ಉಂಚಳ್ಳಿ ಅರ‍್ಬಿಗೆ ಪ್ರವಾಸ – 4

unchalli-41

{ಕಳೆದ ವಾರದ ಕಂತಿನಲ್ಲಿ:- ನಾನೂ ಕೂಡ ಜಗ್ಗು ಜಾರಿದ ಮೇಲೆ ಬಂಡೆ ಮೇಲೆ ಇಳಿದು ಕುಳಿತು ಜಾರಿದೆ. ಸರ್ ಅಂತ 12 ಅಡಿ ಜಾರಿ ನನ್ನ ಅಡಿಗಳು ಆ ದಿಂಡಿಗೆ ಹೊಡೆದವು. ಆ ರಬಸದಲ್ಲಿ ಸ್ವಲ್ಪ ಬಲಗಡೆಗೆ ವಾಲಿದೆ. ಸರಿಯಾಗಿ ಆ ಹಳ್ಳದಲ್ಲಿ ಬಂದು ಕುಳಿತೆ. “ಯಾವುದೇ rapid movements ಮಾಡ್ಬೇಡ. ಈಗ adrenalilne pump ಆಗ್ತಿರುತ್ತೆ. ನಿದಾನವಾಗಿ ಹೋಗೋಣ” ಎಂದು ಜಗ್ಗು ಎಚ್ಚರಿಸಿದ. ಹಾಗೇ ಮುಂದೆ ಮೆಲ್ಲಗೆ ತೆವಳಿಕೊಂಡು ಮುಂದೆ ಹೋದನು. ನಾನು ಅವನನ್ನು ಹಿಂಬಾಲಿಸಿದೆ…}

ಮಳೆ ಈಗ ಇನ್ನೂ ಜೋರಾಗಿತ್ತು. ನಾವು ಬಂದಾಗ ಒಣಗಿದ್ದ  ಬಂಡೆಗಳ ಮೇಲೆಲ್ಲ ಈಗ ಸಣ್ಣ ಸಣ್ಣ ತೊರೆಗಳು ಹರಿಯುತ್ತಿದ್ದವು. ಹಾಗೇ ನಿದಾನವಾಗಿ ಬಲಗಡೆಗೆ ತೆವಳುತ್ತ 5-6 ಅಡಿ ಹೊಗಿದ್ದೆವು. ಅಲ್ಲಿ ಒಂದು ಸಣ್ಣ ನೀರ ಚಿಲುಮೆ. ಅದರಲ್ಲಿ ತೆವಳುತ್ತ ಹೋಗುವ ಹಾಗೆ ಇಲ್ಲ. ಅದು ಪಾಚಿ ಮಯ. ಮುಟ್ಟಿದರೆ ಜಾರುತ್ತದೆ. ಹಿಡಿದುಕೊಳ್ಳುವುದಕ್ಕೆಂದು ಏನೂ ಇಲ್ಲ. ತೀರಾ ಕುತ್ತು. ಆ ಜಾರೋ ಬಂಡಿ ಆದ ಮೇಲೆ ಇದು ಎರಡನೆಯ ದೊಡ್ಡ ಅಪಾಯ. “ಹೋಗೋದಕ್ಕೆ ಆಗುತ್ತೋ ಇಲ್ವೊ” ಎಂಬ ಯೋಚನೆ ನಮಗೆ. ಜಗ್ಗು ಕೆಲವೊಂದು  ಕಿರು ಬೆರಳೂ ತೂರದ ಬಂಡೆ ಸಂದಿಗಳನ್ನ ಹಿಡಿದು, ಕೊಂಚ ಮುಂದೆ ಹೋಗಿ, “ಮಗ ದಾಟಬೋದು, ನಾನು ಹೇಗೆ ದಾಟ್ತೀನಿ ಅನ್ನೋದನ್ನ ನೋಡ್ಕೋ.

ನೀನು ಕೂಡ ಹಾಗೇ ದಾಟು” ಅಂದ. ಹಾಗೆ ಅಲ್ಲಿ ಇಲ್ಲಿ ಸಣ್ಣ ಪುಟ್ಟ ಬಿರುಕುಗಳ ನೆರವು ತೆಗೆದುಕೊಂಡು ಆ ಸಣ್ಣ ಚಿಲುಮೆ ದಾಟಿ ಆ ಕಡೆಗೆ ಹೋದನು. “ನೀ, ನಾ ಬಂದಂಗೆ ಬಾ. ಅಶ್ಟ್ರಲ್ಲಿ ನಾನು ಮುಂದೆ ಹೆಂಗ್ ಹೋಗಬೋದು ಅಂತ ನೋಡ್ತೀನಿ” ಅಂದ. ನನಗೆ ಅವನು ದಾಟಿದ ಹಾಗೆ ದಾಟುವುದಕ್ಕೆ ಆಗಲಿಲ್ಲ. ಸುಮಾರು 3-4 ನಿಮಿಶ ಒದ್ದಾಡಿದೆ. ಜಗ್ಗು “ಅಲ್ಲಿ ಹಿಡುಕೊ, ಹಿಂಗ್ ಮಾಡು-ಹಂಗ್ ಮಾಡು” ಎಂದು ಹೇಳಿಕೊಡುತ್ತಿದ್ದ. ಆದರೆ ಅದು ಯಾವುದನ್ನು ಮಾಡುವುದಕ್ಕೂ ನನಗೆ ದಿಗಿಲು. ಹೇಗೋ ನನ್ನ ರೀತಿಯಲ್ಲೇ ದಾಟಿಬಿಟ್ಟೆ.

ನಾನು ದಾಟುವಶ್ಟರಲ್ಲಿ ಜಗ್ಗು ಬಂಡೆ ಮೇಲಕ್ಕೆ ಕೊಂಚ ಹತ್ತಿ (3-4 ಅಡಿ) ಅಲ್ಲಿಂದ ಹೋಗಕ್ಕಾಗುವುದಿಲ್ಲವೆಂದು ತೀರ್‍ಪಿತ್ತಿದ್ದ. ಈಗ ಬಂಡೆ ಕೆಳಗಡೆ, ನೀರಿನ ಹತ್ತಿರ ಇಳಿದು ಹೋಗುವುದು ಒಂದೇ ದಾರಿ. ನೀರಿನ ಕಡೆ ಕಣ್ಣು ಹಾಯಿಸಿದೆವು. ಸ್ವಲ್ಪ ಹೊತ್ತಿನ ಮಳೆಗೆ ನೀರಿನ ಮಟ್ಟ ಸಾಕಶ್ಟು ಏರಿತ್ತು. ಇನ್ನೂ ಹೆಚ್ಚಿಗೆ ದಿಗಿಲಾಯ್ತು. ಮಳೆ ಹೀಗೇ ಮುಂದುವರೆದರೆ ಬಂಡೆ ತುಂಬಾ ಸಣ್ಣ ತೊರೆಗಳು ತುಂಬಿ ನಾವು ಕೊಚ್ಕಿಕೊಂಡು ಹೋದರೆ ಏನು ಗತಿ ಎಂದು ಕೂಡ ನನ್ನ ಮನಸ್ಸಿಗೆ ಬಂತು. ಆದರೆ ಅದೆಲ್ಲ ಯೋಚನೆ ಮಾಡಿಕೊಂಡು, ಹೆದರಿಕೊಳ್ಳುವುದಕ್ಕೆ ಅಲ್ಲಿ ಹೊತ್ತಿರಲಿಲ್ಲ. ಮಳೆ ಹೆಚ್ಚಾಗುತ್ತಿದೆ. ನೀರಿನ ಮಟ್ಟ ಹೆಚ್ಚುತ್ತಿದೆ. ಹೊತ್ತು ಮೀರುತ್ತ ಸಂಜೆಯಾಗುತ್ತಿದೆ. ಕತ್ತಲಾದ ಮೇಲೆ ಹೋಗುವುದಕ್ಕೆ ಆಗುವುದೇ ಇಲ್ಲ. ನಮ್ಮ ಹತ್ತಿರ ಟಾರ್‍ಚ್ ಬೇರೆ ಇರಲಿಲ್ಲ. ಅದರ ಜೊತೆ ಅಡಿ ಅಡಿಗೂ ಜಾರುವ ಪಾಚಿ ಕಟ್ಟಿದ ಇಳಿಜಾರು ಬಂಡೆಗಳು. ಊಹ್ಹ್ಹ್!

ಹಾಗೇ ಕುಳಿತಲ್ಲೆ ಕೆಳಗಡೆಗೆ ದೇಕಿಕೊಂಡು ಹೊಳೆಯ ತೀರಕ್ಕೆ ಬಹಳ ಹತ್ತಿರ ಬಂದೆವು. ಅಲ್ಲಿ ಒಂದು ಬಂಡೆ ಕಲ್ಲನ್ನು ತಬ್ಬಿ ಹಿಡಿದು ಆ ಕಡೆಗೆ ಕಾಲು ಹಾಕಿ ದಾಟಬೇಕಿತ್ತು. ಇದು ಎಲ್ಲದಕ್ಕಿಂತ ಅಪಾಯ. ನಾವು ಕಾಲಿಟ್ಟು, ಕಯ್ ಇಟ್ಟು ಒತ್ತಿ ಹಿಡಿದುಕೊಂಡು ಹೋಗ ಬೇಕಾಗಿರುವ ಜಾಗದಿಂದ ಒಂದು ಸೆಂಟಿಮೀಟರ್ ಕೆಳಗೆ ನೀರು ಹಿರಿಯುತ್ತಿದೆ. ಜಾರಿದರೆ ನೇರವಾಗಿ ಜಲಸಮಾದಿ. ಮೊದಲಿನ ಹಾಗೆ, ಜಗ್ಗು ಮೊದಲು ದಾಟಿದ, ಆಮೇಲೆ ನಾನು ಆ ಬಂಡೆ ಕಲ್ಲನ್ನು ತಬ್ಬಿ ದಾಟಿದೆ. ನಾವಿಬ್ಬರೂ ಸೇರಿ ಆ ಒಂದು ಬಂಡೆ ಕಲ್ಲನ್ನು 3-4 ಸಣ್ಣ ಪುಟ್ಟ ಹೆಜ್ಜೆ ಇಟ್ಟುಕೊಂಡು ದಾಟುವುದಕ್ಕೆ ಸುಮಾರು 7-8 ನಿಮಿಶ ತೆಗೆದುಕೊಂಡಿರಬಹುದು. ಒಂದು ಇಂಚು ಮುಂದೆ ಹೋಗಿದ್ದು ಕೂಡ ಅತಿ ಎಚ್ಚರದಿಂದ. ಅಶ್ಟು ಎಚ್ಚರವಾಗಿ ನಾನು ಯಾವತ್ತೂ ಹೆಜ್ಜೆ ಇಟ್ಟಿದ್ದಿಲ್ಲ.

ಅದನ್ನು ದಾಟಿ ಇಬ್ಬರೂ ನಿಟ್ಟುಸಿರು ಬಿಟ್ಟೆವು. 3ನೇ ದೊಡ್ಡ ಅಪಾಯ ಕಳೆಯಿತು. ಇನ್ನೂ ಅದೆಶ್ಟು ಇವೆಯೋ ಗೊತ್ತಿಲ್ಲ. ಹಾಗೇ ಮುಂದೆ ನಡೆಯುತ್ತ ಬರುವಾಗ ಅಲ್ಲೇ ಬಿಟ್ಟಿದ್ದ ನನ್ನ ಮೆಟ್ಟು ಸಿಕ್ಕಿತು. ಅದನ್ನು ತೊಟ್ಟರೆ ಸಿಕ್ಕಾಪಟ್ಟೆ ಜಾರುತ್ತದೆ ಎಂದು ಹಾಗೇ ಕಯ್ಯಲ್ಲೇ ಹಿಡಿದು ನಡೆದೆ. ಇನ್ನೂ ತೀರದ ಹತ್ತಿರ ಹೊಗುವುದು ಬೇಡ, ಮೇಲೆ ದಾರಿ ಕಾಣುತ್ತಿದೆ. “ಮೇಲಿಂದ್ಲೆ ಹೋಗೋಣ” ಎಂದುಕೊಂಡು ಮೇಲೆ ಹೊರಟೆವು. ಕೊಂಚ ದೂರ ಹೋದ ಕೂಡಲೇ ಅಲ್ಲಿ ಒಂದು ದೊಡ್ಡ ಜರಿ. ಜರಿ ದಾಟಿ ಮುಂದೆ, ದೊಡ್ಡ ಕಲ್ಲು ಮತ್ತು ಹಳ್ಳ. ಮುಂದೆ ದಾರಿ ಇಲ್ಲ. ಈಗ ಮತ್ತೆ ಕೆಳಗೆ ತೀರದ ಹತ್ತಿರ ಹೋಗಿಯೇ ಇಳಿಯಬೇಕು. ತೀರದ ಹತ್ತಿರ ಹೋಗುವುದು ದೊಡ್ಡ ಅಪಾಯವೇ.

ಹೀಗೆ ಜರಿ ಬೀಳುವ ಕಡೆಯಲ್ಲಿ ಮೇಲಕ್ಕೆ ಹತ್ತಿ, ಕಾಡಿನ ಒಳಗೆ ಸೇರಿ ಹಾಗೆ ನಾವು ಬಂದ ದಾರಿ ಹಿಡಿಯುವುದಕ್ಕೆ ಪ್ರಯತ್ನಿಸೋಣ ಎಂದುಕೊಂಡೆವು. ಸ್ವಲ್ಪ ಮೇಲಕ್ಕೆ ಹತ್ತಿದ ಕೂಡಲೇ ಗೊತ್ತಾಯ್ತು ಅದು ಕಶ್ಟವೆಂದು. ಅಶ್ಟಲ್ಲದೇ ಅಲ್ಲಿ ಯಾವಾಗಲೂ ಆ ಜರಿ ನೀರು ಒಂದೇ ಸಮನೇ ಬಿದ್ದು ಎಶ್ಟು ಜಾರುತ್ತಿತ್ತೆಂದರೆ, ಹತ್ತಿದರೂ ಇಳಿಯುವುದಕ್ಕಂತೂ ಆಗುತ್ತಲೇ ಇರಲಿಲ್ಲ. ಆಮೇಲೆ ಮುಂದೆ ದಾರಿ ಸಿಗದಿದ್ದರೆ ಇಳಿಯುವುದಕ್ಕೆ ಆಗದೆ ಅಲ್ಲೇ ಸಿಕ್ಕಿಕೊಳ್ಳಬೇಕಿತ್ತು. ಜಗ್ಗು, ಅಮೇಲೆ ಎದುರಿಗೆ ಇದ್ದ ಕಣಿವೆಯ ಇಳಿಜಾರಿನಲ್ಲಿ ಇದ್ದ ಬಂಡೆಗಳನ್ನು ತೋರಿಸಿದ. “ನೋಡೋ, ಆ ಬಂಡೆಗಳ ಮೇಲೆ ಹೋದ್ರೆ ಅಲ್ಲಿ ಕಾಡೊಳಗೆ ಹೋಗೋದಕ್ಕೆ ಜಾಗಾನೇ ಇಲ್ಲ. ಇಲ್ಲಿ ಕೂಡ ಹಂಗೇ ಇರುತ್ತೆ ಅನ್ನೋ ಅನುಮಾನ” ಎಂದನು. ನನಗೂ ಸರಿ ಎನ್ನಿಸಿತು. ಇನ್ನು ಬೇರೆ ದಾರಿ ಇಲ್ಲದೇ ಮತ್ತೆ ತೀರದ ಹತ್ತಿರ ಹೋಗಬೇಕಾಯ್ತು.

ನಾನು 3ನೇ ದೂಡ್ಡ ಅಪಾಯವೆಂದು ಹೇಳಿದೆನಲ್ಲ ಅಂತಹದ್ದೇ ಇನ್ನೂ ಎರಡು ಇದ್ದವು. ಅವುಗಳನ್ನು ಹೇಗೋ ಮಾಡಿ ದಾಟಿದೆವು. ಆದರೆ ಇವು ಅರ್‍ಬಿಯಿಂದ ಸುಮಾರು ದೂರ ಇದ್ದಿದ್ದರ ಸಲುವಾಗಿ ಅಲ್ಲಿ ಎಡಬಿಡದೆ ನೀರು ಜಿನುಗುತ್ತಿರಲಿಲ್ಲ ಎಂದು ಕಾಣುತ್ತದೆ. ಅದಕ್ಕೆ ಅಲ್ಲಿ ಪಾಚಿ ಕಡಿಮೆ ಇತ್ತು. ಅಪಾಯವೇನೋ ಇದ್ದೇ ಇತ್ತು. ಆದರೆ ಮುಂಚಿನದಕ್ಕಿಂತ ಸ್ವಲ್ಪ ಸಲೀಸಾಗೇ ದಾಟಿದೆವು. ಇನ್ನು ಮುಂದೆ ಪಾಚಿ ಕಡಿಮೆ. ಮುಂದೆ ದಾರಿ ನೋಡಿದರೆ ಅಶ್ಟೇನು ಕಶ್ಟ ಇದ್ದ ಹಾಗೆ ಇರಲಿಲ್ಲ. ದಾಟಿ ಮೊದಲನೇ ಸಲ ನೆಮ್ಮದಿಯ ನಿಟ್ಟುಸಿರು ಬಿಟ್ಟೆವು, ದೊಡ್ಡದೊಡ್ಡ ಅಪಾಯಗಳನ್ನೆಲ್ಲ ಪಾರು ಮಾಡಿಕೊಂಡು ಬಂದೆವು, ಇನ್ನು ಇರುವುದೆಲ್ಲ ಬರೀ ಅಪಾಯ ಅಶ್ಟೆ ಎಂದು!

ಸ್ವಲ್ಪ ದೂರ ನಡೆದ ಕೂಡಲೇ  ನಾವು ನೆಗೆದು ದಾಟಿದ್ದ ಬಂಡೆ ಬಂತು. ಈಗ ನೆಗೆಯೋ ಸೀನೇ ಇಲ್ಲ. ಹಲ್ಲು, ಮೋರೆ, ಮೂತಿ, ಮಯ್-ಕಯ್ ಎಲ್ಲ ಮುರಿದು ಕೊಳ್ಳುವುದೇ. ಈಗ ಆ ಬಂಡೆ ಇಳಿದು ಮುಂದಿನ ಬಂಡೆ ಹತ್ತಬೇಕು. ಇಳಿದೆವು. ಆದರೆ ಈಗ ನುಣುಪಾಗಿ, ಇಳಿಜಾರಾಗಿರುವ ಮುಂದಿನ ಬಂಡೆ ಹತ್ತುವುದು ಹೇಗೆ? ಜಗ್ಗು ಆ ಬಂಡೆಯ ಬಲಗಡೆಯ ಕೊನೆಗೆ ಹೋಗಿ ಅಲ್ಲಿ ಗೋಡೆಯಂತೆ ನಿಂತಿದ್ದ ಹಿಂದಿನ ಬಂಡೆ ನೆರವು ತೆಗೆದುಕೊಂಡು ಹತ್ತುವುದಕ್ಕೆ ಪ್ರಯತ್ನ ಪಟ್ಟನು. ಜಾರುತ್ತಿದ್ದ ಅವನನ್ನು ನಾನು ಕೆಳಗಿಂದ ಹಿಡಿದು ಎತ್ತಿದೆ. “ಆದ್ರೆ, ನೀನು ಹೇಗೆ ಬರ್‍ತೀಯ” ಅಂದ. “ನೋಡೋಣ ಮೊದಲು ನೀನು ಹತ್ತಿ ನೋಡು” ಅಂದೆ.

ಆ ಬಂಡೆಯ ಮೇಲೆ ಕಯ್ ಎಟುಕಿಸಿದಾಗ ಅಲ್ಲಿ ಒಂದು ಸಣ್ಣ  ಬಿರುಕಿತ್ತು. ಅದನ್ನೇ ಹಿಡಿದು ಜಗ್ಗು ಮೇಲಕ್ಕೆ ಹತ್ತಿದ. ನಾನು ಹತ್ತುವಾಗ ನನಗೆ ನೆರವು ಕೊಟ್ಟು ಎತ್ತಿಕೊಂಡ. ನನಗೂ ಆ ಬಿರುಕು ಕಯ್ಗೆ ಸಿಕ್ಕಿದ ಮೇಲೆ ಹತ್ತಲು ಸಲೀಸಾಯ್ತು. ಇನ್ನೂ ಆ ಬಂಡೆಯನ್ನು ಇಳಿಯಬೇಕು. ಜಗ್ಗು ಹಾಗೇ ಕಯ್ ಚಾಚಿ ಬಂಡೆ ಸಂದಿಯಲ್ಲಿ ಕಯ್ಯಿಟ್ಟು ಹೇಗೋ ಆಯ ತಪ್ಪದೇ ಇಳಿಯುತ್ತಿದ್ದ. ಆ ಬಂಡೆ ಸಂದಿಯಲ್ಲಿ ಹಾವಿದ್ದರೆ ಎಂದು ದಿಗಿಲಾಯ್ತು. ಜಗ್ಗು ತೀರಾ ಒಳಗೆ ಕಯ್ ಇಡಲಿಲ್ಲ. ಮತ್ತೆ ನಾನೂ ಕೂಡ ಅದೇ ಸಾಹಸ ಮಾಡಿದೆ. ಸ್ವಲ್ಪ ಕಶ್ಟ ಆಯ್ತು. ಜಗ್ಗು ಕೆಳಗಡೆಯಿಂದ ನನ್ನ ಕಾಲು ಹಿಡಿದುಕೊಂಡ. ಆಮೇಲೆ ಸಲೀಸಾಗಿ ಇಳಿದೆ.

ಇನ್ನು ಸ್ವಲ್ಪ ಮುಂದೆ ಹೋದ ಮೇಲೆ, ಹೂತ್ತೆಶ್ಟಾಯ್ತು ಎಂದು ಜಗ್ಗುನ ಕೇಳಿದೆ. 5:15 ಎಂದ. ನಾವು ಇಶ್ಟು ಹೊತ್ತಿಗೆ ಮೇಲೆ ಇರಬಹುದು ಎಂದುಕೊಂಡಿದ್ದೆವು. ಆದರೆ ಇನ್ನೂ ಬಂಡೆಗಳ ದಾರಿಯೇ ಕಾಲು ಪಾಲು ಉಳಿದಿತ್ತು. ಹಾಗೇ ಜಾರುತ್ತ, ಬೀಳುತ್ತ ನಾವು ಮೊದಲು ಇಳಿದು ಬಂದ ಜಾಗಕ್ಕೆ ಬಂದೆವು. ಅಲ್ಲಿ ಒಂದು ಬಂಡೆಯ ಮೇಲೆ “ಶ್ಯಾಮ” ಅಂತ ಯಾರೋ ಹೆಸರು ಕೆತ್ತಿದ್ದರು. ಅದನ್ನು ಶ್ಯಾಮ ಮೊದಲೇ ಜಗ್ಗುಗೆ ತೋರಿಸಿದ್ದ. ಅದರಿಂದ ಗೊತ್ತಾಯ್ತು. ಆದರೆ ನಾವು ಮೊದಲು ಕಣಿವೆಗೆ ಬಂದಿಳಿದಾಗ ಕುಳಿತಿದ್ದ ಬಂಡೆ ಯಾವುದು ಎಂದು ಗೊತ್ತೇ ಆಗಲಿಲ್ಲ. ನೀರಿನ ಮಟ್ಟ ಏರಿದ್ದರಿಂದ ಎಲ್ಲ ಬೇರೆ ತೆರನಾಗಿತ್ತು. ಗುರುತೇ ಹಿಡಿಯುವುದಕ್ಕೆ ಆಗದಶ್ಟು.

ಇನ್ನು ಮಿಕ್ಕ ಬಂಡೆಯ ದಾರಿಯನ್ನು ದಾಟಲು ಅಶ್ಟು ಕಶ್ಟ ಆಗಲಿಲ್ಲ. ಆಮೇಲೆ, ಕಾಡನ್ನು ಹೊಕ್ಕು ಮೇಲೆ ಏರಲು ತೊಡಗಿದೆವು. ಮಳೆ ಬಂದು ನಾವು ಬಂದ ದಾರಿ ಯಾವುದು ಎಂದು ಒಂದು ಸ್ವಲ್ಪವೂ ಗುರುತು ಹಿಡಿಯುವುದಕ್ಕೆ ಆಗಲಿಲ್ಲ. ನೀರು ಹರಿದು, ಮಣ್ಣು ಕೆಡವಿ ಕೆಲವು ಮರ ಗಿಡಗಳೆಲ್ಲಾ ಬಿದ್ದು ನಾವು ಬಂದ ದಾರಿಯೆಲ್ಲಾ ಮುಚ್ಚಿ ಹೋಗಿತ್ತು. ಆದರೂ ಪುಣ್ಯಕ್ಕೆ ಎಲ್ಲೂ ದಾರಿ ತಪ್ಪದೆ ನಾವಿಬ್ಬರೂ ಮೇಲೆ ಸೇರಿದೆವು. ಈ ಅನುಬವಾದ ನೆನಪಿಗೆಂದು ಗವ್ತಮನ ಕ್ಯಾಮರಾದಲ್ಲಿ ಇಬ್ಬರೂ ಒಟ್ಟಿಗೆ ನಿಂತು ಪೋಟೋ ತೆಗೆಸಿಕೊಂಡೆವು. ಆಮೇಲೆ ತಿಳಿಯಿತು, ಗವ್ತಮ ಒಂದು ಕಡೆ ಕೆಟ್ಟದಾಗಿ ಜಾರಿಬಿದ್ದಿದ್ದನಂತೆ. ನೀರು ಪಾಲಾಗುವುದು ಕೊಂಚದರಲ್ಲೇ ತಪ್ಪಿಸಿಕೊಂಡನಂತೆ.

ಅಲ್ಲೇ ಹತ್ತಿರದಲ್ಲಿದ್ದ ಶ್ಯಾಮ, ಗವ್ತಮ ಬಿದ್ದಾಗ ಅವನ ತಲೆ ತಡೆದು ಬಂಡೆಗೆ ಹೊಡೆಯುವುದನ್ನು ತಪ್ಪಿಸಿದ್ದನಂತೆ. ಅದಲ್ಲದೇ ಅವರುಗಳು ಕಾಡಲ್ಲಿ ತಪ್ಪಿಸಿಕೊಂಡು ಸುಮಾರು ಒಂದು ಗಂಟೆ ಅಲೆದಾಡಿ ಆಮೇಲೆ ಮೇಲೆ ಬಂದರಂತೆ. “ಮಳೆ ಬರೋ ಮೊದಲೇ ಇವ್ರು ಒರಟಿದ್ ಒಳ್ಳೇದಾಯ್ತು. ಮಳೆ ಇಲ್ದೇನೇ ಏನೇನೋ ಅವಾಂತರ ಮಾಡ್ಕೊಂಡವ್ರೆ, ಇನ್ನು ನಮ್ ತರ ಮಳೇಲಿ ಸಿಕ್ಕೊಂಡಿದ್ರೆ ಏನ್ ಗತಿ” ಎಂದು ನಾನು ಮತ್ತು ಜಗ್ಗು ಮಾತಾಡಿಕೊಂಡೆವು.

ಅಲ್ಲಿದ್ದ ಅಂಗಡಿಯಲ್ಲಿ ಕೊಂಚ ತಿಂದು ಕಾರು ಹತ್ತಿ “ಮುಂಗಾರು ಮಳೆ” ಹಾಡು ಹಾಕಿಕೊಂಡು ಹೊನ್ನಾವರದ ಕಡೆಗೆ ಹೊರಟೆವು. ಹೊನ್ನಾವರಕ್ಕೆ ಹೋಗುವ ಉದ್ದೇಶ ಇರಲಿಲ್ಲ. ಆದರೆ ನಡುವೆ ಒಂದು ಕಡೆ ಕಣಿವೆಯಲ್ಲಿ ಶರಾವತಿ ಹರಿಯುವ ನೋಟ ಕಾಣಿಸುತ್ತದಂತೆ. ಅದು ಬಹಳ ಸೊಬಗಿನ ನೋಟವಂತೆ. ಕತ್ತಲಾಗುತ್ತಿದ್ದರಿಂದ ಅದು ಸರಿಯಾಗಿ ಕಾಣಿಸುತ್ತದೆಯೇ ಎಂಬ ಅನುಮಾನ ಇತ್ತು. ಆದರೆ “ಹೆಂಗಿದ್ರೂ ಒಂದು ಕಯ್ ನೋಡೇ ಬಿಡೋಣ” ಎಂದು ಹೊರಟೆವು.

– ಸಂದೀಪ್ ಕಂಬಿ.

(ಚಿತ್ರ: ಗವ್ತಮ್ ಶೇಟ್ಲೂರ್)

(ಮುಗಿಯಿತು.)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: