ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 5

– ಡಿ. ಎನ್. ಶಂಕರ ಬಟ್

shabdamanidarpana

{ಕಳೆದ ಬರಹದಲ್ಲಿ: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 4: ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಶಬ್ದಮಣಿದರ‍್ಪಣ ಗಮನಿಸಿಲ್ಲ; ಪತ್ತುಗೆ (ವಿಬಕ್ತಿ) ಒಟ್ಟುಗಳ ಬಳಕೆ ಹಳೆಗನ್ನಡದಲ್ಲೂ ಸಂಸ್ಕ್ರುತದಲ್ಲಿರುವ ಹಾಗೆಯೇ ಇರಬಹುದು ಇಲ್ಲವೇ ಇರಬೇಕು ಎಂಬ ಅನಿಸಿಕೆಯ ಮೇಲೆ ಅದು ಹಳೆಗನ್ನಡದ ಮೇಲೆ ಕಟ್ಟಲೆಗಳನ್ನು ಹೇರುತ್ತದೆ…}

ಹಳೆಗನ್ನಡದಲ್ಲಿ ಅನ್ (ಅಂ) ‘ಈಡು’, ಒಳ್ ‘ಜಾಗ’, ಇನ್ ‘ಸುರು’ ಮತ್ತು ಗೆ ‘ಕೊನೆ’ ಎಂಬ ನಾಲ್ಕು ಪತ್ತುಗೆ (ವಿಬಕ್ತಿ) ಒಟ್ಟುಗಳು ಮಾತ್ರ ಬಳಕೆಯಾಗುತ್ತವೆ; ಹೆಸರುಪದಗಳಿಗೂ ಎಸಕಪದಗಳಿಗೂ ನಡುವಿರುವ ಸಂಬಂದವನ್ನು ಈ ಒಟ್ಟುಗಳು ನೇರವಾಗಿ ತಿಳಿಸುತ್ತವೆ. ಹೆಸರುಪದಗಳು ಗುರುತಿಸುವ ಪಾಂಗುಗಳ ಎಣಿಕೆಯನ್ನು ತಿಳಿಸಲು ಗಳು ಮತ್ತು ರು ಎಂಬ ಬೇರೆಯೇ ಎರಡು ಒಟ್ಟುಗಳು ಬಳಕೆಯಲ್ಲಿವೆ.

(6) ಪತ್ತುಗೆ ಒಟ್ಟುಗಳು ಮತ್ತು ಕಾರಕಗಳು:

ಇದಕ್ಕೆ ಬದಲು, ಸಂಸ್ಕ್ರುತದಲ್ಲಿ ಏಳು ವಿಬಕ್ತಿಗಳು ಮತ್ತು ಮೂರು ವಚನಗಳು ಬಳಕೆಯಾಗುತ್ತಿದ್ದು, ಇವನ್ನು ಒಟ್ಟಾಗಿ ತಿಳಿಸಲು 7×3 ಎಂದರೆ ಒಟ್ಟು 21 ಒಟ್ಟುಗಳು ಬಳಕೆಯಾಗುತ್ತವೆ. ಆದರೆ, ಈ ವಿಬಕ್ತಿ-ವಚನ ಒಟ್ಟುಗಳು ಹೆಸರುಪದ ಮತ್ತು ಎಸಕಪದಗಳ ನಡುವಿನ ಸಂಬಂದವನ್ನು ನೇರವಾಗಿ ತಿಳಿಸುವುದಿಲ್ಲ. ಇದಕ್ಕೆ ಹಲವು ಕಾರಣಗಳಿವೆ:

(ಕ) ಕೆಲವು ಒಟ್ಟುಗಳು ಒಂದಕ್ಕಿಂತ ಹೆಚ್ಚು ವಿಬಕ್ತಿ-ವಚನಗಳನ್ನು ತಿಳಿಸಬಲ್ಲುವು (ಆಸ್ಯೇಭ್ಯಃ ಎಂಬ ಪದರೂಪದಲ್ಲಿ ಬಂದಿರುವ ಭ್ಯಃ ಎಂಬುದು ಚತುರ‍್ತೀ-ಬಹುವಚನವನ್ನು ಮಾತ್ರವಲ್ಲದೆ, ಪಂಚಮೀ-ಬಹುವಚನವನ್ನೂ ತಿಳಿಸಬಲ್ಲುದು; ನದೀಭ್ಯಾಂ ಎಂಬುದರಲ್ಲಿ ಬಂದಿರುವ ಭ್ಯಾಂ ಎಂಬುದು ತ್ರುತೀಯಾ-ದ್ವಿವಚನ, ಚತುರ‍್ತೀ-ದ್ವಿವಚನ ಮತ್ತು ಪಂಚಮೀ-ದ್ವಿವಚನಗಳನ್ನು ತಿಳಿಸಬಲ್ಲದು).

(ಚ) ಶಶ್ಟೀ ವಿಬಕ್ತಿಯ ಒಟ್ಟು ಹೆಸರುಪದ-ಎಸಕಪದ ಸಂಬಂದವನ್ನು ಮಾತ್ರವಲ್ಲದೆ ಹೆಸರುಪದ-ಹೆಸರುಪದ ಸಂಬಂದವನ್ನೂ ತಿಳಿಸಬಲ್ಲುದು (ಭೀಮಸ್ಯ ಅನುಕರಿಷ್ಯಾಮಿ ಎಂಬಲ್ಲಿ ಅದು ಬೀಮನಿಗೂ ಎಸಕಕ್ಕೂ ನಡುವಿರುವ ಹೆಸರುಪದ-ಎಸಕಪದ ಸಂಬಂದವನ್ನು ತಿಳಿಸುತ್ತದೆ, ಮತ್ತು ಪಶೋಃ ಪಾದಃ ಎಂಬಲ್ಲಿ ಅದೇ ಒಟ್ಟು ಪಶುವಿಗೂ ಪಾದಕ್ಕೂ ನಡುವಿರುವ ಹೆಸರುಪದ-ಹೆಸರುಪದ ಸಂಬಂದವನ್ನು ತಿಳಿಸುತ್ತದೆ).

(ಟ) ಕೆಲವು ವಿಬಕ್ತಿ ಒಟ್ಟುಗಳ ಬಳಕೆ ಹೆಸರುಪದ-ಎಸಕಪದ ಸಂಬಂದವನ್ನು ಅವಲಂಬಿಸಿರುವ ಬದಲು ಬೇರೆ ವಿಶಯಗಳನ್ನು ಅವಲಂಬಿಸಿರುತ್ತದೆ (ಪರ‍್ವತೇ ಆಸ್ತೇ, ಪರ‍್ವತಂ ಅಧ್ಯಾಸ್ತೇ ಎಂಬ ಈ ಎರಡು ಸೊಲ್ಲುಗಳಲ್ಲೂ ಒಂದು ಪಾಂಗಿನ ಜಾಗವನ್ನು ತಿಳಿಸಲಾಗುತ್ತದೆ; ಆದರೆ, ಮೊದಲನೆಯ ಸೊಲ್ಲಿನಲ್ಲಿ ಸಪ್ತಮೀ ವಿಬಕ್ತಿ ಒಟ್ಟು ಬಂದಿದೆ ಮತ್ತು ಎರಡನೆಯದರಲ್ಲಿ, ಅಧಿ ಎಂಬ ಮುನ್ನೊಟ್ಟಿನ ಬಳಕೆಯಿಂದಾಗಿ, ದ್ವಿತೀಯಾ ವಿಬಕ್ತಿ ಒಟ್ಟು ಬಂದಿದೆ).

ಇಂತಹ ಬೇರೆಯೂ ಹಲವು ಕಾರಣಗಳಿಗಾಗಿ, ಸಂಸ್ಕ್ರುತದಲ್ಲಿ ವಿಬಕ್ತಿ ಒಟ್ಟುಗಳನ್ನು ನೇರವಾಗಿ ಹೆಸರು-ಎಸಕ ಸಂಬಂದಗಳೊಂದಿಗೆ ಹೊಂದಿಸಲು ಬರುವುದಿಲ್ಲ; ಹಾಗಾಗಿ, ಹೆಸರು-ಎಸಕ ಸಂಬಂದಗಳನ್ನು ತಿಳಿಸುವುದಕ್ಕಾಗಿ ಸಂಸ್ಕ್ರುತ ವ್ಯಾಕರಣಗಳಲ್ಲಿ ‘ಕಾರಕ’ವೆಂಬ ಬೇರೆಯೇ ಒಂದು ಕಲ್ಪಿತ ತತ್ವವನ್ನು ಬಳಸಲಾಗುತ್ತದೆ; ಕರ‍್ತ್ರು, ಕರ‍್ಮ, ಕರಣ ಮೊದಲಾದ ಇಂತಹ ಆರು ಕಾರಕಗಳನ್ನು ಕಲ್ಪಿಸಿಕೊಳ್ಳಲಾಗಿದ್ದು, ಅವುಗಳ ಮೂಲಕ ನೇರವಲ್ಲದ ಬಗೆಯಲ್ಲಿ ವಿಬಕ್ತಿ ಒಟ್ಟುಗಳನ್ನು ಹೆಸರು-ಎಸಕ ಸಂಬಂದದೊಂದಿಗೆ ಹೊಂದಿಸಬೇಕಾಗಿದೆ.

ಆದರೆ, ಹಳೆಗನ್ನಡದಲ್ಲಿ ವಿಬಕ್ತಿ ಒಟ್ಟುಗಳಿಗೂ ಈಡು, ಜಾಗ, ಸುರು ಮತ್ತು ಕೊನೆಗಳೆಂಬ ಹೆಸರು-ಎಸಕ ಸಂಬಂದಗಳಿಗೂ ನಡುವೆ ನೇರವಾದ ಹೊಂದಾಣಿಕೆಯಿದೆ; ಹಾಗಾಗಿ, ಅಂತಹ ಕಾರಕವೆಂಬ ಕಲ್ಪಿತ ತತ್ವ ಹಳೆಗನ್ನಡ ವ್ಯಾಕರಣಕ್ಕೆ ಬೇಕಾಗಿಲ್ಲ. ಇದನ್ನು ಗಮನಿಸದೆ, ಹಳೆಗನ್ನಡ ವ್ಯಾಕರಣದಲ್ಲೂ ಕಾರಕವೆಂಬ ಕಲ್ಪಿತ ತತ್ವವನ್ನು ಬಳಸಹೋಗಿ, ಹಳೆಗನ್ನಡದ ಮಟ್ಟಿಗೆ ಶಬ್ದಮಣಿದರ‍್ಪಣವೆಂಬುದು ಒಂದು ಸಿಕ್ಕಲು ಸಿಕ್ಕಲಾದ ವ್ಯಾಕರಣವಾಗಿದೆ.

ಸಂಸ್ಕ್ರುತದ ಹಾಗೆ, ಲ್ಯಾಟಿನ್, ಗ್ರೀಕ್, ಇಂಗ್ಲಿಶ್ ಮೊದಲಾದ ಬೇರೆ ಇಂಡೋ-ಯುರೋಪಿಯನ್ ನುಡಿಗಳಲ್ಲೂ ಪತ್ತುಗೆ ಒಟ್ಟುಗಳನ್ನು ನೇರವಾಗಿ ಹೆಸರು-ಎಸಕ ಸಂಬಂದಗಳೊಂದಿಗೆ ಹೊಂದಿಸಲು ಬರುವುದಿಲ್ಲ, ಮತ್ತು ಈ ಕಾರಣಕ್ಕಾಗಿ, ಆ ನುಡಿಗಳ ಸೊಲ್ಲರಿಮೆಗಳಲ್ಲೂ ಸಬ್ಜೆಕ್ಟ್, ಆಬ್ಜೆಕ್ಟ್ ಎಂಬಂತಹ ಕಲ್ಪಿತ ತತ್ವಗಳನ್ನು ಬಳಸಬೇಕಾಗಿದೆ.

ಇತ್ತೀಚೆಗಿನ ಕೆಲವು ಕನ್ನಡ ಸೊಲ್ಲರಿಮೆಗಳು ಈ ಕಲ್ಪಿತ ತತ್ವಗಳನ್ನು ಕನ್ನಡಕ್ಕೂ ಅಳವಡಿಸಲು ಪ್ರಯತ್ನಿಸಿವೆ; ಆದರೆ, ರಾಜುವಿಗೆ ಹಣ ಸಿಕ್ಕಿತು ಎಂಬಂತಹ ಸೊಲ್ಲುಗಳಲ್ಲಿ ಯಾವುದನ್ನು (ರಾಜುವಿಗೆ ಎಂಬುದನ್ನೋ, ಇಲ್ಲವೇ ಹಣ ಎಂಬುದನ್ನೋ) ಸಬ್ಜೆಕ್ಟ್ ಎಂಬುದಾಗಿ ತಿಳಿಯಬೇಕು ಎಂಬುದನ್ನು ತೀರ‍್ಮಾನಿಸಲಾಗದೆ ಸೋತುಹೋಗಿವೆ. ಸಿಕ್ಕಿತು ಎಂಬ ಹೆಸರುಪದದೊಂದಿಗೆ ಹೊಂದಾಣಿಕೆಯನ್ನು ಹಣ ಎಂಬ ಹೆಸರುಪದ ತೋರಿಸುವುದರಿಂದ ಅದನ್ನೇ ಸಬ್ಜೆಕ್ಟ್ ಎನ್ನಬೇಕಾಗುತ್ತದೆ; ಆದರೆ, ಹಣವನ್ನು ಪಡೆದಿರುವುದು ರಾಜುವಾದ ಕಾರಣ, ರಾಜುವೇ ಸೊಲ್ಲಿನ ಸಬ್ಜೆಕ್ಟ್ ಎಂದೂ ಅನಿಸುತ್ತದೆ. ಸಬ್ಜೆಕ್ಟ್, ಆಬ್ಜೆಕ್ಟ್ ಎಂಬಂತಹ ಈ ತತ್ವಗಳನ್ನು ಕನ್ನಡಕ್ಕೆ ಅಳವಡಿಸುವಲ್ಲಿ ಬೇರೆಯೂ ಕೆಲವು ತೊಂದರೆಗಳಿವೆ.

ನಿಜಕ್ಕೂ ಇವನ್ನು ಬಳಸದೆಯೇ ಕನ್ನಡದ ಸೊಲ್ಲರಿಮೆಯನ್ನು ವಿವರಿಸಲು ಬರುತ್ತದೆ; ಹಾಗಾಗಿ, ಅವನ್ನು ಬಳಸಲು ಹೋಗಿ ತೊಡಕುಗಳಿಗೆ ಯಾಕೆ ಸಿಲುಕಿಕೊಳ್ಳಬೇಕು?

(ಮುಂದಿನ ವಾರ ಮುಂದುವರೆಯಲಿದೆ…)

ನಿಮಗೆ ಹಿಡಿಸಬಹುದಾದ ಬರಹಗಳು

1 Response

ಅನಿಸಿಕೆ ಬರೆಯಿರಿ:

%d bloggers like this: