ಹಿಂದಿಯ ಪಾಲಾದ ಕನ್ನಡಿಗರ ಬ್ಯಾಂಕು

ಸಿದ್ದರಾಜು ಬೋರೇಗವ್ಡ

Hindi-day-Corporation-Bank

ಇತ್ತೀಚೆಗೆ ಕಾರ್‍ಪೋರೇಶನ್ ಬ್ಯಾಂಕಿಗೆ ಹಿಂದಿಯನ್ನು ಆಚರಣೆಗೆ ತರುವಲ್ಲಿ ಮುಂಚೂಣಿಯಲ್ಲಿದೆ ಎಂಬ ಸಲುವಿಗೆ ಬಾರತದ ನಡುವಣ ಆಳ್ವಿಕೆಯ ಗ್ರುಹ ಮಂತ್ರಾಲಯವು ‘ರಾಜಬಾಶೆ ವಿಶಿಶ್ಟ ಸಮ್ಮಾನ್’ ಪ್ರಶಸ್ತಿ ನೀಡಿ ಗವ್ರವಿಸಿದೆ. ಹಿಂದಿ ಆಚರಣೆಗಾಗಿ ಪ್ರಶಸ್ತಿ ಬಂದಿದ್ದು ಇದೇ ಮೊದಲೇನಲ್ಲ. ಈ  ಹಿಂದೆಯೂ ಮೂರು ಬಾರಿ ಪ್ರಶಸ್ತಿ ಪಡೆದಿದೆ. ಪ್ರಶಸ್ತಿಯನ್ನು ಪಡೆದು ಹುಮ್ಮಸ್ಸಿನಿಂದ ಹಿಂದಿಯನ್ನು ತನ್ನ ಕಚೇರಿಗಳಲ್ಲಿ ಆಚರಣೆಗೆ ತಂದು ಮತ್ತೆ ಮತ್ತೆ ಪ್ರಶಸ್ತಿ ಪಡೆಯುತ್ತಿದೆ. ಬ್ಯಾಂಕಿನ ಆದ್ಯಕ್ಶರಾದ ಅಜಯ ಕುಮಾರ್‍ ಅನ್ನುವವರು ‘ಜನಸಾಮಾನ್ಯರನ್ನು ಹಿಂದಿ ಜೊತೆ ಜೋಡಿಸಲು ಬ್ಯಾಂಕ್ ಹಲವು ಹಮ್ಮುಗೆಗಳನ್ನು ಜೋಡಿಸಿಕೊಂಡಿರುವುದರಿಂದ ನಮಗೆ ಪ್ರಶಸ್ತಿ ಬಂದಿದೆ ಎಂದು ಹೇಳಿಕೊಂಡಿದ್ದಾರೆ’. ತಿಳಿಯದ ಹಿಂದಿಯ ಪದಗಳನ್ನು ಕಲಿತುಕೊಳ್ಳಲು ಹಿಂದಿಯ ನಿಗಂಟನ್ನು ಮಿಂಬಲೆಯಲ್ಲಿ ಸಿಗುವಂತೆ ಇಟ್ಟಿದ್ದಾರೆ. ಬ್ಯಾಂಕಿನಲ್ಲಿ ಕೆಲಸ ಮಾಡುವವರಿಗೆ ಹಿಂದಿಯಲ್ಲಿ ತರಬೇತಿ ಏರ್‍ಪಡಿಸಿದ್ದಾರೆ. ಅಂದರೆ ಹಿಂದಿಯ ಆಚರಣೆಗಾಗಿ ಬ್ಯಾಂಕಿನವರು ಹಣ ವೆಚ್ಚ ಮಾಡಿದ್ದಾರೆ! ಅದಕ್ಕಾಗಿ ನಡುವಣ ಆಳ್ವಿಕೆಯವರು ಹಣ ವೆಚ್ಚಮಾಡಿ ಬೆನ್ನು ತಟ್ಟಿದ್ದಾರೆ!

ನಿಮಗಿದು  ಗೊತ್ತೇ? ಕಾರ್‍ಪೋರಶನ್ ಬ್ಯಾಂಕು ಹುಟ್ಟಿದ್ದು ಕರ್‍ನಾಟಕದಲ್ಲಿ!

1906ರಲ್ಲಿ ಮೊದಲಿಗೆ ಉಡುಪಿಯಲ್ಲಿ 5,000 ರುಪಾಯಿಗಳ ಬಂಡವಾಳದೊಂದಿಗೆ ಆರಂಬವಾಯಿತು. ಮುಂದದು ಬೆಳೆಯುತ್ತಾ ಹೋಗಿ 2011-12ನೇ ಸಾಲಿನ ನಿವ್ವಳ ಲಾಬ (net profit) ಒಂದೂವರೆ ಸಾವಿರ ಕೋಟಿ ರುಪಾಯಿಯನ್ನು ದಾಟಿದೆ. ಇಂದಿಗೂ ಅದರ ಮುಕ್ಯ-ಕಚೇರಿ ಮಂಗಳೂರಿನಲ್ಲಿದೆ. ಬ್ಯಾಂಕಿನ ಮಿಂಬಲೆಯಲ್ಲಿ ಕನ್ನಡ ತಕ್ಕ ಮಟ್ಟಿಗೆ ಸಿಗುತ್ತಿದೆ.  ಬಾರತದಾದ್ಯಂತ ಮಳಿಗೆಗಳನ್ನು ಹೊಂದಿರುವ ಬ್ಯಾಂಕಿನ ಸಾದನೆಯನ್ನು ಮೆಚ್ಚಬೇಕಾದ್ದೇ. ಕನ್ನಡಿಗರು ಹೆಮ್ಮೆ ಪಡಬೇಕಾದ್ದೆ. ಬ್ಯಾಂಕಿನ ಆರಂಬಕಾರರಾದ ‘ಕಾನ್ ಬಹಾದೂರ್‍ ಹಾಜಿ ಅಬ್ದುಲ್ಲಾ  ಹಾಜಿ ಕಾಸೀಂ ಸಾಹೇಬ್ ಬಹಾದೂರ್‍‘ ಎಂಬುವವರು ಬ್ಯಾಂಕನ್ನು ಎಂತವರಿಗೂ ಎಟುಕಿಸಬೇಕು ಎಂದೇ ದುಡಿದವರು. ಆದರೆ, ಎಂತವರೂ ಅಂದರೆ ಬಡವ-ಬಲ್ಲಿದರೆಲ್ಲರೂ ಎಂದಾಗಿದ್ದ ಗುರಿ ಇಂದು ಹಿಂದಿಯವರಿಗೆ ಮಾತ್ರ ಎಂದಾಗುತ್ತಿದೆ.

ಹಿಂದಿ-ಇಂಗ್ಲಿಶಿನ ಒಲುಮೆ ಬ್ಯಾಂಕಿಗೆ ಮಾತ್ರ ಸೀಮಿತವಾಗಿಲ್ಲ. ಕನ್ನಡದ ಬಂಡವಾಳಗಾರರಿಗೂ ಇದೇ ಒಲವು ಹೆಚ್ಚುತ್ತಿದೆ. ಬ್ಯಾಂಕು ಕೂಡ ಒಂದು ವ್ಯಾಪಾರವಾಗಿರುವುದರಿಂದ ಬಾರತದ ಬಂಡವಾಳಗಾರರ ಹಾದಿಯೇ ಬ್ಯಾಂಕಿಗೂ ರುಚಿಸುತ್ತಿರುವುದು ಅಚ್ಚರಿಯ ಮಾತಲ್ಲ. ಕನ್ನಡ ಸೇರಿ ಬಾರತದ ಹಿಂದಿಯೇತರ ಯಾವುದೇ ನುಡಿಗಳು ವ್ಯಾಪಾರಕ್ಕೆ ಅಡ್ಡವೆಂದೇ ದೊಡ್ಡ ಕುಳಗಳು ಎಣಿಸಿದ್ದಾರೆ. ಹಾಗಾಗೇ, ಕಾಪಿ-ಡೇನವರು ಯಾವುದೇ ಮುಲಾಜಿಲ್ಲದೆ ಕನ್ನಡದಲ್ಲಿ ವ್ಯವಹರಿಸುವುದು ಸಾದ್ಯವಿಲ್ಲ, ಕನ್ನಡ ಹಾಡು ಹಾಕುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾರೆ. ಹಿಂದಿ-ಇಂಗ್ಲೀಶು ಎರಡೇ ಬಾಶೆಗಳನ್ನು ನಿಬಾಯಿಸುವಂತಾದರೆ ಬಾರತದಾದ್ಯಂತ ಮಳಿಗೆ ತೆರೆಯುವುದು ಸುಲಬ ಮತ್ತು ವೆಚ್ಚ ಕಡಿಮೆ! ಇದು ಕನ್ನಡಿಗರನ್ನ ಮೀರಿ ಮುಂದುವರಿಯುವ ಏರ್‍ಪಾಟು. ಕಾರ್‍ಪೋರೇಶನ್ ಬ್ಯಾಂಕು ಕನ್ನಡಿಗರಿಗೆ ಕನ್ನಡದಲ್ಲಿ ಸೇವೆ ಕೊಡುವುದಕ್ಕೆ ಹೆಸರು ಮಾಡಿತ್ತು. ಇತ್ತೀಚೆಗದು ಹಿಂದಿಯೆಡೆಗೆ ವಾಲುತ್ತಿರುವುದು ಗತಿಕೇಡು.

ಕನ್ನಡ-ಕನ್ನಡಿಗರನ್ನ ಮೀರಿದರೇ ಲಾಬ ಎನ್ನುವ ಅನಿಸಿಕೆ ತಳವೂರುತ್ತಿರುವುದಕ್ಕೆ ಬಾರತದ ಸಂವಿದಾನವೇ ಕಾರಣ. ಬಾರತದ ಆಳ್ವಿಕೆಯು ಹಿಂದಿಯ ಹೇರಿಕೆಗಾಗಿ ಒಂದು ಆಯೋಗವನ್ನೇ ರಚಿಸಿದೆ. ರಾಜಬಾಶಾ ಆಯೋಗ ಹಿಂದಿಯನ್ನು ಬಾರತದಾದ್ಯಂತ ಹರಡಲು ಮಾಡುವ ವೆಚ್ಚವು ಹರಡಬಲ್ಲ ರೋಗಗಳನ್ನು (communicable disease) ತಡೆಯುವುದಕ್ಕೆ ತೊಡಗಿಸುವ ವೆಚ್ಚಕ್ಕಿಂತ ಹೆಚ್ಚಿದೆ. ಹಿಂದಿಯನ್ನು ಹರಡುವುದು ಬೇರೆಯಲ್ಲ, ಇನ್ನಿತರ ನುಡಿಗಳನ್ನು ಕಡೆಗಣಿಸುವುದು ಬೇರೆಯಲ್ಲ. ಕನ್ನಡ ಗ್ರಾಹಕರಿಗೆ ‘ಹಿಂದಿಯೊಂದಿದ್ದರೆ-ನಡೆಯುತ್ತದೆ’ ಎಂಬ ಅನಿಸು ಬಂಡವಾಳಗಾರರಲ್ಲಿ ಮತ್ತು ಬ್ಯಾಂಕಿನವರಲ್ಲಿ ಬೆಳೆಯುತ್ತಿರುವುದು ರಾಜಬಾಶಾ ಆಯೋಗವು ಗೆಲ್ಲುತ್ತಿರುವುದಕ್ಕೆ ಸಾಕ್ಶಿ.

ಕನ್ನಡಿಗ ಗ್ರಾಹಕನು ಸೇವೆಯನ್ನು ಕನ್ನಡದಲ್ಲೇ ಕೇಳದೇಹೋದಲ್ಲಿ, ಸಂವಿದಾನದಲ್ಲಿ ತಿದ್ದುಪಡಿ ತಂದು ಕನ್ನಡಕ್ಕೂ ಹಿಂದಿಯಶ್ಟೆ ಮನ್ನಣೆಯನ್ನು ಗಳಿಸಿಕೊಳ್ಳದಿದ್ದಲ್ಲಿ ಕನ್ನಡ-ಕನ್ನಡಿಗ-ಕರ್‍ನಾಟಕದ ಉಳಿವು ಆಗಲಾರದು. ಇನ್ನು ಏಳಿಗೆ ದೂರದ ಮಾತು. ಉಳಿದುಕೊಳ್ಳುವವರು ಹಿಂದಿಯವರು, ಹಿಂದಿಯವರಿಗಾದವರು ಮತ್ತು ಅವರುಗಳ ಲಾಬ ಮಾತ್ರ.

ಚಿತ್ರ: www.mangaloremithr.com

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 26/08/2013

    […] ಸಿವಾ? ಹೀಬ್ರುವಾದರೇನು ಸಿವಾ?, ಹಿಂದಿಯ ಪಾಲಾದ ಕನ್ನಡಿಗರ ಬ್ಯಾಂಕು, ಎಲ್ಲಾ ನುಡಿಗಳೂ ರಾಶ್ಟ್ರಬಾಶೆಗಳಾಗಬೇಕು, […]

ಅನಿಸಿಕೆ ಬರೆಯಿರಿ: