ಇಲ್ಲದ ನೀರು ಬಿಡಿ, ಇಲ್ಲಾ ದುಡ್ಡು ಕೊಡಿ!

Jayalalitha

ಇತ್ತೀಚಿಗೆ ಕಾವೇರಿ ನದಿ ನೀರು ಸರಿಯಾದ ಸಮಯಕ್ಕೆ ಬಿಡದ ಕಾರಣ ತಮಿಳುನಾಡಿಗೆ ನಶ್ಟವಾಗಿದ್ದು ಈ ನಶ್ಟವನ್ನು ಕರ್‍ನಾಟಕ ಸರ್‍ಕಾರ ಕಟ್ಟಿ ಕೊಡಬೇಕು ಅನ್ನುವ ವಿಚಿತ್ರವಾದ ಕೇಸೊಂದನ್ನು ಸುಪ್ರೀಂ ಕೋರ್‍ಟ್ ನಲ್ಲಿ ತಮಿಳುನಾಡು ಸರ್‍ಕಾರ ಹಾಕಿರುವುದು ವರದಿಯಾಗಿದೆ. ಕಾವೇರಿ ನ್ಯಾಯಾದಿಕರಣದ ಮದ್ಯಂತರ ತೀರ್‍ಪಿನ ಪ್ರಕಾರ ನೀರು ಬಿಡದ ಕಾರಣ ಬೆಳೆಯ ರೂಪದಲ್ಲಿ 1500 ಕೋಟಿ ಹಾಗೂ ವಿದ್ಯುತ್ ಉತ್ಪಾದನೆ ಮಾಡದೆ 1000 ಕೋಟಿ ನಶ್ಟವಾಗಿದ್ದು ಒಟ್ಟು 2500 ಕೋಟಿ ರೂಪಾಯಿ ನಶ್ಟ ತುಂಬಿಕೊಡಬೇಕು ಎಂದು ತಮಿಳು ನಾಡಿನ ಸರ‍್ಕಾರ ಹೇಳಿದೆ.

ನಾವು ನಶ್ಟ ತುಂಬಿಕೊಡಬೇಕಾ?
ಅಸಲಿಗೆ ತಮಿಳುನಾಡಿಗೆ ಪರಿಹಾರ ತುಂಬಿಕೊಡಬೇಕಾಗಿರುವವರು ಯಾರು ಅನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಇದಕ್ಕೆ ಕಾರಣ ಯಾರು? ಸರಿಯಾಗಿ ಮಳೆ ಕೊಡದ ಪ್ರಕ್ರುತಿಯೇ? ಅತವಾ ಸರ್‍ಕಾರ ನೀರು ಬಿಡುತ್ತೇನೆ ಎಂದಾಗ ಪ್ರತಿಬಟನೆ ಮಾಡಿದ ಕರ್‍ನಾಟಕದ ಜನರೇ? ಅಶ್ಟಕ್ಕೂ ಕರ್‍ನಾಟಕದ ಕಾವೇರಿ ನದಿ ಪಾತ್ರದಲ್ಲಿ ಸರಿಯಾಗಿ ಮಳೆಯಾಗಿಲ್ಲ ಅನ್ನುವ ಸತ್ಯ ತಮಿಳುನಾಡಿಗೆ ಗೊತ್ತಿದ್ದರೂ ಯಾಕೆ ಇಂತಹ ಒಂದು ಕೇಸನ್ನು ನಮ್ಮ ಮೇಲೆ ಹಾಕಿದ್ದಾರೆ? ಉತ್ತರ ಸುಲಬವಾಗಿದೆ.

ಈ ಸಾರಿ ಕೋರ‍್ಟಿನಲ್ಲಿ ಇಂತಹದೊಂದು ಕೇಸ್ ಹಾಕಿದರೆ, ಮುಂದಿನ ಸಾರಿ ಕರ್‍ನಾಟಕ ತನ್ನ ಪಾಲಿಗೆ ನೀರು ಇರಲಿ ಬಿಡಲಿ, ತಮಿಳುನಾಡಿಗಂತೂ ತಡ ಮಾಡದೆ ನೀರು ಬಿಡುತ್ತದೆ ಹಾಗೂ ಜನರ ಹಾಗೂ ಸಂಗ-ಸಂಸ್ತೆಗಳ ಬೆದರಿಕೆಗೆ ಬಗ್ಗುವುದಿಲ್ಲ ಎನ್ನುವ ಉದ್ದೇಶ. ಇದೊಂದು ಬೆದರಿಕೆ ತಂತ್ರದ ಹಾಗೆ ಕಾಣಿಸುತ್ತಿದೆ. ಈ ಕೇಸನ್ನು ಕೋರ್‍ಟ್ ಹೇಗೆ ನೋಡುತ್ತದೆ ಅನ್ನುವುದ ಕಾದು ನೋಡಬೇಕು. ಮುಕ್ಯವಾಗಿ ಗಮನಿಸಬೇಕಾಗಿರುವ ಅಂಶವೆಂದರೆ ಹೊಳೆ ನೀರು ಹಂಚಿಕೆಯ ಮದ್ಯಂತರ ತೀರ್‍ಪಿನಲ್ಲಿ ’ಬರ’ದ ಸಮಯದಲ್ಲಿ ಆಗಬೇಕಾಗಿದ್ದ ಹಂಚಿಕೆಯ ಬಗ್ಗೆ ಮಾತನಾಡೇ ಇಲ್ಲಾ. ಹಾಗಿದ್ದೂ ತಮಿಳುನಾಡು ಯಾವಾ ಆದಾರದ ಮೇಲೆ ಪರಿಹಾರ ಕೇಳುತ್ತಿದೆ?

ಸೋತಿದ್ದು ಕರ್‍ನಾಟಕದ ಜನರು!
ಈ ಕಾವೇರಿ ವಿಶಯವನ್ನು ಒಮ್ಮೆ ತಿರುಗಿ ಅವಲೋಕನ ಮಾಡಿಕೊಳ್ಳಲು ಈ ಕೇಸ್ ಒಂದು ನೆಪವಾಗಿದೆ. ಇಲ್ಲಿಯವರೆಗೂ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಮ್ಮ ಕರ್‍ನಾಟಕಕ್ಕೆ ಸೋಲಾಗುತ್ತಲೇ ಬಂದಿದೆ. ಸ್ವಾತಂತ್ರ್ಯದ ಮೊದಲಿಗೆ ಆಗಿರುವ 1894 ಹಾಗೂ 1924 ರ ನದಿ ನೀರು ಹಂಚಿಕೆ ಸೂತ್ರಗಳು ಕೂಡ ಬ್ರಿಟೀಶರ ದಬ್ಬಾಳಿಕೆಯ ಅಡಿಯಲ್ಲೇ ಆಗಿದ್ದು! ಕರ್‍ನಾಟಕ ಏಕೀಕರಣಗೊಂಡ ಈಚೆಗೆ ಕಾವೇರಿ ನದಿ ನೀರು ವಿವಾದ ಜನರಿಗೆ ಬಾವನಾತ್ಮಕವಾಗಿ ಬೆಸೆದುಕೊಂಡೇ ಬಂದಿದೆ. ಹಾಗೂ ಇದನ್ನು ನಮ್ಮ ರಾಜಕೀಯ ಪಕ್ಶಗಳು ಸರಿಯಾಗಿ ಬಳಸಿಕೊಂಡಿವೆ. ಆದರೆ ನಿಜಕ್ಕೂ ಕಾವೇರಿ ನದಿ ನೀರು ಹಂಚಿಕೆಯ ವಿಶಯದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾವ ರಾಜಕೀಯ ಪಕ್ಶಗಳೂ ಸರಿಯಾಗಿ ಕೆಲಸ ಮಾಡಿಯೇ ಇಲ್ಲಾ ಅನ್ನುವುದು ಸತ್ಯ.

ನಮ್ಮ ರಾಜಕೀಯ ಪಕ್ಶಗಳ ಮಯ್ಗಳ್ಳತನಕ್ಕೆ, ಇಂದಿನ ಸೋಲಿಗೆ ಬಹುತೇಕ ನಾವುಗಳೇ ಕಾರಣ ಅಂದರೆ ತಪ್ಪಲ್ಲ. ಕನ್ನಡಿಗರಲ್ಲಿ ಸ್ವಾಬಿಮಾನ, ರಾಜಕೀಯ ಪ್ರಗ್ನೆ, ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳುವ ಪರಿ ಕೊಂಚ ಕಡಿಮೆಯೇ ಇದೆ! ಹಾಗಾಗಿ ಇದು ನಮ್ಮ ರಾಜಕೀಯ ಪಕ್ಶಗಳಿಗೆ ವರದಾನವಾಗಿದೆ. ಕಾವೇರಿ ವಿಶಯದಲ್ಲಿ ನೀವು ಯಾಕೆ ಸರಿಯಾಗಿ ಕೆಲಸ ಮಾಡಿಲ್ಲ ಅಂತ ನಮ್ಮ ನಾಯಕರನ್ನು ಕೊರಳು ಪಟ್ಟಿ ಹಿಡಿದು ಕೇಳುವ ಕೆಲಸ ನಮ್ಮಿಂದಾಗಿಲ್ಲ. ಇಂತಹ ವಿಶಯಗಳಲ್ಲಿ ಕನ್ನಡ ಸಮಾಜ, ಚಿಂತಕರು ಹಾಗೂ ಗಣ್ಯರು ಪೂರ್‍ತಿಯಾಗಿ ಪಾಲ್ಗೊಂಡಿರುವುದು ಕಡಿಮೆಯೇ, ಹೆಚ್ಚಾಗಿ ಬಾಯಿ ಹೇಳಿಕೆಗಳಿಗೆ ಇವರುಗಳು ಸೀಮಿತವಾದಂತಿದೆ. ಇಲ್ಲಿ ಸೋಲಾಗಿರುವುದು ಕನ್ನಡ ಜನತೆಗೆ!

ಕಾವೇರಿ ಹೊಳೆ ನೀರು ಹಂಚಿಕೆ ಸರಿಯಾಗಿ ಆಗಬೇಕು!
ಹವ್ದು, ಈ ಹಿಂದೆ ಆಗಿರುವ ನದಿ ನೀರು ಹಂಚಿಕೆಯಲ್ಲಿ ಕರ್‍ನಾಟಕದ ಪಾಲಿಗೆ ದೊಡ್ಡ ಮಟ್ಟಿಗೆ ಅನ್ಯಾಯವಾಗಿದೆ. ಮೊದಲನೆಯದಾಗಿ ಬ್ರಿಟೀಶರ ಆಳ್ವಿಕೆಯಲ್ಲಿ ಆಗಿರುವ ನದಿ ನೀರು ಹಂಚಿಕೆ ಸೂತ್ರವನ್ನು ರದ್ದುಗೊಳಿಸಬೇಕಾಗಿದೆ. ಇವತ್ತಿನ ನದಿ ನೀರು ಹಂಚಿಕೆಗೆ ಈ ಸೂತ್ರಗಳೇ ಮೂಲ ಆದಾರ.  ಆದರೆ ಸದ್ಯಕ್ಕೆ ಇದರಿಂದ ಬಹುಮಟ್ಟಿಗೆ ಲಾಬ ಪಡೆದುಕೊಳ್ಳುತ್ತಿರುವ ತಮಿಳುನಾಡು ಸೂತ್ರಗಳ ಬದಲಾವಣೆಗೆ ವಿರೋದ ಮಾಡುತ್ತಿದೆ.

ಅಯ್ವತ್ತು ವರ್‍ಶಗಳಾದ ಮೇಲಾದರೂ ಈ ಸೂತ್ರ ಕೊನೆಗೊಂಡು ಹೊಸ ಸೂತ್ರ ತರಬೇಕಾಗಿತ್ತು. ಆದರೆ ತಮಿಳುನಾಡು ತನ್ನ ರಾಜಕೀಯ ಪ್ರಬಾವ ಬಳಸಿ ಹಳೆಯ ನಿಯಮಗಳೇ ಉಳಿದುಕೊಳ್ಳುವಂತೆ ಮಾಡಿತು. ಇದರಿಂದಾಗಿ ಕರ್‍ನಾಟಕ ರಾಜ್ಯ ಹೊಸ ನೀರಾವರಿ ಯೋಜನೆ, ಕುಡಿಯುವ ನೀರಿನ ಯೋಜನೆಗಳು ಶುರು ಮಾಡಬೇಕಾದರೂ ತಮಿಳುನಾಡಿನ ಮುಂದೆ ಕಯ್ಕಟ್ಟಿ ನಿಲ್ಲುವ ಪರಿಸ್ತಿತಿ ಇಂದಿದೆ.

ಇಂತಹ ಒಬೀರಾಯನ ಕಾಲದ ನಿಯಮಗಳು ಬದಲಾಗಬೇಕಾಗಿದೆ. ಒಕ್ಕೂಟ ವ್ಯವಸ್ತೆಯಲ್ಲಿರುವ ನಮ್ಮ ರಾಜ್ಯಗಳಿಗೆ ಸರಿಯಾದ ಹಕ್ಕು ಸಿಗಬೇಕಿದೆ. ನದಿ ನೀರು ಹಂಚಿಕೆ ಆಯಾ ವರ್‍ಶದಲ್ಲಿ ಬೀಳುವ ಮಳೆಗೆ ಅನುಗುಣವಾಗಿ ಇರ್‍ವರಿಗೂ ಸರಿಯಾಗಿ ಹಂಚಿಕೆಯಾಗಬೇಕು. ಇವತ್ತು ಕಾವೇರಿ ಕಣಿವೆಯಲ್ಲಿರುವ ಆಣೆಕಟ್ಟೆಗಳಲ್ಲಿ ಹೂಳು ತುಂಬಿಕೊಂಡಿದೆ. ಹೀಗಾಗಿ ಇದನ್ನು ಗಣನೆಗೆ ತಗೆದುಕೊಳ್ಳುವ ಅವಶ್ಯಕತೆ ಇದೆ. ಇದರ ಜೊತೆಜೊತೆಗೆ ನಮ್ಮ ರಾಜಕೀಯ ಪಕ್ಶಗಳು ಸಹ ಇಂತಹದೊಂದು ಬದಲಾವಣೆ ತರಲು ಗಟ್ಟಿಯಾದ ಪ್ರಯತ್ನ ಮಾಡಬೇಕಾಗಿದೆ.

ಎಲ್ಲದಕ್ಕೂ ಮೂಗು ತೂರಿಸುವ ಚಾಳಿಯನ್ನು ಕೇಂದ್ರ ಸರಕಾರವು ಬಿಡಬೇಕಾಗಿದೆ. ತಮಿಳುನಾಡು ಹಾಗೂ ಕರ್‍ನಾಟಕ ರಾಜ್ಯಗಳಿಬ್ಬರಿಗೂ ಒಪ್ಪಿಗೆಯಾಗುವಂತಹ ಒಂದು ತೀರ್‍ಮಾನಕ್ಕೆ ಬರಬೇಕಾಗಿದೆ. ಜನರಲ್ಲೂ ರಾಜಕೀಯವಾಗಿ ಜಾಗ್ರುತಿ ಮೂಡಿಸುವ ಪ್ರಯತ್ನ ಆಗಬೇಕು. ಯಾವುದೋ ಕಾಲದಲ್ಲಿ ಆಗಿರುವ ತಪ್ಪನ್ನು ಒಪ್ಪಿಕೊಂಡು ಮುಂದಿನ ಪೀಳಿಗೆಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕಾಗಿದೆ.

ಚೇತನ್ ಜೀರಾಳ್

(ಚಿತ್ರ: www.in.com)

1 ಅನಿಸಿಕೆ

  1. ನೀವು ಹೇಳಿದ ಹಾಗೆ ಬಾಯಿ ಹೇಳಿಕೆ ತುಂಬಾ ಜಾಸ್ತಿ !
    ಯಾರು ಈಜು ಕೊಳದಲ್ಲಿ ಇಳಿಯೋದಿಲ್ಲ್ಲ … ಬರಿ ಹೊರಗಡೆ ನಿಂತು ಕೈ ಆಡ್ಸ್ಬೇಕು ಕಾಲ್ ಬಡಿಬೇಕಾಗಿತ್ತು .. ಅಂತ ಹೇಳವರೇ ಇರೋದು !!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.