ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 6

– ಡಿ. ಎನ್. ಶಂಕರ ಬಟ್

{ಕಳೆದ ಬರಹದಲ್ಲಿ: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 5: ಸಂಸ್ಕ್ರುತದ ಹಾಗೆ, ಲ್ಯಾಟಿನ್, ಗ್ರೀಕ್, ಇಂಗ್ಲಿಶ್ ಮೊದಲಾದ ಬೇರೆ ಇಂಡೋ-ಯುರೋಪಿಯನ್ ನುಡಿಗಳಲ್ಲೂ ಪತ್ತುಗೆ ಒಟ್ಟುಗಳನ್ನು ನೇರವಾಗಿ ಹೆಸರು-ಎಸಕ ಸಂಬಂದಗಳೊಂದಿಗೆ ಹೊಂದಿಸಲು ಬರುವುದಿಲ್ಲ, ಮತ್ತು ಈ ಕಾರಣಕ್ಕಾಗಿ, ಆ ನುಡಿಗಳ ಸೊಲ್ಲರಿಮೆಗಳಲ್ಲೂ ಸಬ್ಜೆಕ್ಟ್, ಆಬ್ಜೆಕ್ಟ್ ಎಂಬಂತಹ ಕಲ್ಪಿತ ತತ್ವಗಳನ್ನು ಬಳಸಬೇಕಾಗಿದೆ.ಇತ್ತೀಚೆಗಿನ ಕೆಲವು ಕನ್ನಡ ಸೊಲ್ಲರಿಮೆಗಳು ಈ ಕಲ್ಪಿತ ತತ್ವಗಳನ್ನು ಕನ್ನಡಕ್ಕೂ ಅಳವಡಿಸಲು ಪ್ರಯತ್ನಿಸಿವೆ…}

(7) ಎಸಕಪದಗಳ ರೂಪಗಳು:

shabdamanidarpanaಎಸಕಪದಗಳ ಬಳಕೆಯಲ್ಲೂ ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವೆ ತಳಮಟ್ಟದ ವ್ಯತ್ಯಾಸಗಳಿವೆ:

(ಕ) ಹಳೆಗನ್ನಡದ ಎಸಕರೂಪಗಳಲ್ಲಿ ಎಸಕಪದಗಳ ಬಳಿಕ ಎಸಕದ ಹೊತ್ತನ್ನು ತಿಳಿಸುವ ‘ಹೊತ್ತಿನ ಒಟ್ಟು’ ಮತ್ತು ಅದನ್ನು ನಡೆಸಿದ ಮಾಡುಗನನ್ನು ಇಲ್ಲವೇ ಆಗುಗನನ್ನು ತಿಳಿಸುವ ‘ಗುರುತಿನ ಒಟ್ಟು’ ಎಂಬುದಾಗಿ ಎರಡು ಒಟ್ಟುಗಳು ಬಳಕೆಯಾಗುತ್ತವೆ; ಎತ್ತುಗೆಗಾಗಿ, ಪಡೆದನ್ (ಪಡೆ-ದ್-ಅನ್) ಎಂಬ ಎಸಕಪದರೂಪದಲ್ಲಿ ಪಡೆ ಎಂಬುದು ಎಸಕಪದ, ದ್ ಎಂಬುದು ಹಿಂಬೊತ್ತನ್ನು ತಿಳಿಸುವ ಹೊತ್ತಿನ ಒಟ್ಟು, ಮತ್ತು ಅನ್ ಎಂಬುದು ಗುರುತಿನ ಒಟ್ಟು;  ಇರ‍್ಪಂ (ಇರ್-ಪ್-ಎಂ) ಎಂಬುದರಲ್ಲಿ ಇರ್ ಎಂಬುದು ಎಸಕಪದ, ಪ್ ಎಂಬುದು ಮುಂಬೊತ್ತನ್ನು ತಿಳಿಸುವ ಹೊತ್ತಿನ ಒಟ್ಟು, ಮತ್ತು ಎಂ ಎಂಬುದು ಗುರುತಿನ ಒಟ್ಟು.

ಇದಕ್ಕೆ ಬದಲು, ಸಂಸ್ಕ್ರುತದ ಎಸಕರೂಪಗಳಲ್ಲಿ ಎಸಕಪದದ ಬಳಿಕ ಮಾಡುಗ ಇಲ್ಲವೇ ಆಗುಗನನ್ನು ತಿಳಿಸುವ ಒಂದು ಒಟ್ಟು ಮಾತ್ರ ಬರುತ್ತದೆ; ಯಜ-ತಿ ಎಂಬ ಎಸಕರೂಪದಲ್ಲಿ ಯಜ ಎಂಬುದು ಎಸಕಪದರೂಪ, ಮತ್ತು ತಿ ಎಂಬುದು ಗುರುತಿನ ಒಟ್ಟು; ಗಚ್ಛಾ-ಮಿ ಎಂಬುದರಲ್ಲಿ ಗಚ್ಛಾ ಎಂಬುದು ಎಸಕಪದರೂಪ, ಮತ್ತು ಮಿ ಎಂಬುದು ಗುರುತಿನ ಒಟ್ಟು. ಸಂಸ್ಕ್ರುತದ ಎಸಕಪದರೂಪಗಳ ಹಾಗೆ ಹಳೆಗನ್ನಡದ ಎಸಕಪದರೂಪಗಳಲ್ಲೂ ಒಂದು ಒಟ್ಟನ್ನು ಮಾತ್ರ ಕಾಣಲು ಹೊರಟಿರುವ ಶಬ್ದಮಣಿದರ‍್ಪಣದಲ್ಲಿ ಹಳೆಗನ್ನಡದ ಎರಡು ಒಟ್ಟುಗಳಲ್ಲಿ ಒಂದನ್ನು (ಗುರುತಿನ ಒಟ್ಟನ್ನು) ಮಾತ್ರ ‘ಪ್ರತ್ಯಯ’ವೆಂದು ಕರೆಯಲಾಗಿದೆ, ಮತ್ತು ಅದರ ಮೊದಲು ಬರುವ ಹೊತ್ತಿನ ಒಟ್ಟನ್ನು ‘ಆಗಮ’ವೆಂದು ಕರೆಯಲಾಗಿದೆ.

(ಚ) ಹಳೆಗನ್ನಡದಲ್ಲಿ ಎಸಕದ ಹೊತ್ತನ್ನು ತಿಳಿಸಲು ಬೇರೆಯೇ ಒಟ್ಟನ್ನು ಬಳಸಲಾಗುತ್ತದೆಯೆಂಬುದನ್ನು ಮೇಲೆ ನೋಡಿರುವೆವು; ಇದಕ್ಕೆ ಬದಲು, ಸಂಸ್ಕ್ರುತದಲ್ಲಿ ಎಸಕಪದದ ರೂಪದಲ್ಲಿ ಇಲ್ಲವೇ ಗುರುತಿನ ಒಟ್ಟಿನ ರೂಪದಲ್ಲಿ ವ್ಯತ್ಯಾಸಗಳನ್ನು ಮಾಡುವ ಮೂಲಕ ಅದನ್ನು ತಿಳಿಸಲಾಗುತ್ತದೆ; ಇದಲ್ಲದೆ, ಹಳೆಗನ್ನಡದಲ್ಲಿ ಎಸಕದ ಸಮಯಕ್ಕೂ ಆಡುಗನ ಸಮಯಕ್ಕೂ ನಡುವಿರುವ ಸಂಬಂದವನ್ನು ಎಸಕರೂಪಗಳಲ್ಲಿ ಹೊತ್ತಿನ ಒಟ್ಟನ್ನು ಬಳಸುವ ಮೂಲಕ ತಿಳಿಸಲಾಗುತ್ತದೆ; ಬಂದೆನ್ ಎಂಬ ಎಸಕರೂಪದಲ್ಲಿ ಬಳಕೆಯಾಗಿರುವ ದ್ ಎಂಬ ಒಟ್ಟು ‘ಬರುವ ಎಸಕ’ ಆಡುಗನ ಹೊತ್ತಿಗಿಂತ ಮೊದಲು ನಡೆದಿದೆಯೆಂದು ತಿಳಿಸುತ್ತದೆ, ಮತ್ತು ಬರ‍್ಪೆನ್ ಎಂಬುದರಲ್ಲಿ ಬಳಕೆಯಾಗಿರುವ ಪ್ ಎಂಬ ಒಟ್ಟು ಅದು ಆಡುಗನ ಹೊತ್ತಿನ ಬಳಿಕ ನಡೆಯುತ್ತದೆಯೆಂದು ತಿಳಿಸುತ್ತದೆ.

ಇದಕ್ಕೆ ಬದಲು, ಸಂಸ್ಕ್ರುತದ ಎಸಕಪದರೂಪಗಳಲ್ಲಿ ಎಸಕವು ಪೂರ‍್ಣವಾದುದೋ ಇಲ್ಲವೇ ಅಪೂರ‍್ಣವಾದುದೋ ಎಂಬುದನ್ನು (ಎಂದರೆ ಹೊತ್ತಿನ ವ್ಯವಸ್ತೆಯನ್ನು) ತಿಳಿಸಲಾಗುತ್ತದೆ, ಮತ್ತು ಇದಕ್ಕಾಗಿ ಎಸಕಪದಗಳ ರೂಪಗಳಲ್ಲಿ ಮತ್ತು ಅವುಗಳ ಬಳಿಕ ಬರುವ ಗುರುತಿನ ಒಟ್ಟುಗಳಲ್ಲಿ ಮಾರ‍್ಪಾಡುಗಳನ್ನು ಮಾಡುವ ಮೂಲಕ ತಿಳಿಸಲಾಗುತ್ತದೆ.  ಎತ್ತಿಗೆಗಾಗಿ, ತುದ-ತಿ ಎಂಬುದು ಕೊನೆಗೊಳ್ಳದ ಎಸಕವನ್ನು ತಿಳಿಸುತ್ತದೆ, ಮತ್ತು ತುತೋ-ದ ಎಂಬುದು ಕೊನೆಗೊಂಡ ಎಸಕವನ್ನು ತಿಳಿಸುತ್ತದೆ.

ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸಲಾಗದ ಶಬ್ದಮಣಿದರ‍್ಪಣ ಸಂಸ್ಕ್ರುತದ ಕಟ್ಟಲೆಗಳನ್ನೇ ಅಲ್ಲಲ್ಲಿ ತೇಪೆಹಾಕಿ ಹಳೆಗನ್ನಡದವೆಂದು ನಮ್ಮೆದುರಿಗಿರಿಸಿದೆ.

(ಟ) ಸಂಸ್ಕ್ರುತದಲ್ಲಿ ಗುರುತಿನ ಒಟ್ಟು (ಆಖ್ಯಾತ ಪ್ರತ್ಯಯ) ಮಾಡುಗ ಇಲ್ಲವೇ ಆಗುಗನ ಕುರಿತಾಗಿ ಆಡುಗ, ಕೇಳುಗ ಮತ್ತು ಹೆರತು ಎಂಬ ಮೂರು ಬಗೆಯ ಮಾತಾಳಿನ ವ್ಯತ್ಯಾಸವನ್ನು, ಮತ್ತು ಏಕ-ದ್ವಿ-ಬಹು ಎಂಬ ಮೂರು ಬಗೆಯ ಎಣಿಕೆಯ (ವಚನದ) ವ್ಯತ್ಯಾಸವನ್ನು ತಿಳಿಸುತ್ತದೆ; ಇದಕ್ಕೆ ಬದಲು, ಹಳೆಗನ್ನಡದಲ್ಲಿ ಗುರುತಿನ ಒಟ್ಟು ಮೂರು ಬಗೆಯ ಮಾತಾಳಿನ ವ್ಯತ್ಯಾಸ ಮತ್ತು ಎರಡು ಬಗೆಯ ಎಣಿಕೆಯ ವ್ಯತ್ಯಾಸಗಳನ್ನು ಮಾತ್ರವಲ್ಲದೆ ಮೂರು ಬಗೆಯ ಗುರ‍್ತ ವ್ಯತ್ಯಾಸವನ್ನೂ (ಗಂಡು, ಹೆಣ್ಣು, ಉಳಿಕೆ) ತೋರಿಸುತ್ತದೆ. ಸಂಸ್ಕ್ರುತದ ಗಚ್ಛತಿ ಎಂಬ ಓರೆಣಿಕೆಯ ಒಂದು ರೂಪಕ್ಕೆ ಬದಲಾಗಿ ಹಳೆಗನ್ನಡದಲ್ಲಿ ಪೋದನ್, ಪೋದಳ್ ಮತ್ತು ಪೋದುದು ಎಂಬ ಮೂರು ರೂಪಗಳಿವೆ.

ಇದನ್ನು ವಿವರಿಸುವಲ್ಲಿಯೂ ಕೂಡ, ಸಂಸ್ಕ್ರುತದ ಕಟ್ಟಲೆಗಳು ಶಬ್ದಮಣಿದರ‍್ಪಣವನ್ನು ಕಟ್ಟಿಹಾಕಿವೆ: ಹಳೆಗನ್ನಡದ ಎಸಕಪದರೂಪಗಳಲ್ಲಿ ಮಾತಾಳಿನ ಮತ್ತು ಎಣಿಕೆಯ ವ್ಯತ್ಯಾಸಗಳನ್ನು ತೋರಿಸುವ ಆರು ಒಟ್ಟುಗಳನ್ನು ಮಾತ್ರ ‘ಪ್ರತ್ಯಯ’ಗಳೆಂದು ಕರೆದು, ಗುರ‍್ತವ್ಯತ್ಯಾಸವನ್ನು ತೋರಿಸುವ ಒಟ್ಟುಗಳನ್ನು ‘ಆದೇಶ’ಗಳೆಂದು ಕರೆಯಲಾಗಿದೆ.

ಮಗು ಪದಕ್ಕೆ ಇನ ಒಟ್ಟನ್ನು ಸೇರಿಸಿದಾಗ ಅವುಗಳ ನಡುವೆ ವಕಾರ ಬರುವುದು ಮಗು+ಇನ ಎಂಬುದು ಮಗುವಿನ ಎಂದಾಗುವುದು) ಆಗಮ, ಮತ್ತು ಬಂಡೆ ಪದಕ್ಕೆ ಕಲ್ಲು ಪದವನ್ನು ಸೇರಿಸಿದಾಗ ಕಕಾರದ ಬದಲು ಗಕಾರ ಬರುವುದು (ಬಂಡೆ+ಕಲ್ಲು ಎಂಬುದು ಬಂಡೆಗಲ್ಲು ಎಂದಾಗುವುದು) ಆದೇಶ; ಎಂದರೆ, ಆಗಮ ಮತ್ತು ಆದೇಶ ಎಂಬ ಈ ಸೇರಿಕೆಯ ಮಾರ‍್ಪಾಡುಗಳು ಹುರುಳಿನ ವ್ಯತ್ಯಾಸವಿಲ್ಲದಿರುವಲ್ಲೂ ಉಲಿಗಳ ವ್ಯತ್ಯಾಸ ನಡೆದಿರುವುದನ್ನು ವಿವರಿಸಲು ಬಳಕೆಯಾಗುತ್ತವೆ. ಇಂತಹ ಸೇರಿಕೆಯ ಮಾರ‍್ಪಾಡುಗಳನ್ನು ಮೇಲೆ ವಿವರಿಸಿದ ಹಾಗೆ ಹುರುಳಿನ ವ್ಯತ್ಯಾಸ ಇರುವಲ್ಲೂ ಬಳಸುವುದು ನಿಜಕ್ಕೂ ವಿಚಿತ್ರವಾಗಿದೆ. ಪೋದನ್ ಎಂಬುದರ ಬದಲು ಪೋಪನ್ ಎಂಬುದನ್ನು ಬಳಸುವುದು, ಮತ್ತು ಪೋದನ್ ಎಂಬುದರ ಬದಲು ಪೋದಳ್ ಇಲ್ಲವೇ ಪೋದುದು ಎಂಬುದನ್ನು ಬಳಸುವುದು ಬರಿಯ ಸೇರಿಕೆ(ಸಂದಿ)ಯ ವ್ಯತ್ಯಾಸ ಹೇಗಾಗುತ್ತದೆ?

ಸಂಸ್ಕ್ರುತದ ಎಸಕಪದರೂಪಗಳಲ್ಲಿಲ್ಲದ ಹೊತ್ತಿನ ಒಟ್ಟನ್ನು ಮತ್ತು ಗುರ‍್ತವ್ಯತ್ಯಾಸವನ್ನು ಹಳೆಗನ್ನಡದ ಎಸಕಪದರೂಪಗಳಲ್ಲಿ ಕಾಣಲು ಶಬ್ದಮಣಿದರ‍್ಪಣಕ್ಕೆ ಸಾದ್ಯವಾಗದಿದ್ದುದೇ ಮೇಲಿನ ವಿಚಿತ್ರ ಹೇಳಿಕೆಗೆ ಕಾರಣವಾಗಿದೆ.

(ಮುಂದಿನ ವಾರ ಮುಂದುವರೆಯಲಿದೆ)

ನಿಮಗೆ ಹಿಡಿಸಬಹುದಾದ ಬರಹಗಳು

1 Response

ಅನಿಸಿಕೆ ಬರೆಯಿರಿ: