ಗಾಲ್ಪ್ ಚೆಂಡಿನ ಗುಳಿಗಳ ಗುಟ್ಟು
– ರಗುನಂದನ್.
ಗಾಲ್ಪ್ ಆಟವನ್ನು ನೋಡುವವರಿಗೆ ಅದರ ಆಟದ ಬಯಲು ಎಶ್ಟು ದೊಡ್ಡದಾಗಿರುತ್ತದೆ ಎಂದು ತಿಳಿದಿರುತ್ತದೆ. ಚೆಂಡಿನಲ್ಲಿ ಆಡುವ ಎಲ್ಲಾ ಆಟಗಳ ಪಯ್ಕಿ ಗಾಲ್ಪ್ ಆಟದ ಬಯಲೇ ಎಲ್ಲಕ್ಕಿಂತ ಹೆಚ್ಚಿನ ಹರವುಳ್ಳದ್ದಾಗಿರುತ್ತದೆ. ಬೇರೆ ಆಟಗಳಲ್ಲಿ ಬಳಸುವ ಚೆಂಡುಗಳಿಗೆ ಹೋಲಿಸಿದರೆ ಗಾಲ್ಪ್ ಚೆಂಡು ಅತಿ ಹೆಚ್ಚು ದೂರ ಸಾಗುತ್ತದೆಯಾದ್ದರಿಂದ ದೊಡ್ಡ ಆಟದ ಬಯಲಿನಲ್ಲಿ ಅದನ್ನು ಆಡಲಾಗುತ್ತದೆ.ಗಾಲ್ಪ್ ಚೆಂಡನ್ನು ನೋಡಿರುವವರು ಒಂದನ್ನು ಗಮನಿಸಿರುತ್ತಾರೆ. ಅದೇನೆಂದರೆ ಅದರ ಮಯ್ಯಿ ಮೇಲೆ ಇರುವ ಗುಳಿಗಳು (dimples). ಒಂದು ಗಾಲ್ಪ್ ಚೆಂಡಿನ ಮೇಲೆ ಸರಿಸುಮಾರು 300 ರಿಂದ 350 ಗುಳಿಗಳಿರುತ್ತದೆ. ಈ ಗುಳಿಗಳನ್ನು ಏಕೆ ಮಾಡಿರುತ್ತಾರೆ ? ಈ ಗುಳಿಗಳು ಗಾಲ್ಪ್ ಚೆಂಡು ದೂರ ಸಾಗುವುದರ ಮೇಲೆ ಏನಾದರು ಪರಿಣಾಮ ಬೀರುತ್ತದೆಯೇ ?
ಒಂದು ಚೆಂಡು ದೂರ ಸಾಗಬೇಕಾದರೆ ಮೇಲೆ ಗಾಳಿಯಲ್ಲಿ ಅದು ಹೆಚ್ಚು ಹೊತ್ತು ಇರಬೇಕಾಗುತ್ತದೆ. ಹೇಗೆ ಮುಂದೆ ಸಾಗುವ ಬಂಡಿಗಳನ್ನು ಎದುರು ಬರುವ ಗಾಳಿ ಎಳೆಯುತ್ತದೆಯೋ ಹಾಗೆ ಚೆಂಡಿಗೂ ಕೂಡ ಗಾಳಿ ಮುಂದೆ ಸಾಗದಂತೆ ಮತ್ತು ಬೇಗನೇ ಕೆಳಬೀಳುವಂತೆ ಎಳೆಯುತ್ತಿರುತ್ತದೆ. ಇದನ್ನು ಅರಿಮೆಯಲ್ಲಿ ಎಳೆತ (drag) ಎಂದು ಹೇಳುತ್ತಾರೆ. ಇದನ್ನು ಆದಶ್ಟು ಕಡಿಮೆ ಮಾಡಿದರೆ ಚೆಂಡು ಹೆಚ್ಚು ದೂರ ಸಾಗುತ್ತದೆ (ಅದಕ್ಕಾಗಿಯೇ ವಿಮಾನಗಳಿಗೆ ಚೂಪುಮೂತಿಯನ್ನು ಕೊಟ್ಟಿರುತ್ತಾರೆ). ಅಂದರೆ ಮೇಲೆ ಸಾಗುವಾಗ ಸುತ್ತಮುತ್ತಲಿನ ಗಾಳಿ ಪದರ ಅದನ್ನು ಮೇಲೆಯೇ ಇರಿಸುವಂತೆ ನೋಡಿಕೊಳ್ಳಬೇಕಾಗುತ್ತದೆ. ಇದನ್ನು ಗಾಲ್ಪ್ ಚೆಂಡಿನಲ್ಲಿ ಎರಡು ರೀತಿಯಲ್ಲಿ ಮಾಡಲು ಆಗುತ್ತದೆ.
(1) ಚೆಂಡನ್ನು ಹೊಡೆದಾಗ ಅದು ಒಂದು ಸರಿಯಾದ ದಿಕ್ಕಿನಲ್ಲಿ ತಿರುಗುವಂತೆ ಮಾಡಬೇಕು. ಹೀಗಾದಾಗ ಚೆಂಡಿನ ತಿರುಗುವಿಕೆಯ ರಬಸದಿಂದ ಅದರ ಸುತ್ತ ಇರುವ ಗಾಳಿ ಪದರವೂ ತಿರುಗುತ್ತದೆ. ಚೆಂಡಿನ ಕೆಳಬಾಗದಲ್ಲಿ ಕಡಿಮೆ ಉರುಬಿನಲ್ಲಿ (velocity) ಗಾಳಿ ಓಡುತ್ತಿದ್ದರೆ ಮೇಲ್ಬಾಗದಲ್ಲಿ ಹೆಚ್ಚಿನ ಉರುಬಿನಲ್ಲಿ ಗಾಳಿ ಓಡುತ್ತಿರುತ್ತದೆ. ಬರ್‍ನವ್ಲಿಯ ಕಟ್ಟಲೆ (Bernoulli’s Principle) ಪ್ರಕಾರ ಉರುಬು (velocity) ಮತ್ತು ಒತ್ತಡ(pressure) ಎದುರೆದುರಾಗಿ ಕೆಲಸ ಮಾಡುತ್ತದೆ. ಹಾಗಾಗಿ ಚೆಂಡಿನ ಕೆಳಬಾಗದಲ್ಲಿ ಹೆಚ್ಚಿನ ಒತ್ತಡವಿದ್ದು ಮೇಲ್ಬಾಗದಲ್ಲಿ ಕಡಿಮೆ ಒತ್ತಡವಿರುತ್ತದೆ. ಮೇಲೆ ತಳ್ಳುವ ಒತ್ತಡದಿಂದ ಹೆಚ್ಚು ಹೊತ್ತು ಚೆಂಡು ಮೇಲೆಯೇ ಇರುವಂತೆ ಅದರ ಸುತ್ತ ತಿರುಗುವ ಗಾಳಿ ನೆರವಾಗುತ್ತದೆ. ಇದನ್ನು ಕೆಲವರು ಮಾಗ್ನಸ್ ಎಪೆಕ್ಟ್ (magnus effect) ಎಂದು ಕೂಡ ಹೇಳುತ್ತಾರೆ.
ಆದರೆ ಹೆಚ್ಚು ದೂರ ಸಾಗಲು ಇದೊಂದೆ ಸಾಲದು. ಅದಕ್ಕೆ ಗಾಲ್ಪ್ ಚೆಂಡಿನ ಮೇಲೆ ಗುಳಿಗಳನ್ನು ಕೆತ್ತಿರುತ್ತಾರೆ.
(2) ಅರಿಮೆಯಲ್ಲಿ ಹರಿವಗಳನ್ನು (fluid) ಅದರ ಉರುಬಿನ (velocity) ಆದಾರದ ಮೇಲೆ ಎರಡು ಬಗೆಯಾಗಿ ವಿಂಗಡಿಸುತ್ತಾರೆ. ಒಂದು ಪೊರೆ/ಹೊರಿಗೆಯ ಹರಿವು (laminar flow) ಮತ್ತು ಇನ್ನೊಂದು ಗದ್ದಲದ ಹರಿವು (turbulent flow). ಈ ಎರಡು ಬಗೆಯ ಹರಿವುಗಳಲ್ಲಿ ಯಾವುದು ಎಳೆತವನ್ನು ಕಡಿಮೆ ಮಾಡುತ್ತದೋ ಅದನ್ನು ಚೆಂಡಿನ ಸುತ್ತ ಇರಿಸುವಂತೆ ನೋಡಿಕೊಂಡರೆ ಚೆಂಡನ್ನು ಹೆಚ್ಚು ದೂರ ಸಾಗುವಂತೆ ಮಾಡಬಹುದು. ಅಂದರೆ ಚೆಂಡನ್ನು ಸುತ್ತುವರೆದಿರುವ ಗಾಳಿಯ ಪದರವನ್ನು ಚೂಪಾಗಿ (streamlined) ಇರುವಂತೆ ಮಾಡಿದರೆ ಎಳೆತವನ್ನು ಕಡಿಮೆ ಮಾಡಿ ಅದು ದೂರ ಸಾಗಲಾಗುವಂತೆ ನೋಡಿಕೊಳ್ಳಬಹುದು. ಈ ಸುತ್ತಲು ಇರುವ ತೆಳುವಾದ ಗಾಳಿಯ ಪದರವನ್ನು ಗಡಿ ಪದರ ಎಂದು, ಅರಿಮೆಯ ಪರಿನುಡಿಯಲ್ಲಿ ಪಾರಲಾನ್ಸ್ (parlance) ಹೇಳುತ್ತಾರೆ.
ಆದರೆ ಎರಡು ಬಗೆಯ ಹರಿವಗಳಲ್ಲಿ ಅಂದರೆ ಹೊರಿಗೆಯ ಹರಿವು ಮತ್ತು ಗದ್ದಲದ ಹರಿವುಗಳಲ್ಲಿ ಯಾವುದು ಎಳೆತವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಕೊಳ್ಳಬೇಕು. ಅರಕೆಯ ಪ್ರಕಾರ ಗದ್ದಲದ ಹರಿವು (turbulent flow) ಮೊದಮೊದಲು ಎಳೆತವನ್ನು ಹೆಚ್ಚು ಮಾಡಿದರೂ ಆಮೇಲೆ ಎಳೆತವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿಯಲಾಗಿದೆ. ಆದರೆ ಚೆಂಡಿನ ಸುತ್ತ ಗದ್ದಲದ ಹರಿವನ್ನು ಉಂಟುಮಾಡುವುದಾದರೂ ಹೇಗೆ ?
ಈ ಕೆಲಸವನ್ನು ಮಾಡಲಿಕ್ಕಾಗಿಯೇ ಚೆಂಡಿನ ಮೇಲೆ ಗುಳಿಗಳನ್ನು ಕೆತ್ತಿರುತ್ತಾರೆ. ನುಣುಪಾದ ಚೆಂಡಿನ ಮೇಲಾದರೆ ಗಾಳಿಯು ಹಾಗೆ ನವಿರಾಗಿ ಹಾದುಹೋಗುತ್ತದೆ. ಆದರೆ ಗುಳಿಗಳ ಮೇಲೆ ಗಾಳಿ ಹಾದುಹೋದರೆ ಅದು ನವಿರಾಗಿ ಹಾದುಹೋಗಲು ಆಗುವುದಿಲ್ಲ. ಯಾಕೆಂದರೆ ಆ ಗುಳಿಗಳು ಚೆಂಡಿನ ಮೇಲಿರುವ ಗಾಳಿಯನ್ನು ತನ್ನೆಡೆಗೆ ಸೆಳೆಯಲು ಪ್ರಯತ್ನಿಸಿ ಗಾಳಿಯಲ್ಲಿ ಗದ್ದಲವನ್ನೆಬ್ಬಿಸುತ್ತದೆ. ಇದರಿಂದ ಅಲ್ಲಿರುವ ಗಾಳಿಯ ಹರಿವು ಗದ್ದಲದ ಹರಿವಾಗಿರುತ್ತದೆ (turbulent flow). ಮುಂಚೆ ಹೇಳಿದಂತೆ ಈ ಗದ್ದಲದ ಹರಿವು ಎಳೆತವನ್ನು ಕಡಿಮೆ ಮಾಡುವಂತೆ ನೋಡಿಕೊಳ್ಳುತ್ತದೆ. ಎಳೆತ ಕಡಿಮೆಯಾಗುವುದರ ಪರಿಣಾಮ ಚೆಂಡನ್ನು ಗಾಳಿಯಲ್ಲಿ ಹೆಚ್ಚು ಹೊತ್ತು ಸಾಗಲು ಅನುವು ಮಾಡಿಕೊಟ್ಟಂತಾಗುತ್ತದೆ.
ತಿಳಿವಿನ ಸೆಲೆ: http://www.livescience.com/
ಒಳ್ಳೆಯ ಬರಹ ರಗು…