ಯಡಿಯೂರಪ್ಪ ಮತ್ತೆ ಬಿಜೆಪಿಗೆ?

ಚೇತನ್ ಜೀರಾಳ್.

bs_yeddyurappa_new

ಕರ್‍ನಾಟಕದಲ್ಲಿ ಈ ಸಾರಿ ನಡೆದ ವಿದಾನಸಬೆ ಚುನಾವಣೆಯಲ್ಲಿ ಬಿಜೆಪಿ ಪಕ್ಶದಿಂದ ಹೊರಬಂದು ಹೊಸದೊಂದು ಪಕ್ಶ ಹುಟ್ಟು ಹಾಕಿ, ಆಡಳಿತ ಪಕ್ಶವಾಗಿದ್ದ ಬಿಜೆಪಿ ಯನ್ನು ಮೂರನೇ ಜಾಗಕ್ಕೆ ತಳ್ಳುವಂತೆ ಮಾಡಿದ ಯಡಿಯೂರಪ್ಪನವರ ಬಗ್ಗೆ ಈಗಾಗಲೇ ನಿಮಗೆ ಗೊತ್ತಿದೆ. ಕರ್‍ನಾಟಕ ಜನತಾ ಪಕ್ಶವನ್ನು ಹುಟ್ಟು ಹಾಕಿದ ಯಡಿಯೂರಪ್ಪ, ಇನ್ನೆಂದಿಗೂ ಬಿಜೆಪಿ ಸೇರುವುದಿಲ್ಲ ಎಂದು, ಬಿಜೆಪಿಯನ್ನು ಸೋಲಿಸುವುದೇ ತಮ್ಮ ಮೊದಲ ಗುರಿಯೆಂದು, ಕೆಜೆಪಿ ಪಕ್ಶ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಸರಿಮಾಡಲು ಶುರುಮಾಡುತ್ತಿದ್ದೇನೆ ಎಂದು ಹೇಳಿದ್ದು ನಮ್ಮ ಮನಸ್ಸಿನಿಂದ ಇನ್ನೂ ಮಾಸಿಲ್ಲ.

ಕೇವಲ ಆರು ತಿಂಗಳಲ್ಲಿ ಚುನಾವಣೆಯನ್ನು ಎದುರಿಸಿ 6 ಸೀಟುಗಳನ್ನು ಗೆದ್ದು 10% ಓಟು ಪಡೆದು, ಬಿಜೆಪಿ ಪಕ್ಶ ಹಿಂದುಳಿಯುವಂತೆ ಮಾಡಿದ್ದರು. ಕರ್‍ನಾಟಕದ ಮಟ್ಟಿಗೆ ಹೊಸದೊಂದು ಪ್ರಾದೇಶಿಕ ಪಕ್ಶವನ್ನು ಕಟ್ಟುವ ಕನಸೊಂದನ್ನು ಹುಟ್ಟು ಹಾಕಿದ್ದ ಯಡಿಯೂರಪ್ಪ ಈಗ ಸದ್ದಿಲ್ಲದೇ ಮತ್ತೆ ಬಿಜೆಪಿ ಪಕ್ಶಕ್ಕೆ ವಾಪಸ್ ಮರಳುತ್ತಿರುವ ಬಗ್ಗೆ ಹಲವಾರು ಸುದ್ದಿಗಳು ಹರಿದಾಡತೊಡಗಿವೆ.

ಕೆಜೆಪಿಯನ್ನು ಬಿಜೆಪಿ ಜೊತೆಗೆ ಸೇರಿಸುತ್ತಾರಾ?

ಬಿಜೆಪಿಯಿಂದ ಅವಮಾನ ಮಾಡಿಸಿಕೊಂಡಿದ್ದ ಯಡಿಯೂರಪ್ಪ ಸಿಟ್ಟಾಗಿ ಹೊರಬಂದಾಗ ಅವರ ಮುಂದಿನ ಹಾದಿಯ ಬಗ್ಗೆ ನಾಡು ಎದುರು ನೋಡುತ್ತಿದ್ದಾಗ ಎಲ್ಲರೂ ಅಚ್ಚರಿಪಡುವಂತೆ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ಹೊಸದೊಂದು ಪ್ರಾದೇಶಿಕ ಪಕ್ಶ ಕಟ್ಟುತೇನೆ ಅಂದಾಗ ನಾಡಿನ ಜನರು ಇದನ್ನ ಬರಮಾಡಿಕೊಂಡರು, ಇದರ ಪಲವಾಗಿಯೇ ಈ ಸಾರಿ ನಡೆದ ವಿದಾನಸಬೆಯಲ್ಲಿ 6 ಸೀಟುಗಳನ್ನು ಗೆಲ್ಲುವಂತಾಯಿತು. ಇದರ ಜೊತೆ ಜೊತೆಗೆ ಸುಮಾರು ನಲವತ್ತು ಕಡೆ ಬಿಜೆಪಿ ಸೋಲುವಂತೆ ಕೆಜೆಪಿ ಪಯ್ಪೋಟಿ ನೀಡಿತು. ಇದನ್ನು ಕಂಡ ಜನರು ಕರ್‍ನಾಟಕ್ಕೆ ಒಂದು ಪ್ರಾದೇಶಿಕ ಪಕ್ಶ ಹುಟ್ಟಿದ ಹಾಗಾಯಿತು ಎಂದು ಮಾತಾಡಿಕೊಂಡರು.

ಆದರೆ ಇದರಿಂದ ಹೆದರಿರುವ ಬಿಜೆಪಿಯ ಹಲವು ನಾಯಕರು ಮುಂದಿನ ಚುನಾವಣೆಯನ್ನು ಎದುರಿಸಲು ಯಡಿಯೂರಪ್ಪ ತಮಗೆ ಬೇಕೇ ಬೇಕು ಎಂದು ಪಟ್ಟು ಹಿಡಿದು, ಯಡಿಯೂರಪ್ಪನವರನ್ನು ತಿರುಗಿ ಕರೆತರಲು ದೊಡ್ಡ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದಾರೆ. ಇದಕ್ಕೆ ಯಡಿಯೂರಪ್ಪನವರು ಬಗ್ಗುವ ಹಾಗೆ ಕಾಣುತ್ತಿದೆ ಎನ್ನುತ್ತಿವೆ ವರದಿಗಳು. ಹಾಗಿದ್ರೆ ಕನ್ನಡಿಗರಿಗೆ ಕೇಂದ್ರದಿಂದ ಅನುದಾನ, ರಸ್ತೆ, ನದಿ ನೀರು ಹಂಚಿಕೆ, ರಯ್ಲ್ವೆ, ವಿದ್ಯುತ್, ಗಡಿ ಮುಂತಾದ ವಿಶಯಗಳಲ್ಲಿ ಆಗಿರುವ ಅನ್ಯಾಯಗಳನ್ನು ಸರಿಮಾಡುವುದು, ಇತರೆ ರಾಜ್ಯಗಳಂತೆ ನಮ್ಮ ನಾಡಿನಲ್ಲೂ ಒಂದು ಗಟ್ಟಿ ಪ್ರಾದೇಶಿಕ ಪಕ್ಶ ಕಟ್ಟುತ್ತೇವೆ ಎಂದು ಹೇಳಿ ಕಟ್ಟಿದ್ದ ಪಕ್ಶದ ಮುಂದಿನ ಗತಿ ಏನು?

ಈಗ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳು ಸರಿಯಾಗಿವೆಯೇ? ಅತವಾ ಬಿಜೆಪಿ ಸೇರಿದ ತಕ್ಶಣ ಈ ಸಮಸ್ಯೆಗಳು ಪರಿಹಾರ ಅಗುತ್ತವೆಯೇ? ಮತ್ತೆ ಬಿಜೆಪಿಗೆ ಸೇರಲು ಹೊರಟಿರುವ ಯಡಿಯೂರಪ್ಪನವರ ತಾಳ್ಮೆ ಇಶ್ಟು ಕಡಿಮೆ ಇದೆಯೇ? ಅತವಾ ಅವರಿಗೆ ತಮ್ಮ ಶಕ್ತಿ ತೋರಿಸಲು ಮಾತ್ರ ಪಕ್ಶ ಕಟ್ಟಿದ್ದರೇ?

ಮುಂದೆ ಯಡಿಯೂರಪ್ಪನವರ ಗತಿ ಏನು?

ಒಂದು ವೇಳೆ ಯಡಿಯೂರಪ್ಪ, ಬಿಜೆಪಿ ತೋರಿಸುತ್ತಿರುವ ಆಸೆ, ಆಮಿಶಗಳಿಗೆ ಮರುಳಾಗಿ ವಾಪಸ್ ಹೋದರೆ ಅವರ ಮುಂದಿನ ಗತಿ ಏನು? ಈ ಸದ್ಯಕ್ಕೆ ಯಡಿಯೂರಪ್ಪನವರಿಗೆ ಕೆಂಪು ಹಾಸಿನ ಬರುವೇ ಸಿಗಬಹುದು, ಪಕ್ಶದಲ್ಲಿ ದೊಡ್ಡ ಪದವಿಯೇ ಸಿಗಬಹುದು, ತಾವು ಕರೆದುಕೊಂಡು ಬರುವ ಜನರಿಗೂ ಒಳ್ಳೆಯ ಜವಾಬ್ದಾರಿ ಸಿಗಬಹುದು. ಆದರೆ ಅದು ಎಲ್ಲಿಯವರೆಗೂ ಇರುತ್ತದೆ ಅನ್ನೋದು ಈಗ ಇರುವ ಕೇಳ್ವಿ? ಬಿಟ್ಟು ಹೋದ ಎಂಟು ತಿಂಗಳ ನಂತರ ಅದೂ ಪಕ್ಶಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಯಾದ ನಂತರ ಕರೆತರುವುದಕ್ಕೆ ಇರುವ ಕಾರಣವೇನು? ಉತ್ತರ ಸುಲಬವಾಗಿದೆ. ಮುಂದೆ ಬರಲಿರುವ ಲೋಕಸಬೆ ಚುನಾವಣೆ!!!

ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಶ ಬ್ರಶ್ಟಾಚಾರದಿಂದ ಈ ಸಾರಿ ಜನರ ನಂಬಿಕೆ ಕಳೆದುಕೊಂಡಿದೆ, ಹಾಗಾಗಿ ಬಿಜೆಪಿಗೆ ಒಳ್ಳೆಯ ಅವಕಾಶವಿದ್ದು, ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು ಅನ್ನೋದು ಕೇಂದ್ರ ಬಿಜೆಪಿಯ ಯೋಚನೆ. ಇದರ ಬಾಗವಾಗಿಯೇ ಯಡಿಯೂರಪ್ಪನವರನ್ನ ಬಿಜೆಪಿಗೆ ಮತ್ತೆ ಕರೆತರುವ ಪ್ರಯತ್ನ. ಯಡಿಯೂರಪ್ಪ ವಾಪಸ್ ಬಿಜೆಪಿಗೆ ಬಂದರೂ ಅವರ ಮುಂದಾಳ್ತನ ಕೇವಲ ಚುನಾವಣೆ ನಡೆಯುವವರೆಗೆ ಮಾತ್ರ ಅನ್ನೋ ಹಾಗೆ ಕಾಣಿಸುತ್ತಿದೆ. ಇದಾದ ನಂತರ ಯಡಿಯೂರಪ್ಪನವರನ್ನು ಮೂಲೆಗೆ ತಳ್ಳುವ ಕೆಲಸ ಬಿಜೆಪಿ ಮಾಡಲಿದೆ. ಈ ಹಿಂದೆ ಇದೇ ರೀತಿ ಪಕ್ಶ ಬಿಟ್ಟು ಹೋಗಿದ್ದ ಉಮಾ ಬಾರತಿ, ಕಲ್ಯಾಣ ಸಿಂಗ್ ಮುಂತಾದವರಿಗೆ ಈಗ ಬಿಜೆಪಿಯಲ್ಲಿ ಸಿಗುತ್ತಿರುವ ಮನ್ನಣೆಯೇ ಸಾಕ್ಶಿ!

ಬೇಕಾದಾಗ ಹೊರಗಟ್ಟಿದ್ದಾವೆ ಈ ಪಕ್ಶಗಳು!

ಹಾಗೆ ನೋಡಿದರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಶಗಳು ತಮಗೆ ಬೇಕಾದಾಗ ತಮ್ಮ ಪಕ್ಶದ ನಾಯಕರನ್ನು ಹೊರಹಾಕಿದ್ದಿದೆ. ಹಿಂದೆ ಇಂತಹ ಅನೇಕ ಎತ್ತುಗೆಗಳು ನಮ್ಮ ಮುಂದೆಯೇ ಇವೆ. ಈ ಹಿಂದೆ ಕರ್‍ನಾಟಕದ ದೇವರಾಜು ಅರಸು, ಬಂಗಾರಪ್ಪನವರನ್ನು ಹೊರಗಟ್ಟಿದ್ದು, ಬಿಜೆಪಿಯಿಂದ ಯಡಿಯೂರಪ್ಪನವರನ್ನು ಅಟ್ಟಿದ್ದು ನಮ್ಮ ಮುಂದೆಯೇ ಇವೆ.

ಗಮನಿಸಬೇಕಾದ ಅಂಶವೆಂದರೆ ಕಾಂಗ್ರೆಸ್ ನ ಈ ಇಬ್ಬರೂ ಮುಂದಾಳುಗಳು ಪ್ರಾದೇಶಿಕ ಪಕ್ಶಗಳನ್ನು ಹುಟ್ಟು ಹಾಕಿದ್ದರು. ಇದರಲ್ಲಿ ಬಂಗಾರಪ್ಪನವರ ಕರ್‍ನಾಟಕ ಕಾಂಗ್ರೆಸ್ ಪಕ್ಶ ದೊಡ್ಡ ಮಟ್ಟದಲ್ಲಿ ಗೆಲವು ಪಡೆದಿತ್ತು. ಆದರೆ ಪಕ್ಶ ಕಟ್ಟಿದ ನಂತರ ಈ ಮುಂದಾಳುಗಳು ಹೆಚ್ಚಿನ ತಾಳ್ಮೆ ತೋರಿಸಲಿಲ್ಲ. ಪಕ್ಶ ಬಿಟ್ಟ ಕಡಿಮೆ ಹೊತ್ತಿನಲ್ಲೇ ತಮ್ಮ ಪಕ್ಶಗಳಿಗೆ ಹೋಗಿ ವಾಪಸ್ ಸೇರಿದರು. ಆದರೆ ಮುರಿದು ಹೋಗಿರುವ ನಂಟು ಕೂಡುವುದಾದರೂ ಹೇಗೆ? ಈ ಪಕ್ಶಗಳು ಮುಂಚಿನ ಹಾಗೆ ಈ ಮುಂದಾಳುಗಳಿಗೆ ಮುಂದಾಳ್ತನ ನೀಡಲೇ ಇಲ್ಲ. ಹಾಗಾಗಿ ಪಕ್ಶದಲ್ಲಿ ಇದ್ದೂ ಇಲ್ಲದವರಂತೆ ಆಗಿಬಿಟ್ಟಿದ್ದರೂ.

ಯಡಿಯೂರಪ್ಪನವರೂ ಕೆಜೆಪಿ ಹುಟ್ಟು ಹಾಕಿ ತಕ್ಕ ಮಟ್ಟಿಗೆ ಗೆಲುವನ್ನು ಪಡೆದಿದ್ದಾರೆ. ಈಗ ಮತ್ತೆ ಬಿಜೆಪಿಗೆ ವಾಪಸ್ ಹೋಗುವುದೇ ಆದರೆ ಸದ್ಯ ಮುಂದೆ ಇರುವ ಚುನಾವಣೆಯಲ್ಲಿ ಅವರ ಪ್ರಬಾವವನ್ನು ಬಳಸಿಕೊಂಡು ಕೆಲವು ಸೀಟುಗಳನ್ನು ಪಕ್ಶ ಪಡೆದುಕೊಳ್ಳಲಿದೆ. ಇದಾದ ನಂತರ ಅವರು ಮೂಲೆಗುಂಪಾಗುವುದೇ ಹೆಚ್ಚು!

ಪಕ್ಶ ಕಟ್ಟೋದು ಸುಳುವಾದುದ್ದಲ್ಲ!!

ಹೀಗೆ ಪಕ್ಶದಿಂದ ಹೊರ ಹಾಕಿಸಿಕೊಂಡವರೆಲ್ಲಾ ತಿರುಗಿ ತಮ್ಮ ಮೊದಲ ಪಕ್ಶಗಳಿಗೆ ಹೋಗದೆ ಇನ್ನೊಂದು ರೀತಿಯಲ್ಲಿ ಗೆಲುವು ಸಾದಿಸಿರುವುದು ಬಾರತದ ಹಲವು ರಾಜ್ಯಗಳಲ್ಲಿ ಕಾಣಸಿಗುತ್ತದೆ. ಎತ್ತುಗೆಗೆ ಕಾಂಗ್ರೆಸ್ ನಿಂದ ಹೊರಬಂದ ಮಮತಾ ಬ್ಯಾನರ್‍ಜಿ ತ್ರುಣಮೂಲ ಕಾಂಗ್ರೆಸ್ ಅನ್ನೋ ಪಕ್ಶ ಕಟ್ಟಿ ಇಂದು ಪಶ್ಚಿಮ ಬಂಗಾಳದಲ್ಲಿ ಸರ್‍ಕಾರ ಮಾಡಿದ್ದಾರೆ, ಮಹಾರಾಶ್ಟ್ರದಲ್ಲಿರುವ ಎನ್.ಸಿ,ಪಿ ಯ ಶರದ್ ಪವಾರ್‍ ಒಂದು ಕಾಲದಲ್ಲಿ ಕಾಂಗ್ರೆಸ್ ನಲ್ಲೇ ಇದ್ದವರು. ಇವತ್ತು ಮಹಾರಾಶ್ಟ್ರದಲ್ಲಿ ಇರುವ ಸರ್‍ಕಾರದ ಒಂದು ಬಾಗ. ಜನತಾದಳದಿಂದ ಹೊರಬಂದ ಜಿಜು ಜನತಾದಳ ಪಕ್ಶ ಎರಡು ಚುನಾವಣೆ ಎದುರಿಸಿ ಓಡಿಶಾದಲ್ಲಿ ಸರ್‍ಕಾರ ಮಾಡಿದೆ.

ಹೀಗೆ ಈ ನಾಯಕರು ತಮ್ಮ ಪಕ್ಶ ಮೇಲೆ ತರಲು ಸವೆಸಿರುವ ಹಾದಿ ಸುಳುವಾದುದ್ದಲ್ಲ! ಅದಕ್ಕಾಗಿ ಹಲವಾರು ವರ್‍ಶಗಳನ್ನೇ ಸವೆಸಿದ್ದಾರೆ. ಕೇಂದ್ರದ ಮಟ್ಟದಲ್ಲಿ ಪ್ರಾದೇಶಿಕ ಪಕ್ಶಗಳು ಬಲಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಯಡಿಯೂರಪ್ಪನವರ ಈ ನಡೆ ಸರಿಯಾದುದಲ್ಲ ಎಂದು ಅನಿಸುತ್ತಿದೆ. ಆದರೆ ಯಾಕೋ ಯಡಿಯೂರಪ್ಪನವರಿಗೆ ಈ ಹೊಳಹು ತಿಳಿದಿರುವ ಹಾಗೆ ಕಾಣುತ್ತಿಲ್ಲ. ಅತವಾ ಅವರಿಗೆ ಅಲ್ಲಿಯವರೆಗೂ ತಡೆಯುವ ತಾಳ್ಮೆ ಇದ್ದಂತಿಲ್ಲ. ಇದು ಯಡಿಯೂರಪ್ಪನವರ ಮಟ್ಟಿಗೆ ಸೋಲೇ ಹವ್ದು!

ಯಡಿಯೂರಪ್ಪನವರು ತಿರುಗಿ ಬಿಜೆಪಿ ಪಕ್ಶ ಸೇರಿದ್ದೇ ಆದಲ್ಲಿ, ಕರ್‍ನಾಟಕದಲ್ಲಿ ಪ್ರಾದೇಶಿಕ ಪಕ್ಶಗಳಿಗೆ ಉಳಿಗಾಲವಿಲ್ಲ ಅನ್ನೋ ಮಾತು ಮತ್ತೆ ಕೇಳಿ ಬರಲು ಶುರುವಾಗುತ್ತೆ. ಆದರೆ ನಾವು ತಿಳಿದುಕೊಳ್ಳಬೇಕಾಗಿರುವ ಅಂಶವೆಂದರೆ ಈ ಸೋಲು ಆಯಾ ನಾಯಕರದೇ ಹೊರತು, ಸಿದ್ದಾಂತದ ಸೋಲಲ್ಲ. ಈಗ ಇರುವ ಬಿಜೆಪಿ, ಕಾಂಗ್ರೆಸ್ ಅತವಾ ಯಾವುದೇ ಪಕ್ಶಗಳಿರಲಿ ಇಂದು ಅವು ಇದ್ದರೆ ಹಲವು ವರ್‍ಶಗಳ ದುಡಿಮೆ ಇದೆ. ಸರಿಯಾದ ಪಕ್ಶದ ಸಂಗಟನೆ ಇದೆ, ನಾವು ಒಪ್ಪುತ್ತೇವೋ ಬಿಡುತ್ತೇವೋ ಈ ಪಕ್ಶಗಳು ತಮ್ಮ ಸಿದ್ದಾಂತಕ್ಕೆ ಬದ್ದವಾಗಿವೆ, ಎಲ್ಲದಕ್ಕಿಂದ ಮುಕ್ಯವಾಗಿ ತಾಳ್ಮೆ ಹಾಗೂ ಜೊತೆಗೆ ಕೊಂಡ್ಯೊಯ್ಯುವ ಗುಣ ಬೇಕು. ಆದರೆ ಯಾಕೋ ಯಡಿಯೂರಪ್ಪನವರು ಇದರ ಕಡೆಗೆ ಗಮನ ಹರಿಸುತ್ತಿಲ್ಲ.

(ಚಿತ್ರ: www.ibnlive.in.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: