ಹೆಸರುಬೇಳೆ ಉಸಲಿ

usali

ಏನೇನು ಬೇಕು?

 1. ಅಕ್ಕಿ – 1/4 ಕೆ.ಜಿ
 2. ಹೆಸರು ಬೇಳೆ – 100 ಗ್ರಾಮ್
 3. ಹುರುಳಿ ಕಾಯಿ – 100 ಗ್ರಾಮ್
 4. ಕ್ಯಾರೆಟ್ – 1
 5. ಆಲುಗೆಡ್ಡೆ – 1
 6. ನಿಂಬೆಹಣ್ಣು – 1
 7. ಹಸಿಮೆಣಸಿನಕಾಯಿ- ನಾಲ್ಕು
 8. ಈರುಳ್ಳಿ – ದಪ್ಪ ಗಾತ್ರದ ಒಂದು
 9. ಎಣ್ಣೆ – 4 ಚಮಚ
 10. ಕಾಯಿ ತುರಿ – 1 ಓಳು
 11. ಸಾಸಿವೆ, ಜೀರಿಗೆ, ಕಡಲೆಬೇಳೆ ಮತ್ತು ಕಾಳು ಮೆಣಸು – ಒಂದೊಂದು ಚಮಚ
 12. ಕೊತ್ತಂಬರಿ ಮತ್ತು ಕರಿಬೇವು
 13. ಉಪ್ಪು – ರುಚಿಗೆ ತಕ್ಕಶ್ಟು

ಹೇಗೆ ಮಾಡುವುದು?

 1. ಈರುಳ್ಳಿ, ಹುರುಳಿಕಾಯಿ ಮತ್ತು ಕ್ಯಾರೆಟ್ಟನ್ನು ಸಣ್ಣದಾಗಿ ಹೆಚ್ಚಿಕೊಳ್ಳುವುದು.
 2. ಬಾಣಲೆಯಲ್ಲಿ ಮೊದಲು ಅಕ್ಕಿ ಆಮೇಲೆ ಹೆಸರುಬೇಳೆಯನ್ನು ಎಣ್ಣೆ ಹಾಕದೆ ಹುರಿದುಕೊಳ್ಳಬೇಕು.
 3. ಹುರಿದ ಹೆಸರುಬೇಳೆ ಮತ್ತು ಹೆಚ್ಚಿದ ತರಕಾರಿಗಳನ್ನು ನೀರಿನಲ್ಲಿ ಬೇಯಿಸಿಕೊಳ್ಳಬೇಕು.
 4. ಎಣ್ಣೆ, ಸಾಸಿವೆ, ಜೀರಿಗೆ, ಕಡಲೆಬೇಳೆ, ಕಾಳುಮೆಣಸು, ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವನ್ನು ಕ್ರಮವಾಗಿ ಹಾಕಿ ಒಗ್ಗರಣೆಯನ್ನು ಮಾಡಿಕೊಳ್ಳುವುದು.
 5. ಒಗ್ಗರಣೆ ಆದ ಮೇಲೆ ನೀರಿನಲ್ಲಿ ಬೆಂದಿರುವ ತರಕಾರಿಗಳನ್ನು ಹಾಕಿ ಅಕ್ಕಿಯ ಎರಡರಶ್ಟು ನೀರನ್ನು ಹಾಕಬೇಕು.
 6. ಕುದಿ ಬಂದ ಮೇಲೆ ಅಕ್ಕಿ ಹಾಕಿ ಕಯ್ಯಾಡುತ್ತಿರಬೇಕು. ಆಮೇಲೆ ಕಾಯಿತುರಿಯನ್ನು ಹಾಕಿ ಕಯ್ಯಾಡುತ್ತಿರಬೇಕು.
 7. ಅಕ್ಕಿ ಬೆಂದ ಮೇಲೆ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕಯ್ಯಾಡಬೇಕು.
 8. ಒಲೆಯನ್ನು ಆರಿಸಿ ನಿಂಬೆಹಣ್ಣನ್ನು ಹಿಂಡಿ, ಕೊತ್ತಂಬರಿ ಸೊಪ್ಪಿನಿಂದ ಸಿಂಗರಿಸಬೇಕು.

ಈ ತಿಂಡಿ ಹದುಳಕ್ಕೆ ಒಳ್ಳೆಯದು ಯಾಕಂದರೆ ಹೆಸರುಬೇಳೆ ಮಯ್ಯಿಗೆ ತಂಪನ್ನೀಯುತ್ತದೆ. ಇದನ್ನು ಬೆಳಗಿನ ತಿಂಡಿಯಾಗಿ ಇಲ್ಲವೆ ಸಂಜೆಯ ತಿಂಡಿಯಾಗಿಯೂ ಬಳಸಬಹುದು. ಮೊಸರಿನೊಂದಿಗೆ ಇದನ್ನು ತಿಂದರೆ ಇದರ ರುಚಿ ಇಮ್ಮಡಿಯಾಗುತ್ತದೆ.

ಕೊಸರು : ಬೆಳಿಗ್ಗೆ ಈ ತಿಂಡಿಯನ್ನು ಮಾಡಿದರೆ ಸಂಜೆಯಾದರೂ ಇದು ತನ್ನ ರುಚಿಯನ್ನು ಬಿಟ್ಟುಕೊಡುವುದಿಲ್ಲ. ಸಂಜೆಗೆ ಇನ್ನೂ ರುಚಿ ಚೆನ್ನಾಗಿದೆ ಅಂತ ಅನ್ನಿಸುವುದುಂಟು.

– ಬ್ರಮರಾಂಬ.ಎನ್.ಎಮ್

(ಚಿತ್ರ: ಬರತ್ ಕುಮಾರ್)

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: