ಶಬ್ದಮಣಿದರ್ಪಣದಲ್ಲಿ ತಳಮಟ್ಟದ ತಪ್ಪುಗಳು – 7
{ಕಳೆದ ಬರಹದಲ್ಲಿ: ಶಬ್ದಮಣಿದರ್ಪಣದಲ್ಲಿ ತಳಮಟ್ಟದ ತಪ್ಪುಗಳು – 6: ಸಂಸ್ಕ್ರುತದ ಎಸಕಪದರೂಪಗಳಲ್ಲಿಲ್ಲದ ಹೊತ್ತಿನ ಒಟ್ಟನ್ನು ಮತ್ತು ಗುರ್ತವ್ಯತ್ಯಾಸವನ್ನು ಹಳೆಗನ್ನಡದ ಎಸಕಪದರೂಪಗಳಲ್ಲಿ ಕಾಣಲು ಶಬ್ದಮಣಿದರ್ಪಣಕ್ಕೆ ಸಾದ್ಯವಾಗದಿದ್ದುದೇ ಮೇಲಿನ ವಿಚಿತ್ರ ಹೇಳಿಕೆಗೆ ಕಾರಣವಾಗಿದೆ…}
(8) ಸೊಲ್ಲುಗಳನ್ನು ಜೋಡಿಸುವುದು:
ಎರಡು ಸೊಲ್ಲು(ವಾಕ್ಯ)ಗಳನ್ನು ಜೋಡಿಸುವುದಕ್ಕಾಗಿ ಹಳೆಗನ್ನಡದಲ್ಲಿ ಜೋಡಿಸುವ ಎಸಕರೂಪಗಳನ್ನು ಬಳಸಲಾಗುತ್ತದೆ; ಒಂದು ಎಸಕ ಇನ್ನೊಂದು ಎಸಕಕ್ಕಿಂತ ಮೊದಲು ನಡೆದಿದೆ (ಮೆಚ್ಚಿ ಪೇಳ್ದಂ, ವಂದು ಕಂಡಂ), ಬಳಿಕ ನಡೆದಿದೆ (ಕಾಣಲ್ ಪೋದಂ, ಗೆಯ್ಯಲ್ ಬಂದೆವು), ಇಲ್ಲವೇ ಅವರೆಡೂ ಒಟ್ಟಿಗೆ ನಡೆದಿವೆ (ಅಟ್ಟುತ್ತುಂ ಬಂದಂ, ನುಡಿಯುತ್ತುಂ ಪೋದಂ) ಎಂಬುದನ್ನು ತಿಳಿಸಲು ಇಂತಹ (ಎಂದರೆ, ಮೆಚ್ಚಿ, ಕಾಣಲ್, ಮತ್ತು ಅಟ್ಟುತ್ತುಂ ಎಂಬಂತಹ) ಮೂರು ಬಗೆಯ ಎಸಕರೂಪಗಳನ್ನು ಬಳಸಲಾಗುತ್ತದೆ; ಇದಲ್ಲದೆ, ಒಂದು ಎಸಕ ನಡೆಯದೆ ಇನ್ನೊಂದು ನಡೆದಿದೆ ಇಲ್ಲವೇ ನಡೆಯಲಿದೆ ಎಂಬುದನ್ನು ತಿಳಿಸಲು ಇನ್ನೊಂದು (ನಾಲ್ಕನೇ ಬಗೆಯ) ಜೋಡಿಸುವ ರೂಪವೂ ಬಳಕೆಯಲ್ಲಿದೆ (ಉಸಿರದೆ ಕುಳ್ಳಿರ್ದಂ, ಎವೆಯಿಕ್ಕದೆ ನೋೞ್ಪಂ).
ಇವುಗಳಲ್ಲಿ ಮೊದಲಿನ ಮೂರು (ಮೊದಲು, ಬಳಿಕ ಮತ್ತು ಒಟ್ಟಿಗೆ ಎಂಬುದನ್ನು ತಿಳಿಸುವ) ರೂಪಗಳು ಆಡುಗನ ಸಮಯಕ್ಕಿಂತ ಮೊದಲೂ ಬರಬಲ್ಲುವು ಮತ್ತು ಬಳಿಕವೂ ಬರಬಲ್ಲುವು (ಎತ್ತುಗೆಗಾಗಿ, ಮೆಚ್ಚಿ ಪೇಳ್ವೆಂ ಎಂಬ ಸೊಲ್ಲಿನಲ್ಲಿ ಮೆಚ್ಚುವ ಎಸಕ (ಮತ್ತು ಹೇಳುವ ಎಸಕ) ಆಡುಗನ ಸಮಯದ ಬಳಿಕ ನಡೆಯುತ್ತದೆ); ಹಾಗಾಗಿ, ಇವನ್ನು ಹಿಂಬೊತ್ತಿನ (ಬೂತ), ಮುಂಬೊತ್ತಿನ (ಬವಿಶ್ಯತ್), ಮತ್ತು ಈಪೊತ್ತಿನ (ವರ್ತಮಾನ) ರೂಪಗಳೆಂದು ಕರೆಯುವುದು ಸರಿಯಲ್ಲ. ಇದಲ್ಲದೆ, ಇವುಗಳ ಮೂಲಕ ಜೋಡಿಸಿರುವ ಸೊಲ್ಲುಗಳೆರಡರಲ್ಲೂ ಮಾಡುಗರು ನಡೆಸುವ ಎಸಕಗಳನ್ನು ತಿಳಿಸಲಾಗಿದೆಯಾದರೆ, ಆ ಎರಡು ಎಸಕಗಳಿಗೂ ಮಾಡುಗ ಒಬ್ಬನೇ ಆಗಿರಬೇಕೆಂಬ ಕಟ್ಟುಪಾಡೂ ಇದೆ. ಎಸಕಗಳ ಮಾಡುಗರು ಬೇರೆ ಬೇರಾಗಿರುವಲ್ಲಿ ಬಳಸುವುದಕ್ಕಾಗಿ ಬೇರೆಯೇ ಒಂದು ಜೋಡಿಸುವ ರೂಪ ಬಳಕೆಯಲ್ಲಿದೆ (ಪಾಂಡ್ಯನ್ ತೋಮರದಿಂದ ಇಡೆ, ಗುರುತನೂಜಂ ಎಡೆಯೊಳ್ ಕಡಿದಂ).
ಒಂದು ಎಸಕಕ್ಕೆ ಇನ್ನೊಂದು ಎಸಕ ಬೇಡಿಕೆ ಎಂಬುದನ್ನು ತಿಳಿಸುವುದಕ್ಕಾಗಿಯೂ ಜೋಡಿಸುವ ಎಸಕರೂಪವನ್ನು ಬಳಸಲಾಗುತ್ತದೆ; ಇಂತಹ ಕಡೆಗಳಲ್ಲಿ ಬೇಡಿಕೆಯಾಗಿರುವ ಎಸಕವನ್ನು ತಿಳಿಸುವ ಪದದ ಪರಿಚೆರೂಪಕ್ಕೆ ಒಡೆ ಎಂಬ ಒಟ್ಟನ್ನು ಸೇರಿಸಲಾಗುತ್ತದೆ (ಪತಿ ಸತ್ತೊಡೆ ನರಕಂಗಳೊಳ್ ಅೞ್ಗುಗುಂ, ರಾಜನಪ್ಪೊಡೆ ಕುಡುವೆಂ, ಪೇೞದೊಡೆ ಪೋಗದಿರ್). ಈ ಎಸಕರೂಪದಲ್ಲಿ ಬರುವ ದ್ ಮತ್ತು ವ್(ಪ್) ಒಟ್ಟುಗಳಿಗೆ ಬೇರೆಯೇ ಹುರುಳಿರುವುದನ್ನು ಕಾಣಬಹುದು: ಸಾಮಾನ್ಯವಾಗಿ ಇವೆರಡೂ ಮುಂಬೊತ್ತಿನ ಎಸಕಗಳನ್ನೇ ತಿಳಿಸುತ್ತವೆ; ಆದರೆ, ಬೇಡಿಕೆಯನ್ನು ತಿಳಿಸುವ ಎಸಕರೂಪದಲ್ಲಿ ದ್ ಒಟ್ಟು ಬಂದಿದೆಯಾದರೆ, ಅದು ತಿಳಿಸುವ ಎಸಕ ಅದನ್ನು ಅವಲಂಬಿಸಿರುವ ಎಸಕಕ್ಕಿಂತ ಮೊದಲೇ ನಡೆದಿರಬೇಕೆಂಬ ಹುರುಳು ಸಿಗುತ್ತದೆ, ಮತ್ತು ವ್ ಒಟ್ಟು ಬಂದಿದೆಯಾದರೆ, ಅದನ್ನು ಅವಲಂಬಿಸಿರುವ ಎಸಕದ ಬಳಿಕ ನಡೆದರೆ ಸಾಕೆಂಬ ಹುರುಳು ಸಿಗುತ್ತದೆ. (ಪತಿ ಸತ್ತೊಡೆ ನರಕಂಗಳೊಳ್ ಅೞ್ಗುಗುಂ ಎಂಬಲ್ಲಿ ಪತಿ ಸಾಯುವ ಎಸಕ ಅದನ್ನು ಅವಲಂಬಿಸಿರುವ ನರಕಗಳಲ್ಲಿ ಮುಳುಗುವ ಎಸಕಕ್ಕಿಂತ ಮೊದಲು ನಡೆದಿರಬೇಕಾಗುತ್ತದೆ; ಆದರೆ, ರಾಜನಪ್ಪೊಡೆ ಕುಡುವೆಂ ಎಂಬಲ್ಲಿ ರಾಜನಾಗುವ ಎಸಕ ಅದನ್ನು ಅವಲಂಬಿಸಿರುವ ಕೊಡುವ ಎಸಕದ ಬಳಿಕ ನಡೆಯಬಲ್ಲುದು).
ಸಂಸ್ಕ್ರುತದಲ್ಲಿಯೂ ಎರಡು ಸೊಲ್ಲುಗಳನ್ನು ಜೋಡಿಸುವುದಕ್ಕಾಗಿ ಎಸಕರೂಪಗಳನ್ನು ಬಳಸಲಾಗುತ್ತದೆ; ಆದರೆ, ಇದಕ್ಕಾಗಿ ಬಳಕೆಯಾಗುವ ಎಸಕರೂಪಗಳು ಹಲವು ಬಗೆಯವಾಗಿದ್ದು, (ಅರಣ್ಯೇ ಚರನ್ ಮೃಗಮೇಕಂ ಅಪಶ್ಯಂ, ಭೋಜನಂ ಕೃತ್ವಾ ಗ್ರಾಮಂ ಗತಃ, ತಸ್ಮಿನ್ ರಾಜ್ಞಿ ಸತಿ ಕಃ ಭೂಮಿಂ ಜಯೇತ್, ವೇತ್ತಿ ಚೇತ್ ಭವಾನ್ ವಕ್ತು), ಅವುಗಳ ಹಿಂದೆ ಹಳೆಗನ್ನಡದಲ್ಲಿರುವಂತಹ ಅಚ್ಚುಕಟ್ಟು ಕಾಣಿಸುವುದಿಲ್ಲ. ಸೊಲ್ಲುಗಳನ್ನು ಜೋಡಿಸುವ ಈ ಹೊಲಬನ್ನು ಅದು ದ್ರಾವಿಡ ನುಡಿಗಳಿಂದ ಎರವಲು ಪಡೆದುದೇ ಇದಕ್ಕೆ ಕಾರಣವಿರಬೇಕೆಂದು ಹೇಳಲಾಗುತ್ತದೆ. ಇಂಡೋ-ಯುರೋಪಿಯನ್ ಮೂಲನುಡಿಯಿಂದ ಅದು ಈ ಹೊಲಬನ್ನು ಪಡೆದಿಲ್ಲ.
ಹಾಗಾಗಿ, ಹಳೆಗನ್ನಡದ ಜೋಡಿಸುವ ರೂಪಗಳ ಹಿಂದಿರುವ ಅಚ್ಚುಕಟ್ಟನ್ನು ಗಮನಿಸುವಲ್ಲಿ ಶಬ್ದಮಣಿದರ್ಪಣ ಸೋತುಹೋಗಿದೆ; ಇದಲ್ಲದೆ, ಈ ಪದರೂಪಗಳ ಬಳಕೆಯ ಕುರಿತಾಗಿ ಕೆಲವು ತಪ್ಪು ಹೇಳಿಕೆಗಳನ್ನೂ ಅದು ಕೊಟ್ಟಿದ್ದು, ಅದರಲ್ಲಿ ಗೊಂದಲವೇ ಕಾಣಿಸುತ್ತದೆ.
ಮೇಲೆ ಕೊಟ್ಟಿರುವ ಎಂಟು ತಳಮಟ್ಟದ ವ್ಯತ್ಯಾಸಗಳು ಮಾತ್ರವಲ್ಲದೆ ಬೇರೆಯೂ ಹಲವು ತಳಮಟ್ಟದ ವ್ಯತ್ಯಾಸಗಳು ಹಳೆಗನ್ನಡ ಮತ್ತು ಸಂಸ್ಕ್ರುತ ವ್ಯಾಕರಣಗಳ ನಡುವೆ ಇವೆ. ಇವುಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ನನ್ನ ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? ಎಂಬ ಪುಸ್ತಕದಲ್ಲಿ ನೋಡಬಹುದು. ಇಂತಹ ವ್ಯತ್ಯಾಸಗಳಲ್ಲಿ ಹೆಚ್ಚಿನವನ್ನೂ ಗಮನಿಸದ, ಮತ್ತು ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳನ್ನು ಹಳೆಗನ್ನಡದ ಪದ, ಪದರೂಪ, ಮತ್ತು ಸೊಲ್ಲುಗಳಲ್ಲಿ ಕಾಣಲು ಪ್ರಯತ್ನಿಸುವ ಶಬ್ದಮಣಿದರ್ಪಣ ‘ಹಳೆಗನ್ನಡದ ಒಳ್ಳೆಯ ವ್ಯಾಕರಣ’ವೆಂದೆನಿಸಲು ಸಾದ್ಯವೇ ಇಲ್ಲ.
ಇತ್ತೀಚಿನ ಅನಿಸಿಕೆಗಳು