ಹಿಂದೆ ಹೋದ ದಿನಗಳು
– ಬರತ್ ಕುಮಾರ್.
ಹಿಂದೆ ಹೋದ ದಿನಗಳು
ಮುಂದೆ ಬಾರದ ಚಣಗಳು
ತಂದೆತಾಯಿಯಕ್ಕರೆಯ ಮಾತುಗಳು
ತಂದಾದ ಡೊಂಕಾದ ಗಟ್ಟಿಯುಂಕುಗಳು
ನೆಂದ ಹೊಸಬಟ್ಟೆಗಳು
ಹಿಂದೆ ಹೋದ ದಿನಗಳು
ಮುಂದೆ ಬಾರದ ಚಣಗಳು
ಮಿಂದು ನಲಿದು ಕಿರುಗಾಲುವೆಯಲ್ಲಿ
ಮಂದಿ ಮಾತಿಗೆ ಕುಂದದ ಹುರುಪು
ಚೆಂದದ ಹುಡುಗಾಟ;ಅಂದದ ಅರಳುವಾಟ
ಹಿಂದೆ ಹೋದ ದಿನಗಳು
ಮುಂದೆ ಬಾರದ ಚಣಗಳು
ಎಂದೂ ಹೀಗೆ ಇರಲೆಳಸುವ ಬಾವವ
ಇಂದು ಕೊಂದೀಗ ದೊಡ್ಡವರಾಗಿ
ಬೆಂದು ಜಂಜಾಟ-ತೊಡರಾಟಗಳಲಿ
ಹಿಂದೆ ಹೋದ ದಿನಗಳು
ಮುಂದೆ ಬಾರದ ಚಣಗಳು
ತಂದು ನಿಲ್ಲಿಸೀ ಬಾಳ ತಿರುವಿನಲಿ
ಒಂದಾಗಿ ನಗುತಿದೆ ಕಾಲವು
ಎಂದಿಗೂ ಹಿಂದಿರುಗಿ ಹೋಗಲಾರೆಂದು
ಹಿಂದೆ ಹೋದ ದಿನಗಳು
ಮುಂದೆ ಬಾರದ ಚಣಗಳು
ಗೋಂದಿನಂತಿದ್ದ ನಂಟುಗಳು
ಹೊಂದದೆ ದೂರ ಸರಿದವು
ಕೆಂದದೆ ಬಾಡಿದವು ಕಾಲದ ಉರಿಬಿಸಿಲಿನಲ್ಲಿ
ಹಿಂದೆ ಹೋದ ದಿನಗಳು
ಮುಂದೆ ಬಾರದ ಚಣಗಳು
(ಚಿತ್ರ: http://www.wallcoo.net)
ಇತ್ತೀಚಿನ ಅನಿಸಿಕೆಗಳು