ಬಾನಂಗಳಕ್ಕೆ ಹೆಣ್ಣು ಹಾರಿ 50 ವರುಶ

– ಪ್ರಶಾಂತ ಸೊರಟೂರ.

ಜೂನ್-16,1963 ಮೊದಲ ಬಾರಿಗೆ ಹೆಣ್ಣು ನಡೆಸುತ್ತಿದ್ದ ಬಾನಬಂಡಿಯೊಂದು (spacecraft) ಬಾನದೆರವು (space) ಮುಟ್ಟಿತು. ಈ ಸವಿನೆನಪಿನ ಮಯ್ಲುಗಲ್ಲು ಮುಟ್ಟಿ ನಿನ್ನೆಗೆ 50 ವರುಶಗಳಾದವು. ಬಾನದೆರವಿನಲ್ಲಿ ಹಾರಾಡಿದ ಮೊದಲ ಹೆಣ್ಣು ಎಂಬ ಈ ಹೆಗ್ಗಳಿಕೆ ಪಡೆದವರು ರಶ್ಯಾ ದೇಶದ ವಾಲೆಂಟೀನಾ ತೆರೆಸ್ಕೋವಾ (Valentina Tereshkova).

images

ರಶ್ಯಾದ ಹಳ್ಳಿಯೊಂದರಲ್ಲಿ ಮಾರ‍್ಚ್-6, 1931 ರಲ್ಲಿ ಹುಟ್ಟಿದ ವಾಲೆಂಟಿನಾ ಚಿಕ್ಕಂದಿನಿಂದಲೇ ಬಾನಲ್ಲಿ ಹಾರಾಡುವ ಕನಸು ಕಂಡಿದ್ದರು.ತಮ್ಮ 22 ನೇ ಹರೆಯದಲ್ಲಿಯೇ ಗಾಳಿಕೊಡೆ (parachute) ಬಳಸಿ ಬಾನಿನಿಂದ ಜಿಗಿಯುವ ಕಲೆಯಲ್ಲಿ ನುರಿತರಾಗಿದ್ದರು. ಅಪ್ಪ ರಶ್ಯಾದ ಕಾಳಗಪಡೆಯಲ್ಲಿ ಟ್ಯಾಂಕ್ ಓಡಿಸುವ ಕೆಲಸದಲ್ಲಿದ್ದರೆ, ಅಮ್ಮ ಬಟ್ಟೆ ಕಯ್ಗಾರಿಕೆಯಲ್ಲಿ ದುಡಿಯುತ್ತಿದ್ದರು. ದುಡ್ಡಿನಿಂದ ಅಶ್ಟೇನೂ ಒಳ್ಳೆಯ ಸ್ತಿತಿಯಲ್ಲಿರದ ಮನೆಯನ್ನು ನಡೆಸಲು ವಾಲೆಂಟಿನಾ ತಾಯಿಯ ಜತೆ ಕೆಲಸಕ್ಕೆ ಸೇರಿದರು. ಆದರೆ ಬಾನಿನೆಡೆಗೆ ಅವರಿಗಿದ್ದ ಸೆಳೆತ, ಈ ನಿಟ್ಟಿನಲ್ಲಿ ಹೆಚ್ಚಿನದನ್ನು ಪಡೆಯಬೇಕೆಂಬ ತುಡಿತ ಅವರನ್ನು ಯಾವಾಗಲೂ ಕಾಡುತ್ತಿತ್ತು.

ರಶ್ಯಾದವರೇ ಆದ ಯುರಿ ಗಗರೀನ್ (Yuri Gagarin) 1961 ರಲ್ಲಿ ಮೊದಲ ಬಾರಿಗೆ ಬಾನದೆರವು ಮುಟ್ಟಿದ ಮೇಲೆ ಗಂಡಿನಂತೆ ಹೆಣ್ಣು ಕೂಡಾ ಬಾನಬಂಡಿಯನ್ನು ನಡೆಸುವಂತಾಗಬೇಕು ಅನ್ನುವ ತೀರ‍್ಮಾನವನ್ನು ರಶ್ಯಾದ ಮುಂದಾಳುಗಳು ತೆಗೆದುಕೊಂಡರು. ಇದಕ್ಕೆ ಕರೆಕೊಟ್ಟಾಗ ಒಟ್ಟು 400 ಅರಿಕೆಯೋಲೆಗಳು (applications) ಬಂದು, ಕೊನೆಯ ಹಂತಕ್ಕೆ 5 ಮಂದಿಯನ್ನು ಆಯ್ಕೆಮಾಡಲಾಯಿತು.

ಹಾರಾಟಕ್ಕೆ ಅಣಿಗೊಳಿಸುವ ಅಂಗವಾಗಿ ಪಯ್ಪೋಟಿಗಾರ‍್ತಿಯರನ್ನು ಹಲವಾರು ಕಶ್ಟದ ಒರೆತಗಳಿಗೆ (tests) ಒಳಪಡಿಸಲಾಯಿತು. ಅದರಲ್ಲಿ 120 ಬಾರಿ ಗಾಳಿಕೊಡೆ ಜಿಗಿತ (parachute jumping), ಕಾಳಗ ವಿಮಾನ ಮಿಗ್ (MiG) ಹಾರಾಟ, ಹೆಚ್ಚಿನ ಒತ್ತಡಕ್ಕೆ ಮಯೊಡ್ಡಿಸುವ ಒರೆತಗಳು ಸೇರಿದ್ದವು. ಈ ಪಯ್ಪೋಟಿಗಳಲೆಲ್ಲಾ ಮುಂಚೂಣಿಯಲ್ಲಿದ್ದವರು ಹಳ್ಳಿಯೊಂದರಿಂದ ಬಂದಿದ್ದ ವಾಲೆಂಟೀನಾ ತೆರೆಸ್ಕೋವಾ.

ಜೂನ್-16, 1963 ರ ಬೆಳಿಗ್ಗೆ ವಾಲೆಂಟಿನಾ ಅವರನ್ನು ಹೊತ್ತ ಬಾನಬಂಡಿ ವಾಸ್ಟೋಕ್ 6 (Vostok 6) ಯಾವುದೇ ಅಡೆತಡೆಯಿಲ್ಲದೆ ಬಾನಂಗಳಕ್ಕೆ ಚಿಮ್ಮಿತು. ಬಾನಬಂಡಿಯಲ್ಲಿ ಒಟ್ಟು ಮೂರು ದಿನಗಳನ್ನು ಕಳೆದ ವಾಲೆಂಟಿನಾ ನೆಲದ ಸುತ್ತ ಬಿಟ್ಟುಬಿಡದೇ 48 ಸುತ್ತ ಸುತ್ತಿದರು. ಎಲ್ಲಕ್ಕಿಂತ ಹೆಚ್ಚಿನ ಹೊತ್ತು ಬಾನಲ್ಲಿದ್ದ ಅವರು, ಅಲ್ಲಿಯವರೆಗಿನ ಎಲ್ಲ ಬಾನೋಡಿಗರು (astronaut) ಬಾನಲ್ಲಿ ಕಳೆದ ಹೊತ್ತನ್ನು ಮೀರಿಸಿದ್ದರು. ಬಾನಬಂಡಿಯಿಂದ ವಾಲೆಂಟೀನಾ ತೆಗೆದ ಹಲವಾರು ಚಿತ್ರಗಳು ಮುಂದೆ ಗಾಳಿಪದರ ಕುರಿತಾದ ಅರಕೆಗೆ ನೆರವಾದವು ಜತೆಗೆ ಹೆಣ್ಣಿನ ಮಯ್ ಮೇಲೆ ಬಾನಲ್ಲಿ ಆಗುವ ಪರಿಣಾಮಗಳತ್ತಲೂ ಅವರ ಈ ಹಾರಾಟ ಬೆಳಕುಚೆಲ್ಲಿತು.

ರಶ್ಯಾದ ಹಳ್ಳಿಯೊಂದರಲ್ಲಿ ಬೆಳೆದು ಬಂದ ವಾಲೆಂಟೀನಾ ತೆರೆಸ್ಕೋವಾ, ಬಾನಂಚಿನಲ್ಲಿ ಹಾರಾಡಿ ಗಂಡಿಗೆ ಹೆಣ್ಣು ಎಲ್ಲದರಲ್ಲೂ ಸರಿಸಾಟಿ ಎಂಬುದನ್ನು ತೋರಿದ ಹೊತ್ತಿಗೆ ಇದೀಗ 50 ವರುಶಗಳು ತುಂಬಿವೆ.

ಚಿತ್ರ : http://historyofrussia.org

ಮಾಹಿತಿ ಸೆಲೆ : http://www.wikipedia.org

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: