೆ. ಅವರು ಒಬ್ಬರನ್ನೊಬ್ಬರು ಬಯ್ದುಕೊಳ್ಳುತ್ತಿಲ್ಲ!
ವಚನ ಚಳುವಳಿ ಜಾತಿವಿರೋದಿಯೇ ಇಲ್ಲವೇ ಅನ್ನುವುದು ತೀರ್‍ಮಾನವಾಗಬೇಕಾಗುವುದಕ್ಕೊಂದು ಸುಳುವಾದ, ಅಳೆಯಬಲ್ಲ ಹಾದಿಯಿದೆ. ಯಾವುದೇ ಜಾತಿಯವರು ಲಿಂಗದಾರಣೆ ಮಾಡಿಕೊಂಡರೆ ಲಿಂಗಾಯತರಾಗಬಹುದೇ ಎಂಬುದೇ ಅದು. ಹವ್ದು ಎಂದಾದರೆ, ವಚನ ಚಳುವಳಿ ಜಾತಿ ವಿರೋದಿಯೇ!! ಕ್ರಯಿಸ್ತರು ಮಾದಿಗರನ್ನು ಆಡಿಕೊಳ್ಳಬಹುದು. ಆದರೇ, ಮಾದಿಗರು ಕ್ರಯಿಸ್ತರಾದರೆ ಮಿಕ್ಕ ಕ್ರಯಿಸ್ತರೊಡನೆ ಮದುವೆ ನಂಟು ಇಟ್ಟುಕೊಳ್ಳಬಹುದು ಎಂದಾದರೇ ಕ್ರಯಿಸ್ತ ಮತ ಜಾತಿ ವಿರೋದಿ ಮತ ಅಂತಲೇ!!
ಡಂಕಿನ್ನರು ತಮ್ಮ ಟಿಪ್ಪಣಿಯಲ್ಲಿ ಒಮ್ಮೆ “ಏಸುಕ್ರಿಸ್ತನನ್ನು ಪೂಜಿಸಿದರೆ ಬಡತನ ಹೋಗುತ್ತದೆಯೇ” ಎಂದು ಕೇಳುತ್ತಾರೆ. ಗಮನಿಸಿ, ಅವರು “ಏಸುಕ್ರಿಸ್ತನನ್ನು ಪೂಜಿಸಿದರೆ ಜಾತಿ ಶ್ರೇಣಿ ಹೋಗುತ್ತದೆಯೇ” ಎಂದು ಕೇಳುವುದಿಲ್ಲ! ದಿಟದಲ್ಲಿ ಲಿಂಗದಾರಣೆ ಮಾಡಿಕೊಂಡರೆ ಜಾತಿಯೇರ್‍ಪಾಡು ಹೊರಟು ಹೋಗುತ್ತದೆ! ಏಸುವನ್ನು ಪೂಜಿಸುವುದೂ, ಲಿಂಗದಾರಣೆ ಮಾಡಿಕೊಳ್ಳುವುದೂ ಜಾತಿ-ವಿರೋದವೇ. ಎಲ್ಲಾ ಕುಲದವರೂ ಶರಣರಾಗಬಹುದು, ಶರಣರಿಗೆ ಕುಲವಿಲ್ಲವೆಂದು ಬಸವಣ್ಣನವರ ವಚನಗಳು ಹೇಳುತ್ತವೆ ಅಂದಮೇಲೆ ಬಸವಣ್ಣನವರು ಜಾತಿಯೇರ್‍ಪಾಡಿನ ವಿರೋದಿಯೇ ಸರಿ.
ಇಂದಿನ ಕನ್ನಡಿಗರು ವಚನಗಳಲ್ಲಿ ಮಾದಿಗರ ನಿಂದನೆ, ಬ್ರಾಮಣರ ಆಚರಣೆಗಳು ಇದ್ದಲ್ಲಿ ಅವನ್ನು ಗೊತ್ತುಮಾಡಿಕೊಳ್ಳಲೇಬೇಕು. ಯಾವುದೇ ಚಳುವಳಿಯು (ಅದರಲ್ಲೂ ದೇವರ ಹೆಸರಲ್ಲಿ ನಡೆದದ್ದು) ಬೇಗನೇ ಹಳಿ ತಪ್ಪುವುದನ್ನು ಎಲ್ಲಾ ಕಡೆ ಕಾಣಬಹುದು. ಯಾವ ಚಳುವಳಿಯೇ ಆಗಲಿ ಅರಿಮೆಯ ಆದಾರದ ಮೇಲೆ ನಡೆದಿದ್ದು ಕಡಿಮೆಯೇ. ಹಾಗಾಗಿ, ಬುದ್ದನನ್ನು ಪಾಲಿಸದೆ ಪೂಜಿಸುವುದು, ವಚನಕಾರರು ನಂತರದಲ್ಲಿ ಬ್ರಾಮಣಿಕೆಯನ್ನು ಮಯ್ಗೂಡಿಸಿಕೊಳ್ಳುವುದು ದೊಡ್ಡ ಮಾತೇನಲ್ಲ. ವಚನ ಚಳುವಳಿಯು ಜಾತಿವಿರುದ್ದದ ಹೋರಾಟದಲ್ಲಿ ಸೋತಿದೆ ಎನ್ನುವುದನ್ನೂ ನೆನೆದು ಆ ಸೋಲಿಗೆ ಕಾರಣವೇನೆಂದು ಅರಕೆ ನಡೆಸಬೇಕಿದೆ.
ಡಂಕಿನ್ನರ ಅರಕೆಯಲ್ಲಿ ಆ ಕಾರಣವನ್ನು ಹುಡುಕಲು ಹೊರಟರೆ ವಚನ ಚಳುವಳಿ ಕೇವಲ ಬಕ್ತಿ ಚಳುವಳಿಯಾಗಿತ್ತು, ಅದು ಕೂಡಣವನ್ನು ಸರಿಪಡಿಸುವ ಹಾದಿಯನ್ನೇ ತುಳಿಯಲಿಲ್ಲ ಅಂದುಕೊಳ್ಳಬೇಕಾಗುತ್ತದೆ. ಆದರೆ ಅದರಲ್ಲಿ ಹುರುಳಿಲ್ಲ. ಅದೂ ಕೂಡ ಹುಣಸೆ ಮರವನ್ನು ರೆಂಬೆ ಕೊಂಬೆಗಳಿಲ್ಲದ ಮರದ ಕಂಬವೆಂದೇ ಬಣ್ಣಿಸುವಂತಿದೆ. ಬಕ್ತಿಯು ವಚನ ಚಳುವಳಿಯ ನೂರಾರು ಟಿಸಿಲುಗಳಲ್ಲಿ ಒಂದು ಅಶ್ಟೇ. ಇಲ್ಲಿ ತೊಂದರೆಯೆಂದರೆ, ಡಂಕಿನ್ನರು ಕಂಡುಕೊಂಡಿರುವ ಅನಿಸುಗಳು ಮುಂತೀರ್‍ಮಾನವಿಲ್ಲದೆ ಹುಟ್ಟಿಬಂದವಲ್ಲ. ಮುಂತೀರ್‍ಮಾನದಿಂದ ಮಾಡುವ ಅರಕೆ ದಿಟವನ್ನು ಹುಡುಕುವಂತಹ ಅರಕೆಯಾಗಲಾರದು. ಅವರು ಬಂದ ಶಾಲೆಯ ಪ್ರಕಾರ ಬಾರತದಲ್ಲಿ ಜಾತಿಯೇರ್‍ಪಾಡು ಹಿಂದೆಯೂ ಇರಲಿಲ್ಲ, ಇಂದೂ ಇಲ್ಲ ಎಂಬ ವ್ಯಾಕ್ಯಾನವಿದೆ. ಇದೇ ವ್ಯಾಕ್ಯಾನಕ್ಕೆ ವಚನಗಳನ್ನು ಜೋಡಿಸುವ ಪ್ರಯತ್ನವನ್ನು ಮಾಡಲಾಗಿದೆ ಅಶ್ಟೇ.
ಗಮನಿಸಿ, ಡಂಕಿನ್ನರು ಬರುವ ಶಾಲೆಯಲ್ಲಿ ಜಾತಿ ಆಚರಣೆಯು ಹಿಂದೆ ಇರಲಿಲ್ಲವೆಂದೂ, ಇಂದೂ ಇಲ್ಲವೆಂದೂ ಹೇಳಲಾಗುತ್ತದೆ. ಜಾತಿಯ ಆಚರಣೆಯು ನಮ್ಮ ಕಾಲದಲ್ಲಿ ಇಲ್ಲವೆಂದು ಹೇಳಿ, ಹುಚ್ಚರೆನಿಸಿಕೊಳ್ಳದೇ ಕೇಳುಗರನ್ನು ಕಟ್ಟಿಕೊಂಡು ಗೆಲ್ಲಲು ಹೊರಟವರು ಇವರು. ಇವರ ವ್ಯಾಕ್ಯಾನಗಳಲ್ಲಿ ಮಟಗಳ ಪಂಕ್ತಿಬೇದ ವಯಕ್ತಿಕ ವಿಚಾರ. ಮಡೆಸ್ನಾನ ಒಬ್ಬರ ನಂಬಿಕೆಯ ವಿಚಾರ. ಕಂಬಾಲಪಲ್ಲಿಯಲ್ಲಿ ಮೇಲುಜಾತಿಯವರು ಕೀಳು ಜಾತಿಯವರನ್ನು ಜಾತಿ ಸಲುವಿಗಾಗೇ ಹೂಟಹೂಡಿ ಸುಟ್ಟಿ ಸಾಯಿಸುವುದು ಕೇವಲ ಒಬ್ಬರು ಇನ್ನೊಬ್ಬರನ್ನು ಕೊಲ್ಲುವ ವಿಚಾರ. ಇಲ್ಲೆಲ್ಲೂ ಜಾತಿಯೇರ್‍ಪಾಡಿನ ಆಚರಣೆಯೇ ಇಲ್ಲ!!
ಇಂತಾ ವಾದಕ್ಕೆ ಹೋಲಿಸಿದರೆ, ಹಿಂದಿನ ಕಾಲದಲ್ಲಿ ಜಾತಿಯೇರ್‍ಪಾಡಿನ ಆಚರಣೆ ಇರಲಿಲ್ಲ ಎಂದು ವ್ಯಾಕ್ಯಾನಿಸಿ ಸಯ್ ಎನಸಿಕೊಳ್ಳುವುದು ಸರಾಗವಾದ ಮಾತು. ವಚನಗಳು ಜಾತಿ ವಿರುದ್ದ ಮಾತಾಡುವುದಿಲ್ಲ ಎಂದು ಸಾದಿಸಿಕೊಳ್ಳುವುದು ಇನ್ನೂ ಸುಳುವಾದುದೇ. ವಚನಗಳ ತಿಳಿಹಕ್ಕೆ ಆಯವಾಗಿ ತಿರುಚಿದ ಅನಿಸುಗಳನ್ನು ಕೊಟ್ಟುಕೊಂಡರೆ ಸಾಕು! ವಚನ ಚಳುವಳಿಯು ಬಕ್ತಿಯ ಚಳುವಳಿಯೂ ಹವ್ದು ಅನ್ನುವುದು ಬೇರೆ ಜಾತಿ ವಿರೋದಿ ಚಳುವಳಿಯಲ್ಲ ಅನ್ನುವುದು ಬೇರೆ.
ಅರಿಮೆಯ ಅನಿಸುಗಳನ್ನು ಪ್ರೊಟೆಸ್ಟಂಟ್ ಚಿಂತನೆ, ಆಳುವವರ ಅನಿಸು ಎಂದೂ, ತಮ್ಮದು ಹೊಸಬಗೆಯ ಅರಿಮೆಯ ಅನಿಸು ಎಂದೂ ಕರೆದುಕೊಳ್ಳುತ್ತಾರೆ. ತಮಾಶೆಯೆಂದರೆ, ಇವರ ಅನಿಸುಗಳು/ವ್ಯಾಕ್ಯಾನಗಳು ಕ್ರಯಿಸ್ತಾನರ ಅಪಾಲಜೆಟಿಕ್ಸ್ ಅನಿಸು/ವ್ಯಾಕ್ಯಾನಗಳಿಗೆ ತೇಟ್ ಹೋಲುತ್ತವೆ! ಮತಗಳು ಬೇರೆ ಮತಗಳಿಗೆ ಎದುರಾದಾಗ, ಇಲ್ಲಾ ಮತಗಳು ಅರಿಮೆಗೆ ಡಿಕ್ಕಿ ಹೊಡೆದಾಗ ಮತಗಳು ಬೇರೆ ಬೇರೆ ಆಯದಲ್ಲಿ ತಮ್ಮದನ್ನು ಸಮರ್‍ತಿಸಿಕೊಳ್ಳಲು, ಬೇರೆಯದನ್ನು ಅಳಿಯಲು ತೊಡಗಿಕೊಳ್ಳುತ್ತವೆ.
ಡಂಕಿನ್ನರ ಶಾಲೆಯವರಿಂದ ಕಾಣುತ್ತಿರುವುದು ವಯ್ದಿಕ ಮತದ ಸಮರ್‍ತನೆ. ಲಿಂಗಾಯತ/ವಚನ ಚಳುವಳಿಯು ಒಂದು ಬಕ್ತಿ ಚಳುವಳಿ, ವಯ್ದಿಕ ಮತಕ್ಕೆ ಇದಿರಾದುದಲ್ಲ, ವಯ್ದಿಕ ಮತದಾಚರಣೆಯಿಂದ ಬೇಸತ್ತಿ ಬಂದುದಲ್ಲ, ಅದು ಸಾಮಾಜಿಕ ಚಳುವಳಿಯಲ್ಲ, ವಯ್ದಿಕ ಪರಂಪರೆಯಲ್ಲೂ ಮೇಲು ಕೀಳಿನ ವಿರೋದವಿತ್ತು ಎಂದೆಲ್ಲಾ ಹೇಳುವುದನ್ನು ಕೂಡಣದರಿಮೆ ಅನ್ನುವುದರ ಬದಲು ವಯ್ದಿಕ-ಸಮರ್‍ತನೆ (vedic apologetics) ಅನ್ನುವುದು ವಾಸಿ.
ಹಲವೆಡೆ, ಅದರಲ್ಲೂ, ಜಾತಿಬೇದ, ಕುಲ ಮುಂತಾದ ಪದ ಬಳಕೆಯಾಗಿರುವ, ಜಾತಿವಿರೋದಿ ವಚನಗಳನ್ನು ಅವಲೋಕಿಸುವಾಗ ಡಂಕಿನ್ನರ ಶಯ್ಲಿ ಅಪಾಲಜಿಸ್ಟುಗಳಿಗೆ ಹೋಲುತ್ತದೆ. ಸದ್ಯದಲ್ಲಿರುವ ವ್ಯಾಕ್ಯಾನಗಳಲ್ಲಿರುವ ತೊಡರುಗಳನ್ನು ಚೆನ್ನಾಗೇ ತೋರಿಸುತ್ತಾರೆ. ಆದರೆ, ತಮ್ಮ ವ್ಯಾಕ್ಯಾನದಲ್ಲೇ ರಾಚುವ ಅಸಾದ್ಯತೆಯ ಕಡೆಗೆ ಮುಕಮಾಡುವುದೇ ಇಲ್ಲ! ಅವರು ಹೊಸ ಅರಕೆ ಮಾಡಿ ಹೊಸತನ್ನು ಎಲ್ಲರಿಗೂ ಮುಟ್ಟಿಸುವ ಬದಲು ಹಳತರಲ್ಲಿ ಗೊಂದಲ ಉಂಟುಮಾಡಿ ತಮ್ಮ ವಾದವನ್ನು ಕೇಳಲು ಮುಂತೀರ್‍ಮಾನದಿಂದ ಅಣಿಯಾಗಿರುವವರ ಹತ್ತಿರ ಅಸಾದ್ಯ ವ್ಯಾಕ್ಯಾನಗಳನ್ನು ಹರಿಬಿಡುತ್ತಾರೆ. ನಮ್ಮಗಳ ಕಾಲದಲ್ಲಿ ಎಲ್ಲರಿಗೂ ದನಿಯಿರಲಿ. ಒಳ್ಳೆಯದು. ಆದರೆ, ಇವರ ವಾದಗಳನ್ನು ಅರಿಮೆಯ ವಾದಗಳು ಅಂದುಕೊಳ್ಳಲಾಗದು. ಇವರನ್ನು ವಯ್ದಿಕ-ಸಮರ್‍ತಕರು ಎಂದು ಕರೆಯುವುದು ಸೂಕ್ತ.
ಡಂಕಿನ್ನರ ಸಿನೋಪ್ಸಿಸ್ಸಿನಿಂದಲೇ ಅರಿಮೆಯ ಆದಾರದ ಮೇಲೆ ಹೀಗೆ ಕಲಿಯಬಹುದು:
- ವಚನ ಸಾಹಿತ್ಯದಲ್ಲಿ ಹೆಚ್ಚೆಣಿಕೆಯ ವಚನಗಳು ಅರಕೆಗೆ ಒಳಪಟ್ಟಿಲ್ಲ.
- ವಚನ ಸಾಹಿತ್ಯದ ವಿಸ್ತಾರ ಆಗಾದವಾದುದು.
- ವಚನ ಚಳುವಳಿಯು ಕಾಯಕಕ್ಕೆ ಮೇಲ್ಮೆ ಕೊಟ್ಟ, ಜಾತಿಯೇರ್‍ಪಾಡನ್ನು ವಿರೋದಿಸಿದ, ಮಂದಿ ಮತ್ತು ದೇವರ ನಡುವೆ ನೇರ ನಂಟು ಕಟ್ಟಿಕೊಡಲು ಯತ್ನಿಸಿದ ಬಕ್ತಿ ಚಳುವಳಿ.
ನಮ್ಮ ಕಾಲದ ಬಾರತದಲ್ಲಿ ಜಾತಿಯೇರ್‍ಪಾಡಿನ ಆಚರಣೆ ಇರುವುದಕ್ಕೆ ಸಾಕ್ಶಿಗಳನ್ನು ಜೋಡಿಸುತ್ತಾ ಕೂರಬೇಕಿಲ್ಲ. ಹಿಂದೆಯೂ ಇತ್ತು ಅನ್ನುವುದಕ್ಕೆ ಸಾಕಶ್ಟು ಆದಾರಗಳು ಇವೆ.
ತೆಂಕಣ ಕರ್‍ನಾಟಕದ ಹಳ್ಳಿಗಳಲ್ಲೆಲ್ಲಾ ಹೊಲಗೇರಿಗಳು ತೆಂಕಣ ದಿಕ್ಕಿಗೇ ಇವೆ. ನಮ್ಮೂರ ಹೊಲೆಯರಿಗೆ ಮಂದಿಯಾಳ್ವಿಕೆ ದಕ್ಕುವವರೆಗೂ ಹೊಲಮಾಳಗಳು ದಕ್ಕಿರಲಿಲ್ಲ. ನಮ್ಮೂರನ್ನೇ ಬ್ರಾಮಣರಿಗೆ ಬರೆದುಕೊಡಲಾಗಿತ್ತು. ದಕ್ಶಿಣ ಬಾರತದಾದ್ಯಂತ ಹರಡಿರುವ ಕಲ್ಲು ಮತ್ತು ತಾಮ್ರದ ಶಾಸನಗಳಲ್ಲಿ ಬ್ರಾಮಣರ ನೇತ್ರುತ್ವದಲ್ಲಿ ಹೊಸ ಬುಡಕಟ್ಟುಗಳು ಜಾತಿ/ಕುಲಗಳಾಗಿ ಜಾತಿಯೇರ್‍ಪಾಡು ಆಚರಣೆಗೆ ಬಂದುದರ ಬಗ್ಗೆ ಕುರುಹುಗಳಿವೆ. ಜಾತಿಯೇರ್‍ಪಾಡು ಯಾರ ಮೇಲುಸ್ತುವಾರಿಯಲ್ಲಿ ನಡೆಯಿತು ಎಂಬುದೂ ಮೇಲ್ಮೆಯದು. ಅದು ವಯ್ದಿಕರ ಮೇಲುಸ್ತುವಾರಿಯಲ್ಲಿ ನಡೆದುದಕ್ಕೆ ಶಾಸನಗಳ ಪುರಾವೆಗಳಿವೆ. ಆದುದರಿಂದ ವಚನಗಳ ಒಟ್ಟಾರೆ ವಯ್ದಿಕ ವಿರೋದವೂ ಜಾತಿಯೇರ್‍ಪಾಡಿನ ವಿರೋದ ಎಂದೆಣಿಸುವುದರಲ್ಲಿ ಯಾವ ತಪ್ಪೂ ಇಲ್ಲ.
ಇಡೀ ನೆಲದ ಮಿಕ್ಕೆಲ್ಲಾ ಮಂದಿಗಳಿಗೆ ಹೊಲಿಸಿದರೆ ಬಾರತೀಯರ ಮೇಲೆ ನಡೆದ ಪೀಳಿಯರಿಮೆಯ (genetics) ಅರಕೆ ಕಡಿಮೆಯೇ. ಆದರೆ, ಇತ್ತೀಚಿನ ಅರಕೆಯೊಂದರಲ್ಲಿನ ತಿಳಿಹದ ಪ್ರಕಾರ ಬಾರತೀಯರ ಹಲವು ಜಾತಿಗಳು ಜೊತೆಯಲ್ಲೇ ಬದುಕಿ ಬಾಳಿದರೂ, ಮದುವೆ ಸಂಬಂದ ಇಟ್ಟುಕೊಳ್ಳದೆ ಬೆಳೆದು ಬಂದ ಕಾಲ 1000ದಿಂದ 3000 ವರುಶಗಳ ಹಿಂದನವರೆಗೂ ಚಾಚುತ್ತದೆ! ಅಂದರೆ, ನಾವು ಇಂದೂ ಕಾಣುವ ಜಾತಿಯೇರ್‍ಪಾಡು 1000ದಿಂದ 3000ಸಾವಿರ ವರುಶಗಳ ವರೆಗೂ ನಡೆದುಕೊಂಡು ಬಂದಿದೆ! ಬ್ರಿಟಿಶರು ಬಂದಿದ್ದು ಇತ್ತೀಚೆಗೆ.
ಮಿಗಿಲಾಗಿ, ಬಾರತಕ್ಕೆ ವಲಸೆ ಬಂದವರಲ್ಲಿ ಹಳೇ ವಲಸಿಗರು (ದ್ರಾವಿಡರು?) ಮತ್ತು ನಂತರದ ವಲಸಿಗರು (ಆರ್‍ಯರು?) ಸೇರಿಕೊಂಡಿದ್ದಾರೆ. ಪಾಕಿಸ್ತಾನದಿಂದ ತಮಿಳುನಾಡು ಮತ್ತು ಲಕ್ಶದ್ವೀಪಗಳವರೆಗೆ ಲೆಕ್ಕಹಾಕಿದರೆ ಪಾಕಿಸ್ತಾನದ ಕಡೆಯ ಮಂದಿಯಲ್ಲಿ ಹೊಸ ವಲಸಿಗರ ಪೀಳಿಯ ಪಾಲೂ, ತಮಿಳುನಾಡು ಕಡೆಯ ಮಂದಿಯಲ್ಲಿ ಹಳೇ ವಲಸಿಗರ ಪೀಳಿಯ ಪಾಲೂ ಹೆಚ್ಚಿದೆ. ಅಶ್ಟೇ ಏಕೆ, ಒಂದೇ ಕಡೆ ನೆಲೆಸಿರುವವರನ್ನು ಲೆಕ್ಕ ಹಾಕಿದರೆ ಮೇಲು ಜಾತಿಯವರಲ್ಲಿ ನಂತರದ ವಲಸಿಗರ ಪೀಳಿಯ ಪಾಲೂ, ಕೆಳ ಜಾತಿಯವರಲ್ಲಿ ಹಳೇ ವಲಸಿಗರ ಪೀಳಿಯ ಪಾಲೂ ಹೆಚ್ಚಿದೆ.
ಬಾರತದಲ್ಲಿ ಜಾತಿಯ ಆಚರಣೆ ನೇಸರದಶ್ಟೇ ದಿಟವಾದುದು. ಜಾತಿಯು ವ್ಯಾಕ್ಯಾನದ ವಿಶಯ ಮಾತ್ರವಲ್ಲ. ಇದು ಸರಿತಪ್ಪರಿಮೆಯ (morality) ವಿಶಯ ಕೂಡ. ಜಾತಿ ಆಚರಣೆ ಮಾಡಿದವರು ತಪ್ಪೊಪ್ಪಿಕೊಳ್ಳಲೇ ಬೇಕು. ಬಹುಕಾಲದ ಆಚರಣೆಯಿಂದಾಗಿ ತುಳಿತಕ್ಕೊಳಗಾಗಿ ಕೀಳರಿಮೆಯಿಂದಿರುವವರನ್ನು ಹುರಿದುಂಬಿಸಲೇ ಬೇಕು. ಅಶ್ಟೇ ಏಕೆ ಮೇಲರಿಮೆಯಿಂದ ನರಳುವವರನ್ನೂ ಆ ಮನೋರೋಗದಿಂದ ಕಾಪಾಡಬೇಕು. ಇದೆಲ್ಲವೂ ಸಾದ್ಯವಾಗಬೇಕಾದರೆ ಜಾತಿಯನ್ನು ಹೇಗಿದೆಯೋ ಹಾಗೆಯೇ ಅರಿತುಕೊಳ್ಳಬೇಕು.
(ಚಿತ್ರ: http://kvmatha.org/Lsabha.html)
(ಪ್ರತಿಕ್ರಿಯೆಗಳಿಗೆ ಸ್ವಾಗತ – ಸಂ.)
olleya baraha. siddaraaju ge kannadigana meccugegalu sallabeeku,
dankin avaraddu muntiirmaana- munnolavu-piidita vaada embudu niccala,
dankinra school annu gambiiravaagi kanisuva agatya illa embudu nanna toocike.
vaada maadoodu ondu kale. iicege obba ameerikiga hennu provocative aagi batte uttiddare,rape tarksammata, legitimate emba maataadidaru. aamisha tandikkuva haage hennu batte tottiddare, aake caar ina hindina seat inalliruva laptop inante andaru aata! yaaruu noodadee iruv taanadallittiddaaga laptop aagalii hanavannaagalii , naavu kadiyabahudu!
ivella specious vaadagalu. eccaradindirabeeku.
ನಿಮ್ಮ ಲೆಕ್ಕಾಚಾರವು ಏನೇ ಇರಲಿ, ನೀವು “ಬ್ರಾಹ್ಮಣರ” ಬಗ್ಗೆ ಎಷ್ಟು ಬರೆದಿದ್ದೀರ ಈ ಬರಹದಲ್ಲಿ !!
೧. ದಕ್ಷಿಣ-ಭಾರತಲ್ಲಿ ಯಾವ ಬ್ರಾಹ್ಮಣ-ರಾಜವಂಶ ನಿಮಗೆ ಗೊತ್ತು? ನಮ್ಮನ್ನು ಆಳಿದ 99% ಅರಸರು ಬ್ರಾಹ್ಮಣರಲ್ಲ .
೨. ಕೆಲವು ಅರಸರು ಬ್ರಾಹ್ಮಣರನ್ನೂ ಬೇರೆಯ ಅರಸರಿಗೆ ದಾನವಾಗಿ ಕೊಟ್ಟ ಉಲ್ಲೇಖಗಳಿವೆ.
೩. ಉತ್ತರ-ಕರ್ನಾಟಕದಲ್ಲಿ ಆಳಿದ ಹಲವಾರು ಲಿಂಗಾಯತ-ಅರಸರು ಯಾಕೆ ಜಾತಿ-ಸಮಾನತೆ ಸಾಧಿಸಲಿಲ್ಲ?
೪. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮಿಸಲಾತಿಯನ್ನು ತಂದ ಮೈಸೂರು ಸಂಸ್ಥಾನದಲ್ಲಿ ಹೆಚ್ಚಿನ ಅಧಿಕಾರಿಗಳು ಬ್ರಾಹ್ಮಣರೇ .
೫. ಇವೊತ್ತಿನ ಜಾತಿವ್ಯವಸ್ಥೆಯ ಅಸ್ತಿತ್ವದಲ್ಲಿ ಆಡಳಿತಮಾಡಿದ ಜಾತಿಗಳ ಪಾತ್ರವು ಬ್ರಾಹ್ಮಣರಿಗಿಂತ ಕಿರಿಯದೇ?
ಈ ಬಗೆಯ ಚರ್ಚೆಗಳು minority ಬ್ರಾಹ್ಮಣರ demonization ಅಷ್ಟೇ ! ಇದಕ್ಕೆ ಯಾರೇ ಎಷ್ಟೇ ತಾರ್ಕಿಕದ ಪ್ರತಿಮಾತನ್ನು ನೀಡಿದರು ಸಹ , ಈ ಬಗೆಯ ವೃಥಾ ದೂಷಣೆಯು ಮುಗಿಯದು.
ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮಿಸಲಾತಿಯನ್ನು ತಂದ ಮೈಸೂರು ಸಂಸ್ಥಾನದಲ್ಲಿ ಹೆಚ್ಚಿನ ಅಧಿಕಾರಿಗಳು ಬ್ರಾಹ್ಮಣರೇ .
ಇದು ಬಸವಪ್ಪ ಶಾಸ್ತ್ರಿ ಮುಂತಾದ ಇತರರಿಂದ ಆದ ಸಂಗತಿ… ಬ್ರಾಹ್ಮಣ ಜಾತಿಯ ವಿಶ್ವೇಶ್ವರಯ್ಯ ರಿಸೆರ್ವೆಶನ್ ಗೆ ಒಪ್ಪದ ಕಾರಣದಿನ್ದನೆ ರಿಸೈನ್ ಮಾಡಬೇಕಾಯಿತು.
^^ ವಿಶ್ವೇಶ್ವರಯ್ಯನವರು ಮಿಸಾಲಾತಿಯ ವಿರೋಧವನ್ನು ಮಾಡಿದ್ದರು, ಅದಕ್ಕೆ ಅವರೊಬ್ಬ ಜಾತಿವಾದಿಯೆಂದು ಹೇಗೆ ತಾರ್ಕಿಕವಾಗಿ ತಿರ್ಮಾನಕ್ಕೆ ಬರುವುದು?
ಮೈಸೂರು-ಸಂಸ್ಥಾನದಲ್ಲಿ ಮೀಸಲಾತಿಗೆ ಪರವಾಗಿ ಒಬ್ಬರೂ ಬ್ರಾಹ್ಮಣರು ಇರಲಿಲ್ಲವೇ?
ಮೈಸೂರು-ಸಂಸ್ಥಾನದಲ್ಲಿ ಇರುವ ಇತರೇ ಮೇಲ್ಜಾತಿಗಳು ಮೀಸಲಾತಿಗೆ ವಿರೋಧವನ್ನು ಪಡಿಸಿದ್ದಾರೆ. ಆದರೆ ಕೇವಲ ಬ್ರಾಹ್ಮಣರನ್ನು ಹಿಡಿದು ದೂಷಿಸುವುದು ಅವರು ಅಲ್ಪಸಂಖ್ಯಾತರು ಹಾಗು ಬಲಹೀನರು ಆಗಿರುವುದರಿಂದ. ಮಿಕ್ಕ ಮೇಲ್ಜಾತಿಗಳ ಹೆಸರುಗಳನ್ನೂ ಉಲ್ಲೇಖಿಸಲು ಧೈರ್ಯವಿಲ್ಲ.
ಈ ಬರಹದಲ್ಲಿ ಬ್ರಾಹ್ಮಣರೊಬ್ಬರೆ ನಮ್ಮ ನಾಡಿನಲ್ಲಿರಿವ ಮೇಲ್ಜಾತಿ ಹಾಗು ಜಾತಿವಾದಿಗಳು ಎಂಬಂತೆ , ಆ ಜಾತಿಯೊಂದನ್ನೇ ಎತ್ತಿ ಉಲ್ಲೇಖಿಸಿರುವುದು ನ್ಯಾಯವಲ್ಲ.
ಉದಾಹರಣೆ :
“ತೆಂಕಣ ಕರ್‍ನಾಟಕದ ಹಳ್ಳಿಗಳಲ್ಲೆಲ್ಲಾ ಹೊಲಗೇರಿಗಳು ತೆಂಕಣ ದಿಕ್ಕಿಗೇ ಇವೆ. ನಮ್ಮೂರ ಹೊಲೆಯರಿಗೆ ಮಂದಿಯಾಳ್ವಿಕೆ ದಕ್ಕುವವರೆಗೂ ಹೊಲಮಾಳಗಳು ದಕ್ಕಿರಲಿಲ್ಲ. ನಮ್ಮೂರನ್ನೇ ಬ್ರಾಮಣರಿಗೆ ಬರೆದುಕೊಡಲಾಗಿತ್ತು. ದಕ್ಶಿಣ ಬಾರತದಾದ್ಯಂತ ಹರಡಿರುವ ಕಲ್ಲು ಮತ್ತು ತಾಮ್ರದ ಶಾಸನಗಳಲ್ಲಿ ಬ್ರಾಮಣರ ನೇತ್ರುತ್ವದಲ್ಲಿ ಹೊಸ ಬುಡಕಟ್ಟುಗಳು ಜಾತಿ/ಕುಲಗಳಾಗಿ ಜಾತಿಯೇರ್‍ಪಾಡು ಆಚರಣೆಗೆ ಬಂದುದರ ಬಗ್ಗೆ ಕುರುಹುಗಳಿವೆ”
೧. ಭೂಮಿಯಲ್ಲು ಅರಸರು ವೈಶ್ಯರು, ಒಕ್ಕಲಿಗರು ಹಾಗು ಮಿಕ್ಕ ಜಾತಿ-ವರ್ಗಗಳಿಗೂ ದಾನಕೊಟ್ಟಿರುವುದುಂಟು. ಶರಣರಿಗೆ ಹಾಗು ಅವರ ಮಠಗಳಿಗೆ ಕೂಡ ನೆಲ ಹಾಗು ಹಣಗಳನ್ನು ಅರಸರು ಕೊಟ್ಟಿರುತ್ತಾರೆ .
೨. ಬ್ರಾಹ್ಮಣರ ನೇತ್ರುತ್ವ ? ಬ್ರಾಹ್ಮಣರು ರಾಜ್ಯಾಡಳಿತಮಾಡಿರುವುದು ಕಡಮೆ. ಇನ್ನು ಎಲ್ಲಿಂದ ನೇತೃತ್ವ?
೩. ಶಾನುಭೋಗರಾಗಿದ್ದ ಬ್ರಾಹ್ಮಣರು ಪಾಲಿಸಿದ್ದು ಬ್ರಿಟಿಷರ ಹಾಗು ಅರಸರ ಅಣತಿಗಳನ್ನು. ಅವರ ಬಳಿ ಎಲ್ಲಿಯೂ ಸ್ವಾತಂತ್ಯವೇ ಇರಲಿಲ್ಲ .
ಆ ಬ್ರಾಹ್ಮಣರಿಗೂ ಮಂದಿಯಾಲ್ವಿಕೆ/ಪ್ರಜಾಪ್ರಭುತ್ವವು ಬಂದ ಮೇಲೆಯೇ ದಿಟವಾದ ಸ್ವಾತಂತ್ಯವು ಸಿಕ್ಕಿರುವುದು. ಅವರೂ ಹಿಂದೆ ಆಡಳಿತ-ವರ್ಗದಿಂದ ತುಳಿತಕ್ಕೆ ಒಳಗಾದವರು ಹಾಗು ‘expolited’ ಮಂದಿ.
ಮಾಯ್ಸ ಅವರೇ,
ನಿಮ್ಮೊಡನೆ ಮಾತುಕತೆ ಮುಂದುವರಿಸುವ ಮೊದಲು ನನಗೆ ಕೊಂಚ ತಿಳಿವು ಬೆಕು. ನನ್ನ ಈ ಅಂಕಣವು ಡಾ. ಬಾಲಗಂಗಾದರ ಅವರ ಶಾಲೆಯವರ ವಾದಕ್ಕೆ ಮರುಮಾತು. ನೀವು ಇದರ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚರ್ಚೆಯನ್ನು ಗಮನಿಸಿದ್ದೀರಾ?
^^ ಹು, ಪ್ರಜಾವಾಣಿಯಲ್ಲಿ . ಬಾಲು ಹಾಗು ಡಂಕಿನ್ ಅವರ ಲೆಕ್ಕಾಚಾರದ ಅದಕ್ಕೆ ಬಂದ ಕಂಬಾರೇತರರ ವಾದ ಸಕಲವೂ . .
ಮಾಯ್ಸ ಅವರೇ,
ಹಾಗಿದ್ದಲ್ಲಿ ನಿಮಗೆ ಗೊತ್ತಿರಬೇಕಲ್ಲ. ಬ್ರಾಹ್ಮಣ ಪದ ಬಳಕೆ ಮಾಡದೇ ಜಾತಿಯೇರ್ಪಾಟಿನ ಬಗ್ಗೆ ಹೇಗೆ ಬರೆಯಲಿ? ಚರ್ಚೆಯನ್ನ ಬ್ರಾಹ್ಮಣರ ಬಗ್ಗೆಯಾಗಿ ತೆಗೆದುಕೊಂಡು ಹೋಗಲು ನನಗೆ ಇಶ್ಟವಿಲ್ಲ. ಜಾತಿಯೇರ್ಪಾಟಿನ ವಿಶಯ ಎಲ್ಲಾ ಕನ್ನಡಿಗರ ಬಗ್ಗೆಯದು. ಆದರೂ ನಿಮ್ಮ ಮಾತಿಗೆ ನನ್ನ ಮರುಮಾತಿದೆ.
/ನಮ್ಮನ್ನು ಆಳಿದ 99% ಅರಸರು ಬ್ರಾಹ್ಮಣರಲ್ಲ/
ಅಂದರೆ, ೧% ರಾಜರು ಬ್ರಾಹ್ಮಣರೇ? ಅಶ್ಟೊಂದ್ದಿದ್ದರು ಎಂದು ನಾನಂದುಕೊಂಡಿರಲಿಲ್ಲ.
/೨. ಕೆಲವು ಅರಸರು ಬ್ರಾಹ್ಮಣರನ್ನೂ ಬೇರೆಯ ಅರಸರಿಗೆ ದಾನವಾಗಿ ಕೊಟ್ಟ ಉಲ್ಲೇಖಗಳಿವೆ. /
ಅದು ಮಹಾಪಾಪವಲ್ಲವೇ? ದಾನವಾಗಿ ಹೋದ ಬ್ರಾಹ್ಮಣರು ಯಾವ ಕೆಲಸ ಮಾಡಿದರು ಎಂಬುದರ ಬಗ್ಗೆ ಉಲ್ಲೇಕಗಳಿವೆಯೇ? ಬ್ರಾಹ್ಮಣರಾಗೇ ಉಳಿದುಕೊಂಡರೋ, ದಾಸರಾಗಿ ದುಡಿದರೋ?
/೩. ಉತ್ತರ-ಕರ್ನಾಟಕದಲ್ಲಿ ಆಳಿದ ಹಲವಾರು ಲಿಂಗಾಯತ-ಅರಸರು ಯಾಕೆ ಜಾತಿ-ಸಮಾನತೆ ಸಾಧಿಸಲಿಲ್ಲ?/
ಅವರು ಸೋತು ಹೋದರು. ನನ್ನ ಅಂಕಣದಲ್ಲೂ ಲಿಂಗಾಯತನವು ಜಾತಿಯೇರ್ಪಾಟು ತೊಡಗಿಸುವಲ್ಲಿ ಸೋತುಹೋದದನ್ನ ಹೇಳಿದ್ದೇನೆ.
/೪. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮಿಸಲಾತಿಯನ್ನು ತಂದ ಮೈಸೂರು ಸಂಸ್ಥಾನದಲ್ಲಿ ಹೆಚ್ಚಿನ ಅಧಿಕಾರಿಗಳು ಬ್ರಾಹ್ಮಣರೇ ./
ಬಸವಣ್ಣ ಬ್ರಾಹ್ಮಣರೇ, ನೇಪಾಳದ ಮಾವೋವಾದಿ ‘ಪ್ರಚಂಡ’ ಬ್ರಾಹ್ಮಣನೇ, ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರಲ್ಲಿ ಎಲ್ಲಾ ತರದವರೂ ಇದ್ದರು, ಇದ್ದಾರೆ ಎಂಬುದು ದಿಟ. ಆದರೇನಾಯಿತು? ಅಂದಹಾಗೆ ಮಯ್ಸೂರು ಸಂಸ್ತಾನದಲ್ಲಿ ಹೆಚ್ಚಿನ ಅದಿಕಾರಿಗಳು ಬ್ರಾಹ್ಮಣರೇ ಏಕಿದ್ದರು?
/೫. ಇವೊತ್ತಿನ ಜಾತಿವ್ಯವಸ್ಥೆಯ ಅಸ್ತಿತ್ವದಲ್ಲಿ ಆಡಳಿತಮಾಡಿದ ಜಾತಿಗಳ ಪಾತ್ರವು ಬ್ರಾಹ್ಮಣರಿಗಿಂತ ಕಿರಿಯದೇ?/
ಅಂದರೆ, ಮಯ್ಸೂರಿನ ಆಸ್ತಾನದ ಬ್ರಾಹ್ಮಣರು ಆರಂಬಿಸಿದ್ದು ತಪ್ಪು ಅನ್ನುತ್ತೀರಾ? ಮಂದಿಯಾಳ್ವಿಕೆ ಮತ್ತು ಮೀಸಲಾತಿಗಳು ತುಳಿತಕ್ಕೆ ಒಳಗಾದವರನ್ನು ಮೇಲಿತ್ತಿದ, ಮೇಲೆತ್ತುತ್ತಿರುವ ನಿದರ್ಶನಗಳು ನಮ್ಮ ಕಣ್ಣು ಮುಂದೆಯೇ ಇವೆಯಲ್ಲ? ಮಂದಿಯಾಲ್ವಿಕೆ ಮತ್ತು ಮೀಸಲಾತಿ ಇರುವ ಸಂಸ್ತೆಗಳನ್ನು ನೋಡಿರಿ. ಅಲ್ಲಿ ಎಲ್ಲಾ ಜಾತಿಮತದವರೂ ಇರುತ್ತಾರೆ. ಅವು ಸುಂದರವಾಗಿವೆ. ಮಂದಿಯಾಳ್ವಿಕೆ ಮತ್ತು ಮೀಸಲಾತಿ ಇಲ್ಲದ ಸಂಸ್ತೆಗಳನ್ನು ನೋಡಿ. ಅವು ಎಲ್ಲರನ್ನೊಳಗೊಳ್ಳದೆ ಕುರೂಪವಾಗಿವೆ.
/೫. ಇವೊತ್ತಿನ ಜಾತಿವ್ಯವಸ್ಥೆಯ ಅಸ್ತಿತ್ವದಲ್ಲಿ ಆಡಳಿತಮಾಡಿದ ಜಾತಿಗಳ ಪಾತ್ರವು ಬ್ರಾಹ್ಮಣರಿಗಿಂತ ಕಿರಿಯದೇ?/
ಕಿರಿಯದಲ್ಲ. ಎಲ್ಲರೂ ಒಂದಿಲ್ಲ ಒಂದು ಬಗೆಯಲ್ಲಿ ಕಾರಣರೇ. ಯಾರು ಯಾರು ಯಾವ ಯಾವ ಬಗೆಯಲ್ಲಿ ಕಾರಣರು ಅನ್ನುವುದು ಮುಕ್ಯ ಅಶ್ಟೆ. ವಯ್ದಿಕ ಬ್ರಾಮಣರ ಮುಂದಾಳುತನದಲ್ಲಿ ಜಾತಿಯು ಆಚರಣೆಗೆ ಬಂದಿರುವುದರಿಂದ, ನಡೆದಿರುವುದರಿಂದ ವಯ್ದಿಕ ವಿರೋದವೂ ಜಾತಿವಿರೋದ ಅನ್ನಬಹುದು ಅಂದೆನಶ್ಟೆ. ಅದೂ ವಚನಕಾರರ ಕುಳ್ಳಿಹ (context)ದಲ್ಲಿ.
//ಈ ಬಗೆಯ ಚರ್ಚೆಗಳು minority ಬ್ರಾಹ್ಮಣರ demonization ಅಷ್ಟೇ ! ಇದಕ್ಕೆ ಯಾರೇ ಎಷ್ಟೇ ತಾರ್ಕಿಕದ ಪ್ರತಿಮಾತನ್ನು ನೀಡಿದರು ಸಹ , ಈ ಬಗೆಯ ವೃಥಾ ದೂಷಣೆಯು ಮುಗಿಯದು.//
ನಿಮ್ಮ ಪ್ರಕಾರ ಯಾರು ಅಲ್ಪಸಂಕ್ಯಾತರಲ್ಲ? ನಾನು ನನ್ನ ಮಟ್ಟಿಗೆ ನನ್ನ ಗುರುತನ್ನು ಜಾತಿಯ ಜೊತೆ ಅಂಟಿಸಿಕೊಳ್ಳುವುದಿಲ್ಲ. ಬ್ರಾಮಣರನ್ನು ಜಾತಿಯ ಕಾರಣಕ್ಕೆ ಬೇರೆಯವರೆಂದು ಬಗೆಯುವುದೂ ಇಲ್ಲ. ಹಾಗೆಯೇ, ಯಾರನ್ನೇ ಆಗಲೀ ಯಾವ ತತ್ವವನ್ನೇ ಆಗಲೀ ಒರೆದುನೋಡುವುದನ್ನ (Criticism) ಬಿಡುವುದಿಲ್ಲ. ತಾವು ಕೂಡ ಯಾರನ್ನೂ ಒರೆನೋಟದಿಂದ ಆಚೆ ಇರಿಸಬೇಡಿರೆಂದು ಕೋರಿಕೆ.