ಜೇನುಹುಳುಗಳು ಕುಣಿಯುವುದೇಕೆ?
ಜೇನುಹುಳುಗಳ ಒಗ್ಗಟ್ಟಿನ ಬಾಳ್ವೆ ಮತ್ತು ಅವುಗಳ ಎಡೆಬಿಡದ ದುಡಿಮೆ ಬಗ್ಗೆ ನೀವು ಓದಿರಬಹುದು. ಜೇನುಹುಳುಗಳ ಬದುಕಿನ ಸುತ್ತಮುತ್ತ ಅರಕೆ ನಡೆಸುವ ಜೇನರಿಮೆಯಲ್ಲಿ (apiology) ಜಗತ್ತಿನಲ್ಲೆಡೆ ಹೆಸರು ಗಳಿಸಿರುವ ಜೇನರಿಗರಲ್ಲಿ ತಾಮಸ್ ಸೀಲೆ (Thomas Seeley) ಕೂಡಾ ಒಬ್ಬರು. ತಾಮಸ್ ಸೀಲೆ ತಮ್ಮ ಪುಸ್ತಕ ಹನಿಬೀ ಡೆಮಾಕ್ರಸಿ (ಜೇನುಹುಳುಗಳ ಮಂದಿಯಾಳ್ವಿಕೆ) ಪುಸ್ತಕದಲ್ಲಿ ಜೇನಹುಳುಗಳ ಕುರಿತು ಹಲವಾರು ವಿಶಯಗಳನ್ನು ತೆರೆದಿಟ್ಟಿದ್ದಾರೆ. ಅವುಗಳಲ್ಲಿ ಜೇನುಹುಳುಗಳು ತೀರ‍್ಮಾನ ತಗೆದುಕೊಳ್ಳುವ ರೀತಿ ಕೂಡಾ ಒಂದು.
ತಾಮಸ್ ಸೀಲೆ ಅವರು ಹೇಳುವಂತೆ, ಯಾವಾಗ ಒಂದು ಜೇನುಗೂಡು ಜೇನುಹುಳುಗಳಿಂದ ತುಂಬಿ ಹೋಗುತ್ತದೆಯೋ ಆಗ ಆ ಗೂಡಿನ 2 ನೇ 3 ರಶ್ಟು ಕೆಲಸಗಾರ ಜೇನಹುಳುಗಳು ರಾಣಿಯ ಜತೆಗೂಡಿ ಪಕ್ಕದಲ್ಲೇ ಇರುವ ಮತ್ತೊಂದು ರೆಂಬೆಯನ್ನು ನೆಚ್ಚಿಕೊಳ್ಳುತ್ತವೆ. ಅಲ್ಲಿಂದ ಅವುಗಳ ಹೊಸ ಮನೆಯ ಹುಡುಕಾಟ ಶುರುವಾಗುತ್ತದೆ. ಮುಂದೆ ಕೆಲವು ದಿನಗಳವರೆಗೆ ನೂರಾರು ಜೇನಹುಳುಗಳು 10 ರಿಂದ 20 ಪೊಳ್ಳಾದ ಮರಗಳನ್ನು ಹುಡುಕುತ್ತವೆ. ಹೀಗೆ ಹೊಸ ಮರವೊಂದು ಸಿಕ್ಕಾಗ ಇತರ ಹುಳುಗಳಿಗೆ ಕುಣಿತದ ಮೂಲಕ ಸಂದೇಶ ನೀಡುತ್ತವೆ. ಆ ಕುಣಿತದ ಹೊತ್ತು ಹೊಸ ತಾಣದ ಒಳ್ಳೆಯತನವನ್ನು ತೋರಿಸುತ್ತದೆ. ಹೆಚ್ಚು ಕುಣಿತ ಅಂದರೆ ಮರ ವಾಸಕ್ಕೆ ತುಂಬಾ ಯೋಗ್ಯ ಎಂದು.
ಜೇನುಹುಳುಗಳಿಗೆ ನೆಲೆಯ ಯೋಗ್ಯತೆ ಅಳೆಯುವ ಒಳಕಸುವು ತುಂಬಾ ಚೆನ್ನಾಗಿ ಮಯ್ಗೂಡಿರುತ್ತದೆ. ಹೀಗೆ ತನ್ನದೇ ರೀತಿಯಿಂದ ಅಳೆದು ತೂಗಿದ ಹೊಸ ಮರವನ್ನು ಇತರರಿಗೆ ತುಂಬಾ ಪ್ರಾಮಾಣಿಕವಾಗಿ ಜೇನುಹುಳುಗಳು ತಿಳಿಸುತ್ತವೆ. ಗಮನಿಸಬೇಕಾದ ವಿಶಯವೆಂದರೆ ಅವು ಸಾಮಾನ್ಯವಾದ ಮರವನ್ನು ಸುಮ್ಮಸುಮ್ಮನೆ ಒಳ್ಳೆಯದೆಂದು ಎಂದೂ ತಿಳಿಸುವುದಿಲ್ಲ.ಕುಣಿತದ ಸಂದೇಶ ನೋಡಿ ಇತರೆ ಹುಳುಗಳು ಆ ಮರಗಳಿಗೆ ಬೇಟಿ ಕೂಟ್ಟು ತಮ್ಮ ತಮ್ಮ ಅನಿಸಿಕೆಯನ್ನು ಮತ್ತೆ ಕುಣಿತದ ಮೂಲಕ ಉಳಿದ ಜೇನುಹುಳುಗಳಿಗೆ ತಿಳಿಸುತ್ತವೆ. ಹೆಚ್ಚು ಹೆಚ್ಚು ಹುಳುಗಳಿಗೆ ಮರ ಮೆಚ್ಚುಗೆಯಾದಂತೆ ಆ ಮರಕ್ಕೆ ಬೇಟಿ ಕೂಟ್ಟು ಮರಳುವ ಹುಳುಗಳ ಕುಣಿತದ ಎಣಿಕೆಯೂ ಹೆಚ್ಚಾಗುತ್ತದೆ.
ಯಾವಾಗ ಕುಣಿಯುವ ಹುಳುಗಳ ಎಣಿಕೆ ಒಂದು ಮಟ್ಟವನ್ನು ದಾಟುತ್ತದೆಯೋ ಆಗ ಆ ಮರವನ್ನು ತಮ್ಮ ಹೊಸ ಮನೆಯನ್ನಾಗಿ ಅವು ಆರಿಸಿಕೊಳ್ಳುತ್ತವೆ. ಜೇನಹುಳುಗಳ ಈ ತರಹದ ತೀರ‍್ಮಾನದ ಬಗೆ ನಮ್ಮ ಮೆದುಳಿನ ನರಮಂಡಲ ವ್ಯವಸ್ತೆಗೆ ತುಂಬಾ ಹತ್ತಿರ ಎಂಬುದು ಅರಿಗರ (scientist) ತಿಳುವಳಿಕೆ. ಏಕೆಂದರೆ ಈ ಹುಳುಗಳ ಗುಂಪಿನಲ್ಲಾಗಲಿ ಇಲ್ಲವೇ ನಮ್ಮ ಮೆದುಳಿನಲ್ಲಾಗಲಿ ಯಾವುದೇ ಒಂದು ತೀರ‍್ಮಾನವು, ಒಂದು ಹುಳು ಇಲ್ಲವೇ ಒಂದು ನರವನ್ನು ನೆಚ್ಚಿಕೊಂಡಿರದೇ ಅದು ಎಲ್ಲ ಹುಳುಗಳ ಇಲ್ಲವೇ ನರಮಂಡಲದ ಒಗ್ಗಟ್ಟಾದ ತೀರ‍್ಮಾನವಾಗಿರುತ್ತದೆ.
ಅದಕ್ಕೆ ಅಲ್ಲವೆ ಒಬ್ಬರ ಅನಿಸಿಕೆಗಿಂತ ಹಲವು ಮಂದಿಯ ಅನಿಸಿಕೆ ಒಳ್ಳೆಯದೆಂದು ಹೇಳುವುದು. ಜೇನುಹುಳುಗಳ ಈ ಒಗ್ಗಟ್ಟಿನ ನಡುವಳಿಕೆಯನ್ನು ಮನುಶ್ಯರೂ ಮಯ್ಗೂಡಿಸಿಕೊಂಡರೆ ಎಶ್ಟೊಂದು ಚೆನ್ನ ಅಲ್ಲವೇ ?
ಮಾಹಿತಿ ಸೆಲೆ :http://www.sciencedaily.com/releases/2010/09/100928153151.htm
ಇತ್ತೀಚಿನ ಅನಿಸಿಕೆಗಳು