ಮಾತಿಲ್ಲ…! ಕತೆಯಿಲ್ಲ…!

– ಸಿ.ಪಿ.ನಾಗರಾಜ

si_pi_na

ಕಳೆದ ಹಲವಾರು ವರುಶಗಳಲ್ಲಿ ನಡೆದ ಮೂರು ಪ್ರಸಂಗಗಳನ್ನು ಇಲ್ಲಿ ಹೇಳುತ್ತಿದ್ದೇನೆ.

ಪ್ರಸಂಗ-1

ಒಂದು ದಿನ ಬೆಳ್ಳಂಬೆಳಗ್ಗೆ ಕಾಳಮುದ್ದನ ದೊಡ್ಡಿಯಿಂದ ಮಂಡ್ಯಕ್ಕೆ ಹೋಗಲೆಂದು ಬಸ್ಸುಗಳು ನಿಲ್ಲುವ ಜಾಗದ ರಸ್ತೆ ಬದಿಗೆ ಬಂದು ನಿಂತೆನು. ದೊಡ್ಡದಾಗಿದ್ದ ಆ ಜಾಗದಲ್ಲಿ ನಾಲ್ಕಾರು ಗೂಡೆಗಳನ್ನು ಇಟ್ಟುಕೊಂಡು ಒಬ್ಬ ಬೆಳೆಗಾರ ಕುಳಿತಿದ್ದ. ಅವನ ಬಳಿಗೆ ಬಂದ ವ್ಯಾಪಾರಿಯೊಬ್ಬ ಅವನನ್ನು ಕುರಿತು – “ಯಾವೂರಯ್ಯ?” ಎಂದ.

“ಕಳ್ಳಿಮೆಳೆದೊಡ್ಡಿ ಕಣ್ ಬಾಪ್ಪ”

“ಟೆಂಬಟೆ ಇಲ್ಲೇ ಮಾರ‍್ತೀಯೋ…. ಇಲ್ಲ ಮಂಡ್ಯದ ಮಾರ‍್ಕೆಟ್ಟಿಗೋ?”

“ಸರಿಯಾದ ರೇಟ್ ಬಂದ್ರೆ ಇಲ್ಲೇ ಕೊಡ್ತೀನಿ, ಇಲ್ದೇದ್ರೆ ಮಂಡ್ಯಕ್ಕೆ ಹೊಯ್ತಿನಿ”

“ಹಂಗಾದ್ರೆ ಅದೇನ್ ಒಂದ್ ರೇಟ್ ಹೇಳು ಮತ್ತೆ”

ಬೆಳೆಗಾರನು ತಾನು ಬೆಳೆದ ಟೊಮೊಟೊ ಹಣ್ಣನ್ನು ಮಾರಲೆಂದು ಹಳ್ಳಿಯಿಂದ ಬಂದಿದ್ದ. ಈಗ ತನ್ನ ಗೂಡೆಗಳ ಕಡೆಗೆ ಮತ್ತೊಮ್ಮೆ ನೋಡಿ – “ಹಣ್ಣು ತುಂಬಾ ಚೆಂದಾಗವೆ. ಒಂದ್ಸತಿ ನೀನು ನೋಡು. ಆಮ್ಯಾಲೆ ರೇಟ್ ಹೇಳ್ತೀನಿ”

“ನೋಡೋದೇನ….ಮ್ಯಾಲೆಯೇ ಕಾಣ್ತಾವಲ್ಲ”

“ನಿಂಗೆ ಎಶ್ಟು ಗೂಡೆ ಬೇಕು?”

“ಎಲ್ಲಾನು ಸೇರ‍್ಸೆ ರೇಟ್ ಹೇಳಯ್ಯ”

ಈಗ ಬೆಳೆಗಾರನು ಒಂದೆರಡು ಗಳಿಗೆ ಮನಸ್ಸಿನಲ್ಲಿಯೇ ಅಳೆದು ತೂಗಿ ಒಂದು ಮೊತ್ತವನ್ನು ಹೇಳಿದ. ಇದನ್ನು ಕೇಳಕೇಳುತ್ತಿದ್ದಂತೆಯೇ ವ್ಯಾಪಾರಿಯು -“ಓಹೊಹೋ…..ಏನು ತೆಂಗಿನ ಮರದ ಮ್ಯಾಲೆ ಕುಂತಿದ್ದೀಯೆ?”

“ನಾನೆಲ್ಲಾದ್ರೂ ಕುಂತಿರ‍್ಲಿ…..ನೀನೊಂದು ರೇಟ್ ಕೇಳೋ ಮಾರಾಯ”

“ಏ…ನಿನ್ನ ಜೊತೇಲಿ ಯಾಪಾರ ಮಾಡೋಕಾಗೋದಿಲ್ಲ ಬುಡಪ್ಪ. ರೇಟ್ ಹೇಳಿ ಏನು ಪ್ರಯೋಜನ?”

“ಇಲ್ಲ ಕಣ್ ಕೇಳಯ್ಯ. ಕೇಳೂಕೇನು ಕಶ್ಟ. ನಾನೇನು ನೀ ಕೇಳ್ದಶ್ಟಕ್ಕೆ ಕೊಟ್ಬುಟ್ಟನೆ?”

ಈಗ ವ್ಯಾಪಾರಿಯು ಹಣ್ಣಿನ ಗೂಡೆಗಳ ಹತ್ತಿರ ಬಂದು, ಒಂದೆರಡು ಹಣ್ಣನ್ನು ಮತ್ತೊಮ್ಮೆ ನೋಡಿ, ಒಂದು ಮೊತ್ತವನ್ನು ಹೇಳಿದ. ಕೂಡಲೇ ಬೆಳೆಗಾರ – “ನೀನು ಅಯ್ನಾತಿ ಕುಳವೇ ಬುಡು”

“ಯಾಕಯ್ಯ?”

“ಇನ್ನೇನ್ ಮಂತೆ, ನೀನು ತೆಂಗಿನ ಬುಡುತ್ತಾವು ಕುಳಿತಿದ್ದೀಯಲ್ಲ!”

ಈಗ ಅವರಿಬ್ಬರ ಚವ್ಕಾಸಿ ವ್ಯಾಪಾರಕ್ಕೆ ತೆಂಗಿನ ಮರದ ಬುಡ ಮತ್ತು ತುದಿಗಳು ಎರಡು ನೆಲೆಗಳಾಗಿದ್ದವು. ಮಾತು ಹಾಗೆ ಮುಂದುವರಿದಂತೆಲ್ಲಾ ನಡುನಡುವೆ ಅವರಿಬ್ಬರೂ ಒಂದೊಂದು ಮೊತ್ತವನ್ನು ಹೇಳುತ್ತಿದ್ದರು. ಮೊತ್ತವನ್ನು ಸೂಚಿಸುತ್ತಿದ್ದಂತೆಯೇ – “ನೀನೊಸಿ ಮ್ಯಾಕ್ ಬಾ”

“ನೀನೊಸಿ ಇಳಿದು ಬಾ ಕೆಳಕ್ಕೆ”

“ಇನ್ನೆಶ್ಟು ಅಂತ ಇಳಿದೀಯೆ? ಇನ್ನೂ ಕಮ್ಮಿಯಾಗಿ ಕೊಟ್ರೆ ಏನ್ ಸಿಕ್ಕದು ನಂಗೆ? ಬೆಳ್ದೋರ ನೋವು ನಿಂಗೆ ಹೆಂಗಪ್ಪ ಗೊತ್ತಾದದು? ಈ ಬೇಸ್ಗೇಲಿ ಟೆಂಬಟೆ ಬೆಳೀಬೇಕಾದ್ರೆ ಎಶ್ಟು ಕಶ್ಟ ಗೊತ್ತೆ? ಹಾಳಾದ್ ಕರೆಂಟ್ ಬ್ಯಾರೆ ಸರಿಯಾದ ಟೇಮಲ್ಲಿ ಕಯ್ಕೊಡ್ತದೆ….. ಬರಬಾರದ್ದು ರೋಗ ಹಣ್ಣಿಗೆ ಬತ್ತದೆ. ಅಂತಾದ್ದರಲ್ಲಿ ಇಶ್ಟು ಕಮ್ಮಿಯಾಗಿ ಕೇಳ್ತಾಯಿದ್ದೀಯಲ್ಲ ನ್ಯಾಯವೇನಯ್ಯ?”

“ನಾನೇನ್ ನಿನ್ನ ಹಣ್ ತಕೊಂಡ್ಬುಟ್ಟು ಕುಬೇರ ಆಗ್ಬುಟ್ಟನೆ! ನಾನು ತಳ್ಳುಗಾಡಿ ಮೇಲೆ ತರಕಾರಿ ಇಟ್ಕೊಂಡು ಬಿಸ್ಲು ಮಳೆ ಅನ್ನದೇ ಸಂಜೆ ತನಕ ಊರೆಲ್ಲಾ ತಿರುಗುದ್ರೆ ತಾನೆ ನಂಗೂ ಜೀವನ ಮಾಡೋಕೆ ಮೂರ‍್ಕಾಸು ಸಿಗೂದು”

“ಓ, ಏನೋ…..ಒಬ್ಬೊಬ್ಬರದು ಒಂದೊಂದು ಹೊಡ್ಬಾಳು ಬುಡಪ್ಪ” ಎಂದು ನಿಟ್ಟುಸಿರು ಬಿಡುತ್ತ ಬೆಳೆಗಾರನು ಈಗ ಒಂದು ಮೊತ್ತವನ್ನು ಹೇಳಿದ. ಮತ್ತೆ ಒಂದೆರಡು ಬಾರಿ ಚವ್ಕಾಸಿ ನಡೆದು, ವ್ಯಾಪಾರಿಯು ಬೆಳೆಗಾರನಿಂದ ಹಣ್ಣನ್ನು ಕೊಂಡುಕೊಂಡನು. ಹಣ್ಣಿನ ವ್ಯಾಪಾರ ಮುಗಿದು ಅವರಿಬ್ಬರು ಅಲ್ಲಿಂದ ಹೋದರೂ, ನಾನು ಮಾತ್ರ ಅಲ್ಲೇ ಬರಲಿರುವ ಬಸ್ಸಿಗಾಗಿ ಕಾಯುತ್ತ ನಿಂತಿದ್ದೆ.

ಪ್ರಸಂಗ-2

ಒಂದು ದಿನ ಸಂಜೆ ವೇಳೆ ನನ್ನ ಹೆಂಡತಿ ಮತ್ತು ಮಗನೊಡನೆ ಕಾಳಮುದ್ದನ ದೊಡ್ಡಿಯ ಪೇಟೆ ಬೀದಿಗೆ ಹೋದೆನು. ಬೀದಿ ಬದಿಯಲ್ಲಿ ಅನೇಕ ಹೆಂಗಸರು ಹಣ್ಣು-ತರಕಾರಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು. ಅಲ್ಲಿ ಒಂದು ಎಡೆಯಲ್ಲಿ ನಿಂತುಕೊಂಡು ನನ್ನ ಹೆಂಡತಿ ಒಂದು ಪರಂಗಿ ಹಣ್ಣನ್ನು ತೋರಿಸುತ್ತಾ, ಅದರ ರೇಟನ್ನು ಕೇಳಿದಳು.

“ಎರಡು ರೂಪಾಯಿ ಆಯ್ತದೆ ಕನವ್ವ”

“ಏನಮ್ಮ, ಅಶ್ಟು ಸಣ್ಣದ್ದಕ್ಕೆ ಎರಡು ರೂಪಾಯ!”

“ನಿಮಗೆ ನಾನು ಹೇಳಿರೂದು ಕಮ್ಮಿ. ಇಂತದ ಬೇರೆ ಕಡೆ ನಾಲ್ಕು ರೂಪಾಯಿಲ್ದೆ ಕೊಡೂದಿಲ್ಲ”

ನನ್ನ ಹೆಂಡತಿ ಮತ್ತು ತರಕಾರಿ ಅಮ್ಮನ ನಡುವೆ ಚವ್ಕಾಸಿ ವ್ಯಾಪಾರ ಮುಂದುವರಿಯುತ್ತಿದ್ದಾಗ, ಅಯ್ದು ವರುಶದ ನನ್ನ ಮಗ, ಅಲ್ಲಿ ಜೋಡಿಸಿಟ್ಟಿದ್ದ ಒಂದೆರಡು ಹಣ್ಣುಗಳನ್ನು ಕಯ್ಯಿಂದ ಮುಟ್ಟಿ ಅಲ್ಲಾಡಿಸುತ್ತ ನೋಡತೊಡಗಿದ. ಇದನ್ನು ಕಂಡ ತರಕಾರಿ ಅಮ್ಮನು – “ಹಂಗೆಲ್ಲಾ ಹಿಸುಕಬೇಡ. ಹಣ್ ಹಾಳಾಗೊಯ್ತವೆ” ಎಂದು ಗದರಿಸಿದಳು.

ನನ್ನ ಹೆಂಡತಿ ಮಗನನ್ನು ಹಿಂದಕ್ಕೆ ಎಳೆದುಕೊಳ್ಳುತ್ತಾ -“ಏ…ಹಂಗೆಲ್ಲಾ ಮುಟ್ಟಬಾರದು. ಇತ್ತಗೆ ಹಿಂದಕ್ಕೆ ಬಾರೊ ಚಿನ್ನ” ಎಂದಳು.

ಕೂಡಲೇ ತರಕಾರಿ ಅಮ್ಮನು -“ಗಂಡಹೆಡ್ತಿ ಇಬ್ಬರೂ ಕಯ್ತುಂಬ ಸಂಬಳ ಎಣಿಸ್ಕೊತೀರಿ. ಮಕ್ಕಳಿಗೆ ಚಿನ್ನ ಅಂತ್ಲು ಹೆಸರಿಡ್ತೀರಿ. ಬೆಳ್ಳಿ ಅಂತನೂ ಕರಿತೀರಿ!” ಎಂದು ಉದ್ಗಾರವೆಳೆದಳು. ಆಗ ನಾನು ನಗುತ್ತಾ -“ಇಬ್ಬರೂ ಕೆಲಸದಲ್ಲಿ ಇಲ್ಲ ಕಣಮ್ಮ, ನಂಗೊಬ್ಬನಿಗೇ ಸಂಬಳ ಬರೋದು… ನಮ್ಮ ಮಗನ ಹೆಸರು ಚಿನ್ಮಯ ಅಂತ ಕಣಮ್ಮ; ಚಿಕ್ಕದಾಗಿ ಚಿನ್ನ ಅಂತ ಕರಿತೀವಿ. ನಮ್ಮ ಹತ್ತಿರ ನೀವೇಳೂವಂಗೆ ಯಾವ ಸಂಪತ್ತು ಇಲ್ಲ ಕಣಮ್ಮ”

ಈಗ ನನ್ನ ಹೆಂಡತಿ ಮತ್ತೆ ಕೇಳಿದಳು – “ಎಶ್ಟಕ್ಕೆ ಕೊಡ್ತೀಯೆ ಹೇಳಮ್ಮ”

“ಎಂಟಾಣೆ ಕಮ್ಮಿ ಕೊಡವ್ವ. ಅದಕ್ಕಿಂತ ಕಮ್ಮಿ ಕೇಳ್ಬೇಡ. ನಾವೂ ಬೆಳಗ್ಗೆಯಿಂದ ರಾತ್ರಿ ತನಕ ತಲೆಮ್ಯಾಲೆ ಒಂದು ನೆಳ್ಳು ಇಲ್ದೇ ಯಾಪಾರ ಮಾಡ್ತೀವಿ ಕನವ್ವ. ನಮ್ಮ ಕಶ್ಟ ಕೇಳೋರು ಯಾರಿದ್ದರು?” ಎಂದು ತನ್ನ ಪಾಡನ್ನು ಹೇಳಿಕೊಂಡಳು. ಈಗ ನನ್ನ ಹೆಂಡತಿ ಮತ್ತೆ ಚವ್ಕಾಸಿಗೆ ಮಾಡದೆ, ದುಡ್ಡನ್ನು ಕೊಟ್ಟಾಗ, ಹಣ್ಣನ್ನು ಕಯ್ಗಿಡುತ್ತಾ ತರಕಾರಿ ಅಮ್ಮ ಕೇಳಿದಳು – “ಮಕ್ಕಳು ಎಶ್ಟು ಜನ?”

“ಇಬ್ಬರು”

“ಇನ್ನೊಂದು ಗಂಡೋ ಹೆಣ್ಣೋ?”

ಅಶ್ಟರಲ್ಲಿ ಅವರಿಬ್ಬರ ಮಾತಿನ ನಡುವೆ ನಾನು ತಲೆಹಾಕಿ – “ಹೆಣ್ಣು ಕಣಮ್ಮ… ಗೋತಮಿ ಅಂತ ಹೆಸರಿಟ್ಟಿದ್ದೀವಿ. ನೀವೇಳೂವಂಗೆ ಚಿನ್ನ…ಬೆಳ್ಳಿ…ವಜ್ರ ಅಂತ ಇಟ್ಟಿಲ್ಲ” ಎಂದಾಗ, ಆಕೆಯು ನಮ್ಮೊಡನೆ ನಕ್ಕಳು.

ಪ್ರಸಂಗ-3

ಕಳೆದ ಆರು ವರುಶಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಇಲ್ಲಿಗೆ ಬಂದ ಮೇಲೆ ದೊಡ್ಡ ದೊಡ್ಡ ಮಾಲ್‌ಗಳಿಗೆ ಗಂಡಹೆಂಡತಿ ಜತೆಯಾಗಿ ಹೋಗುತ್ತೇವೆ. ಏನಾದರೂ ತರಲೆಂದು ಅಲ್ಲಿಗೆ ಹೋದಾಗ, ಕಣ್ಮನಗಳನ್ನು ಸೆಳೆಯುವಂತಹ ಅಲ್ಲಿನ ವಸ್ತುಗಳನ್ನು ನೋಡುತ್ತಾ, ಒಂದೆರಡು ಸುತ್ತು ಹೊಡೆದ ಮೇಲೆ, ಒಂದೆಡೆ ನಾನು ಕುಳಿತುಕೊಳ್ಳುತ್ತೇನೆ. ನನ್ನ ಹೆಂಡತಿ ಅಲ್ಲಿರುವ ವಸ್ತುಗಳ ಮೇಲೆ ಬರೆದಿರುವ ರೇಟುಗಳನ್ನು ಪರಿಶೀಲಿಸುತ್ತಾ, ಮನೆಗೆ ಬೇಕಾದ ಸಾಮಾನುಗಳನ್ನು ಎತ್ತಿಕೊಂಡು, ಕವರ್‍‌ಗಳಿಗೆ ಹಾಕಿಕೊಂಡು, ಬಿಲ್ ಹಾಕುವವರ ಬಳಿಗೆ ಬಂದು, ಹಣ ಕೊಟ್ಟು ಹೊರಬರುತ್ತಾಳೆ. ಎಲ್ಲಿಯೂ ಒಂದು ಮಾತಿಲ್ಲ… ನೋವು-ನಲಿವಿನ ಮಾತುಕತೆಯಿಲ್ಲ… ಯಾವುದೇ ಜಗಳ-ತಕರಾರುಗಳಿಲ್ಲ. ರೆಪ್ಪೆ ಮಿಟುಕಿಸದ, ಉಸಿರಾಡದ ರೊಬಾಟ್‌ಗಳಂತೆ ಕಯ್ಕಾಲು ಅಲ್ಲಾಡಿಸುತ್ತಾ, ವ್ಯಾಪಾರ ಮುಗಿಸಿಕೊಂಡು ಬರುವ ಯಂತ್ರಗಳಾಗಿದ್ದೇವೆ. ಮೊನ್ನೆ ಹಾಗೆ ಒಂದು ಮಾಲ್‌ಗೆ ಹೋಗಿ ಬಂದಾಗ, ಮನೆಯಲ್ಲಿ ನನ್ನ ಹೆಂಡತಿ ತಂದ ಹಣ್ಣು-ತರಕಾರಿಗಳ ಚೀಲದಲ್ಲಿದ್ದ ಒಂದು ಪರಂಗಿ ಹಣ್ಣನ್ನು ಕಯ್ಗೆತ್ತಿಕೊಂಡು ನೋಡಿದೆ. ಸುಲಿದ ತೆಂಗಿನ ಕಾಯಿಗಿಂತ ಸ್ವಲ್ಪ ದಪ್ಪವಾಗಿದ್ದ ಆ ಹಣ್ಣಿನ ಮೇಲೆ ಅಂಟಿಸಿದ್ದ ರೇಟನ್ನು ಕಂಡು ಗಾಬರಿಯಾಗಿ -“ಏನೇ, ಇದಕ್ಕೆ ಹದಿನೆಂಟು ರೂಪಾಯ?”

“ಹೂ…..ಹದಿನೆಂಟು ರೂಪಾಯಿ”

“ಯಾಕೆ ಹದಿನೆಂಟು?”

“ಅದರ ಮೇಲೆ ಬರೆದಿದೆ….ಅದಕ್ಕೆ”

* * *

(ಚಿತ್ರ: oddanchatrameconomictimes)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಸೊಗಸಾದ ಬರಹ. ಇದು ಗ್ಲೋಬಲೈಜ಼ೇಶನ್ನಿನ್ನ ಆಟ… ನಾವೆಲ್ಲ ಅದರ ಮಾಟ. ಎರಡು ವಿರುದ್ಧ ಸಂದರ್ಭಗಳ ನಡುವಿನ ಹೋಲಿಕೆ ಮನಮುಟ್ಟುವಂತಿದೆ.

  2. ಬರಹ ತುಂಬಾ ಇಷ್ಟವಾಯಿತು.

Manjunatha Kollegala ಗೆ ಅನಿಸಿಕೆ ನೀಡಿ Cancel reply