ತಂತ್ರಾಂಶಗಳು ನಮ್ಮ ನುಡಿಯಲ್ಲಿರಬೇಕು

ರತೀಶ ರತ್ನಾಕರ

Microsoft-different-languages

ಕಳೆದ ಕೆಲವು ದಿನಗಳ ಹಿಂದೆ ಪ್ರಜಾವಾಣಿ ಸುದ್ದಿಹಾಳೆಯಲ್ಲಿ ಪ್ರಕಟವಾದ ಒಂದು ಬರಹದಲ್ಲಿ ಪ್ರಾದೇಶಿಕ ಬಾಶೆಗಳಲ್ಲಿಯೇ ತಂತ್ರಾಂಶಗಳನ್ನು ಕಟ್ಟುವುದರ ಹೆಚ್ಚುಗಾರಿಕೆ ಮತ್ತು ಅವು ಯಾಕೆ ಬೇಕೆಂಬುದರ ಕುರಿತು ಹೇಳಿದ್ದಾರೆ. ಬರಹದಲ್ಲಿ ತಿಳಿಸಿರುವಂತೆ ಹೆಸರಾಂತ ಸಾಪ್ಟ್ ವೇರ್‍ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್‍ವೀಸಸ್‍ನ್ನು ಕಟ್ಟಿ ಬೆಳೆಸಿದ ಡಾ. ಪಕೀರ್‍ ಚಂದ್ ಕೊಹ್ಲಿಯವರು “ತಂತ್ರಾಂಶಗಳು ದೇಶದ ಎಲ್ಲ ಜನರನ್ನು ತಲುಪಬೇಕೆಂದರೆ ಬಾರತದ ಎಲ್ಲಾ ನುಡಿಗಳಲ್ಲಿ ತಂತ್ರಾಂಶಗಳು ರೂಪುಗೊಳ್ಳಬೇಕಿದೆ” ಎಂಬ ಅನಿಸಿಕೆ ತಿಳಿಸಿದ್ದಾರೆ. ಇದು ಸರಿಯಾದ ಮಾತು. ಮಂದಿಯ ನುಡಿಯಲ್ಲೇ ತಂತ್ರಾಂಶ ಸೇವೆಗಳು ಮತ್ತು ಚಳಕಗಳು ಸಿಗಬೇಕಿರುವುದು ಈ ಹೊತ್ತಿನ ಅಗತ್ಯತೆ.

ಇಂದು ಮಿಂಬಲೆ (internet) ಹಾಗು ಅಲೆಯುಲಿ(mobile phone)ಯ ಬಳಕೆಯಿಂದ ಅನೇಕ ಸೇವೆಗಳು ಮತ್ತು ಮಾಹಿತಿಗಳು ಮಂದಿಯ ಕಯ್ ಬೆರಳ ತುದಿಗೆ ಎಟುಕುವಂತಾಗಿದೆ. ಹಣಮನೆಯ (ಬ್ಯಾಂಕಿಂಗ್) ಸೇವೆಗಳು, ಸರಕು ಕೊಳ್ಳುವಿಕೆ (online shopping), ಬಸ್ಸು, ರಯ್ಲು, ಬಾನೋಡದ (Aeroplane) ಚೀಟಿ ಕಾಯ್ದಿರಿಸುವಿಕೆ, ಹಲವು ಗ್ರಾಹಕ ಸೇವೆಗಳು, ಜಗತ್ತಿನ ಯಾವ ವಿಶಯದ ಕುರಿತು ಬೇಕಾದರೂ ಸಿಗುವ ಮಾಹಿತಿಗಳು, ಪೋಟೊ ಶಾಪ್, ಮಯ್ಕ್ರೋ ಸಾಪ಼್ಟ್ ಆಪೀಸಿನಂತಹ ತಂತ್ರಾಂಶಗಳು, ಚೂಟಿಯುಲಿ(smartphone)ಯಲ್ಲಿ ಸಿಗುತ್ತಿರುವ ಮನರಂಜನೆ, ಮಾಹಿತಿ, ಆಟಗಳು, ಚಿಕ್ಕ ಚಿಕ್ಕ ತಂತ್ರಾಂಶಗಳು. ಹೀಗೆ ಹತ್ತು ಹಲವು ಸೇವೆಗಳು ಕಯ್ಗೆಟುಕುವ ದರದಲ್ಲಿ ಮಂದಿಗೆ ದೊರಕುತ್ತಿದೆ. ಇವುಗಳ ನೆರವಿನಿಂದ ಹಲವು ಕೆಲಸಗಳನ್ನು ಬಿರ್‍ರನೆ ಮುಗಿಸಲು ಸಾದ್ಯವಾಗಿದೆ. ಎತ್ತುಗೆಗೆ, ನೀವೇನಾದರೂ ಹಣವನ್ನು ಮನಿ ಆರ್‍ಡರ್‍ ಮಾಡಬೇಕಿದ್ದಲ್ಲಿ ಅಂಚೆ ಕಚೇರಿಗೆ ಹೋಗಿ, ಅರ್‍ಜಿಯನ್ನು ತುಂಬಿ, ಸರದಿಯಲ್ಲಿ ನಿಂತು ಹಣ ಕಟ್ಟಬೇಕು. ಆ ಹಣವು ನೀವು ಕಳಿಸಬೇಕಂದವರಿಗೆ ತಲುಪಲು ಎರೆಡು ಮೂರು ದಿನಗಳು ತಗುಲುತ್ತದೆ. ಅದೇ ಮಿಂಬಲೆಯ (internet) ಮೂಲಕ ಹಣ ಕಳಿಸುವುದಾದರೆ ಕೆಲವು ನಿಮಿಶಗಳಲ್ಲಿ ಮನೆಯಲ್ಲೇ ಕುಳಿತು ಕಳಿಸಬಹುದಾಗಿದೆ. ಇಲ್ಲಿ ಹೊತ್ತಿನ ಉಳಿತಾಯದ ಜೊತೆಗೆ ಕೆಲಸವೂ ಸುಳುವಾಗಿದೆ. ಆದರೆ ಈ ಎಲ್ಲಾ ಅನುಕೂಲಗಳೂ ಮಂದಿಗೆ ತಿಳಿಯುವಂತಹ ನುಡಿಯಲ್ಲಿ ಸಿಗಬೇಕಿದೆ, ಅಂದರೆ ಕನ್ನಡಿಗರಿಗೆ ಇವು ಕನ್ನಡದಲ್ಲಿ ಸಿಗಬೇಕಿದೆ. ಆಗ ಮಾತ್ರ ಹೆಚ್ಚಿನ ಜನರಿಂದ ಈ ತಂತ್ರಾಂಶಗಳ ಪರಿಣಾಮಕಾರಿ ಬಳಕೆ ಸಾದ್ಯ.

ಚೀನಾ, ಪ್ರಾನ್ಸ್, ಜರ್‍ಮನಿ, ಜಪಾನ್ ಹಾಗು ತೆಂಕಣ ಕೊರಿಯಾದಂತಹ ನಾಡುಗಳು ತಂತ್ರಗ್ನಾನದ ಬಳಕೆಯಲ್ಲಿ ನಮಗಿಂತ ಮುಂದಿವೆ. ಅದಕ್ಕೆ ಮುಕ್ಯ ಕಾರಣ ಅಲ್ಲಿನ ಮಂದಿಯ ನುಡಿಯಲ್ಲೇ ತಂತ್ರಾಂಶಗಳು ಸಿಗುತ್ತಿರುವುದು. ಯಾವುದೇ ಹೊಸ ತಂತ್ರಾಂಶ ಇಲ್ಲವೇ ತಂತ್ರಾಗ್ನನವು ಆ ದೇಶಗಳ ನುಡಿಗಳಲ್ಲೂ ಬರುವಾಗ ಕರ್‍ನಾಟಕದಲ್ಲಿ ಕನ್ನಡದಲ್ಲಿ ಇವು ಸಿಗುವಂತೆ ಮಾಡುವುದು ದೊಡ್ಡ ಕೆಲಸವೇನಲ್ಲ. ಕೇವಲ ಇಂಗ್ಲೀಶ್ ನುಡಿಯಲ್ಲಿ ದೊರಕುವ ಹೆಚ್ಚಿನ ಈ ತಂತ್ರಾಂಶಗಳು ಹೆಚ್ಚು ಹೆಚ್ಚು ಮಂದಿಯು ಬಳಸುವಂತಾಗುತ್ತಿಲ್ಲ. ಒಂದು ತಂತ್ರಾಂಶವನ್ನು ಬಳಸಲು ಬೇರೊಂದು ನುಡಿಯು ಒಂದು ಅಡ್ಡಗೋಡೆಯಾಗಿರುವುದಕ್ಕಿಂತ ಮಂದಿಯ ನುಡಿಯಲ್ಲೇ ಇವು ದೊರೆತರೆ ಒಳಿತು. ಇವುಗಳ ಬಳಕೆಯಿಂದ ಮಂದಿಯ ಬದುಕಿನ ಶಯ್ಲಿಯ ಮೇಲೆ ಆಗುವ ಒಳ್ಳೆಯ ಪರಿಣಾಮ ದೊಡ್ಡದಿದೆ.

(ಚಿತ್ರ: onlinewebtech.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: