ಡೊಣ್ಣಮೆಣಸಿನಕಾಯಿ ಎಣ್ಣೆಗಾಯಿ

ಆಶಾ ರಯ್

Asha1

ಅಣಿ ಮಾಡಲು ಬೇಕಾಗುವ ಹೊತ್ತು: 10 ನಿಮಿಶ
ಅಡುಗೆ ಮಾಡಲು ಬೇಕಾಗುವ ಹೊತ್ತು: 15-20 ನಿಮಿಶ
ಎಶ್ಟು ಜನರಿಗೆ ಸಾಕಾಗುತ್ತೆ: 2-3

ಬೇಕಾದ ಪದಾರ್‍ತಗಳು:

  • 6 ಸಣ್ಣ ಇಲ್ಲವೇ 4 ಎಡತರ ಅಳತೆಯ ಡೊಣ್ಣಮೆಣಸಿನಕಾಯಿಗಳು (ಯಾವುದೇ ಬಣ್ಣದ್ದಾದರೂ ಆಗುತ್ತೆ, ನಾನು ಹಸಿರು ಹಾಗು ಹಳದಿ ಬಣ್ಣದ್ದರಲ್ಲಿ ಮಾಡಿದ್ದೆ)
  • 1 ಚಮಚ ಎಣ್ಣೆ

ತು0ಬಲು ಬೇಕಾದ ಪದಾರ್‍ತಗಳು:

  • 2 ದೊಡ್ದ ತುರಿದ ನೀರುಳ್ಳಿ  (ಹೆಚ್ಚಿದ ನೀರುಳ್ಳಿಗಿಂತ ತುರಿದ ನೀರುಳ್ಳಿ ಒಳ್ಳೆಯದು)
  • ¼ ಚಮಚ ಅರಿಶಿನ ಪುಡಿ
  • ½ ಚಮಚ ಗರಂ ಮಸಾಲೆ ಪುಡಿ
  • 1 ಚಮಚ ಕೊತ್ತಂಬರಿ ಪುಡಿ
  • ½ ಚಮಚ ಜೀರಿಗೆ ಪುಡಿ
  • ½-1 ಚಮಚ ಒಣ ಮಾವಿನಕಾಯಿ ಪುಡಿ
  • ½ ಬಟ್ಟಲು ಇಲ್ಲವೇ ಒಂದು ಕಯ್ ತುಂಬಾ ಕೊತ್ತಂಬರಿ ಸೊಪ್ಪು
  • 2-3 ಹಸಿ ಮೆಣಸಿನಕಾಯಿ (ಕಾರ ಹೆಚ್ಚು ಬೇಕಿದ್ದಲ್ಲಿ ಹೆಚ್ಚು ಮೆಣಸು ಹಾಕಿ)
  • 2-3 ಬೆಳ್ಳುಳ್ಳಿ ಎಸಳು
  • ½ ಅಂಗುಲ ಶುಂಟಿ
  • ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ:
ಸಣ್ಣ ಡೊಣ್ಣಮೆಣಸಾದರೆ ಒಂದು ಬದಿಯಲ್ಲಿ ಕತ್ತರಿಸಿ ಒಳಗಿನ ಬೀಜ, ತಿರುಳನ್ನು ತೆಗೆಯಿರಿ, ಕಾಯಿ ಮುರಿಯದಂತೆ ನೋಡಿಕೊಳ್ಳಿ, ಎಡತರ ಅಳತೆಯ ಕಾಯಿಯಾದರೆ ಮೇಲಿನ ತು0ಬನ್ನು ಕತ್ತರಿಸಿ ಒಳಗಿನ ಬೀಜ, ತಿರುಳನ್ನು ತೆಗೆಯಿರಿ. ಮಿಕ್ಸಿಯಲ್ಲಿ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಹಾಗು ಶುಂಟಿಯನ್ನು ನೀರು ಹಾಕದೆ ಕಡಿ ಕಡಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ತುರಿದ ನೀರುಳ್ಳಿ, ಮೇಲೆ ತಿಳಿಸಿದ ಎಲ್ಲ ಮಸಾಲೆ ಪುಡಿ ಹಾಗು ಉಪ್ಪು ಸೇರಿಸಿ ಕಲಸಿಕೊಳ್ಳಿ. ಕಲಸಿದ ಮಿಶ್ರಣವನ್ನು ತಿರುಳು ತೆಗೆದ ಡೊಣ್ಣಮೆಣಸಿನಕಾಯಿಯಲ್ಲಿ ಮೆಲ್ಲಗೆ ತುಂಬಿರಿ. ಒಂದು ದಪ್ಪ ತಳದ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಡೊಣ್ಣಮೆಣಸಿನಕಾಯಿಗಳನ್ನು ಮೆಲ್ಲಗೆ ಜೋಡಿಸಿ, ಕಡಾಯಿಯನ್ನು ಮುಚ್ಚಿ ಸಣ್ಣ/ಎಡತರ ಉರಿಯಲ್ಲಿ  ಬೇಯಿಸಿ. ಎಡೆಯಲ್ಲಿ ಆಗಾಗ  ತಳ ಹಿಡಿಯದ0ತೆ, ಕಾಯಿಗಳು ಎಲ್ಲ ಬದಿಯಿಂದಲೂ ಸರಿಯಾಗಿ ಬೇಯುವ ಹಾಗಿ ತಿರುಗಿಸುತ್ತ ಇರಿ. ಸಣ್ಣ – ಎಡತರ ಉರಿಯಲ್ಲಿ ಪೂರ್‍ತಿಯಾಗಿ ಬೇಯಲು ಸರಿ ಸುಮಾರು 15 ನಿಮಿಶ ಬೆಕಾಗುತ್ತದೆ. ಬಿಸಿ ಬಿಸಿ ಡೊಣ್ಣಮೆಣಸಿನಕಾಯಿ ಎಣ್ಣೆಗಾಯಿಯನ್ನು ರೊಟ್ಟಿ, ಚಪಾತಿ ಇಲ್ಲವೇ ಮಸಾಲೆ ಅನ್ನದೊಂದಿಗೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: