ಜಿ8: ಒಂದು ಕಿರುಪರಿಚಯ
– ಚೇತನ್ ಜೀರಾಳ್.
ಇದೇ ಜೂನ್ 17 ಹಾಗೂ 18 ರಂದು ಬ್ರಿಟಿಶ್ ಪ್ರದಾನಿ ಡೇವಿಡ್ ಕ್ಯಾಮರೂನ್ ಅವರ ಮುಂದಾಳ್ತನದಲ್ಲಿ 39ನೇ ಜಿ8 ಸಬೆ ನಡೆಯಿತೆಂದು ಸುದ್ದಿಹಾಳೆಗಳಲ್ಲಿ ವರದಿಯಾಗಿದೆ. ಹಾಗಿದ್ರೆ ಜಿ8 ಅಂದ್ರೇನು? ಅದರ ಉದ್ದೇಶ ಏನು? ಅದನ್ನ ಯಾಕೆ ಹುಟ್ಟುಹಾಕಲಾಯಿತು? ಅನ್ನೋ ವಿಶಯಗಳನ್ನು ತಿಳಿದುಕೊಳ್ಳೋಣ.
ಜಿ8 ಅಂದ್ರೇನು?
ಜಿ8 ಅಂದ್ರೆ ಇಂಗ್ಲಿಶಿನಲ್ಲಿ Group of Eight (G8) ಎಂದು ಅರ್‍ತ. ಈ ಜಿ8 ಎನ್ನುವುದು ಜಗತ್ತಿನಲ್ಲೇ ದೊಡ್ಡ ಹಣಕಾಸು ಏರ‍್ಪಾಡನ್ನು ಹೊಂದಿರುವ 11 ದೇಶಗಳ ಪಯ್ಕಿ 8 ದೇಶಗಳು ಸೇರಿಕೊಂಡು ಮಾಡಿಕೊಂಡಿರುವ ವೇದಿಕೆ. ಈ ವೇದಿಕೆಲ್ಲಿ ಬ್ರಜಿಲ್, ಬಾರತ ಹಾಗೂ ಚೀನಾ ದೇಶಗಳು ಸೇರಿಲ್ಲ. ಈ ವೇದಿಕೆಯನ್ನು 1975 ರಲ್ಲಿ ಪ್ರಾನ್ಸ್ ದೇಶ ಹುಟ್ಟುಹಾಕಿತು. ಆ ವರ್‍ಶ ನಡೆದ ಸಬೆಗೆ ಆರು ದೇಶಗಳನ್ನು ಒಟ್ಟಿಗೆ ತರಲಾಯಿತು. ಪ್ರಾನ್ಸ್, ಇಟಲಿ, ಜರ್‍ಮನಿ, ಜಪಾನ್, ಯು.ಕೆ ಹಾಗೂ ಅಮೇರಿಕ ದೇಶಗಳು ಸೇರಿ ಜಿ6 ಎಂಬ ವೇದಿಕೆಯನ್ನು ಹುಟ್ಟುಹಾಕಿದವು. ನಂತರ ಕೆನಡಾ ದೇಶವು ಸೇರಿಕೊಂಡು ಅದನ್ನು ಜಿ7 ವೇದಿಕೆ ಎಂದು ಕರೆಯಲಾಯಿತು. ಜಿ7 ವೇದಿಕೆಯು ಜಗತ್ತಿನ 8 ಶ್ರೀಮಂತ ದೇಶಗಳ ಪಯ್ಕಿ 7 ದೇಶಗಳು ಸೇರಿಕೊಂಡು ಮಾಡಿಕೊಂಡಿದ್ದ ವೇದಿಕೆಯಾಗಿತ್ತು. 1997 ರಲ್ಲಿ ರಶ್ಯಾ ದೇಶವು ಸೇರಿಕೊಂಡಿದ್ದರಿಂದ ಈ ಗುಂಪಿಗೆ ಜಿ8 ಎಂದು ಹೆಸರಿಡಲಾಯಿತು. ಈ ವೇದಿಕೆಯಲ್ಲಿ ಈಗ ಯುರೋಪ್ ಒಕ್ಕೂಟವು ಸೇರಿಕೊಂಡಿದ್ದರೂ ಅದು ಸಬೆಗಳನ್ನ ಮಾಡುವ ಹಕ್ಕು ಹೊಂದಿಲ್ಲ.
ಇತ್ತೀಚಿಗೆ ಪ್ರಾನ್ಸ್ ಹಾಗೂ ಯುನಯ್ಟೆಡ್ ಕಿಂಗ್ಡಮ್ ದೇಶಗಳು ಇನ್ನೂ ಅಯ್ದು ದೇಶಗಳನ್ನು ಈ ಗುಂಪಿಗೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯ ಮಾಡುತ್ತಾ ಬಂದಿವೆ. ಸೇರಿಸಿಕೊಳ್ಳಲು ಬಯಸಿರುವ ದೇಶಗಳೆಂದರೆ ಬ್ರಜಿಲ್, ಚೀನಾ, ಬಾರತ, ಮೆಕ್ಸಿಕೋ ಮತ್ತು ತೆಂಕಣ ಆಪ್ರಿಕಾ. ಹಿಂದಿನ ಕೆಲವು ಸಬೆಗಳಲ್ಲಿ ಈ ಹೊಸ ದೇಶಗಳು ಅತಿತಿಗಳಾಗಿ ಪಾಲ್ಗೊಂಡಿವೆ. ಆದರೆ ಈಗಾಗಲೇ ಇರುವ ಜಿ-20 ವೇದಿಕೆಯು ಈ ಜಿ8 ನ ಸ್ತಾನವನ್ನು ಪಡೆಯುತ್ತಿರುವುದರಿಂದ ಈ ಬೇಡಿಕೆಗೆ ಅಶ್ಟು ಹೆಚ್ಚುಗಾರಿಕೆ ನೀಡಲಾಗಿಲ್ಲ.
ಜಿ8 ಯಾಕೆ ಹುಟ್ಟುಹಾಕಲಾಯಿತು?
1973 ರಲ್ಲಿ ಅರಬ್ ಪೆಟ್ರೋಲಿಯಂ ರಪ್ತು ದೇಶಗಳ ಒಕ್ಕೂಟವು ಪೆಟ್ರೋಲ್ ರಪ್ತನ್ನು ಪೂರ್‍ತಿಯಾಗಿ ನಿಲ್ಲಿಸಿಬಿಟ್ಟವು. ಇದಕ್ಕೆ ಮುಕ್ಯ ಕಾರಣ ಇಜಿಪ್ಟ್ ಮತ್ತು ಸಿರಿಯಾ ದೇಶಗಳು ಅರಬ್ ದೇಶಗಳ ನೆರವಿನಿಂದ ಇಸ್ರೇಲ್ ದೇಶದ ಮೇಲೆ ಒಮ್ಮಿಂದೊಮ್ಮೆಲೇ ದಾಳಿ ಮಾಡಿಬಿಟ್ಟವು. ಸಣ್ಣ ದೇಶವಾಗಿರುವ ಇಸ್ರೇಲನ್ನು ಈ ದೇಶಗಳು ಕೆಡವಿ ಹಾಕುವ ಹಂತದಲ್ಲಿದ್ದಾಗ, ಅಮೇರಿಕ ದೇಶವು ಇಸ್ರೇಲ್ ಗೆ ಬೇಕಾಗಿರುವ ಮದ್ದುಗುಂಡುಗಳನ್ನು ಪೂರಯ್ಸಲು ನಿರ್‍ದಾರ ಮಾಡಿತು. ಇದರಿಂದ ಸಿಟ್ಟುಗೊಂಡ ಈ ದೇಶಗಳು ಪೆಟ್ರೋಲ್ ನೀಡುವುದನ್ನು ಇದ್ದಕ್ಕಿದ್ದಂತೆ ನಿಲ್ಲಿಸಿಬಿಟ್ಟವು. ಈ ಕಾರಣದಿಂದ ಉಂಟಾಗಿದ್ದ ಸಮಸ್ಯೆಯ ಸಮಯದಲ್ಲಿ, ಜಗತ್ತಿನ ದೊಡ್ಡ ಕಯ್ಗಾರಿಕೆಗಳನ್ನು ಹೊಂದಿರುವ ಮಂದಿಯಾಳ್ವಿಕೆಯ ದೇಶಗಳು ಪ್ರಪಂಚದಲ್ಲಿ ನಡೆಯುತ್ತಿರುವ ಆಗುಹೋಗುಗಳ ಬಗ್ಗೆ ಚರ್‍ಚಿಸಲು ಒಂದು ಗುಂಪನ್ನು ಕಟ್ಟಿಕೊಳ್ಳಬೇಕು ಎನ್ನುವ ಹಮ್ಮುಗೆಯೊಂದು ರೂಪಗೊಂಡಿತು. ಆಗ ಅಮೇರಿಕ ದೇಶದ ಸೆಕ್ರೆಟರಿ ಆಪ್ ಸ್ಟೇಟ್ ಆಗಿದ್ದ ಜಾರ್‍ಜ್ ಶಲ್ಜ್ ಅವರು ಪಡುವಣ ಜರ್‍ಮನಿ (west Germany), ಪ್ರಾನ್ಸ್ ಹಾಗೂ ಬ್ರಿಟನ್ ದೇಶಗಳ ನಡುವಣ ಸಬೆಯೊಂದನ್ನು ಮಾರ್‍ಚ್ 25 1973ರಲ್ಲಿ ಕರೆದರು. ಇದೇ ಮುಂದಿನ ದಿನಗಳಲ್ಲಿ ಈ ಜಿ8 ಗುಂಪಿಗೆ ಹುಟ್ಟು ನೀಡಿತು. ನಂತರ ಈ ದೇಶಗಳ ಪಟ್ಟಿಗೆ ಜಪಾನ್ ದೇಶವನ್ನು ಸೇರಿಸಲಾಯಿತು. ಅದು ಜಿ5 ಎಂದು ಕರೆಸಿಕೊಂಡಿತು. ನಂತರ ಈ ಗುಂಪಿಗೆ ಕೆನಡಾ ದೇಶವೂ ಸೇರಿಕೊಂಡಿತು.
ಜಿ8 ಮಾಡುವ ಕೆಲಸಗಳೇನು?
ಪ್ರತಿ ವರ್‍ಶವೂ ಈ ವೇದಿಕೆಯ ಅದ್ಯಕ್ಶರು ಬದಲಾಗುತ್ತಾ ಇರುತ್ತಾರೆ. ಈ ಅದ್ಯಕ್ಶರು ವರ್‍ಶವೂ ನಡೆಯಬೇಕಾಗಿರುವ ಸಬೆಗಳ ಹಾಗೂ ಜಾಗಗಳ ಬಗ್ಗೆ ನಿರ್‍ದಾರ ಮಾಡುತ್ತಾರೆ. ಈ ಸಬೆಯಲ್ಲಿ ತಮ್ಮ ದೇಶಗಳಲ್ಲಿ ಇರುವ ಅತವಾ ಪ್ರಪಂಚದ ಸಮಸ್ಯೆಗಳ ಬಗ್ಗೆ ಚರ್‍ಚೆ ಮಾಡಲಾಗುತ್ತದೆ. ಇಲ್ಲಿ ಮಾತನಾಡಲಾಗುವ ವಿಶಯಗಳು ಈ ರೀತಿ ಇವೆ: ಮಂದಿ ಆರಯ್ಕೆ, ಕಾನೂನು ಪಾಲನೆ, ಕಾರ್‍ಮಿಕ, ಹಣಕಾಸು ಹಾಗೂ ಕೂಡಣದ ಏಳಿಗೆ, ಅಳವಿನ ಸೆಲೆಗಳು (energy resources), ಪರಿಸರ, ಹೆರನಾಡು ವ್ಯವಹಾರ (foreign affairs), ದಿಗಿಲುಕೋರತನ (terrorism) ಹಾಗೂ ವ್ಯಾಪಾರ. ಬೇರೆಬೇರೆ ನಾಡುಗಳು ತಗೆದುಕೊಳ್ಳುತ್ತಿರುವ ನಿರ್‍ದಾರಗಳ ಕುರಿತು ಮತ್ತು ಅದರಿಂದ ಜಗತ್ತಿನ ಮೇಲಾಗುವ ಪರಿಣಾಮಗಳ ಕುರಿತು ಚರ್‍ಚೆ ಮಾಡಲಾಗುತ್ತಿದೆ. ಈ ಸಾರಿಯ ಸಬೆಯಲ್ಲಿ ಮುಕ್ಯವಾಗಿ ಹಲವು ದೇಶಗಳ ನಡುವೆ ವ್ಯಾಪಾರದ ಏಳಿಗೆ, ತೆರಿಗೆ ತಪ್ಪಿಸುವಿಕೆ (tax evasion), ಆಡಳಿತದಲ್ಲಿ ತರಬೇಕಾಗಿರುವ ನೇರವಂತಿಕೆಯ ಬಗ್ಗೆ ಹಾಗೂ ಸಿರಿಯಾ ದೇಶದಲ್ಲಿ ಆಗುತ್ತಿರುವ ಬೆಳವಣೆಗೆಗಳ ಬಗ್ಗೆ ಮಾತುಕತೆ ನಡೆದಿದೆ.
ಮಂದಿಯಾಳ್ವಿಕೆ ಹೊಂದಿರುವ ಈ ದೇಶಗಳ ನಾಯಕರುಗಳು ಪ್ರತಿ ವರ್‍ಶವೂ ನಡೆಯುವ ಕೂಟಗಳಲ್ಲಿ ಎಲ್ಲಾ ದೇಶಗಳಿಗೂ ಒಳಿತು ತರಬಹುದಾದ ವಿಶಯಗಳ ಬಗ್ಗೆ ಚರ್‍ಚೆ ನಡೆಸುತ್ತಾರೆ ಹಾಗೂ ಈ ವಿಶಯಗಳು ಹಲ ದೇಶಗಳಲ್ಲಿ ಜಾರಿಗೆ ತರಲು ವೇದಿಕೆಯನ್ನ ಒದಗಿಸುತ್ತಾರೆ.
ಜಿ8 ವಿರುದ್ದ ಪ್ರತಿಬಟನೆಗಳು
ಜಿ8 ಸಬೆಯ ವಿರುದ್ದ ಪ್ರತೀ ಬಾರಿಯೂ ಪ್ರತಿಬಟನೆ ಹಾಗೂ ಈ ಸಬೆಯ ಇರುವಿಕೆಯ (existence) ಬಗ್ಗೆ ಚರ್‍ಚೆಗಳು ನಡೆಯುತ್ತಲೇ ಬಂದಿವೆ. ಇದರಲ್ಲಿ ಮುಕ್ಯವಾಗಿ ಜಿ8 ದೇಶಗಳು ತಳೆದಿರುವ ಕ್ಯಾಪಿಟಲಿಸ್ಟ್ ದೋರಣೆಯ ಬಗ್ಗೆ ವಿರೋದ ಬರುತ್ತಲೇ ಇದೆ. ಇದರ ಜೊತೆಗೆ ಈ ಜಿ8 ದೇಶಗಳ ನಾಯಕರೆಲ್ಲರೂ ಕಾಳಗವನ್ನು ಪೊರೆಯುವವರು ಎಂದೂ, ಜಗತ್ತಿನಲ್ಲಿನ ಹಸಿವಿನ ಬಗ್ಗೆ ಮಾತನಾಡುತ್ತಾರೆ ಆದರೆ ಇದರ ಬಗ್ಗೆ ಯಾವುದೇ ಕೆಲಸ ಮಾಡುವುದಿಲ್ಲ ಎಂದೂ, ಗ್ಲೋಬಲ್ ವಾರ್‍ಮಿಂಗ್ ಬಗ್ಗೆ ಮಾತನಾಡುವ ದೇಶಗಳ ನಾಯಕರೇ ಕರಿ ಕಾರದಿರುವ (carbon emission prevention) ಕ್ಯೋಟೋ ಒಪ್ಪಂದಕ್ಕೆ ಸಹಿ ಹಾಕದೇ ಇರುವುದೂ, ಜಾಗತೀಕರಣಕ್ಕೆ ಪ್ರೋತ್ಸಾಹ ನೀಡುತ್ತಿರುವುದೂ, ಮುಂತಾದ ಹಲವು ವಿಶಯಗಳ ಬಗ್ಗೆ ಹಲವಾರು ದೇಶಗಳಲ್ಲಿ ಬಗ್ಗೆ ಪ್ರತಿಬಟನೆಗಳು ನಡೆಯುತ್ತಲೇ ಇವೆ. ಮೊನ್ನೆ ನಡೆದ ಸಬೆಗೂ ಪ್ರತಿಬಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದರು ಎನ್ನುತ್ತವೆ ಸುದ್ದಿಹಾಳೆಗಳು.
ಮಾಹಿತಿ ಸೆಲೆ: ವಿಕಿಪೀಡಿಯಾ
ಚಿತ್ರ: uk.news.yahoo.com, www.ibtimes.com
ಇತ್ತೀಚಿನ ಅನಿಸಿಕೆಗಳು